ವಿಶ್ವವಾಣಿ ಕಾಳಜಿ: ವಿನಯ್ ಖಾನ್
ಇತಿಹಾಸದ ಪಾಠ ಕಲಿಯುವುದಕ್ಕಿಂತ ಇತಿಹಾಸದಿಂದ ನಾವು ಕಲಿಯುವ ಪಾಠ ಮುಖ್ಯ!
ಅಷ್ಟಕ್ಕೂ ಪಠ್ಯವೇ ಇನ್ನೂ ಮುದ್ರಣವಾಗಿಲ್ಲವಲ್ಲ? ಹೆಡಗೇವಾರರ ಭಾಷಣವನ್ನು ಪಠ್ಯದಲ್ಲಿ ಅಳವಡಿಕೆಯಾಗಿದೆ ಎಂಬುದಕ್ಕೇ ಸೂರು ಕಿತ್ತು
ಹೋಗುವಂತೆ ಕೂಗೆಬ್ಬಿಸುವದರಲ್ಲಿ ಏನಿದೆ ಅರ್ಥ? ಅದರಲ್ಲಿ ಯಾವುದೇ ಸಂಘಟನೆಗೆ ಸೇರಿ ಅಥವಾ ವಿರೋಧ ಮಾಡಿ ಅಂತೇನಾದರೂ ಬಂದಿರುವ ಬಗ್ಗೆ ಖಚಿತ ಮಾಹಿತಿಗಳಿವೆಯೇ? ಆರೆಸ್ಸೆಸ್ನ ವೈಭವೀಕರಣ ಮಾಡಲಾಗಿದೆಯೇ? ಹೆಡಗೇವಾರರ ನೆಪದಲ್ಲಿ ಇತರ ಸಂಘಟನೆ ಗಳ ಅವಹೇಳನ ಮಾಡಲಾಗಿದೆಯೇ? ‘ಜೀವನದಲ್ಲಿ ಯಾರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು’ ಎಂಬುದನ್ನು ತಿಳಿಸುವ ಹಂತದಲ್ಲಿ
ಹೆಡಗೇವಾರರು ಬಂದರೆ ತಪ್ಪೇನು?
ಹೆಡಗೇವಾರರ ಭಾಷಣ ಪಠ್ಯ ಪುಸ್ತಕಕ್ಕೆ ಸೇರಿಸುವ ವಿಷಯ ತುಂಬಾ ಜೋರಾಗಿಯೇ ಸದ್ದು ಮಾಡುತ್ತಿದೆ. ಹೆಡಗೇವಾರರ ಭಾಷಣ ಸೇರಿಸಿದ್ದು ತಪ್ಪು ಎಂದು ಒಂದು ವಲಯ ಆಕ್ಷೇಪಿಸುತ್ತಿದ್ದರೆ, ತಪ್ಪೇನಿದೆ ಎಂಬುದು ಇನ್ನೊಂದು ಗುಂಪಿ ವಾದ. ಅಷ್ಟಕ್ಕೂ ಬಹುತೇಕರು ತಂತಮ್ಮ ಮೂಗಿನ ನೇರಕ್ಕೆ ವಿಷಯವನ್ನು ಮಂಡನೆ ಮಾಡುತ್ತಿದ್ದಾರೆಯೇ ಹೊರತು, ಇತಿಹಾಸದ ಅವಲೋಕನದ ಅಗತ್ಯ ಹಾಗೂ ಅದರ ಹಿಂದಿನ ಸತ್ಯಾಸತ್ಯ ಚರ್ಚೆಯ ಕೇಂದ್ರವಾಗುತ್ತಿಲ್ಲ.
