ವಿಶ್ವವಾಣಿ ವಿಶೇಷ
ಬೆಂಗಳೂರು: ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಆಹಾರ ಉದ್ಯಮಗಳಿಗೆ
ಹಾಗೂ ಹೋಟೆಲ್‌ಗಳಿಗೆ ಅಕ್ರಮವಾಗಿ ನೋಂದಣಿ ಪ್ರಮಾಣ ಪತ್ರಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಸುಮಾರು 15 ಲಕ್ಷ ಆಹಾರ ಉದ್ದಿಮೆಗಳು ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಪ್ರಸ್ತುತ ಅಂದಾಜು 5 ಲಕ್ಷ ಆಹಾರ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ನೋಂದಣಿ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಮಾಡಿರುವ ಯಡವಟ್ಟುಗಳಿಂದಾಗಿ ಉಳಿದ ಉದ್ದಿಮೆಗಳು ನೋಂದಣಿ ಗಷ್ಟೇ ಸೀಮಿತವಾಗಿವೆ ಎಂಬ ಆರೋಪ ಕೇಳಿಬಂದಿದೆ.
ಹೋಟೆಲ್ ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ವಹಿವಾಟು ಆರಂಭಿಸುವ ಮುನ್ನ ಮಾಲೀಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಬಳಿಕ, ಪ್ರತಿ ವರ್ಷ ಪರವಾನಗಿ ಯನ್ನು ನವೀಕರಿಸಬೇಕು. ವಾರ್ಷಿಕ 12 ಲಕ್ಷ ರು.ಗಿಂತ ಕಡಿಮೆ ವಹಿವಾಟು ನಡೆ ಸುವ ಆಹಾರ ಉದ್ಯಮಗಳು ಹಾಗೂ ಹೋಟೆಲ್ ಗಳಿಗೆ ನೋಂದಣಿ ಪ್ರಮಾಣ ಪತ್ರಗಳ ನೀಡು ವುದು ಹಾಗೂ ನವೀಕರಣ ಮಾಡುವ ಅಧಿಕಾರ ಆಹಾರ ಸುರಕ್ಷತಾಧಿಕಾರಿಗಳಿಗೆ ಇರುತ್ತದೆ. ಆದರೆ, ಇಲಾಖೆಯ ಕೆಲ ಅಂಕಿತಾಧಿಕಾರಿಗಳು ಅಧಕಾರ ಇಲ್ಲದಿದ್ದರೂ ಕಾನೂನುಬಾಹಿರ ವಾಗಿ ಸಹಿ ಹಾಕಿ ನೋಂದಣಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ.
ಬಿಬಿಎಂಪಿ ಉತ್ತರ ವಲಯದ ಅಂಕಿತಾಧಿಕಾರಿರೊಬ್ಬರು ತಮಗೆ ಅಧಿಕಾರ ಇಲ್ಲದಿದ್ದರೂ ಪೂರ್ವ, ಉತ್ತರ ವಲಯ ಮತ್ತು ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನಲ್ಲಿ ಅಕ್ರಮವಾಗಿ ಹತ್ತಾರು ಆಹಾರ ಉದ್ದಿಮೆಗಳಿಗೆ ನೋಂದಣಿ ಪ್ರಮಾಣ ಪತ್ರ ಗಳನ್ನು ಕೊಟ್ಟಿರುವ ದೂರು ಕೇಳಿ ಬಂದಿದೆ.
ಆಯಾ ವಲಯಗಳಲ್ಲಿ ಅಥವಾ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಸುರಕ್ಷತಾಧಿಕಾರಿಗಳು ನಿಯಮದಂತೆ ತಮ್ಮ ವ್ಯಾಪ್ತಿಗೆ ಬರುವ ಆಹಾರ ಉದ್ದಿಮೆಗಳಿಗೆ ನೋಂದಣಿ ಪ್ರಮಾಣ ಪತ್ರ ನೀಡಬೇಕು. ಆದರೆ, ತಮ್ಮ ವ್ಯಾಪ್ತಿಗೆ ಬರದಿದ್ದರೂ ಕೆಲ ಅಂಕಿತಾಧಿಕಾರಿಗಳು ಜಿಲ್ಲೆಗಳಲ್ಲಿಯೂ ಬೇಕಾಬಿಟ್ಟಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲಾ ಮಟ್ಟದಲ್ಲಿ ಕಾಯ್ದೆ ಜಾರಿ ಸಂಬಂಧ ಕಾರ್ಯಗಳ ಮೇಲ್ವಿಚಾರಣೆ, ಅಧೀನ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ಕಚೇರಿ ದೈನಂದಿನ ಕಾರ್ಯಗಳನ್ನು ಕೈಗೊಳ್ಳುವುದು ಅಂಕಿತಾಧಿಕಾರಿಯ ಕೆಲಸ. ಆದರೆ, ಕೆಲ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರದಿ ದ್ದರೂ ಕಮಿಷನ್ ಆಸೆಗಾಗಿ ಇಲಾಖೆಯ ಬೇರೆ ಕೆಲಸಗಳಲ್ಲಿ ಅನಗತ್ಯವಾಗಿ ಮೂಗು ತೂರಿಸುತ್ತಿದ್ದಾರೆ.
ಆಹಾರ ಸುರಕ್ಷತಾಧಿಕಾರಿ ಕೆಲಸವೇನು?: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಆಹಾರ ವ್ಯವಹಾರಸ್ಥರನ್ನು ನೋಂದಣಿ ಮಾಡುವುದು, ಆಹಾರ ಮಾದರಿ ಸಂಗ್ರಹಣೆ, ಅಸುರಕ್ಷಿತ ಪ್ರಕರಣಗಳಲ್ಲಿ ಮೊಕದ್ದಮೆ ಹೂಡುವುದು, ಆಹಾರ ಘಟಕಗಳಲ್ಲಿ ತಪಾಸಣೆ ನಡೆಸುವುದು ಹಾಗೂ ಗಣ್ಯರು ಭೇಟಿ ನೀಡುವ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಪರಿಶೀಲಿಸುವ ಕಾರ್ಯವನ್ನು ಆಹಾರ ಸುರಕ್ಷತಾಧಿಕಾರಿಗಳು ಮಾಡಬೇಕು. ಆದರೆ, ಈ ಎರಡೂ ಹುದ್ದೆಗಳಲ್ಲಿರುವವರು ತಮ್ಮ ಅಧಿಕಾರ
ಮತ್ತು ಕಾರ್ಯವ್ಯಾಪ್ತಿ ಮೀರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.
ವೈದ್ಯರೊಬ್ಬರಿಗೆ ಅಂಕಿತಾಧಿಕಾರಿ ಹುದ್ದೆ ಭಾಗ್ಯ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಆಶ್ಲೀಲ ಮೆಸೇಜ್ ಹಾಕಿ ಮುಜುಗರ ಅನುಭವಿಸಿದ್ದ ವೈದ್ಯರೊಬ್ಬರಿಗೆ ಅಂಕಿತಾಧಿಕಾರಿ ಹುದ್ದೆ ಸಿಕ್ಕಿದೆ. ಆರೋಗ್ಯ ಇಲಾಖೆಯ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಅಂಕಿತಾಧಿಕಾರಿ ಯಾಗಿ ನೇಮಿಸಲಾಗಿದೆ.
ಅಕ್ರಮವಾಗಿ ಕಾರ್ಯಭಾರ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಅಂಕಿತಾಧಿಕಾರಿಗಳು, ಆಹಾರ ಸುರಕ್ಷತೆ ಅಧಿಕಾರಿ ಸೇರಿ ಒಟ್ಟು 210
ಹುದ್ದೆಗಳಿವೆ. ಈ ಹುದ್ದೆಗಳಲ್ಲಿ ಸಾಕಷ್ಟು ವೈದ್ಯರು ಆಹಾರ ಸುರಕ್ಷತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರೋಗ್ಯ
ಇಲಾಖೆಯಿಂದ ನಿಯೋಜನೆ ಮೇರೆಗೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಗೆ ಆಗಮಿಸಿರುವ ವೈದ್ಯರೇ ಅಂಕಿತಾಧಿ ಕಾರಿ ಹುದ್ದೆಯಲ್ಲಿ ಕಾನೂನು ಬಾಹಿರವಾಗಿ ಕಾರ್ಯಭಾರ ಮಾಡುತ್ತಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ವೇತನ ಜತೆಗೆ 85 ಸಾವಿರ ರು. ವಿಶೇಷ ವೈದ್ಯಕೀಯ ಭತ್ಯೆ ಸಿಕ್ಕಿದರೂ ಅದನ್ನು ತಿರಸ್ಕರಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕೆಲ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಉಂಟಾಗಲು ಇದೂ ಒಂದು ಕಾರಣ ಎಂದು ಹೇಳಲಾಗಿದೆ.