ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ವಿಮಾನ ಪ್ರಯಾಣ ಮಾಡುವ ಅನೇಕರಲ್ಲಿ ಒಂದು ಪ್ರಶ್ನೆ ಮೂಡುವುದುಂಟು. ಒಮ್ಮೆ ವಿಮಾನ ಟೇಕಾ- ಆದ ಬಳಿಕ, ಅದು ತನ್ನ ಮಾರ್ಗ ವನ್ನು ಹೇಗೆ ಕಂಡುಕೊಳ್ಳುತ್ತದೆ? ಆಕಾಶ ಮಾರ್ಗದಲ್ಲಿ ನಾವು ಹೋಗ
ಬೇಕೆಂದಿರುವ ಊರಿನ ಮಾರ್ಗವನ್ನು ತಿಳಿದುಕೊಳ್ಳುವುದು ಹೇಗೆ? ಅದರಲ್ಲೂ ಅಂತಾರಾಷ್ಟ್ರೀಯ ವಾಯುಯಾನದಲ್ಲಿ ವಿಮಾನ ಹತ್ತಾರು ದೇಶ ಗಳ ಮೇಲೆ ಒಂದೆರಡು ಖಂಡಗಳ ಮೇಲೆ ಹಾರುತ್ತದೆ. ಹೀಗಿರುವಾಗ
ಯಾವ ಮಾರ್ಗದಲ್ಲಿ ಪಯಣಿಸಬೇಕು ಎಂಬುದನ್ನು ವಿಮಾನದ ಪೈಲಟ್ ಹೇಗೆ ಅರ್ಥ ಮಾಡಿಕೊಳ್ಳುತ್ತಾನೆ? ಈಗ ಜಿಪಿಎಸ್ ವ್ಯವಸ್ಥೆಯಿದೆ, ಅದಕ್ಕೂ ಮೊದಲು ಪೈಲಟ್‌ಗಳು ಹೇಗೆ ನಿಭಾಯಿಸುತ್ತಿದ್ದರು? ಒಂದು ನಿರ್ದಿಷ್ಟ ದಿಕ್ಕಿ
ನಲ್ಲಿ, ನಿರ್ದಿಷ್ಟ ಎತ್ತರದಲ್ಲಿ, ಒಂದು ವೇಗದಲ್ಲಿ, ಇಷ್ಟು ಹೊತ್ತು ಹಾರಿದರೆ, ಈ ಊರು ಸಿಗುತ್ತದೆ ಎಂದು ನಿರ್ಧರಿಸುತ್ತಿದ್ದ ಕಾಲವೂ ಇತ್ತು.
ಈಗ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಿದೆ. ವಿಮಾನಗಳು ತಮ್ಮ ಮಾರ್ಗವನ್ನು ಸರಿಯಾದ ದಿಕ್ಕಿನಲ್ಲಿ ಕ್ರಮಿಸಲು ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಿಖರ ಮಾರ್ಗದರ್ಶನ ವ್ಯವಸ್ಥೆಗಳನ್ನು ಬಳಸುತ್ತಿವೆ. ಆಧುನಿಕ ವಿಮಾನಗಳಲ್ಲಿ ಜಿಪಿಎಸ್ ವ್ಯವಸ್ಥೆಯಿದೆ. ಇದು ಉಪಗ್ರಹಗಳ (satellites) ಮೂಲಕ ವಿಮಾನವು
ಭೂಮಿಯ ಮೇಲೆ ತನ್ನ ನಿಖರ ಸ್ಥಾನವನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಜಿಪಿಎಸ್ ಮೂಲಕ ವಿಮಾನವು ತನ್ನ ಗಮ್ಯಸ್ಥಾನಕ್ಕೆ ತ್ವರಿತವಾಗಿ ಮತ್ತು ನಿಖರವಾಗಿ ತಲುಪಬಹುದು.
ವಿಮಾನಗಳು ಜಿಪಿಎಸ್‌ಗಿಂತ ಹೊರತಾಗಿ, ನೆಲದ ಮೇಲೆ ನೇವಿಗೇಶನ್ ಸಾಧನಗಳಾದ ‘ವೋರ್’ (VHF
Omnidirectional Range- VOR) ವ್ಯವಸ್ಥೆಯನ್ನು ಬಳಸುತ್ತವೆ. ಇದು short-range radio navigation system. ಇದು ನಿಖರ ವಾಗಿ ವಿಮಾನ ಎಲ್ಲಿದೆ ಎಂಬುದನ್ನು ರಿಯಲ್ ಟೈಮ್‌ನಲ್ಲಿ ತಿಳಿಸುತ್ತದೆ. ಇದು ಹೈ ಫ್ರೀಕ್ವೆನ್ಸಿ ರೇಡಿಯೋ ಬ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈಗಿನ ವಿಮಾನಗಳಲ್ಲಿ ಎನ್‌ಡಿಬಿ (NDB: Non-Directional Beacon) ವ್ಯವಸ್ಥೆಯೂ ಇರುತ್ತದೆ. ಇದು ವಿಮಾನಕ್ಕೆ ಮಾರ್ಗ ಅಥವಾ ಪಥ ಮತ್ತು ದೂರವನ್ನು ತಿಳಿಸುತ್ತದೆ. ಹಾರಾಟದ ಮಾರ್ಗಗಳನ್ನು ನಿರ್ದಿಷ್ಟಗೊಳಿಸಲು ಏರ್‌ವೇ ಚಾರ್ಟ್‌ಗಳು ಬಳಕೆಯಾಗುತ್ತವೆ. ವಿಮಾನ ಚಲಿಸುತ್ತಿರುವ ಹಾರಾಟದ ದಾರಿ (airway)ಯ ಸ್ಪಷ್ಟ ನೋಟ ಪೈಲಟ್‌ಗೆ ಸಿಗುತ್ತದೆ.
