ತಾನು ಎತ್ತರವಿಲ್ಲ, ಬೆಗ್ಗಿಲ್ಲ, ಸುಂದರವಾಗಿಲ್ಲ ಎಂದು ಕೀಳರಿಮೆ ಬೆಳೆಸಿಕೊಂಡ, ಜೀವನೋತ್ಸಾಹವನ್ನೇ ಕಳೆದುಕೊಂಡ ಎಷ್ಟೋ ಯುವ ಮನಸ್ಸುಗಳನ್ನು ನೋಡಿರು ತ್ತೇವೆ. ಆರೋಗ್ಯವಂತರಾಗಿ ಜನಸಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಂಗಾಗಳನ್ನೇ ಊನ ಮಾಡಿಕೊಂಡವರ ಬಗ್ಗೆ ಕೇಳಿರುತ್ತೇವೆ. ಆದರೆ, ಹುಟ್ಟಿದಾಗಿನಿಂದಲೇ ತನ್ನ ಕಾಲಿನ ಸ್ವಾಧೀನವೇ ಇಲ್ಲದಿದ್ದರೂ, ಎಳ್ಳಷ್ಟೂ ದೃತಿಗೆಡದೆ ಅಂಜದೇ ನಿಂತ ಸಾಧಕನ ಕತೆಯಿದು.
ವಿರಾಜ್ ಕೆ ಅಣಜಿ
೨೦೨೨ರ ಜೂನ್ನಲ್ಲಿ ಹೈದರಾಬಾದ್ನಲ್ಲಿ ನಡೆದ ನ್ಯಾಷನಲ್ಸ್ನಲ್ಲಿ ಭಾಗಿಯಾಗಿ ಚಿನ್ನದ ಪದಕಕ್ಕೆ ಭಾಜನರಾಗಿರುವ ಬಿ.ವಿ ಶ್ರೀನಿವಾಸ್, ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಆರ್ಮ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಹಗಲಿರುಳು ಸಿದ್ಧತೆ ನಡೆಸಿ ದ್ದಾರೆ. ಟೂರ್ನಿಯಲ್ಲಿ ದಿವ್ಯಾಂಗರ ವಿಭಾಗ ಮತ್ತು ಜನರಲ್ ವಿಭಾಗದಲ್ಲೂ ಚಿನ್ನ ಪಡೆದು, ಟರ್ಕಿಯ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲೂ ಸ್ಫರ್ಧಿಸಲು ಅವಕಾಶ ಪಡೆದ ಶ್ರೀನಿವಾಸ ಅವರ ಧೀಶಕ್ತಿಗೆ ನಮೋನಮಃ.
ಬಿ.ವಿ. ಶ್ರೀನಿವಾಸ-ಎಂದಿಗೂ ತಮ್ಮ ಆತ್ಮಾಭಿಮಾನವನ್ನು ಬಿಟ್ಟವರಲ್ಲ, ತನ್ನ ಬಲಹೀನತೆ ತೋರಿಸಿ ಕೈಚಾಚಿದವರಲ್ಲ. ತನ್ನ
ವೈಕಲ್ಯವನ್ನೂ ಮೀರಿ ಅವರು ತೋರಿರುವ ಸಾಧನೆಗೆ ಎಷ್ಟು ಮೆಚ್ಚುಗೆ ಹೇಳಿದರೂ ಕಡಿಮೆಯೇ.
ಸಾಧನೆಯ ಹಾದಿ ಕುರಿತು ಅವರ ಮಾತಲ್ಲೇ ಕೇಳಿ: ಹುಟ್ಟಿದಾಗಿನಿಂದಲೂ ನಾನು ಪೋಲಿಯೋ ಪೀಡಿತ, ಎರಡೂ ಕಾಲುಗಳೂ ಶಕ್ತಿಹೀನವಾಗಿದ್ದವು. ತೆವಳಿಕೊಂಡೇ ನನ್ನ ಬಾಲ್ಯವನ್ನು ಕಳೆದೆ. ನನ್ನ ಇಂಥ ಸ್ಥಿತಿಯನ್ನು ನನ್ನ ಬಲಹೀನತೆ ಎಂಬ ಕೀಳರಿಮೆ ನನ್ನೊಳಗೆ ಬರದಂತೆ ನನ್ನ ಪೋಷಕರು ನೋಡಿಕೊಂಡರು. ನಾನು ಬೆಂಗಳೂರಿನ ಬನಶಂಕರಿಯ ಮೂರನೇ ಹಂತದ ನಿವಾಸಿ. ನಾನು ಹೈಸ್ಕೂಲ್ ಕಲಿಯುವವರೆಗೂ ಅಮ್ಮನೇ ನನ್ನನ್ನು ಪ್ರತಿದಿನ ಹೊತ್ತುಕೊಂಡೇ ಶಾಲೆಗೆ ತಲುಪಿಸುತ್ತಿದ್ದರು. ನಂತರವೇ ಸ್ಟಿಕ್ ಸಹಾಯದಿಂದ ನಿಧಾನವಾಗಿ ನಿಲ್ಲಲು, ನಡೆಯಲು ಕಲಿತೆ.
ಕಾಲುಗಳು ಊನವಾಗಿದ್ದರೂ ನನ್ನ ಆತ್ಮ ಸ್ಥೈರ್ಯವನ್ನು ಊನ ಮಾಡಿಕೊಳ್ಳಲಿಲ್ಲ. ಎಲ್ಲರಂತೆ ನಾನಿಲ್ಲದಿದ್ದರೂ ಎಲ್ಲರಿಂದ ಆಗದ ಏನಾನ್ನಾದರೂ ಸಾಧಿಸಬೇಕು ಎಂಬ ಹಟವನ್ನು ಮೈಗೂಡಿಸಿಕೊಂಡೆ. ನನ್ನ ಬಗ್ಗೆ ಸಿಂಪಥಿಯ ಬದಲಾಗಿ, ನನ್ನನ್ನು ಸಹಜವಾಗಿ, ಸ್ನೇಹಿತನಾಗಿ ನೋಡುವ, ಮಾತನಾಡಿಸುವ ಎಲ್ಲರೂ ಕೂಡ ನನಗೆ ಆಪ್ತರು.
೨೦೦೦ರ ವೇಳೆಗೆ ಬಾಡಿ ಬಿಲ್ಡಿಂಗ್ನತ್ತ ಒಲವು ಮೂಡಿತು. ಆಗ ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದೆ, ಆಗಿನಿಂದಲೂ ನನ್ನ ಸಾಮರ್ಥ್ಯದ ಬಗ್ಗೆ ಹೆಚ್ಚು ನಂಬಿಕೆ ಮೂಡಿತು, ಸಾಧನೆಯ ಹಟ ಗಟ್ಟಿ ಮಾಡಿಕೊಳ್ಳಲು ಆರಂಭಿಸಿದೆ. ೨೦೦೩ರಿಂದ ಅಥ್ಲೆಟಿಕ್ಸ್ನಲ್ಲಿ ಭಾಗಿಯಾಗುತ್ತಿದ್ದೆ. ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಹಲವು ಪದಕಗಳಿಗೆ ಕೊರಳೊಡ್ಡಿದೆ.
ಇದೆಲ್ಲದರ ಫಲವಾಗಿ ೨೦೦೪ರಲ್ಲಿ ಬೆಲ್ಜಿಯಂನಲ್ಲಿ ನಡೆದ ಪ್ಯಾರಾಲಿಂಕ್ಸ್ನಲ್ಲಿ ಭಾಗಿ ಯಾಗುವ ಅವಕಾಶ ಒದಗಿ ಬಂತು. ಕೂಟದಲ್ಲಿ ಡಿಸ್ಕಸ್ ಥ್ರೋ, ಶಾಟ್ ಪುಟ್ನಲ್ಲಿ ಚಿನ್ನದ ಪದಕ ಪಡೆದು, ನನ್ನ ಜನ್ಮಕ್ಕೂ ಸಾರ್ಥಕತೆಯಿದೆ ಎಂಬುದನ್ನು ತೋರಿಸಿಕೊಟ್ಟೆ.
ನಂತರ ೨೦೦೬ರಲ್ಲಿ ಕೌಲಾಂಲಂಪರುದಲ್ಲಿ ನಡೆದ ಏಷಿಯನ್ ಗೇಮ್ಸ್ನಲ್ಲಿ ಭಾಗವಹಿಸಿ ಆರನೇ ಸ್ಥಾನ ಪಡೆದೆ. ನನ್ನ ಕೈಲಾಗದು ಎಂದು ಆರಂಭಿಸಿದ ಪ್ರಯತ್ನ ಇಂತದ್ದೊಂದು ದೊಡ್ಡ ಕೂಟದಲ್ಲಿ ಭಾಗವಹಿಸಲು ದಾರಿ ಮಾಡಿ ಕೊಟ್ಟಿತ್ತು. ದುಬೈನಲ್ಲಿ ೨೦೧೦ರಲ್ಲಿ ನಡೆದ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ನಲ್ಲೂ ಭಾಗವಹಿಸಿ ಡಿಸ್ಕಸ್ ಥ್ರೋನಲ್ಲಿ ಎಂಟನೇ ಸ್ಥಾನ ಪಡೆದೆ.
ಈವರೆಗೂ ಬಾಡಿ ಬಿಲ್ಡಿಂಗ್ನಲ್ಲಿ ೧೫ಕ್ಕೂ ಹೆಚ್ಚು ಟೈಟಲ್ ಗಳನ್ನು ಪಡೆದಿದ್ದೇನೆ, ಇದೆಲ್ಲವೂ ಇಚ್ಛಾಶಕ್ತಿಯಿಂದಲೇ ಆದದ್ದು. ೨೦೧೦ರಲ್ಲಿ ಮೊದಲು ಬಾರಿಗೆ ಬಾಡಿ ಬಿಲ್ಡಿಂಗ್ನತ್ತ ಆಸಕ್ತಿ ಮೂಡಿತು. ಅಥ್ಲೆಟಿಕ್ಸ್ ನಲ್ಲೂ ಕೂಡ ಭಾಗವಹಿಸಲು ಆರಂಭಿಸಿದೆ.
ಅಲ್ಲಿಂದ ವಿಶ್ವದ ನಾನಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸುತ್ತಿದ್ದೇನೆ. ೨೦೧೮ರಿಂದ ಆರ್ಮ್ ರೆಸಲಿಂಗ್ನತ್ತ ಆಸಕ್ತಿ ಮೂಡಿದ್ದು, ಪ್ರದೀಪ್ ಸಿಂಗ್ ಎಂಬ ಟ್ರೈನರ್ ಬಳಿ ಅಭ್ಯಾಸ ಮಾಡುತ್ತಿದ್ದೇನೆ. ೨೦೧೯ರಲ್ಲಿ ವಿಶ್ವ ಆರ್ಮ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದೆ.
ಇನ್ಫಿ ಮೂರ್ತಿ ದಂಪತಿಗಳ ಪ್ರೋತ್ಸಾಹದಿಂದಾಗಿ ೨೦೧೩ರಿಂದ ಇನೋಸಿಸ್ನ ಕ್ಲಬ್ಹೌಸ್ನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ
ಮಾಡುತ್ತಿದ್ದೆ. ಆದರೆ, ನಾನು ವೆಂಡರ್ ಮೂಲಕ ಕೆಲಸಕ್ಕೆ ಸೇರಿದ್ದರಿಂದ, ಮಾರ್ಚ್ ೨೦೨೦ನಲ್ಲಿ ಬಂದ ಕೋವಿಡ್ ಲಾಕ್
ಡೌನ್ನಿಂದಾಗಿ ನನ್ನ ಕೆಲಸಕ್ಕೆ ಕುತ್ತು ಬಂತು. ಸದ್ಯ ಫ್ರೀಲ್ಯಾನ್ಸಿಂಗ್ ಮತ್ತು ಜಿಮ್ ಟ್ರೈನರ್ ಆಗಿ ಜೀವನವನ್ನು ನಡೆಸುತ್ತಿದ್ದೇನೆ. ಮನೆಯಲ್ಲಿ ತಾಯಿ, ಪತ್ನಿ, ಮಗನಿದ್ದಾನೆ. ಅವರ ಸಹಕಾರದಿಂದಲೇ ನನ್ನಿಂದಾಗುವ ಪ್ರಯತ್ನ ಮಾಡುತ್ತಿದ್ದೇನೆ.
ಲಾಕ್ಡೌನ್ನಲ್ಲಿ ನಂದಿನಿ ಏಜೆನ್ಸಿ ಆರಂಭಿಸಿದ್ದೆ. ಪ್ರತಿ ಬಾರಿ ತೂಕದ ವಸ್ತು, ಹಾಲಿನ ಕ್ರೇಟ್ಗಳನ್ನು ಎತ್ತಿಡಲು ಬೇರೊಬ್ಬರನ್ನೇ ಆಶ್ರಯಿಸಬೇಕಾಯಿತು. ಆದ್ದರಿಂದ ಏಜೆನ್ಸಿ ಮುಚ್ಚಿದ್ದು, ಸ್ಟೇಷನರಿ ಶಾಪ್ ಆರಂಭಿಸಿ, ಸ್ವಾವಲಂಬಿ ಜೀವನ ನಡೆಸುವ ಹಂಬಲದಲ್ಲಿದ್ದೇನೆ.
ಸಾಫ್ಟ್ ಮನಸಿಗೆ ಋಣಿ
೨೦೦೪ರ ಬೆಲ್ಜಿಯಂ ಕ್ರೀಡಾಕೂಟಕ್ಕೆ ಇನೋಸಿಸ್ ನನಗೆ ಪ್ರಾಯೋಜಕತ್ವ ನೀಡಿತು. ಸುಧಾ ಮೇಡಂ ಸ್ವತಃ ಕರೆ ಮಾಡಿ ನನಗೆ
ಶುಭ ಹಾರೈಸಿದ್ದರು. ೨೦೧೨ರ ವೇಳೆಗೆ ಉದ್ಯೋಗದ ಅವಶ್ಯಕತೆಯಿತ್ತು. ಆಗ ವೆಂಡರ್ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಿದೆ. ಆಗವರು, ನೀವು ಕಂಪನಿಯಿಂದಲೇ ಪರವಾನಿಗೆ ಪಡೆದರೆ ಮಾತ್ರ ಕೆಲಸಕ್ಕೆ ಪರಿಗಣಿಸಲು ಸಾಧ್ಯವೆಂದು ನನ್ನ ಅರ್ಜಿಯನ್ನು
ಪಕ್ಕಕ್ಕಿಟ್ಟರು. ನೋವಿನಲ್ಲಿಯೇ ಮನಸ್ಸು ಗಟ್ಟಿ ಮಾಡಿಕೊಂಡು, ನನ್ನ ಪರಿಸ್ಥಿತಿ, ಜೀವನದಲ್ಲಿ ಮಾಡಿರುವ ಅಲ್ಪಸ್ವಲ್ಪ ಸಾಧನೆಗಳ ಬಗ್ಗೆ ಶ್ರೀಮತಿ ಸುಧಾಮೂರ್ತಿ ಮತ್ತು ಶ್ರೀ ನಾರಾಯಣಮೂರ್ತಿ ದಂಪತಿಗೆ ಪತ್ರ ಬರೆದಿದ್ದೆ.
ನನ್ನ ಪ್ರೊಫೈಲ್ ನೋಡಿದ್ದ ಮೂರ್ತಿ ದಂಪತಿಗಳು, ವೆಂಡರ್ ಜತೆ ಮಾತನಾಡಿ ನನಗೆ ಕೆಲಸ ಕೊಡಲು ಸೂಚಿಸಿದ್ದರು. ಆ ಇಬ್ಬರಿಗೂ ನಾನೆಂದಿಗೂ ಚಿರಋಣಿ.
ವಿಶ್ವವಾಣಿ ಕಳಕಳಿ
ಬಿ.ವಿ. ಶ್ರೀನಿವಾಸ ಅವರು ಬರುವ ಅಕ್ಟೋಬರ್ ೧೪ರಿಂದ ೨೩ರವರೆಗೆ ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಆರ್ಮ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ೨೦ನೇ ಆಗಸ್ಟ್ ಒಳಗಾಗಿ ಫೆಡರೇಷನ್ಗೆ ಅವರು೧,೮೨,೦೦೦/-ಹಣ ಸಂದಾಯ ಮಾಡಬೇಕಿದೆ. ತಮ್ಮ ದೈಹಿಕ ಅಂಗವೈಕಲ್ಯವನ್ನು ಮೀರಿ ಅವರು ತೋರಿರುವ ಸಾಧನೆ ಸರ್ವರಿಗೂ ಸೂರ್ತಿದಾಯಕ. ಕನ್ನಡ ನಾಡಿನ ಸಾಧಕನಿಗೆ ನಿಮ್ಮಿಂದಾಗುವ ಹಣಕಾಸು ನೆರವು ನೀಡಿ, ಮೆಚ್ಚುಗೆ ಮಾತುಗಳನ್ನು ಹೇಳಿ.
ಶ್ರೀನಿವಾಸ ಅವರಿಂದ ನಾಡಿಗೆ, ದೇಶಕ್ಕೆ ಇನ್ನಷ್ಟು ಪದಕಗಳ ಸಾಧನೆ ಹರಿದು ಬರಲಿ, ಕೀರ್ತಿ ಬೆಳಗಲಿ. ಸರಕಾರ, ಸಂಘ ಸಂಸ್ಥೆ ಗಳು ಇವರ ಸಾಧನೆಗೆ ಬೆನ್ನೆಲುಬಾದರೆ ಇನ್ನಷ್ಟು ಹೊಸ ಪ್ರತಿಭೆಗಳಿಗೂ ಉತ್ತೇಜನ ಸಿಕ್ಕಂತಾಗುತ್ತದೆ. ಶ್ರೀನಿವಾಸ ಬಿ.ವಿ ಅವರ
ಸಂಪರ್ಕ ಸಂಖ್ಯೆ: +೯೧ ೯೦೦೮೧೨೯೯೨೮ ದೇಶಕ್ಕೆ ಕೀರ್ತಿ ತರುವಾಸೆ ನನ್ನೆಲ್ಲ ಅಂಗವೈಕಲ್ಯಕ್ಕೂ ಅಂಜದೆ ಈವರೆಗೂ ಬದುಕು
ಸಾಧಿಸಿದ್ದೇನೆ. ದೇವರು ಕೊಟ್ಟ ಸವಾಲನ್ನು ನನ್ನ ಸಾಮರ್ಥ್ಯದ ಅನುಸಾರ ಎಲ್ಲರ ಪ್ರೋತ್ಸಾಹದಿಂದ ಎದುರಿಸಿದ್ದೇನೆ.
***
ಸಿಂಪಥಿಯ ಬದಲಾಗಿ ಒಂದು ಬೆಂಬಲದ ಮಾತು, ಪ್ರೋತ್ಸಾಹವು ನನ್ನನ್ನು ಇನ್ನಷ್ಟು ಪ್ರೇರೇಪಿಸುತ್ತದೆ.
ನನ್ನ ದೇಹದಲ್ಲಿ ಉಸಿರಿರುವ ತನಕ ದೇಶದ ಕೀರ್ತಿ ಹೆಚ್ಚಿಸಲು ಶ್ರಮ ಪಡುವ ಇಚ್ಛೆ ನನ್ನದು. ಭಾರತವನ್ನು ಕ್ರೀಡೆಯಲ್ಲಿ ಪ್ರತಿನಿಧಿಸುತ್ತೇನೆ ಎಂಬ ಹೆಮ್ಮೆಗಿಂತ ಹೆಚ್ಚಿನದ್ದು ನನಗೇನೂ ಇಲ್ಲ.