Thursday, 20th June 2024

ಸಾಹಿತ್ಯಾಸಕ್ತ ಗೃಹಿಣಿಯರಿಗೊಂದು ವರದಾನ: ಪ್ರತಿಲಿಪಿಯಲ್ಲಿ ಸಾಹಿತ್ಯದ ಮೂಲಕವೇ ವರಮಾನ

“ನನ್ನ ಪ್ರತಿಲಿಪಿ ಗಳಿಕೆಯಿಂದ ಮಗಳಿಗೆ ಕಿವಿಯೋಲೆ ಖರೀದಿಸಿದೆ” ,
“ಗಂಡನ ಉದ್ದಿಮೆಗೆ ನೆರವಾದೆ”,
“ಅಮ್ಮನಿಗೆ ದುಬಾರಿಯ ಮೈಸೂರು ರೇಷ್ಮೆ ಸೀರೆ ಕೊಡಿಸಿದೆ”,
“ ಅಪ್ಪ ಅಮ್ಮನ ಬಹುಕಾಲದ ಕನಸಾದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿದೆ” ,
“ಗಂಡನ ಜನ್ಮದಿನದಂದು ಬಂಗಾರದ ಬ್ರಾಸ್ಲೆಟ್ ಕೊಡಿಸಿದೆ”
“ಜೀವನದಲ್ಲಿ ಮೊದಲ ಸಲ ನನ್ನದೇ ಆದ ಹಣವನ್ನು ಸಂಪಾದಿಸಿದೆ, ಈ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ”
ಈ ರೀತಿಯ ನೂರಾರು ಸ್ಟೇಟಸ್ ಗಳು, ಪೋಸ್ಟ್ ಗಳು ಪ್ರತಿಲಿಪಿಯ ಒಳಗೆ ಮತ್ತು ಹೊರಗೆ ವಿವಿಧ ಜಾಲತಾಣಗಳಲ್ಲಿ ಪ್ರತಿಲಿಪಿ ಬಳಕೆದಾರರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಆಗಾಗ ಕಾಣಿಸುತ್ತಿರುತ್ತದೆ. ನಿಜ! ಪ್ರತಿಲಿಪಿ ಸ್ವಪ್ರಕಾಶನ ಸಂಸ್ಥೆ ಬರಹಗಳ ಪ್ರಕಟಣೆಗೆ ಮಾತ್ರವಲ್ಲದೇ, ಆ ಬರಹಗಳಿಂದಲೇ ಹಣಗಳಿಕೆಗೂ ಅವಕಾಶ ಮಾಡಿಕೊಟ್ಟಿದೆ.

ಕನ್ನಡವೂ ಸೇರಿದಂತೆ ಭಾರತದ ಹತ್ತು ಭಾಷೆಗಳಲ್ಲಿ ಹೊಸದೊಂದು ಕ್ರಾಂತಿ ಪ್ರತಿಲಿಪಿಯಿಂದಾಗುತ್ತಿದೆ. ಹವ್ಯಾಸಕ್ಕಾಗಿ, ಸಮಯ ಕಳೆಯಲು ಬರಹ ಪ್ರಕಟಿಸುತ್ತಿದ್ದ ಸಾವಿರಾರು ಲೇಖಕ ಲೇಖಕಿಯರು ಈಗ ಮಾಸಿಕವಾಗಿ ನಿರೀಕ್ಷೆಯನ್ನೂ ಮಾಡಿರದಷ್ಟು ಹಣವನ್ನು ತಮ್ಮ ಬರಹಗಳಿಂದಲೇ ಗಳಿಸುತ್ತಿದ್ದಾರೆ. ಮುಖ್ಯವಾಗಿ ಗೃಹಿಣಿಯರಿಗೆ ತಮ್ಮ ಭಾವನೆ, ಕಲ್ಪನೆ ಮತ್ತು ವಿಚಾರಗಳನ್ನು ಹೇಳಿಕೊಳ್ಳಲು ಆಪ್ತವಾದ ವೇದಿಕೆ ಇದಾಗಿದೆ. ಮಾತ್ರವಲ್ಲ ಹವ್ಯಾಸಕ್ಕಾಗಿ ಬರೆಯುವ ಅಭ್ಯಾಸ ಇಟ್ಟುಕೊಂಡವರಿಗೆ, ಮೊಬೈಲ್/ಕಂಪ್ಯೂಟರ್ ನಲ್ಲಿ ತಾವು ವ್ಯಯಿಸಿದ ಸಮಯಕ್ಕೆ ಪ್ರತಿಯಾಗಿ, ತಮ್ಮ ಖರ್ಚುವೆಚ್ಚಗಳನ್ನು ತಾವೇ ನೋಡಿಕೊಳ್ಳಲಷ್ಟೇ ಅಲ್ಲದೇ ತಮ್ಮ ಮಕ್ಕಳ, ಸಂಸಾರದ ಅಗತ್ಯ ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗುವಷ್ಟು ಗಳಿಕೆಯಾಗುತ್ತಿದೆ. ಭಾರತದಾದ್ಯಂತ ೧೨ ಭಾಷೆಗಳಲ್ಲಿ ತಮ್ಮ ಪ್ರತಿಲಿಪಿಯ ಬರಹಗಳಿಂದ ಹಣ ಗಳಿಸುತ್ತಿರುವವರ ಸಂಖ್ಯೆ ಈಗ ಹಲವು ಸಾವಿರಗಳಲ್ಲಿದೆ!

ಪ್ರತಿನಿತ್ಯ ೧೨-೧೪ ಗಂಟೆಗಳನ್ನು ವ್ಯಯಿಸಿ ಧಾರಾವಾಹಿಗಳಾಗಿ ಪ್ರಕಟವಾಗುತ್ತಿರುವ ತಮ್ಮ ಕಾದಂಬರಿಗಳ ೪-೫ ಅಧ್ಯಾಯಗಳನ್ನು ಪ್ರಕಟಿಸುವವರೂ ಇದ್ದಾರೆ. ಕಥೆಯ ಪಾತ್ರಗಳು, ಸನ್ನಿವೇಶಗಳು, ಸಂಭಾಷಣೆಗಳು, ಕಥಾಹಂದರ, ಉಪಕಥೆಗಳು ಮುಂತಾದವುಗಳ ಕುರಿತು ಓದುಗರೊಂದಿಗೆ ನೇರವಾಗಿ ಚರ್ಚಿಸುವ ಅವಕಾಶ ಇಲ್ಲಿರುವುದರಿಂದ, ಕಥೆಗಾರರು ಓದುಗರೊಂದಿಗೆ ಇನ್ನಷ್ಟು ಭಾವನಾತ್ಮಕವಾಗಿ ಹತ್ತಿರವಾಗುತ್ತಿದ್ದಾರೆ. ಅನಾರೋಗ್ಯ, ಪ್ರವಾಸ, ಕಾರ್ಯಕ್ರಮಗಳು, ಪರೀಕ್ಷೆಗಳು, ಉದ್ಯೋಗ, ಕುಟುಂಬದ ಜವಾಬ್ದಾರಿಗಳು ಮುಂತಾದ ಅನಿವಾರ್ಯ ಕಾರಣಗಳಿಂದ ಸಮಯಾವಕಾಶದ ಕೊರತೆಯಾಗಿ ಧಾರಾವಾಹಿಗಳ ಹೊಸ ಅಧ್ಯಾಯಗಳನ್ನು ಪ್ರಕಟಿಸಲಾಗದಿದ್ದಲ್ಲಿ, ಪ್ರತಿಲಿಪಿಯಲ್ಲಿ ಲಭ್ಯವಿರುವ ಷೆಡ್ಯೂಲಿಂಗ್ ಸೌಲಭ್ಯ ಬಳಸಿಕೊಂಡು ಆಯಾ ದಿನದ ನಿಗದಿತ ವೇಳೆಯಲ್ಲಿ ಅಧ್ಯಾಯ ಪ್ರಕಟಿಸುವ ಅವಕಾಶ ಇರುವುದರಿಂದ ಓದುಗರು ಪ್ರತಿನಿತ್ಯ ತಮ್ಮ ಮೆಚ್ಚಿನ ಧಾರಾವಾಹಿಗಳನ್ನು ಓದಬಹುದು.

ಇಲ್ಲಿ ಬರೆಯುತ್ತಿರುವ ಲೇಖಕ ಲೇಖಕಿಯರು ತಮ್ಮ ಕೃತಿಗಳನ್ನು ಪಾವತಿತ ವ್ಯವಸ್ಥೆಯಡಿಯಲ್ಲಿ ತರಲೇಬೇಕೆಂಬ ನಿಯಮವೇನೂ ಪ್ರತಿಲಿಪಿಯಲ್ಲಿಲ್ಲ, ಯಾವುದೇ ಬರಹಗಾರರು ಉಚಿತವಾಗಿ ಓದುಗರಿಗೆ ಪ್ರತಿಲಿಪಿಯ ಮೂಲಕ ತಮ್ಮ ಬರಹಗಳನ್ನು ಓದಲು ನೀಡಬಯಸಿದಲ್ಲಿ ಅದಕ್ಕೂ ಅವಕಾಶವಿದೆ. ಪಾವತಿತ ವ್ಯವಸ್ಥೆಯಡಿಯಲ್ಲಿ ಪ್ರಕಟಿಸಲೂ ಸಹ ಆಯ್ಕೆ ಇದೆ. ಅಂತೆಯೇ ಓದುಗರೂ ಸಹ ಉಚಿತವಾಗಿಯೇ ಓದಬಯಸಿದಲ್ಲಿ, ತಾವು ಓದುತ್ತಿರುವ ಧಾರಾವಾಹಿಯ ಅಧ್ಯಾಯಯನ್ನು ಪೂರ್ತಿಯಾಗಿ ಓದಿದಲ್ಲಿ ಮರುದಿನ ಅದರ ಮುಂದಿನ ಅಧ್ಯಾಯ ಅನ್ಲಾಕ್ ಆಗುತ್ತದೆ.

ಪ್ರೀಮಿಯಂ ಅಡಿಯಲ್ಲಿರುವ ಧಾರಾವಾಹಿಗಳ ಎಲ್ಲ ಅಧ್ಯಾಯಗಳನ್ನೂ ಒಟ್ಟಿಗೇ ಓದಬಯಸಿದಲ್ಲಿ ಆಯಾ ಲೇಖಕ/ಲೇಖಕಿಯರ ಸೂಪರ್ ಫ್ಯಾನ್ ಆಗಿ ಸಬ್ಸ್ಕ್ರೈಬ್ ಮಾಡಿ ಓದಬಹುದು ಅಥವಾ ವೇದಿಕೆ ಹಂತದಲ್ಲಿ ಪ್ರೀಮಿಯಂ ಯೋಜನೆಯನ್ನು ಸಬ್ಸ್ಕ್ರೈಬ್ ಮಾಡಿ ಓದಬಹುದು. ಉಚಿತವಾಗಿ ಓದುವ ಮತ್ತು ಪ್ರಕಟಿಸುವ ಅವಕಾಶ ಪ್ರತಿಲಿಪಿಯಲ್ಲಿದ್ದರೂ ಹಣ ಪಾವತಿಸಿ ಓದುವ ಸಬ್ಸ್ಕ್ರೈಬರ್ ಗಳ ಸಂಖ್ಯೆ ಏನೂ ಕಡಿಮೆಯಿಲ್ಲ. ತಮ್ಮ ಮೆಚ್ಚಿನ ಕೃತಿಯನ್ನು ಪ್ರತಿನಿತ್ಯ ಒಂದೊಂದು ಅಧ್ಯಾಯಗಳಾಗಿ ಓದುವ ಬದಲು ಒಮ್ಮೆಲೇ ಓದಲು ಇಷ್ಟಪಡುವ ಓದುಗರು ಪಾವತಿಸಿ ಸಬ್ಸ್ಕ್ರೈಬ್ ಆಗಲು ಹಿಂಜರಿಯುವುದಿಲ್ಲ. ಇದಕ್ಕೆ ಕಾರಣ ಅಂತಹ ಕುತೂಹಲ ಮೂಡಿಸುವ ಕಥಾಹಂದರ ಮತ್ತು ನಿರೂಪಣಾ ಶೈಲಿಯೂ ಇರಬಹುದು. ತಾವು ಮಾಸಿಕವಾಗಿ ನೀಡುವ ಹಣಕ್ಕೆ ಪ್ರತಿಯಾಗಿ ಅತ್ಯುತ್ತಮ ಮೌಲ್ಯಯುತ ಸೇವೆ ಲಭಿಸುತ್ತಿರುವುದರಿಂದ ಸಬ್ಸ್ಕ್ರಿಪ್ಷನ್ ನವೀಕರಣಗೊಳಿಸುತ್ತಿರುವವರ ಶೇಕಡಾವಾರು ಪ್ರಮಾಣವೂ ತಿಂಗಳಿನಿಂದ ತಿಂಗಳಿಗೆ ವೇಗವಾಗಿ ವರ್ಧಿಸುತ್ತಿದೆ!

