Wednesday, 30th October 2024

ಪಿರಮಿಡ್ಡುಗಳೆಂದರೆ ಸತ್ಯದ ಎದುರೇ ಊಹೇ…

ಈಜಿಪ್ಟ್ ಡೈರಿ- ಪ್ರವಾಸದ ಒಳ-ಹೊರಗಿನ ಕಥನ- ೬

ವಿಶ್ವೇಶ್ವರ ಭಟ್

ಹೇಗೆ ಕಟ್ಟಿದರು? ಮೇಲಿನಿಂದಲೋ, ಕೆಳಗಿನಿಂದಲೋ, ಅಷ್ಟು ದೊಡ್ಡ ಕಲ್ಲುಗಳನ್ನು ಹೇಗೆ ಮೇಲಕ್ಕೆ ಒಯ್ದರು? ಎಂಬ ಪ್ರಶ್ನೆ ಗಳಿಗೆ ಊಹೆಗಳೇ ಉತ್ತರ ಈಜಿಪ್ಟಿನ ಪಿರಮಿಡ್ಡುಗಳ ಬಗ್ಗೆ ಒಂದು ತಮಾಷೆಯ ಮಾತಿದೆ. ಅದೇನೆಂದರೆ, ಪ್ರಾಚೀನ ಈಜಿಪ್ಟ್‌ನ
ಜನ ಪಿರಮಿಡ್ಡನ್ನು ಮೇಲಿನಿಂದ (ಗಾಳಿಯಲ್ಲಿ) ಕಟ್ಟುತ್ತಾ ಬಂದಿರಬೇಕು, ಒಂದು ವೇಳೆ ಕೆಳಗಿನಿಂದ ಕಟ್ಟುತ್ತಾ ಬಂದಿದ್ದರೆ, ಕೊನೆಯ ಕಲ್ಲನ್ನು ಹೇಗೆ ಇಟ್ಟಿರುತ್ತಿದ್ದರು? ಇದು ನಿಜಕ್ಕೂ ತಮಾಷೆಯೇ ಆದರೂ ಅದರಲ್ಲೊಂದು ತಥ್ಯವಿದೆ.

ನಿಜ, ಕೊನೆಯ ಕಲ್ಲನ್ನು ಹೇಗೆ ಇಟ್ಟಿರಬಹುದು? ಪಿರಮಿಡ್ಡು ನಿರ್ಮಾಣಕ್ಕೆ ಬಳಸಿದ ಒಂದೊಂದು ಕಲ್ಲು ಆನೆಗಿಂತ ಹೆಚ್ಚು ತೂಕದ್ದು. ಹೀಗಿರುವಾಗ ಆ ಕಲ್ಲನ್ನು ಕ್ರೇನುಗಳು, ರಾಂಪುಗಳು ಇಲ್ಲದಿರುವ ಆ ಕಾಲದಲ್ಲಿ ಹೇಗೆ ತೆಗೆದುಕೊಂಡು ಹೋಗಿ ಇಟ್ಟಿರ ಬಹುದು? ಒಂದು ಕಲ್ಲಾಗಿದ್ದರೆ ಪರವಾಗಿಲ್ಲ, ಒಂದರ ಮೇಲೆ ಮತ್ತೊಂದರಂತೆ ಲಕ್ಷಾಂತರ ಕಲ್ಲು ಗಳನ್ನು ಇಡುತ್ತಾ ಹೇಗೆ ಇಟ್ಟಿರ ಬಹುದು ಎಂಬುದು ಇಂದಿಗೂ ವಿಸ್ಮಯವೇ.

ಅಷ್ಟಕ್ಕೂ ಕಲ್ಲುಗಳನ್ನು ಸುಮ್ಮನೆ ಪೇರಿಸಿಟ್ಟಿದ್ದಲ್ಲ, ಒಂದು ಪಾರ್ಶ್ವ ಅಥವಾ ಕೋನ ದಲ್ಲಿ ನಿಂತು ನೋಡಿದರೆ, ಒಂದು ಕಲ್ಲು ಸಹ ಮೇಲ್ಪದರದಿಂದ ಒಂದಂಗುಲ ಕೂಡ ಹೊರ ಚಾಚಿಲ್ಲ. ಹೀಗಿರುವಾಗ ಅಷ್ಟು ಭಾರದ ಕಲ್ಲನ್ನು ಹೇಗೆ ಮೇಲಮೇಲಕ್ಕೆ ತೆಗೆದು ಕೊಂಡು ಹೋಗಿರಬಹುದು.

ಒಂದೇ ವೇಳೆ ಅಟ್ಟಣಿಗೆಗಳನ್ನು (ಸ್ಕೆಫೋಲ್ಡಿಂಗ್) ಕಟ್ಟಿಕೊಂಡಿದ್ದರೂ, ಅಂಥ ಕಲ್ಲಿನ
ಭಾರ ವನ್ನು ತಡೆದುಕೊಳ್ಳುವ ಅಟ್ಟಣಿಗೆಗಳನ್ನು ಕಟ್ಟುವುದು ಊಹಿಸಲೂ ಸಾಧ್ಯವಿಲ್ಲ. ಕಲ್ಲನ್ನು ನೂರಾರು ಕಿ.ಮೀ. ದೂರ ದಿಂದ ತಂದಿದ್ದರೂ, ಹಾಗೆ ತಂದ ಕಲ್ಲನ್ನು ಒಂದರ ಮೇಲೆ ಒಂದರಂತೆ ಕೊನೆ ತನಕ, ಒಂದು ಶಿಸ್ತು ಮತ್ತು ಲೆಕ್ಕಾಚಾರದ ಪ್ರಕಾರ ಇಟ್ಟಿದ್ದು ಅಚ್ಚರಿಯೇ.

ಒಂದರ ಮೇಲೆ ಒಂದನ್ನು ಇಟ್ಟಿದ್ದರೂ, ಅವುಗಳ ಮಧ್ಯೆ ಬ್ಲೇಡಿನಷ್ಟು ತೆಳುವಾದ ಶೀಟನ್ನು ಹಾಯಿಸಲು ಸಹ ಜಾಗವಿಲ್ಲ. ಹಾಗಂತ ಎರಡು ಕಲ್ಲುಗಳ ಸಂದಿಯಲ್ಲಿ ಸಿಮೆಂಟಿನಂಥ ಪದಾರ್ಥವನ್ನು ಸೇರಿಸಿ ಒಂದಕ್ಕೊಂದು ಜೋಡಿಸಿಲ್ಲ. ಒಂದು ಕಲ್ಲನ್ನು ಸುತ್ತುವರಿದಿರುವ ಎಲ್ಲಾ ಕಲ್ಲುಗಳ ಮೇಲ್ಪದರ, ಅಂಚು ಮತ್ತು ಕೊನೆ ಮಟ್ಟಸವಾಗಿ ಜೋಡಿಸಿಟ್ಟಂತೆ ಕಾಣುತ್ತದೆ.

ಇಡೀ ಪಿರಮಿಡ್ಡು ನಿರ್ಮಾಣದಲ್ಲಿ ಕಲ್ಲಿನ ಹೊರತಾಗಿ ಬೇರೆ ಯಾವ (ಕಬ್ಬಿಣ, ಮರ, ಸಿಮೆಂಟು, ಗಾರೆ) ಸಾಮಾನುಗಳನ್ನು ಬಳಸಿಲ್ಲದಿರುವುದು ಗಮನಾರ್ಹ. ಹಾಗಂತ ಪಿರಮಿಡ್ಡುಗಳನ್ನು ಕಟ್ಟಿದವರು ಪ್ರಾಚೀನ ಜಗತ್ತಿನ ಎಲ್ಲಾ ತಾಂತ್ರಿಕ ಜ್ಞಾನ ಮಿತಿಯುಳ್ಳ ಸಾಮಾನ್ಯ ಜನರು. ಹೀಗಿರುವಾಗ ಯಾವ ಪ್ರೇರಣೆ, ಯಾವ ಸ್ಫೂರ್ತಿ ಅವರನ್ನು ಈ ಮಹಾನ್ ಕೆಲಸಕ್ಕೆ ಚೈತನ್ಯ ನೀಡಿರಬಹುದು ಎಂಬುದು ಇಂದಿಗೂ ಸೋಜಿಗವೇ.

