Sunday, 15th December 2024

ಪಂಡಿತರ ಜಂಘಾಬಲ ಉಡುಗಿಸಿದ ಹತ್ಯೆ…

ಸಂತೋಷಕುಮಾರ ಮೆಹೆಂದಳೆ

ಮಾರಣ ಹೋಮ: ಅನ್‌ಟೋಲ್ಡ್ ಸ್ಟೋರಿ ಆಫ್‌ ಕಾಶ್ಮೀರ (ಭಾಗ 6)

ಹಲವು ಬಾರಿ ಟಪ್ಲೂ ಮೇಲೆ ದಾಳಿ ಮತ್ತು ಬಡಿದಾಟಗಳೂ ನಡೆದಿದ್ದಾಗಲೂ ಜಗ್ಗದೆ ನಿಂತಿದ್ದ ಟಪ್ಲೂ ಅಲ್ಲಲ್ಲಿ ಕಾಶ್ಮೀರ ಕಣಿವೆ ತೊರೆಯುತ್ತಿರುವ ಮತ್ತು
ಹತ್ಯೆಗಳು ನಡೆಯುತ್ತಿವೆ ಎಂದಾಲೆಲ್ಲ ತುರ್ತಾಗಿ ಧಾವಿಸಿ ತಡೆಯುವ ಮತ್ತು ಧೈರ್ಯ ತುಂಬುವ, ನೇರವಾಗಿ ಮೂಲಭೂತವಾದಿಗಳನ್ನು ವಿರೋಽಸುವ
ಪ್ರಯತ್ನದಲ್ಲಿದ್ದರು. ಆ ಹೊತ್ತಿಗೆ ಒಂದಷ್ಟು ಕಾಶ್ಮೀರ ಕಣಿವೆಯ ದಳ್ಳುರಿಯ ಕತೆಗಳು ಮುಂದಕ್ಕೆ ಹೋಗಿದ್ದು, ಹತ್ಯಾಕಾಂಡ ತಡವಾಗಿದ್ದು ಎಂದೇ ನಾದರೂ ಇದ್ದರೆ ಅದಕ್ಕೆ ಕಾರಣ ಉಗ್ರರು ಮತ್ತು ಹಿಂದೂ ಪಂಡಿತರ ಮಧ್ಯೆ ನಿಂತಿದ್ದ ಕಬ್ಬಿಣದ ಕಡಲೆಯಾಗಿ ಟೀಕಾಲಾಲ್ ಟಪ್ಲೂ.

ಇದರ ವಿಪರೀತತೆ ಮತ್ತು ಅಪಾಯತೆಗಳನ್ನು ಅರಿತ ಟಪ್ಲೂ ಕುಟುಂಬ ಜತೆಗಿದ್ದರೆ ಯಾವತ್ತಿಗಿದ್ದರೂ ಹೆಚ್ಚಿನ ಆಪತ್ತು, ಅವರನ್ನೇ ಬಳಸಿಕೊಂಡು ತಮ್ಮನ್ನು ಹಣಿಯುತ್ತಾರೆ ಎಂದು ಸೆ. 8. 1989 ರಂದು ತಮ್ಮ ಕುಟುಂಬವನ್ನೆ ದಿಲ್ಲಿಗೆ ಸ್ಥಳಾಂತರಿಸಿ ಮತ್ತೆ ಕಾಶ್ಮೀರ ಕಣಿವೆಗೆ ಹಿಂದಿರುಗಿ ಅಲ್ಲಿನ ಜನಕ್ಕೆ ಬೆಂಬಲವಾಗಿ ನಿಂತುಬಿಟ್ಟ. ಇತ್ತ ಉಗ್ರರಿಗೆ ದೊಂಬಿ ಶುರುವಾಗಿ ಆರೆಂಟು ತಿಂಗಳು ಕಳೆದರೂ ಕಣಿವೆಯಲ್ಲಿ ತಮ್ಮ ಹವಾ ಅಂದುಕೊಂಡ ವೇಗದಲ್ಲಿ ನಡೆಯುತ್ತಿಲ್ಲ ಎಂದು ಅರಿವಾಗಲು ಎದುರಿಗೆ ಕಂಡಿದ್ದು ಟೀಕಾಲಾಲ್ ಟಪ್ಲೂ ಎನ್ನುವ ಬಿ.ಜೆ.ಪಿ.ಯ ಪ್ರಮುಖ ಹಿಂದೂ ರಾಷ್ಟ್ರೀಯವಾದಿ ನಾಯಕ. ಎಲ್ಲ ಹದಗೆಡುತ್ತಿರುವ ಮತ್ತು ದಾರಿಗೆ ಮುಳ್ಳಾಗಿರುವ ಟಪ್ಲೂವನ್ನು ಸರಿಸದಿದ್ದರೆ ಕೆಲಸ ಕೆಡುತ್ತದೆ ಎಂದು ಶ್ರೀನಗರದಲ್ಲಿ ಸೆಪ್ಟಂಬರ್ 10ರ ರಾತ್ರಿ ಟಪ್ಲೂವನ್ನು ಮುಗಿಸುವ ಯೋಜನೆಯನ್ನು ಜೆ.ಕೆ.ಎಲ್.ಎಫ್. ನ ಜಾವೇದ್ ಅಹಮದ್ ಅಲಿ ಅಲಿಯಾಸ್ ಜಾವೇದ್ ನಾಲ್ಕ ಎನ್ನುವವನ ತಂಡಕ್ಕೆ ವಹಿಸಲಾಯಿತು.