ಪ್ರತಿ ವಿಮಾನದಲ್ಲಿಯೂ ಫ್ಲೈಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿರುತ್ತಾರೆ. ಈ ಕಂಪ್ಯೂಟರ್ ವ್ಯವಸ್ಥೆ ಪೈಲಟ್‌ಗಳಿಗೆ ವಿಮಾನ ಮಾರ್ಗದ ದಿಕ್ಕನ್ನು ನೀಡುತ್ತದಷ್ಟೇ ಅಲ್ಲ, ಹಾರಾಟದ ಉದ್ದಕ್ಕೂ ಇಂಧನ ಬಳಕೆ, ತಾಪ
ಮಾನ ಮತ್ತು ಗಮ್ಯಸ್ಥಾನದ ಮಾಹಿತಿಯನ್ನು ನಿರಂತರವಾಗಿ ನೀಡುತ್ತದೆ. ಮಾರ್ಗಮಧ್ಯೆ ಪೈಲಟ್‌ಗೆ ತಾನು ಸೇರುವ ಊರು ಇನ್ನೂ ಎಷ್ಟು ದೂರವಿದೆ, ತಲುಪಲು ಇನ್ನೂ ಎಷ್ಟು ಸಮಯಬೇಕು, ವಿಮಾನದಲ್ಲಿ ಈಗ ಎಷ್ಟು ಇಂಧನ ವಿದೆ, ಊರು ತಲುಪಲು ಆ ಇಂಧನ ಸಾಕಾಗುವುದಾ… ಮುಂತಾದ ಅಮೂಲ್ಯ ಮಾಹಿತಿಯನ್ನು ಈ ವ್ಯವಸ್ಥೆ ನೀಡುತ್ತದೆ.
ಇದಲ್ಲದೇ, ಹಾರಾಟದ ಸಮಯದಲ್ಲಿ ಎಟಿಸಿ ವ್ಯವಸ್ಥೆ (Air Traffic Control) ನಿರಂತರವಾಗಿ ವಿಮಾನಗಳಿಗೆ ಮಾರ್ಗಸೂಚನೆ ನೀಡುತ್ತದೆ. ಹವಾಮಾನ ಬದಲಾವಣೆ, ವಿಮಾನ ದಟ್ಟಣೆ ಅಥವಾ ತುರ್ತುಸ್ಥಿತಿಯಲ್ಲಿ ಎಟಿಸಿ ಮಾರ್ಗವನ್ನು ತಕ್ಷಣ ಬದಲಾಯಿಸಿ, ಪೈಲಟ್‌ಗಳಿಗೆ ಹೊಸ ದಾರಿಗಳನ್ನು ಸೂಚಿಸುತ್ತದೆ. SID (Standard Instrument Departure) ಮತ್ತು STAR (Standard Terminal Arrival Route) ವ್ಯವಸ್ಥೆಗಳು ವಿಮಾನಗಳ ಹಾರಾಟ, ಟೇಕಾ- ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸರಿಯಾದ ಮಾರ್ಗದಲ್ಲಿ ಹೊಂದಿಸುವ ಕ್ರಮಗಳಾಗಿ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಉದಾಹರಣೆಗೆ, ವಿಮಾನವು ವಿಮಾನ ನಿಲ್ದಾಣದಿಂದ ಹೊರಡುವಾಗ SID ಪ್ರಕ್ರಿಯೆಯನ್ನು ಅನುಸರಿಸಿ ಏರ್‌ವೇ ನಲ್ಲಿ ಸೇರುತ್ತದೆ ಮತ್ತು ಲ್ಯಾಂಡಿಂಗ್ ವೇಳೆ STAR ಪ್ರಕ್ರಿಯೆಯ ಮೂಲಕ ಏರ್‌ವೇ ಬಿಟ್ಟು ನಿರ್ದಿಷ್ಟ ಮಾರ್ಗದ ಮೂಲಕ ನಿಲ್ದಾಣಕ್ಕೆ ಬರುತ್ತದೆ. ಟರ್ಬ್ಯುಲ ಸಂದರ್ಭಗಳಲ್ಲಿ, ವಿಮಾನಗಳು ತಮ್ಮ ಹಾರಾಟದ ಮಾರ್ಗವನ್ನು ಬದಲಾಯಿಸುತ್ತವೆ. ಹವಾಮಾನ ಮುನ್ಸೂಚನೆ ಮೂಲಕ ಹಾರಾಟದ ಮಾರ್ಗದಲ್ಲಿ ತಕ್ಷಣದ ಬದಲಾವಣೆ ಮಾಡಲಾಗುತ್ತದೆ. ಇಷ್ಟಾಗಿಯೂ, ಪೈಲಟ್‌ಗಳು ಮಾರ್ಗವನ್ನು ತಪ್ಪುವ ಸಂಭವವಿರುತ್ತದೆ. ಅದು ಅಪರೂಪ.
ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಇಂಧನ ವ್ಯವಸ್ಥೆ