= ಡಾ.ರಂಗೇಗೌಡ.ಬಿ.ಸಿ ಎಂಎಸ್, ಡಿಎನ್ಬಿ(ಯೂರಾಲಜಿ) ಯೂರಾಲಜಿ ಹಾಗೂ ಟ್ರಾನ್ಸ್‌ಪ್ಲಾಂಟ್ ಸರ್ಜನ್
ಕಿಡ್ನಿ ನಮ್ಮ ದೇಹದ ಅತ್ಯಾಧುನಿಕ ಫಿಲ್ಟರ್. ಹುರುಳಿ ಬೀಜದಂತಿರುವ ಈ ಕಿಡ್ನಿ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳು, ಹೆಚ್ಚುವರಿ ನೀರು ಮತ್ತು ರಕ್ತದಲ್ಲಿರುವ ಕಲ್ಮಶವನ್ನು ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ದೇಹದ ಆರೋಗ್ಯದಲ್ಲಿ ಮುಖ್ಯಸ್ಥನ ಪಾತ್ರವಹಿಸುವ ಈ ಕಿಡ್ನಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ ೫ನ್ನು, ವಿಶ್ವ ಕಿಡ್ನಿ ದಿನವಾಗಿ ಆಚರಿಸಲಾಗುತ್ತದೆ. ಈ ದಿನ ಕಿಡ್ನಿಗೆ ಸಂಬಂಧಿಸಿದ ಚರ್ಚೆಗಳು ಹಾಗೂ ವಿಚಾರಗೋಷ್ಟಿಗಳು ವಿಶ್ವದ ಎಲ್ಲಾ ಮೂತ್ರಪಿಂಡ ತಜ್ಞರ
ಸಮ್ಮುಖದಲ್ಲಿ ನಡೆಯುತ್ತಿರುತ್ತದೆ. ಪ್ರತಿ ವರ್ಷ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ನೆಫ್ರಾಲಜಿ ಮತ್ತು ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಕಿಡ್ನಿ ಪೌಂಡೇಷನ್ಸ್ ಒಂದು ಧ್ಯೇಯವಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತದೆ.
ಈ ಬಾರಿ ಕಿಡ್ನಿ ಹೆಲ್ತ ಫಾರ್ ಹಾಗೂ ಪ್ರಿಪೇರಿಂಗ್ ಅನ್ ಎಕ್ಸ್ಪೆಕ್ಟೆಡ್ ಸಪೋರ್ಟಿಂಗ್ ದಿ ವಲ್ಯುನರೇಬಲ್ ಬೆಂಬಲ ಎನ್ನುವ ಧ್ಯೇಯವನ್ನು ಹೊಂದಿದೆ. ಮೂತ್ರಪಿಂಡದ ಆರೋಗ್ಯದ ಬಗೆಗಿನ ಮಾಹಿತಿ ಎಲ್ಲರಿಗೂ ತಲುಪುವಂತೆ ಮಾಡಬೇಕು. ಜತೆಗೆ ಅನಿರೀಕ್ಷಿತವಾಗಿ ಕಿಡ್ನಿ ವೈಫಲ್ಯಕ್ಕೆ ಒಳಪಡುವ ಸಾಧ್ಯತೆ ಹೆಚ್ಚಿರುವ ರೋಗಿಗಳಿಗೆ ಬೆಂಬಲ ನೀಡಬೇಕು ಎನ್ನುವುದು ಇದರ ಉದ್ದೇಶ.
ಈ ಲಕ್ಷಣಗಳಿದ್ದಲ್ಲಿ ಜೋಕೆ!
ವಾಕರಿಕೆ, ಹಸಿವು ಕಡಿಮೆಯಾಗುವುದು, ಆಯಾಸ, ನಿಶ್ಯಕ್ತಿ, ಅನಿದ್ರತೆ, ಪದೇ ಪದೇ ಮೂತ್ರವಿಸರ್ಜನೆ/ ಕಡಿಮೆ ಪ್ರಮಾಣದ ಮೂತ್ರವಿಸರ್ಜನೆ, ಸ್ನಾಯುಸೆಳೆತ, ಪಾದದಲ್ಲಿ ಊತ, ಒಣ ಚರ್ಮ, ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ, ಕಣ್ಣಿನ ಕೆಳಗೆ ಜೋಂಪು ಇವು ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣಗಳು. ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕಿಡ್ನಿ ಸಮಸ್ಯೆಯ ಸಾಧ್ಯತೆಗಳು ಹೆಚ್ಚಿರುತ್ತವೆ. ಸಮಸ್ಯೆ ಗಂಭೀರವಾಗುವುದು ಯಾವಾಗ?
ಗಮನಿಸಲೇ ಬೇಕಾದ ಅಂಶವೆಂದರೆ ಎಷ್ಟೋ ಜನರಿಗೆ ಕಿಡ್ನಿ ಸಮಸ್ಯೆ ಉಲ್ಬಣಿಸಿದ ನಂತರವಷ್ಟೇ ಗೊತ್ತಾಗುವಂತಹದ್ದು.
