Monday, 16th September 2024

ನಿಮಗೆ ಡಯಾಬಿಟಿಸ್ ಇದೆಯೇ, ಆಗಿದ್ದರೆ ಈ ಬಗ್ಗೆ ನೀವು ತಿಳಿದಿರಲೇ ಬೇಕು

ಡಯಾಬಿಟೀಸ್, ಇದು ಪ್ರತಿ ಮೂರು ವ್ಯಕ್ತಿಯಲ್ಲಿ ಒಬ್ಬರಿಗೆ ಕಾಡುತ್ತಿರುವ ಅತಿ ಸಾಮಾನ್ಯ ಹಾಗೂ ಹೆಚ್ಚು ಆರೋಗ್ಯ ಸಮಸ್ಯೆ ಉಂಟು ಮಾಡುವ ಕಾಯಿಲೆಯಾಗಿದೆ. ಹಿಂದೆಲ್ಲಾ 40 ವರ್ಷ ದಾಟಿದವರಲ್ಲಿ ಕೋವಿಡ್ ಸಾಮಾನ್ಯವಾಗಿತ್ತು. ಆದರೆ ಇಂದು ವಯಸ್ಸಿನ ಮಿತಿ ಇಲ್ಲದೇ ಚಿಕ್ಕ ಮಕ್ಕಳಿಗೂ ಸಹ ಮಧುಮೇಹ ಕಾಡುತ್ತಿದೆ.

ಮಧುಮೇಹ ವಂಶವಾಯಿಯಾಗಿ ಬರುವುದು ಮಾತ್ರವಲ್ಲದೇ ಬದಲಾದ ಜೀವನ ಶೈಲಿ ಹಾಗೂ ನಾವು ಸೇವಿಸುವ ಆಹಾರ ಕ್ರಮವೂ ಮಧುಮೇಹದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಪ್ರತಿ ವರ್ಷ ಡಿಸೆಂಬರ್ 14ರಂದು ವಿಶ್ವ ಮಧುಮೇಹ ದಿನವನ್ನಾಗಿ ಆಚರಣೆ ಮಾಡುತ್ತಾ ಬರಲಾಗಿದೆ. ಈ ದಿನದ ಅಂಗವಾಗಿ ಮಧುಮೇಹವನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಡಯಾಬಿಟೀಸ್ ಮತ್ತು ಎಂಡೋಕ್ರೈನಾಲಜಿ ಕನ್ಸಲ್ಟೆಂಟ್ ಡಾ. ಕೆ.ಎಸ್. ಸೋಮಶೇಖರ್ ರೆಡ್ಡಿ ಅವರು ಟಿಪ್ಸ್‌ ನೀಡಿದ್ದಾರೆ.

ವ್ಯಾಯಾಮ ಮರೆಯಬೇಡಿ: ಇತ್ತೀಚಿನ ಜೀವನ ಶೈಲಿಯಲ್ಲಿ ಬಹುತೇಕರು ವ್ಯಾಯಮ ಮಾಡುವುದನ್ನೇ ಮರೆಯುತ್ತಾರೆ. ಇದು ದೇಹದ ಮೇಲೆ ಅತಿ ಹೆಚ್ಚು ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ. ದೇಹದಲ್ಲಿ ಸಂಗ್ರಹವಾಗುವ ಕೊಬ್ಬನ್ನು ವ್ಯಾಯಾಮದ ಮೂಲಕ ಕರಗಿಸುತ್ತಾ ಬಂದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ವ್ಯಾಯಾಮ ಮಾಡದೇ ದೇಹವನ್ನು ಜಡ್ಡು ಹಿಡಿಸಿದರೆ ದೇಹವು ರೋಗಗಳ ಉಗ್ರಾಣವಾಗಬಹುದು. ಅದರಲ್ಲೂ ಮಧುಮೇಹಕ್ಕೆ ಮೊದ ಆದ್ಯತೆ ಸಿಗಬಹುದು. ಹೀಗಾಗಿ ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಮ ಮಾಡುವುದು ಅತಿ ಅವಶ್ಯಕ. ಯೋಗ, ಧ್ಯಾನ, ಈಜು, ಜಿಮ್ ಯಾವುದಾದರೊಂದು ಧೈಹಿಕ ಚಟುವಟಿಕೆ ಕಡ್ಡಾಯವಾಗಿ ಮಾಡಬೇಕು. ಈಗಾಗಲೇ ಡಯಾಬಿಟೀಸ್ ಹೊಂದಿರುವವರು ತಮ್ಮ ಸಕ್ಕರೆ ಮಟ್ಟದ ಅನುಗುಣವಾಗಿ ಯಾವ ರೀತಿಯ ಮ್ಯಾಯಮ ದೇಹಕ್ಕೆ ಒಳ್ಳೆಯದು ಎಂದು ವೈದ್ಯರ ಸಲಹೆ ಪಡೆದು ಮಾಡುವುದು ಒಳ್ಳೆಯದು.

ಮೂಡ್‌ಆಫ್ ಆಗದಂತೆ ನೋಡಿಕೊಳ್ಳಿ: ಮಧುಮೇಹ ಬಂದ ಬಳಿಕ ದೇಹವು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ, ಜೊತೆಗೆ ಮನಸ್ಸು ಕೂಡ ಈ ರೋಗದಿಂದ ನೋವು ಅನುಭವಿಸಬಹುದು, ಇದರಿಂದ ಮೂಡ್‌ಆಫ್ ಆಗುವುದು, ಕೆಲಸದ ಮೇಲೆ ಆಸಕ್ತಿ ಕಳೆದುಕೊಳ್ಳುವುದು, ಮನೆಯವರೊಂದಿಗೆ ಹೊಂದಾಣಿಕೆಯಾಗದೇ ಮೌನದಲ್ಲಿ ಇರುವುದು, ಒತ್ತಡ, ಖಿನ್ನತೆ ಇತರೆ ಮಾನಸಿಕ ಸಮಸ್ಯೆ ಎದುರಿಸಬಹುದು. ಹೀಗಾಗಿ ಮಧುಮೇಹ ಬಂದ ಸಂದರ್ಭದಲ್ಲಿ ನಿಮಿಗಿಷ್ಟ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ತಮ್ಮನ್ನು ಮಾನಸಿಕವಾಗಿಯೂ ಕ್ರಿಯಾಶೀಲರಾಗಿ ಇಟ್ಟುಕೊಳ್ಳುವುದು ಮುಖ್ಯ. ಕೆಲವೊಮ್ಮೆ ಮಾನಸಿಕ ನೆಮ್ಮದೆ ದೊರೆಯದೇ ಹೋದರೆ, ಅದು ನಮ್ಮ ಕೈ ಮೀರಿ ಹೋಗಿದ್ದರೆ ಕೂಡಲೇ ವೈದ್ಯರು ಅಥವಾ ಆಪ್ತ ಸಮಾಲೋಚಕರನ್ನು ಸಂಪರ್ಕಿಸುವುದು ಉತ್ತಮ.

ಹೊಂದಾಣಿಕೆಯಾಗುವುದನ್ನು ಕಲಿಯಿರಿ: ಡಯಾಬಿಟೀಸ್‌ನಿಂದ ಸಾಕಷ್ಟು ಹೊಂದಾಣಿಕೆಗೆ ನಮ್ಮನ್ನು ಒಳಪಡಿಸಿಕೊಳ್ಳ ಬೇಕು, ಉದಾಹರಣೆ ಆಹಾರದಲ್ಲಿ ಅತಿದೊಡ್ಡ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು. ಮಧುಮೇಹ ಬರುವ ಮುನ್ನ ಎಲ್ಲಾ ಬಗೆಯ ಆಹಾರ ಸೇವನೆ ಮಾಡುತ್ತಿರುವವರು ಕೂಡಲೇ ಸಿಹಿ, ಜಂಕ್‌ಫುಡ್, ರೈಸ್ ಸೇರಿದಂತೆ ಅನೇಕ ರೀತಿಯ ಆಹಾರವನ್ನು ತ್ಯಜಿಸಬೇಕಾಗಬಹುದು. ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಅನಿವಾರ್ಯವಾಗಿ ಈ ಬದಲಾವಣೆಗೆ ಹೊಂದಿಕೊಳ್ಳಬೇಕು. ಹೀಗಾಗಿ ಮಧುಮೇಹ ಬಂದ ಬಳಿಕ ಒಂದಷ್ಟು ಬದಲಾವಣೆಗೆ ನಿಮ್ಮ ಮನಸ್ಸನ್ನು ಪ್ರಿಪೇರ್ ಮಾಡುವುದು ಒಳ್ಳೆಯದು.

ಕುಟುಂಬದೊಂದಿಗೆ ಬೆರೆಯಿರಿ: ಮಧುಮೇಹಿಗಳು ಕುಟುಂಬದೊಂದಿಗೆ ತಮ್ಮ ಆರೋಗ್ಯದ ವಿಚಾರದಲ್ಲಿ ತೊಡಗಿಸಿ ಕೊಳ್ಳುವುದು ಉತ್ತಮ. ಏಕೆಂದರೆ, ಮಧುಮೇಹಿಗಳು ಕಾಲಕ್ರಮೇಣ ಅವರ ಆರೋಗ್ಯದ ಮೇಲೆ ಅವರಿಗೆ ಹಿಡಿತ ತಪ್ಪಬಹುದು, ಆಹಾರ ಸೇವನೆ, ಔಷಧ ಇತ್ಯಾದಿಗಳನ್ನು ತೆಗೆದುಕೊಳ್ಳಲು ಆಲಸ್ಯ ಮೂಡಬಹುದು ಅಥವಾ ಮರೆಯಬಹುದು, ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಕುಟುಂಬಕ್ಕೆ ತಿಳಿದಿದ್ದರೆ ಎಲ್ಲಾ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಾರೆ.

ಡಯಾಬಿಟಿಸ್ ಬಗ್ಗೆ ಶಿಕ್ಷಿತರಾಗಿ ಮಧುಮೇಹ ಬಂದಬಳಿಕ ಒಂದಷ್ಟು ಮಾಹಿತಿಗಳು ನಿಮಗೆ ತಿಳಿದಿರಲೇ ಬೇಕು. ಕೆಲವರು ಈ ಬಗ್ಗೆ ಯಾವುದೇ ಮಾಹಿತಿಯನ್ನೂ ಹೊಂದಿರುವುದರಿಲ್ಲ. ಮಧುಮೇಹದಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಗಳೇನು? ಟೈಪ್-1 ಹಾಗೂ ಟೈಪ್-2 ಡಯಾಬಿಟಿಸ್ ಎಂದರೇನು? ಯಾವ ರೀತಿಯ ಆಹಾರ ಕ್ರಮವನ್ನು ಮೈಗೂಡಿಸಿಕೊಳ್ಳಬೇಕು ಎಂಬಿತ್ಯಾದಿ ಮಾಹಿತಿಗಳು ನಿಮಗೆ ತಿಳಿದಿರಲೇ ಬೇಕು. ಹೀಗಾಗಿ ಈ ಬಗ್ಗೆ ಹೆಚ್ಚು ಶಿಕ್ಷಿತರಾಗುವ ಮೂಲಕ ನಿಮ್ಮಲ್ಲಾಗುವ ಬದಲಾವಣೆಯನ್ನು ನೀವೇ ಕಂಡು ಹಿಡಿದುಕೊಳ್ಳಬಹುದು

Leave a Reply

Your email address will not be published. Required fields are marked *