ಅಷ್ಟಕ್ಕೂ ಇತಿಹಾಸವೆಂದರೆ ಏನು? ಒಂದು ಕಾಲಕ್ಕೆ ಆಗಿ ಹೋದದ್ದೆ? ಗತಿಸಿದ ಘಟನೆಗಳನ್ನು ನಾವು ಮರೆತದ್ದೇ? ಯಾವಾಗಲೋ, ಯಾರೊ ಒಬ್ಬರು ಮಾಡಿದ ಕೆಲಸ, ಕೊಟ್ಟ ಕೊಡುಗೆ, ಘಟಿಸಿದ ಘಟನೆಗಳ ಷ್ಟೆಯೇ? ಯಾವಾಗಲೋ ನಡೆದ ಪ್ರಮುಖ ಘಟನಾವಳಿ, ಗತಿಸಿ ಹೋದ ಪ್ರಮುಖ ವ್ಯಕ್ತಿಗಳು, ಅದರಿಂದ ಈ ಸಮಾಜದ ಮೇಲಾದ ಪರಿಣಾಮ ಹಾಗೂ ಇಂದಿನ ಸನ್ನಿವೇಶದಲ್ಲಿ ಅದು ಬೀರುತ್ತಿರುವ ಪ್ರಭಾವ ಇವೆಲ್ಲವನ್ನೂ ಒಳಗೊಂಡ ಸಮಗ್ರ ಸಂಗತಿಗಳನ್ನು ತಿಳಿದರಿತು ಮುಂದಿನ ಪೀಳಿಗೆಗೆ ಅದರ ಪ್ರಾಮುಖ್ಯವನ್ನು ದಾಟಿಸುವುದಲ್ಲವೇ ನೈಜ ಇತಿಹಾಸದ ಬೋಧನೆ? ಇಲ್ಲ ಅರ್ಥವೇ ಆಗದ ಸಂಗತಿಯೆಂದರೆ ಇತಿಹಾಸವನ್ನು, ಅದರಲ್ಲಿನ ಘಟನಾವಳಿಯನ್ನು, ವ್ಯಕ್ತಿಗಳನ್ನು ಇಂದಿನ ಸಾಮಾಜಿಕ-ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ವಿಭಜಿಸಿ ನೋಡುತ್ತಿರುವುದು.
ಈ ಹಿನ್ನೆಲೆಯಲ್ಲಿ ನಾವು ಮಾಡುತ್ತಿರುವ ಮೊದಲನೇ ತಪ್ಪು, ಇತಿಹಾಸ ಎಂದ ತಕ್ಷಣ ಅವರೇ ಇರಬೇಕು, ಬೇರೆಯವರು ಇರಬಾರದು ಅನ್ನುವ ವಿಲಕ್ಷಣ ನಿಲುವನ್ನು ತಾಳುತ್ತಿರುವುದು. ಕಾಲಕಾಲಕ್ಕೆ ಇತಿಹಾಸದ ಬಗೆಗಿನ ದೃಷ್ಟಿಕೋನ ಬದಲಾಗುತ್ತದೆ ಮತ್ತದು ಬದಲಾಗಲೇಬೇಕು. ಹಾಗೆಯೇ ಅದರ
ಪ್ರಾಮುಖ್ಯವೂ ತಲೆಮಾರು ಸಂದಂತೆಯೇ ಹೆಚ್ಚು-ಕಡಿಮೆ ಆಗಬಹುದು. ಪಾಕಿಸ್ಥಾನ ವಿಭಜನೆ ಮೊನ್ನೆಮೊನ್ನೆಯವರೆಗೂ ಕಾಂಗ್ರೆಸಿಗರಿಂದ ಸಮರ್ಥ ನೀಯ ಸಂಗತಿಯೇ ಆಗಿತ್ತು.