ಅಷ್ಟಕ್ಕೂ ಪಿರಮಿಡ್ಡಿನ ನಿರ್ಮಾಣದ ಲಾಭ ಎಲ್ಲರಿಗೂ ಸಿಗುವಂಥದ್ದಲ್ಲ. ರಾಜ ಮತ್ತು ಅವನ ಕುಟುಂಬ ಅಥವಾ ಇನ್ನು ಕೆಲವರಿಗಷ್ಟೇ ಸಿಗಬಹುದಷ್ಟೆ. ಹೀಗಿರುವಾಗ ಅಂಥ ಕಠಿಣತಮ ಕೆಲಸಕ್ಕೆ ಹೇಗೆ ಲಕ್ಷಾಂತರ ಜನರನ್ನು ಅಣಿಗೊಳಿಸಿದರು ಎಂಬು ದು ಆಶ್ಚರ್ಯವೇ ಸರಿ. ಜೀತದಾಳುಗಳನ್ನು ಬಳಸಿ ಪಿರಮಿಡ್ಡುಗಳನ್ನು ಕಟ್ಟಲಾಗಿದೆ ಎಂದು ಸಾವಿರಾರು ವರ್ಷಗಳ ಕಾಲ ನಂಬಲಾಗಿತ್ತು. ಆದರೆ ಅಂದಿನ ಈಜಿಪ್ಟ್ ನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅಧ್ಯಯನ ಮಾಡಿದವರು ಆ ತರ್ಕವನ್ನು ತಳ್ಳಿ ಹಾಕಿದರು.

ಹಾಗಾದರೆ ಕೂಲಿಕಾರ್ಮಿಕರನ್ನು (ಹಣಕ್ಕಾಗಿ ದುಡಿಯುವವರು) ಈ ಕೆಲಸಕ್ಕೆ ಹಚ್ಚಿರಬಹುದಾ? ಹಣಕ್ಕಾದರೂ ನಿರಂತರವಾಗಿ ಅಷ್ಟು ಕಠಿಣ ಕೆಲಸಕ್ಕೆ ಯಾರು ತಾನೇ ಮುಂದೆ ಬಂದಾರು? ಅಲ್ಲಿ ಭಾರ ಹೊರುವ ಕೆಲಸಕ್ಕಿಂತ ಬೇರೆ ಯಾವ ಕೆಲಸವೂ ಇರ ಲಿಲ್ಲ. ಒಂದು ದಿವ್ಯ ಪ್ರೇರಣೆ, ಬದ್ಧತೆಯಿಲ್ಲದೇ ಇಂಥ ಕಾರ್ಯ ನೆರವೇರಲು ಸಾಧ್ಯವೇ ಇಲ್ಲ. ಉತ್ತಮ ಆಹಾರ, ಸಂಬಳ ಕೊಟ್ಟು ಕೆಲಸಗಾರರನ್ನು ಈ ಕಾರ್ಯಕ್ಕೆ ಸಿದ್ಧಗೊಳಿಸಿರಬಹುದು. ಲಕ್ಷಾಂತರ ಕೆಲಸಗಾರರಿಗೆ ಊಟ, ವಸತಿ ಹೇಗೆ ವ್ಯವಸ್ಥೆ ಮಾಡಿರ ಬಹುದು, ಆ ಕೆಲಸಗಾರರ ಕುಟುಂಬ ನಿರ್ವಹಣೆಗೆ ಯಾವ ಅವಕಾಶ ಕಲ್ಪಿಸಿರಬಹುದು ಎಂಬುದು ಕಲ್ಪನೆಗೆ ಬಿಟ್ಟ ವಿಚಾರ.

