Friday, 13th December 2024

ಜನರೊಂದಿಗಿನ ಸಂಪರ್ಕ ಕೊಂಡಿ ಜನಹಿತ ಆಪ್

ವಿಶ್ವವಾಣಿ ಸಂದರ್ಶನ

ದೇಶದಲ್ಲಿಯೇ ಮೊದಲ ಬಾರಿಗೆ ಆಪ್ ಸಿದ್ದಪಡಿಸಿದ ಅರವಿಂದ ಲಿಂಬಾವಳಿ

ಅಭಿವೃದ್ಧಿ ಹಾಗೂ ಜನರ ಕುಂದುಕೊರತೆ ಆಲಿಸಲು ಆಪ್ ಸಹಾಯ ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಹದೇವಪುರ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯದ ರಿಪೋರ್ಟ್ ಕಾರ್ಡ್ ಅನ್ನು ಕ್ಷೇತ್ರದ ಜನರಿಗೆ ನೀಡುವ ಜತೆಯಲ್ಲಿ ಕ್ಷೇತ್ರದಲ್ಲಿರುವ ಕುಂದುಕೊರತೆ ಆಲಿಸಿ, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಒಂದು ವೇದಿಕೆಯ ಅಗತ್ಯವಿತ್ತು. ಹೀಗಾಗಿಯೇ ‘ಮಹಾದೇವಪುರ ಜನಹಿತ’ ಆಪ್ ಅನ್ನು ಅಭಿವೃದ್ಧಿಪಡಿಸ ಲಾಗಿದೆ ಎಂದು ಮಾಜಿ ಸಚಿವ ಹಾಗೂ ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ ಹೇಳಿದರು. ದೇಶದಲ್ಲಿಯೇ ಮೊದಲ ಬಾರಿಗೆ ಕ್ಷೇತ್ರದ ಕುಂದು ಕೊರತೆ ಆಲಿಸಲು ಅಭಿವೃದ್ಧಿಪಡಿಸಿರುವ ಆಪ್ ಸಂಬಂಧಿಸಿದಂತೆ ವಿಶ್ವವಾಣಿ ಯೊಂದಿಗೆ ಮಾತನಾಡಿದ ಅವರು, ಆಪ್ ನಿರ್ವಹಣೆ, ಅಗತ್ಯ, ನಿರ್ವಹಣೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಆಪ್ ಪರಿಕಲ್ಪನೆ ಬಂದಿದ್ದು ಹೇಗೆ?
ನನ್ನ ವೈಯಕ್ತಿಕ ಫೇಸ್‌ಬುಕ್, ಟ್ವಿಟ್ಟರ್ ಖಾತೆಯಲ್ಲಿ ಯಾವುದಾದರೂ ಕಾರ್ಯಕ್ರಮದ ಪೋಸ್ಟ್‌ಗಳನ್ನು ಹಾಕಿದರೆ, ಪಕ್ಷದ ಕಾರ್ಯಕರ್ತರು ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿ ದರೆ ಆ ಪೋಸ್ಟ್‌ಗೆ ಕೆಲವರು ಕಾಮೆಂಟ್‌ನಲ್ಲಿ ಕ್ಷೇತ್ರದ ಸಮಸ್ಯೆ ಹೇಳುತ್ತಿದ್ದರು. ಅದರಲ್ಲಿ ಕೆಲವು ಸುಳ್ಳು ದೂರುಗಳು ಇರುತ್ತಿದ್ದವು. ಇನ್ನು ಕೆಲವು ನೈಜವಾಗಿದ್ದರೂ, ದೂರು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಸಿಗಲಿ ಎನ್ನುವ ಕಾರಣಕ್ಕೆ ‘ಮಹದೇವಪುರ ಜನಹಿತ’ ಆಪ್ ಅಭಿವೃದ್ಧಿ ಪಡೆಸಿದೆವು.

ನಿಮ್ಮ ಕ್ಷೇತ್ರದಲ್ಲಿ ಅಲ್ಲದೇ, ಇನ್ನೆಲ್ಲಿಯಾದರೂ ಇದೆಯಾ?
ಈ ವಿಶಿಷ್ಟ ಆಪ್ ಅನ್ನು ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ಕ್ಷೇತ್ರದಲ್ಲಿ ಆರಂಭಿಸಿದ್ದೇವೆ. ದೇಶದ ಯಾವುದೇ ಕ್ಷೇತ್ರದಲ್ಲಿ ಯೂ ಈ ರೀತಿಯ ಆಪ್ ಅನ್ನು ಯಾರೂ ಅಭಿವೃದ್ಧಿಪಡಿಸಿಲ್ಲ.

