ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್
ತ್ರಿಭಾಷಾ ಸೂತ್ರ ಎನ್ನುವುದು ಕನ್ನಡಕ್ಕೆ ಪೂರಕವಾಗುವ ಬದಲು ಸಂಕಷ್ಟಕ್ಕೆ ಕಾರಣವಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ
ಮೊದಲಾಗಿರಬೇಕು. ಇತರ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ಕನ್ನಡವನ್ನು ನಿರ್ಲಕ್ಷ್ಯಿಸದಂತೆ ಎಷ್ಟು ಭಾಷೆ ಕಲಿತರೂ ಉತ್ತಮ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನುಬಳಿಗಾರ್ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ತ್ರಿಭಾಷಾ ಸೂತ್ರದಿಂದ ಕನ್ನಡಕ್ಕೆ ಸಂಕಷ್ಟವೇ?
– ತ್ರಿಭಾಷಾ ಸೂತ್ರದಿಂದ ಸಂಕಷ್ಟ ಅಷ್ಟೊಂದು ಆಗುವುದಿಲ್ಲ. ಆದರೆ ಕನ್ನಡಕ್ಕೆ ಪ್ರಾಧಾನ್ಯತೆ ಇರಲಿಲ್ಲ ಅಂದರೆ ಆಗುತ್ತದೆ. ತ್ರಿಭಾಷಾ ಸೂತ್ರ ಭಾಷ ಸೂತ್ರಕ್ಕಿಂತ ಮುಖ್ಯ ವಾಗಿ ಕರ್ನಾಟಕದಲ್ಲಿ ಕನ್ನಡ ಕಲಿಕೆಗೆ ಮೊದಲ ಆದ್ಯತೆ ನೀಡಬೇಕು. ಮೊದಲು
ಕನ್ನಡ ಭಾಷೆಯನ್ನು ಕಲಿಸಿ ನಂತರ ಎರಡನೇಯದ್ದಾಗಲಿ ಯಾವುದಾದರೂ ಭಾಷೆ ಇರಬೇಕು. ತ್ರಿಭಾಷಾ ಸೂತ್ರವು ಬೇಡ ಅದು ಬಹಳ ಕನ್ನಡಕ್ಕೆ ಧಕ್ಕೆಯಾಗುತ್ತಿದೆ. ದ್ವಿ ಭಾಷಾ ಸೂತ್ರ ಬಂದರೆ ಒಳ್ಳೆಯದು. ಕನ್ನಡದೊಂದಿಗೆ ಬೇರೆ ಭಾಷೆ ಕಲಿತರೆ ಒಳ್ಳೆಯದು, ಎಲ್ಲ ಭಾಷೆಯನ್ನು ಕಲಿಯಬೇಕು. ಕನ್ನಡ ಆದ್ಯತೆಯಾಗಬೇಕು.
ಭಾಷೆಯ ವಿಷಯದಲ್ಲಿ ಸರಕಾರ ಇನ್ನಷ್ಟು ಸಕ್ರಿಯವಾಗಬೇಕು ಎನಿಸುವುದೇ?
– ಖಂಡಿತ ಆಗಬೇಕು. ಭಾಷೆಗೆ ಹೆಚ್ಚೆಚ್ಚು ಪ್ರೋತ್ಸಾಹ ಕೊಡಬೇಕು. ಹಾಗೇ ನೋಡಿದರೆ ಸರಕಾರಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕು. ಆದರೆ ಇತ್ತೀಚಿನ ದಿನದಲ್ಲಿ ಅನುದಾನ ಕಡಿತ ಮಾಡಿರುವುದು ಕಾಣಿಸುತ್ತಿದೆ. ಇದು ಸರಿಯಾದ ನಡೆಯಲ್ಲ. ಇದರೊಂದಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿಗೆ ಕೊಡಬೇಕಾದ ಅನುದಾನವನ್ನು ಕಡಿತ ಮಾಡುತ್ತಿದ್ದಾರೆ ಅದೂ ಸರಿಯಲ್ಲ. ಮೊದಲು ಸಾಹಿತ್ಯ, ಸಂಸ್ಕೃತಿ ಕಲೆಯ ಪೋಷಣೆ ಸರಕಾರದ ಆದ್ಯತೆಯ ವಿಷಯವಾಗಿರಬೇಕು.
ಕನ್ನಡಿಗರಿಗೆ ಭಾಷೆಯ ಬಗ್ಗೆ ನಿರಾಸಕ್ತಿ ಇದೆ ಏನಿಸುವುದೇ?
