Sunday, 15th December 2024

ಗುಡಿಯಾ, ನಿರ್ಭಯಾ ಬದುಕುತ್ತಿದ್ದರು

ಓದುಗರ ಒಡಲ ದನಿ

ನಿಮ್ಮಂಥ ಗಂಡಸರಿಗೆ ರೇಪ್ ನಗುವ ವಿಷಯ ಯಾಕೆ ಗೊತ್ತಾ?

ಗಿರಿಜಾ ಹೆಗಡೆ

ಅತ್ಯಾಚಾರಕ್ಕೊಳಗಾದ ಏಳು ವರ್ಷದ ಹಸುಳೆ, ‘ಗುಡಿ ಯಾ’ಳ ಅಂಗಾಂಗಗಳನ್ನು ಸರಿಪಡಿಸೋಕೆ ಹದಿನೇಳು ಆಪರೇಶನ್ ಮಾಡಬೇಕಾಯ್ತು. ಅವಳು ಪುಟ್ಟ ಯೋನಿ, ಗುದದವರೆಗೂ ಹರಿದು ಛಿದ್ರವಾಗಿತ್ತು. ಅವಳಿಗೆ When rape is inevitable, lie back
and enjoy  ಅನ್ನೋದು ಗೊತ್ತಿರಲಿಲ್ಲ. ಸುಮ್ಸುಮ್ನೇ, ಸುಳ್ಸುಳ್ಳೇ ನೋವು ನಟಿಸಿದ್ಲು.

ನಿರ್ಭಯಾಳನ್ನ ರೇಪ್ ಮಾಡಿ, ಕಬ್ಬಿಣದ ರಾಡ್ ತೂರಿಸಿ, ಗರ್ಭಕೋಶವನ್ನ ಅವಳ ಕರುಳ ಜತೆಗೇ ಹೊರಗೆಳೆದು ಚೆಲ್ಲಿದಾಗ, ಅವಳಿಗೂ ರೇಪ್ ಅನ್ನು  ಜಾಯ್ ಮಾಡ್ಬೇಕು ಅಂತ ಗೊತ್ತಿರಲಿಲ್ಲ. ಗೊತ್ತಿದ್ದಿದ್ರೆ ರೇಪ್ ಮಾಡೋವ್ರಿ ಗೆ ಸಹಕರಿಸಿ, ತಾನೂ ಎಂಜಾಯ್ ಮಾಡಿ, ಅವರಿಗೂ ಎಂಜಾಯ್ ಮಾಡೋಕೆ ಬಿಟ್ಟು, ಇವತ್ತು ಬದುಕಿರ್ತಿದ್ಲು.

ಆ ಹುಡುಗಿ ವೆಟರ್ನರಿ ಡಾಕ್ಟರನ್ನು ರೇಪ್ ಮಾಡಿ, ಸೀಮೆ ಎಣ್ಣೆ ಸುರಿದು ಜೀವಂತ ಸುಟ್ರಲ್ಲ, ಊಹೂಂ… ರಮೇಶ್ ಕುಮಾರ್ ಮುಂದೊಂದು ದಿನ ರೇಪ್ ಅನ್ನು ಎಂಜಾಯ್ ಮಾಡಿ ಅಂತ ಹೇಳ್ಬಹುದು ಅಂತ ಗೊತ್ತಿರಲಿಲ್ಲ. ಗೊತ್ತಿದ್ರೆ, ಎಂಜಾಯ್ ಮಾಡಿ ಸಾಯಬಹುದಿತ್ತು. ಕಾರಿನಲ್ಲಿ, ಬಸ್ಸಿನಲ್ಲಿ, ಶಾಲೆ ಯಲ್ಲಿ, ಆಸ್ಪತ್ರೆ ಯಲ್ಲಿ, ಹೊಲದಲ್ಲಿ, ಕೊನೆಗೆ ಟಾಯ್ಲೆಟ್ಟಿನಲ್ಲೂ …ಎಲ್ಲಿ ಒಂಟಿ ಹೆಣ್ಣು, ಕಾಮ ಕೆರಳಿದ ಗಂಡಿಗೆ ಸಿಗ್ತಾಳೋ, ಅಲ್ಲ ರೇಪ್ ಮಾಡಬಹುದು.

