Thursday, 12th December 2024

ನಗರದಲ್ಲಿ ಹೆಚ್ಚುತ್ತಿರುವ ಆಫ್ರಿಕನ್ನರ ಡ್ರಗ್‌ ಮಾಫಿಯಾ

ಎರಡೂವರೆ ವರ್ಷದಲ್ಲಿ 3 ಪಟ್ಟು ಹೆಚ್ಚಿದ ದಂಧೆ

ಪೊಲೀಸರಿಂದ ಬಂಧನಕ್ಕೊಳಗಾದ 200ಕ್ಕೂ ಹೆಚ್ಚು ಮಂದಿ

ಬೆಂಗಳೂರು: ಶಿಕ್ಷಣ, ಉದ್ಯೋಗ, ವ್ಯಾಪಾರ ಇನ್ನಿತರ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವ ವಿದೇಶಿಗರು ಡ್ರಗ್ಸ್ ಪ್ರಕರಣ
ದಲ್ಲಿ ಭಾಗಿಯಾಗುವ ಪ್ರಮಾಣ ಕಳೆದ ಎರಡೂವರೆ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಡ್ರಗ್ಸ್ ದಂಧೆಯಲ್ಲಿ ಆಫ್ರಿಕಾ ಪ್ರಜೆಗಳೇ ಹೆಚ್ಚಿರುವುದು ಕಂಡುಬಂದಿದೆ.

ಎರಡೂವರೆ ವರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ವಿದೇಶಿಗರನ್ನು ಬೆಂಗಳೂರು ಪೊಲೀಸರು ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಸಿ, ಜೈಲಿಗಟ್ಟಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿರುವ ವಿದೇಶಿಗರ ಪೈಕಿ ಶೇ.95ಕ್ಕೂ ಹೆಚ್ಚು ಮಂದಿ ಆಫ್ರಿಕಾ ಪ್ರಜೆಗಳೇ ಇದ್ದಾರೆ. ಅದರಲ್ಲೂ, ನೈಜೀರಿಯಾ ದೇಶದ ಪ್ರಜೆಗಳು 160 ಕ್ಕೂ ಹೆಚ್ಚು ಮಂದಿ ಜೈಲು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

2019ರಲ್ಲಿ ಒಟ್ಟು 33 ಡ್ರಗ್ಸ್ ಪ್ರಕರಣ ದಾಖಲಿಸಿ 38 ಮಂದಿಯನ್ನು ಜೈಲಿಗೆ ಅಟ್ಟ ಲಾಗಿತ್ತು. 2020ರಲ್ಲಿ 66 ಪ್ರಕರಣಗಳಲ್ಲಿ 84 ಮಂದಿ ಸಿಕ್ಕಿಬಿದ್ದಿದ್ದರು. 2021ರಲ್ಲಿ 136ವಿದೇಶಿಗರು ಜೈಲು ಸೇರಿದ್ದಾರೆ. ಕಳೆದ ಐದು ತಿಂಗಳಲ್ಲಿ 68 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ನೈಜೀರಿಯಾ ಪ್ರಜೆಗಳೇ ಅತಿಹೆಚ್ಚು ಇದ್ದು, ಎರಡೂ ವರೆ ವರ್ಷದಲ್ಲಿ 127 ಮಂದಿ ಡ್ರಗ್ಸ್ ಪ್ರಕರಣದಲ್ಲಿ ಸೆರೆಯಾಗಿದ್ದಾರೆ. ನಂತ ರದ ಸ್ಥಾನದಲ್ಲಿ ಕಾಂಗೋ ದೇಶದ ಪ್ರಜೆಗಳಿದ್ದು, ಮೂರು ವರ್ಷದಲ್ಲಿ 22 ಮಂದಿ ಬಂಧನಕ್ಕೆ ಒಳಗಾಗಿದ್ದಾರೆ.

ಉಳಿದಂತೆ ಪ್ರಸಕ್ತ ವರ್ಷದಲ್ಲಿ ಉಂಗಾಡ-2, ಘಾನಾ-3, ಸುಡಾನ್-4, ತಾಂಜೇನಿಯಾ-2, ದಕ್ಷಿಣ ಆಫ್ರಿಕಾ-2, ಗುನಿನೇಯಾ-3, ಕೀನ್ಯಾ-1, ಐವರಿ ಕೋಸ್ಟಾ-6, ಯೆಮೆನ್-1, ನೇಪಾಳ-2, ಕೋಟ್ ಡಿ ಐವರಿಯ ಒಬ್ಬ ಆರೋಪಿ ಸೇರಿ 100 ಮಂದಿಯನ್ನು ಬಂಧಿಸ ಲಾಗಿದ್ದು, ಆರೋಪಿಗಳ ವಿರುದ್ಧ 70 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದೇಶಿ ಪ್ರಜೆಗಳು ತಾವು ಬಂದ ಉದ್ದೇಶ ಬದಿಗಿಟ್ಟು ಅಕ್ರಮ ಚಟುವಟಿಕೆಯಲ್ಲಿ ತೊಡಗುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಯಾಗಿ ಪರಿಣಮಿಸಿದ್ದಾರೆ. ಹೀಗೆ ಅಕ್ರಮವಾಗಿ ನೆಲೆಸಿರುವ 24 ಪ್ರಜೆಗಳನ್ನು ಬೆಂಗಳೂರು ಹೊರ
ವಲಯದ ಸೊಂಡೆಕೊಪ್ಪದಲ್ಲಿ ನಿರ್ಮಿಸಿರುವ ವಿದೇಶೀಯರ ಪ್ರತಿಬಂಧನ ಗೃಹದಲ್ಲಿ ಇರಿಸಲಾಗಿದ್ದು, ಗಡೀಪಾರು ಮಾಡಲು ಎ-ಆರ್‌ಆರ್‌ಓಗೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ನೌಕರಿ, ಉದ್ಯೋಗದ ನೆಪ: ವಿದ್ಯಾರ್ಥಿ, ಉದ್ಯೋಗ, ವ್ಯಾಪಾರ ಸೇರಿದಂತೆ ಹತ್ತಾರು ಕಾರಣಗಳನ್ನು ನೀಡಿ ಆಫ್ರಿಕಾ ಜನರು ವೀಸಾ ಪಡೆದು ಭಾರತಕ್ಕೆ ಬರುತ್ತಿದ್ದಾರೆ. ಹೀಗೆ ಬಂದವರು ಬಂದ ಉದ್ದೇಶ ಸಾಧಿಸುವುದನ್ನು ಬಿಟ್ಟು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಆಫ್ರಿಕಾ ಪ್ರಜೆಗಳು, ತಮ್ಮದೇ ಆದ ಮಾದಕ ವಸ್ತು ಜಾಲ ರಚಿಸಿಕೊಂಡಿದ್ದಾರೆ. ಡಾರ್ಕ್ ನೈಟ್ ಹಾಗೂ ಇನ್ನಿತರ ಕಳ್ಳ ಮಾರ್ಗಗಳಲ್ಲಿ ಡ್ರಗ್ಸ್
ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸುಲಭವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳ ಸೋಗಿನಲ್ಲಿ ಕಾಲೇಜು ಆವರಣಕ್ಕೆ ಡ್ರಗ್ಸ್ ತಲುಪಿಸುತ್ತಿದ್ದಾರೆ. ವಿದೇಶಿ ಪ್ರಜೆಗಳು ಹೆಚ್ಚಿನ ಬಾಡಿಗೆ ಕೊಡುತ್ತಾರೆ ಎಂಬ ಕಾರಣಕ್ಕೆ ಮನೆ ಮಾಲೀಕರು ಇವರ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನೇ ನೀಡುವುದಿಲ್ಲ. ಹೀಗಾಗಿ ಅವರ ಬಗ್ಗೆ ನಿಗಾ ವಹಿಸುವುದು ಕಷ್ಟ ವಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ವೀಸಾ ಮುಗಿದರೂ 829 ಮಂದಿ ವಾಸ್ತವ್ಯ
ವಿದೇಶಿ ಪ್ರಜೆಗಳ ಪ್ರಾದೇಶಿಕ ನೋಂದಣಿ ಕೇಂದ್ರವು (ಎ-ಆರ್‌ಆರ್‌ಒ) ಈ ಅಕ್ರಮ ವಲಸಿಗರ ಅಧಿಕೃತ ಮಾಹಿತಿ ಹಾಗೂ ಅವರು ರಾಜ್ಯದಲ್ಲಿ ಎಲ್ಲೆಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಂಡಿದೆ. ಆ ಮಾಹಿತಿ ಪ್ರಕಾರ ರಾಜ್ಯದಲ್ಲಿ 829 ಮಂದಿ ಮಂದಿ ವಿದೇಶಿಗರು ತಮ್ಮ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ರಾಜಧಾನಿ ಬೆಂಗಳೂರು ಒಂದರಲ್ಲೇ 690 ಮಂದಿ ಇದ್ದಾರೆ. ಇನ್ನುಳಿದ ಜಿಲ್ಲೆಗಳಲ್ಲಿ 39 ಮಂದಿ ಇದ್ದಾರೆ ಎಂದು ತಿಳಿಸಿದೆ.