ಚಿಕ್ಕಮಗಳೂರು: ನಮ್ಮ ನಡೆ, ಸರ್ಕಾರಿ ಶಾಲೆಗಳೆಡೆಗೆ ಎಂಬ ಹೊಸ ಹೆಜ್ಜೆ ಯೊಂದಿಗೆ ಭರವಸೆ ತಂಡದ ಯುವ ಮನಸುಗಳು ಸರ್ಕಾರಿ ಶಾಲೆಗಳ ಸುಧಾರಣೆಗೆ ಮುಂದಾಗಿದೆ. ಸರ್ಕಾರಿ ಶಾಲೆಗಳು ತಮ್ಮ ಕಲಿಕಾ ವರ್ಷವನ್ನು ಪ್ರಾರಂಭಿಸಿ ಮಕ್ಕಳನ್ನು ಶಾಲೆಗಳಿಗೆ ಕೈ ಬೀಸಿ ಕರೆಯುತ್ತಿವೆ.
ಆದರೆ ಮಕ್ಕಳು ಬಂದು ಕಲಿಯುವ ಸ್ಥಿತಿಯಲ್ಲಿ ಅದೆಷ್ಟೋ ಶಾಲೆಗಳು ಇಂದು ಉಳಿದಿಲ್ಲ. ಆ ರೀತಿಯ ಶಾಲೆಗಳ ಸುಧಾರಣೆ ಕೆಲಸಕ್ಕೆ ಭರವಸೆ ತಂಡ ಮುಂದಾಗಿದೆ. ಕಳೆದ ವರ್ಷಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಶ್ರಮಿಸಿದ ತಂಡ ಇದೀಗ ಶಾಲೆಗಳ ಸುಧಾರಣೆಯತ್ತ ಗಮನ ಹರಿಸಿದೆ, ಅದರಂತೆ ಶಾಲೆಗಳಿಗೆ ಬಣ್ಣ ಹಚ್ಚಿ, ಕಲಿಕಾ ಕೌಶಲ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗುವ ಚಿತ್ತಾರ ಮೂಡಿಸಲು ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಬ್ರಾಹ್ಮಣರ ಹಳ್ಳಿ ಶಿಡ್ಲಘಟ್ಟ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಹಚ್ಚಿ ಶಾಲೆಯ ಅವಶ್ಯಕತೆಗೆ ನೆರವಾಗುವ ಕಾರ್ಯ ಕೈಗೊಂಡಿದೆ.
ಭರವಸೆ ತಂಡದ ಅಧ್ಯಕ್ಷರಾದ ಸುನೀಲ್, ಕಾರ್ಯದರ್ಶಿ ಮಂಜೇಶ್ ಹಾಗೂ ತಂಡದ ಪ್ರಮುಖರಿಂದ ಈ ಕಾರ್ಯ ನೆಡೆಸಿದ್ದಾರೆ, ಇವರೊಂದಿಗೆ ಈ ಕಾರ್ಯದಲ್ಲಿ ಸಮರ್ಪಣಾ ರಂಗ ತಂಡ, ಟೀಮ್ ಅಲೆಮಾರಿ ಅಡ್ವಂಚರ್, ಟೀಮ್ ಮಾಗಡಿಯ ಮುಖ್ಯಸ್ಥರು ಸೇರಿದ್ದಾರೆ. ಬಡವರ ಶಿಕ್ಷಣದ ಏಕೈಕ ಭರವಸೆಯಾಗಿರುವ ಸರ್ಕಾರಿ ಶಾಲೆಗಳ ಉಳಿವಿಗೆ ಯುವಕರ ಈ ಕಾರ್ಯ ಶ್ಲಾಘನೀಯವಾಗಿದೆ.
ತಂಡದ ಪ್ರಮುಖರು, ಸರ್ಕಾರ ಅಥವಾ ಅಧಿಕಾರಿಗಳು ಸಂಪೂರ್ಣವಾದ ಬೆಂಬಲ ನೀಡಿ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಆದ್ಯತೆ ಹಾಗೂ ಯೋಜನೆಯನ್ನು ಜಾರಿಗೆ ತರುವ ಮನಸು ಮಾಡಿ ಸಾವಿರಾರು ಹಳ್ಳಿ ಮಕ್ಕಳ ಹಾಗೂ ಬಡ ಕುಟುಂಬ ಮಕ್ಕಳ ವಿಧ್ಯಾಭ್ಯಾಸಕ್ಕೆ ಸುಸಜ್ಜಿತ ವ್ಯವಸ್ಥೆಗಳ ದೊರಕಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕೋರಿದರು.