Sunday, 15th December 2024

ಕಿಡ್ನಿ ವೈಫಲ್ಯ: ಇರಲಿ ಎಚ್ಚರ

ಡಾ. ಶ್ರೀಹರ್ಷ
ಎಂಬಿಬಿಎಸ್, ಎಂಡಿ, ಡಿಎನ್‌ಬಿ ನೆಫ್ರಾಲಜಿ
ನೆ-ಲಜಿಸ್ಟ್ ಹಾಗೂ ಟ್ರಾನ್ಸ್‌ಪ್ಲಾಂಟ್ ಫಿಸಿಷಿಯನ್
ಸ್ಪರ್ಶ ಆಸ್ಪತೆ ಯಲಹಂಕ, ಕೋಗಿಲು
ಸೂಪರ್ ಸೆ ಷಾಲಿಟಿ ಕ್ಲಿನಿಕ್ ಯಲಹಂಕ
೪ಸಂಪರ್ಕ : ೮೧೦೫೩ ೨೦೯೮೪

ಮೂತ್ರಪಿಂಡ ಮನುಷ್ಯನ ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಇಂದಿನ ಜೀವನಶೈಲಿ, ಆಹಾರ ವಿಹಾರ ದಿಂದಾಗಿ, ಹೆಚ್ಚಾಗಿ ಬಳಲುತ್ತಿರುವುದು ಮೂತ್ರಪಿಂಡವೇ ಆಗಿದೆ. ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಅರಿವಾಗುವುದಿಲ್ಲ. ಆದರೆ ಇದು ಮಿತಿ ಮೀರಿದರೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಕಿಡ್ನಿ ಆರೋಗ್ಯವನ್ನು ಜೋಪಾನ ಮಾಡುವುದು ಅವಶ್ಯಕ. ಮೂತ್ರಪಿಂಡದ ಆರೋಗ್ಯ, ಸಮಸ್ಯೆ, ಲಕ್ಷಣಗಳು ಹಾಗೂ ಚಿಕಿತ್ಸೆಯ ಬಗ್ಗೆ ಮೂತ್ರಪಿಂಡ ಶಾಸಜ್ಞರೂ ಹಾಗೂ ಕಿಡ್ನಿ ಕಸಿಯಲ್ಲಿ ಪರಿಣಿತರೂ ಆಗಿರುವ ಡಾ. ಶ್ರೀ ಹರ್ಷ ಅವರು ನೀಡಿರುವ ಮಾಹಿತಿ ಇಲ್ಲಿದೆ.

? ಮೂತ್ರಪಿಂಡದ ಸಮಸ್ಯೆಯನ್ನು ಹೇಗೆ ಗುರುತಿಸಬಹುದು? ಇದರ ಲಕ್ಷಣಗಳೇನು?
ಮೂತ್ರಪಿಂಡಕ್ಕೆ ಸಂಬಂಧಪಟ್ಟಂತೆ ಆರಂಭದಲ್ಲಿ ಲಕ್ಷಣ ಗಳು ಅಷ್ಟಾಗಿ ಗೋಚರಿಸದಿದ್ದರೂ, ಕೆಲವು ತಿಂಗಳು, ವರ್ಷಗಳಲ್ಲಿ ನಿಧಾನವಾಗಿ ಸಮಸ್ಯೆ ಉಂಟಾಗಬಹುದು. ರಕ್ತದೊತ್ತಡ ಸ್ವಲ್ಪ ಜಾಸ್ತಿಯಾಗುವುದು, ಮೂತ್ರದಲ್ಲಿ ಉರಿ- ನೊರೆ, ಕಾಲು ಊತ ಇದು ಆರಂಭಿಕ ಲಕ್ಷಣ. ನಂತರದ ಹಂತದಲ್ಲಿ ವಾಂತಿ, ಹಸಿವು ಕಡಿಮೆಯಾಗುವುದು, ಉಸಿರಾಟದ ಸಮಸ್ಯೆ, ಆಯಾಸ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ, ಮೂಳೆಗಳು ದುರ್ಬಲವಾಗ ಬಹುದು. ಹಾಗೆಯೇ ದೇಹದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಆಸಿಡ್ ಅಂಶ, ಪೊಟ್ಯಾಶಿಯಂ ಜಾಸ್ತಿಯಾಗುತ್ತದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ.

? ಯಾವೆಲ್ಲಾ ಕಾರಣಗಳಿಂದ ಕಿಡ್ನಿ ವೈಫಲ್ಯ ಸಂಭವಿಸುತ್ತದೆ?
ಭಾರತದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣ. ಮಧುಮೇಹ ರೋಗಿಗಳಲ್ಲಿ ಶೇ ೩೦ ರಿಂದ ಶೇ. ೪೦ ಜನರಿಗೆ ಕಿಡ್ನಿ ಸಮಸ್ಯೆ ಬರುವ ಸಾಧ್ಯತೆ ಇದೆ. ಆರಂಭದ ಹಂತದ ಮಧುಮೇಹದಲ್ಲಿ ಸಕ್ಕರೆಯ ಅಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಈ ಸಮಸ್ಯೆ ಇನ್ನಷ್ಟು ಬೇಗ ಕಾಡಬಹುದು. ಎರಡನೇ ಮುಖ್ಯ ಕಾರಣ ರಕ್ತದೊತ್ತಡ. ಆಗ ನೇರವಾಗಿ ಮೂತ್ರಪಿಂಡಕ್ಕೆ ಹಾನಿ ಉಂಟಾಗುತ್ತದೆ. ಯಾಕೆಂದರೆ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡುವುದೇ ಕಿಡ್ನಿ. ಹಾಗಾಗಿ ರಕ್ತದೊತ್ತಡದ ಸಮಸ್ಯೆ ಕಂಡು ಬಂದ ತಕ್ಷಣವೇ
ಮೂತ್ರಪಿಂಡದ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಕಿಡ್ನಿ ಸಮಸ್ಯೆಯಿಂದಲೂ ರಕ್ತದೊತ್ತಡ ಕಾಣಿಸಿ ಕೊಳ್ಳಬಹುದು.

? ಡಯಾಲಿಸಿಸ್ ಎಂದರೆ ಏನು?
ಸೋಂಕು, ತೀವ್ರ ಹೃದಯಾಘಾತ, ಯಕೃತ್ತಿನ ವೈಫಲ್ಯ, ಗರ್ಭಾವಸ್ಥೆಯ ತೊಡಕುಗಳಿಂದಲೂ ಮೂತ್ರಪಿಂಡ ವೈಫಲ್ಯವಾಗಬಹುದು. ಅಂತಹ ಸಂದರ್ಭ ದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ಅವಶ್ಯಕ. ಮೂತ್ರಪಿಂಡ ರಕ್ತವನ್ನು ಶುದ್ಧೀಕರಿಸುವ ರೀತಿಯಲ್ಲೇ ಡಯಾಲಿಸಿಸ್ ಕಾರ್ಯ ನಿರ್ವಹಿಸುತ್ತದೆ. ಡಯಾಲಿಸಿಸ್ ನಲ್ಲಿ ಹಿಮೋ ಡಯಾಲಿಸಿಸ್ ಮತ್ತು ಇನ್ನೊಂದು  ಪೆರಿಟೋನಿಯಲ್ ಡಯಾಲಿಸಿಸ್ ಎಂದು ಎರಡು ವಿಧ. ಇದರಲ್ಲಿ ಯಾವುದೇ ನೋವು, ಅಡ್ಡಪರಿಣಾಮ ಇರುವುದಿಲ್ಲ. ಕೊನೆಯ ಹಂತದ ಕಿಡ್ನಿ ತೊಂದರೆ ಇದ್ದಲ್ಲಿ ಮಾತ್ರ ಶಾಶ್ವತ ಡಯಾಲಿಸಿಸ್ ಅನಿವಾರ್ಯ. ಹೆಚ್ಚಿನ ಸಂದರ್ಭ ದಲ್ಲಿ ತಾತ್ಕಾಲಿಕವಾಗಿ ಡಯಾಲಿಸಿಸ್ ಮಾಡಿ ರೋಗಿ ಯನ್ನು ಕಾಪಾಡಬಹುದು.

? ಮೇಲೆ ಹೇಳಿದ ಯಾವುದೇ ಲಕ್ಷಣಗಳು ಇಲ್ಲದಿದ್ದಲ್ಲಿ ಕಿಡ್ನಿ ತೊಂದರೆ ಇಲ್ಲವೆಂದು ಅರ್ಥವೇ?
ಆರಂಭಿಕ ಹಂತದಲ್ಲಿ ಕಿಡ್ನಿ ತೊಂದರೆ ಯಾವುದೇ ಲಕ್ಷಣಗಳು ಇಲ್ಲದೆಯೂ ಕಾಣಿಸಿಕೊಳ್ಳಬಹುದು. ಅದಕ್ಕೋಸ್ಕರ ೩೦ರಿಂದ ೩೫ ವರ್ಷ ಒಳಗಿನವರು
ವರ್ಷಕ್ಕೊಮ್ಮೆ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಕಿಡ್ನಿಯಲ್ಲಿ ಯಾವುದೇ ತೊಂದರೆ ಇದೆಯೋ ಇಲ್ಲವೋ ತಿಳಿದುಕೊಳ್ಳ ಬಹುದು. ಆರಂಭಿಕ ಹಂತದಲ್ಲಿ ಕಿಡ್ನಿ ಸ್ಕಾನಿಂಗ್‌ನಿಂದಲೂ ಸಮಸ್ಯೆ ಪತ್ತೆಹಚ್ಚಬಹುದು.

? ಕಿಡ್ನಿ ಚೆನ್ನಾಗಿರಲು ಏನು ಮಾಡಬೇಕು?
ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕು. ೬೦- ೭೦ ತೂಕವುಳ್ಳ ಹಾಗೂ ೫೦- ೬೦ ತೂಕವುಳ್ಳ ಮಹಿಳೆಯರು ನಿತ್ಯವೂ ೩ ಲೀ. ನೀರು ಕುಡಿದರೆ, ಕಿಡ್ನಿಯನ್ನು ಕಾಪಾಡಿಕೊಳ್ಳಬಹುದು.

ಅತಿಯಾದ ಸಕ್ಕರೆ, ಉಪ್ಪು, ಖಾರ ಸೇವನೆ ಕಡಿಮೆ ಮಾಡಿ. ಹೆಚ್ಚಿನ ಪ್ರಮಾಣದ ಸಕ್ಕರೆ ಸೇವನೆ ಮಧುಮೇಹಕ್ಕೆ ಹಾಗೂ ಉಪ್ಪು ರಕ್ತದೊತ್ತಡಕ್ಕೆ ದಾರಿ
ಮಾಡಿಕೊಡಬಹುದು. ಇದರಿಂದ ನೇರವಾಗಿ ಮೂತ್ರಪಿಂಡಕ್ಕೆ ಹಾನಿಯಾಗಬಹುದು. ಜಂಕ್ ಫುಡ್, ಎಣ್ಣೆ ಪದಾರ್ಥ ಬಳಕೆಯಲ್ಲಿ ನಿಯಂತ್ರಣವಿರಲಿ.

ಪ್ರೋಟೀನ್ ಉಳ್ಳ ಆಹಾರದಿಂದ ಕಿಡ್ನಿಗೆ ಯಾವ ಹಾನಿಯೂ ಉಂಟಾಗುವುದಿಲ್ಲ. ಆದರೆ ಐದನೇ ಹಂತ ತಲುಪಿದ ರೋಗಿಗೆ ಕಡಿಮೆ ಪ್ರೋಟೀನ್ ತೆಗೆದು ಕೊಳ್ಳಲು ಸೂಚಿಸುತ್ತೇವೆ. ಹಾಗಿದ್ದರೂ ಶೇ ೨೦ರಿಂದ ೩೦ರಷ್ಟು ಪ್ರೊಟೀನ್‌ನ್ನು ಆಹಾರ ಒಳಗೊಂಡಿರಲೇಬೇಕು. ಅದು ಮಧುಮೇಹವನ್ನು ನಿಯಂತ್ರಣ ದಲ್ಲಿಟ್ಟುಕೊಂಡು ಕಿಡ್ನಿಯ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

ನೋವು ನಿವಾರಕ ಔಷದಿ, ನಾಟಿ ಚಿಕಿತ್ಸೆಯಿಂದ ಮೂತ್ರಪಿಂಡ ವೈಫಲ್ಯ ಆಗುವ ಸಾಧ್ಯತೆ ಇದೆ. ವೈದ್ಯರು ನೋವು ನಿವಾರಕ ಔಷಧಿ ತೆಗೆದುಕೊಳ್ಳ ಬೇಕು ಎಂದುಸೂಚಿಸಿದರೆ, ನಿಮ್ಮ ಕಿಡ್ನಿಯ ಕಾರ್ಯವೈಖರಿ ಪರೀಕ್ಷಿಸಿಕೊಂಡೇ ಔಷಧಿ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಹಾನಿಕಾರಕ ವಲ್ಲದ ನೋವು ನಿವಾರಕ ಮಾತ್ರಗಳನ್ನಷ್ಟೇ ತೆಗೆದುಕೊಳ್ಳಿ.

ಧೂಮಪಾನ ಮತ್ತು ಮದ್ಯಪಾನ ಅಭ್ಯಾಸವುಳ್ಳವರು, ತಕ್ಷಣ ಅದನ್ನು ನಿಲ್ಲಿಸಿ.

ಜನನಾಂಗದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಮೂತ್ರಕೋಶದ ಸೋಂಕಿನಿಂದ ಕಿಡ್ನಿ ವೈಫಲ್ಯವೂ ಆಗಬಹುದು. ಸಾಧ್ಯವಾದಷ್ಟು
ಸಾರ್ವಜನಿಕ ಶೌಚಾಲಯ ಬಳಕೆ ಕಡಿಮೆ ಮಾಡಿ.

ಈ ಸಮಸ್ಯೆಯಿಂದ ತಕ್ಷಣವೇ ಹೊರಗೆ ಬರಲು ಯಾವುದೇ ಮ್ಯಾಜಿಕ್ ಔಷಽ ಅಥವಾ ಆಹಾರ ನಿಮಗೆ ಸಹಾಯ ಮಾಡುವುದಿಲ್ಲ. ಹಾಗಾಗಿ ಸೂಕ್ತ ಪರೀಕ್ಷೆ, ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯವಶ್ಯಕ.