ಎಲ್ಲಿ ರೇಪ್ ಆದ್ರೂ lie back and enjoy ಮಾಡ ಬಹುದು. Of course, ಮಾನ್ಯ ರಮೇಶ್ ಕುಮಾರ್ ಆಜ್ಞೆ  ಹೊರಡಿಸಿದ ಹಾಗೆ, when rape is inevitable, lie back and enjoy! ಅಷ್ಟೇ. ನೀವು ಏಳು ತಿಂಗಳ ಹಸುಳೆಯಿರಿ, ಎಪ್ಪತ್ತು ವರ್ಷದ ವೃದ್ಧೆಯಿರಿ, ರೇಪ್ ಆದಾಗ ನೋವಿನಿಂದ ಚೀರುವುದರ ಬದಲಿಗೆ, ಕಾಮೋದ್ರೇಕದಿಂದ ಕೂಗಿ, ನರಳಿ… ಯಾಕಂದ್ರೆ ರೇಪ್ ಎಂಜಾಯ್ ಮಾಡಿ ಅಂತ ರಮೇಶ್ ಕುಮಾರ್ ಹೇಳಿದ್ದಾರೆ. ಹೇಳಿದ್ದಕ್ಕೆ ಘನತೆವೆತ್ತ ಸಭಾಪತಿ ಗಳಿಂದ ಹಿಡಿದು, ಎಲ್ಲರೂ ಗಹಗಹಿಸಿ ನಕ್ಕಿದ್ದಾರೆ. ಸೋ ಎಂಜಾಯ್ ದ ರೇಪ್!

ಮಾನ್ಯ ರಮೇಶ್ ಕುಮಾರ್, ನಿಮ್ಮಂಥ ಗಂಡಸರಿಗೆ ರೇಪ್ ಒಂದು ನಗುವ ವಿಷಯ ಯಾಕೆ ಗೊತ್ತಾ? ನೀವು ತೂರಿಸಬಹುದಾದ ಅಂಗ ನಿಮಗಿದೆ. ನೀವು ನಿಮ್ಮನ್ನೂ ಸೇರಿಸಿ, ಕಬ್ಬಿಣದ ರಾಡ್, ಬಾಟಲ, ಮರದ ತುಂಡು, ಕಟ್ಟಿಗೆ ಏನನ್ನು ಬೇಕಾದ್ರೂ ಹೆಣ್ಣಿನ ಒಳಗೆ ತೂರಿಸಬಹುದು. ಯಾಕಂದ್ರೆ ಹೆಣ್ಣಿಗಿರುವ ಅಂಗ ಅಂಥದ್ದು.. ತೂರಿಸಿಕೊಳ್ಳಬಹುದಾದ್ದು… ನಿಮ್ಮ ಹೆಂಡತಿ, ಮಗಳು, ತಂಗಿ, ತಾಯಿಯ ಮುಂದೆ ಹೇಳಿ ನೋಡಿ, ರೇಪ್ ಕ್ಯಾನ್ ಬಿ ಎಂಜಾಯಬಲ್
ಅಂತ. ಅವರೇ ನಿಮ್ ಕಪಾಳ ಸೀಳುವ ಹಾಗೆ ಬಾರಿಸ್ತಾರೆ.

ಥೂ ನಿಮ್ ಮಕ್ಕೆ!
2020ರಲ್ಲಿ ಆದ ರಿಪೋರ್ಟೆಡ್ ರೇಪ್ ಸಂಖ್ಯೆ ಸುಮಾರು 28000. ಅದರಲ್ಲಿ 6 ವರ್ಷದ ಕೆಳಗಿನ ಮಕ್ಕಳು 300. ಅರವತ್ತು ವರ್ಷ ಮೇಲ್ಪಟ್ಟವರು 300. ನಮ್ಮ ದೇಶವೊಂದರ, ವರ್ಷಕ್ಕೆ ಸರಾಸರಿ ಮೂವತ್ತು ಸಾವಿರ ಹೆಣ್ಮಕ್ಕಳು ರೇಪನ್ನು ಎಂಜಾಯ್ ಮಾಡ್ತಾರೆ ಅನ್ನಬಹುದು.

ರಮೇಶ್ ಕುಮಾರ್ ಅವರೇ, ನಿಮ್ಮನಿಮ್ಮ ಮನೆಗಳಲ್ಲಿ ನೀವು ಜೀವದಷ್ಟೇ ಪ್ರೀತಿಸುವ ನಿಮ್ಮ ಹೆಂಡತಿ, ಮಗಳು, ತಂಗಿ, ತಾಯಿಯರಿದ್ದಾರೆ. ಅಟ್‌ಲಿಸ್ಟ್
ಅವರು ರೇಪ್ ಅನ್ನು ಎಂಜಾಯ್ ಮಾಡಬೇಕಾದ ಸ್ಥಿತಿಗೆ ತರಬೇಡಿ. ನಮ್ ಕಥೆ ಬಿಡಿ, ನಮ್ ಅಣ್ಣ-ತಮ್ಮ ಅಪ್ಪ, ಗಂಡ, ಎಲ್ಲಕ್ಕಿಂತ ಹೆಚ್ಚಾಗಿ, ನಾವು ಹೆಣ್ಮಕ್ಳು ನಮ್ಮನ್ನ ನಾವು ಸಾಧ್ಯವಾದ ಮಟ್ಟಿಗೆ ನೋಡ್ಕೊಳ್ತೇವೆ.

ನಮ್ಮ ಎಚ್ಚರದಲ್ಲಿ ನಾವಿರ್ತೇವೆ. ಆದ್ರೂ, ಹೊಟ್ಟೆಪಾಡಿಗೆ ಹೊರಗೆ ಹೋಗಿ ದುಡಿಲೇಬೇಕಲ್ಲ. ನಾವು ಹಾಕುವ ಬಟ್ಟೆಯಿಂದ ಹಿಡಿದು, ನಾವು ಯಾಕೆ ಅಷ್ಟೊತ್ತಿಗೆ ಅಲ್ಲಿಗೆ ಹೋಗ್ಬೇಕಿತ್ತು ಅನ್ನುವುದಕ್ಕೆಲ್ಲ ಉತ್ತರ ಕೊಡ್ಬೇಕಲ್ಲ…ಇನ್ನು ಮುಂದೆ ಪರವಾಗಿಲ್ಲ ಬಿಡಿ, ನೀವು ಹೇಳಿದ ಹಾಗೇ ಎಂಜಾಯ್ ಮಾಡ್ತೇವೆ. ಸುಮ್ನೆ ಯಾಕೆ ಬೇರೆಯವರಿಗೆ ಕಷ್ಟ ಕೊಡೋದೂ? ಆದರೆ ಮಾನ್ಯರೇ, ಸಾಧ್ಯವಾದರೆ, ಸದನದಲ್ಲಿ ಪಬ್ಲಿಕ್ಕಲ್ಲಿ ಅಸಹ್ಯವಾಗಿ ಇಂಥ ಜೋಕ್ ಹೇಳಿ, ಎಲ್ಲರನ್ನೂ ನಗಿಸಿದೆ ಅಂತ ಹಲ್ಲು ಕಿಸೀಬೇಡಿ. ಉಳಿದಿರೋ ಅಲ್ಪಸ್ವಲ್ಪ ಮರ್ಯಾದೆ ಕಳ್ಕೋಬೇಡಿ. ಮೊದಲೇ ನೀವು ರಾಜಕಾರಣಿಗಳು ದೊಡ್ಡ ಜೋಕರ್ಸು!

ದೇಶದ ಅರ್ಧ ಜನಸಂಖ್ಯೆಯಷ್ಟಿರುವ ನಾವು, ಚುನಾವಣೆಗಳ ಸಮಯದಲ್ಲಿ ಮಾತ್ರ ನೆನಪಾಗುವ ನಾವು, ನಿಮ್ಮ ಹಾಗೇ ಟ್ಯಾಕ್ಸ್ ಕಟ್ಟುವ ನಾವು, ನಿಮ್ಮ
ಬಾಯಿಗೆ ಬಿದ್ದು ಜೋಕಾಗುವ ನಾವು ಹೆಣ್ಮಕ್ಕಳು ಈಗ ಒಂದು ಕೆಲಸ ಮಾಡ್ಬೇಕಿದೆ. ಒಂದು ಕಾಗದದ ಮೇಲೆ ಕ್ಯಾಕರಿಸಿ ಉಗಿದು, ‘ಥೂ ನಿಮ್ ಮಕ್ಕೆ!’  ಅಂತ ಬರೆದು, ಅದನ್ನು ಜೋಪಾನವಾಗಿ ಪ್ಯಾಕ್ ಮಾಡಿ ನಿಮ್ಮ ಮನೆಯ ಅಡ್ರೆಸ್ಸಿಗೆ ಪೋಸ್ಟ್ ಮಾಡಬೇಕಿದೆ. ಅದು ನಿಮಗೆ, ನಾವು ಈ ದೇಶದ ಹೆಣ್ಮಕ್ಕಳು ಸಲ್ಲಿಸಬೇಕಿರುವ ಅತ್ಯುನ್ನತ ಗೌರವ!