Thursday, 12th December 2024

ಸಮಸ್ತ ಓದುಗರಿಗೆ ಸಂಪೂರ್ಣ ರಾಮಾಯಣ

ಯಗಟಿ ರಘು ನಾಡಿಗ್

ಪುಟ ವಿನ್ಯಾಸ: ವಿನಯ್ ಖಾನ್

ಶ್ರದ್ಧಾವಂತ ಜನರ ಜೀವನಾಡಿಯೇ ಆಗಿರುವಂಥದ್ದು ‘ರಾಮಾಯಣ’. ಮುಖ್ಯ ಕಥಾಭಾಗ ಮಾತ್ರವಲ್ಲದೆ ಇದು ಒಳಗೊಂಡಿರುವ ಉಪಕಥೆ ಗಳನ್ನು ಸಾದ್ಯಂತವಾಗಿ ವಿವರಿಸುತ್ತಾ ಹೋದರೆ ಪುಟಗಳು ಸಾಲವು. ಹೀಗಾಗಿ, ‘ದಶರಥ ನಂದನ ಶ್ರೀರಾಮ, ರಾವಣನು ಕೊಂದ ಸೀತೆಯನು ತಂದ’ ಎಂಬ ಒಂದು ಸಾಲಿನ ರಾಮಾಯಣ ಇರುವಂತೆಯೇ ವಿಭಿನ್ನ ಗಾತ್ರ ಮತ್ತು ಪ್ರಕಾರಗಳ ರಾಮಾಯಣಗಳೂ ನಮ್ಮಲ್ಲಿ ಹಾಸು ಹೊಕ್ಕಾಗಿವೆ. ಓದುಗ ಪ್ರಭುಗಳಿಗೆ ರಾಮಾಯಣದ ಸಾರಸಂಗ್ರಹವನ್ನು ಕಟ್ಟಿಕೊಡುವ ಪುಟ್ಟಯತ್ನ ಇಲ್ಲಿದೆ.

೧. ರಾಕ್ಷಸರಾಜ ರಾವಣನ ಕಠೋರ ತಪಸ್ಸಿಗೆ ಮೆಚ್ಚಿದ ಬ್ರಹ್ಮ, ‘ದೇವತೆಗಳು, ಯಕ್ಷ-ಕಿನ್ನರ-ಕಿಂಪುರು ಷರು ಅಥವಾ ರಾಕ್ಷಸರೇ ಮೊದಲಾದ ಯಾರಿಂದಲೂ ನಿನಗೆ ಮರಣ ಬಾರದಿರಲಿ’ ಎಂಬ ವರ ನೀಡಿಬಿಟ್ಟ. ಇದರ ದುರುಪಯೋಗಕ್ಕೆ ಮುಂದಾದ ರಾವಣ, ದೇವಾನುದೇವತೆಗಳು ಮಾತ್ರವಲ್ಲದೆ ಭೂಲೋಕದ ಶಿಷ್ಟ ಜನರಿಗೂ ಕಿರುಕುಳ ಕೊಡಲಾರಂಭಿಸಿದ. ಆಗ ದೇವತೆಗಳೆಲ್ಲ ವಿಷ್ಣುವಿನಲ್ಲಿಗೆ ತೆರಳಿ, ‘ಮಾನವ ಜೀವಿಗಳಿಂದ ಅಥವಾ ಪ್ರಾಣಿಗಳಿಂದ ಸಾವು ಹೊಂದದ ವರವನ್ನು ರಾವಣ ಪಡೆದಿಲ್ಲ; ಹೀಗಾಗಿ ನೀನೇ ಮನುಷ್ಯಾವತಾರವೆತ್ತಿ ರಾವಣನನ್ನು ಸಂಹರಿಸಬೇಕು’ ಎಂದು ಕೋರಿದರು.

೨. ಕೋಸಲ ದೇಶದ ಅಧಿಪತಿ ದಶರಥನಿಗೆ ಸಂತಾನವಿರದ ಕಾರಣ, ಪ್ರಾಜ್ಞರ ಸಲಹೆಯ ಮೇರೆಗೆ ಪುತ್ರಕಾಮೇಷ್ಠಿ ಯಜ್ಞವನ್ನು ಕೈಗೊಳ್ಳಲು ಆಶಿಸಿದ. ಇದು ಅರಿವಾಗಿ, ದಶರಥನ ಹಿರಿಯ ಮಗನಾಗಿ ಜನಿಸಲು ವಿಷ್ಣು ಸಂಕಲ್ಪಿಸಿದ. ಈ ಸಂಕಲ್ಪದ ಭಾಗವಾಗಿ ಯಜ್ಞಕುಂಡದಲ್ಲಿ ಆವಿರ್ಭವಿಸಿದ ದೈವೀಪುರುಷನು ದಿವ್ಯಪಾಯಸವಿದ್ದ ಕಲಶವನ್ನು ದಶರಥನಿಗೆ ನೀಡಿ, ಅದನ್ನು ರಾಣಿಯರಿಗೆ ಹಂಚುವಂತೆ ತಿಳಿಸಿದ.

೩.ಅಂತೆಯೇ ದಶರಥ ಆ ದಿವ್ಯಪಾಯಸವನ್ನು ಕೌಸಲ್ಯಾ, ಸುಮಿತ್ರಾ ಮತ್ತು ಕೈಕೇಯಿ ಎಂಬ ತನ್ನ ಮೂವರು ರಾಣಿಯರಿಗೆ ಹಂಚಿದ.  ದಿವ್ಯಾಶೀ ರ್ವಾದದ ಫಲವಾಗಿ ರಾಣಿಯರು ಗರ್ಭಿಣಿಯ ರಾದರು. ಹಿರಿಯ ರಾಣಿ ಕೌಸಲ್ಯೆಗೆ ರಾಮ, ಕೈಕೇಯಿಗೆ ಭರತ, ಮತ್ತು ಸುಮಿತ್ರೆಗೆ ಲಕ್ಷ್ಮಣ-ಶತ್ರುಘ್ನರೆಂಬ ಅವಳಿ ಮಕ್ಕಳು ಜನಿಸಿದರು.

೪. ವಸಿಷ್ಠರಿಂದ ಶಾಸ್ತ್ರ ಮತ್ತು ಶಸ್ತ್ರವಿದ್ಯೆಗಳನ್ನು ಕಲಿತ ಈ ಮಕ್ಕಳ ಪರಿಣತಿ ಋಷಿ ವಿಶ್ವಾಮಿತ್ರರ ಗಮನಕ್ಕೆ ಬಂತು. ಆಶ್ರಮ ದಲ್ಲಿ ತಾವು ಹಮ್ಮಿಕೊಳ್ಳುವ ಯಜ್ಞ-ಯಾಗಾದಿಗಳಿಗೆ ರಾಕ್ಷಸರಿಂದಾಗುವ ತೊಂದರೆಯನ್ನು ತೊಡೆಯಲು ರಾಮ ನನ್ನು ಕಳಿಸುವಂತೆ ವಿಶ್ವಾಮಿತ್ರರು ದಶರಥನನ್ನು ಕೋರಿದರು. ಒಲ್ಲದ ಮನಸ್ಸಿನಿಂದಲೇ ಒಪ್ಪಿದ ದಶರಥ ಅವರೊಂದಿಗೆ ರಾಮ-ಲಕ್ಷ್ಮಣರನ್ನು ಕಳಿಸಿಕೊಟ್ಟ. ನಿಯೋಜಿತ ಹೊಣೆಗಾರಿಕೆ ಈಡೇರಿಸಿದ್ದಕ್ಕೆ ಸಂತೃಪ್ತರಾದ ವಿಶ್ವಾಮಿತ್ರರು ಅವರಿಬ್ಬರಿಗೂ ಹಲವು ದಿವ್ಯಾಸಗಳ ಪ್ರಯೋಗ ವಿದ್ಯೆಯನ್ನು ಹೇಳಿಕೊಟ್ಟರು.

೫.ಕಾರ್ಯಭಾರದಿಂದ ಮರಳುವಾಗ, ಮಿಥಿಲಾ ರಾಜ್ಯದಲ್ಲಿ ಜನಕ ಮಹಾರಾಜನು ಸೀತಾ ಸ್ವಯಂ ವರವನ್ನು ಏರ್ಪಡಿಸಿದ್ದು ಗೊತ್ತಾಗಿ ರಾಜಕುಮಾರ ರನ್ನು ವಿಶ್ವಾಮಿತ್ರರು ಅಲ್ಲಿಗೆ ಕರೆದೊಯ್ದರು. ಅರಮನೆಯಲ್ಲಿ ಇರಿಸಲಾಗಿದ್ದ ಶಿವನ ಧನುಸ್ಸನ್ನು ಎತ್ತಿ ಹೆದೆಯೇರಿಸಿದವರಿಗೆ ಸೀತೆಯನ್ನು ಧಾರೆಯೆ ರೆದುಕೊಡುವ ಪಂಥವು ಆ ಸ್ವಯಂವರದ ಭಾಗ ವಾಗಿತ್ತು. ವೀರರೆನಿಸಿ ಕೊಂಡ ಅನೇಕ ರಾಜರು ಈ ಯತ್ನದಲ್ಲಿ ವಿಫಲರಾದರು. ತನ್ನ ಸರದಿ ಬಂದಾಗ ರಾಮ ಆ ಬಿಲ್ಲನ್ನು ಲೀಲಾಜಾಲವಾಗಿ ಮೇಲೆತ್ತಿದ, ಹೆದೆಯೇರಿಸುವ ಯತ್ನದಲ್ಲಿದ್ದಾಗ ಭಾರಿ ಸದ್ದಿನೊಂದಿಗೆ ಅದು ಮುರಿದುಹೋಯಿತು. ಪಂಥ ಗೆದ್ದ ರಾಮನಿಗೆ ಸೀತೆಯನ್ನು ಜನಕ ಧಾರೆಯೆರೆದುಕೊಟ್ಟ. ವಿವಾಹದ ನಂತರ ಈ ಜೋಡಿ ಅಯೋಧ್ಯೆಗೆ ಮರಳಿತು.

೬.ತನ್ನ ಹಿರಿಯ ಮಗನೂ, ಉತ್ತರಾಧಿಕಾರಿಯೂ ಆದ ರಾಮನಿಗೆ ಯುವರಾಜನ ಪಟ್ಟ ಕಟ್ಟಲು ನಿರ್ಧರಿಸಿದ ದಶರಥ, ಆ ವಿಷಯವನ್ನು ಅರುಹಿ ಸಂಬಂಧಿತ ಆಚರಣೆಗಳ ಕುರಿತು ಚರ್ಚಿಸಲು ಮತ್ತೋರ್ವ ರಾಣಿ ಕೈಕೇಯಿಯಲ್ಲಿಗೆ ಬಂದ. ಅಷ್ಟು ಹೊತ್ತಿಗಾಗಲೇ, ರಾಣಿ ಕೌಸಲ್ಯೆಯ ಜತೆಗಿನ ವೈಯ ಕ್ತಿಕ ದ್ವೇಷದಿಂದ ಕುದಿಯುತ್ತಿದ್ದ ದಾಸಿ ಮಂಥರೆಯ ದುರ್ಬೋಧನೆಗೆ ಒಳಗಾಗಿ ದುಃಖಿತಳಾಗಿದ್ದ ಕೈಕೇಯಿ, ತನ್ನ ಮಗ ಭರತನನ್ನೇ ಯುವರಾಜ ನನ್ನಾಗಿಸಲು ಕುತಂತ್ರವೊಂದನ್ನು ಹೂಡಿದಳು. ಯಾವುದೋ ದುರ್ಬಲ ಕ್ಷಣದಲ್ಲಿ ದಶರಥ ತನಗೆ ನೀಡಿದ್ದ ೨ ವರಗಳನ್ನು ಈ ಸಂದರ್ಭದಲ್ಲಿ ದುರುಪಯೋಗ ಪಡಿಸಿಕೊಳ್ಳಲು ಮುಂದಾದಳು.

೭.ಅಂತಃಪುರಕ್ಕೆ ಬಂದಾಗ ಕಣ್ಣೀರುಗರೆಯುತ್ತಿದ್ದ ಕೈಕೇಯಿಯನ್ನು ದಶರಥ ಕಾರಣ ಕೇಳಲಾಗಿ, ‘ನನಗೆ ಹಿಂದೆ ನೀವು ನೀಡಿದ್ದ ೨ ವರಗಳನ್ನು ಪೂರೈಸಿದರೆ ಮಾತ್ರ ನಾನು ಪ್ರಸನ್ನಳಾಗುವೆ. ಮೊದಲನೆಯದಾಗಿ, ನನ್ನ ಮಗ ಭರತನೇ ಯುವರಾಜನಾಗ ಬೇಕು, ಎರಡನೆಯದಾಗಿ, ರಾಮ ೧೪ ವರ್ಷ ವನವಾಸಕ್ಕೆ ತೆರಳಬೇಕು’ ಎಂದು ಷರತ್ತು ಹಾಕಿದಳು. ದಶರಥ ಅತೀವವಾಗಿ ದುಃಖಿಸಿದ. ವಿಷಯ ಅರಿತ ರಾಮ, ಸಿಂಹಾಸನದ ಮೇಲಿನ ತನ್ನ ಸಹಜ ಹಕ್ಕನ್ನು ಬಿಟ್ಟುಕೊಟ್ಟು ವನವಾಸಕ್ಕೆ ತೆರಳುವುದಾಗಿ ಮಾತುಕೊಟ್ಟು ಆದರ್ಶ ಮೆರೆದ. ದಶರಥ ಮತ್ತು ಪುರಜನರ ದುಃಖದ ನಡುವೆಯೇ ವನವಾಸಕ್ಕೆ ಹೊರಟ ರಾಮನನ್ನು ಪತ್ನಿ ಸೀತೆ ಹಾಗೂ ಸೋದರ ಲಕ್ಷ್ಮಣ ಕೂಡ ಹಿಂಬಾಲಿಸಿದರು. ರಾಮವಿಯೋಗವನ್ನು ತಡೆಯಲಾರದೆ ಕೆಲ ಕಾಲದ ನಂತರ ದಶರಥ ಮರಣಿಸಿದ.

೮. ಅಯೋಧ್ಯೆಯನ್ನು ತೊರೆದು ಚಿತ್ರಕೂಟ ಎಂಬ ಅರಣ್ಯ ಪ್ರದೇಶಕ್ಕೆ ಬಂದ ರಾಮ-ಸೀತೆ- ಲಕ್ಷ್ಮಣರು ಅಲ್ಲಿ ಪರ್ಣಕುಟಿ ಯೊಂದನ್ನು ಕಟ್ಟಿಕೊಂಡು ವಾಸವಿದ್ದರು. ಅಲ್ಲಿ ಪಕ್ಷಿರಾಜ ಜಟಾಯುವಿನೊಂದಿಗೆ ರಾಮನ ಗೆಳೆತನವಾಯಿತು. ಅತ್ತ ಅಯೋಧ್ಯೆಯಲ್ಲಿ, ಪ್ರವಾಸ ಮುಗಿಸಿ ಬಂದ ಭರತನಿಗೆ ನಡೆದ ವಿಷಯವೆಲ್ಲ ಗೊತ್ತಾಗಿ ಕಾಡಿಗೆ ಬಂದ, ಅರಮನೆಗೆ ಮರಳು ವಂತೆ ರಾಮನನ್ನು ಪರಿಪರಿಯಾಗಿ ಬೇಡಿದ. ಆದರೆ ತಾನು ಪಿತೃವಾಕ್ಯ ಪರಿಪಾಲನೆಗೆ ಬದ್ಧ ಎಂದು ರಾಮ ತಿಳಿಸಿದಾಗ, ‘ನಿನಗಿಲ್ಲದ ಸಿಂಹಾಸನ ನನಗೂ ಬೇಡ; ನಿನ್ನ ಪಾದುಕೆಗಳನ್ನು ಕೊಡು, ಅವನ್ನು ಸಿಂಹಾಸನದ ಮೇಲಿಟ್ಟು ನಿನ್ನ ಹೆಸರಿನಲ್ಲಿ ನಂದಿಗ್ರಾಮದಿಂದ ರಾಜ್ಯವಾಳುವೆ. ವನವಾಸ ಮುಗಿಸಿಕೊಂಡು ನೀನು ಮರಳದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಹೇಳಿ ರಾಮಪಾದುಕೆಗಳನ್ನು ಪಡೆದು ಭರತ ಅಯೋಧ್ಯೆಗೆ ಮರಳಿದ.

೯. ಒಮ್ಮೆ, ಚಿತ್ರಕೂಟದಲ್ಲಿ ರಾಮನ ಚಿತ್ತಾಕರ್ಷಕ ರೂಪದಿಂದ ಮೋಹಿತಳಾದ ರಾವಣನ ತಂಗಿ ಶೂರ್ಪನಖಿ, ರಾಮನನ್ನು ಸೆಳೆಯಲು ಯತ್ನಿಸಿದಳು. ಏಕಪತ್ನೀವ್ರತಸ್ಥ ಶ್ರೀರಾಮ ಇದಕ್ಕೆ ಸ್ಪಂದಿಸಲಿಲ್ಲ. ಸಾಲದೆಂಬಂತೆ, ಶೂರ್ಪನಖಿಯ ಅನುಚಿತ ವರ್ತನೆಗೆ ಕೋಪಗೊಂಡ ಲಕ್ಷ್ಮಣ ಅವಳ ಕಿವಿ-ಮೂಗು ಕತ್ತರಿಸಿ ಕಳಿಸಿದ. ಗೋಳಿಡುತ್ತ ಬಂದ ಶೂರ್ಪನಖಿ ರಾವಣನಿಗೆ ದೂರಿತ್ತುದರ ಜತೆಗೆ ಸೀತೆಯ ಸೌಂದರ್ಯವನ್ನೂ ವರ್ಣಿಸಿದಳು. ಆ ವರ್ಣನೆಯಿಂದಲೇ ಮನಸೋತ ರಾವಣ, ಸೀತೆಯನ್ನು ಅಪಹರಿಸಲು ನಿರ್ಧರಿಸಿದ. ಮಾರೀಚ ಎಂಬ ಮತ್ತೊಬ್ಬ ರಾಕ್ಷಸನಿಗೆ ‘ಬಂಗಾರದ ಜಿಂಕೆ’ಯ ರೂಪ ತಳೆಯುವಂತೆ
ಸೂಚಿಸಿ, ಅದು ಆಶ್ರಮದ ಸುತ್ತಮುತ್ತ ಜಿಗಿದಾಡುವಂತೆ ಮಾಡಿದ. ಈ ಮಾಯಾಮೃಗದಿಂದ ಆಕರ್ಷಿತಳಾದ ಸೀತೆ, ಅದನ್ನು ತಂದುಕೊಡುವಂತೆ ಹಠಹಿಡಿದು ರಾಮನನ್ನು ಪೀಡಿಸಿದಳು.