– ಒಂದು ಹಂತಕ್ಕೆ ಇದನ್ನು ಒಪ್ಪಬೇಕು. ಪಕ್ಕದ ರಾಜ್ಯಗಳಾದಂತೆ ತಮಿಳುನಾಡು, ಕೇರಳ, ಮಹಾರಾಷ್ಟ್ರದಂತಹ ರಾಜ್ಯಕ್ಕೆ
ಹೋಲಿಸಿದರೆ ಖಂಡಿತವಾಗಿ ನಮ್ಮಲ್ಲಿ ಭಾಷಾಭಿಮಾನ ಕಡಿಮೆಯಿದೆ. ಜನ ಅಲ್ಲಿಯವರಷ್ಟು ತೀವ್ರವಾಗಿ ಭಾಷೆಯನ್ನು
ಪ್ರೀತಿಸುತ್ತಿಲ್ಲ ಹಾಗೂ ಅದಕ್ಕಾಗಿ ಹೋರಾಟವನ್ನೂ ಮಾಡುತ್ತಿಲ್ಲ. ಬಹಳ ಕಡಿಮೆ ಜನ ಭಾಷೆಗಾಗಿ ಹೋರಾಟ ಮಾಡುತ್ತಿದ್ದಾರೆ
ಅದು ದುಃಖದ ವಿಷಯ. ನಮ್ಮ ನಾಯಕರು ಎಲ್ಲರೂ ಬಹಳ ಜನ ಶೇ.೯೦ರಷ್ಟು ನಾಯಕರು ಇದರ ಬಗ್ಗೆ ಗಮನಕೊಡುತ್ತಿಲ್ಲ. ಒಂದು ಆದ್ಯತೆಯಾಗಿ ಭಾಷೆ, ಸಾಹಿತ್ಯ, ಸಂಸ್ಕೃತಿ ಈ ಬಗ್ಗೆ ಚಿಂತನೆ ಮಾಡುತ್ತಿಲ್ಲ, ರಾಜ್ಯ ಸರಕಾರದ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಆದ್ಯತೆ ಕೊಟ್ಟು ಹೋರಾಟವನ್ನೂ ಮಾಡುತ್ತಿಲ್ಲ. ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಕನ್ನಡ ಜನರ ಕಷ್ಟಸುಖ
ಅವರು ಅಷ್ಟಾಗಿ ಆದ್ಯತೆ ಎಂದು ಪರಿಗಣಿಸಿಲ್ಲ. ಭಾರತೀಯ ಸಂಸ್ಥಾನ ಶೇ.೧ರಷ್ಟು ಕೊಟ್ಟಿಲ್ಲ ತಮಿಳುನಾಡಿಗೆ ೮೫೦ ಕೊಟ್ಟರು, ಸಾವಿರ ಕೋಟಿಗಿಂತಲೂ ಹೆಚ್ಚಳ ಮಾಡಿದರು ನಮಗೆ ಒಂದು ಕೋಟಿ ಕೊಟ್ಟರು. ಯಾವ ಜನ ಪ್ರತಿನಿಧಿಗಳೂ ಧ್ವನಿ ಎತ್ತಿಲ್ಲ. ಹೀಗಾದರೆ ಹೇಗೆ ಬಹಳ ಕಡಿಮೆ ಜನ ಈ ಬಗ್ಗೆ ಹೋರಾಟ, ಚಿಂತನೆ ಮಾಡ್ತಾ ಇದ್ದಾರೆ.
ಆಡಳಿತದಲ್ಲಿ ಕನ್ನಡ ಈಗಲೂ ಸಾಧ್ಯವಾಗಿಲ್ಲವೇಕೆ?
– ಇಲ್ಲ. ಜಿಲ್ಲಾ ಮಟ್ಟ ತಾಲೂಕು ಮಟ್ಟದಲ್ಲಿ ನೂರಕ್ಕೆ ನೂರು ಅನ್ನಬಹುದಷ್ಟೇ. ಇನ್ನೂ ಆಗುತ್ತಿದೆ. ವಿಧಾನಸೌಧದಲ್ಲಿ ತಾಂತ್ರಿಕ ಕ್ಷೇತ್ರಗಳಲ್ಲಿ ಸ್ವಲ ಕಡಿಮೆ ಇದೆ. ಆದರೂ ಅಂತಹ ನಿರಾಶಾದಾಯಕವಾದುದೇನು ಅಲ್ಲ. ಸಾಧ್ಯವಿದ್ದಷ್ಟು ಮಟ್ಟಿಗೆ ಕನ್ನಡ ಅಳವಡಿಕೆ ಆಗ್ತಾ ಇದೆ. ಇನ್ನೂ ಪ್ರಯತ್ನಬೇಕು ಅಷ್ಟೇ.
ಕನ್ನಡ ಅನ್ನದ ಭಾಷೆಯಾಗಲು ಏನು ಮಾಡಬೇಕು?
