Monday, 25th November 2024

ಬೇಸಿಗೆಯ ಬಿಸಿಲ ಅಲೆಯಿಂದ ಮಕ್ಕಳ ರಕ್ಷಣೆ ಹೇಗೆ? ಇಲ್ಲಿದೆ ವೈದ್ಯರ ಸಲಹೆಗಳು

ಡಾ.ಯೋಗೇಶ್ ಕುಮಾರ್ ಗುಪ್ತಾ, ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದ ಮುಖ್ಯಸ್ಥರು, ಫೋರ್ಟಿಸ್ ಆಸ್ಪತ್ರೆ

ಬೇಸಿಗೆ ಕಾಲ ಬಂತೆಂದರೆ ಸಾಕು, ಬಿಸಿಲ ಬೇಗೆಗೆ ಸುಡುವ ಅನುಭವವನ್ನು ವಯಸ್ಕರೇ ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಮಕ್ಕಳು ಬಿಸಿಲ ಝಳಕ್ಕೆ ಮುದುಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಮಕ್ಕಳನ್ನು ಹೈಟ್ರೇಟ್‌ ಆಗಿ ಇಡುವುದು ಸವಾಲಿನ ಕೆಲಸ. ಅದರಲ್ಲೂ ಮಕ್ಕಳಿಗೆ ಶಾಲೆ ರಜೆ ಇರುವುದರಿಂದ ಮನೆಯ ಹೊರಗಡೆಯೇ ಆಟವಾಡಲು ಇಚ್ಛಿಸುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳ ತ್ವಚೆ, ಆರೋಗ್ಯ ಎಲ್ಲವನ್ನೂ ಬಿಸಿಲಿನಿಂದ ರಕ್ಷಿಸಲು ತಾಯಂದಿರಿಗೆ ದೊಡ್ಡ ತಲೆನೋವಾಗಿ ಪರಿಣ ಮಿಸಿದೆ. ಈ ಕುರಿತು ವೈದ್ಯರು ಒಂದಷ್ಟು ಸಲಹೆ ನೀಡಿದ್ದಾರೆ.

ಮಕ್ಕಳ ಬಗ್ಗೆ ಜಾಗೃತಿ ಇರಲಿ:
ಬೇಸಿಗೆ ಕಾಲದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಇಲ್ಲದಿದ್ದರೆ ಬೇಸಿಗೆ ಕಾಲದ ಕಾಯಿಲೆಗಳಿಗೆ ಮಕ್ಕಳು ತುತ್ತಾಗುವ ಸಾಧ್ಯತೆ ಇದೆ. ಬೆವರಿನಿಂದಾಗಿ ಮಕ್ಕಳ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹೀಗಾಗಿ ಮಕ್ಕಳ ದೇಃದಲ್ಲಿ ಸದಾ ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ಜೊತೆಗೆ ದೇಹಕ್ಕೆ ಹೊಂದಿಕೆಯಾಗುವ ಋತು ಮಾನದ ಉಡುಪು ಧರಿಸಬೇಕು. ಹಗುರವಾದ, ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಮಾತ್ರ ಮಕ್ಕಳಿಗೆ ಹಾಕಿ. ಮಕ್ಕಳನ್ನು ಮಧ್ಯಾಹ್ನದ ಬಿಸಿಲಿಗೆ ಬಿಡದೇ ಇರುವುದು ಒಳ್ಳೆಯದು. ಈ ಸಮಯದ ಬದಲು ಬೆಳಗ್ಗೆ ೧೦ ಗಂಟೆ ಹಾಗೂ ಸಂಜೆ ೫ ಗಂಟೆ ಬಳಿಕ ಮಕ್ಕಳು ಹೊರಗಡೆ ಆಟವಾಡಲು ಅವಕಾಶ ಮಾಡಿಕೊಡಿ. ಮಧ್ಯಾಹ್ನದ ಉರಿಬಿಸಿಲಿನ ಸಂದರ್ಭದಲ್ಲಿ ಮಕ್ಕಳಿಗೆ ಮನೆಯಲ್ಲಿಯೇ ಆಟವಾಡಲು ಇಚ್ಛಿಸುವಂಥ ವಾತಾವರಣ ನಿರ್ಮಾಣ ಮಾಡಿ.

ಬೇಸಿಗೆ ಕಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳಿವು:
*ತಲೆತಿರುಗುವಿಕೆ, ತಲೆನೋವು
•ತೀವ್ರ ನಿಶ್ಯಕ್ತಿ (ಉದಾ, ಅಸಾಧಾರಣವಾಗಿ ನಿದ್ದೆ, ತೂಕಡಿಕೆ, ಅಥವಾ ಉದ್ರೇಕಿಸಲು ಕಷ್ಟ)
•ಜ್ವರ
•ತೀವ್ರ ಬಾಯಾರಿಕೆ
•ಮೂತ್ರ ವಿಸರ್ಜನೆ ಮತ್ತು ಹಳದಿ ಅಥವಾ ಬಿಸಿಯ ಮೂತ್ರ ವಿಸರ್ಜನೆ
•ವಾಕರಿಕೆ, ವಾಂತಿ
• ಅಸಾಮಾನ್ಯ ಉಸಿರಾಟ
• ಚರ್ಮ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ
•ಸ್ನಾಯು ನೋವು, ಸ್ನಾಯುಗಳ ಸೆಳೆತ
ಈ ಲಕ್ಷಣಗಳು ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಲು ಸಾಧ್ಯವಾಗುತ್ತವೆ. ಈ ಲಕ್ಷಣಗಳು ಹೆಚ್ಚಾಗಿ ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಿ.

ಈ ಮುನ್ನೆಚ್ಚರಿಕೆ ವಹಿಸುವುದನ್ನು ಮರೆಯದಿರಿ
*ಮಕ್ಕಳು ಆಟವಾಡುವ ಜೊತೆಗೆ ಹೆಚ್ಚು ನೀರು ಸೇವಿಸುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ, ಇದಕ್ಕಾಗಿ ಮಕ್ಕಳಿಗೆ ಇಷ್ಟವಾಗುವ ಬಾಟಲ್‌ನಲ್ಲಿ ನೀರು ಕೊಡುವುದು, ವಿಭಿನ್ನವಾಗಿ ಮಕ್ಕಳನ್ನು ಸೆಳೆಯುವಂತ ಬಾಟಲ್‌ಗಳನ್ನು ಬಳಸಬಹುದು.
*ಮನೆಯಿಂದ ಹೊರ ಹೋಗುವ ಮುನ್ನ ಮಕ್ಕಳಿಗೂ ಸಹ ಸನ್‌ಸ್ಕ್ರೀನ್‌ ಹಾಕುವುದನ್ನು ಮರೆಯಬಾರದು. ೬ ತಿಂಗಳು ಮೇಲ್ಪಟ್ಟ ಮಕ್ಕಳಿಗೆ ೧೫ ಅಥವಾ ಅದಕ್ಕಿಂತ ಹೆಚ್ಚಿನ ಎಸ್‌ಪಿಎಫ್‌ ಇರುವ ಸನ್‌ಸ್ಕ್ರೀನ್‌ ಬಳಸಬಹುದು. ಪ್ರತಿ ಎರಡು ಗಂಟೆಗೊಮ್ಮೆ ಬಳಸುವುದರಿಂದ ಚರ್ಮದ ಆರೈಕೆ ಮಾಡಲು ಸಾಧ್ಯ. ಮಕ್ಕಳ ಚರ್ಮ ಸೂಕ್ಷ್ಮವಾಗಿರುತ್ತದೆ. ಬಿಸಿಲಿಗೆ ಚರ್ಮವನ್ನು ಒಡ್ಡುವುದರಿಂದ ಚರ್ಮ ಸಂಬಂಧಿ ಕಾಯಿಲೆ ಬರುವ ಸಾಧ್ಯತೆಯೂ ಇದೆ.
* ಮಕ್ಕಳಿಗೆ ತಿಳಿಬಟ್ಟೆ, ಹಗುರವಾದ ಬಟ್ಟೆಗಳನ್ನೇ ಧರಿಸಿ. ಜೊತೆಗೆ ಛತ್ರಿ ಅಥವಾ ಹ್ಯಾಟ್‌ಗಳನ್ನು ಬಳಸುವುದು ಒಳ್ಳೆಯದು.
* ಬೇಸಿಗೆ ಸಮಯದಲ್ಲಿ ಮಕ್ಕಳನ್ನು ತಂಪಾಗಿಸಲು ಫ್ಯಾನ್‌ಗಾಳಿಗಿಂತ ನೈಸರ್ಗಿಕ ತಂಪಾದ ಗಾಳಿಗೆ ಒಡ್ಡಿಕೊಳ್ಳಲು ಅವಕಾಶ ಮಾಡಿ, ತಂಪಾದ ನೀರಿನಲ್ಲಿ ಸ್ನಾನ, ಈಜು ಕಲಿಸಲು ಬೇಸಿಗೆ ಕಾಲ ಒಳ್ಳೆಯದು. ಇದು ಮಕ್ಕಳ ದೇಹ ತಂಪಾಗಿಸಲು ಅನುವು ಮಾಡುತ್ತದೆ.
* ಮಗುವನ್ನು ಕಾರಿನಲ್ಲಿ ಬಿಡಬೇಡಿ: ಕಿಟಕಿಗಳು ತೆರೆದಿದ್ದರೂ ಸಹ, ಕಾರಿನ ಒಳಭಾಗವು ಕಡಿಮೆ ಸಮಯದಲ್ಲಿ ಅಪಾಯಕಾರಿಯಾಗಿ ಬಿಸಿಯಾಗಬಹುದು.
* ನಿಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವು ಆಗಾಗ್ಗೆ ಶುಶ್ರೂಷೆ ಮಾಡಬೇಕು. ನೀರು ಕುಡಿಸುತ್ತಿರಬೇಕು ಅಥವಾ ದ್ರವರೂಪದ ಆಹಾರಗಳನ್ನು ಸೇವಿಸಲು ಅವಕಾಶ ಮಾಡಿಕೊಡಿ. ಬೇಸಿಗೆ ಕಾಲದ ಆಹಾರ ಸೇವನೆ ಇರುವುದು ಒಳ್ಳೆಯದು.

