Sunday, 24th November 2024

ಐಪಿಎಸ್‌ ತರಬೇತಿ ವೇಳೆಯ ಶಿಸ್ತಿನ ಜೀವನ

ಶಂಕರ್‌ ಬಿದರಿ- ಸತ್ಯಮೇವ ಜಯತೆ- ಭಾಗ – ೧೪

13.07.1978ರಂದು ಗುಲ್ಬರ್ಗಾದಿಂದ ಹೊರಟ ನಾನು 15ನೇ ತಾರೀಖಿಗೆ ದೆಹಲಿ ರೈಲ್ವೇ ನಿಲ್ದಾಣ ತಲುಪಿದೆ. ರೈಲ್ವೆ ನಿಲ್ದಾಣ ದಲ್ಲಿ ಊಟ ಮಾಡಿ ನಾನು ದೆಹಲಿಯ ಕಾಶ್ಮೀರ್ ಗೇಟ್ ಹತ್ತಿರವಿದ್ದ ಬಸ್ ನಿಲ್ದಾಣದಿಂದ ಮಸ್ಸೂರಿಗೆ ಬಸ್ ಹತ್ತಲು ಹೋದೆ. ರಾತ್ರಿ ಹತ್ತು ಗಂಟೆಗೆ ಮಸ್ಸೂರಿ ಬಸ್ ಸಿಕ್ಕಿತು. ಈ ಬಸ್ ಬೆಳಗ್ಗೆ ಆರು ಗಂಟೆಗೆ ಮಸ್ಸೂರಿ ತಲುಪಿದೆನು. ಬಸ್ ಇಳಿದು ನನ್ನ ಸಾಮಾನು ಗಳನ್ನು ತೆಗೆದುಕೊಂಡು, ಮನುಷ್ಯರು ಕೈಯಲ್ಲಿ ಎಳೆದುಕೊಂಡು ಹೋಗುವ ರಿಕ್ಷಾದಲ್ಲಿ ಲಾಲ್ ಬಹಾದ್ದೂರ್ ಶಾಸಿ ರಾಷ್ಟ್ರೀಯ ಆಡಳಿತ ತರಬೇತಿ ಕೇಂದ್ರ ತಲುಪಿ ಕರ್ತವ್ಯಕ್ಕೆ ವರದಿ ಮಾಡಿಕೊಂಡೆನು.

ಅಲ್ಲಿ ನನಗೆ ಜಿ.ಬಿ. ಪಂತ್ ಹಾಲ್‌ನ ಮೇಲ್ಭಾಗದಲ್ಲಿ ಉಳಿದುಕೊಳ್ಳಲು ಕೋಣೆ ನೀಡಿ ದರು. ಆ ಕೋಣೆಯಲ್ಲಿ ನಾನು ಮತ್ತು ರಾಜಸ್ಥಾನದಿಂದ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿದ್ದ ರಾಜೀವ್ ಮೆಹರ್ಷಿ (ಒಕ್ಕೂಟ ಸರಕಾರದ ಮಾಜಿ ಗೃಹ  ಕಾರ್ಯದರ್ಶಿ ಮತ್ತು ಈಗ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್) ಇರಬೇಕಾಗಿತ್ತು.

ನಮ್ಮಿಬ್ಬರಿಗೆ ಸ್ನಾನಕ್ಕೆ ಬಿಸಿನೀರು ಇತ್ಯಾದಿ ನೀಡಲು, ನಮ್ಮ ಬಟ್ಟೆಗಳನ್ನು ತೊಳೆಯಲು ಮತ್ತು ಕೋಣೆಯನ್ನು ಸ್ವಚ್ಛವಾಗಿಡಲು ಒಬ್ಬ ಸೇವಕನನ್ನೂ ನೀಡಿದ್ದರು. ಮಸ್ಸೂರಿಗೆ ಬರುವವರೆಗೆ ನಾನು ದಿನಾಲೂ ಎರಡು ಹೊತ್ತು ಲಿಂಗಪೂಜೆ ಮಾಡುತ್ತಿದ್ದೆನು. ಆದರೆ ಮಸ್ಸೂರಿನಲ್ಲಿ ಸಂಜೆ ಬಿಸಿನೀರು ಸಿಗುತ್ತಿರಲಿಲ್ಲ, ಜತೆಗೆ ತೀವ್ರವಾದ ಚಳಿಯೂ ಇತ್ತು. ಹಾಗಾಗಿ ಅಂದಿನಿಂದ ನನ್ನ ಪೂಜೆ ಒಂದು ಹೊತ್ತಿಗೆ ಮಾತ್ರ ಸೀಮಿತವಾಯಿತು. ತರಬೇತಿಯಲ್ಲಿದ್ದ ಎಲ್ಲಾ ಅಧಿಕಾರಿಗಳಿಗೆ ಸುಸಜ್ಜಿತವಾದ ಭೋಜನಾಲಯ ಇತ್ತು. ಅಲ್ಲಿ ಉತ್ತಮ ದರ್ಜೆಯ ಊಟ ಮತ್ತು ತಿಂಡಿ ನೀಡುತ್ತಿದ್ದರು.

ತರಬೇತಿಯಲ್ಲಿ ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವರಮಾನ ತೆರಿಗೆ ಸೇವೆ, ಭಾರತೀಯ ರೈಲ್ವೆ ಸೇವೆ, ಭಾರತೀಯ ಅಂಚೆ ಸೇವೆ ಇತ್ಯಾದಿ ಸೇವೆಗಳಿಗೆ ಸೇರಿದ ಒಟ್ಟು 280 ಮಂದಿ ಅಧಿಕಾರಿಗಳು ಇದ್ದರು. ನಮ್ಮೆಲ್ಲರನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಮೂರು ಸಭಾಂಗಣಗಳಲ್ಲಿ ಒಳಾಂಗಣ ತರಬೇತಿಗಳನ್ನು ನಡೆಸಲಾಗುತ್ತಿತ್ತು. ಒರಿಸ್ಸಾ ರಾಜ್ಯದ ಐಎಎಸ್ ಅಧಿಕಾರಿ ಜುನೇಜಾ ಎಂಬುವವರು ಅಕಾಡೆಮಿಯ ನಿರ್ದೇಶಕರಾಗಿದ್ದರು.

ಕರ್ನಾಟಕದವರೇ ಆದ, ಬಿಹಾರ ರಾಜ್ಯ ಭಾರತೀಯ ಆಡಳಿತ ಸೇವೆ ಸಮೂಹಕ್ಕೆ ಸೇರಿದ ಅಡಿಗ ಎಂಬುವವರು ಜಂಟಿ ನಿರ್ದೇಶಕ ರಾಗಿದ್ದರು. ಅಲಿಘಡದಲ್ಲಿ ಜಿಲ್ಲಾ ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂ. ಸಿ. ಸಕ್ಸೇನಾ, ಅಸ್ಸಾಂ ರಾಜ್ಯದ ವಿ.ಎಸ್. ಜಾಫಾ, ಪಾಸ್ವಾನ್, ಭಟ್ ಎಂಬ ಹಿರಿಯ ಅಧಿಕಾರಿಗಳೂ ಉಪನಿರ್ದೇಶಕರಾಗಿದ್ದರು. ಅದಲ್ಲದೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಗಳಲ್ಲಿ ಪರಿಣತಿ ಪಡೆದಿದ್ದ ವಿವಿಧ ವಿಶ್ವವಿದ್ಯಾಲಯಗಳ ಕೆಲವು ಪ್ರೊಫೆಸರ್‌ಗಳೂ ನಮಗೆ ತರಬೇತಿ ನೀಡುವ ತಂಡದಲ್ಲಿದ್ದರು.

ಈ ಬುನಾದಿ ತರಬೇತಿ ಸಹಿತ ೧೬ ವಾರದ್ದಾಗಿತ್ತು. ಬೆಳಗ್ಗೆ ಹೊತ್ತು ಯೋಗ ಅಥವಾ ವ್ಯಾಯಾಮದಿಂದ ದಿನ ಪ್ರಾರಂಭ ವಾಗುತ್ತಿತ್ತು. ಬೆಳಗ್ಗೆ ಹತ್ತರಿಂದ ಸಾಯಂಕಾಲ ಐದು ಗಂಟೆವರೆಗೆ ಒಳಾಂಗಣ ತರಬೇತಿ ತರಗತಿಗಳು ನಡೆಯುತ್ತಿದ್ದವು. ವಾರದಲ್ಲಿ ಕನಿಷ್ಠ ಮೂರು ದಿನ ಭಾರತ ಸರಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಭೂಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಯ ವಿವಿಧ ಅಧಿಕಾರಿಗಳು, ಆರ್ಥಿಕ ತಜ್ಞರು ಅತಿಥಿ ಉಪನ್ಯಾಸ ನೀಡಲು ಬರುತ್ತಿದ್ದರು.

