Saturday, 14th December 2024

ಕೈ ಕಚ್ಚಿದ ಧರಣಿಯ ಪ್ಲ್ಯಾನ್

ವಿಶ್ವವಾಣಿ ವಿಶೇಷ

ಬೆಂಗಳೂರು: ಕಳೆದೊಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಧರಣಿಯಿಂದ ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ವಾರಾಂತ್ಯದಲ್ಲಿಯೂ ವಿಧಾನಸೌಧದಿಂದ ಹೊರಬಾರದೇ, ನಡೆಸುತ್ತಿರುವ ಈ ಧರಣಿಯಿಂದ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎನ್ನುವ ಮಾತನ್ನು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದರೂ ಇಂತಹ ಸಾಹಸಕ್ಕೆ ಕೈಹಾಕಲು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದು ಯಾರೆಂಬ ಪ್ರಶ್ನೆಗೆ ‘ಪಿಆರ್ ಏಜೆನ್ಸಿ’ ಎನ್ನುವ ಉತ್ತರ ಬರುತ್ತಿದೆ.

ಹೌದು, ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಆರಂಭವಾಗಿರುವ ಅಹೋರಾತ್ರಿ ಧರಣಿ ಬಗ್ಗೆ ಬಹುತೇಕ ಕಾಂಗ್ರೆಸಿಗರಿಗೆ ಒಪ್ಪಿಗೆಯಿಲ್ಲ. ಆದರೂ ಕಾಂಗ್ರೆಸ್ ಪಕ್ಷದ ಬ್ರ್ಯಾಂಡಿಂಗ್ ಹೆಚ್ಚಿಸುತ್ತಿರುವ ಪಿಆರ್ ಏಜೆನ್ಸಿಯೊಂದು ‘ಅಹೋರಾತ್ರಿ ಧರಣಿಯಿಂದ ಇಮೇಜ್ ಹೆಚ್ಚಲಿದೆ’ ಎಂದು ಸಲಹೆ ನೀಡಿತ್ತು. ಅದನ್ನು ನಂಬಿಕೊಂಡು ಆರಂಭಿ ಸಿದ ಅಹೋರಾತ್ರಿ ಧರಣಿ ಇದೀಗ ಪಕ್ಷದ ಶಾಸಕರಿಗೆ ನುಂಗಲಾರದ ತುತ್ತಾಗಿದೆ.

ಈಶ್ವರಪ್ಪ ರಾಜೀನಾಮೆ ವಿಷಯದಲ್ಲಿ ಸರಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳುತ್ತಿದ್ದಂತೆ, ಬಹುತೇಕ ನಾಯಕರು ಸದನದ ಹೊರಗೆ ಪ್ರತಿಭಟನೆ ಮುಂದುವರಿಸುವ ಜತೆಯಲ್ಲಿ, ಸದನದೊಳಗೆ ಚರ್ಚೆಯ ನೆಪದಲ್ಲಿ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಬ್ರ್ಯಾಂಡ್ ರೂಪಿಸುವ ಜವಾಬ್ದಾರಿ ಹೊತ್ತಿರುವ ಪಿ.ಆರ್. ಏಜೆನ್ಸಿ, ಅಹೋರಾತ್ರಿ ಧರಣಿಯೇ ಸೂಕ್ತ ಎನ್ನುವ ಮಾತನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದೆ. ಇದನ್ನು ಪರಿಗಣಿಸಿ ಅಹೋರಾತ್ರಿ ಧರಣಿ ಆರಂಭಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ, ಅಹೋರಾತ್ರಿ ಧರಣಿ ಆರಂಭವಾದ ಬಳಿಕ ಸದನವನ್ನು ಅನಿರ್ದಿಷ್ಠಾವಧಿಗೆ ಸದನವನ್ನು ಮುಂದೂಡದೇ, ಸದನವನ್ನು ಸರಕಾರ ನಡೆಸುತ್ತಿರುವುದು ಕಾಂಗ್ರೆಸ್ ಶಾಸಕರಿಗೆ ಭಾರಿ ಸಮಸ್ಯೆ ತಂದೊಡ್ಡಿದೆ.

