ಸಂದರ್ಶನ: ರಂಜಿತ್ ಎಚ್. ಅಶ್ವತ್ಥ
ಇಂದಿನಿಂದಲೇ 55 ಲಕ್ಷ ಜನರಿಗೆ ಕುಡಿಯುವ ನೀರಿನ ಸಂಪರ್ಕ
ಕಾವೇರಿ ನೀರಿನ ಬಗ್ಗೆ ಜಾಗೃತಿ
ರಾಜಧಾನಿ ಬೆಂಗಳೂರಿನ ದಶಕದ ಕನಸು ಈಡೇರುವ ಸನಿಹದಲ್ಲಿದ್ದೇವೆ. ನಮ್ಮ ಸರಕಾರವೇ ಆರಂಭಿಸಿದ್ದ ಕಾವೇರಿ ಐದನೇ ಹಂತಕ್ಕೆ ಇಂದು ಅಧಿಕೃತವಾಗಿ ನಮ್ಮ ಸರಕಾರವೇ ಚಾಲನೆ ನೀಡಲಿದೆ. ಇದರಿಂದ ಬೆಂಗಳೂರಿನ ನೀರಿನ ಬವಣೆ ನೀಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ಐದನೇ ಹಂತದ ಯೋಜನೆಗೆ ಬುಧವಾರ ಚಾಲನೆ ಸಿಗಲಿದ್ದು, ಇದಕ್ಕೆ ಪೂರಕವಾಗಿ ‘ವಿಶ್ವವಾಣಿ’ಯೊಂದಿಗೆ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ಈ ವೇಳೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲಿಗೆ
ಯಾವ ರೀತಿ ಸರಕಾರದ ಸಿದ್ಧತೆ ನಡೆಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಐದನೇ ಹಂತದ ಕಾವೇರಿಗೆ ತಯಾರಿ ಹೇಗಿದೆ?
ಕಳೆದ ಬಾರಿ ಬೆಂಗಳೂರಿನ ಜನರು ಬರದ ಬೇಗೆಯನ್ನು ಅನುಭವಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೆಂಗಳೂ ರಿನ ಹಲವು ಭಾಗಗಳಿಗೆ ಕುಡಿಯುವ ನೀರು ಸಿಗದೇ ಹಲವು ಸಮಸ್ಯೆ ಎದುರಾಗಿದ್ದವು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಕಾವೇರಿ ಐದನೇ ಹಂತದ ಯೋಜನೆಯಿದೆ. ಬುಧವಾರ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಚಾಲನೆ ಸಿಕ್ಕ ಕ್ಷಣದಿಂದಲೇ ನೀರು ಬೆಂಗಳೂರಿನ ಏಳು ವಿಧಾನಸಭಾ ಕ್ಷೇತ್ರಗಳಿಗೆ ಪೂರೈಕೆ ಯಾಗಲಿದೆ.
ಈ ಬಾರಿ ಹೆಚ್ಚು ಮಳೆಯಿಂದ ಸಮಸ್ಯೆಯಾಗುತ್ತಿದೆಯಲ್ಲವೇ?
ಮಳೆ ವಿಷಯದಲ್ಲಿ ಯಾರೇನೇ ಹೇಳಿದರೂ, ನಾನಂತೂ ಮಳೆ ಬೀಳಲಿ ಎಂದೇ ಆಶಿಸುತ್ತೇನೆ. ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದರೂ, ಕಾರ್ಯ ಕ್ರಮಕ್ಕೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ಕಳೆದ ವರ್ಷ ಮಳೆ
ಯಿಲ್ಲದೇ ಆಗಿರುವ ಸಮಸ್ಯೆಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಆದರೆ ಒಂದು ದಿನ ಮಳೆಯಾದರೂ, ರೈತನ ಬೆಳೆಗೆ ಒಂದು ವಾರ ಸಹಾಯವಾಗಲಿದೆ. ಇದರೊಂದಿಗೆ ವಿದ್ಯುತ್ ಉಪಯೋಗವಾಗಲಿದೆ. ಇದರೊಂದಿಗೆ ಅಂತರ್ಜಲ ವೃದ್ಧಿಯಾಗುತ್ತದೆ. ಆದ್ದರಿಂದ ಮಳೆಯಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ.
ಜನರಿಗೆ ನೀರು ಯಾವಾಗ ತಲುಪಬಹುದು?
ಈವರೆಗೆ ಬೆಂಗಳೂರಿಗೆ ನಾಲ್ಕು ಹಂತದಲ್ಲಿ ಕಾವೇರಿ ಪೂರೈಕೆಯಾಗಿತ್ತು. ಈ ನಾಲ್ಕು ಹಂತಗಳನ್ನು ಸೇರಿ 1500 ಎಂಎಲ್ಡಿ ಬರುತ್ತಿತ್ತು. ಆದರೀಗ ಐದನೇ ಹಂತ ಒಂದರಲ್ಲಿಯೇ 775 ಎಂಎಲ್ಡಿ ನೀರು ಸಿಗುತ್ತಿದೆ. ಈ ನೀರು ಏಳು ವಿಧಾನಸಭಾ ಕ್ಷೇತ್ರಗಳ 55 ಲಕ್ಷ ಜನರಿಗೆ ಲಭಿಸಲಿದೆ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಏಳು ಕ್ಷೇತ್ರಗಳನ್ನು ಸೇರಿದ್ದ 100 ಹಳ್ಳಿಗಳಲ್ಲಿಯೇ ಇಂದು ಬೆಂಗಳೂರು ಬೆಳೆದಿದೆ. ಉದಾಹರಣೆಗೆ, ಮಹದೇವಪುರ, ಹೆಬ್ಬಾಳ, ರಾಜರಾಜೇಶ್ವರಿ ನಗರ, ಬನಶಂಕರಿ, ಕೆ.ಆರ್ .ಪುರ ಸೇರಿ ಏಳರಿಂದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೆ ನೀರು ಸಿಗಲಿದೆ. ಬುಧವಾರ ಉದ್ಘಾಟನೆಯಾಗಲಿರುವ ನೀರು ಅಂದೇ ಮನೆಗಳಿಗೆ ತಲುಪಲಿದೆ.
ಐದನೇ ಹಂತದಿಂದ ಯಾವ ಮಟ್ಟಕ್ಕೆ ಲಾಭವಾಗಲಿದೆ?
ಸದ್ಯ ಬೆಂಗಳೂರಿಗೆ 2200 ಎಂಎಲ್ಡಿ ನೀರು ಅಗತ್ಯವಿದೆ. ಈಗ ಲಭ್ಯವಿರುವ ನೀರಿನಲ್ಲಿ ಮುಂದಿನ 10 ವರ್ಷ ನಿಭಾಯಿಸಬಹುದು. ಭವಿಷ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೆರೆಗಳನ್ನು ತುಂಬಿಸುವುದಕ್ಕೆ
ಅಗತ್ಯ ಕ್ರಮವಹಿಸಲು ತೀರ್ಮಾನಿಸಲಾಗಿದೆ. ಏಕೆಂದರೆ ಈಗಾಗಲೇ ಕಳೆದ ವರ್ಷದ ಬೇಸಿಗೆ ನಮಗೆ ಪಾಠ ಕಲಿಸಿದೆ. ಕಳೆದ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದರಿಂದ 7100 ಬೋರ್ವೆಲ್ಗಳು ಖಾಲಿಯಾಗಿದ್ದವು.
ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಇನ್ನು ಬೆಂಗಳೂರಿಗೆ ಪ್ರತಿ ತಿಂಗಳು 1.58 ಟಿಎಂಸಿ ಅಗತ್ಯ ವಿದ್ದು, ವರ್ಷಕ್ಕೆ 30 ಟಿಎಂಸಿ ನೀರಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತರಾಗಬೇಕಿದೆ.
ಐದನೇ ಹಂತ ತಡವಾಗಿದ್ದು ಏಕೆ?
ಈ ಯೋಜನೆಯನ್ನು ಹಿಂದಿನ ನಮ್ಮ ಸರಕಾರವೇ ಆರಂಭಿಸಿದ್ದು, ಆಗ 4200 ಕೋಟಿ ರು. ಅಂದಾಜಿಸಲಾಗಿತ್ತು. ಆದರೀಗ ಅದು 5000 ಕೋಟಿಗೆ ಏರಿಕೆಯಾಗಿದೆ. ಬಳಿಕ ಸರಕಾರಗಳು, ಸಚಿವರು ಹೆಚ್ಚು ಕಾಳಜಿವಹಿಸದೇ ಇದ್ದಿದ್ದ ರಿಂದ ಹಾಗೂ ಸಮಸ್ಯೆಯಿದ್ದ ಸ್ಥಳಗಳಿಗೆ ಭೇಟಿ ನೀಡದೇ ಇದ್ದರಿಂದ ತಡವಾಗಿತ್ತು. ಆದರೆ ನಾನು ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ಎತ್ತಿನಹೊಳೆ ಹಾಗೂ ಕಾವೇರಿ ಐದನೇ ಹಂತಕ್ಕೆ ವೇಗ ನೀಡಿ ಪೂರೈಸುವ ಕೆಲಸ ಮಾಡಿದ್ದೇನೆ.
