ಇದು ಜಾತಿ ವಿಷಯವಲ್ಲ, ಭಾಷೆಯ ವಿಷಯ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರೇ? ಸಾಮಾನ್ಯ ವರ್ಗದ ಕನ್ನಡಿಗನೊಬ್ಬ ಕರ್ನಾಟಕದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಡಿ. ಸೀಟು ಪಡೆಯಬಾರದೇ? ಕನ್ನಡದ ಸಾಮಾನ್ಯ ವರ್ಗದ ವಿದ್ಯಾರ್ಥಿ ಎಂ.ಡಿ. ಸೀಟು ಪಡೆಯಬೇಕು ಎಂದರೆ ಖಾಸಗಿ ಕೋಟಾದಲ್ಲಿಯೇ ಹೋಗ ಬೇಕೆ? ಈ ರೀತಿಯ ಪ್ರಶ್ನೆ ಏಳುವುದಕ್ಕೆ ಕಾರಣವಿದೆ. ಈ ಹಿಂದೆ ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರಿಗೆ ಹಂಚಿಕೆಯಾಗಿರುವ ಮೀಸಲಿನಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪ ಮಾಡಿದ್ದಕ್ಕೆ, ಇದು ಮೀಸಲು ವಿರೋಧಿ ನಡೆ ಎನ್ನುವ ಮಾತುಗಳು ಕೇಳಿಬಂದಿತ್ತು.
ಆದರೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಒಪನ್ ಕೌನ್ಸೆಲಿಂಗ್ನಿಂದಾಗಿ, ಕರ್ನಾಟಕದಲ್ಲಿರುವ ಸಾಮಾನ್ಯ ವರ್ಗದವರಿಗೆ ಸರಕಾರಿ ಸೀಟು ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ನೀಟ್ ಕೌನ್ಸೆಲಿಂಗ್ನಲ್ಲಿರುವ ಷರತ್ತಿನಂತೆ ನೂರು ಸೀಟುಗಳಲ್ಲಿ 50 ಸೀಟು ರಾಜ್ಯದ ಪಾಲಾದರೆ, ೫೦ ಸೀಟು ಅಖಿಲ ಭಾರತ ನೀಟ್ ರ್ಯಾಂಕಿಂಗ್ ಗೆ ಸಿಗಲಿದೆ. ಆದರೆ, ಕರ್ನಾಟಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಸೀಟು ಸಿಗದಿದ್ದರೆ, ಕರ್ನಾಟಕದ ಕೋಟದಲ್ಲಿ ವಿದ್ಯಾರ್ಥಿಗಳು ಸೀಟು ಪಡೆಯುವುದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ.
ಪ್ರಮುಖವಾಗಿ ರಾಜ್ಯದಲ್ಲಿ 350ರಿಂದ 400 ಸೀಟುಗಳು ಸರಕಾರಿ ಎಂ.ಡಿ. ಸೀಟುಗಳಿವೆ. ಇದರಲ್ಲಿ ಬಹುತೇಕ ಈ ರೀತಿ ಹೊರರಾಜ್ಯದವರ ಅಥವಾ ಕರ್ತವ್ಯನಿರತರಿಗೆ ಸರಕಾರಿ ಸೀಟು ಸಿಗುವುದರಿಂದ ಸಾಮಾನ್ಯ ವರ್ಗದವರಿಗೆ ಸೀಟು ಸಿಗುವುದಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಆಗಿರುವ ಸಮಸ್ಯೆಯೇನು?: ಕರ್ನಾಟಕ ಸೇರಿ ಕೆಲವೇ ಕೆಲವು ರಾಜ್ಯಗಳಲ್ಲಿ ಒಪನ್ ಕೌನ್ಸಲಿಂಗ್ ಎನ್ನುವ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.
