Saturday, 14th December 2024

ಮೊಯ್ಲಿಗೆ ಜ್ಞಾನಪೀಠ?; ಸಾಹಿತ್ಯ ವಲಯದಲ್ಲಿ ವಿವಾದ, ಆಕ್ರೋಶ

ವಿಶ್ವವಾಣಿ ವಿಶೇಷ

ಒಂದೆಡೆ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಸಿಗುತ್ತದೆ ಎಂಬ ಸಂತಸ, ಮತ್ತೊಂದೆಡೆ ಜ್ಞಾನಪೀಠದ ಮೌಲ್ಯ ಹಾಳಾಗುವ ಆತಂಕ

ಬೆಂಗಳೂರು: ಪ್ರಸಕ್ತ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಹೆಸರನ್ನು ಶಿಫಾರಸು
ಮಾಡಲಾಗಿದೆ ಎನ್ನುವ ಸುದ್ದಿ ಇದೀಗ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಭಾರಿ ವಿವಾದ ಹಾಗೂ ಆಕ್ರೋಶಕ್ಕೆ
ಕಾರಣವಾಗಿದೆ.

ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ಕನ್ನಡದ ಸಾಹಿತಿಗೆ ಬರುವುದಾದರೆ ಅದು ಸಂತೋಷದ ವಿಷಯ ಎನ್ನುವ ಜತೆಜತೆಗೆ, ವೀರಪ್ಪ ಮೊಯ್ಲಿ ಅವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಈ ಪ್ರಶಸ್ತಿ ಕೊಟ್ಟರೆ, ಜ್ಞಾನಪೀಠ ಪ್ರಶಸ್ತಿಗೆ ಇರುವ ಗೌರವ ಹಾಗೂ ಘನತೆಗೆ ಧಕ್ಕೆಯಾಗ ಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ, ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡಬಾರದು ಎನ್ನುವ ಕೂಗು ಶುರುವಾಗಿದೆ.

ಎಸ್.ಎಲ್.ಭೈರಪ್ಪ ಅವರಿಗೆ ನೀಡಿ: ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆಯಲು ಎಸ್.ಎಲ್. ಭೈರಪ್ಪ ಅವರು ಅರ್ಹ ವ್ಯಕ್ತಿಯಾಗಿದ್ದಾರೆ. ಕಾದಂಬರಿಗಳ ಮೂಲಕ ಕನ್ನಡಿಗರ ಮನೆಮನೆ ತಲುಪಿರುವ ಭೈರಪ್ಪ ಅವರ ಹೆಸರನ್ನು ಶಿಫಾರಸು ಪಟ್ಟಿಯಲ್ಲಿ ಸೇರಿಸದೇ, ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿಗೆ ಶಿಫಾರಸು ಆಗಿದೆ ಎಂದರೆ, ಅದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ಮಾನದಂಡದ ಮೇಲೆ ಶಿಫಾರಸು: ಕೇಂದ್ರ ಸಾಹಿತ್ಯ ಅಕಾಡೆಮಿ ಯಾವ ಮಾನದಂಡವನ್ನು ನೋಡಿಕೊಂಡು ಮೊಯ್ಲಿ ಅವರ ಹೆಸರನ್ನು ಶಿಫಾರಸು ಮಾಡಿದೆ ಎನ್ನುವುದು ಗೊತ್ತಿಲ್ಲ. ಆದರೆ ಒಂದು ವೇಳೆ ಮೊಯ್ಲಿ ಅವರಿಗೆ ಈ ಪ್ರಶಸ್ತಿ ಸಿಕ್ಕರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ಈ ಹಿಂದೆ ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದಾಗಲೇ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಏನು?: ಕರ್ನಾಟಕಕ್ಕೆ ಈಗಾಗಲೇ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿದ್ದು, ಎಲ್ಲರೂ ಸಾಹಿತ್ಯ
ಕೃಷಿ ಮಾಡಿದವರೇ ಆಗಿದ್ದಾರೆ. ಆದರೆ ವೀರಪ್ಪ ಮೊಯ್ಲಿ ಅವರು ಕೆಲ ಕೃತಿಗಳನ್ನು ಬರೆದಿದ್ದಾರೆ ಎನ್ನಲಾಗುತ್ತಿದೆ. ಹೊರತಾಗಿ,
ಸಾಹಿತ್ಯ ವಲಯಕ್ಕೆ ಅವರ ಕೊಡುಗೆ ಏನು ಎಂದು ಅನೇಕರು ಪ್ರಶ್ನಿಸಿದ್ದಾರೆ.

ವಿಶ್ವವಾಣಿ ವರದಿಯಿಂದ ಎಚ್ಚೆತ್ತ ಸಾಹಿತ್ಯ ವಲಯ
ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಎನ್ನುವ ಸುದ್ದಿ ವಿಶ್ವವಾಣಿಯಲ್ಲಿ ಪ್ರಕಟವಾಗುತ್ತಿದ್ದಂತೆ ಸಾಹಿತ್ಯ ವಲಯ
ಎಚ್ಚೆತ್ತುಕೊಂಡಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದೆ. ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ನೀಡುವುದಾದರೆ, ನಮಗೆ ನೊಬೆಲ್ ಪ್ರಶಸ್ತಿ ಕೊಟ್ಟರೂ ತಪ್ಪಿಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವರು ಮೊಯ್ಲಿ ಅವರಿಗೆ ಕೊಡುವು ದಕ್ಕಿಂತ, ಅವರ ಸಾಹಿತ್ಯವನ್ನು ಓದಿ ಅರಗಿಸಿಕೊಂಡವರಿಗೆ, ಕೊಡಿ ಎಂದು ಕಾಲೆಳೆದಿದ್ದಾರೆ.