ಈ ಆಪ್‌ನ ಕಾರ್ಯವ್ಯಾಪ್ತಿ ಹೇಗೆ?
ಮಹಾದೇವಪುರಕ್ಕೆ ಸೀಮಿತಗೊಳಿಸಿ ಈ ಆಪ್ ಅನ್ನು ಸಿದ್ಧಪಡಿಸಿರುವುದರಿಂದ ಆ ಕ್ಷೇತ್ರದ ದೂರು ದುಮ್ಮಾನಗಳನ್ನು ನೀಡಲು ಮಾತ್ರ ಅವಕಾಶ ನೀಡಲಾಗಿದೆ. ಈ ಆಪ್ ಅನ್ನು ಮಹದೇವಪುರ ವ್ಯಾಪ್ತಿಗೆ ಸೀಮಿತಗೊಳಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿರುವ ಜನರಿಗೆ ಮಾತ್ರ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವವರೂ ಸಹ ಈ ಆಪ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಾಗಿದೆ. ಆಪ್ ಲೋಕೇಷನ್ ಆಧಾರದಲ್ಲಿ ಕಾರ್ಯ ನಿರ್ವಹಿಸಲಿದೆ. ಆದ್ದರಿಂದ ಕ್ಷೇತ್ರದ ಹೊರಗಡೆಯವರು ದೂರು ನೀಡಲು ಆಗುವುದಿಲ್ಲ.

ಆಪ್ ಯಾವ ರೀತಿ ನಿರ್ವಹಿಸಲಿದೆ?
ಇದರಲ್ಲಿ ಪ್ರಮುಖವಾಗಿ ಎರಡು ಅಂಶಗಳಿವೆ. ಮೊದಲ ಅಂಶವೆಂದರೆ, ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಅನ್ನು ನೀಡಲಾಗಿದೆ. ಇದರೊಂದಿಗೆ ಪ್ರಗತಿಯಲ್ಲಿರುವ ಕಾಮಗಾರಿಗಳು, ಪೂರ್ಣಗೊಂಡಿರುವ ಕಾಮಗಾರಿ ಗಳ ಬಗ್ಗೆ ಮಾಹಿತಿ ನೀಡಲಾಗುವುದು. ವ್ಯಕ್ತಿಯಿರುವ ಸ್ಥಳದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಆಗಿರುವ ಕಾಮಗಾರಿ, ವಾರ್ಡ್ ಹಾಗೂ ಕ್ಷೇತ್ರ ಮಟ್ಟದಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಗುವುದು. ೨ನೇ ಅಂಶವೆಂದರೆ, ಈ ಆಪ್‌ನಲ್ಲಿ ಸಾರ್ವಜನಿಕರು ದೂರುಗಳನ್ನು ನೀಡಬಹುದು. ಯಾವುದೇ ಸಮಸ್ಯೆಯಿದ್ದರೂ ಫೋಟೋ ತಗೆದು ಆಪ್‌ನಲ್ಲಿ ದೂರು ದಾಖಲಿಸ ಬಹುದು. ಬಳಿಕ ಅವರಿಗೆ ಒಂದು ಟಿಕೆಟ್ ನಂಬರ್ ನೀಡಲಾಗುತ್ತದೆ.

ದೂರು ದಾಖಲಾಗುತ್ತಿದ್ದಂತೆ, ನನ್ನನ್ನು ಸೇರಿದಂತೆ ಅಧಿಕಾರಿಗಳು, ಪಕ್ಷದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ  ಸಂಬಂಧಿಸಿ ದವರಿಗೆ ಮಾಹಿತಿ ರವಾನೆಯಾಗುತ್ತದೆ. ಆ ವೇಳೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಹೋಗಿ, ಸಮಸ್ಯೆಯನ್ನು ಸರಿಪಡಿಸಿ ಪುನಾ ಫೋಟೋವನ್ನು ಅಪ್‌ಲೋಡ್ ಮಾಡಲಾಗುತ್ತದೆ. ದೂರು ನೀಡಿದ ವ್ಯಕ್ತಿ, ಸಮಸ್ಯೆ ಇತ್ಯರ್ಥವಾಗಿರುವ ಸಂಬಂಧ ಪ್ರತಿಕ್ರಿಯಿಸುವ ಅಥವಾ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಹೇಳುವುದಕ್ಕೆ ಅವಕಾಶ ನೀಡಲಾಗಿದೆ.