ಅದರ ಮರುದಿನ ಅವನ ಮನೆಯ ಬಳಿ ಹಂತಕರು ಹೊಂಚು ಹಾಕುತ್ತಿದ್ದರೆ ಸಹನೆ ಕಳೆದುಕೊಂಡ ಟೀಕಾಲಾಲ್ ಟಪ್ಲೂ ಹೊರಗೆ ಬಂದವನೆ, ‘ಬರ್ರೊ ದಮ್ಮಿದ್ರೆ ಹೊಡಿರೋ’ ಎಂದು ಅಬ್ಬರಿಸಿ ಸವಾಲೆಸೆದು ಬಿಟ್ಟರು. ಅವನ ಆರ್ಭಟಕ್ಕೆ ಮುಖ್ಯ ರಸ್ತೆಯೇ ಆವತ್ತು ನಿರ್ಮಾನುಷ್ಯವಾಗಿತ್ತು. ಫ್ರಂಟ್‌ಗೆ ಆವತ್ತೂ ಯಶಸ್ಸು ದಕ್ಕಲಿಲ್ಲ. ಆದರೆ ಬರಲಿರುವ ದಿನಗಳಲ್ಲಿ ಅತ್ಯಂತ ಅರ್ಜೆಂಟ್ ಆಗಿ ಲಾಲಜೀಯನ್ನು ತೆಗೆಯ ಬೇಕೆನ್ನುವ ಠರಾವ್ ಜರೂರ್ ಆಗಿ ಪಾಸು ಮಾಡಿತ್ತು ಜೆ.ಕೆ.ಎಲ್.ಎಫ್. ಟಪ್ಲೂ ಅತ್ಯಂತ ಕಟ್ಟರ್ ಹಿಂದುತ್ವವಾದಿ ಅದಕ್ಕಾಗಿ ಜೆಹಾದ್ ಅನಿವಾರ್ಯ ಎಂದು ಅವನ ಮೇಲೆ ಫತ್ವಾ ಜಾರಿ ಯಾಗಿತ್ತಲ್ಲ.

ಸೆ.14 ರಂದು ‘ಚಿಂಕ್ರಾಲ್ ಮೊಹಲ್ಲ’ದ ಮುಖ್ಯ ರಸ್ತೆಗೆ ಇಳಿಯುತ್ತಿದ್ದಂತೆ ಅಡಗಿ ಕೂತಿದ್ದ ಪಾತಕಿಗಳು ನೇರವಾಗಿ ಎದುರಿಗೆ ಬಂದವರೇ ಟಪ್ಲೂವಿನ ಎದೆಗೆ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಮೊದಲ ಗುಂಡು ಹಾರಿಸಿದ್ದರು. ಥಟ್ಟನೆ ಕೆಳಗೆ ಬಿದ್ದ ಟಪ್ಲೂ ಮೇಲೆ ಎಂಟು ಸುತ್ತು ಎ.ಕೆ.47 ನಿಂದ ಗುಂಡಿನ ಮಳೆಗೆರೆದಿದ್ದರು. ಉಸಿರೆಳೆದುಕೊಳ್ಳುವ ಮೊದಲೇ ಟಪ್ಲೂ ಕೊಲೆಯಾಗಿದ್ದರು. ಶ್ರೀನಗರ ಹಾಡು ಹಗಲೇ ಮೊಟ್ಟ ಮೊದಲ ಬಹಿರಂಗ ಜೆಹಾದ್‌ನ್ನು ಕಂಡಿತ್ತು. ಕಾಶ್ಮೀರ ಪಂಡಿತರ ಮೊದಲ ಮತ್ತು ಕೊನೆಯ ಆಶಾ ಕಿರಣವಾಗಿದ್ದ ಟಪ್ಲೂವನ್ನು ಸರಿಸುವಲ್ಲಿ ಉಗ್ರರು ಯಶಸ್ವಿಯಾಗಿದ್ದರು. ಆದರೂ ಪಂಡಿತರು ಮಾತ್ರ ಅದೇ ನಂಬಿಕೆಯೊಂದಿಗೆ ಕೂತೇ ಇದ್ದರು.