ಇನ್ನುಳಿದ ಬಹುತೇಕ ರಾಜ್ಯಗಳಲ್ಲಿ ಕ್ಲೋಸ್ಡ್ ಕೌನ್ಸೆ ಲಿಂಗ್ ನಡೆಸಲಾಗುವುದು. ಒಪನ್ ಕೌನ್ಸೆಲಿಂಗ್ನಲ್ಲಿ ಶೇ.50 ರಷ್ಟು ಆಯಾ ರಾಜ್ಯದವರಿಗೆ ಮೀಸಲಾ ಗಿದ್ದರೂ, ಅದರಲ್ಲಿಯೂ ಹೊರ ರಾಜ್ಯದವರು ಸೀಟು ಪಡೆಯಲು ಅರ್ಹರಾಗಿರುತ್ತಾರೆ. ಈ ಪದ್ಧತಿ ಕರ್ನಾಟಕದಲ್ಲಿಯೂ ಇರುವುದರಿಂದ, ಶೇ. 50ರಷ್ಟು ಸೀಟುಗಳ ಕೋಟಾದಲ್ಲಿ ಅಖಿಲ ಭಾರತ ರ್ಯಾಂಕಿಂಗ್ನಲ್ಲಿ ಹಂಚಿಕೆಯಾಗುತ್ತದೆ. ಇನ್ನುಳಿದವರು, ಕರ್ನಾಟಕ ರ್ಯಾಂಕಿಂಗ್ ಜತೆ ಸೆಣಸಿ ಸೀಟು ಪಡೆಯು ತ್ತಾರೆ. ಈ ರೀತಿ ಸೀಟು ಪಡೆಯುವವರು ಸಾಮಾನ್ಯ ವರ್ಗದ ಸೀಟುಗಳನ್ನೇ ಪಡೆಯುವುದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗು ತ್ತದೆ.
ಇದರೊಂದಿಗೆ ಈ ಬಾರಿ ಕೊಡವ, ತುಳು ಭಾಷಿಗರೊಂದಿಗೆ ತೆಲುಗು ಹಾಗೂ ತಮಿಳು ಭಾಷಿಗರಿಗೂ ಭಾಷಾ ಅಲ್ಪಸಂಖ್ಯಾತ ಕೋಟದಲ್ಲಿ ಮೀಸಲು ನೀಡಿರುವುದರಿಂದ ಅದರಲ್ಲಿಯೂ, ಸಾಮಾನ್ಯ ವರ್ಗದವರಿಗೆ ಹೊಡೆತ ಬೀಳಲಿದೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವ ಸೀಟುಗಳನ್ನು ಎಲ್ಲ ಈ ರೀತಿ ಹಂಚಿದರೆ ಕರ್ನಾಟಕದಲ್ಲಿರುವ ಕನ್ನಡದ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ಅಭ್ಯರ್ಥಿಗಳು ಕೇಳುತ್ತಿದ್ದಾರೆ.
ಸೇವಾ ನಿರತ ವೈದ್ಯರ ಕೋಟಾದಲ್ಲಿ ಬದಲಾವಣೆ
ಸೇವಾ ನಿರತ ವೈದ್ಯರಿಗೆ ನೀಡಲಾಗುವ ಮೀಸಲಾತಿಯಲ್ಲಿಯೂ ಬದಲಾವಣೆ ತರುವ ಸಿದ್ಧತೆಯನ್ನು ಇಲಾಖೆ ಮಾಡಿಕೊಂಡಿದೆ. ಈಗಿರುವ ಶೇ.೩೦ರಷ್ಟು ಕೋಟದ ಬದಲಿಗೆ, ಇದನ್ನು ಇನ್ನಷ್ಟು ಹೆಚ್ಚಿಸುವ ಅಥವಾ ಯಾವುದೇ ಮಾನದಂಡ ಅಳವಡಿಸದೆ ಸೀಟು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇದರಿಂದ ನೇರವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಸೀಟಿಗೆ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ.
***
ಸಾಮಾನ್ಯ ವರ್ಗಕ್ಕೆ ಇರುವುದೇ ಕಡಿಮೆ ಸೀಟು. ಆ ಸೀಟುಗಳನ್ನೂ ಹೊರ ರಾಜ್ಯದವರಿಗೆ, ಭಾಷಾ ಅಲ್ಪಸಂಖ್ಯಾತರಿಗೆ, ಸೇವಾ ನಿರತ ವೈದ್ಯರಿಗೆ ಹಂಚಿ ದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಏನು ಮಾಡಬೇಕು? ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸೀಟು ಪಡೆಯುವುದೇ ತಪ್ಪೇ?
– ಸ್ವರ್ಣಶ್ರೀ, ನೀಟ್ನ ಸೀಟು ಆಕಾಂಕ್ಷಿ