Sunday, 15th December 2024

ಅವಸರದಲ್ಲಿ ಇಂಡಿಗೆ ಬಂದು ಹೋಗುತ್ತಿದ್ದ ದಿನಗಳು…

ಶಂಕರ್‌ ಬಿದರಿ- ಸತ್ಯಮೇವ ಜಯತೆ- ಭಾಗ ೧೫

ತರಬೇತಿಯ ಸಮಯದಲ್ಲಿ ರಜೆಯೇ ದೊರಕುತ್ತಿರಲಿಲ್ಲ. ಆದ್ದರಿಂದ ಸಿಗುತ್ತಿದ್ದ ಒಂದು ಭಾನುವಾರ ಹೈದರಾಬಾದ್‌ ನಿಂದ ಇಂಡಿಗೆ ಬಂದು, ಪುನಃ ಅದೇ ದಿನ ಸಂಜೆ ಇಂಡಿಯಿಂದ ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೈದರಾ ಬಾದ್‌ಗೆ ಬರುತ್ತಿದ್ದೆನು. ರೈಲಿನಲ್ಲಿಯೇ ಬೆಳಗ್ಗಿನ ನಾಲ್ಕು ಗಂಟೆಗೆ ಶೇವಿಂಗ್ ಮಾಡಿಕೊಂಡು, ನೇರವಾಗಿ ಕವಾಯತು ಮೈದಾನಕ್ಕೆ ಹಾಜರಾಗುತ್ತಿದ್ದೆ. ಒಂದು ವರ್ಷದಲ್ಲಿ ಈ ರೀತಿ ಸುಮಾರು ಏಳೆಂಟು ಸಲ ಇಂಡಿಗೆ ಹೋಗಿ ಬಂದೆನು.

ಶನಿವಾರ ಸಾಯಂಕಾಲ ಬಸ್ ಮೂಲಕ ಲಕಡಿಕಪೂಲ್‌ವರೆಗೆ ಹೋಗಿ ಅಲ್ಲಿಂದ ಹೈದರಾಬಾದ್ ನಗರ ಸುತ್ತಾಡಲು ಹೋಗುತ್ತಿದ್ದೆವು. ಮತ್ತೆ ರಾತ್ರಿ ಒಂಬತ್ತು ಗಂಟೆಗೆ ಮರಳಿ ಬರುತ್ತಿದ್ದೆವು. ನಮಗೆ ರಜೆಯೇ ದೊರಕುತ್ತಿರಲಿಲ್ಲ. ಆದರೂ ನಾನು ಧೈರ್ಯ ಮಾಡಿ ಶನಿವಾರ ಸಾಯಂಕಾಲ ಹೈದರಾಬಾದ್‌ಗೆ ಹೋದಾಗ ನಾಮಪಲ್ಲಿ ಸ್ಟೇಷನ್‌ಗೆ ಹೋಗಿ, ಅಲ್ಲಿಂದ ಬಾಂಬೆ ಎಕ್ಸ್‌ಪ್ರೆಸ್ ರೈಲು ಹಿಡಿದು ರಾತ್ರಿ ಹುಟಗಿ ಜಂಕ್ಷನ್‌ಗೆ ಬರುತ್ತಿದ್ದೆ ಬೆಳಗ್ಗೆ ಹುಟಗಿ ಸ್ಟೇಷನ್‌ನಿಂದ ನಾನು ಸೊಲ್ಲಾಪುರ-ಬಿಜಾಪುರ ರೈಲು ಹಿಡಿದು ಬೆಳಗ್ಗೆ ಐದಕ್ಕೆ ಇಂಡಿ ತಲುಪುತ್ತಿದ್ದೆನು.