ಪ್ರತಿಲಿಪಿಕನ್ನಡದ ತೀರ್ಥ ಶಿವು, ಮಂಗಳ ಶೆಟ್ಟಿ, ರಿತು, ಶ್ರೀದಿವ್ಯ, ಸೌಮ್ಯಶ್ರೀ, ಶ್ರೀದಿವ್ಯ, ಅನಿತಾ ಹೊನ್ನಪ್ಪ ಸೇರಿದಂತೆ ನೂರಾರು ಲೇಖಕಿಯರು ತಮ್ಮ ಕೃತಿಗಳಿಂದ ಮಾಸಿಕವಾಗಿ ಸುಮಾರು ೧೦ರಿಂದ ೫೦ ಸಾವಿರ ರೂಪಾಯಿಗಳವರೆಗೂ ಹಣ ಗಳಿಸುತ್ತಿರುವುದು ಇವರ ಕೃತಿಗಳನ್ನು ಮೆಚ್ಚುತ್ತಿರುವ ಓದುಗರ ಅಭಿಮಾನಕ್ಕೆ ಸಾಕ್ಷಿ. ಇವರಲ್ಲಿ ಬಹುತೇಕರು ಗೃಹಿಣಿಯರಾಗಿದ್ದು, ಮೊತ್ತ ಮೊದಲ ಬಾರಿಗೆ ‘ನನ್ನ ಸ್ವಂತ ಗಳಿಕೆ’ ಎಂಬುದನ್ನು ಮಾಡುತ್ತಿರುವುದು ಇವರಲ್ಲ ನೇಕರಿಗೆ ಭಾವುಕ ವಿಚಾರವಾಗಿರುತ್ತದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಪ್ರತಿಲಿಪಿ ಮುಖ್ಯ ಕಚೇರಿಯಲ್ಲಿ ಭಾರತದ ಹನ್ನೆರೆಡೂ ಭಾಷೆಗಳ ಸಾವಿರಾರು ಕೃತಿಗಳ ಪ್ರಕಟಣೆಗೆ ಬೇಕಾದ ತಾಂತ್ರಿಕ ಬೆಂಬಲ, ಸಮಸ್ಯೆಗಳನ್ನು ಪರಿಹಾರ, ವಿವಿಧ ಹಂತಗಳಲ್ಲಿರುವ ಬರಹಗಾರರು/ಬರಹಗಾರ್ತಿಯರನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು, ಹೊಸ ಸೌಲಭ್ಯಗಳು, ಆನ್ಲೈನ್ ಸ್ಪರ್ಧೆಗಳ ಆಯೋಜನೆಯ ಕುರಿತಾದ ಚರ್ಚೆ ಮುಂತಾದ ಕಾರ್ಯಗಳು ಹಗಲೂ ರಾತ್ರಿ ನೆಡೆಯುತ್ತವೆ. ಇಲ್ಲಿ ದೇಶದ ಅತ್ಯುತ್ತಮ ತಂತ್ರಜ್ಞರು ಸದಾಕಾಲ ಓದುಗರ ಮತ್ತು ಬರಹಗಾರರ ಹಿತಾನುಭವವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಹೊಸ ಯೋಜನೆ ಮತ್ತು ಸೌಲಭ್ಯಗಳನ್ನು ಪರಿಚಯಿ ಸುತ್ತಲೇ ಇರುತ್ತಾರೆ.