೧೦. ಅದನ್ನು ಹಿಡಿದು ತರಲು ಹೊರಟ ರಾಮ, ಅತ್ತಿಗೆಯನ್ನು ಕಾಯುತ್ತಿರುವಂತೆ ಲಕ್ಷ್ಮಣನಿಗೆ ಸೂಚಿಸಿ ಕುಟೀರದಿಂದ ತೆರಳಿದ. ಎಷ್ಟು ಬೆನ್ನಟ್ಟಿದರೂ ಮಾಯಾಜಿಂಕೆ ರಾಮನಿಂದ ತಪ್ಪಿಸಿಕೊಳ್ಳುತ್ತಿತ್ತು. ಹೀಗಾಗಿ ಅದನ್ನು ಗಾಯಗೊಳಿಸಿ ಯಾದರೂ ತನ್ನ ವಶ ಮಾಡಿಕೊಳ್ಳ ಬೇಕೆಂದು ಬಾಣ ಬಿಟ್ಟಾಗ, ಆ ಏಟು ತಿಂದ ಜಿಂಕೆಯ ರೂಪದ ಮಾಯಾವಿ ಮಾರೀಚನು ರಾಮನ ದನಿಯನ್ನು ಅನುಕರಿಸಿ, ‘ಹಾ ಸೀತೆ, ಹಾ ಲಕ್ಷ್ಮಣಾ’ ಎಂದು ಜೋರಾಗಿ ಕೂಗಿದ. ಇದು ರಾಮನದೇ ದನಿ ಎಂದು ಭ್ರಮಿಸಿದ ಸೀತೆ, ‘ನಿಮ್ಮಣ್ಣನಿಗೆ ಏನೋ ತೊಂದರೆಯಾಗಿದೆ, ರಕ್ಷಣೆಗೆ ಹೋಗು’ ಎಂದು ಲಕ್ಷ್ಮಣನನ್ನು ಕಳಿಸಿದಳು. ಕುಟೀರದಲ್ಲಿ ಅತ್ತಿಗೆಯೊಬ್ಬಳನ್ನೇ ಬಿಟ್ಟುಹೋಗಲು ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಹೊರಟ ಲಕ್ಷ್ಮಣ ನೆಲದ ಮೇಲೆ ಗೆರೆ ಯೊಂದನ್ನು ಎಳೆದು, ‘ಅತ್ತಿಗೆ, ಈ ಗೆರೆಯನ್ನು ದಾಟಿ ಬರಬೇಡಿ’ ಎಂದು ಸೀತೆಗೆ ಸೂಚಿಸಿದ.

೧೧.ಹೀಗೆ ರಾಮ-ಲಕ್ಷ್ಮಣರ ಅನುಪಸ್ಥಿತಿಯಲ್ಲಿ ಕುಟೀರದ ಬಳಿಗೆ ಕಪಟ ಸನ್ಯಾಸಿಯ ವೇಷದಲ್ಲಿ ಬಂದ ರಾವಣ ಭಿಕ್ಷೆ ನೀಡು ವಂತೆ ಮನವಿ ಮಾಡಿದ. ಭಿಕ್ಷೆ ನೀಡಲೆಂದು ಸೀತೆಯು ‘ಲಕ್ಷ್ಮಣ ರೇಖೆ’ಯನ್ನು ದಾಟುವಂತೆ ಮಾಡಿ ಅವಳನ್ನು ಬಲವಂತ ವಾಗಿ ಅಪಹರಿಸಿ ಪುಷ್ಪಕ ವಿಮಾನದಲ್ಲಿ ಹೊತ್ತೊಯ್ದ. ಇದನ್ನು ಕಂಡ ಮುದಿ ಪಕ್ಷಿರಾಜ ಜಟಾಯು ರಾವಣನೊಂದಿಗೆ ಸೆಣಸಿ ಸೀತೆಯನ್ನು ರಕ್ಷಿಸಲು ಯತ್ನಿಸಿದರೂ ರಾವಣನ ಬಲದ ಮುಂದೆ ಅದು ಸಾಗ ಲಿಲ್ಲ. ಸಾಲದೆಂಬಂತೆ ಅದರ ರೆಕ್ಕೆಗಳನ್ನು ರಾವಣ ಕತ್ತರಿಸಿ ಅಸಹಾಯಕನನ್ನಾಗಿ ಮಾಡಿಬಿಟ್ಟ. ಕುಟೀರಕ್ಕೆ ಮರಳಿದ ರಾಮ-ಲಕ್ಷ್ಮಣರಿಗೆ ಸೀತೆ ಕಾಣದಾಗಿ ಕಾಡಿನಲ್ಲೆಲ್ಲಾ ಹುಡುಕುತ್ತಾ ಹೊರಟಾಗ, ಮಾರ್ಗಮಧ್ಯೆ ಸಿಕ್ಕಿದ ಜಟಾಯುವಿನಿಂದ ಸೀತಾಪಹರಣದ ಸಂಗತಿ ತಿಳಿಯಿತು.

೧೨.ಶೋಕತಪ್ತ ಶ್ರೀರಾಮ ಪ್ರಲಾಪಿಸುತ್ತಾ ಸೀತೆಯ ಶೋಧಕ್ಕೆ ಮುಂದಾದ. ಆಗ ಭೇಟಿಯಾದ ಹನುಮಂತ, ತನ್ನ ಒಡೆಯ ಮತ್ತು ಕಿಷ್ಕಿಂಧೆಯ ರಾಜ ಸುಗ್ರೀವನಲ್ಲಿಗೆ ರಾಮನನ್ನು ಕರೆದೊಯ್ದ. ಸೀತಾಪಹರಣದ ವೃತ್ತಾಂತವನ್ನೆಲ್ಲ ಕೇಳಿದ ಸುಗ್ರೀವ, ‘ಅಣ್ಣ ವಾಲಿಯಿಂದಾಗಿ ರಾಜ್ಯಭ್ರಷ್ಟನಾಗಿರುವ ನನಗೆ ನೀನು ನೆರವಾದರೆ, ಸೀತಾಶೋಧಕ್ಕೆ ನನ್ನ ಕಪಿಸೇನೆಯು ನಿನಗೆ ನೆರ ವಾಗುತ್ತದೆ’ ಎಂದು ಭರವಸೆ ನೀಡಿದ. ಅಂತೆಯೇ ಸುಗ್ರೀವನ ಜತೆಗಿನ ಕಾಳಗದಲ್ಲಿ ವಾಲಿ ಅಸುನೀಗುವಂತೆ ತಂತ್ರಗಾರಿಕೆ ಮೆರೆದ ರಾಮ. ಒಡಂಬಡಿಕೆಯಂತೆ ಸುಗ್ರೀವ ತನ್ನ ಕಪಿಸೇನೆಯನ್ನು ರಾಮನ ಸುಪರ್ದಿಗೆ ಒಪ್ಪಿಸಿದ.

೧೩.ಪಕ್ಷಿರಾಜ ಜಟಾಯುವಿನ ಸೋದರ ಸಂಪಾತಿಗೆ ತಾನಿರುವ ಜಾಗದಿಂದಲೇ ನೂರಾರು ಯೋಜನಗಳಷ್ಟು ದೂರದ ಪ್ರದೇಶವನ್ನು ವೀಕ್ಷಿಸಬಲ್ಲ ಸಾಮರ್ಥ್ಯವಿತ್ತು. ಅದರ ನೆರವಿನಿಂದ, ಸೀತೆಯು ಲಂಕೆಯ ಅಶೋಕ ವನದಲ್ಲಿ ಸೆರೆಯಾಗಿರುವುದನ್ನು ಸಂಪಾತಿ ಪತ್ತೆಹಚ್ಚಿ ಹೇಳಿದ. ಅದರನ್ವಯ ಕಪಿಸೇನೆ ದಕ್ಷಿಣದೆಡೆಗೆ ತೆರಳಿದಾಗ, ಅಲ್ಲಿಗೂ ಲಂಕೆಗೂ ನಡುವೆ ಸಮುದ್ರವು ಮೈಚೆಲ್ಲಿರುವುದನ್ನು ಕಂಡ ಹನುಮಂತ ಸಾಗರೋಲ್ಲಂಘನ ಮಾಡಿ ಲಂಕೆಗೆ ತೆರಳಿದ. ಅಶೋಕವನದಲ್ಲಿ ಕಳೆಗುಂದಿ ಕೂತಿದ್ದ ಸೀತೆಯನ್ನು ಭೇಟಿಮಾಡಿ ತನ್ನ ಪರಿಚಯ ಹೇಳಿಕೊಂಡು ರಾಮನಿತ್ತ ಉಂಗುರವನ್ನು ಅದಕ್ಕೆ ಸಾಕ್ಷಿಯಾಗಿ ನೀಡಿದ. ಜತೆಗೆ, ತನ್ನ ಹೆಗಲ ಮೇಲೆ ಸೀತೆಯನ್ನು ಕೂರಿಸಿಕೊಂಡು ಹಾರಿ ರಾಮನಿಗೆ ತಲುಪಿಸಲೂ ಸಿದ್ಧವೆಂದ ಹನುಮ. ಆದರೆ ರಾಮನೇ ಬಂದು ತನ್ನನ್ನು ರಕ್ಷಿಸಿ ವೀರತ್ವ ಮೆರೆಯಬೇಕೆಂಬುದು ತನ್ನಾಸೆ ಎಂದು ಹೇಳಿದ ಸೀತೆ, ತನ್ನನ್ನು ಹುಡುಕಿದ್ದಕ್ಕೆ ಸಾಕ್ಷಿಯಾಗಿ ಅಮೂಲ್ಯ ವಜ್ರದುಂಗುರ ವನ್ನು ರಾಮನಿಗೆ ಕೊಡುವಂತೆ ಹನುಮಂತನಿಗೆ ನೀಡಿದಳು.

೧೪.ಅಷ್ಟರಲ್ಲಿ ಅಲ್ಲಿಗೆ ಬಂದ ರಾವಣ, ‘ನನಗೆ ವಶವಾಗದಿದ್ದರೆ ನಿನ್ನನ್ನು ತುಂಡರಿಸಿ ಸೇವಿಸುವೆ’ ಎಂದು ಸೀತೆಯನ್ನು ಬೆದರಿಸಿ ದಾಗ ಕೋಪಗೊಂಡ ಹನುಮಂತ ಅಶೋಕವನದ ಮಾವಿನ ತೋಪನ್ನು ಧ್ವಂಸಮಾಡಿದ. ರಾಕ್ಷಸರು ಅವನನ್ನು ಬಂಧಿಸಿ ರಾವಣನಲ್ಲಿಗೆ ಒಯ್ದರು. ತಾನು ರಾಮದೂತ ನೆಂದು ತಿಳಿಸಿದ ಹನುಮ, ‘ಸೀತೆಯನ್ನು ರಾಮನಿಗೆ ಒಪ್ಪಿಸದಿದ್ದರೆ ಅವನ ಕ್ರೋಧಕ್ಕೆ ಬಲಿಯಾಗುವೆ’ ಎಂದು ಎಚ್ಚರಿಸಿದಾಗ ಕೋಪಗೊಂಡ ರಾವಣ ಹನುಮನನ್ನು ಕೊಲ್ಲುವಂತೆ ಆಜ್ಞಾಪಿಸಿದ. ಆಗ ಅಡ್ಡಬಂದ ರಾವಣನ ತಮ್ಮ ಮತ್ತು ನೀತಿಶಾಸ್ತ್ರಜ್ಞ ವಿಭೀಷಣ, ‘ದೂತರನ್ನು ಕೊಲ್ಲುವುದು ಅನುಚಿತ’ ಎಂದು ತಿಳಿಸಿ, ಹನುಮನ ಅವಾಂತರಕ್ಕೆ ತಕ್ಕ ಶಿಕ್ಷೆ ವಿಧಿಸುವಂತೆ ಸೂಚಿಸಿದ. ಇದರನ್ವಯ ಹನುಮನ ಬಾಲಕ್ಕೆ ಬೆಂಕಿ ಹಚ್ಚಲಾಯಿತು. ಆಗ ಸುಮ್ಮನಿರದ ಹನುಮ ಆ ಬೆಂಕಿಯಿಂದಲೇ ಲಂಕೆಯ ಮಹಲುಗಳಿಗೆಲ್ಲ ಬೆಂಕಿ ಹಚ್ಚಿ, ಅಲ್ಲಿಂದ ತಪ್ಪಿಸಿಕೊಂಡು ರಾಮ-ಸುಗ್ರೀವರಿದ್ದಲ್ಲಿಗೆ ಬಂದು ನಡೆದುದನ್ನೆಲ್ಲ ತಿಳಿಸಿದ. ರಾವಣನೊಂದಿಗಿನ ಯುದ್ಧವೀಗ ಅನಿವಾರ್ಯ ಎಂದು ಅವರಿಬ್ಬರೂ ತೀರ್ಮಾನಿಸಿದರು.

೧೫. ಸಮುದ್ರಕ್ಕೆ ಸೇತುವೆ ಕಟ್ಟದಿದ್ದರೆ ಹನುಮಂತನ ಹೊರತು ಇನ್ನಾರೂ ಲಂಕೆಯನ್ನು ತಲುಪಲಾಗದು ಎಂದು ಆಲೋಚಿ ಸಿದ ಶ್ರೀರಾಮ. ನಂತರ ನಳ-ನೀಲ ಎಂಬ ಪರಿಣತ ಕಪಿಗಳ ಮಾರ್ಗದರ್ಶನದಲ್ಲಿ, ಕಪಿಸೇನೆಯ ಒತ್ತಾಸೆಯೊಂದಿಗೆ ಹಾಗೂ ಪುಟ್ಟ ಅಳಿಲಿನ ಸೇವೆಯೊಂದಿಗೆ ಸೇತುಬಂಧವಾಗಿ ರಾಮನ ಸೇನೆ ಲಂಕೆಯನ್ನು ತಲುಪಿತು. ಈ ಸುದ್ದಿ ಕೇಳಿ ರಾವಣನ ಸೇನಾಪಾಳಯದಲ್ಲಿ ತಲ್ಲಣವುಂಟಾಗಿ, ರಾಮನೊಂದಿಗೆ ರಾಜಿ ಮಾಡಿಕೊಳ್ಳುವಂತೆ ರಾವಣನ ಸೋದರ ವಿಭೀಷಣ ಸಲಹೆಯಿತ್ತಾಗ ರಾವಣ ಕ್ರೋಧ ಗೊಂಡು ನಿಂದಿಸಿದ. ನೊಂದ ವಿಭೀಷಣ ರಾಮನ ಪಾಳಯವನ್ನು ಸೇರಿಕೊಂಡ.

೧೬.ರಾಮ ಮತ್ತು ರಾವಣರ ಪಾಳಯದ ಹಲವು ಅತಿರಥ-ಮಹಾರಥರ ನಡುವೆ ಯುದ್ಧ ಪ್ರಾರಂಭವಾಯಿತು. ಇಂಥ ಒಂದು ಘಟ್ಟದಲ್ಲಿ, ಎದುರಾಳಿಯ ಬಾಣಕ್ಕೆ ಎದೆಯೊಡ್ಡಿದ ಲಕ್ಷ್ಮಣ ಕುಸಿದು ಮೂರ್ಛಿತನಾದ, ಅವನ ಉಸಿರು ನಿಲ್ಲುವಂತಾಯಿತು. ಅದನ್ನು ಕಂಡ ರಾಮ, ಲಕ್ಷ್ಮಣನಿಲ್ಲದೆ ತಾನೂ ಇಲ್ಲ ಎಂದು ರೋಧಿಸತೊಡಗಿ ದಾಗ, ಜಾಂಬವಂತನ ಸೂಚನೆಯ ಮೇರೆಗೆ ಸಂಜೀವಿನಿ ಮೂಲಿಕೆಯನ್ನು ಹೆಕ್ಕಿ ತರಲು ಹನುಮ ಹಾರಿ ಹೋದ. ಸಂಜೀವಿನಿ ಯಾವುದೆಂದು ಗೊತ್ತಾಗದೆ, ಮೂಲಿಕೆಗಳಿದ್ದ ಪರ್ವತವನ್ನೇ ಹನುಮ ಹೊತ್ತುತಂದ. ಆ ಮೂಲಿಕೆಯನ್ನು ಬಳಸಿ ಲಕ್ಷ್ಮಣನನ್ನು ಬದುಕಿಸಲಾಯಿತು. ನಂತರ, ಲಕ್ಷ್ಮಣನ ಬಾಣಕ್ಕೆ ರಾವಣನ ಮಗ ಇಂದ್ರಜಿತು ಬಲಿಯಾದ. ಆ ವೇದನೆಯನ್ನು ರಾವಣ ತಡೆಯದಾದ.

೧೭. ನಂತರ ಶುರುವಾಯಿತು ರಾಮ-ರಾವಣರ ನಡುವಿನ ಘನಘೋರ ಯುದ್ಧ. ಆದರೆ ರಾಮ ಬಿಡುತ್ತಿದ್ದ ಬಾಣವು ರಾವಣನ ತಲೆಯನ್ನು ತರಿದರೂ, ಆ ಜಾಗದಲ್ಲಿ ಮತ್ತೊಂದು ತಲೆ ಬೆಳೆಯುತ್ತಿತ್ತು. ಹೀಗಾಗಿ ರಾಮ ಗೊಂದಲಗೊಂಡಾಗ, ರಾವಣನ ತಲೆಯ ಬದಲಿಗೆ ದೇಹದತ್ತ ಗುರಿಯಿಡುವಂತೆ ವಿಭೀಷಣ ಉಪಾಯ ಹೇಳಿಕೊಟ್ಟ. ಅಂತೆಯೇ ರಾಮ ನಡೆದುಕೊಂಡ. ಉಪಾಯ ಫಲಿಸಿ ರಾವಣನ ಶರೀರ ಉರುಳಿಬಿತ್ತು. ದೇವತೆಗಳು ಆಕಾಶದಿಂದ ಪುಷ್ಪವೃಷ್ಟಿ ಮಾಡಿದರು. ರಾವಣನ ಅಂತ್ಯ ಸಂಸ್ಕಾರವನ್ನು ಸ್ವತಃ ಶಾಸ್ತ್ರೋಕ್ತವಾಗಿ ಮಾಡಿದ ರಾಮ, ತರುವಾಯ ಸೀತೆಯನ್ನು ತಾನಿದ್ದಲ್ಲಿಗೆ ಬರಮಾಡಿಕೊಂಡ.

೧೮. ಸೀತೆಯು ರಾವಣನಂಥ ಅನ್ಯಪುರುಷನ ಜತೆ ದೀರ್ಘಕಾಲವಿದ್ದುದರಿಂದ ಅವಳ ಚಾರಿತ್ರ್ಯದ ಪರೀಕ್ಷೆಗೆ ಅಗ್ನಿಪರೀಕ್ಷೆ ಯಾಗಬೇಕು ಎಂದು ರಾಮ ಆಶಿಸಿದ. ತನ್ನ ಪಾತಿವ್ರತ್ಯವನ್ನೇ ಶಂಕಿಸಿದ್ದಕ್ಕೆ ಶೋಕಿಸಿದ ಸೀತೆ, ಅಗ್ನಿಪ್ರವೇಶ ಮಾಡಿದಳು. ಆದರೆ ಕೆಲಕ್ಷಣಗಳಲ್ಲೇ ಸ್ವತಃ ಅಗ್ನಿದೇವನು ಅವಳನ್ನು ತನ್ನ ಬಾಹುಗಳಲ್ಲಿ ಎತ್ತಿ ತಂದು ರಾಮನಿಗೊಪ್ಪಿಸಿ, ‘ಸೀತೆ ಪುನೀತೆ’ ಎಂದು ಪ್ರಮಾಣಿಸಿದ. ಸ್ವತಃ ತನಗಲ್ಲದಿದ್ದರೂ ಲೋಕದ ಶಂಕೆಯನ್ನು ನೀಗುವು ದಕ್ಕಾಗಿಯೇ ಅಗ್ನಿಪರೀಕ್ಷೆಗೆ ಈಡುಮಾಡ ಬೇಕಾಯಿತು ಎಂದು ರಾಮ ಸೀತೆಗೆ ಸಮರ್ಥನೆ ನೀಡಿದ. ಈ ಮಾತಿಗೆ ಸಮಾಧಾನಗೊಂಡ ಸೀತೆ, ರಾಮ ನೊಂದಿಗೆ ಸಂತಸ ದಿಂದಲೇ ಅಯೋಧ್ಯೆಗೆ ಹೆಜ್ಜೆಹಾಕಿದಳು. ಅಲ್ಲಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು ಪುರಜನರು ಮತ್ತು ರಾಜ ಪರಿವಾರದವರು. ನಂತರ ರಾಮ ರಾಜ್ಯಭಾರ ವಹಿಸಿಕೊಂಡ.

೧೯. ಆದರೆ ಸೀತೆಯ ಪಾವಿತ್ರ್ಯದ ಬಗ್ಗೆ ಜನಸಾಮಾನ್ಯರು ಶಂಕಿಸತೊಡಗಿದ್ದು, ರಾಜ್ಯದಲ್ಲಿ ಉಂಟಾದ ಅಕಾಲಿಕ ಬರಗಾಲಕ್ಕೂ ಸೀತೆಯಿಂದಾಗಿರುವ ತಪ್ಪೇ ಕಾರಣ ಎಂದು ಅವರು ಕೊಂಕುನುಡಿಯಾಡಿದ್ದು ಗೂಢಚಾರಿಕೆಯ ಮೂಲಕ ರಾಮನ ಅರಿವಿಗೆ ಬಂತು. ಅವರನ್ನು ಸಂತುಷ್ಟಗೊಳಿಸಲು ಸೀತೆಯ ಪರಿತ್ಯಾಗಕ್ಕೆ ರಾಮ ನಿರ್ಧರಿಸಿದ. ಅಷ್ಟು ಹೊತ್ತಿಗೆ ತುಂಬುಗರ್ಭಿಣಿ ಯಾಗಿದ್ದ ಸೀತೆಯನ್ನು ವಿಹಾರದ ನೆಪದಲ್ಲಿ ಲಕ್ಷ್ಮಣನೊಂದಿಗೆ ಕಾಡಿಗೆ ಕಳಿಸಿದ ರಾಮ, ಅವಳನ್ನು ಅಲ್ಲೇ ಬಿಟ್ಟುಬರುವಂತೆ ಅವನಿಗೆ ಸೂಚಿಸಿದ. ಜನರ ಅಪವಾದಕ್ಕೆ ಕಿವಿಗೊಟ್ಟು ರಾಮ ತನ್ನನ್ನು ತ್ಯಜಿಸಿರುವುದು ಅರಿವಾದ ಸೀತೆ ಇನ್ನಿಲ್ಲದಂತೆ ರೋದಿಸಿದಳು. ಪರಿತ್ಯಕ್ತ ಸೀತೆಗೆ ಋಷಿ ವಾಲ್ಮೀಕಿ ತಮ್ಮ ಆಶ್ರಮದಲ್ಲಿ ಆಶ್ರಯವಿತ್ತರು. ಅಲ್ಲಿಯೇ ‘ಲವ-ಕುಶ’ ಎಂಬಿಬ್ಬರು
ಅವಳಿ ಮಕ್ಕಳನ್ನು ಹೆತ್ತ ಸೀತೆ, ವಾಲ್ಮೀಕಿಗಳ ಕೃಪಾಶೀರ್ವಾದದಲ್ಲೇ ಮಕ್ಕಳನ್ನು ಬೆಳೆಸಿದಳು, ಸಕಲ ವಿದ್ಯೆಗಳು ಅವರಿಗೆ ದೊರೆ ಯುವಂತೆ ಮಾಡಿದಳು.