ಇತ್ತ ದಿಲ್ಲಿಯಲ್ಲಿದ್ದ ‘ಸರಲಾ ಟಪ್ಲೂ’ ಈ ಕೊಲೆಗೆ ದೇಶ ಮತ್ತು ವ್ಯವಸ್ಥೆ ಸ್ಪಂದಿಸಿದ ರೀತಿಗಾಗಿ ಕೊನೆಯವರೆಗೂ ಒಂದೇ ಮಾತು ಆಡಿದ್ದರು. ‘ಟಪ್ಲೂ ನೀವು ತಪ್ಪು ನೆಲದಲ್ಲಿ ಹುಟ್ಟಿದ್ದಿರಿ. ನಿಮ್ಮ ತ್ಯಾಗ ಮತ್ತು ಬದ್ಧತೆಗೆ ಇಲ್ಲಿ ಬೆಲೆ ಎಂದರೆ ಒಂದು ಸಾಲು ಬರಹ ಮಾತ್ರ’ ಅದು ಈವರೆಗೂ ಸತ್ಯವಾಗಿದೆ.
ಕಾರಣ ಆವತ್ತಿನ ಘಟನೆಯ ಒಂದೇ ಒಂದು ಚಿತ್ರವನ್ನೂ ಯಾವ ಮಾಧ್ಯಮಗಳೂ ದಾಖಲಿಸಲಿಲ್ಲ. ಐಪ್ಲೂವಿನ ಅಂತ್ಯಕ್ರಿಯೆಗೆ ಬಿಜೆಪಿ ಐರನ್ ಮ್ಯಾನ್ ಎಲ್.ಕೆ. ಅಡ್ವಾಣಿ ಸ್ವತಃ ಆಗಮಿಸಿದ್ದರು. ಎಲ್ಲೆಡೆ ಹಿಂದೂಗಳು ಸಂಘಟಿತರಾದರು. ಆವರೆಗಿನ ಕಣಿವೆ ಕಂಡ ಅತಿ ದೊಡ್ಡ ಮೆರವಣಿಗೆಯಾಗಿ ಅದು ಮಾರ್ಪಟ್ಟಿತ್ತು. ಆವತ್ತು ಕೇದಾರ್‌ನಾಥ್ ಸಾಹ್ನಿ ಸೇರಿದಂತೆ ಹೆಚ್ಚಿನ ಬಿ.ಜೆ.ಪಿ ನಾಯಕರು ಟಪ್ಲೂಗೆ ಅಂತಿಮ ನಮನ ಸಲ್ಲಿಸಿದರೆ ಅದೇ ಹೊತ್ತಿಗೆ ಈ ಬೆಳವಣಿಗೆ ಕಾಶ್ಮೀರ್ ಫ್ರಂಟ್‌ನ ನಿದ್ದೆಗೆಡಿಸಿತ್ತು.

