Thursday, 12th December 2024

ಬಿಜೆಪಿಗೆ ಬಿಸಿ ತುಪ್ಪವಾದ ಜಾರಕಿಹೊಳಿ ಕುಟುಂಬದ ನಡೆ

ramesh jarkiholi

ವಿಶ್ವವಾಣಿ ವಿಶೇಷ

ಶಿಸ್ತು ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ, ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿ ಪ್ರಮುಖರು

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬೆಳಗಾವಿಯಿಂದ ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಇದೀಗ ರಾಜ್ಯ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕೆ ಕಾರಣ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿಗೆ ಬೆಂಬಲವಾಗಿ ನಿಂತಿರುವುದು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಗಿರುವ ರಮೇಶ್ ಜಾರಕಿ ಹೊಳಿ ವಿರುದ್ಧ ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಪಕ್ಷ ಇಲ್ಲ. ಇದು ಪಕ್ಷದ ಒಂದು ವಲಯದಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. ಆದರೆ, ಹಿರಿಯ ನಾಯಕರೇ ಮೌನವಾಗಿರುವುದರಿಂದ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮತ್ತೊಂದೆಡೆ, ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬೆಳಗಾವಿಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರಿಗೆ ತೊಂದರೆಯಾಗುವ ಆತಂಕವೂ ಕಾಣಿಸಿಕೊಂಡಿದೆ. ಏಕೆಂದರೆ, ರಮೇಶ್ ಜಾರಕಿಹೊಳಿ ಸಹೋದರನ ಪರವಾಗಿ ನಿಂತಿರುವುದರಿಂದ ಬಿಜೆಪಿಯ ಕೆಲವು ಮತಗಳು ಲಖನ್‌ಗೆ ಹೋಗುವ ಸಂಭವವಿದ್ದು, ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಬಿಜೆಪಿ ಗೆಲ್ಲಲು ಕಷ್ಟವಾಗಬಹುದು ಎಂಬ ಮಾತು ಕೇಳಿಬರುತ್ತಿದೆ.

ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಮಂಜು ಪುತ್ರ ಮಂಥರ್ ಗೌಡ ಅವರಿಗೆ ಕೊಡಗು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ ಕಾರಣಕ್ಕೆ ಎಂ.ಮಂಜು ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಜೆಪಿ ಮುಕ್ತಗೊಳಿಸಿತ್ತು. ಇದೀಗ ಲಖನ್ ಪ್ರಕರಣದಲ್ಲಿ ಅವರ ಬೆನ್ನಿಗೆ ರಮೇಶ್ ಜಾರಕಿಹೊಳಿ ನಿಂತಿದ್ದರೂ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಪಕ್ಷದಲ್ಲಿ ತೀವ್ರ ಚರ್ಚೆ ಯಾಗುತ್ತಿದೆ.

ರಮೇಶ್ ಹಿಂದೆ ಬಿಜೆಪಿ ನಾಯಕರು: ಲಖನ್ ಜಾರಕಿಹೊಳಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ಬಿಜೆಪಿಯ ಕೆಲವು ನಾಯಕರೇ ಬೆಂಬಲವಾಗಿ ನಿಂತಿದ್ದಾರೆ. ಇದಕ್ಕೆ ಪಕ್ಷದ ಮತ್ತೊಂದು ಗುಂಪಿನ ನಾಯಕರು ಆಕ್ಷೇಪಿಸಿದ್ದರು. ಕೊನೆಗೆ ಬೆಳಗಾವಿ ಭಾಗದ ಬಿಜೆಪಿಯ ಪ್ರಬಲ ಮುಖಂಡರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ
ಹೈಕಮಾಂಡ್‌ವರೆಗೆ ಹೋಗಿದ್ದರಿಂದ ವರಿಷ್ಠರು ಲಖನ್‌ಗೆ ಟಿಕೆಟ್ ನಿರಾಕರಿಸಿದ್ದರು.