ಓದುಗರು ಮತ್ತು ಬರಹಗಾರರಿಗೆ ಸಂಬಂಧಿಸಿದ ಬಹುತೇಕ ಎಲ್ಲ ಚಟುವಟಿಕೆಗಳೂ ಆನ್ಲೈನ್ ನಲ್ಲಿಯೇ ಆಗಿರುವುದರಿಂದ ಭಾರತದ ಯಾವುದೇ ರಾಜ್ಯ ಅಥವಾ ಪ್ರಪಂಚದ ಯಾವುದೇ ದೇಶದಲ್ಲಿರುವ ಆಯಾ ಭಾಷೆಗಳ ಸಾಹಿತ್ಯಪ್ರಿಯರು, ಹವ್ಯಾಸಿ ಲೇಖಕ, ಲೇಖಕಿಯರು ಸುಲಭವಾಗಿ ತಮ್ಮ ಕೃತಿಗಳನ್ನು ಪ್ರಕಟಿಸ ಬಹುದು, ಓದಬಹುದು ಮತ್ತು ತಮ್ಮ ವಿಮರ್ಶೆ ಅಭಿಪ್ರಾಯಗಳನ್ನು ಆಯಾ ಲೇಖಕ/ಲೇಖಕಿಯರಿಗೆ ತಿಳಿಸಬಹುದು.

ಹನ್ನೆರೆಡು ಭಾಷೆಗಳಲ್ಲಿ ಮಾಸಿಕ ಸುಮಾರು ಮೂರು ಕೋಟಿ ಬಳಕೆದಾರರನ್ನು ಹೊಂದಿರುವ ಪ್ರತಿಲಿಪಿಯಲ್ಲಿ ಈಗ ೧೦ ಲಕ್ಷಕ್ಕೂ ಅಧಿಕ ಲೇಖಕ/ಲೇಖಕಿಯ ರಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ ಇದರಲ್ಲಿ ಸುಮಾರು ೭೦% ಬಳಕೆದಾರರು ಮಹಿಳೆಯರು ಮತ್ತು ಇವರಲ್ಲಿ ಬಹುತೇಕರು ಗೃಹಿಣಿಯರು…!!
ನವ ಯುವ ಬರಹಗಾರರು/ಬರಹಗಾರ್ತಿಯರಿಗೆ ಪ್ರತಿನಿತ್ಯ ಬರೆಯಲು ಪ್ರೋತ್ಸಾಹಿಸಲು ದಿನವೂ ಒಂದೊಂದು ವಿಷಯಗಳನ್ನು ನೀಡಿ ಪ್ರೇರೇಪಿಸಲಾಗುತ್ತದೆ. ಆಸಕ್ತರಿಗೆ ಪ್ರತಿಲಿಪಿ ಫೆಲೋಶಿಪ್ ಕಾರ್ಯಕ್ರಮ ಸಹ ಲಭ್ಯ.

ಪ್ರತಿಲಿಪಿಯ ಸಹ ಸಂಸ್ಥಾಪಕಿಯರಲ್ಲೊಬ್ಬರಾದ ಸಹೃದಯಿ (ಶೆಲ್ಲಿ) ಮೋದಿ ಹೇಳುವಂತೆ – “ಪ್ರತಿಲಿಪಿ ಕೇವಲ ವೇದಿಕೆಯಲ್ಲ. ಇದು ಶೋಧನೆ, ಬೆಳವಣಿಗೆ ಮತ್ತು ಸ್ವಾವಲಂಬನೆಯ ನಿರಂತರತೆಯನ್ನು ತಮ್ಮ ಬರಹಗಳಿಂದಲೇ ಕಾಯ್ದುಕೊಳ್ಳಲು ಇರುವ ಒಂದು ಅವಕಾಶ. ಪ್ರತಿಲಿಪಿಯ ಸಂಸ್ಥಾಪಕರ ಕನಸು, ಉದ್ಯೋಗಿಗಳ ಶ್ರಮ, ಲೇಖಕ/ಲೇಖಕಿಯರ ಪಾಲ್ಗೊಳ್ಳುವಿಕೆ ,ಓದುಗರ ಅಪಾರ ಬೆಂಬಲ ಮತ್ತು ಪ್ರೋತ್ಸಾಹದಿಂದ ಇಂದು ನಾವು ಸಾವಿರಾರು ಲೇಖಕ/ಲೇಖಕಿಯರಿಗೆ ಬರಹ ಪ್ರಕಟಣೆಯ ಅವಕಾಶವನ್ನಷ್ಟೇ ಅಲ್ಲದೇ, ಸ್ವಾವಲಂಬನೆಯ ಹಲವಾರು ಸಾಧ್ಯತೆ ಮತ್ತು ಅವಕಾಶವನ್ನು ತೆರೆದಿಟ್ಟಿದ್ದೇವೆ ಎನ್ನಲು ಹೆಮ್ಮೆಯಾಗುತ್ತದೆ” ಇವಿಷ್ಟೇ ಅಲ್ಲದೇ, ಪ್ರತಿಲಿಪಿಯಲ್ಲಿ ಪ್ರಕಟಗೊಂಡು ಅಪಾರ ಜನಮನ್ನಣೆ ಗಳಿಸಿದ ಬರಹಗಳ ಹಕ್ಕುಗಳನ್ನು ಪ್ರತಿಲಿಪಿಯೇ ಖರೀದಿಸಿ ಅದನ್ನು ಧ್ವನಿಮುದ್ರಣ, ಕಾಮಿಕ್ಸ್, ವಿಡಿಯೋ, ವೆಬ್ ಸೀರೀಸ್, ಟಿವಿ ಧಾರಾವಾಹಿಗಳು, ಸಿನೆಮಾ ಮುಂತಾದ ವಿಧಗಳಲ್ಲಿ ಮಾರ್ಪಡಿಸುವ ಬೃಹತ್ ಯೋಜನೆಯೂ ಈಗಾಗಲೇ ಕಾರ್ಯಗತ ಗೊಂಡಿದೆ.

ಜೊತೆಗೆ ಈಗಾಗಲೇ ಹಲವಾರು ಪ್ರಸಿದ್ಧ ಪುಸ್ತಕ ಪ್ರಕಾಶನ ಮತ್ತು ಮಾರಾಟದ ಸಂಸ್ಥೆಗಳು ತಮ್ಮಲ್ಲಿರುವ ಕೃತಿಗಳನ್ನು ಡಿಜಿಟಲ್ ರೂಪದಲ್ಲಿ ಪ್ರತಿಲಿಪಿಯ ಮೂಲಕ ಪ್ರಕಟಿಸಲು ಇಂಗಿತ ವ್ಯಕ್ತಪಡಿಸಿದ್ದು, ಮುಂಬರುವ ದಿನಗಳಲ್ಲಿ ಈ ಯೋಜನೆ ಸಹ ಕಾರ್ಯರೂಪಕ್ಕೆ ಬರಲಿದೆ.

ಒಟ್ಟಿನಲ್ಲಿ ಕನ್ನಡವೂ ಸೇರಿದಂತೆ ಭಾರತದ ಹತ್ತು ಭಾಷೆಗಳ ಸಾಹಿತ್ಯಪ್ರಿಯರು ತಮ್ಮ ಬರಹಗಳನ್ನು ಈ ಮೂಲಕ ಆಯಾ ಭಾಷೆಗಳ ಓದುಗರಿಗೆ ನೀಡುವ ಮತ್ತು ಆ ಹವ್ಯಾಸವನ್ನೇ ವೃತ್ತಿಯಾಗಿಯೂ ಮಾಡಿಕೊಂಡು ಜೀವನ ನಿರ್ವಹಿಸುವಂತಹ ಅವಕಾಶವನ್ನು ಪ್ರತಿಲಿಪಿ ಈಗಾಗಲೇ ಒದಗಿಸಿದ್ದು, ಮುಂಬರುವ ದಿನಗಳಲ್ಲಿ ಅಪಾರ ