Saturday, 14th December 2024

ಮಾರಣ ಹೋಮ

(ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ)

ಸಂತೋಷಕುಮಾರ ಮೆಹೆಂದಳೆ

ಬಹುಷಃ ಹುಟ್ಟಿಸಿದ್ದಕ್ಕೆ ದೇವರನ್ನೇ ಪಾಪಿ ಎಂದ, ಬೈದ, ಸಾಧ್ಯವಾದರೆ ಓ ದೇವರೇ ನೀನು ಒಮ್ಮೆ ಹೆಂಗಸಾಗು ಎಂದು ಶಪಿಸಿದ್ದೇ ಆದರೆ, ಅದು ಕಾಶ್ಮೀರಿ ಪಂಡಿತರ ಹೆಂಗಸರು. ವಯಸ್ಸಿಗೆ ಬರುವ ಮೊದಲೇ ಲೈಂಗಿಕತೆ ಎಂದರೇನೆಂದು ಅರಿವಾಗುವ ಮೊದಲೇ
ಬಂದೂಕಿನ ತುದಿಗೂ. ಏನೂ ಸಿಗದಿದ್ದಾಗ ಅಲ್ಲೆ ಬಿದ್ದಿದ್ದ ಮರದ ರೆಂಬೆಯ ತುದಿಗೂ ಸಿಕ್ಕು ಗರ್ಭವನ್ನೂ ರಂಧ್ರ ಮಾಡಿ ಕೊಂಡು ಸತ್ತು ಹೋದ ಎಳೆ ಎಳೆಯ ಕಾಶ್ಮೀರಿ ಪಂಡಿತರ ಹುಡುಗಿಯರು.

ನಿಮ್ಮ ಹೆಂಡಿರು, ವಯಸ್ಸಿಗೆ ಬಂದಿರೋ ಹೆಣ್ಣುಮಕ್ಕಳನ್ನು ಇಲ್ಲಿ ಬಿಟ್ಟು ಹೋಗಿ. ನಾವು ಮತ್ತೊಂದು ಪಾಕಿಸ್ತಾನ ನಿರ್ಮಿಸುತ್ತೇವೆ. ಇವೆಲ್ಲ ಕೇವಲ ಸ್ಯಾಂಪಲ್‌ಗಳು. ಇದಾಗ್ಯೂ ಉಳಿದವರು ಮುಂದೇನಾಯ್ತು ಅನ್ನೋಕೆ ಇವತ್ತಿಗಿಲ್ಲ. ಕಾರಣ ಬದುಕುಳಿಯಲಿಲ್ಲ. ಉಳಿದವರು ಕೊನೆಯ ನಾಲ್ಕಾರು ದಿನಗಳನ್ನೂ ಬದುಕು ಇದ್ದಾಗ ಯಾಕಾದರೂ ಬದುಕಿದಿವೋ ಎನ್ನುವ ರೌರವ ಬದುಕು ಬದುಕಿ ಬಿಟ್ಟರು ಕಾಶ್ಮೀರಿ ಹೆಂಗಸರು ಮತ್ತು ಕೊನೆಯ ದಿನಗಳನ್ನು ಮತಾಂಧರ ಕೈಯ್ಯಲ್ಲಿ ಸಿಕ್ಕು ಸತ್ತ ಹಿಂದೂ ಪಂಡಿತರು.

ಕಾರಣ ಮನೆ ಬಿಟ್ಟವರು ಊರು ಬಿಟ್ಟವರು ಹೇಗೋ ಹೊರಗೆ ಬಿದ್ದರೂ, ಉಳಿದವರಲ್ಲಿ ಹಿಂದೂ ರಕ್ತದಲ್ಲಿ ಬಂದಿರುವ ನಂಬಿಕೆ ಮತ್ತು ಭರವಸೆ ಎನ್ನುವ ಸವಕಲು ಪದಗಳು ಅವರನ್ನು ತೀರ ಎದ್ದೇಳದಂತೆ ಮಾಡಿದುವಲ್ಲ. ಆಗ ಉಳಿದದ್ದೇ ನೋಡೋಣ ತೀರ ನಮ್ಮನೆ ಬಾಗಿಲಿಗೆ ಬಂದು ಬೋರ್ಡು ಅಂಟಿಸಲಿಕ್ಕಿಲ್ಲ. ಏನಿದ್ದರೂ ಅದವರವರ ರಗಳೆ ಎಂದು ಅದ್ಯಾವುದೋ ಒತ್ತಾಸೆಯಿಂದ ಉಳಿದವರೊಬ್ಬರೂ ಉಳಿಯಲೇ ಇಲ್ಲ ಎನ್ನುವುದಿದೆಯಲ್ಲ ಅದು ಜಗತ್ತು ಕಂಡ ಅತ್ಯಂತ ಮಾರಕವಾದ ಭೀಷಣಕಾರಿ ಭಯಾನಕ ಜಗತ್ತು.

ಹಾಗಂತ ಕತೆ ಕಾದಂಬರಿಲಿ ಚೆಂದವಾಗಿ ಬರೆಯಲು ಸಾಧ್ಯವಾದದ್ದನ್ನು ಬರೆದು, ಅದರ ಹೆಸರಲ್ಲಿ ಪ್ರಶಸ್ತಿ, ಸನ್ಮಾನ, ಅಂಕಣ ಹೀಗೆ ಎಲ್ಲ ಗಿಟ್ಟಿಸಿಯೂ ಬಿಟ್ಟರು. ಹೆಚ್ಚು ಕಮ್ಮಿ ಎಲ್ಲ ಭಾಷೆಯ ಲೇಖಕರು. ಎಂದೂ ಬರೆಯದವರೆಲ್ಲ ಕಾದಂಬರಿಗಾರ್ತಿ ಯರಾದರು. ಆದರೆ ಎಲ್ಲಿಯೂ ಭಯಾನಕ ರಣರಣ ಬದುಕಿನ ಆಚೆಗೆ ಇದಕ್ಕೆ ಕಾರಣ ಯಾರು? ಎನ್ನುವುದನ್ನೇ ಬರೆಯದೆ ಜಾಣತನ ತೋರಿಸಿದರು ಬುದ್ಧಿ ಜೀವಿ ಜನ ಆಗಲೂ ಈಗಲೂ.

ಆದರೆ ಅದಕ್ಕಿಂತ ಹೇಯವಾದದ್ದು ಯಾರಿಗೆ ಅನ್ನ ನೀರಿಟ್ಟು, ನೆಲ ಕೊಟ್ಟು ಪಕ್ಕದಲ್ಲೇ ಕೂತು ಯಾರ ಹಬ್ಬಕ್ಕೆ ಕಾಶ್ಮೀರಿ ಪಂಡಿತರು ಸಡಗರ ಮಾಡಿದ್ದರೋ ಅದೇ ಕಾಶ್ಮೀರಿ ಮುಸ್ಲಿಂ ಹುಡುಗ ಆವತ್ತು ಹೊರಗೆ ಹೊಸ್ತಿಲ ಮೇಲೆ ಕಾಲಿಟ್ಟು ನಿಂತಿದ್ದ. ಕಾರಣ ಹಾಗೆ ಒಡನಾಡಿದವರಿಗೆ ಚೆನ್ನಾಗಿ ಗೊತ್ತಿತ್ತು. ಯಾರ ಮನೆಯಲ್ಲಿ ಯಾರಿದ್ದಾರೆ.? ಇದ್ದ ಹೆಂಗಸರ ವಯಸ್ಸೆಷ್ಟು.? ಗಂಡಸರೆಷ್ಟಿದ್ದಾರೆ..? ಬಂದೂಕು ಹತ್ಯಾರುಗಳಿವೆಯಾ? ಇತ್ಯಾದಿ. ಯಾವಾಗ ಈ ಮನೆಯ ಹುಡುಗಿಯನ್ನು ಎಳೆದೊಯ್ದೇನು ಎಂಬ ತೃಷೆ ನಿಗಿನಿಗಿ ಎನ್ನತೊಡಗಿತ್ತು. ಅದೇ ಮನೆಯ ಇನ್ನೊಬ್ಬಾತ ಆಚೆಗೆ ಕಾಯ್ದಿದ್ದ ಯಾವಾಗ ಈ ಆಸ್ತಿ ನುಂಗಿ ನೀರು ಕುಡಿದೇನು ಎಂದು.

ಇನ್ನೆಲ್ಲೊ ಇದ್ದ ಮಗದೊಬ್ಬಾತ ಇದಕ್ಕಾಗೇ ಕಾಯ್ದಿದ್ದು ಯಾವಾಗ ಯಾರನ್ನು ಹೊತ್ತು ತರುತ್ತಾರೆ, ಯಾವಾಗ ಯಾವ  ಪಂಡಿತರ ಹೆಂಗಸಿನ ತೊಡೆ ಅಗಲ್ಸಿ ಅಲ್ಲಿ ಈ ರಣ ಕೆಂಡದ ಹುಕ್ಕಾ ಇಟ್ಟು ಸುಟ್ಟು ಮಜ ತೆಗೆದುಕೊಂಡೇನು ಎಂದು. ನಂತರ ಅಲ್ಲಿ ನಡೆದದ್ದು ಮಾನವೀಯತೆಯ ಮಾರಣ ಹೋಮ. ಅಕ್ಷರಶ: ನರಕ ಎನ್ನುವುದು ನಡೆದಿದ್ದೇ ಆದರೆ ನಾಜಿಗಳ ಕ್ಯಾಂಪಿನಲ್ಲಿ ಅಲ್ಲವೇ ಅಲ್ಲ.

ಕಾರಣ ಅಲ್ಲಿ ಪ್ರಾಣ ಹೋಗುವುದು ಗೊತ್ತೇ ಆಗುತ್ತಿರಲಿಲ್ಲ. ಸುಮ್ಮನೆ ವಿಷಾನೀಲಕ್ಕೆ ಸಿಕ್ಕು ತುಪುಕ್ಕನೆ ಗೋಣು ಚೆಲ್ಲುತ್ತಿದ್ದರು ಅಥವಾ ಒಂದೇಟಿಗೆ ಸಿಕ್ಕು ಕತ್ತು ಕತ್ತರಿಸಿ ಬೀಳುತ್ತಿತ್ತು. ಆದರೆ ಇಲ್ಲಿ ಜೀವ ಹೋಗುವ ಮೊದಲು ಗಂಡಸಾದರೆ ಕನಿಷ್ಟ ನಾಲ್ಕು ದಿನ ಪ್ರತಿಯೊಂದು ಅಂಗ ಕತ್ತರಿಸಿಕೊಳ್ಳುತ್ತಾ ಅರೆ ಜೀವವಾಗುತ್ತ ಕೊನೆಗೊಮ್ಮೆ ಸಾಯುತ್ತಿದ್ದ. ಹೆಣ್ಣಾಗಿದ್ದರೆ ಬಿಗಿದು ಕಟ್ಟಿದ್ದ ಕೈಗಳ ಅಗಲಿಸಿ ಅಂಗಾತ ಬಿದ್ದಿದ್ದು, ಹಗಲು ರಾತ್ರಿ ಎನ್ನದೆ, ತನಗೊಂದು ಯೋನಿ ಭಾಗವಿತ್ತು ಎನ್ನುವುದೇ ಮರೆತುಹೋಗುವಂತೆ
ಮರಗಟ್ಟುತ್ತಿದ್ದ ಅಘಾತಕ್ಕೆ, ಕಣ್ಣೀರೂ ಇಂಗಿದ ಕಣ್ಣಿಂದ ಸುಮ್ಮನೆ ಪಿಳಿ ಪಿಳಿ ಮಾಡುತ್ತಾ, ಬಾಯಿಗೆ ತುರುಕಿದ ಬಟ್ಟೆಯ ಸಂದಿ ನಿಂದ ಚಿತ್ಕಾರ ಹೊರಡಿಸಲೂ ಆಗದೆ, ಮೈ ಮೇಲೆಲ್ಲಾ ಎಲ್ಲಿ ಜಾಗ ಉಳಿದಿದೆ ಎಂದು ಹುಡುಕಿ ಹುಡುಕಿ ‘ನೀಲಿ ಚಿಟ್ಟೆ’ ಎಂದು ಈಗಿನ ಹೆಂಗಸರ ಕವನ ಬರೆಯುವ ಕಾಮದ ಹಲ್ಲಿನ ಗುರುತುಗಳಿಗಾಗಿ ಮಾರಣಾಂತಿಕವಾಗಿ ಬಾಯಿ ಹಾಕಿ  ಪೀಡಿಸು ತ್ತಿದ್ದ, ರೌರವ ಹಿಂಸೆಗೆ ತುತ್ತಾಗುತ್ತಾ, ಸಾಯುವ ಮೊದಲು ಈ ಭೂಮಿಯ ಮೇಲೆ ದೇವರನ್ನೂ ಶಪಿಸಿಯೇ ಸಾಯುತ್ತಿದ್ದರೆ ಅದು ಕಾಶ್ಮೀರ ಪಂಡಿತರ ಹೆಂಗಸು.

ಆ ಮಟ್ಟಿಗಿನ ಕ್ರೌರ್ಯ ಮೆರೆಯಲು ಕಾರಣ ಹಿಂದೂ ಪಂಡಿತರನ್ನು ಊರು ಬಿಡಿಸಲು, ಅವರನ್ನು ಹೊರಹಾಕಿ ಸಂಪೂರ್ಣ ಕಾಶ್ಮೀರ ಕೊಳ್ಳದಲ್ಲಿ ಜನಾಂಗೀಯ ನಾಮಾವಶೇಷ ಮಾಡಲು, ಗಂಡಸರನ್ನು ಗುಂಡಿಟ್ಟುಕೊಲ್ಲುತ್ತಿದ್ದರೆ, ಆತ ನೆಲಕ್ಕೆ ಬೀಳುವ ಮೊದಲೇ ಅವರ ಹೆಂಗಸರ ಕುಪ್ಪುಸಕ್ಕೆ ಕೈ ಹಾಕುತ್ತಿದ್ದರು. ಬಹುಷಃ ಗಂಡಸೆಂದು ಹೇಳಿಕೊಳ್ಳುವ ಯಾವನೂ ಮಾಡಲಾರದ ಮಾಡಬಾರದ ಅಧಃಪತನಕ್ಕೆ ಕೈ ಹಾಕಿದ್ದೇ ಆವತ್ತಿಗಿನ ಕಾಶ್ಮೀರ ಮೂಲಭೂತವಾದಿಗಳು.

ಆದಾಗ್ಯೂ ಅಲ್ಲಿನ ಪಂಡಿತರು ಇನ್ನು ಕುಳಿತೇ ಇದ್ದರು. ಇನ್ನೂ ಕವಿಗಳು ಅಲ್ಲಿನ ಹಿಮ, ಕಣಿವೆ, ಹೂವು, ಕೇಸರಿ ಎಂದೆಲ್ಲ ಕವನ ಬರೆಯುತ್ತಲೇ ಇದ್ದರು. ಅಲ್ಲಿನ ಶಾಲೆಗಳಲ್ಲಿ ಹಮ್ ಭಾಯಿ ಭಾಯಿ ಎನ್ನುವ ಮಾತು ಮೊಳಗುತ್ತಲೆ ಇತ್ತು. ಹೊರಗೆ ಮಾತ್ರ ಮನೆಮನೆಯ ಗುರುತು ಹಚ್ಚು ಕಾರ್ಯ ಎಗ್ಗಿಲ್ಲದೆ ಅತ್ಯಂತ ಶೃದ್ಧೆಯಿಂದ ನಡೆಯುತ್ತಿತ್ತು. ತೀರ ಅಕ್ಕಪಕ್ಕದ ಮನೆಯವರನ್ನೆ ಹುಡುಕಿ ಹುಡುಕಿ ತೋರಿಸಿ ಇಸ್ಕಿ ಮಾ ಕೋ ಉಠಾಲೋ ಎಂಬ ನೀಚಬುದ್ಧಿ ಮನೆಯ ಕದ ಬಡಿಯುವವರೆಗೂ ಪಂಡಿತರು ಕುಳಿತೇ ಇದ್ದರು. ಕಾರಣ ಹಾಳಾದ ನಂಂಬಿಕೆ.

ಇಲ್ಲೇ ಶಂಕರಾಚಾರ್ಯರು ಪೀಠ ಏರಿದ್ದರಲ್ಲ ಎಂಬ ನಂಬಿಕೆ. ಅದಕ್ಕೆ ನೀರು ನೀಡಿ ಹಾಕಿ ಕಲ್ಲು ಇಟ್ಟವನು ನಮ್ಮದೇ ಕಾರ್ಮಿಕರೇ ಅಲ್ವಾ ಎಂಬ ನಂಬಿಕೆ. ಇಲ್ಲೆ ಪ್ರಸಿದ್ಧ ಸರೋವರ, ಪಾರ್ಕು, ಮಾರ್ಕೆಟ್ ಕಟ್ಟಿದವರೆಲ್ಲ ಎಲ್ಲ ನಾವೇ ಆಗೆಲ್ಲ, ನಾವೇ ಎಲ್ಲ ಹಂಚಿಕೊಂಡು ಉಂಡಿದ್ದೇವಲ್ಲ ಎಂಬ ದರಿದ್ರ ನಂಬಿಕೆ. ಬದುಕಿನ ಮೇಲೆ ಜನರ ಮೇಲೆ ಮತ್ತು ಮಾನವೀಯತೆ ಮೇಲೆ. ಅದೇ ಬಂದೂಕಿನ ಗುಬ್ಬಿ ಗೂಡಿನ ಕವನ ಕಟ್ಟುವ ಮನೆಹಾಳ ಬುದ್ಧಿ ಜೀವಿತನದ ಮೇಲೆ. ತೀರ ಪೆನ್ನಿನ ಮಸಿ ಆರುವ ಮೊದಲೇ
ಗನ್ನಿನ ಸಮೇತ ತಮ್ಮ ಮನೆಗೆ ಈ ಧಮಾಂಧರು ನುಗ್ಗಿಯಾರು ಎಂದು ಯಾವ ಪಂಡಿತರೂ ಕೊನೆಯವರೆಗೂ ನಂಬಲಿಲ್ಲ.

ತೀರ ಅವರವರ ಮನೆಯ ಗಂಡಸರು ಕೊಲೆಯಾಗುವವರೆಗೂ, ಅವರವರ ಹೆಂಡತಿಯರನ್ನು ಹಾಡು ಹಗಲಲ್ಲೆ ಬೆತ್ತಲೆಯಾಗಿಸಿ, ತುಂಬಿದೆದೆಯ ಮೇಲೆ ಹೆಬ್ಬೆರಳಾಡಿಸುತ್ತಾ ಹುಕ್ಕಾ ಸೇದುವ ನರಾಧಮ ಗಂಡಸರು ನೀಚತನಕ್ಕಿಳಿಯುವವರೆಗೆ ನಂಬಲಿಲ್ಲ.
ಹೆಂಗಸರಿಗೂ ಅವರ ಎದೆಯ ದುಪಟ್ಟ ಎಳೆದು ಬಹಿರಂಗವಾಗಿ ಎಷ್ಟು ಸೈಜು ನಿಂದು ಎನ್ನುವವರೆಗೂ ನಂಬಿಕೆಯಾಗಲಿಲ್ಲ. ಕಾರಣ ನ್ಯಾಯಾಲಯ ಇದೆ, ಪೋಲಿಸ್ ಇದೆ, ಸಂವಿಧಾನ ಇದೆ, ಜನರಿದ್ದಾರೆ ಮತ್ತು ಮಿಲಿಟರಿ ಇದೆ.. ಕೇಂದ್ರ ಸರಕಾರ ಇದೆ, ಕೊನೆಗೆ ಎಲ್ಲಕ್ಕಿಂತಲೂ ಮೊದಲು ಮಾಧ್ಯಮಗಳಿವೆ ಎಂದು ನಂಬಿ ಬಿಟ್ಟರು ನೋಡಿ.

ಅಲ್ಲಿಗೆ ಎಲ್ಲ ಮುಗಿದಿತ್ತು. ಇವರನ್ನು ಮೊದಲಿಗೆ ಮತಾಂಧಕೋರರು ಕೇವಲ ಕಾಫೀರ್ ಎನ್ನುವ ಕಾರಣಕ್ಕೆ ಕೊಚ್ಚಿ ತಿಂದರೆ, ಈ ಮಾಧ್ಯಮಗಳೆಂಬ ಆಧಮರು ಇನ್ನೂ ನೀಚತನಕ್ಕಿಳಿದು ಅದರ ಬಗ್ಗೆ ಒಂದೇ ಒಂದು ಸಾಲು ಬರೆಯದೆ ಪೂರ್ತಿ ಬದುಕು
ಮಾತ್ರ ಒಂದು ತಲೆಮಾರನ್ನೆ ತಿಂದು ಬಿಟ್ಟರು. ಆದರೆ ಅದೊಂದು ಕತೆ ಮೊಟ್ಟ ಮೊದಲಿಗೆ ಹೊರಕ್ಕೆ ಬಂತು ನೋಡಿ. ಸೌರಾ ಆಸ್ಪತ್ರೆಯ ನರ್ಸ್ ಸುಮ್ಮನೆ ಸತ್ತಿಲ್ಲ. ಆಕೆಯ ದೇಹದಲ್ಲಿ ಎಲ್ಲಿ ಸುಟ್ಟಿಲ್ಲ ಎಂದು ಹುಡುಕಾಡಬೇಕಿದೆ, ಆಕೆಯ ಕೌಮಾರ್ಯದ ಮೇಲೆ ಆದ ಆಘಾತ ಬರೆಯಲೇ ಸಾಧ್ಯವಿಲ್ಲ ಎಂದು ಪೋಸ್ಟ್‌ಮಾರ್ಟಂ ಹೇಳಿತಲ್ಲ ಆವತ್ತು ಮೊದಲ ಮೀಡಿಯಾ ಎದ್ದು
ಕೂತಿದ್ದು.