ಸಾಯಂಕಾಲದವರೆಗೆ ಇಂಡಿಯಲ್ಲಿದ್ದು ರಾತ್ರಿ ಮತ್ತೆ ಏಳು ಗಂಟೆಗೆ ಬಿಜಾಪುರ-ಸೋಲಾಪುರ ರೈಲಿನಲ್ಲಿ ಹುಟಗಿವರೆಗೆ ಬಂದು ಹುಟಗಿಯಿಂದ ಮತ್ತೆ ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೈದರಾಬಾದ್‌ಗೆ ಬರುತ್ತಿದ್ದೆನು. ರೈಲಿನಲ್ಲಿಯೇ ಬೆಳಗ್ಗಿನ ನಾಲ್ಕು ಗಂಟೆಗೆ ಶೇವಿಂಗ್ ಮಾಡಿಕೊಂಡು ರೈಲು ಇಳಿಯುತ್ತಲೇ ಒಂದು ಆಟೋರಿಕ್ಷಾ ಹಿಡಿದು ಸೋಮವಾರ ಬೆಳಗ್ಗೆ ಐದು ಗಂಟೆ ಒಳಗಾಗಿ ಅಕಾಡೆಮಿಗೆ ಬರುತ್ತಿದ್ದೆ. ಈ ರೀತಿ ಇಂಡಿಗೆ ಹೋಗುವಾಗ ಒಂದು ಏರ್ ಬ್ಯಾಗ್‌ನಲ್ಲಿ ನನ್ನ ಶಾರೀರಿಕ ಕವಾಯತಿನ ಬಟ್ಟೆಗಳನ್ನು ನಮ್ಮ ಅಕಾಡೆಮಿಯ ಗೇಟ್ ಪಕ್ಕದಲ್ಲಿದ್ದ ಗಾರ್ಡನ್ ನಲ್ಲಿ ಇಟ್ಟು ಹೋಗುತ್ತಿದ್ದೆನು.

ಅಕಾಡೆಮಿ ತಲುಪುತ್ತಿದ್ದಂತೆ ಗಾರ್ಡನ್‌ಗೆ ಹೋಗಿ ಈ ಸಮವಸ್ತ್ರ ಧರಿಸಿ ನೇರವಾಗಿ ಕವಾಯತು ಮೈದಾನಕ್ಕೆ ಬೆಳಗ್ಗೆ ೫.೫೦ ರೊಳಗಾಗಿ ಹಾಜರಾಗುತ್ತಿದ್ದೆ. ಒಂದು ವರ್ಷದ ಅವಧಿಯಲ್ಲಿ ಈ ರೀತಿ ರವಿವಾರ ರಜೆ ಉಪಯೋಗ ಮಾಡಿಕೊಂಡು ನಾನು ಸುಮಾರು ಏಳೆಂಟು ಸಲ ಇಂಡಿಗೆ ಹೋಗಿ ಬಂದೆನು. ನಾವು ತರಬೇತಿ ಪ್ರಾರಂಭಿಸಿದಾಗ ಬಿಹಾರ ರಾಜ್ಯದ ಆರ್.ಡಿ. ಸಿಂಗ್ ಎಂಬುವವರು ಅಕಾಡೆಮಿ ನಿರ್ದೇಶಕರಾಗಿದ್ದರು. ಪಿ.ಡಿ. ಮಾಳವೀಯ ಮತ್ತು ಎಂ.ಐ.ಎಸ್. ಅಯ್ಯರ್ ಎಂಬುವವರು  ಉಪ ನಿರ್ದೇಶಕರಾಗಿದ್ದರು. ಆದರೆ ಅಕಾಡೆಮಿಯಲ್ಲಿ ತರಬೇತಿಯಲ್ಲಿದ್ದ ಅಧಿಕಾರಿಗಳು ಅತ್ಯಂತ ಭಯಭಕ್ತಿಯಿಂದ ಗೌರವಿಸುತ್ತಿದ್ದ ಅಧಿಕಾರಿ ಎಂದರೆ ಕೆ. ಮಾಯನ್. ಅವರು ಸಿ.ಆರ್.ಪಿ.ಎಫ್. ನಲ್ಲಿ ಕಮಾಂಡೆಂಟ್ ದರ್ಜೆಯ ಅಧಿಕಾರಿಯಾಗಿದ್ದು, ಅಕಾಡೆಮಿ ಯಲ್ಲಿ ಹೊರಾಂಗಣ ತರಬೇತಿಯ ಪ್ರಭಾರದಲ್ಲಿದ್ದರು.

ಇದೇ ಅವಧಿಯಲ್ಲಿ ನಮ್ಮನ್ನು ನಾಲ್ಕು ತಂಡಗಳಾಗಿ ಭಾಗ ಮಾಡಿ ಭಾರತ ದರ್ಶನಕ್ಕೆ ಕರೆದುಕೊಂಡು ಹೋದರು. ನಾನು ಭಾರತ ದರ್ಶನದಲ್ಲಿ ಉತ್ತರ ಭಾರತವನ್ನು ಆಯ್ಕೆ ಮಾಡಿಕೊಂಡೆನು. ಈ ಕಾರ್ಯಕ್ರಮದ ಅಂಗವಾಗಿ, ನಾನು ಆಗ್ರಾ ಮತ್ತು ಅದರ ಹತ್ತಿರ ಇರುವ ಬಟೇಶ್ವರ (ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಥಳ ಮತ್ತು ಚಂಬಲ್ ಕಣಿವೆಯ ಡಕಾಯಿತರ ಸ್ಥಳವೂ ಹೌದು), ಚಂಡೀಗಡ, ಶಿಮ್ಲಾ, ಜಮ್ಮು ಮತು ಶ್ರೀನಗರಗಳಿಗೆ ಭೇಟಿ ನೀಡಿದೆವು.

ಭಾರತ ದರ್ಶನದ ವೇಳೆ ಮೊದಲ ಬಾರಿಗೆ ನಾನು ವಿಮಾನದಲ್ಲಿ ಪ್ರಯಾಣ ಮಾಡಿದೆನು. ಅದು ಜಮ್ಮುವಿನಿಂದ ಶ್ರೀನಗರಕ್ಕೆ. ಹಾಗೆಯೇ ಶ್ರೀನಗರದಿಂದ ಜಮ್ಮುವಿಗೆ ವಿಮಾನದಲ್ಲಿಯೇ ಮರಳಿದೆನು. ಆರಂಭದಲ್ಲಿ ಸಾಕಷ್ಟು ಕಠಿಣ ಎನಿಸಿದರೂ ಪೊಲೀಸ್ ಸೇವೆಯ ತರಬೇತಿಗೆ ನಾನು ಹೊಂದಿಕೊಂಡೆನು. ಈ ಅವಧಿಯಲ್ಲಿ, ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಗಳನ್ನು ತರಲು ಉದ್ದೇಶಿಸಿ ರಚಿಸಲಾದ ಧರ್ಮವೀರ್ ಅವರ ನೇತೃತ್ವದ ಆಯೋಗವು ಕಾರ್ಯನಿರ್ವಹಿಸುತ್ತಿತ್ತು. ಈ ಆಯೋಗದ ಶಿಫಾರಸುಗಳನ್ನು ರಾಜ್ಯ ಮತ್ತು ಒಕ್ಕೂಟ ಸರಕಾರಗಳು ಜಾರಿಗೆ ತರುತ್ತವೆ ಎಂಬ ಹೆಚ್ಚಿನ ನಿರೀಕ್ಷೆ ನಮ್ಮ ತಂಡದ ಅಧಿಕಾರಿಗಳಿಗೆ ಇತ್ತು.

ಈಗ ಧರ್ಮವೀರ್ ಆಯೋಗದವರು ವರದಿ ಸಲ್ಲಿಸಿ ೪೧ ವರ್ಷಗಳು ಗತಿಸಿಹೋಗಿವೆ. ಆದರೂ ಈ ಆಯೋಗದ ಯಾವುದೇ ಶಿಫಾರಸುಗಳನ್ನು ಯಾವುದೇ ರಾಜ್ಯದಲ್ಲಾಗಲಿ ಕೇಂದ್ರ ಸರಕಾರವಾಗಲಿ ಸಂಪೂರ್ಣವಾಗಿ ಜಾರಿಗೆ ತಂದಿಲ್ಲ ಎಂಬುದು
ವಿಷಾದದ ಸಂಗತಿ. ನಮ್ಮ ತರಬೇತಿಯು ೧೯೭೯ಕ್ಕೆ ಮುಗಿಯಿತು. ನಮ್ಮ ದೀಕ್ಷಾಂತ ಕವಾಯತಿಗೆ (ಪಾಸಿಂಗ್ ಔಟ್ ಪರೇಡ್) ಆಗ ದೇಶದ ಉಪಪ್ರಧಾನಿ ಮತ್ತು ಗೃಹಮಂತ್ರಿಗಳಾಗಿದ್ದ ಯಶವಂತ ರಾವ್ ಚವ್ಹಾಣ್ ಅವರು ಆಗಮಿಸಿದ್ದರು. ನನ್ನನ್ನು ಅವರ ಬೆಂಗಾವಲು ಅಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು.