ಈಗಲೂ ವಿಭಜನೆಯನ್ನು ಆ ಕ್ಷಣದ, ಸನ್ನಿವೇಶದ ರಾಜಕೀಯ ಬೆಳವಣಿಗೆ ಎಂದು ಒಪ್ಪಿತವಾಗಬಹುದು. ಆದರೆ ಆ ಸಂದರ್ಭದಲ್ಲಿ ಕೈಗೊಂಡ ಕೆಲ ವೊಂದು ರಾಜತಾಂತ್ರಿಕ ನಿರ್ಧಾರಗಳ ಲೋಪವನ್ನು ಈಗ ಸಮರ್ಥಿಸಿಕೊಳ್ಳುವವರ ಸಂಖ್ಯೆ ಕಡಿಮೆ (ಇದ್ದರೂ ಅದಕ್ಕೆ ಬೆಲೆ ಇಲ್ಲ). ಕಾರಣ ಆ ಇತಿಹಾಸ ತಥಾಕತೀತ ವ್ಯಾಖ್ಯಾನದಿಂದ ಬಹು ದೂರ ಬಂದಿದೆ. ಇನ್ನೂ ಒಂದು ಪ್ರಮುಖ ಸಂಗತಿಯೆಂದರೆ ಅದರಿಂದಾದ ಪರಿಣಾಮದ ಬಿಸಿಯನ್ನೂ ಇಂದಿಗೂ ಭಾರತ ಅನುಭವಿಸುತ್ತಿರುವುದು. ಸಿದ್ಧಾಂತದ ಬುದ್ಧಿಮತ್ತೆಯಡಿಯಲ್ಲಷ್ಟೇ ಅದನ್ನು ಬಹಳ ದಿನ ಮುಚ್ಚಿಟ್ಟುಕೊಳ್ಳಲಾಗಿಲ್ಲ. ಹಾಗೆಯೇ ಸ್ವಾಂತಂತ್ರ್ಯದ ಹೋರಾಟದ ಕಾಲಘಟ್ಟ, ಆಗಿನ ವ್ಯಕ್ತಿಗಳ ನಿಲುವು, ಅಂದಿನ ಬೆಳವಣಿಗೆಗಳನ್ನೂ ಆಯ್ದ ಜನರ ವ್ಯಾಖ್ಯಾನದಡಿಯಲ್ಲೇ ತಿಳಿದು ಕೊಂಡರೆ ಅದು ಹೇಗೆ ವಾಸ್ತವ ಇತಿಹಾಸ ಆದೀತು ಸ್ವಾಮಿ? ಇಂದಿಗೂ ಮಕ್ಕಳು ಏಕೆ ಇಂಥ biased (ಪೂರ್ವಗ್ರಹ/ ಪಕ್ಷಪಾತಿ) ಇತಿಹಾಸದವೇ ಸುತ್ತ ಸುತ್ತಬೇಕು? ಇನ್ನೆಷ್ಟು ವರ್ಷ ಇತಿಹಾಸದ ಪಠ್ಯ ಮೊಘಲ್, ಬ್ರಿಟಿಷ್, ಗಾಂಧಿ, ನೆಹರುಗಳಿಂದಲೇ ತುಂಬ ಬೇಕು? ತಾತ ನೆಟ್ಟ ಆಲದ ಮರಕ್ಕೇ ಯಾಕಿನ್ನೂ ನೇಣು ಹಾಕಿಕೊಳ್ಳ ಬೇಕು? ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಗತಿಸಿದ್ದೆಲ್ಲವೂ ಇತಿಹಾಸವೇ.
ಆಗಿನ ಕಾಲದಲ್ಲಿ ಇದ್ದ ಮೊಹೆಂಜೋದಾರೋ, ಸಿಂಧೂ ಸೇರಿದಂತೆ ಹಲವು ನಾಗರಿಕತೆಗಳು, ಚಕ್ರವರ್ತಿ ಅಶೋಕ, ಚಾಣಕ್ಯ, ಶಕರು, ಚೋಳರು, ಚಾಲುಕ್ಯರು, ಅಮೋಘವರ್ಷ ನೃಪತುಂಗ, ಛತ್ರಪತಿ ಶಿವಾಜಿ ಮಹಾರಾಜ್, ಮೊಘಲರು, ಬ್ರಿಟಿಷರು, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು,
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಆರಂಭಿಕ ದಿನಗಳ ಬೆಳವಣಿಗೆ… ಇನ್ನೂ ಅನೇಕ ಜನ, ಘಟನಾವಳಿಯೂ ಇತಿಹಾಸವೇ.