***

ಲಖನ್ ಪ್ರಕರಣವನ್ನು ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಂಡರೆ ಪಕ್ಷದಲ್ಲಿ ಬಣ ರಾಜಕಾರಣ ಮತ್ತೆ ಮುನ್ನಲೆಗೆ ಬರುತ್ತದೆ. ಮೇಲಾಗಿ ರಮೇಶ್ ವಿರುದ್ಧ ಕ್ರಮ ಕೈಗೊಂಡರೆ ಅದು ಸರಕಾರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ರಮೇಶ್ ಜಾರಕಿಹೊಳಿ ಬಗ್ಗೆ ತೀವ್ರ ಅಸಮಾಧಾನವಿದ್ದರೂ ಪಕ್ಷದ ಒಂದು ಗುಂಪು ಮೌನಕ್ಕೆ
ಶರಣಾಗಿದೆ. ಒಂದು ವೇಳೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲಾದರೆ ಶಿಸ್ತು ಕ್ರಮ ಕೈಗೊಳ್ಳಲು ವರ್ಷ್ಠರ ಮೇಲೆ ಒತ್ತಡ ತರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಗುರಿ ಕಾಂಗ್ರೆಸ್ ಆದರೂ ಆತಂಕ ಬಿಜೆಪಿಗೆ: ರಮೇಶ್ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರ ಗುರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ. ಚನ್ನರಾಜ್ ಹಟ್ಟಿಹೊಳಿ ಗೆದ್ದರೆ ಬೆಳಗಾವಿಯಲ್ಲಿ ತಮ್ಮ ಕುಟುಂಬದ ಹಿಡಿತ ಮತ್ತಷ್ಟು ಕಮ್ಮಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನ
ಲೆಗೆ ಬರುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಸೋಲಿಸಲೇ ಬೇಕು ಎಂಬ ಉದ್ದೇಶದಿಂದ ಲಖನ್ ಅವರನ್ನು ಕಣಕ್ಕಿಳಿಸಲಾಗಿದೆ. ಇದಕ್ಕೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಕಡೆಯಿಂದಲೂ ಪರೋಕ್ಷ ಸಹಕಾರ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

***

ಬೆಳಗಾವಿ ಭಾಗದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಪಕ್ಷದ ಅಽಕೃತ ಅಭ್ಯರ್ಥಿ ಗೆಲ್ಲುವುದು ಕಷ್ಟವಾ ಗದು. ಆದರೆ, ಕಾಂಗ್ರೆಸ್ ಮತ ವಿಭಜನೆಯಾಗಿ ಲಖನ್‌ಗೆ ಬಿದ್ದರೆ ಮೊದಲ ಸುತ್ತಿನಲ್ಲೇ ಚನ್ನರಾಜ್ ಹಟ್ಟಿಹೊಳಿ ಗೆಲ್ಲುವುದು ಕಷ್ಟ. ಆಗ ಎರಡನೇ ಪ್ರಾಶಸ್ತ್ಯದ ಮತ ಎಣಿಕೆ ಮಾಡಬೇಕಾಗುತ್ತದೆ. ಎರಡನೇ ಪ್ರಾಶಸ್ತ್ಯದ ಮತಗಳಲ್ಲಿ ಹೆಚ್ಚು ಪಾಲು ಲಖನ್‌ಗೆ
ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆ. ಇದಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿ, ಎರಡನೇ ಪ್ರಾಶಸ್ತ್ಯದ ಮತವನ್ನು ಲಖನ್‌ಗೆ ಹಾಕಬೇಕು ಎಂದು ಈಗಾಗಲೇ ಒಪ್ಪಂದವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪರವಾಗಿಲ್ಲ. ಆದರೆ, ಜಾರಕಿಹೊಳಿ ಕುಟುಂಬದವರು ಇದುವರೆಗೆ ಮಾಡಿಕೊಂಡು ಬಂದಿರುವ ರಾಜಕಾರಣವನ್ನು ಗಮನಿಸಿ ದಾಗ, ತಮ್ಮ ಕುಟುಂಬದವರನ್ನು ಗೆಲ್ಲಿಸಿಕೊಳ್ಳಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧರಿದ್ದಾರೆ ಎಂಬುದು ಸ್ಪಷ್ಟ. ಹೀಗಾಗಿ ಜಾರಕಿಹೊಳಿ ಕುಟುಂಬದ ರಾಜಕೀಯ ಚದುರಂಗ ಬಿಜೆಪಿಗೆ ಮುಳುವಾದರೆ…? ಎಂಬ ಆತಂಕ ಪಕ್ಷವನ್ನು ಕಾಡುತ್ತಿದೆ.