೨೦.ರಾವಣ ಹತ್ಯೆಯಿಂದ ತನಗೆ ಒದಗಿರಬಹುದಾದ ಬ್ರಹ್ಮಹತ್ಯಾ ದೋಷದ ನಿವಾರಣೆಗೆ ಅಶ್ವಮೇಧ ಯಾಗ ಮಾಡಲು ರಾಮ ನಿರ್ಧರಿಸಿ, ಎಲ್ಲರಂತೆ ವಸಿಷ್ಠರನ್ನೂ ಆಹ್ವಾನಿಸಿದ. ಅವರ ಜತೆಗೆ ತೆರಳಿದ ಲವ-ಕುಶರು ರಾಮನೆದುರು ರಾಮಾಯಣದ ಗೀತೆ ಹಾಡಿದಾಗ ‘ಇದು ನನ್ನ ಕಥನದಂತೆಯೇ ಇದೆಯಲ್ಲಾ?’ ಎಂದು ನಿಬ್ಬೆರಗಾಗುವ ರಾಮನಿಗೆ ಅವರಿಬ್ಬರೂ ತನ್ನ ಮಕ್ಕಳೇ ಎಂಬುದು ಗೊತ್ತಾಗುತ್ತದೆ. ನಂತರ ವಾಲ್ಮೀಕಿ ಆಶ್ರಮದಲ್ಲೇ ಸೀತೆಯಿರುವ ವಿಷಯ ತಿಳಿದು, ತಾನಿರುವಲ್ಲಿಗೆ ಬರುವಂತೆ ಸೀತೆಗೆ ಹೇಳಿ ಕಳಿಸುತ್ತಾನೆ ರಾಮ. ಅಂತೆಯೇ ವಾಲ್ಮೀಕಿಗಳೊಂದಿಗೆ ಬಂದ ಸೀತೆಗೆ, ‘ಮತ್ತೊಂದು ಪರೀಕ್ಷೆಗೆ ಒಳಗಾಗುವ ಮೂಲಕ ನಿನ್ನ ಮೇಲಿರುವ ಕಳಂಕವನ್ನು ನೀನು ತೊಡೆದುಕೊಳ್ಳಬೇಕು’ ಎಂದುಬಿಡುತ್ತಾನೆ ರಾಮ.

೨೧.ಮತ್ತೊಮ್ಮೆ ತನ್ನಲ್ಲಿ ಕಳಂಕ ಕಂಡ ರಾಮನ ಧೋರಣೆ ಕಂಡು ದುಃಖಿತಳಾದ ಸೀತೆ ತನ್ನ ನಿಜತಾಯಿಯಾದ ಭೂದೇವಿಗೆ ಕೈಮುಗಿದು, ‘ನಾನು ಪತಿವ್ರತೆಯೇ ಆಗಿದ್ದಲ್ಲಿ, ಈ ಭೂಮಿ ಬಾಯಿ ಬಿರಿಯಲಿ, ಅದರ ಮಡಿಲೊಳಗೆ ನಾನು ಸೇರುವಂತಾಗಲಿ’ ಎಂದು ಪ್ರಾರ್ಥಿಸುತ್ತಾಳೆ. ನೋಡನೋಡುತ್ತಿದ್ದಂತೆಯೇ ಭಾರಿ ಸದ್ದಿನೊಂದಿಗೆ ಭೂಮಿ ಬಿರಿಯುತ್ತದೆ. ಕ್ಷಣಕಾಲದಲ್ಲೇ ಅದರ ಬಾಯಿ ದೊಡ್ಡದಾಗಿ ಅದರಲ್ಲೊಂದು ಸಿಂಹಾಸನ ಕಾಣಿಸಿಕೊಳ್ಳು ತ್ತದೆ. ಅದರಲ್ಲಿ ತನ್ನ ಮಗಳು ಸೀತೆಯನ್ನು ಕೂರಿಸಿಕೊಂಡು ಭೂದೇವಿ ತನ್ನ ಮಡಿಲು ಸೇರಿಸಿಕೊಳ್ಳುತ್ತಾಳೆ. ಕೆಲ ಕ್ಷಣದಲ್ಲೇ ಬಿರಿದ ಬಾಯಿ ಮುಚ್ಚಿ ಕೊಳ್ಳುತ್ತದೆ.

೨೨. ಸೀತೆಯು ತನ್ನಿಂದ ದೂರವಾಗಿ ಭೂಮಿ ಪಾಲಾದ ದೃಶ್ಯ ಕಂಡ ರಾಮ, ಸೀತೆಯನ್ನು ವೃಥಾ ಅನುಮಾನಿಸಿದ್ದಕ್ಕಾಗಿ ನೊಂದುಕೊಂಡು ಪಶ್ಚಾತ್ತಾಪ ಪಡುತ್ತಾನೆ. ಆಗ ಅವನ ನೆರವಿಗೆ ಧಾವಿಸುವ ಋಷಿಮುನಿಗಳು, ‘ರಾವಣನ ಸಂಹಾರ ನಿನ್ನ ಅವತಾರದ ಉದ್ದೇಶವಾಗಿತ್ತು; ಅದಕ್ಕೊಂದು ನಿಮಿತ್ತವೂ ಬೇಕಾಗಿತ್ತು. ಅದಕ್ಕಾಗಿ ಅವತರಿಸಿದವಳೇ ಸೀತೆ. ಅವಳು ಈ ಭೂಮಿ ಮೇಲೆ ಬಂದ ಕಾರ್ಯ ಮುಗಿದಿದೆ, ಹೀಗಾಗಿ ತನ್ನ ಮೂಲನೆಲೆಗೆ ಆಕೆ ಮರಳಿದ್ದಾಳೆ. ನೀನು ಶೋಕಿಸುವುದರಲ್ಲಿ ಅರ್ಥವಿಲ್ಲ’ ಎಂದು ಸಮಾಧಾನ ಮಾಡುತ್ತಾರೆ.