ವರ್ತಮಾನದ ಬೆಳವಣಿಗೆಗಳು ೫೦ ವರ್ಷದ ನಂತರ ಹೊಸ ಇತಿಹಾಸವಾಗುತ್ತದೆ. ಹಾಗೆ ನೋಡಿದರೆ ಪ್ರತಿದಿನ, ಪ್ರತಿ ಕ್ಷಣವೂ ಇತಿಹಾಸದಲ್ಲಿ ದಾಖಲಾ ಗುತ್ತಲೇ ಬರುತ್ತದೆ; ಬರುತ್ತಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಆಡಳಿತವೂ ಮುಂದಿನ ಇತಿಹಾಸವೇ. ಹಾಗಂತ ರಾಹುಲ್ ಗಾಂಧಿಯನ್ನು, ಅವರ ವಿವೇಚನಾರಾಹಿತ್ಯವನ್ನೋ, ರಾಜಕೀಯ ಅಜ್ಞಾನವನ್ನೋ ಇತಿಹಾಸದಿಂದ ಮುಚ್ಚಿಟ್ಟರೆ ತಪ್ಪಾಗುವುದಿಲ್ಲವೇ? ಕೇವಲ ಒಂದೇ ಒಂದು ಪಂಗಡದವರ, ಸಿದ್ಧಾಂತದವರ ಮಾಹಿತಿ ಇತಿಹಾಸದಲ್ಲಿ ದಾಖಲಾಗಬೇಕು.
ಅದನ್ನೇ ಮುಂದಿನ ತಲೆಮಾರು ಅರಿಯಬೇಕು ಎನ್ನುವಂಥ ಮೂರ್ಖತನಕ್ಕಿಂತ ಮಿಗಿಲಾಗಿದ್ದೇನಿದೆ? ಹೇಳಬೇಕೆಂದರೆ ನಮ್ಮ ದೇಶದಲ್ಲಿ ಹುಟ್ಟಿದ ಪ್ರತೀ ಪಕ್ಷ, ಸಂಘಟನೆ, ರಾಜಕೀಯ ನಾಯಕರು, ಚಿಂತಕರು, ದೊಡ್ಡ ದೊಡ್ಡ ಹೋರಾಟಗಳ ಬಗ್ಗೆ ಎಲ್ಲರೂ ತಿಳಿಯಬೇಕು. ತಿಳಿದರವರು ಯಾರನ್ನಾದರೂ ಬೆಂಬಲಿಸಬಹುದು, ಬೇಡದಿದ್ದರೆ ಬಿಡಬಹುದು. ಪಠ್ಯ ಪುಸ್ತಕ ಮಾಡುವವರಿಗೆ ಬೇಕಾದವರನ್ನು ಮಾತ್ರ ಮಕ್ಕಳು ತಿಳಿಯಬೇಕೆನ್ನುವುದು ದೊಡ್ಡ ಅಪರಾಧವೇ ಸರಿ.
ಬಲಪಂಥೀಯ, ಎಡ ಪಂಥಿಯ, ಸೆಕ್ಯುಲರ್, ಕಮ್ಯುನಿಷ್ಟ್ ಇನ್ನೂ ಎಷ್ಟು ಸಿದ್ಧಾಂತಗಳಿವೆಯೋ ಅವುಗಳೆಲ್ಲದರ ಬಗ್ಗೆ ತಿಳಿಯಲಿ ಬಿಡಿ. ಮಕ್ಕಳು ಎಷ್ಟು ಸಿದ್ಧಾಂತಗಳ ಬಗ್ಗೆ, ವಿಚಾರಧಾರೆಗಳ ಬಗ್ಗೆ ತಿಳಿಯುತ್ತಾರೋ, ಅಷ್ಟು ದೇಶದ ಭವಿಷ್ಯಕ್ಕೆ ಒಳಿತಲ್ಲವೇ? ಹೇಳಿ ಕೇಳಿ ಭವಿಷ್ಯ ನಿರ್ಧಾರವಾಗುವುದು ಕೇವಲ ಇತಿಹಾಸದಿಂದಷ್ಟೇ ಅಲ್ಲವಲ್ಲ? ಆದರೆ ಇತಿಹಾಸದ ಪಾಠ ಕಲಿಯುವುದಕ್ಕಿಂತ ಮುಖ್ಯ ಇತಿಹಾಸದಿಂದ ಕಲಿಯುವ ಪಾಠ ದೊಡ್ದು. ಕೆಲವು ಜನ ಹೇಳುವುದೇನೆಂದರೆ, ಹೆಡಗೇವಾರರು ಆರೆಸ್ಸೆಸ್ ಸ್ಥಾಪಕ, ಅವರು ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದ್ದರು!