ಜನರು ಈ ಆಪ್ ಅನ್ನು ಯಾವ ರೀತಿ ಬಳಸಿಕೊಳ್ಳಬಹುದು?
ಕ್ಷೇತ್ರದ ವ್ಯಾಪ್ತಿಯಲ್ಲಿರುವ ತೊಂದರೆಗಳ ಬಗ್ಗೆ ಜನರು ಮಾಹಿತಿ ನೀಡಬಹುದು. ಆಪ್‌ನ ಡ್ಯಾಶ್‌ಬೋರ್ಡ್ ಹಾಗೂ ಇದಕ್ಕೆ ಸಂಬಂಧಿಸಿದ ಗ್ರೂಪ್‌ನಲ್ಲಿ ನಾನಿರುವುದರಿಂದ ಅಽ ಕಾರಿಗಳೂ, ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ಇನ್ನು ಈ ಆಪ್‌ನಲ್ಲಿ ಒಟಿಪಿ ಮೂಲಕ ಸೈನ್ ಇನ್ ಹಾಗೂ ದೂರು ದಾಖಲಿಸುವ ಮೊದಲು ಫೋಟೋ ಹಾಕಬೇಕಿರುವುದರಿಂದ ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ದೂರು ನೀಡುವುದನ್ನು ತಪ್ಪಿಸಬಹುದು.

ಕಳೆದ ೫ ದಿನದಲ್ಲಿ ಎಷ್ಟು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ?
ಮಾರ್ಚ್ ೨೬ರಂದು ಈ ಆಪ್ ಅನ್ನು ಲಾಂಚ್ ಮಾಡಲಾಗಿದೆ. ಐದು ದಿನದಲ್ಲಿ ೧,೬೦೦ ಮಂದಿ ಡೌನ್‌ಲೋಡ್ ಮಾಡಿದ್ದು, ೨೬ ದೂರುಗಳು ಬಂದಿವೆ. ಸದ್ಯ ಈ ಆಪ್ ಪ್ರಾಯೋಗಿಕವಾಗಿ ನಡೆಯುತ್ತಿದ್ದು, ಆಪ್ ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿ ಕೆಲವು ಬಗ್‌ಗಳು ಕಾಣಿಸಿಕೊಂಡಿದ್ದು ಸರಿಪಡಿಸಲಾಗುವುದು. ಇನ್ನೊಂದು ತಿಂಗಳಿನಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಆಪ್ ಕಾರ್ಯನಿರ್ವಹಿಸಲಿದೆ.

***

ಕ್ಷೇತ್ರದ ಜನರಿಗೆ ನಾನು ಮಾಡಿರುವ ಕೆಲಸದ ಬಗ್ಗೆ ಮಾಹಿತಿ ನೀಡುವುದು ಹಾಗೂ ಕ್ಷೇತ್ರದಲ್ಲಿರುವ ಕುಂದುಕೊರತೆಯ ಬಗ್ಗೆ ಮಾಹಿತಿ ಪಡೆಯಲು ಒಂದು ವೇದಿಕೆಯ ಅಗತ್ಯವಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್‌ಗಳಿಗೆ ಕಾಮೆಂಟ್ ರೂಪದಲ್ಲಿ ದೂರು ನೀಡಿದರೆ ಪರಿಹರಿಸುವುದು ಕಷ್ಟ. ಆದ್ದರಿಂದ ‘ಮಹದೇವಪುರ ಜನಹಿತ’ ಆಪ್ ರೂಪಿಸಲಾಗಿದೆ.
– ಅರವಿಂದ ಲಿಂಬಾವಳಿ ಮಹದೇವಪುರ ಶಾಸಕ

ಆಪ್‌ನಲ್ಲಿರುವ ವಿಶೇಷತೆ?
ಕಳೆದ ಎರಡು ಅವಧಿಯಲ್ಲಿ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ

ನಾಗರಿಕ ಸಮಸ್ಯೆಗೆ ಪರಿಹಾರ

ನಾಗರಿಕರು ತಮ್ಮ ವೈಯಕ್ತಿಕ ದಾಖಲೆ ಅಪ್ ಲೋಡ್ ಮಾಡಿ, ಅರ್ಹರು ಲಾಭ ಪಡೆಯಬಹುದು

ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಮುಖ ಆಪ್‌ಗಳ ಮಾಹಿತಿ

ಶಾಸಕರ ಕಚೇರಿಯ ಸಂಪೂರ್ಣ ಮಾಹಿತಿ