ನಂತರದ ದಿನಗಳಲ್ಲಿ ಜಾವೇದ್ ಅಹಮ್ಮದ್ ಅಲಿ ಅಲಿಯಾಸ್ ಜಾವೆದ್ ನಾಲ್ಕಾ ಎಂಬಾತ ಈ ಎನ್‌ಕೌಂಟರ್‌ನ ನೇತೃತ್ವ ವಹಿಸಿದ್ದು ಗೊತ್ತಾಗಿ, ಇನ್ಯಾವತ್ತೋ ಅವನು ವಿಚಾರಣೆಯಲ್ಲಿ ಸಿಕ್ಕಾಗ ಎಲ್ಲ ಬಿಟ್ಟು ಟಪ್ಲೂನ್ನ ಮೊದಲು ಯಾಕೆ ಕೊಂದೆ ಎಂದರೆ, ಲಾಲಜೀ ಕಶ್ಮೀರ್ ವಿಷಯದಲ್ಲಿ ತಲೆ ಹಾಕದಿದ್ದರೂ ಕೊಲ್ಲುತ್ತಿದ್ದೆ. ಕಾಶ್ಮೀರ ಖಾಲಿ ಮಾಡಿಸುವುದು ದೊಡ್ಡ ವಿಷಯವಾಗಿರಲಿಲ್ಲ. ಅದು ಇವತ್ತಲ್ಲ ನಾಳೆ ಖಾಲಿ ಆಗೇ ಆಗುತ್ತದೆ. ಆದರೆ ಲಾಲಜಿ ಹಿಂದೆ ಕರಸೇವೆಗಾಗಿ ಕಾಶ್ಮೀರದಿಂದ ಇಟ್ಟಿಗೆ ಕಳುಹಿಸಿದ್ದರಲ್ಲ, ಅದಕ್ಕಾಗಿ ಅಯೋಧ್ಯಾ ಕರಸೇವಕರಿಗೆ ಚಂದಾ ಎತ್ತಿದ್ದರಲ್ಲ. ಇವತ್ತು ಲಕ್ಷ ಗಟ್ಟಲೇ ಹಣವನ್ನು ಕೇವಲ ಚಂದಾ ಎತ್ತಿ ಭರಿಸಬಲ್ಲ ವ್ಯಕ್ತಿ ನಾಳೆ ಕಾಶ್ಮೀರಕ್ಕಾಗಿ ಭಾರತದುದ್ದಕ್ಕೂ ಓಡಾಡಲ್ಲ ಅನ್ನೋದು ಏನು ಗ್ಯಾರಂಟಿ೩೯;
ಎಂದಿದ್ದ.

ಅಸಲಿಗೆ ಅವನಿಗೆ ಕಾಶ್ಮೀರ್ ಗಲಭೆ ಮತ್ತು ಆರಂಭ ನೆಪವಾಗಿತ್ತು. ಆದರೆ ಇದ್ದ ಟಾರ್ಗೆಟ್ ಬೇರೆಯೇ ಆಗಿತ್ತು. ಅದನ್ನೆ ಜಾವೆದ್ ನಾಲ್ಕಾ  ಬಳಸಿ ಕೊಂಡಿದ್ದ. ಕಣಿವೆ ಬೆಚ್ಚಿ ಬಿದ್ದಿತ್ತು. ಕಾರಣ ಟಪ್ಲೂ ಮರ್ಡರ್ ಕೇವಲ ಗಲಭೆ ಎಂದಾಗಿರಲಿಲ್ಲ. ಅದೊಂದು ಮಾರಣ ಹೋಮದ ಪಕ್ಕಾ ಮುನ್ಸೂಚನೆ ಯಾಗಿತ್ತು. ಆವತ್ತಿನ ರಾತ್ರಿಯೇ ಶ್ರೀನಗರ ಸೇರಿದಂತೆ ಹೆಚ್ಚಿನ ಹೊರಭಾಗದ ಮತ್ತು ಹಿಂದೂಗಳು ಇರುವ ಕಾಲೋನಿಗಳಲ್ಲೆಲ್ಲ ಕರೆಂಟು ತೆಗೆಯಲ್ಪ ಟ್ಟಿತ್ತು. ರಾತ್ರಿಯಿಡಿ ಗುಂಡುಗಳು, ಕಲ್ಲುಗಳು ಮನೆಯ ಮೇಲೆ ಎಸೆಯಲ್ಪಡುತ್ತಿದ್ದವು. ಪೂರ್ತಿ ರಾತ್ರಿ ದಾಂಧಲೆ ನಡೆಯಿತು. ಆದಾಗ್ಯೂ ಹಿಂದೂ ಕಾಶ್ಮೀರಿ ಪಂಡಿತರು ನಂಬಿಕೆ, ಭರವಸೆ ಎನ್ನುವ ಸವಕಲು ಆಯುಧ ನಂಬಿ ಕುಳಿತೇ ಇದ್ದರು. ಇದಾದ ದಿನವೇ ಸ್ಥಳೀಯ ಮತ್ತೊಂದು ಪತ್ರಿಕೆ ಈ ಬಗ್ಗೆ ಹಿಂದೂ ಗಳೇ ತೊಲಗಿ ಎನ್ನುವ ಎಚ್ಚರಿಕೆ ನೀಡಿತ್ತು.

ಅದೆಲ್ಲ ದಾಟಿ ಬಂದೇ ಬಂತು ಆ ದಿನಾಂಕ 19 ಜನೇವರಿ. 1990. ಇತ್ತ ಲಾಲಜೀ ಹತ್ಯೆ ಬಿಸಿ ಆರುವ ಮೊದಲೇ ಆವತ್ತು ರಾತ್ರಿ ಮನೆಯ ಹೊರಗೆಲ್ಲ ಜನಗಳ ಧಡಾ ಪಡಿ ನಡೆದಿತ್ತಲ್ಲ. 1990 ಜನೇವರಿ ಮೊದಲಾರ್ಧದ ಬೆಳಿಗ್ಗೆ ಎದ್ದು ನೋಡಿದರೆ ಹುಡುಕಿ ಹುಡುಕಿ ಪಂಡಿತರ ಮನೆಯ ಬಾಗಿಲಿಗೆ ಪೊಸ್ಟರ್‌ಗಳನ್ನು ಅಂಟಿಸಲಾಗಿತ್ತು. ಹೆಚ್ಚಿನ ಗೋಡೆಗಳಿಗೆಲ್ಲ ಹಸಿರು ಬಣ್ಣ ಬಳಿಯಲಾಗಿತ್ತು. ಅಲ್ಲಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು, ಕಶ್ಮೀರದಲ್ಲಿ ಇರುವುದಾದರೆ ಸಂಪೂರ್ಣ ಷರಿಯತ್‌ನ್ನೆ ಪಾಲಿಸತಕ್ಕದ್ದು, ಡ್ರೆಸ್ ಕೋಡ್ ಇರಲೇಬೇಕು, ಸರಾಯಿ, ಸಿನೇಮ ನಿಷೇಧ ಮತ್ತು ಮಹಿಳೆಯರಿಗೆ ದಿಗ್ಭಂಧನ ಎನ್ನುತ್ತಿದ್ದರೆ, ರಸ್ತೆಯ ಮೇಲೆ ಮುಖಕ್ಕೆ ಮಾಸ್ಕ್ ಬಿಗಿದುಕೊಂಡ ಬಂದೂಕು ಧಾರಿಗಳು ದಾರಿಯ ಮೇಲೆ ಸಿಕ್ಕವರಿಗೆಲ್ಲ ವಾಚುಗಳನ್ನು ಪಾಕಿಸ್ತಾನ ಟೈಮ್‌ಗೆ ಸೆಟ್ ಮಾಡಿಕೊಳ್ಳುವಂತೆ ಬೆದರಿಸುತ್ತಿದ್ದರು. ಎಲ್ಲೆಡೆ ಹಸಿರುಮಯ ಮಾಡಲಾಗಿತ್ತು.

‘ಹಿಂದೂಗಳೇ ಕಾಶ್ಮೀರ ಬಿಟ್ಟು ಹೋಗಿ ಇಲ್ಲ ಇಸ್ಲಾಂ ಸ್ವೀಕರಿಸಿ, ಎರಡೂ ಆಗದಿದ್ದರೆ ಸಾಯಲು ಸಿದ್ಧರಾಗಿ..’ ಇದನ್ನು ನೋಡುತ್ತಿದ್ದರೆ ಮೊದಲ ಬಾರಿಗೆ
ಭರವಸೆಯ ಮೇಲೆ, ಭರವಸೆ ಕಳೆದುಕೊಂಡ ಪಂಡಿತರು ಕುಸಿಯುತ್ತಿದ್ದರೆ, ಪಕ್ಕದ ಮನೆ ಹುಡುಗ ಮಾತ್ರ ‘ಏನಾಗಲ್ಲ ಅಂಕಲ್.. ನಾವೆಲ್ಲ ಇದ್ದೇವಲ್ಲ. ಹೆದರಬೇಡಿ’ ಎಂದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದನ್ನೂ ತಡೆದುಬಿಟ್ಟರು. ಕಣ್ಣಲ್ಲಿ ಕಣ್ಣಿಟ್ಟು ಪಂಡಿತರು ನೋಡಿದ್ದರೆ ಆಗಲೇ ಅವನ ಅಕ್ಕಪಕ್ಕ ಇದ್ದ ಇನ್ನಿತರ ಹುಡುಗರ ಕಣ್ಣ ಅಂಚಿನಲ್ಲಿ ಹಸಿದ ತೋಳದ ಅನಾಹುತಕಾರಿ ಪೈಶಾಚಿಕ ಹೊಂಚು ಎದ್ದು ಕಾಣುತ್ತಿತ್ತೇನೋ, ಸರಿಯಾಗಿ ಅದನ್ನೂ ನೋಡದೆ, ಮತ್ತೆ ನಂಬಿಬಿಟ್ಟರು ಪಂಡಿತರು.

