Thursday, 12th December 2024

ಸಹಕಾರ ಪರೀಕ್ಷಾ ಪ್ರಾಧಿಕಾರ ರಚನೆಗೆ ಒತ್ತಾಯ

ಸಹಕಾರ ಇಲಾಖೆ ನೇಮಕಗಳಲ್ಲಿ ಹೆಚ್ಚುತ್ತಿರುವ ಅಕ್ರಮ

ಖಾಸಗಿಯವರ ಮೂಲಕ ನಡೆಯುತ್ತಿರುವ ನೇಮಕಗಳಿಂದ ಅಕ್ರಮ

ಬೆಂಗಳೂರು: ರಾಜ್ಯದಲ್ಲಿ ಗಮನ ಸೆಳೆದಿರುವ ಪಿಎಸ್‌ಐ ನೇಮಕ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮದ ಬೆನ್ನಲ್ಲೇ ಇದೀಗ ಸಹಕಾರ ಇಲಾಖೆ ವ್ಯಾಪ್ತಿಯ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ನೇಮಕಕ್ಕೆ ನಡೆಯುವ ಪರೀಕ್ಷೆಯಲ್ಲೂ ಅಕ್ರಮ ವಾಸನೆ ಬಡಿಯು
ತ್ತಿದ್ದು, ಈ ಹಿನ್ನೆಲೆಯಲ್ಲಿ ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಬೇಕೆಂಬ ಬಲವಾದ ಕೂಗು ಕೇಳಿಬರುತ್ತಿದೆ.

ಸಹಕಾರ ಇಲಾಖೆ ವ್ಯಾಪ್ತಿಯ ಸಂಸ್ಥೆಗಳಲ್ಲಿ ಅಂದಾಜು 2.5 ಲಕ್ಷ ಕಾಯಂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೇಮಕದಲ್ಲಿ ಸ್ವಜನಪಕ್ಷಪಾತ, ಲಂಚ, ಭ್ರಷ್ಟಾಚಾರ ಹೆಚ್ಚುತ್ತಿದೆ. ಈ ಅಕ್ರಮಗಳನ್ನು ತಡೆಯಲು ಹಾಗೂ ಎಲ್ಲ ಸಹಕಾರ ಕ್ಷೇತ್ರಗಳಲ್ಲಿ ನಡೆ ಯುವ ನೇಮಕಾತಿಗಳನ್ನು ಒಂದೇ ವೇದಿಕೆಯಡಿ ತರಲು ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಬೇಕು ಎಂಬುದು ಇಲಾಖೆ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್), ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜ ನಗರ, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಹಾಲು ಒಕ್ಕೂಟ, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್), ಕೋ ಆಪರೇಟಿವ್ ಸೊಸೈಟಿ, ಪಟ್ಟಣ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಸೇರಿ ಇತರ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ನಡೆಸುವ ಪರೀಕ್ಷೆಗಳಲ್ಲಿ ಒಂದಿಲ್ಲೊಂದು ಅಕ್ರಮಗಳ ವಾಸನೆ ಬಡಿಯುತ್ತಿದೆ.

6 ತಿಂಗಳ ಹಿಂದೆ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿಯಲ್ಲಿ (ಬಮೂಲ್) ಅಕ್ರಮ ನಡೆದಿರುವ ಸಂಬಂಧ ರಾಜ್ಯ ಸರಕಾರ ತನಿಖೆ ನಡೆಸಲು ಆದೇಶ ಹೊರಡಿಸಿರುವುದನ್ನು ಸ್ಮರಿ ಸಬಹುದು. ಅಲ್ಲದೆ ಸರಕಾರದ ಅನುಮತಿ ಇಲ್ಲದೆ ಮಂಡ್ಯ ಹಾಲು ಒಕ್ಕೂಟದಲ್ಲಿ ನೇಮಕಾತಿ ಅವ್ಯವಹಾರ ನಡೆದಿರುವುದು ಹಾಗೂ ಹಿಂದೆ ಹಲವು ಸಂಸ್ಥೆಗಳ ನೇಮಕ ಅಕ್ರಮಗಳು ಬೆಳಕಿಗೆ ಬಂದಿರುವುದು ಕಾಣಬಹುದು.

