ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ. ವಿಶ್ವದಲ್ಲೇ ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಗಳ ಪೈಕಿ ಶ್ವಾಸಕೋಶ ಕ್ಯಾನ್ಸರ್ ಕೂಡ ಒಂದು. ಇತರೆ ಕ್ಯಾನ್ಸರ್ಗಳಿಗೆ ಹೋಲಿಸಿದರೆ ಶ್ವಾಸಕೋಶ ಕ್ಯಾನ್ಸರ್ನ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಆಂಕೊಲಾಜಿಸ್ಟ್ ಮತ್ತು ಆಂಕೊ-ಶಸ್ತ್ರಚಿಕಿತ್ಸಕ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ಪ್ರಕಾರ ಶ್ವಾಸಕೋಶ ಕ್ಯಾನ್ಸರ್ ನಲ್ಲಿ ಬೆಂಗಳೂರು ದೇಶದಲ್ಲೇ ಮೂರನೇ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆ. ಶ್ವಾಸಕೋಶ ಕ್ಯಾನ್ಸರ್ ತಡೆಗಟ್ಟುವುದು ಹಾಗೂ ಅದಕ್ಕೆ ಇರುವ ಚಿಕಿತ್ಸೆಗಳ ಬಗ್ಗೆ ಫೊರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪ ರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಪಿ. ಸಂದೀಪ್ ನಾಯಕ್ ವಿವರಿಸಿದ್ದಾರೆ.
ಧೂಮಪಾನದಿಂದ ಶ್ವಾಸಕೋಶ ಕ್ಯಾನ್ಸರ್ ಹೆಚ್ಚಳ
ಶ್ವಾಸಕೋಶ ಕ್ಯಾನ್ಸರ್ಗೆ ಪ್ರಮುಖ ಕಾರಣವೆಂದರೆ ಧೂಮಪಾನ. ಹೌದು, ಇತ್ತೀಚಿನ ದಿನಗಳಲ್ಲಿ ಯುವಕರು ಸಹ ಧೂಮಪಾನ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಏರುತ್ತಲೇ ಇದೆ. ಧೂಮಪಾನ ಮಾಡುವವರು ಹಾಗೂ ಅದರ ಹೊಗೆ ಸೇವಿಸುವ ಎರಡನೇ ವ್ಯಕ್ತಿಗೂ ಸಹ ಶ್ವಾಸಕೋಶ ಕ್ಯಾನ್ಸರ್ ತಗುಲುತ್ತಿರುವ ಪ್ರಕರಣಗಳು ಹೆಚ್ಚಳ ವಾಗುತ್ತಿದೆ. ಹೀಗಾಗಿ ಧೂಮಪಾನ ಸೇವಕರಿಂದ ದೂರ ಇರುವುದು ಸೂಕ್ತ.
ನಿಯಂತ್ರಣ ಹೇಗೆ?: ತಂಬಾಕು ಸೇವನೆ ಮತ್ತು ಧೂಮಪಾನ ತ್ಯಜಿಸಬೇಕು. ಮದ್ಯಪಾನ, ವಾಯು ಮಾಲಿನ್ಯದ ವಾತಾವರಣ ದಿಂದ ದೂರವಿದ್ದಷ್ಟು ಶ್ವಾಸಕೋಶ ಕ್ಯಾನ್ಸರ್ ತಡೆಗಟ್ಟಬಹುದು. ಈಗಾಗಲೇ ನಿಮ್ಮಲ್ಲಿ ಶ್ವಾಸಕೋಶದ ಸಮಸ್ಯೆ ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಶೀಘ್ರದಲ್ಲೇ ಕ್ಯಾನ್ಸರ್ನನ್ನು ಪತ್ತೆ ಹಚ್ಚುವುದು ಕೂಡ ಕ್ಯಾನ್ಸರ್ಗೆ ಚಿಕಿತ್ಸೆಗೆ ನೆರವಾಗಲಿದೆ.
