Thursday, 12th December 2024

ಹಿಜಾಬ್‌ನಂತೆ ಬಾಲಸನ್ಯಾಸವೂ ನಿಷೇಧವಾಗಲಿ

ಪೇಜಾವರ ಮಠದ ಮಾಜಿ ಉತ್ತರಾಧಿಕಾರಿ ವಿಶ್ವ ವಿಜಯ ತೀರ್ಥರ ಆಗ್ರಹ

ವಿಶ್ವವಾಣಿ ವಿಶೇಷ

ಬೆಂಗಳೂರು: ಶಾಲೆಗಳಲ್ಲಿ ಸಮವಸ್ತ್ರಕ್ಕೆ ಮಾತ್ರ ಅವಕಾಶ. ಹಿಜಾಬ್ ಧರಿಸುವುದಕ್ಕೆ ಅವಕಾಶವಿಲ್ಲ ಎಂಬ ಹೈಕೋರ್ಟ್
ತೀರ್ಪಿನ ಬೆನ್ನಲ್ಲೇ, ಇದೀಗ ಬಾಲಸನ್ಯಾಸ ನಿಷೇಧಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಮರುಹುಟ್ಟು ಸಿಕ್ಕಿದೆ.

ಶಿರೂರು ಮಠಕ್ಕೆ ಬಾಲಸನ್ಯಾಸಿಯನ್ನು ಪೀಠಾಧಿಪತಿಯನ್ನಾಗಿ ನೇಮಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ವ ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೀಗ ಹಿಜಾಬ್ ಪ್ರಕರಣದಲ್ಲಿ ‘ಧರ್ಮದ ಅವಿಭಾಜ್ಯ ಅಂಗ ವಲ್ಲದ ಪದ್ಧತಿಗಳಿಗೆ ಅವಕಾಶವಿಲ್ಲ’ ಎಂದು ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಮುಂದಿಟ್ಟುಕೊಂಡು, ಕೆಲವರು ಬಾಲಸನ್ಯಾಸವನ್ನು ನಿಷೇಧಿಸಿ ಎನ್ನುವ ಆಗ್ರಹವನ್ನು ಹೊರಹಾಕಿದ್ದಾರೆ.

ಈ ಹಿಂದೆ ಬಾಲ ಸನ್ಯಾಸವನ್ನು ಹಲವು ಬಾರಿ ಟೀಕಿಸಿದ್ದ ಪೇಜಾವರ ಮಠದ ಮಾಜಿ ಕಿರಿಯ ಪೀಠಾಧಿಪತಿ ವಿಶ್ವ ವಿಜಯರು, ಎಲ್ಲ ಧರ್ಮಗಳಲ್ಲಿರುವ ಅನಿಷ್ಠ ಪದ್ಧತಿ ಹೋಗಲಾಡಿಸ ಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಈ ಹಿಂದೆ ತ್ರಿವಳಿ ತಲಾಖ್, ಇದೀಗ ಶಾಲೆಗಳಲ್ಲಿ ಹಿಜಾಬ್ ಗೆ ನಿರ್ಬಂಧ ಹೇರಿರುವುದು ಸ್ವಾಗತಾರ್ಹ. ಆದರೆ, ಹಿಂದೂ ಧರ್ಮದಲ್ಲಿರುವ ಬಾಲ ಸನ್ಯಾಸ ಎನ್ನುವ ಅನಿಷ್ಠ ಪದ್ಧತಿಯನ್ನೂ ಇದೇ ರೀತಿ ನಿಷೇಧಿಸಬೇಕು. ಸರಕಾರ ಕೂಡಲೇ ಅಗತ್ಯ ಕಾನೂನು ತರಲು ಆಗ್ರಹಿಸಿದ್ದಾರೆ.

ವಿರೋಧಿಸಿದ್ದ ಹಿರಿಯ ಯತಿಗಳು: ಬಾಲಸನ್ಯಾಸಕ್ಕೆ ೧,೪೦೦ ವರ್ಷಗಳ ಇತಿಹಾಸವಿದೆ ಎಂದು ಅದರ ಪರವಾಗಿರುವವರು ಹೇಳುತ್ತಾರೆ. ಆದರೆ ಈ ಪದ್ಧತಿಗೆ ಕೀರ್ತಿಶೇಷ ವಿದ್ಯಾಮಾನ್ಯ ತೀರ್ಥರು ಹಾಗೂ ಅವರ ಶಿಷ್ಯರಾದ ಪೇಜಾವರ ಮಠದ ಪೀಠಾಽಪತಿ ಶ್ರೀ ವಿಶ್ವೇಶ ತೀರ್ಥರು ವಿರೋಽಸಿದ್ದರು. ಪೀಠಾಧಿಪತಿಯಾದವರಿಗೆ ಶಿಕ್ಷಣ, ಪ್ರೌಢಿಮೆ ಇರಬೇಕು ಎನ್ನುವುದು ಅವರ ನಿಲುವಾಗಿತ್ತು.

ಆದರೆ ಹಿರಿಯ ಯತಿಗಳ ಈ ಮಾತನ್ನು ಬಿಟ್ಟು ಕೆಲವರು ಪುನಾ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಅದನ್ನು ತಡೆಯ ಬೇಕಿದೆ ಎನ್ನುವುದು ವಿಶ್ವವಿಜಯರ ವಾದ. ಬಾಲ ಸನ್ಯಾಸವನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡಬಾರದು. ಶಾಸ್ತ್ರ ಅಧ್ಯಯನ ಮಾಡದ ಹಾಗೂ ಸಮಾಜದ ಆಗುಹೋಗುಗಳು ತಿಳಿಯದ ಆ ಬಾಲಕನಿಂದ ಇದರ ನಿರ್ವಹಣೆ ಸಾಧ್ಯವೇ? ಅನೇಕ ಬಾರಿ ಬಾಲಸನ್ಯಾಸಿಗಳ ತಂದೆ, ಚಿಕ್ಕಪ್ಪ ಮುಂತಾದವರು ಪೀಠಗಳ ವ್ಯವಹಾರ ನಿರ್ವಹಣೆ ಮಾಡಿರುವ ಉದಾಹರಣೆಗಳಿವೆ. ಹೀಗಾಗಿ ಇಂತಹ ಅನಿಷ್ಠ ಪದ್ಧತಿಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಆರ್ಥಿಕ ನೆರವು ಎಲ್ಲಿದೆ?
ಹಿಜಾಬ್ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಆಗಿರುವ ಹಿನ್ನಡೆ ಪ್ರಶ್ನಿಸಿ ವಿದ್ಯಾರ್ಥಿನಿಯರು, ಸುಪ್ರೀಂ ಮೆಟ್ಟಲೇರಿದ್ದಾರೆ. ಆದರೆ ಬಾಲಸನ್ಯಾಸ ವಿಷಯದಲ್ಲಿ ಆದ ಹಿನ್ನಡೆಯನ್ನು ಪ್ರಶ್ನಿಸಿ ಸುಪ್ರೀಂಗೆ ಹೋಗಲು ನಮ್ಮ ಬಳಿ ಆರ್ಥಿಕ ಸಮಸ್ಯೆಯಿದೆ. ಸುಪ್ರೀಂನಲ್ಲಿ ವಾದ ಮಂಡಿಸಲು ಆರ್ಥಿಕವಾಗಿ ಸಹಾಯ ಬೇಕಾಗುತ್ತದೆ. ಆ ವಿದ್ಯಾರ್ಥಿನಿಯರಿಗೆ ಇಷ್ಟು ದೊಡ್ಡ ಪ್ರಮಾಣದ
ದುಡ್ಡಿ ಎಲ್ಲಿಂದ ಬಂತು? ಎನ್ನುವ ಸಂದೇಹವನ್ನು ವಿಶ್ವವಿಜಯರು ಹೊರಹಾಕಿದ್ದಾರೆ.

***

ಬಾಲ್ಯ ವಿವಾಹ, ತ್ರಿವಳಿ ತಲಾಖ್ ಸೇರಿ ಹಲವು ಸಾಮಾಜಿಕ ಪಿಡುಗು ಗಳ ವಿರುದ್ಧ ಹೋರಾಡಿದ್ದೇವೆ. ಇದೀಗ ಬಾಲಸನ್ಯಾಸ ನಿಷೇಧದ ವಿಷಯದಲ್ಲಿಯೂ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರಧಾನಿ, ರಾಷ್ಟ್ರಪತಿಗಳಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ.
-ವಿಶ್ವ ವಿಜಯರು, ಪೇಜಾವರ ಪೀಠದ ಮಾಜಿ ಕಿರಿಯ ಪೀಠಾಧಿಪತಿ