ಅಂದರೆ ನಾನು ಮೇಲೆ ಹೇಳಿದ ಲಕ್ಷಣಗಳು ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ. ಬಹಳಷ್ಟು ಬಾರಿ ಲಕ್ಷಣಗಳು ಇಲ್ಲದೆಯೇ ಕೊನೆಯ ಹಂತದಲ್ಲಿ ಅಂದ್ರೆ ಕಿಡ್ನಿ ನಿಷ್ಕ್ರಿಯವಾಗುವ ಮೂರು ಅಥವಾ ನಾಲ್ಕನೇ ಹಂತದಲ್ಲಿ ಪ್ರಕಟವಾಗುತ್ತದೆ. ಆಗ ಮಾತ್ರ ನಾವು ವೈದ್ಯರಲ್ಲಿಗೆ ಬರುತ್ತೇವೆ. ಹಾಗಾಗಿ ಮೇಲಿನ ಲಕ್ಷಣಗಳು ಇದ್ದರೂ, ಇಲ್ಲದಿದ್ದರೂ ನಾವು ಸ್ವಯಂ ಪ್ರೇರಿತರಾಗಿ ಪ್ರಾಥಮಿಕ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಈ ಸಲಹೆಗಳು ನಿಮಗೆ ಉಪಯೋಗಕಾರಿ
ನಿಯಮಿತ ಪರೀಕ್ಷೆ: ಇದರಲ್ಲಿ ನಾವು ವಾರ್ಷಿಕ ಒಮ್ಮೆಯಾದರೂ ಕಿಡ್ನಿಯ ಕ್ಷಮತೆ ಪರೀಕ್ಷಿಸಿಕೊಳ್ಳಬೇಕು ಸಮತೋಲಿತ ಆಹಾರ: ಕಡಿಮೆ ಉಪ್ಪು, ಸಂಸ್ಕರಿಸಿದ ಆಹಾರ ಗಳ ಸೇವಿಸದಿರುವುದು, ಒಮೆಗಾ ೩ -ಟಿಆಸಿಡ್ ಹೆಚ್ಚಿರುವ ಆಹಾರ ಬಳಕೆ, ಕೊಬ್ಬಿನಂಶವುಳ್ಳ ಆಹಾರ ಕಡಿಮೆ ಮಾಡಿ.
ದೈಹಿಕ ಚಟುವಟಿಕೆ: ವಾರಕ್ಕೆ ಕನಿಷ್ಠ ಐದು ದಿನವಾದರೂ ದಿನಕ್ಕೆ ೨೦ ನಿಮಿಷಗಳಂತೆ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು.
ರಕ್ತದಲ್ಲಿನ ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಬೇಕು.
ಬಿಪಿ, ಮಧುಮೇಹ ನಿಯಂತ್ರಣ.
ಧೂಮಪಾನದಿಂದ ದೂರವಿರುವುದು.
ಮೂತ್ರಪಿಂಡದಲ್ಲಿ ಕಲ್ಲು, ಮೂತ್ರ ಕೋಶದ ಸೋಂಕು, ಮೂತ್ರದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವುದು.
ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ.
ಸಣ್ಣ ಪರೀಕ್ಷೆಯೇ ಸಾಕು
ಎಷ್ಟೋ ಜನರು ಕಿಡ್ನಿ ಪರೀಕ್ಷೆ ಎಂದರೆ ದುಬಾರಿ ಎನ್ನುವ ಆಲೋಚನೆ ಹೊಂದಿರುತ್ತಾರೆ. ನಾನು ಹೇಳುವುದೇನೆಂದರೆ ಸಣ್ಣ ಪರೀಕ್ಷೆ ಅಂದ್ರೆ ಯೂರಿನ್ ರೂಟೀನ್ (ನೂರು ರೂಗಳ ಒಳಗೆ) ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಕಿಡ್ನಿ ಸಮಸ್ಯೆ ಬಗ್ಗೆ ತಿಳಿಯುತ್ತದೆ. ಒಂದು ವೇಳೆ ಈ ಹಂತದಲ್ಲಿ ಕಿಡ್ನಿ ಸಮಸ್ಯೆ
ಇರುವುದು ಗೊತ್ತಾದರೆ ಮಾತ್ರ ಮುಂದಿನ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ.
ಬಿಪಿ ಹಾಗೂ ಶುಗರ್ ಇದೆಯಾ?
ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆ ಕಿಡ್ನಿ ಸಮಸ್ಯೆ ಉಂಟಾಗುವುದಕ್ಕೆ ಪ್ರಮುಖ ಕಾರಣ. ಕಟ್ಟುನಿಟ್ಟಾಗಿ ಬಿಪಿ ಮತ್ತು ಸಕ್ಕರೆ ಖಾಯಿಲೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊ ಳ್ಳಬೇಕು. ಬಿಪಿ ಹಾಗೂ ಶುಗರ್ ಇದ್ದವರು ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿಯ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಇದು ಕಿಡ್ನಿಯ ವೈಫಲ್ಯ ಉಂಟಾಗುವುದನ್ನು ತಪ್ಪಿಸುತ್ತದೆ.