ಹೇಗೆಲ್ಲಾ ನಡೆಯುತ್ತೆ ಅಕ್ರಮಗಳು?: ಸಹಕಾರ ಇಲಾಖೆ ಅಧೀನದ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ ಸಾವಿರಾರು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯುತ್ತದೆ. ಇದಕ್ಕಾಗಿ ಪರೀಕ್ಷೆ ನಡೆಸಲು, ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ
ಪ್ರಕಟಿಸಲು ಆಯಾ ಸಂಸ್ಥೆ, ಕಾಲೇಜುಗಳಿಗೆ ಮತ್ತು ವಿದ್ಯಾಸಂಸ್ಥೆಗೆ ಸೇರಿದಂತೆ ಖಾಸಗಿ ಏಜೆನ್ಸಿಯವರಿಗೆ ಜವಾಬ್ದಾರಿ ವಹಿಸ ಲಾಗುತ್ತಿದೆ. ಪರೀಕ್ಷೆ ನಡೆಯುವ ಮುನ್ನ ಆಡಳಿತ ಮಂಡಳಿ ಸದಸ್ಯರು, ಸಚಿವರು ಮತ್ತು ಶಾಸಕರು ಸೇರಿ ಬಲಾಢ್ಯರು ಸೇರಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲು ಒಳಗೊಳಗೆ ಇಂತಿಷ್ಟು ವ್ಯವಹಾರ ಕುದುರಿಸಲಾಗುತ್ತದೆ.

ಪರೀಕ್ಷೆ ನಡೆಯುವ ಸಂಸ್ಥೆಗಳ ಜತೆ ಮೊದಲೇ ಒಪ್ಪಂದ ಮಾಡಿಕೊಂಡು ವ್ಯವಹಾರ ನಡೆಸುತ್ತಾರೆ ಎಂಬುದು ಆಕಾಂಕ್ಷಿಗಳ ಗಂಭೀರ ಆರೋಪ. ಅರ್ಜಿ ಹಾಕುವ ಅಭ್ಯರ್ಥಿಗಳು ನೆಪ ಮಾತ್ರಕ್ಕೆ ಪರೀಕ್ಷೆ ಎದುರಿಸುತ್ತಾರೆ. ಕೆಲವೆಡೆ ಅಭ್ಯರ್ಥಿಗಳ ಹೆಸರಿನಲ್ಲಿ ಬೇರೆ ಯಾರೋ ಪರೀಕ್ಷೆ ಬರೆಯುತ್ತಾರೆ. ಅಭ್ಯರ್ಥಿಗಳ ನೇಮಕಾತಿಗೆ 1:5 ಅನುಪಾತ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ದೂರವಾಣಿ ಮೂಲಕ ಆಮಿಷವೊಡ್ಡಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಪರೀಕ್ಷೆಯ ಒಎಂಆರ್ ಶೀಟ್‌ನಲ್ಲಿ ೩ನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಿಸುತ್ತಾರೆ.

ಮೌಲ್ಯಮಾಪನ ವೇಳೆ ಸಮರ್ಪಕವಾಗಿ ಉತ್ತರ ಬರೆಯದಿದ್ದರೂ ಪೂರ್ತಿ ಅಂಕ ನೀಡಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಪಾಸ್ ಮಾಡಲಾಗುತ್ತಿದೆ. ಇಂತಹ ಅಭ್ಯರ್ಥಿಗೇ ಹುದ್ದೆ ನೀಡಬೇಕೆಂದು ಮೊದಲೇ ನಿರ್ಧಾರವಾಗುತ್ತದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು.

ಪ್ರಾಧಿಕಾರ ರಚಿಸಿ
ಸರಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಹಗಲಿರುಳು ಶ್ರಮಪಟ್ಟು ಓದಿ ಪರೀಕ್ಷೆ ಬರೆದರೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಕೆಲಸ ಸಿಗ ದಂತಾಗಿದೆ. ಪರೀಕ್ಷೆಗಳಲ್ಲಿ ಇಂತಹ ಅಕ್ರಮ ನಡೆಯುವುದರಿಂದ ನಿಷ್ಠಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಅಕ್ರಮ ಗಳಿಗೆ ಬ್ರೇಕ್ ಹಾಕಲು ಸರಕಾರ ಕಠಿಣ ನಿಯಮ ರೂಪಿಸಬೇಕಿದೆ. ಅದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಹಕಾರ ಪರೀಕ್ಷಾ ಪ್ರಾಧಿಕಾರ ರಚಿಸಬೇಕು. ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಬೇಕು. ಇದರಿಂದ ಅಕ್ರಮಗಳಿಗೆ ಬ್ರೇಕ್ ಬೀಳುವ ಜತೆಗೆ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ
ಸರಕಾರದ ಹುದ್ದೆ ಸಿಗಲಿದೆ ಎನ್ನುತ್ತಾರೆ ಸಹಕಾರ ಧುರೀಣರೊಬ್ಬರು.