ಸಿದ್ದರಾಮಯ್ಯ ಅವರಿಗೂ ಇಷ್ಟವಿರಲಿಲ್ಲ: ಕಳೆದ ಗುರುವಾರ ಸಚಿವ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದಾಗ, ಡಿ.ಕೆ. ಶಿವಕುಮಾರ್ ಹಾಗೂ ಈಶ್ವರಪ್ಪ ನಡುವೆ ನಡೆದ ಗಲಾಟೆಯ ನಂತರವೂ ಅಹೋರಾತ್ರಿ ಧರಣಿಗೆ ಸಿದ್ದರಾಮಯ್ಯ ಸಿದ್ಧವಿರಲಿಲ್ಲ. ಈ ವಿಷಯಕ್ಕೆ ಅಹೋರಾತ್ರಿ ಧರಣಿ ನಡೆಸುವುದರಿಂದ ಪಕ್ಷಕ್ಕೆ ಅನುಕೂಲವಾಗುವುದಿಲ್ಲ. ಆದ್ದರಿಂದ ಚರ್ಚೆಯ ನೆಪದಲ್ಲಿ ಈಶ್ವರಪ್ಪ ಹಾಗೂ ಸರಕಾರವನ್ನು ಕಟ್ಟಿಹಾಕೋಣ ಎನ್ನುವ ಮಾತನ್ನು ಹೇಳಿದ್ದರು. ಆದರೆ ಡಿ.ಕೆ.ಶಿವಕುಮಾರ ಅವರು ಅಹೋರಾತ್ರಿ ಧರಣಿಯ ತೀರ್ಮಾನಕ್ಕೆ ಬಂದಿದ್ದರಿಂದ, ಅನಿವಾರ್ಯವಾಗಿ ಅಹೋರಾತ್ರಿ ಧರಣಿಗೆ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದರು ಎನ್ನುವ ಮಾತುಗಳು ಕೇಳಿಬಂದಿದೆ.

ಮಾತು ಕೇಳಿ ಕೆಟ್ಟ ಕಾಂಗ್ರೆಸ್
? ಹಿರಿಯ ನಾಯಕರಿಗೆ ಇಷ್ಟವಿಲ್ಲದ ಧರಣಿ
? ಆರಂಭಿಸಿ, ಕೈಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣ

ಇಷ್ಟವಿಲ್ಲದ ಧರಣಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ವಾರಾಂತ್ಯದಲ್ಲಿಯೂ ಅಹೋರಾತ್ರಿ ಧರಣಿ ಮುಂದುವರಿಸುವಂತೆ ವಿಪ್ ಜಾರಿಯಾಗುತ್ತಿದ್ದಂತೆ, ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿರಿಯ ಶಾಸಕರು ಈ ರೀತಿಯ ಧರಣಿಯಿಂದ ಪಕ್ಷಕ್ಕೆ ಲಾಭವಿಲ್ಲ ಎನ್ನುವ ಮಾತನ್ನು ಬಹಿರಂಗವಾಗಿಯೇ ಹೇಳಿದ್ದರು.

ಆದರೆ ಆ ವೇಳೆಗಾಗಲೇ ಅಹೋರಾತ್ರಿ ಧರಣಿಯನ್ನು ವಾರಾಂತ್ಯದಲ್ಲಿಯೂ ನಡೆಸುವುದಾಗಿ ಹೇಳಿದ್ದರಿಂದ ಪ್ರತಿಭಟನೆ ನಡೆಸಲೇಬೇಕಾದ ಅನಿವಾ ರ್ಯತೆ ಎದುರಾಯಿತು. ಕೆಲ ನಾಯಕರು, ಇಂತಹ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಬದಲು, ಯಾರೋ ಮೂರನೇ ವ್ಯಕ್ತಿಯ ಮಾತು ಕೇಳುವುದು ಸರಿಯಲ್ಲ ಎನ್ನುವ ಅಸಮಾಧಾನ ಹೊರಹಾಕಿದ್ದಾರೆ.

ಏಜೆನ್ಸಿ ಒಂದರ ಮಾತು ಕೇಳಿ ಕೆಟ್ಟ ಕಾಂಗ್ರೆಸ್
? ಹಿರಿಯ ನಾಯಕರಿಗೆ ಇಷ್ಟವಿಲ್ಲದ ಧರಣಿ
? ಆರಂಭಿಸಿ, ಕೈಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