ಇದರಿಂದಾಗಿ ಅವರೊಂದಿಗೆ ಸಮೀಪದಿಂದ ವ್ಯವಹರಿಸುವ ಅವಕಾಶ ನನಗೆ ದೊರೆಯಿತು. ಈ ಕವಾಯತು ಮುಗಿದ ಮೇಲೆ
ನಮ್ಮನ್ನು ದೇಶದ ಗಡಿಭಾಗಗಳಲ್ಲಿದ್ದ ವಿವಿಧ ಸೇನಾ ಘಟಕಗಳಿಗೆ ಹದಿನೈದು ದಿನ ಮಿಲಿಟರಿ ಅಟ್ಯಾಚ್‌ಮೆಂಟ್‌ಗೆ ನಿಯುಕ್ತಿ ಗೊಳಿಸಿದರು. ತದನಂತರ ನಮ್ಮ ನಮ್ಮ ರಾಜ್ಯಗಳಿಗೆ ಹೋಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದರು.

ನನಗೆ ಮತ್ತು ನಮ್ಮ ತಂಡದ ಇತರ ಎಂಟು ಜನ ಅಧಿಕಾರಿಗಳನ್ನೂ ಅರುಣಾಚಲ ಪ್ರದೇಶದ ತವಾಂಗ್ ಬೌದ್ಧ ಮಂದಿರ ಸಮೀಪದಲ್ಲಿದ್ದ ೧೩ನೆಯ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಘಟಕಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಅದರಂತೆ ನಾವು ರೈಲಿನ
ಮೂಲಕ ಕೊಲ್ಕತ್ತಾ ಮಾರ್ಗವಾಗಿ ಅಸ್ಸಾಂನ ತೀನ್ ಸುಕಿಯಾಗೆ ಹೋದೆವು. ಆಗ ಪ್ರಯಾಣದಲ್ಲಿ ಜಲ ಪೈಗುರಿ ರೈಲ್ವೆ ನಿಲ್ದಾಣ ದಲ್ಲಿ ಅರಸಿನ ಮಿಶ್ರಿತ ಚಪಾತಿಗಳನ್ನು ಒಳಗೊಂಡಿದ್ದ ತುಂಬಾ ಸ್ವಾದಿಷ್ಟವಾದ ಊಟ ಮಾಡಿದ ನೆನಪು ಇನ್ನೂ ನನ್ನ ಮನಸ್ಸಿ ನಲ್ಲಿ ಹಸಿರಾಗಿದೆ.

ತೀನ್ ಸುಕಿಯಾದಲ್ಲಿ ನಮ್ಮನ್ನು ಎರಡನೇ ಮೌಂಟೇನ್ ಡಿವಿಜನ್ನವರು ಬರಮಾಡಿಕೊಂಡು ನಮ್ಮನ್ನು ಅವರ ಕೇಂದ್ರ ಸ್ಥಾನಕ್ಕೆ ಕರೆದುಕೊಂಡು ಹೋದರು. ನಾವು ರಾತ್ರಿ ಅಲ್ಲಿ ತಂಗಿ ಬೆಳಗ್ಗೆ ನಾವೆಗಳಲ್ಲಿ ಬ್ರಹ್ಮಪುತ್ರಾ ನದಿ ದಾಟಿ, ನಂತರ ಸೈನ್ಯದ ವಾಹನ ಗಳಲ್ಲಿ ಸಾಯಂಕಾಲದವರೆಗೆ ಅರುಣಾಚಲ ಪ್ರದೇಶದಲ್ಲಿ ಅಲ್ಲಾಂಗ್, ಶಿಯಾಂಗ್ ಮಾರ್ಗವಾಗಿ ಜಮ್ಮು ಮತ್ತು ಕಾಶ್ಮೀರ ರೈಫಲ್ ಘಟಕದ ಕೇಂದ್ರ ಸ್ಥಾನಕ್ಕೆ ಹೋಗಿ ತಲುಪಿದೆವು. ಅಲ್ಲಿ ನಮಗೆ ಬಹಳ ರಾಜೋಚಿತವಾದ ಉಪಚಾರವನ್ನು ಮಾಡಲಾಯಿತು. ಎರಡು ವಾರ, ಬೆಳಗ್ಗೆ ಹೊತ್ತಿನಲ್ಲಿ ವಿವಿಧ ಆಯುಧಗಳಿಂದ ಗುಂಡು ಹಾರಿಸುವ ಅಭ್ಯಾಸ, ಗ್ರೆನೇಡ್ ಇತ್ಯಾದಿ ಉಪಯೋಗಿಸುವ ಅಭ್ಯಾಸ ಮಾಡಿಸುತ್ತಿದ್ದರು.

