Thursday, 12th December 2024

ವೀರಪ್ಪ ಮೊಯ್ಲಿಗೆ ಜ್ಞಾನಪೀಠ ಪ್ರಶಸ್ತಿ ?

ವಿಶ್ವವಾಣಿ ವಿಶೇಷ

ಜ್ಞಾನಪೀಠ ಆಯ್ಕೆ ಸಮಿತಿಗೆ ಸಾಹಿತ್ಯ ಅಕಾಡೆಮಿಯಿಂದ ಶಿಫಾರಸು

ಬೆಂಗಳೂರು: ರಾಜಕೀಯವಾಗಿ ಈಗಾಗಲೇ ಮೂಲೆಗೆ ಸೇರಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರೀಗ ಜ್ಞಾನಪೀಠ ಪ್ರಶಸ್ತಿ ಮೇಲೆ ಕಣ್ಣಿಟ್ದಿದ್ದು, ಇದಕ್ಕಾಗಿ ಭಾರಿ ಲಾಬಿ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೌದು, ದೇಶದ ಸಾಹಿತ್ಯ ವಲಯದ ಅತ್ಯುನ್ನತ ಪ್ರಶಸ್ತಿ ಎಂದೇ ಹೇಳಲಾಗುವ ಜ್ಞಾನಪೀಠ ಪ್ರಶಸ್ತಿಯನ್ನು ಈ ಬಾರಿ ಕನ್ನಡ ಸಾಹಿತ್ಯಕ್ಕೆ ನೀಡಲು ಸಮಿತಿ ತೀರ್ಮಾನಿಸಿದೆ. ಟೈಮ್ಸ್ ಗ್ರೂಪ್‌ನ ಭಾಗವಾಗಿರುವ ಭಾರತೀ ಜ್ಞಾನಪೀಠದಿಂದ ಈ ಪ್ರಶಸ್ತಿ ನೀಡಿದರೂ, ಪ್ರಶಸ್ತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಶಿಫಾರಸು ಕೇಳಲಾಗುತ್ತದೆ. ಈ ಬಾರಿ ಅಕಾಡೆಮಿ ಕಳುಹಿಸಿರುವ ಶಿಫಾರಸಿನಲ್ಲಿ ವೀರಪ್ಪ ಮೊಯ್ಲಿ ಅವರ ಹೆಸರೊಂದೇ ಇದೆ ಎನ್ನುವ ಮಾತುಗಳು ಕೇಳಿಬಂದಿದೆ.

ಈಗಾಗಲೇ ರಾಮಾಯಣ ಮಹಾನ್ವೇಷಣೆ ಎನ್ನುವ ಮಹಾಕಾವ್ಯಕ್ಕೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ವೀರಪ್ಪ ಮೊಯ್ಲಿ ಅವರು, ಅಂತಿಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆಯಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ. ಆದ್ದರಿಂದ ತಮ್ಮ ಆಪ್ತರ ಮೂಲಕ, ಪ್ರಶಸ್ತಿಗೆ ಹೆಸರನ್ನು ಶಿಫಾರಸು ಮಾಡಿಸಿಕೊಂಡಿದ್ದಾರೆ. ಎಲ್ಲ ಭಾಷೆಗಳ ಸಾಹಿತಿಗಳನ್ನು ಗುರುತಿಸಬೇಕು ಎನ್ನುವ ಉದ್ದೇಶದಿಂದ, ಪ್ರತಿ ವರ್ಷ ಒಂದೊಂದು ಭಾಷೆಗೆ ಜ್ಞಾನಪೀಠ ನೀಡಲು ಸಮಿತಿ ತೀರ್ಮಾನಿಸಿದೆ. ಪ್ರಸ್ತುತ ವರ್ಷ ಕನ್ನಡಕ್ಕೆ ನೀಡಬೇಕಾಗಿರುವು ದರಿಂದ, ಮೊಯ್ಲಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ದಶಕದ ಬಳಿಕ ಜ್ಞಾನಪೀಠ?: ಕನ್ನಡ ಸಾಹಿತ್ಯಕ್ಕೆ ಇಲ್ಲಿಯವರೆಗೆ ಎಂಟು ಜ್ಞಾನ ಪೀಠ ಪ್ರಶಸ್ತಿಗಳು ಸಂದಿದ್ದು, 2010ರಲ್ಲಿ ಚಂದ್ರಶೇಖರ ಕಂಬಾರರ ಬಳಿಕ ಯಾರಿಗೂ ಲಭಿಸಿಲ್ಲ. ಕನ್ನಡ ಸಾಹಿತ್ಯ ವಲಯದಲ್ಲಿ ಎಸ್.ಎಲ್.ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕು ಎನ್ನುವ ಒತ್ತಡ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೀಗ ಶಿಫಾರಸಿನ ವೇಳೆ ವೀರಪ್ಪ ಮೊಯ್ಲಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ವಿವಿಧ ಸಮಿತಿಗಳಿಂದಲೂ ಶಿಫಾರಸು ಅಗತ್ಯ: ಭಾರತೀಯ ಜ್ಞಾನಪೀಠ ಫೌಂಡೇಶನ್ ಕೇವಲ ಕೇಂದ್ರ ಸಾಹಿತ್ಯ ಅಕಾಡೆಮಿ ಶಿಫಾರಸು ಮಾಡಿರುವ ಶಿಫಾರಸನ್ನೇ ಅಂತಿಮಗೊಳಿಸುವುದಿಲ್ಲ. ಇನ್ನು ವಿವಿಧ ಸಮಿತಿಗಳಿಂದ, ವಿವಿಧ ಸಾಹಿತಿಗಳಿಂದ ಮಾಹಿತಿ ಕಲೆ ಹಾಕಿದ ಬಳಿಕವೇ ಪ್ರಶಸ್ತಿ ಘೋಷಣೆ ಮಾಡುತ್ತದೆ. ಆದರೂ, ಸಾಹಿತ್ಯ ಅಕಾಡೆಮಿ ವೀರಪ್ಪ ಮೊಯ್ಲಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿದೆ ಎನ್ನುವ ಸುದ್ದಿ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಅಘೋಷಿತ ನಿಯಮ ಉಲ್ಲಂಘನೆ?
ಜ್ಞಾನಪೀಠ ಪ್ರಶಸ್ತಿ ಆಯ್ಕೆಯ ವೇಳೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬಾರದು ಎನ್ನುವ ಅಘೋಷಿತ ನಿಯಮವನ್ನು ಹಾಕಿಕೊಳ್ಳಲಾಗಿದೆ. ಆದರೀಗ ವೀರಪ್ಪ ಮೊಯ್ಲಿ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಶಿಫಾರಸು ಮಾಡುವ ಮೂಲಕ, ಈ ಅಘೋಷಿತ ನಿಯಮ ವನ್ನು ಉಲ್ಲಂಘಿಸಲಾಗಿದೆ.

ಇಷ್ಟು ದಿನ ಎಸ್.ಎಲ್.ಬೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್ ಬಂದಿದೆ ಎನ್ನುವ ಕಾರಣಕ್ಕೆ ಜ್ಞಾನಪೀಠ ಪ್ರಶಸ್ತಿ ನೀಡಿಲ್ಲ ಎನ್ನುವ ಮಾತಿತ್ತು. ಇದೀಗ ಮೊಯ್ಲಿ ಅವರಿಗೆ ನೀಡುವು ದಾದರೆ, ಬೈರಪ್ಪ ಅವರಿಗೆ ಏಕೆ ನೀಡಬಾರದು ಎಂಬ ಪ್ರಶ್ನೆ ಸಾಹಿತ್ಯ ವಲಯ ದಲ್ಲಿ ಕೇಳಿಬರುತ್ತಿದೆ.