ಅಂತ. ಆದರೆ ಅದನ್ನು ಹೇಳುವವರು ಕಾಂಗ್ರೆಸಿನ ಬಗ್ಗೆ ಏಕೆ ಮಾತಾಡುತ್ತಿಲ್ಲ? ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೋಸ್ಕರ ಹುಟ್ಟಿರಬಹುದು ನಿಜ. ಆದರೆ ಇವತ್ತಿಗೂ ಅದು ರಾಜಕೀಯ ಪಕ್ಷವಾಗಿ ದೇಶದಲ್ಲಿ ಕೆಲಸಮಾಡುತ್ತಿದೆ. ಗಾಂಧಿ-ನೆಹರು ಹೆಸರು ಹೇಳಿಕೊಂಡು ಇನ್ನೂ ಕಾಂಗ್ರೆಸಿಗರು ರಾಜಕೀಯ
ಮಾಡುತ್ತಿದ್ದಾರೆ. ಹಾಗಿದ್ದರೆ ಗಾಂಧಿ ನೆಹರು ಬಗ್ಗೆ ಕಲಿಯುವುದು ಒಂದು ರಾಜಕೀಯ ಸಿದ್ಧಾಂತದ ಕಲಿಕೆ ಆಗುವುದಿಲ್ಲವೇ? ಎಲ್ಲ ದೊಡ್ಡ ದೊಡ್ಡ ಜನಗಳಿಗೂ, ಎಲ್ಲ ನಾಯಕರಿಗೂ ಅವರದೇ ಆದ ಒಂದು ಸಿದ್ಧಾಂತ ಇರುತ್ತಿತ್ತು. ಒಂದು ಸಂಘಟಣೆ ಅಥವಾ ಅನುಯಾಯಿಗಳು ಇದ್ದೇ ಇರುತ್ತಾರೆ.
ಅವರ ಸಿದ್ಧಾಂತಗಳು ಇಷ್ಟವಾಗಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಧೂಷಿಸುವುದು, ಅವರ ಬಗ್ಗೆ ಕಲಿಯಲೇಬಾರದು ಎನ್ನುವುದು ವೈಚಾರಿಕ ಫ್ಯಾಸಿಸಂ ಅಲ್ಲದೆ ಇನ್ನೇನು? ಖರ್ಗೆ, ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ ಥರಹದ ಜನರು ಪ್ರತಿಪಾದಿಸುತ್ತಿರುವುದು ಇಂತಹ ಫ್ಯಾಸಿಸಂ! ಇಂಥ ಫ್ಯಾಸಿಸ್ಟ್ಗಳು ಹೆಳಿದ್ದಷ್ಟೇ ಇತಿಹಾಸವಲ್ಲ. ಅದನ್ನಷ್ಟೇ ಕಲಿಯಬೇಕಿಲ್ಲ. ನೆನಪಿಡಿ, ಕಾಲ ಬದಲಾಗಿದೆ. ಭಾರತ ಬದಲಾಗಿದೆ; ಪಠ್ಯವೂ ಬದಲಾಗಬೇಕು.
ಒಂದೇ ಬದಿಯ ಇತಿಹಾಸ: ಕೆಲವರ ಪ್ರಕಾರ ಟಿಪ್ಪುವಿನ (ವೈಭವಿಕರಣ) ಬಗ್ಗೆ ಪಠ್ಯದಲ್ಲಿ ಕಡಿಮೆ ಮಾಡಿದ್ದು ತಪ್ಪು!.