– ಸರೋಜಿನಿ ಮಹಿಷಿ ಪರಿಷ್ಕೃತ ವರದಿಗಾಗಿ ಹೋರಾಟ ಮಾಡಿದ್ದೇವೆ. ಆ ವರದಿ ಅನುಷ್ಠಾನ ಆಗಬೇಕು. ಎಸ್ಎಸ್ಎಲ್ಸಿ ಮಟ್ಟದ ಕನ್ನಡ ಬರುವವರಿಗೇ ಕೆಲಸ ಕೊಡುವಂತೆ ಆಗಬೇಕು. ಕನ್ನಡಿಗರಿಗೆ ಎಲ್ಲಾ ಕ್ಷೇತ್ರದಲ್ಲಿ ಆದ್ಯತೆ ಕೊಡಬೇಕು ಅದು ಆಗ್ತಾ ಇಲ್ಲ. ಕೆಲಸ , ಕೆಪಿಎಸ್ಸಿ ಸೇರಿದಂತೆ ಉಳಿದ ಕಡೆ ಗಲಾಟೆ ಮಾಡಿ ಕೊಡಿಸಿದೆವು. ಬ್ಯಾಂಕ್ನಲ್ಲಿ ಇಂದಿಗೂ ಕನ್ನಡ
ಬಾರದವರೇ ಇದ್ದಾರೆ.
ಗ್ರಾಮೀಣ ಭಾಗದಲ್ಲಿಯೂ ಕನ್ನಡ ಬಾರದವರನ್ನು ಹಾಕಿದರೆ ಗ್ರಾಮೀಣ ಭಾಗದ ಜನರು ಏನು ಮಾಡಬೇಕು?
ಅದಕ್ಕೆ ತಿದ್ದುಪಡಿ ಂಆಡಿದರು ೨೦೧೭ರಲ್ಲಿ ಕನ್ನಡ ಮಾತನಾಡಲು, ಓದಲು ಗೊತ್ತಿದ್ದರೆ ಆಯ್ತು ಇಲ್ಲವಾದರೆ ೬ ತಿಂಗಳ ಸಮಯಾವಕಾಶ ನೀಡಬೇಕು ಅಂತ ಯಾವಾಗ ಕಲಿತಾರೆ ಇವರು. ಇದ ಸಂಪೂರ್ಣವಾಗಿ ಕನ್ನಡ ವಿರೋಧಿ ಯೋಜನೆ. ಎಸ್.ಎಸ್.ಎಲ್.ಸಿ ತನಕ, ೮ನೇ ತರಗತಿ ಮಟ್ಟದ ಪ್ರಬುಧ್ಧವಾದ ಮಾತು, ಬರವಣಿಗೆ, ತಿಳುವಳಿಕೆ ಜ್ಞಾನ ಇದ್ದವರಿಗೆ ಕೊಡಿ
ಎಂದರೆ ಮುಗಿದು ಹೋಗುತ್ತದೆ. ಕನ್ನಡದವರಿಗೆ ಸಿಕ್ಕೇಸಿಗುತ್ತದೆ.ಆಯ್ಕೆ ಸಮಿತಿಯಲ್ಲೂ ಕನ್ನಡಿಗರು ಕಡಿಮೆ ಇದ್ದಾರೆ.ಶೇ.೧೫ರಿಂದ ೨೦ರಷ್ಟು ಮೀಸಲು ನೀಡಿದರೆ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಕನ್ನಡ ಶಾಲೆಗಳೂ ಉಳಿಯುತ್ತದೆ.
ಒಂದು ಅಂಕದ ಪ್ರಶ್ನೆ
ಕನ್ನಡದ ಯಾವ ಚಿತ್ರ ನಿಮಗಿಷ್ಟ?
ಐತಿಹಾಸಿಕ ಚಿತ್ರಗಳು ಕೃಷ್ಣದೇವರಾಯ, ಸಂಗೊಳ್ಳಿರಾಯಣ್ಣ, ಕಿತ್ತೂರುರಾಣಿ ಚೆನ್ನಮ್ಮ ದಂತಹ ಚಿತ್ರಗಳು
ಕನ್ನಡ ಎಂದ ಕೂಡಲೇ ನೆನಪಾಗುವ ಒಂದು ಗೀತೆ?
ಬಾರಿಸು ಕನ್ನಡ ಡಿಂಡಿಮವಾ, ಹಚ್ಚೇವು ಕನ್ನಡದ ದೀಪ ಇನ್ನೂ ಅನೇಕ
ಕರ್ನಾಟಕ ವನ್ನು ಒಂದು ವಾಕ್ಯದಲ್ಲಿ ಹೇಳುವುದಾದರೆ ಏನು ಹೇಳುವಿರಿ?
ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಮಾನವೀಯ ಮೌಲ್ಯಗಳಿರುವ ತಾಣ
ನಿಮ್ಮ ನೆಚ್ಚಿನ ಸ್ಥಳ ಯಾವುದು?
ಸಂಪೂರ್ಣ ಭಾರತ, ಸಂಪೂರ್ಣ ಕರ್ನಾಟಕವೇ ಇಷ್ಟ.