ವಿರಾಮದ ವೇಳೆ ಮಸ್ಸೂರಿಯಲ್ಲಿ ತಿರುಗಾಟ 

ನಮ್ಮ ಕರ್ನಾಟಕದಿಂದ ನನ್ನ ಜೊತೆ ಭಾರತೀಯ ಆಡಳಿತ ಸೇವೆಯಲ್ಲಿದ್ದ ಶಿವಕುಮಾರ್, ವರಮಾನ ತೆರಿಗೆ ಸೇವೆಯಲ್ಲಿದ್ದ ಗೋಪಾಲಕೃಷ್ಣ, ಪೊಲೀಸ್ ಸೇವೆಯಲ್ಲಿದ್ದ ಶ್ರೀನಿವಾಸನ್ ಇವರೆಲ್ಲರೂ ಸ್ನೇಹಿತರಾದರು. ರಜೆಯ ದಿನಗಳಲ್ಲಿ ನಾವು ಮಸ್ಸೂರಿಗೆ ನಡೆದುಕೊಂಡು ಹೋಗಿ ಅಲ್ಲಿ ಮಾಲ್‌ನಲ್ಲಿ ತಿರುಗಾಡಿಕೊಂಡು, ಅವಶ್ಯವಿದ್ದ ಚಿಕ್ಕಪುಟ್ಟ ವಸ್ತುಗಳನ್ನು ತೆಗೆದುಕೊಂಡು ಬರುತ್ತಿದ್ದೆವು.

ಕೆಲವು ಸಲ ಅಕಾಡೆಮಿಯ ಸಮೀಪದಲ್ಲಿದ್ದ ಟಿಬೆಟಿಯನ್ ಡಾಬಾವೊಂದರಲ್ಲಿ ಮೊಮೊಗಳನ್ನು ತಿಂದು ಚಹಾ ಕುಡಿದು ಬರುತ್ತಿದ್ದೆವು. ಅಲ್ಲಿಯೇ ಕೆಲವು ದಿನ ಸಾಯಂಕಾಲ ಒಂದು ಗಂಟೆ ಗೋಪಾಲಕೃಷ್ಣ ಅವರ ರೂಮಿನಲ್ಲಿ ರಮ್ಮಿ ಆಡುತ್ತಿದ್ದೆವು. ನಮ್ಮ ಜೊತೆ ಸುದೀಪ್ತೊ ರಾಯ್, ಸಿಕ್ಕಿಂನ ಕರ್ಮಾಗ್ಯಾಟ್ಸೊ ಮತ್ತು ಇನ್ನೂ ಹಲವರು ಆಟಕ್ಕೆ ಸೇರುತ್ತಿದ್ದರು. ನಾನು ಕರ್ನಾಟಕ ದಲ್ಲಿ ಕರ್ನಾಟಕ ಆಡಳಿತ ಸೇವೆಯ ತರಬೇತಿ ಪಡೆದಿದ್ದರಿಂದ, ಕರ್ನಾಟಕದ ಆಡಳಿತದ ಬಗ್ಗೆ ನನಗೆ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಇತ್ತು.

ಅಕಾಡೆಮಿಯಲ್ಲಿ ಶಿಕ್ಷಕ ವೃಂದವರಲ್ಲಿಯೂ, ನನ್ನ ಜತೆ ತರಬೇತಿಯಲ್ಲಿದ್ದ ಅಧಿಕಾರಿಗಳಲ್ಲಿಯೂ ಕರ್ನಾಟಕದ ಆಡಳಿತದ ಬಗ್ಗೆ ಮತ್ತು ಕರ್ನಾಟಕ ರಾಜ್ಯ ಸರಕಾರ ದೇವರಾಜ ಅರಸು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯಿದೆ, ಋಣ ಪರಿಹಾರ ಕಾಯಿದೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಪಾರವಾದ ಗೌರವವಿತ್ತು. ಭಾರತೀಯ
ಆಡಳಿತ ಸೇವೆ ಮತ್ತು ಪೊಲೀಸ್ ಸೇವೆಗೆ ಸೇರಿದ ಅಧಿಕಾರಿಗಳಲ್ಲಿ ಬಹಳಷ್ಟು ಜನ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿ ಎಂದು ಆಶಿಸುತ್ತಿದ್ದರು.