ಒಂದೆರಡಲ್ಲ, ಅನಾಮತ್ತು ಎರಡೇ ದಿನದಲ್ಲಿ ಮೂನ್ನೂರು ಚಿಲ್ರೆ ಕಾಶ್ಮೀರಿ ಪಂಡಿತರು ನಾಪತ್ತೆಯಾಗಿದ್ದರೆ ಅವರಿಗೆ ಕುಟುಂಬವೇ ಇರಲಿಲ್ಲ ಎನ್ನುವ ಮಟ್ಟಿಗೆ ಸುದ್ದಿ ಹರಡಿ ಎಲ್ಲ ನೆಲ ಸಮ ಮಾಡಿಬಿಟ್ಟಿದ್ದರು. ಏನಾಗಿತ್ತು ಶರ್ವಾನಂದ್ ಕೌಲ್‌ಗೆ..? ಏನಾಗಿತ್ತು ಅಶೋಕ ಖಾಜಿಗೆ..? ಏನಾಗಿತ್ತು ಸರಳ ಭಟ್‌ಗೆ ಏನಾಗಿತ್ತು..? ಅನೀಲ ಭಾನ್ ಕಶ್ಮೀರಿಗೆ..? ಏನಾಗಿತ್ತು ಅಕ್ಕಿ ಡಬ್ಬಿಯಲ್ಲಿ ಕೂತ ನೆತ್ತಿಯ ಮೇಲೆ ಬುಲೆಟ್ ಹೆಟ್ಟಿದಾಗ ಅಲ್ಲೆ ಸತ್ತು ಹೋದ ಗುಂಜುಗೆ..? ಎಲ್ಲ ಕತೆಗಳೂ ಒಂದೊಂದಾಗಿ ಬರಲಿದೆ. ಕಾರಣ ಆಗ ಸತತವಾಗಿ ನಡೆದದ್ದು ಕೇವಲ ಮಾರಣಹೋಮವಲ್ಲ ಅದೊಂದು ವ್ಯವಸ್ಥಿತ ಶಡ್ಯಂತ್ರ ಮತ್ತು ವಿದೇಶ ನೆಲದಲ್ಲಿ ನಡೆದು ನಿಂತು ಹೋದ ರಾಜಕಾರಣ ಈ ಕಡೆ ತಿರುಗಿಸಲಾಗಿತ್ತು.

ಇದು ಒಂದೆರಡು ತಿಂಗಳಲ್ಲ ೧೯೮೦ ರಿಂದ ಆರಂಭವಾಗಿ ೨೦೧೦ ವರೆಗಿನ ಬೆಳಕಿಗೆ ಬಾರದ ಕರಾಳ ಕಥಾನಕ. ಸಾಮೂಹಿಕ ಜನಾಂಗೀಯ ಹರಣ. ಅನಾಮತ್ತಾಗಿ ಐದೂ ಚಿಲ್ರೆ ಲಕ್ಷ ಕಾಶ್ಮೀರಿ ಹಿಂದೂ ಪಂಡಿತರು ಬೀದಿಗೆ ಬಿದ್ದಿದ್ದರು. ಆದರೆ ಅದು ಸಾಕಾಗಿರಲಿಲ್ಲ. ಸಂಪೂರ್ಣ ಹಿಂದೂ ಪಂಡಿತರು ಕಶ್ಮೀರ್ ತೊರೆಯಬೇಕಿತ್ತು.. ಯಾಕೆ..?

ಆರಂಭ…