ಒಂದು ಸೈನ್ಯದ ತುಕಡಿಯೊಂದಿಗೆ ಸುಮಾರು ೮-೧೦ ಕಿ.ಮೀ. ಗಸ್ತು ಮಾಡಲು ಕಳುಹಿಸುತ್ತಿದ್ದರು. ಸಾಯಂಕಾಲ ಅವರ ಘಟಕದ ಮೆಸ್‌ನಲ್ಲಿ ಪಾನೀಯ ಮತ್ತು ಊಟ ನೀಡುತ್ತಿದ್ದರು. ಇದೇ ಅವಧಿಯಲ್ಲಿ ನಾನು ಅರುಣಾಚಲಪ್ರದೇಶದ ಸ್ಥಳೀಯ ನಿವಾಸಿ ಯಿಂದ ೧೨ ರುಪಾಯಿಗಳನ್ನು ಕೊಟ್ಟು ಒಂದು ಜಿಂಕೆ ಚರ್ಮವನ್ನು ಖರೀದಿಸಿದೆ. ಈ ಚರ್ಮವನ್ನು ನಾನು ಸುಮಾರು ಹದಿನೈದು ವರ್ಷಗಳ ಕಾಲ ಪೂಜೆಯ ಕಾಲಕ್ಕೆ ಕುಳಿತುಕೊಳ್ಳಲು ಉಪಯೋಗಿಸುತ್ತಿದ್ದೆ.

ಎರಡು ವಾರಗಳ ಆರ್ಮಿ ಅಟ್ಯಾಚ್‌ಮೆಂಟ್ ತರಬೇತಿ ಮುಗಿದ ಮೇಲೆ ನಮ್ಮನ್ನು ಸೈನ್ಯದ ವಾಹನದಲ್ಲಿ ಲಖಿಮಪುರ ಸೈನಿಕ ವಾಯು ನೆಲೆಗೆ ಕರೆದುಕೊಂಡು ಹೋದರು. ಅಲ್ಲಿಂದ ನಮ್ಮನ್ನು ಮಿಲಿಟರಿ ವಿಮಾನವೊಂದರಲ್ಲಿ ಕೊಲ್ಕತ್ತಾ ನಾಗರಿಕ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟರು. ಅಲ್ಲಿಂದ ನಾನು ನಾಗರಿಕ ವಿಮಾನದಲ್ಲಿ ಹೈದರಾಬಾದ್‌ಗೆ ಬಂದೆನು. ಅಲ್ಲಿಂದ ರೈಲಿನಲ್ಲಿ, ನನ್ನ
ಹೆಂಡತಿ ಸೇವೆ ಸಲ್ಲಿಸುತ್ತಿದ್ದ ಇಂಡಿ ಪಟ್ಟಣಕ್ಕೆ ಬಂದೆನು. ಇಲ್ಲಿಂದ ನಾನು ಮೈಸೂರಿನಲ್ಲಿದ್ದ ಪೊಲೀಸ್ ತರಬೇತಿ ಕಾಲೇಜಿಗೆ ರಾಜ್ಯದಲ್ಲಿ ಪಡೆಯಬೇಕಾಗಿದ್ದ ತರಬೇತಿಗೆ ವರದಿ ಮಾಡಿಕೊಳ್ಳಬೇಕಾಗಿತ್ತು. ನಾನು ಇಂಡಿಯಲ್ಲಿ ಒಂದು ವಾರ ತಂಗಿ ನಂತರ ಮೈಸೂರಿಗೆ ಹೊರಟೆನು.

(ಮುಂದುವರಿಯುವುದು)