ತರಬೇತಿ ವೇಳೆ ಕಲಿತ ಹಲವು ವಿಷಯಗಳು
ತರಬೇತಿಯಲ್ಲಿ ಭಾರತದ ರಾಷ್ಟ್ರೀಯ, ಆರ್ಥಿಕ, ಸಾಂಸ್ಕೃತಿಕ, ಇತಿಹಾಸ ಮತ್ತು ಪರಂಪರೆಯ ಬಗ್ಗೆ, ಸಂವಿಧಾನದ ಬಗ್ಗೆ ಮತ್ತು
ಅರ್ಥವ್ಯವಸ್ಥೆಯ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಈ ತರಬೇತಿಯ ಅವಧಿಯಲ್ಲಿ ನಮ್ಮನ್ನು ಒಂದು ವಾರ ಉತ್ತರ
ಪ್ರದೇಶಧ ಪೂರ್ವ ಭಾಗದಲ್ಲಿದ್ದ ಗಾಜಿಪುರ ಜಿಲ್ಲೆಯ ಒಂದು ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು.
ಮಾರ್ಗ ಮಧ್ಯೆ ನಾವು ಒಂದು ದಿನ ವಾರಣಾಸಿಯಲ್ಲಿ (ಕಾಶಿ) ತಂಗಿದೆವು. ಆ ಒಂದು ದಿನ ಸಾಯಂಕಾಲ ಕಾಶಿ ವಿಶ್ವನಾಥನ
ದರ್ಶನ ಪಡೆಯಲು ನಾವು ತಂಗಿದ್ದ ಸ್ಥಳದಿಂದ ಸೈಕಲ್ ರಿಕ್ಷಾದಲ್ಲಿ ಹೋದೆವು.

ರಿಕ್ಷಾದವನು ನಾವು ದೇವಸ್ಥಾನದ ಹತ್ತಿರ ಇಳಿದಾಗ ಎರಡು ರುಪಾಯಿ ಬಾಡಿಗೆ ಕೇಳಿದನು. ಆಗ ನಮ್ಮ ಜೊತೆಯಲ್ಲಿ ದೀಪಕ್ ಜೈನ್, ‘ನಾವು ಐಎಎಸ್ ಅಧಿಕಾರಿಗಳು ನಮ್ಮಿಂದ ಹೆಚ್ಚುಹಣ ತೆಗೆದುಕೊಳ್ಳಬೇಡ’ ಎಂದು ಹಿಂದಿಯಲ್ಲಿ ಹೇಳಿದನು. ಆಗ ಸೈಕಲ್
ರಿಕ್ಷಾದವನು, ‘ಸಾಬ್, ದೋ ರೂಪ್ಯಾ ಹರ್ ಆದ್ಮೀ ದೇತಾ ಹೈ, ಆಪ್ ಬೀ ದೋ ರೂಪ್ಯಾ ದೀಜಿಯೇ’ (‘ಸಾಹೇಬ್ರೇ, ಎಲ್ಲರೂ ಎರಡು ರುಪಾಯಿ ಕೊಡುತ್ತಾರೆ, ನೀವೂ ಎರಡು ರೂಪಾಯಿ ಕೊಡಿ’) ಎಂದು ದಬಾಯಿಸಿದ. ಆಗ ನಾನು ದೀಪಕ್ ನಿಗೆ ‘ವಾದ ಮಾಡಿ ಪ್ರಯೋಜನವಿಲ್ಲ, ಎರಡು ರು. ಕೊಡೋಣ’ ಎಂದು ಹೇಳಿದೆ.

ಎರಡು ರು. ಕೊಟ್ಟು ದೇವಸ್ಥಾನಕ್ಕೆ ಹೋದೆವು. ಇದೇ ಅವಧಿಯಲ್ಲಿ ನಮ್ಮನ್ನು ವಿವಿಧ ತಂಡಗಳಾಗಿ ವಿಭಾಗಿಸಿ ಬೇರೆ ಬೇರೆ ರಾಜ್ಯಗಳಿಗೆ ಹದಿನೈದು ದಿನ ಟ್ರಕ್ಕಿಂಗ್‌ಗೆ (ಚಾರಣ) ಕರೆದುಕೊಂಡು ಹೋದರು. ನಾನು ಕೇದಾರ, ಬದರಿನಾಥ, ವ್ಯಾಲಿ ಆಫ್ ಫಾವರ್ಸ್ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಹೋಗಿ ಬಂದೆ. ಟ್ರಕ್ಕಿಂಗ್ ನೆಪದಲ್ಲಿ ನನಗೆ ಕೇದಾರನಾಥ ಮತ್ತು ಬದರಿ ನಾಥನ ದರ್ಶನವಾಯಿತು.

ನಮ್ಮೊಂದಿಗೆ ಎಲ್ಲಾ ರಾಜ್ಯಗಳಿಂದ ಅಧಿಕಾರಿ ಮಿತ್ರರೂ ತರಬೇತಿಯಲ್ಲಿದ್ದರು. ಇದರಿಂದ ದೇಶದ ಸಂಸ್ಕೃತಿ, ಭಾಷೆ ಮತ್ತು ಪ್ರದೇಶಗಳ ವೈವಿಧ್ಯತೆಯ ಸ್ಥೂಲ ಪರಿಚಯವಾಯಿತು. ಅದೇ ಪ್ರಕಾರ ವಿವಿಧ ರಾಜ್ಯಗಳಿಗೆ ಸೇರಿದ ವಿವಿಧ ಭಾಷೆ ಮಾತನಾಡುವ ಬೇರೆ ಬೇರೆ ಸೇವೆಗಳಿಗೆ ಸೇರಿದ ಸಮಾನ ವಯಸ್ಕ ಅಧಿಕಾರಿಗಳ ಪರಿಚಯವಾಯಿತು. ಈ ಹದಿನಾರು ವಾರಗಳ ತರಬೇತಿ ಮುಗಿದ ನಂತರ ನಾಗಪುರದಲ್ಲಿದ್ದ ನಾಗರಿಕ ರಕ್ಷಣೆ ಮತ್ತು ಅಗ್ನಿಶಾಮಕ ದಳದ ತರಬೇತಿ ಸಂಸ್ಥೆಯಲ್ಲಿ ಎರಡು ವಾರಗಳ ತರಬೇತಿಗಾಗಿ ಕಳುಹಿಸಿದರು.

ಅಲ್ಲಿಗೆ ವರದಿ ಮಾಡಿಕೊಳ್ಳಲು ಕಾಲಾವಕಾಶ ನೀಡಿದರು. ನಾನು ಈ ಅವಧಿಯಲ್ಲಿ ಮಸ್ಸೂರಿಯಿಂದ ಬರುವಾಗ ನನ್ನ ಹೆಂಡತಿಗೆ ಒಂದು ಉಲ್ಲನ್ ಗೌನ್ ಖರೀದಿಸಿದೆ. ಮಸ್ಸೂರಿಯಿಂದ ನೇರವಾಗಿ ಊರಿಗೆ ಬಂದು ನಾನು ಇಂಡಿಯಲ್ಲಿನ ನನ್ನ ಕುಟುಂಬದವ ರೊಂದಿಗೆ ಮೂರು ದಿನ ತಂಗಿ ನಾಗಪುರಕ್ಕೆ ಹೋದೆನು.

ನಾಗಪುರದಲ್ಲಿ ತರಬೇತಿ ಅಷ್ಟೊಂದು ಕಟ್ಟುನಿಟ್ಟಾಗಿರಲಿಲ್ಲ. ಈ ಎರಡು ವಾರಗಳ ಅವಧಿಯಲ್ಲಿ ನಮಗೆ ಅಗ್ನಿಶಾಮಕ ದಳಗಳ ಅಗ್ನಿಶಮನ ಮಾಡುವ ವಿವಿಧ ಯುಂತ್ರಗಳ ಪರಿಚಯ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಶಮನ ಮಾಡುವ ಬಗ್ಗೆ ಮತ್ತು ನಾಗರಿಕರ ರಕ್ಷಣೆ ವ್ಯವಸ್ಥೆ ಬಗ್ಗೆ ತಿಳಿವಳಿಕೆ ನೀಡಿದರು. ಇದೇ ಅವಧಿಯಲ್ಲಿ ನಮ್ಮ ಜತೆ ಭಾರತೀಯ ಪೊಲೀಸ್ ಸೇವೆಗೆ ಆಯ್ಕೆ ಯಾಗಿದ್ದ ನಾಗ್ಪುರದ ಪ್ರತಿಷ್ಠಿತ ಮನೆತನದ ಶ್ರೀಕಾಂತ್ ಜೀಚಕರ್ ಅವರ ಪರಿಚಯವಾಯಿತು. ಅವರು ಬಹುಮುಖ ಪ್ರತಿಭೆ. ಅವರು ಕಾನೂನು, ವೈದ್ಯಕೀಯ ಶಾಸ್ತ್ರ, ಅರ್ಥಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಸುಮಾರು ಹದಿನೈದು ಪದವಿಗಳನ್ನು ಪಡೆ ದಿದ್ದರು.

ಅವರು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರೂ ಸೇರಿರಲಿಲ್ಲ. ೧೯೭೯ರಲ್ಲಿ ಅವರು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ಕೆಲ ವರ್ಷ ಸೇವೆ ಸಲ್ಲಿಸಿ ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ನಂತರ ಅವರು ಮಹಾರಾಷ್ಟ್ರ ಸರಕಾರದಲ್ಲಿ ಬಹುಕಾಲ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು. ನಾವು ನಾಗಪುರದಲ್ಲಿದ್ದಾಗ ಅವರ ವಿಶಾಲವಾದ ಕಿತ್ತಳೆ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಅದಾದ ಮೇಲೆ ಅವರ ಮನೆಯಲ್ಲಿ ಭೋಜನದ ಆತಿಥ್ಯವನ್ನೂ
ನೀಡಿದ್ದರು. ಪ್ರತಿಭಾವಂತ, ಜನಸೇವೆಗೆ ಬದ್ಧರಾಗಿದ್ದ ಶ್ರೀಕಾಂತ್ ಅವರು ಸುಮಾರು 35-36ನೇ ವಯಸ್ಸಿನಲ್ಲಿಯೇ ರಸ್ತೆ ಅಪಘಾತದಲ್ಲಿ ನಿಧನರಾದರು.

ಅವರ ನಿಧನದ ಸುದ್ದಿ ನನಗೆ ಬಹಳ ಆಘಾತವನ್ನುಂಟು ಮಾಡಿತು. ನಾಗಪುರದಲ್ಲಿ ನಮ್ಮ ತರಬೇತಿ ಮುಗಿದ ಮೇಲೆ ಮತ್ತೆ ಒಂದು ವಾರ ಕಾಲಾವಕಾಶ ನೀಡಿ ಹೈದರಾಬಾದ್‌ನಲ್ಲಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆ ಮಿಯಲ್ಲಿ ಒಂದು ವರ್ಷ ಮೂಲಭೂತ ತರಬೇತಿಗೆ ವರದಿ ಮಾಡಿಕೊಳ್ಳಲು ಸೂಚಿಸಲಾಯಿತು. ವರದಿ ಮಾಡಿಕೊಳ್ಳಲು ಒಂದು ವಾರ ಕಾಲಾವಕಾಶ ನೀಡಿದ್ದರು. ನಾನು ಈ ಅವಧಿಯಲ್ಲಿ ಮತ್ತೆ ಇಂಡಿಗೆ ಬಂದು ನನ್ನ ಕುಟುಂಬದವರೊಂದಿಗೆ ಎರಡು ಮೂರು ದಿನ ಇದ್ದು ನಂತರ ಹೈದರಾಬಾದ್‌ಗೆ ಹೋಗಿ ಮೂಲಭೂತ ತರಬೇತಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ
ಪೊಲೀಸ್ ಅಕಾಡೆಮಿಯಲ್ಲಿ ವರದಿ ಮಾಡಿಕೊಂಡೆ.

ಅಕಾಡೆಮಿಯು ಸುಮಾರು 150 ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹಬ್ಬಿಕೊಂಡಿತ್ತು. ಸುಸಜ್ಜಿತವಾದ ವಸತಿ ನಿಲಯ, ಭೋಜನಾಲಯ, ಆಡಳಿತ ಕಟ್ಟಡಗಳು, ಸಭಾಂಗಣಗಳು, ಕವಾಯತು ಮೈದಾನ, ಆಟದ ಮೈದಾನಗಳು ಇದ್ದವು. ಈ ಅಕಾಡೆ ಮಿಯು ರಾಜಸ್ಥಾನದಲ್ಲಿದ್ದ ಅಬು ಪರ್ವತದಿಂದ ಹೈದರಾಬಾದ್‌ಗೆ ಸ್ಥಳಾಂತರಗೊಂಡು ಕೇವಲ ಮೂರು ವರ್ಷಗಳು  ಕಳೆದಿ ದ್ದವು.

ಇನ್ನೂ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದವು. ೧೯೭೮ರ ಭಾರತೀಯ ಪೊಲೀಸ್ ಸೇವೆಯಲ್ಲಿ ತರಬೇತಿ ಪ್ರಾರಂಭವಾಗುವಾಗ ಸುಮಾರು ೫೫ ಜನ ಅಧಿಕಾರಿಗಳು ಇದ್ದೆವು. ತರಬೇತಿಯ ಮಧ್ಯಭಾಗದಲ್ಲಿ ಸುಮಾರು ಹತ್ತು ಅಧಿಕಾರಿಗಳು ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿದ್ದರಿಂದ ಅವರು ತರಬೇತಿಯ ಮಧ್ಯದಲ್ಲಿಯೇ ಐಎಎಸ್ ಸೇರಲು ಹೋದರು. ಹೀಗಾಗಿ, ಬರೀ 45 ಅಧಿಕಾರಿಗಳು ಮಾತ್ರ ತರಬೇತಿಯಲ್ಲಿ ಉಳಿದರು. ಪ್ರತಿಯೊಬ್ಬ ಅಧಿಕಾರಿಗೂ ಪ್ರತ್ಯೇಕ ಕೋಣೆಯನ್ನು ನೀಡಿದ್ದರು.