ಹಸಿಹಸಿ ದುರಂತ ಎಂದರೆ ಇದೇ. ಅವತ್ತೇ ರಾತ್ರಿಯ ಹೊತ್ತಿಗೆ ಮತ್ತೊಮ್ಮೆ ಜೀಪು ಮೈಕು ಕಟ್ಟಿಕೊಂಡು ಬೀದಿಗಳಲ್ಲಿ ಮೆರವಣಿಗೆ ಹೊರಟಿತ್ತು. ಕದ್ದು ಕಿಟಕಿಯ ಸಂದಿನಿಂದ ನೋಡುತ್ತಿದ್ದ ಪಂಡಿತರ ಕಣ್ಣಿಗೆ ಅವನು ಕಂಡಿದ್ದ. ಮಹಮ್ಮದ್ ಫಾರೂಕ್ ಧಾರ್ ಅಲಿಯಾಸ್ ಬಿಟ್ಟಾ ಕರಾಟೆ. quoಣ;ನಿಮ್ಮ
ನಿಮ್ಮ ಹೆಂಗಸರು ಮತ್ತು ಹೆಣ್ಣು ಮಕ್ಕಳನ್ನು ಇಲ್ಲಿಯೇ ಬಿಟ್ಟು ಹೊರಡಿರಿ. ನಾವು ಮತ್ತೊಂದು ಪಾಕಿಸ್ತಾನ ನಿರ್ಮಿಸುತ್ತೇವೆ’ ಎಂದು ನೇರ ಎಚ್ಚರಿಕೆ ಕೊಡುತ್ತಿದ್ದರೆ, ಮತ್ತೊಂದು ಕಡೆಯಿಂದ ‘ಗಡಿಯಾಚೆಯಿಂದ ಕಲಾಶ್ನಿಕೋವ್ ತರುತ್ತೇವೆ, ಕಾಶ್ಮೀರ್ ವಿಲೀನವಾಗಲಿದೆ’ ಎಂಬೆಲ್ಲ ಕೂಗು ಕೇಳಿಸು ವಾಗಲೇ, ರಾತ್ರಿಯ ಕತ್ತಲು ಅಡರುವ ಮೊದಲೇ ಬೆಳಿಗ್ಗೆ ಧೈರ್ಯ ಹೇಳಿದ್ದ ಹುಡುಗನ ನೆರಳು ಮನೆಯಾಚೆಗೆ ಕಾಣಿಸಿತ್ತು.

ಅಷ್ಟು ದೂರದಲ್ಲಿ ಮತ್ತೊಬ್ಬ ಕೈ ಹೊಸೆಯುತ್ತಾ ಹೊಂಚು ಹಾಕುತ್ತಿದ್ದ. ಅಪರಿಮಿತ ಧೈರ್ಯ ಮತ್ತು ಇವತ್ತು ಏನು ಬೇಕಾದರೂ ಮಾಡಿಬಿಡಬಹುದು,
ಹಿಂದೂ ಹೆಂಗಸರ ಎದೆಗೆ ಕೈಯಿಟ್ಟರೆ ಜಗತ್ತಿನ ಯಾವನೂ ಇವತ್ತು ನಮ್ಮನ್ನು ತಡುವಿಕೊಳ್ಳುವುದಿಲ್ಲ, ಕೇಸಂತೂ ಮೊದಲೇ ಆಗುವುದಿಲ್ಲ ಎಂಬ ವಿನಾಶಕಾರಿ ಧೈರ್ಯ ನೀಡಿದ್ದು ಇದೇ ಉಗ್ರ ಬಿಟ್ಟಾ ಕರಾಟೆ. ಕಾರಣ ಅವನಿಗೆ ಗೊತ್ತಿತ್ತು ಇಂಥಾ ಸಮಯದಲ್ಲೆ ಹೆಂಗಸರೇ ಸುಲಭದ ಶಿಖಾರಿ ಎಂದು.

(ಮುಂದುವರೆಯುವುದು)