ಕ್ಯಾನ್ಸರ್ ಲಕ್ಷಣಗಳು
*ದೀರ್ಘಕಾಲದ ಕೆಮ್ಮು
*ಕೆಮ್ಮಿನಲ್ಲಿ ರಕ್ತ ಅಥವಾ ಕಫ
*ಉಸಿರಾಟ ತೊಂದರೆ, ನಗುವಾಗ ಅಥವಾ ಕೆಮ್ಮುವಾಗ ಎದೆ ನೋವು
*ಧ್ವನಿಯಲ್ಲಿ ಒರಟುತನ ಹೆಚ್ಚುವುದು
*ಬಳಲಿಕೆ ಮತ್ತು ನಿಶ್ಯಕ್ತಿ
*ಹಸಿವು ಮತ್ತು ತೂಕ ನಷ್ಟ
ತಜ್ಞರ ವಿಶ್ಲೇಷಣೆ
*ಶೇ 80 ರಷ್ಟು ರೋಗಿಗಳು 3 ಮತ್ತು 4ನೇ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಾರೆ.
*ಶೇ 95 ರಷ್ಟು ಪ್ರಕರಣಗಳು ಶಸ್ತ್ರಚಿಕಿತ್ಸೆ ಮಾಡುವ ಹಂತದಲ್ಲಿ ಇರುವುದಿಲ್ಲ
*ಶೇ 70ರಷ್ಟು ಮಂದಿ ಧೂಮಪಾನದಿಂದ ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.
*ಜಗಿಯುವ ತಂಬಾಕಿನಿಂದ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳ
ಮಹಿಳೆಯರಲ್ಲೂ ಹೆಚ್ಚುತ್ತಿದೆ ಕ್ಯಾನ್ಸರ್
‘ಶೇ 65ರಷ್ಟು ಪುರುಷರಲ್ಲಿ ಮತ್ತು ಶೇ 35ರಷ್ಟು ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲೂ ಈ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಧೂಮಪಾನ ಮಾಡುತ್ತಿರುವವರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ‘ತಂಬಾಕು ಜಗಿಯುವವರು, ಸೇವಿಸುವವರು, ಕೈಗಾರಿಕೆ ಮಾಲಿನ್ಯಕ್ಕೆ ಒಳಗಾಗುವವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಆದರೆ, ಶೇ 80ರಷ್ಟು ಮಂದಿ ಮೂರು ಮತ್ತು ನಾಲ್ಕನೇ ಹಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕನೇ ಹಂತದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ, ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ತಪಾಸಣೆಗೆ ಒಳಗಾಗುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.
ಪ್ರಾರಂಭದಲ್ಲೇ ಪತ್ತೆ ಹಚ್ಚಿ
ಶ್ವಾಸಕೋಶ ಕ್ಯಾನ್ಸರ್ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಪ್ರಾಣಹಾನಿಯಾಗುವುದನ್ನು ತಡೆಯಲು ಸಾಧ್ಯವಾಗಲಿದೆ. ಅನೇಕರು ಶ್ವಾಸಕೋಶ ಕ್ಯಾನ್ಸರ್ನ ಲಕ್ಷಣವನ್ನು ಸಾಮಾನ್ಯ ಲಕ್ಷಣವೆಂಬಂತೆ ನಿರ್ಲಕ್ಷಿಸುತ್ತಾರೆ.
ನೀವು ಶ್ವಾಸಕೋಶದ ಕ್ಯಾನ್ಸರ್ನ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈಗಾಗಲೇ ಶ್ವಾಸಕೋಶದ ಕ್ಯಾನ್ಸರ್ನ ಲಕ್ಷಣಗಳನ್ನು ಹೊಂದಿದ್ದರೆ CT ಸ್ಕ್ಯಾನ್ಗಳಂತಹ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಪ್ರಾರಂಭ ದಲ್ಲಿಯೇ ಪತ್ತೆಹಚ್ಚಿದರೆ ಶೇ. 80% ರಿಂದ 90ರಷ್ಟು ಜನರನ್ನು ಚಿಕಿತ್ಸೆ ಮೂಲಕ ಉಳಿಸಬಹುದು. ಇನ್ನು, 55 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಶ್ವಾಸಕೋಶದ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಕ್ಯಾನ್ಸರ್ ಪತ್ತೆ ಹಚ್ಚುವುದು ಸುಲಭ.