ಐದನೇ ಹಂತದ ಸಂಪರ್ಕಕ್ಕೆ ಅನೇಕರು ಅರ್ಜಿಯನ್ನೇ ಸಲ್ಲಿಸಿಲ್ಲ ಎನ್ನುವ ಮಾತಿದೆ?
ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ. ಆದರೆ ಬುಧವಾರದ ಕಾರ್ಯಕ್ರಮದ ಬಳಿಕ ಎಲ್ಲ ಕ್ಷೇತ್ರಗಳಲ್ಲಿ ಎರಡು ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ 10.50 ಲಕ್ಷ ಸಂಪರ್ಕವಿದ್ದು, ಈ ಹಂತದಿಂದ ಹೆಚ್ಚುವರಿ ನಾಲ್ಕರಿಂದ ಐದು ಲಕ್ಷ ಹೊಸ ಸಂಪರ್ಕ ಸೇರುವ ಸಾಧ್ಯತೆಯಿದೆ. ಇನ್ನು ಸೋರಿಕೆ ಹಾಗೂ ಕಳ್ಳತನಕ್ಕೆ ಸಂಬಂಧಿಸಿದಂತೆಯೂ ಕ್ರಮವಹಿಸಲಾಗುತ್ತಿದೆ. ಈಗಾಗಲೇ ಅನೇಕ ಭಾಗದಲ್ಲಿ ಸೋರಿಕೆಯನ್ನು ತಡೆಯಲಾಗಿದೆ. ಇನ್ನು ಕೆಲ ಭಾಗದಲ್ಲಿ ಪೈಪ್ಗಳನ್ನು ಬದಲಾಯಿಸಬೇಕಿದ್ದು, ಅದಕ್ಕೆ ಸೂಕ್ತ ಕ್ರಮವಹಿಸ ಲಾಗುವುದು. ಆದರೆ ಕಾವೇರಿ ಐದನೇ ಹಂತದಲ್ಲಿ ಇದಕ್ಕೆ ಸೋರಿಕೆಗೆ ಅವಕಾಶವಿಲ್ಲ.
ಬ್ರ್ಯಾಂಡ್ ಬೆಂಗಳೂರಿಗೆ ಸಹಾಯವಾಗುವುದೇ?
ಯಾವುದೇ ನಗರದಲ್ಲಿ ಕುಡಿಯುವ ನೀರು, ಮೂಲಸೌಕರ್ಯವಿದ್ದರೆ ಆ ನಗರದತ್ತ ಜನ ಆಕರ್ಷಿತರಾಗುತ್ತಾರೆ. ಆದ್ದರಿಂದ ಬೆಂಗಳೂರಿ ನಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ನನ್ನ ಆಶಯವಾಗಿದೆ.
ಇದು ಸಾಧ್ಯವಾದರೆ ನಿಶ್ಚಿತವಾಗಿ ಬ್ರ್ಯಾಂಡ್ ಬೆಂಗಳೂರಿಗೆ ಸಹಕಾರಿಯಾಗಲಿದೆ.
*
ಕಾವೇರಿ ಐದನೇ ಹಂತದ ಮೂಲಕ ರಾಜಧಾನಿಯ ಸುಮಾರು 55 ಲಕ್ಷ ಜನರಿಗೆ ನೀರಿನ ಸೌಕರ್ಯ ಲಭಿಸಲಿದೆ. ಐದನೇ ಹಂತದಲ್ಲಿ ಯಾವುದೇ ಕಾರಣಕ್ಕೂ ನೀರು ಪೋಲಾಗದಂತೆ ಹಾಗೂ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿದೆ. ಇದರೊಂದಿಗೆ ಭವಿಷ್ಯದ ದೃಷ್ಟಿಯಿಂದಲೂ ಹೆಚ್ಚುವರಿ ನೀರಿನ ಲಭ್ಯತೆಯನ್ನು ಒದಗಿಸಲಾಗಿದೆ.
- ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಇದನ್ನೂ ಓದಿ: Ranjith H Ashwath Column: ದೂರುಗಳು ರಾಜಕೀಯ ಅಸ್ತ್ರವಾಗದಿರಲಿ