ಅವರ ಉಡುಗೆ-ತೊಡುಗೆಗಳು ಹೇಗಿದ್ದವು ಎಂಬ ಬಗ್ಗೆ ಯಾವ ವಿವರಣೆಯಾಗಲಿ, ಕುರುಹುಗಳಾಗಲಿ ಸಿಗುವುದಿಲ್ಲ. ಅವುಗಳ ಬಗ್ಗೆ ಎಲ್ಲೂ ಮಾಹಿತಿ ಲಭ್ಯವಿಲ್ಲ. ಅದರಲ್ಲೂ ಪಿರಮಿಡ್ಡಿನ ಕಟ್ಟಕಡೆಯ ಅಥವಾ ತುತ್ತ ತುದಿಯ ಕಲ್ಲನ್ನು ಪಾಲಿಶ್ ಮಾಡಿರು
ತ್ತಿದ್ದರು, ಇಲ್ಲವೇ ಬಂಗಾರದ ಲೇಪನ ಮಾಡಿರುತ್ತಿದ್ದರು. ಅದರ ಮೇಲೆ ಸೂರ್ಯನ ಕಿರಣ ಬಿದ್ದರೆ, ನಕ್ಷತ್ರದಂತೆ, ವಜ್ರದಂತೆ ಹೊಳೆಯುತ್ತಿತ್ತು. ಅಂಥ ಒಂದು ಕಲ್ಲನ್ನಾದರೂ ಹೇಗೆ ಸಾಗಿಸಿದ್ದಿರಬಹುದು? ಈ ಬಗ್ಗೆ ಪ್ರಾಚೀನ ಈಜಿಪ್ಟಿನ ತಾಂತ್ರಿಕ ಪರಿಣತಿಯ ಹಿನ್ನೆಲೆಯಲ್ಲಿ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಯಿತಾದರೂ ಯಾವ ವಾದವೂ ನಮ್ಮನ್ನು ಅಂತಿಮ ನಿರ್ಣಯದ ತನಕ ಕರೆದುಕೊಂಡು ಹೋಗುವುದಿಲ್ಲ.

ಅಷ್ಟಕ್ಕೂ ಪಿರಮಿಡ್ಡುಗಳೆಂದರೆ, ಕಲ್ಲುಗಳನ್ನು ಒಂದರ ಮೇಲೆ ಒಂದರಂತೆ ಕಟ್ಟಿಕೊಂಡು ಹೋದ ರಚನೆಯಲ್ಲ. ಪಿರಮಿಡ್ಡು ಗಳ ಒಳಗೆ ಸುರಂಗ ಮಾರ್ಗವಿದೆ, ಆರಂಭದಲ್ಲಿ ತೆವಳುತ್ತಾ ಸಾಗಬೇಕು. ಆರಂಭ ದಲ್ಲಿ ಉಸಿರು ಕಟ್ಟಿದ ಅನುಭವವಾಗುತ್ತದೆ. ಕಾರಣ ಒಳ ಹೋಗುತ್ತಿದ್ದಂತೆ ಗಾಳಿ ಕಮ್ಮಿಯಾಗುತ್ತದೆ. ಸದಾ ಇಪ್ಪತ್ತು ಡಿಗ್ರಿ ತಾಪಮಾನ ಕಾಪಾಡುವ ಒಳರಚನೆಯಿದೆ, ಸಾವಿರಾರು ಮೆಟ್ಟಿಲುಗಳಿವೆ, ಶವಗಳನ್ನು ರಕ್ಷಿಸಿಡುವ ಪ್ರತ್ಯೇಕ ಖಾನೆಗಳಿವೆ, ರಾಜನ ಶವವಿಟ್ಟ ಪ್ರತ್ಯೇಕ ಚಂಬರು (chember) ಇದೆ, ಒಂದಕ್ಕೊಂದು ಜೋಡಿಸಿಟ್ಟ ಬೃಹದಾಕಾರದ ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ ಹನ್ನೊಂದು ಅಡಿ ಎತ್ತರದ ಗ್ರಾಂಡ್ ಗ್ಯಾಲರಿಯಿದೆ.