ಶಿಶುಗಳ ರಕ್ಷಣೆ ಹೀಗಿರಲಿ: ಬಿಸಿಲಿ ಕಾಲದಲ್ಲಿ ೬ ತಿಂಗಳ ಒಳಗಿನ ಮಕ್ಕಳನ್ನು ಕಾಪಾಡಿಕೊಳ್ಳುವುದು ತಾಯಂದಿರಿಗೆ ಸವಾಲಿನ ಕೆಲಸವೇ ಸರಿ. ಬೇಸಿಗೆ ಕಾಲದಲ್ಲಿ ಮಗುವನ್ನು ಯಾವುದೇ ಕಾರಣಕ್ಕೂ ಬಿಸಿಲಿಗೆ ಒಡ್ಡ ಬೇಡಿ. ಮಗುವಿನ ತಲೆಬುರುಡೆ ತೀರಾ ಮೆದುವಾಗಿರುತ್ತದೆ. ಹೀಗಾಗಿ ಸುಡುವ ಬಿಸಿಲಿಗೆಹೋಗುವ ಸಂದರ್ಭದಲ್ಲಿ ಮಗುವನ್ನು ಸಂಪೂರ್ಣವಾಗಿ ತಂಪಾದ, ಕಾಟನ್‌ ಬಟ್ಟೆಯಲ್ಲಿ ಸುತ್ತುವುದು ಒಳ್ಳೆಯದು. ೬ ತಿಂಗಳ ಮಗುವಿಗೆ ತಾಯಿಯ ಎದೆ ಹಾಲು ಬಿಟ್ಟು ಬೇರಾವ ಆಹಾರವನ್ನೂ ನೀಡುವಂತಿಲ್ಲ. ಬೇಸಿಗೆ ಕಾಲದಲ್ಲಿ ಮಗುವಿಗೆ ಹೆಚ್ಚು ಸ್ತನ್ಯಪಾನ ಮಾಡಿಸುವುದು ಒಳ್ಳೆಯದು. ಇದರಿಂದ ಮಗುವಿನ ದೇಹ ನಿರ್ಜಲೀಕರಣವಾಗುವುದಿಲ್ಲ. ಮನೆಯಲ್ಲಿಯೇ ಇದ್ದರೆ ಸದಾ ಡೈಪರ್‌ ಹಾಕುವ ಬದಲು ಕಾಟನ್‌ ಬಟ್ಟೆಗಳಿಂದ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಬಹುದು.