Thursday, 12th December 2024

ಮಾರಣ ಹೋಮಕ್ಕೆ ನಾಂದಿ

ಮಾರಣ ಹೋಮ- ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರ

ಸಂತೋಷಕುಮಾರ ಮೆಹೆಂದಳೆ

ನ್ಯಾಯಲಯದಲ್ಲೂ ತಮ್ಮ ವಿರುದ್ಧ ಯಾವುದೇ ರೀತಿಯ ಇಂಥಾ ನಿರ್ಣಯಗಳನ್ನು ಕೊಡುವ ಮೊದಲು ಇತರ ನ್ಯಾಯಾ ಧೀಶರು ಎಚ್ಚರವಹಿಸಲಿ ಎಂಬುವುದಾಗಿತ್ತು. ಅಷ್ಟಾಗಿಯೂ ಕಣಿವೆಯ ಪಂಡಿತರು ಕಾಲ್ಕೀಳುವ ಯಾವ ಲಕ್ಷಣವೂ ಕಾಣ ಬರಲಿಲ್ಲ. ಹಾಗೊಂದು ವಿಚಾರ ಭಯ ಮತ್ತು ತಮ್ಮ ಪರಿಸ್ಥಿತಿ ಇಲ್ಲ ಏನೂ ಚೆನ್ನಾಗಿಲ್ಲ, ಯಾವತ್ತಿಗಾದರೂ ತಮಗೆ ಇಲ್ಲಿ ಆಪತ್ತು ಇದ್ದೇಇದೆ ಎನ್ನುವ ಅಂದಾಜು ಆಗಲೇ ಪಂಡಿತರಲ್ಲಿ ಇದ್ದಿತ್ತಾದರೂ, ತಕ್ಷಣ ಖಾಲಿ ಮಾಡಿ, ಎದ್ದು ಹೋಗೆಂದರೆ ಎಲ್ಲಿಗೆ
ಹೋಗಿಯಾರು ಇದ್ದಕ್ಕಿದ್ದಂತೆ.

ಮನೆ ಮಠ ಆಸ್ತಿ ಪಾಸ್ತಿ ನೂರಾರು ವರ್ಷಗಳ ಭಾವನಾತ್ಮಕ ಸಂಬಂಧದ ನೆಲದ ಸೆಳಕು ಗಳು ಎಲ್ಲ ಕಿತ್ತುಕೊಂಡು ಒಂದೇಟಿಗೆ ಹೊರಟು ನಿಲ್ಲಲು ಅದೇನು ಆನ್‌ಲೈನ್ ಬುಕಿಂಗಾ..? ಏನಾದರೂ ಮಾಡೋಣ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲೇ ಸಮಯ ಸರಿದು ಹೋಗುತ್ತಿತ್ತು. ಇದಕ್ಕೂ ಮೊದಲೂ ನೇರವಾಗಿ ಯಾವ ಮುಲಾಜೂ ಇಲ್ಲದೇ ಡಿಸೆಂಬರ್‌ನಲ್ಲೆ, ಸ್ಥಳೀಯವಾಗಿ ತಮಗೆ ಯಾವ ರೀತಿ ಅಧಿಕಾರಶಾಹಿ ಬೆಂಬಲ ಸಿಗುತ್ತದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಹಲವು ಕೃತ್ಯಗಳನ್ನು ಈ ಗುಂಪುಗಳು ಸಕ್ರಿಯ ವಾಗಿ ನಡೆಸಿದವು.

ಅದರಲ್ಲಿ ಮುಖ್ಯವಾಗಿ ಡಿಸೆಂಬರ್ ೧. ೧೯೮೯ ರ ಮಧ್ಯಾನ್ಹ ಬಹಿರಂಗವಾಗಿ ಕೊಂದು ಹಾಕಿದ ಅಜಯ ಕಪೂರ್‌ನ ಕೊಲೆ ಪ್ರಕರಣ ಕೂಡಾ. ಬಹಿರಂಗವಾಗಿ ಮಹಾರಾಜ್ ಗಂಜ್ ಏರಿಯಾದಲ್ಲಿ ಗುಂಡೇಟಿಗೆ ಸಿಕ್ಕ ಅಜಯ್ ಕಪೂರ್ ಯಾವ ಲೆಕ್ಕದಲ್ಲೂ ಇದಕ್ಕೆ ಸಂಬಂಧಿಸಿರಲಿಲ್ಲ. ಕೇವಲ ಹಿಂದೂ ಎನ್ನುವ ಕಾರಣಕ್ಕೆ ಎದುರಾ ಎದುರು ಬಂದವನನ್ನು ಸುಖಾ ಸುಮ್ಮನೆ ಸುಟ್ಟುಬಿಟ್ಟಿದ್ದರು.

ಯಥಾ ಪ್ರಕಾರ ಕೇಸು ಹಳ್ಳ ಹಿಡಿದಿತ್ತು. ಇದಾದ ಕೆಲವೇ ದಿನಗಳಲ್ಲಿ ಡಿಸೆಂಬರ್ ೨೭. ರಂದು ಬೆಳಿಗ್ಗೆ ಮಾರುಕಟ್ಟೆಯ ಪ್ರದೇಶ ದಲ್ಲಿ ರಸ್ತೆ ದಾಟುತ್ತಿದ್ದ ವಕೀಲ ಪ್ರೇಮನಾಥ್ ಭಟ್‌ನನ್ನು ಇದ್ದಕ್ಕಿದ್ದಂತೆ ಅಡ್ಡಗಟ್ಟಿದ್ದ ಉಗ್ರರು ಮನಸೋ ಇಚ್ಛೆ ಹಲ್ಲೆ
ನಡೆಸಿದ್ದಾರೆ. ಜನಗಳೆಲ್ಲ ನೋಡುತ್ತಿದ್ದರೆ ೫೭ ವರ್ಷದ ವಕೀಲ ಪ್ರೇಮನಾಥ್‌ನನ್ನು ಯಾಕೆ ಏನೆಂದು ಕೇಳುವ ಮೊದಲೇ ಎದೆಗೆ ಪಿಸ್ತೂಲ್‌ನಿಂದ ಸುಟ್ಟುಬಿಟ್ಟಿದ್ದಾರೆ. ತೀರ ಬ್ಲಾಂಕ್ ರೇಂಜಿನಲ್ಲಿ ಏಟಿಗೆ ಸಿಕ್ಕ ವಕೀಲ ರಸ್ತೆಯ ಮೇಲೆ ನೀರೂ ಕೇಳದೆ ಬಿದ್ದು ಸತ್ತು
ಹೋಗಿದ್ದ. ಇವೆಲ್ಲವೂ ಯಾವತ್ತೂ ಹೊರಗೆ ಬರಲಿಲ್ಲ. ಬರದೆಯೂ ಇರಬಹುದು.

ದಾಖಲೆಗಳಂತೂ ಮೊದಲೇ ಇಲ್ಲ. ಈಗಂತೂ ಇದಿರಲಿಕ್ಕೂ ಇಲ್ಲ. ಒಟ್ಟಾರೆ ಪಾಕಿ ಪ್ರೇರಿತ ಅತ್ಯಂತ ದೊಡ್ಡ ದಾವಾನಲಕ್ಕೆ ಇವನ್ನೆಲ್ಲ ಬಲಿಯಾಗಿಸುತ್ತಿದ್ದ ಹಿಜ್ಬುಲ್ ನಡೆ, ಪಾಕಿಗಳಿಗೆ ತೃಪ್ತಿಯಾಗುತ್ತಿರಲಿಲ್ಲ. ಆಗ ಹುಟ್ಟಿದ್ದೇ ಕತ್ಲ್ ಕಿ ರಾತ್. ಕಶ್ಮೀರಿಗಳ
ದುರದೃಷ್ಟದ ನಕ್ಷತ್ರ ಮಗ್ಗಲು ಬದಲಿಸಿತ್ತು. ಆದರೆ ಅದಕ್ಕೂ ಮೊದಲೇ ಹಿಜ್ಬುಲ್‌ನ ಕಮಾಂಡರ್ ಮತ್ತು ಸ್ಥಳೀಯ ಜಮಾತ್ ಸಮಿತಿಯವ ಇದ್ದಕ್ಕಿದ್ದಂತೆ ಮೂವರು ಉಗ್ರರನ್ನು ಕಳುಹಿಸಿ ಡಿಸೆಂಬರ್ ೧೫. ೧೯೮೯ ರ ನಡು ಮಧ್ಯಾನ್ಹ ಎಮ್.ಎಲ್.ಭಾನ್ ಎಂಬ ಸರಕಾರಿ ಅಧಿಕಾರಿಯ ಮೇಲೆ ದಾಳಿ ಮಾಡಿಸಿಬಿಟ್ಟ. ಕಾರಣ ಜನ ಸಾಮಾನ್ಯರ ಮರ್ಡರುಗಳಿಗೆ ಇತರರು ತಲೆ ಕೆಡಿಸಿ ಕೊಳ್ಳುವುದಿಲ್ಲ.

ಅದೇ ಮುಖ್ಯ ತಲೆಗಳನ್ನೆ ಗುರಿಪಡಿಸಿತೊಡಗಿದರೆ ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ. ಅದಕ್ಕಾಗಿ ಭಾನ್‌ನನ್ನು ಕೊಂದು ಹಾಕಿದ ಉಗ್ರರು ಅವನೊಡನೆ ಇದ್ದ ಬಲರಾಜ್ ದತ್ತನನ್ನು ಬೆನ್ನಟ್ಟಿದ್ದರು. ಕಾರಣ ನೇರ ದಾಳಿಯ ನಂತರ ಬಲರಾಜ್ ದತ್ತ ಇದ್ದಕ್ಕಿದ್ದಂತೆ ಓಟ ಕಿತ್ತು ಪರಾರಿಯಾಗಿ ಜೀವ ಉಳಿಸಿಕೊಳ್ಳುವ ಪ್ರಯತ್ನಕ್ಕಿಳಿದಿದ್ದ. ಇದನ್ನು ನಿರೀಕ್ಷಿಸದಿದ ಉಗ್ರರು ಗುಂಡು ಹಾರಿಸುತ್ತಾ ಅವನ ಹಿಂದೆಯೂ ಬಿದ್ದಿದ್ದರು. ಅಲ್ಲಿಂದ ಲಾಲ್‌ಚೌಕ್‌ವರೆಗೂ ಓಡಾಟದ, ಬದುಕು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ದತ್ ಉಗ್ರರ ಕೈಗೆ ಸಿಕ್ಕು ಬಿದ್ದಿದ್ದ. ಅಲ್ಲಿಂದ ಅವನನ್ನು ಎತ್ತಾಕಿಕೊಂಡು ಒಯ್ದು ದತ್ ಯಾಕಾದರೂ ಬದುಕಿದ್ದೀನೊ ಎನ್ನು ವಂತೆ ಮಾಡಿದರಲ್ಲ.

ಅವನ ಹೆಣ ಸಿಕ್ಕಿದ್ದು ಅನಾಮತ್ತಾಗಿ ಮೂರೂವರೆ ದಿನಗಳ ನಂತರ. ಅದೂ ಸರಿಯಾಗಿ ಜನೇವರಿ ೧೯. ೧೯೯೦ ಸರಹೊತ್ತಿನ ಸಂಜೆಯ ಹೊತ್ತಿಗೆ ಎಲ್ಲರೆದುರಿಗೆ ಮೆರವಣಿಗೆ ಮಾಡಿ ಬಿಸಾಕಿದರಲ್ಲ. ಅಪೂಟು ಜರಡಿಯಾಗಿದ್ದ ದೇಹದ ಮೇಲೆ ಎಲ್ಲಿ ಹಿಂಸೆ ಕೊಟ್ಟಿಲ್ಲ ಎನ್ನುವುದನ್ನು ಗುರುತಿಸಲೇ ಹೆಣಗಬೇಕಿತ್ತು. ಕಣ್ಣು ಗುಡ್ಡೆಗಳೇ ಇಲ್ಲದ, ತೊಡೆಯ ಮಧ್ಯೆ ಇಷ್ಟುದ್ದ ಹರಿದು ಹೋದ, ಮೈಯ್ಯ ತುಂಬ ಭೀಕರವಾಗಿ ಹರಿದಿದ್ದ ಬಲರಾಜ್‌ದತ್‌ನ ದೇಹವನ್ನು ಕಶ್ಮೀರಿ ಹಿಂದೂಗಳ ಏರಿಯಾ ತುಂಬೆಲ್ಲ ಮೆರವಣಿಗೆ ಮಾಡಲಾಗಿತ್ತು.

ಅಸಲಿಗೆ ಅದೇ ನಿಗದಿತ ಕತ್ಲ ಕಿ ರಾತ್ ಕೂಡಾ ಆಗಿತ್ತಲ್ಲ. ಹೆಸರಿಗೆ ಮಾತ್ರ ದೇಹ ಉಳಿದಿತ್ತು. ಅದಿನ್ನೇನೂ ಮಾಡಿದ್ದರೋ, ಎಲ್ಲೆಲ್ಲಿ ಕುಯ್ದು ಹಾಕಿದ್ದರೋ ಬಹುಶ: ಈ ಹಿಂಸೆಗೆ ದೇವರೂ ಒಮ್ಮೆ ನಿಡುಸುಯ್ದಿರಬೇಕು. ಬಲರಾಜ್ ದತ್‌ನ ಸಾವು ಆವತ್ತಿನ ಮಾರಣ ಹೋಮಕ್ಕೆ ನಾಂದಿಯಾಗಿತ್ತು. ಅಂತಿಮವಾಗಿ ಸಂಜೆಯಾಗುವ ಹೊತ್ತಿಗೆ ಅವನ ದೇಹವನ್ನು ಚೆಲ್ಲಿ ಹೋಗುವಾಗ ಶ್ರೀನಗರದ ನಾಯಿಸರ್ಕ್ ಭಾಗದಲ್ಲಿ ದೇಹ ಎನ್ನುವುದಕ್ಕಿಂತ ಸುಮ್ಮನೆ ಒಂದಷ್ಟು ಭಾಗ ಎಳೆದು ಹಾಕಿದಂತೆ ಬಿಸಾಕಲಾಗಿತ್ತು. ಇತ್ತ ಸ್ಥಳೀಯ ವಾಗಿ ಫಾರೂಕ್ ಅಬ್ದುಲ್ಲ ಸರಕಾರ ಕೈಯೆತ್ತಿ ರಾಜಿನಾಮೆ ಕೊಡುತ್ತಿದ್ದರೆ, ಬರಬೇಕಾದ ಗವರ್ನರ್ ಬಾರದೆ ಸಂಪೂರ್ಣ ಕಣಿವೆ ಉಗ್ರರ ಕೈಗೆ ಸಿಕ್ಕು ಹುಡಿ ಎದ್ದು ಬಿಟ್ಟಿತ್ತು.

ವಿಪರೀತ ಹಿಂಸೆ ಭುಗಿಲೆದ್ದ ಕಾರಣ ಏನು ಗೊತ್ತೆ..? ಒಂದು ಹಿಂದೂ ಎನ್ನುವುದಾದರೆ ಇನ್ನೊಂದು ವಿಕೃತ ಹಿಂಸೆಯ ವಿನೋದ. ಎಷ್ಟೆಂದು ರೇಪು ಮಾಡೊಕೆ ಸಾಧ್ಯ ಒಬ್ಬ ಗಂಡಸು..? ಒಂದು ನಾಲ್ಕಾರು ಸಲ ಆಗುತ್ತಿದ್ದಂತೆ ಮನಸ್ಸಿನ ಪೈಶಾಚಿಕತೆ ಹಿಂಸೆಗೆ ತಿರುಗುತ್ತದೆ. ಅಮೇಲೆ ಗಂಡಸರನ್ನು ಹೊರದಬ್ಬುವ ಪ್ರಶ್ನೇಯೆ ಇರಲಿಲ್ಲ. ಅದರ ಫಲಿತಾಂಶವೇ ವಿಪರೀತ ದಂಗೆಯಾಗಿದ್ದು ಆ ಪೂರ್ತಿ ದಿನ. ಕಂಡ ಕಂಡಲೆಲ್ಲ ಕಶ್ಮೀರಿ ಪಂಡಿತರ ಮನೆ ಮಠ ಸುಡುತ್ತಾ, ಗುಂಡಿಟ್ಟು ಸಾಯಿಸುತ್ತಾ, ಯಾವ್ಯಾವ ಮನೆಗಳಿಗೆ ಚೀಟಿ ಅಂಟಿಸಲಾಗಿತ್ತೋ ಅವನ್ನೆಲ್ಲ ಒಂದು ಕಡೆಯಿಂದ ಗುಡಿಸಿಬಿಟ್ಟಿದ್ದರು ಹಿಜ್ಬುಲ್ ಮತ್ತು ಲಷ್ಕರ್ ಸಂಘಟಿತ, ಪ್ರೇರಿತ, ಪಾಕಿ ಸೈನ್ಯ ತರಬೇತು ಪಡೆದಿದ್ದ ಉಗ್ರರು.

ಸ್ಥಳೀಯರಾರು, ಹೊರಗಿನವರಾರು ಉಹೂಂ ಗೊತ್ತಾಗುವ ವ್ಯತ್ಯಾಸವೇ ಹೋಗಿತ್ತು. ಎಲ್ಲರೂ ಜಮ್ಮು ಕಾಶ್ಮೀರ್ ಲಿಬರೇಷನ್ ಫ್ರಂಟ್ ಸದಸ್ಯರೆ ಎನ್ನುವಂತಾಗಿತ್ತು. ಆದರೆ ಅದರಲ್ಲಿ ಲೆಕ್ಕ ತಪ್ಪಿ ಪಾಕಿನಿಂದ ನುಸುಳಿದ್ದ ಜೆಹಾದಿಗಳೆ ಇದ್ದರು. ಅವತ್ತೆರಡು ದಿನ ರಾತ್ರಿಯಲ್ಲಿ ಕಗ್ಗೊಲೆಯಾಗಿ ಸತ್ತವರ ಸಂಖ್ಯೆ ಏನಿಲ್ಲ ಎಂದರೂ ಒಂದು ಸಾವಿರ ಆಗಿರಬಹುದು. ಆದರೆ ಕೇವಲ  ದುರೆದುರೇ ಸಿಕ್ಕ ದೇಹದ ಲೆಕ್ಕ ಮಾತ್ರ ಕೊಟ್ಟವರು ಅಮೇಲೆ ಎಲ್ಲೆಂದರಲ್ಲಿ ಬಿದ್ದಿದ್ದ ಹೆಣಗಳ ಮಟ್ಟಿಗೆ ಮೌನವಾಗೇ ಉಳಿದುಬಿಟ್ಟರು.

ಆಗಲೇ ಮನೆಯ ಪಕ್ಕದ ಹುಡುಗನ ನೆರಳು ಪಂಡಿತ ಮನೆಯ ಬಾಗಿಲಿಗೆ ಎಡತಾಕಿದ್ದು. ಹೀಗೆ ಆರಸಿ ಆರಸಿ ಹೆಣ್ಣು ಮಕ್ಕಳಿದ್ದ ಮನೆಯ ಮೇಲೆ ಕಣ್ಣಿಟ್ಟಿದ್ದ ಸ್ಥಳೀಯ ಹುಡುಗರು ನೇರವಾಗಿ ಬಾಗಿಲು ತೆಗೆಸಿದ್ದಾರೆ. ಎದುರಿಗೆ ಇಷ್ಟು ದಿವಸ ಕಾಲ ಕೈ ಹಾಕದಿದ್ದ, ಆ ಬಗ್ಗೆ ಧೈರ್ಯ ಇರದಿದ್ದ ರಾಕ್ಷಸಿತನ ಇವತ್ತು ಎದ್ದು ನಿಂತಿತ್ತಲ್ಲ, ನೇರಾ ನೇರ ಕೈಹಾಕಿ ಎಳೆತಂದು ಅಲ್ಲೆ ಮೂಲೆಗೆ ನೆಲಕ್ಕೆ ಒತ್ತಿಕೊಂಡು ಪೀಡಿಸಿದ್ದಾರೆ.

ಮನೆಯ ಯಜಮಾನ ಹೊರಗೆ ಬಂದರೆ ಏ.ಕೆ.೪೭ ಢಂ.. ಎಂದಿದೆ. ಅಷ್ಟೆ. ಮುಂದೆ ನಡೆದಿದ್ದೆಲ್ಲ ವಿಪರೀತ ಮಾರಣ ಹೋಮ. ತುಪಾಕಿಗೆ ಸಿಕ್ಕು ಸತ್ತು ಹೋದವರೇನೋ ಹೋಗಿಬಿಟ್ಟರು. ಮೊದಮೊದಲನೆಯ ದಿನವೆಲ್ಲ ವಿರೋಧ ಎದುರಾಗುತ್ತಿದ್ದಂತೆ ಕಲಾಶ್ನಿಕೋವ್ ಎತ್ತಿ ಢಂ.. ಢಂ.. ಎನ್ನಿಸಿ ನೇರ ಸಾಲು ಸಾಲಾಗಿ ಗುಂಡು ಹಾರಿಸಿ ಕೊಂದು ಬಿಡುತ್ತಿದ್ದರಲ್ಲ. ಗಂಡಸರು ಗೋಣು ಚೆಲ್ಲಿ ಬೀಡುತ್ತಿದ್ದರು. ಆದರೆ ಬದುಕು ಇಷ್ಟು ನಿಕೃಷ್ಟ ಎಂದು ಅನ್ನಿಸಿದ್ದೇ ಹೆಂಗಸರಿಗೆ. ಮೇಲೇಳದಂತೆ ಕೆಡುವಿಕೊಂಡು ಒಬ್ಬೊಬ್ಬರನ್ನೂ ಹತ್ತಾರು ಜನ ಸಾಲು ಸಾಲಾಗಿ ಬಲಾತ್ಕಾರ ಮಾಡಿ, ಸಾಲದ್ದಕ್ಕೆ ಕೆಲವು ತೀರ ಹದಿವಯಸ್ಸಿನವರು ತಮ್ಮ ರೇಪ್
ಮಾಡುವ ಕೊವತ್ತು ಮುಗಿಯುತ್ತಿದ್ದಂತೆ ಮೊದಲು ಮಾಡುತ್ತಿದ್ದ ಕೆಲಸವೆಂದರೇನೇ ಕೈಗೆ ಸಿಕ್ಕ ವಸ್ತುವನ್ನು ಸರಕ್ಕನೆ ಅವರ ಮರ್ಮಾಂಗಕ್ಕೆ ನುಗ್ಗಿಸಿ ಹಿಂಸಿಸಿ ಆನಂದ ಪಡೆಯುತ್ತಿದ್ದುದು.

ಹೆಚ್ಚಿನ ಎನ್ನುವುದಕ್ಕಿಂತ ಎಲ್ಲ ಹೆಣ್ಣು ಮಕ್ಕಳು ಆವತ್ತು ಇದಕ್ಕಿಂತ ಹೇಯವಾದ ಸಾವು ಸತ್ತಿರಲಿಕ್ಕಿಲ್ಲ..? ಆ ಮಟ್ಟಿಗೆ ನರಕವನ್ನೇ ಸೃಷ್ಠಿಸಿದ ಖ್ಯಾತಿ ಏನಿದ್ದರೂ ಅದು ಹಿಜ್ಬುಲ್ ಮತ್ತು ಲಷ್ಕರ್ ಪ್ರೇರಿತ ಮತೀಯ ಉಗ್ರರಿಗೆ ಸಲ್ಲುತ್ತದೆ. ಇದಾಗುವ ಹೊತ್ತಿಗೆ ಮತ್ತು
ನಿರಂತರ ಜನೇವರಿ ೧೯ ರ ಅನಾಹುತಕಾರಿ ರಾತ್ರಿ ಮುಗಿದು ಮರುದಿನಕ್ಕೆ ಬೆಳಕು ಕಾಲಿಡುವ ಹೊತ್ತಿಗೆ ಕಣಿವೆಗೆ ರಾಜ್ಯಪಾಲರು ಮರಳಿದ್ದರು. ಬರುತ್ತಿದ್ದಂತೆ ಮಿಲಿಟರಿ ಮೂಲಕ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು.

ಆದರೂ ಅಲ್ಲಲ್ಲಿ ಇವೆಲ್ಲ ನಡೆಯುತ್ತಲೇ ಇದ್ದವು. ಕಾರಣ ಕಣಿವೆ ಒಂದು ಮುಟಿಕೆಗೆ ಸಿಗುವ ರಾಜ್ಯವಂತೂ ಅಲ್ಲವೇ ಅಲ್ಲವಲ್ಲ. ಎಲ್ಲೆಂದು ನೀವು ಸೈನಿಕರನ್ನು ಕಳಿಸಲು ಸಾಧ್ಯ. ಎಲ್ಲೆಂದರಲ್ಲೆಲ್ಲ ಸ್ಥಳೀಯವಾಗಿ ಎಸಗಬಹುದಾದ ಪಾತಕ ಘಟನೆಗಳು ವರದಿ ಯಾಗುತ್ತಲೇ ಇದ್ದವು. ಮೇಲ್ಮಟ್ಟಕ್ಕೆ ಒಮ್ಮೆ ದಂಗೆ ನಿಂತಿತಾದರೂ ಕಗ್ಗೊಲೆಗಳ ಸರಣಿ ಮುಂದಿನ ದಶಕಕ್ಕೂ ಮುಂದುವರೆದೇ ಇತ್ತು.

(ಮುಂದುವರೆಯುವುದು)