ಇದರಿಂದಲೇ ಕೆಲವರ ನೆಮ್ಮದಿಗೆಟ್ಟಿರಬಹುದೇನೋ? ನಮ್ಮ ಕೆಲ ಇತಿಹಾಸಕಾರ(?)ರು ಹೇಳಬೇಕಾದ್ದನ್ನು ಕಡಿಮೆ ಹೇಳಿ, ಬೇಡವಾದದ್ದನ್ನು ಜಾಸ್ತಿ ಮಾಡಿದ್ದಕ್ಕೆ ಈ ರೀತಿಯ ತಪ್ಪು(?!) ಗಳಾಗಿರುತ್ತವೆ. ಅಂದರೆ ಟಿಪ್ಪುವನ್ನು ಮೈಸೂರಿನ ಹುಲಿ ಎಂದರು, ಧರ್ಮ ಸಹಿಷ್ಣು ಎಂದರು, ಹಲವಾರು ದೇವ ಸ್ಥಾನಗಳನು ಕಟ್ಟಿಸಿದ, ಹಾಗೆ, ಹೀಗೆ ಏನೇನೋ ಹೇಳಿದರು. ಆದರೆ,ದೀಪಾವಳಿ ಸಮಯದಲ್ಲಿ ಮೇಲುಕೋಟೆ ಅಯ್ಯಂಗಾರರ ಹತ್ಯಾಕಾಂಡ, ಕೊಡಗಿ ನಲ್ಲಿ ನಡೆದ ಸಾಮೂಹಿಕ ಮತಾಂತರ ಹಾಗೂ ದೇವಸ್ಥಾನಗಳ ನಾಶದ ಬಗ್ಗೆ ಪಠ್ಯಗಳಲ್ಲಿ ಈವರೆಗೆ ಇಲ್ಲವೇ ಇಲ್ಲ ಏಕೆ? ಇದು ಇತಿಹಾಸದ ಭಾಗವಲ್ಲವೇ? ಇದನ್ನೂ ಮುಂದಿನ ತಲೆಮಾರು ತಿಳಿದಿರಬೇಕಲ್ಲವೇ?
ಏನಿದೆ ಪಠ್ಯದಲ್ಲಿ ಅಳವಡಿಸಿದ ಭಾಷಣದಲ್ಲಿ ?
‘ಜನ, ಜೀವನ, ಹಾವ, ಭಾವ ಎಲ್ಲವೂ ಬದಲಾಗತ್ತಿರುತ್ತದೆ. ನಾವು ಆದರ್ಶವಾಗಿ ಇಟ್ಟುಕೊಂಡ ಮನುಷ್ಯನೂ ಬದಲಾಗಬಹುದು ಅಥವಾ ನಮಗೆ ಇಷ್ಟವಾಗದ ಯಾವುದೇ ಕೃತ್ಯವನ್ನೂ ಮಾಡಿರಬಹುದು. ಹಾಗಂತ ನಾವು ಪ್ರತೀ ಸಲ ಹೊಸ ಹೊಸ ಆದರ್ಶ ಮನುಷ್ಯನನ್ನು ಹುಡುಕಿಕೊಂಡು ಹೋಗುವುದು ಎಷ್ಟು ಸಾಧ್ಯ?’ ‘ನಾವು ವಿಗ್ರಹಗಳನ್ನು ಆರಾಽಸುತ್ತೇವೆ. ದೇವರನ್ನು ಪೂಜಿಸುತ್ತೇವೆ.
ಹೋಮ, ಹವನ, ಯಜ್ಞ ಯಾಗಾದಿಗಳನ್ನೂ ಮಾಡುತ್ತೇವೆ. ಆದರೆ ಯಾರೂ ದೇವರ ತತ್ವಗಳನ್ನು ಪಾಲಿಸುವುದಿಲ್ಲ. ಅವರನ್ನು ಪೂಜಿಸುವುದರಿಂದ ಲಾಭ ಬರುವುದೋ ಬಿಡುವುದೋ ಆದರೆ, ಅವರ ತತ್ವಗಳನ್ನು ಪಾಲಿಸಿದಾಗಂತೂ ಲಾಭ ಖಂಡಿತವಾಗಿರುತ್ತೆ’ ‘ನಾವು ಯಾರ ಗುಣಗಳನ್ನ ಅನುಸರಿಸಲು ಸಾಧ್ಯವೋ ಅಂಥ ನಿರ್ದೋಷ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ. ಇನ್ನೂ ಪೂರ್ತಿಯಾಗಿ ಅರಳದ ಮೊಗ್ಗುಗಳ ಬದಲು ಪೂರ್ಣ ಅರಳಿದ ಪುಷ್ಪಗಳು ನಮ್ಮ ಆದರ್ಶವಾಗಬೇಕು. ಏಕೆಂದರೆ ಅರೆಬಿರಿದ ಮೊಗ್ಗುಗಳಲ್ಲಿ ಅಕಸ್ಮಾತ್ ಕ್ರಿಮಿಕೀಟಗಳು ಸೇರಿದರೆ ಮುಂದೆ ಅವು ಪೂರ್ಣ ವಿಕಸಿತವಾಗ ಲಾರವು.
ಯಾವ ಪುಷ್ಪವು ಪೂರ್ತಿ ಅರಳಿದೆಯೋ, ನಿಸ್ಸಂದೇಹವಾಗಿಯೂ ಶುದ್ಧವಾಗಿ ಕ್ರಿಮಿರಹಿತವಾಗಿದೆಯೋ ಮತ್ತು ಯಾವುದರ ಒಳಹೊರಗನ್ನು ಚೆನ್ನಾಗಿ
ಕಾಣಬಹುದೊ ಅಂಥ – ಪುಷ್ಪವನ್ನೇ ಆದರ್ಶವಾಗಿ ಸ್ವೀಕರಿಸುವುದರಿಂದ ನಮ್ಮ ಕಾರಕುಸುಮದಲ್ಲಿಯೂ ನವಚೈತನ್ಯದ ಸೊಬಗು ತುಂಬಿಬಂದೀತು. ಇದನ್ನೇ ಬೇರೆ ಪದಗಳಲ್ಲಿ ಹೇಳುವುದಾದರೆ, ಯಾರ ಜೀವನಕುಸುಮವು ಪ್ರಸನ್ನವಾಗಿ ಪೂರ್ತಿಯಾಗಿ ಅರಳಿದೆಯೋ ಅಕಲಂಕವಾಗಿದೆಯೋ ನಿರ್ಭಿಡೆ ಯಿಂದ ಸೂರ್ಯಪ್ರಕಾಶಕ್ಕೆ ಮುಖಮಾಡಿ ನಿಂತಿದೆಯೋ, ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು’.
ಆರೆಸ್ಸೆಸ್ ಏಕೆ ಬೇಡ?
ಎಲ್ಲರಿಗೂ ತಿಳಿದ ಹಾಗೆ ಆರೆಸ್ಸೆಸ್ ವಿಶ್ವದ ಅತಿ ದೊಡ್ಡ ಸಂಘಟನೆ. ಅದರ ಹಲವಾರು ಸೋದರ ಸಂಸ್ಥೆಗಳು, ಅದರಿಂದ ಪ್ರೇರಿತವಾಗಿ ಹುಟ್ಟಿದ ಸಂಸ್ಥೆಗಳು ಜನರಿಗಾಗಿ, ವಿದ್ಯಾರ್ಥಿಗಳಿಗಾಗಿ, ಪರಿಸರಕ್ಕಾಗಿ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇನ್ನು ಎಷ್ಟೋ ಸಲ ಪ್ರಾಕೃತಿಕ ವಿಕೋಪ ಗಳಾದಾಗ, ಜನ ಜೀವನ ಅಸ್ತವ್ಯಸ್ತವಾದಾಗ ಆರೆಸ್ಸೆಸ್ನ ಸ್ವಯಂ ಸೇವಕರು ಸೇವೆಗೆ ನಿಲ್ಲುವುದನ್ನು ನೋಡಿದ್ದೇವೆ.
ಅಂಥ ಆರೆಸ್ಸೆಸ್ ಹಿನ್ನೆಲೆಯಿಂದ ಬಂದವರೇ ದೇಶದ ಪ್ರಧಾನಿ, ರಾಷ್ಟ್ರಪತಿ ಹುದ್ದೆಗಳನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆಂದರೆ ಅದನ್ನು ಸ್ಥಾಪಿಸಿದ ಹೆಡಗೇವಾರರ ಜೀವನ ಶೈಲಿ, ಚಿಂತನೆಗಳನ್ನು ಮುಮದಿನ ತಲೆಮಾರು ತಿಳಿಯುವುದು ಮುಖ್ಯವಲ್ಲವೇ? ಸಿದ್ಧಾಂತ ಏನೇ ಇರಲಿ, ಅವರ ವಿಚಾರಗಳಿಂದ ಲಕ್ಷಾಂತರ ಜನ ಪ್ರೇರಿತರಾಗಿ ಸಂಘಕ್ಕಾಗಿ, ದೇಶಕ್ಕಾಗಿ ದುಡಿಯುತ್ತಿದ್ದಾರೆಂಬುದು ಸತ್ಯವಲ್ಲವೇ? ಅಂಥವರೊಬ್ಬರು ಸ್ಥಾಪಿಸಿದ ಸಂಘಟನೆಯ ಪ್ರಚಾರಕರಾಗಿ ನಯಾಪೈಸೆ ಲಾಭವಿಲ್ಲದೇ ಹಗಲಿರುಳು ಎನ್ನದೆ ಮನೆ, ಕೆಲಸ ಬಿಟ್ಟು ದೇಶ ಸ್ವಯಂಸೇವೆ ಮಾಡುತ್ತಿರುವುದು ಕಂಡಿಲ್ಲವೇ? ಅದೇ ಆರೆಸ್ಸೆಸ್ನ ವರ್ಗಗಳಿಗೆ ಮಹಾತ್ಮ ಗಾಂಧಿ ಭೇಟಿ ನೀಡಿ ಅಸ್ಪೃಷ್ಯತೆಯ ಲವಲೇಶವೂ ಇಲ್ಲದಿರುವುದನ್ನು ಕಂಡು ಪ್ರೇರಿತನಾದೆ ಎಂದಿದ್ದು ಗೊತ್ತಿಲ್ಲವೇ? 1962ನೇ ಯುದ್ಧದಲ್ಲಿ ಆರೆಸ್ಸೆಸ್ ಮಾಡಿದ ಸೇವೆಯನ್ನು ಗೌರವಿಸಿ ಗಣರಾಜ್ಯೋತ್ಸವದಲ್ಲಿ ಪಥಸಂಚಲನದಲ್ಲೂ ಅವಕಾಶ ಮಾಡಿ ಕೊಟ್ಟು ಗೌರವ ನೀಡಲಿಲ್ಲವೇ? ಯಾರೋ, ಯಾವುದೋ ದೇಶದಲ್ಲಿ ಸ್ಥಾಪಿಸಿದ ಕ್ರೈಸ್ತ ಮಿಷನರಿಯಡಿ ಭಾರತಕ್ಕೆ ಬಂದು ಸೇವೆ ಸಲ್ಲಿಸಿದ ಮದರ್ ಥೆರೇಸಾರಂಥವರನ್ನು ನಾವು ಇತಿಹಾಸದ ಪಠ್ಯದಲ್ಲಿ ಕಲಿಯಬುದಾದರೆ, ನಮ್ಮದೇ ನೆಲದಲ್ಲಿ ಹುಟ್ಟಿದ ರಾಷ್ಟ್ರೀಯ ಸೇವಾ ಸಂಘಟನೆಯ ಸ್ಥಾಪಕರ ಬಗೆಗೆ ತಿಳಿಯುವುದರಲ್ಲಿ ತಪ್ಪೇನಿದೆ?