ಅದರ ಪಕ್ಕದಲ್ಲಿ ಪುಟ್ಟ ಪಡಸಾಲೆಯಂಥ ಕೋಣೆಯೊಂದಿದೆ. ಅಲ್ಲಿ ಆಳೆತ್ತರದ ಗ್ರಾನೈಟ್ ಶಿಲೆಯಲ್ಲಿ ನಿರ್ಮಿಸಿದ ತೊಟ್ಟಿಗಳಿವೆ. ಇವು ಶವಗಳನ್ನು ಇಡಲು ಮಾಡಿದ ವ್ಯವಸ್ಥೆ. ಈ ತೊಟ್ಟಿಗಳಿಗೆ ಮುಚ್ಚಳವಿಲ್ಲ. ಇದು ಖುಫು ದೊರೆಯ ಶವವನ್ನು ಇಡಲು
ಮಾಡಿದ ವ್ಯವಸ್ಥೆ. ಇದರ ಪಕ್ಕದಲ್ಲಿ ಎರಡು ದೊಡ್ಡ ಕೋಣೆಗಳಿವೆ. ಈ ಎಲ್ಲಾ ವ್ಯವಸ್ಥೆಯ ನಿರ್ಮಾಣವನ್ನು ಮೊದಲೇ ರೂಪಿಸಿ ಕೊಂಡು ಪಿರಮಿಡ್ಡನ್ನು ನಿರ್ಮಿಸಿದ್ದರಿಂದ ಇದು ಬರೀ ಕಲ್ಲುಗಳ ಜೋಡಣೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ.

ದುರ್ದೈವದ ಸಂಗತಿಯೆಂದರೆ, ಗಿಜಾದ ಅತಿ ದೊಡ್ಡ ಮತ್ತು ಸುಂದರ ಪಿರಮಿಡ್ಡನ್ನು ಕಟ್ಟಿದ ಖು- ದೊರೆ ಹೇಗಿದ್ದ ಎಂಬುದು
ನಿಗೂಢವೇ. ಆತ ನಿರ್ಮಿಸಿದ ಪಿರಮಿಡ್ 482 ಅಡಿ ಎತ್ತರವಾಗಿದ್ದರೂ, ಪುರಾತತ್ವಶಾಸಜ್ಞರಿಗೆ ಸಿಕ್ಕಿದ್ದು ಆತನ ಮೂರೂವರೆ ಅಂಗುಲದ ದಂತದ ಅಸ್ಪಷ್ಟ ಮೂರ್ತಿ ಮಾತ್ರ. ಅದು ಸಿಕ್ಕಿದ್ದು ಗಿಜಾದಲ್ಲಲ್ಲ. ಈಗ ಆ ಮೂರ್ತಿಯನ್ನು ಕೈರೊದಲ್ಲಿರುವ ಮ್ಯೂಸಿಯಂನಲ್ಲಿಡಲಾಗಿದೆ.

ಪಿರಮಿಡ್ಡುಗಳ ನಿರ್ಮಾಣಕ್ಕಿಂತ ಮುಂಚೆ ಸ್ಥಳ ಪರೀಕ್ಷೆಗಾಗಿ ಎರಡು ವರ್ಷ ತೆಗೆದುಕೊಂಡಿರಬಹುದು ಎಂದು ಅಂದಾಜು ಹಾಕಲಾಗಿದೆ. ಗಿಜಾದಲ್ಲಿರುವ ಈಗಿರುವ ಪಿರಮಿಡ್ಡುಗಳಿಂದ ಸುಮಾರು ಎಂಟು ನೂರು ಅಡಿ ಮೀಟರ್ ದೂರದಲ್ಲಿ ಮೂರು ಕಡೆ ಹತ್ತು ಅಡಿ ಆಳದ ತಗ್ಗು ಮಾಡಿರುವುದು ಕಾಣುತ್ತದೆ. ಸ್ಥಳ ಪರೀಕ್ಷೆಗಾಗಿ ನಡೆಸಿದ ಸಿದ್ಧತೆ ಅದಾಗಿರಬಹುದು. ಗಿಜಾದಲ್ಲಿ ನಿರ್ಮಿಸಲಾದ ಮೂರು ಪಿರಮಿಡ್ಡುಗಳು ಭೂಕಂಪದ ಹೊಡೆತವನ್ನೂ ದಕ್ಕಿಸಿಕೊಂಡಿರುವುದನ್ನು ಗಮನಿಸಿದರೆ, ಅದರ ಬುನಾದಿ ಭದ್ರವಾಗಿರಲೇಬೇಕು.

ಖುಫು ದೊರೆಯ ಪಿರಮಿಡ್ಡಿನ ಅಡಿಪಾಯದ ಉದ್ದ 768 ಅಡಿ. ಅಲ್ಲಿ ಭೂಮಿಯನ್ನು ಅದೆಷ್ಟು ಕರಾರುವಾಕ್ಕಾಗಿ ಮಟ್ಟಸ (ಲೆವಲ್) ಮಾಡಲಾಗಿದೆಯೆಂದರೆ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಅರ್ಧ ಅಂಗುಲ ಕೂಡ ಏರಿಳಿತಗಳಿಲ್ಲವಂತೆ. ಆ ದಿನಗಳಲ್ಲಿ ಭೂಮಿಯ ಮಟ್ಟವನ್ನು ನಿಖರವಾಗಿ ಅಳೆಯುವ ಸಾಧನಗಳಾವವೂ ಇರಲಿಲ್ಲ. ಕೇವಲ ಕಣ್ಣಳತೆಯಲ್ಲೇ ಅದನ್ನು ಸಾಧಿಸಿರುವುದು ಕಂಡು ಬರುತ್ತದೆ. ಅಷ್ಟಕ್ಕೂ ಪಿರಮಿಡ್ಡುಗಳನ್ನು ನೋಡಿದ ನಂತರ ಅದರ ನಿರ್ಮಾಣ, ಅಸ್ತಿತ್ವದ ಬಗ್ಗೆ ಮೊದಲಿಗಿಂತ ಹೆಚ್ಚು ಸಂದೇಹಗಳು, ಪ್ರಶ್ನೆಗಳು ಏಳುತ್ತವೆ. ಹಾಗೆ ಮಾಡಿರಬಹುದು, ಹೀಗೆ ಕಟ್ಟಿರಬಹುದು, ಈ ಉದ್ದೇಶ ಕ್ಕಾಗಿ ಈ ರಚನೆ ಇದ್ದಿರಬಹುದು, ಕಲ್ಲುಗಳನ್ನು ಹಾಗೆ ಸಾಗಿಸಿರಬಹುದು ಎಂದು ಊಹಾತ್ಮಕ ಪರಿಹಾರ ಹುಡುಕಾಟದ ಕಸರತ್ತುಗಳನ್ನು ಮಾಡಬಹುದೇ ಹೊರತು, ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ.

ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇತಿಹಾಸಕಾರರ, ಪುರಾತತ್ವ ಪರಿಣತರ ಊಹೆಯೇ ಹೆಚ್ಚು ಕೆಲಸ ಮಾಡಿದಂತೆ ತೋರುತ್ತದೆ. ಐದು ಸಾವಿರ ವರ್ಷ ಹಿಂದೆ ಹೋಗಿ, ಹಾಗಿದ್ದಿರಬಹುದು, ಹೀಗಿದ್ದಿರಬಹುದು ಎಂದು ಕಲ್ಪನೆ ಮಾಡಿ ಹೇಳಬಹುದೇ ಹೊರತು, ’ಇದಮಿತ್ಥಮ್’ ಎಂದು ಯಾವುದರ ಬಗ್ಗೆಯೂ ಹೇಳಲಾಗದು. ಹೀಗಾಗಿ ಪಿರಮಿಡ್ಡುಗಳ ಬಗ್ಗೆ ಇಷ್ಟೆಲ್ಲಾ ಕಥೆಗಳಿವೆ. ಆದರೆ ಎಲ್ಲವೂ ಅಪೂರ್ಣ!