ಪ್ರತ್ಯೇಕವಾಗಿ ಪ್ರತಿ ಅಧಿಕಾರಿಗೂ ತಲಾ ಒಬ್ಬರು ಸೇವಕರೂ ಇದ್ದರು. ಅವರು ನಮ್ಮ ಸಮವಸ್ತ್ರಗಳನ್ನು ಇಸ್ತ್ರಿ ಮಾಡಿ
ಕಾಪಾಡಿ ಕೊಂಡು ಬರುವುದು, ನಮ್ಮ ಬೂಟು, ಬೆಲ್ಟ್ ಪಾಲಿಶ್ ಮಾಡುವುದು, ಬೆಳಗ್ಗೆ ಐದು ಗಂಟೆಗೆ ನಮಗೆ ಟೀ ಕೊಡುವುದು ಮತ್ತು ನಾವು ಶಾರೀರಿಕ ಕವಾಯತಿಗೆ ಹೋದ ಮೇಲೆ ನಮ್ಮ ಸಮವಸ ಮತ್ತು ಬೂಟುಗಳನ್ನು ಮೈದಾನಕ್ಕೆ ತೆಗೆದುಕೊಂಡು ಬರುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದರು. ಬೆಳಗ್ಗೆ 5.50ಕ್ಕೆ ನಾವು ಕವಾಯತು ಮೈದಾನದಲ್ಲಿ ಉಪಸ್ಥಿತರಿರ ಬೇಕಾಗು ತ್ತಿತ್ತು. 45 ನಿಮಿಷ ಶಾರೀರಿಕ ಕವಾಯತು ಮುಗಿದ ಮೇಲೆ ನಮಗೆ ಹತ್ತು ನಿಮಿಷ ವಿಶ್ರಾಂತಿ ನೀಡಲಾಗುತ್ತಿತ್ತು.

ಈ ಅವಧಿಯಲ್ಲಿ ಕವಾಯತಿನ ಸಮವಸಗಳಾಗಿದ್ದ ಕ್ಯಾನ್‌ವಾಸ್ ಶೂಗಳು, ಹಾಫ್ ಪ್ಯಾಂಟ್ ಮತ್ತು ಜರ್ಸಿಗಳನ್ನು ತೆಗೆದು, ಮೈದಾನದ ಪಕ್ಕದಲ್ಲಿಯೇ ನಮ್ಮ ಸಮವಸ, ಬೂಟುಗಳು ಮತ್ತು ಬಿರೆ ಕ್ಯಾಪ್ ಧರಿಸಿ ಡ್ರಿಲ್‌ಗೆ ಹಾಜರಾಗಬೇಕಾಗಿತ್ತು. ಸುಮಾರು ಎರಡು ಅವಽ ಅಂದರೆ ಬೆಳಗ್ಗೆ ೭ ಗಂಟೆಯಿಂದ ೮.೩೦ ರವರೆಗೆ ಸಾಮಾನ್ಯ ಡ್ರಿಲ್, ಲಾಠಿ ಡ್ರಿಲ್ ಮತ್ತು ಆಯುಧ ಸಹಿತ (ಬಂದೂಕು) ಡ್ರಿಲ್ ಕಲಿಸಲಾಗುತ್ತಿತ್ತು. ಎಂಟೂವರೆಗೆ ಬಂದು ಎಲ್ಲರೂ ಸ್ನಾನ ಮಾಡಿ ಬೆಳಗಿನ ಉಪಾಹಾರ ಮುಗಿಸಿ ಬೆಳಗ್ಗೆ ೧೦ ಗಂಟೆಗೆ ಒಳಾಂಗಣ ತರಬೇತಿಗಳಿಗೆ ಹಾಜರಾಗಬೇಕಾಗಿತ್ತು.

ಒಳಾಂಗಣ ತರಬೇತಿಯಲ್ಲಿ ಭಾರತದ ಸಂವಿಧಾನ, ದಂಡ ಪ್ರಕ್ರಿಯಾ ತರಬೇತಿ, ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯತ್ವದ ಕಾಯ್ದೆ, ವಿವಿಧ ರಾಜ್ಯಗಳ ಪೊಲೀಸ್ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಉಪನ್ಯಾಸಗಳು ನಡೆಯುತ್ತಿದ್ದವು. ಮಧ್ಯಾಹ್ನ ಒಂದೂವರೆಗೆ ಊಟದ ಬಿಡುವು. ಅದಾದ ಮೇಲೆ ಮೂರು ಗಂಟೆಯಿಂದ ನಾಲ್ಕೂವರೆಗೆ ವೈರ್ ಲೆಸ್ ಮತ್ತು ಮೋಟಾರು ವಾಹನ ಚಾಲನೆ, ಆಯುಧಗಳನ್ನು ಬಿಚ್ಚಿ ಜೋಡಿಸುವ ಮತ್ತು ಸ್ವಚ್ಛಗೊಳಿಸುವ ತರಬೇತಿ ನೀಡುತ್ತಿದ್ದರು.

ನಾಲ್ಕೂವರೆಯಿಂದ ಆರರವರೆಗೆ ನಾವು ವಿವಿಧ ಆಟಗಳಲ್ಲಿ ಅಥವಾ ಕುದುರೆ ಸವಾರಿಯ ತರಬೇತಿಗೆ ಹಾಜರಾಗಬೇಕಾಗಿತ್ತು. ಸಾಯಂಕಾಲ ಆಗುವಷ್ಟರಲ್ಲಿ ಬಹಳ ದಣಿವು ಆಗುತ್ತಿತ್ತು. ಮತ್ತೆ ಭೋಜನಾಲಯಕ್ಕೆ ಬಂದು ಲಘು ಉಪಾಹಾರ ಮಾಡಿ ಕೆಲವರು ಟೇಬಲ್ ಟೆನಿಸ್, ಬಿಲಿಯರ್ಡ್ಸ್ ಆಡುತ್ತಿದ್ದರು. ಇನ್ನು ಕೆಲವರು ಆಗ ಅತ್ಯಂತ ಜನಪ್ರಿಯವಾಗಿದ್ದ ಜಗಜೀತ್ ಸಿಂಗ್ ಮತ್ತು ಚಿತ್ರಾ ಸಿಂಗ್ ಅವರ ಘಜಲ್‌ಗಳನ್ನು ಗ್ರಾಮೋ ಫೋನ್‌ನಲ್ಲಿ ಕೇಳುತ್ತಿದ್ದರು. ನಂತರ ರಾತ್ರಿ ಊಟ ಮಾಡಿ ನಿದ್ದೆ ಮಾಡುತ್ತಿದ್ದೆವು. ಇದು ನಮ್ಮ ದಿನಚರಿಯಾಗಿತ್ತು.

ಉತ್ತರಪ್ರದೇಶದಲ್ಲಿ ಜಾತಿ ಭೇದ-ಭಾವ
ಮರುದಿನ ನಮ್ಮನ್ನು ಗಾಜಿಪುರಕ್ಕೆ ಕರೆದುಕೊಂಡು ಹೋದರು. ಗಾಜಿಪುರ ಜಿಲ್ಲೆ ದೇಶದಲ್ಲಿಯೇ ಸರಕಾರದ ನಿಯಂತ್ರಣದಲ್ಲಿ ಅತಿ ಹೆಚ್ಚು ಅಫೀಮು ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿತ್ತು. ಅಲ್ಲಿ ನಾವು ಅಫೀಮು ಕಾರ್ಖಾನೆಗೂ ಭೇಟಿ ನೀಡಿದೆವು. ಗ್ರಾಮ ವಾಸ್ತವ್ಯದಲ್ಲಿ ನನಗೆ ತಿಳಿದುಬಂದುದೇನೆಂದರೆ, ಉತ್ತರಪ್ರದೇಶದಲ್ಲಿ ಜಾತಿ ಪದ್ಧತಿ ಮತ್ತು ಭೇದಭಾವ ಬಹಳ ಕಟುವಾಗಿತ್ತು.

ದಲಿತ ಸಮಾಜಕ್ಕೆ ಸೇರಿದ ಯಾವ ಹೆಣ್ಣು ಮಗಳೂ ಮದುವೆಯಾಗಿ ತನ್ನ ಗಂಡನ ಮನೆಗೆ ಡೋಲಿಯಲ್ಲಿ (ಮೇನೆ) ಹೋಗು ವಂತಿರಲಿಲ್ಲ. ಅವಳು ನಡೆದು ಕೊಂಡೇ ಹೋಗಬೇಕಾಗಿತ್ತು. ಕೆಲವು ಸಲ ಅವಳ ತಂದೆ ಅಥವಾ ಸೋದರ ಅವಳನ್ನು ಹೊತ್ತು ಕೊಂಡು ಹೋಗುತ್ತಿದ್ದರು. ಅಲ್ಲಿಯ ವ್ಯವಸ್ಥೆಯನ್ನು ನೋಡಿ ಬಸವಣ್ಣನ ನಾಡಾದ ಕರ್ನಾಟಕದ ಪರಿಸ್ಥಿತಿ ಸಾವಿರ ಪಾಲು ಉತ್ತಮವೆಂದು ನನಗನಿಸಿತು.

(..ಮುಂದುವರಿಯುವುದು)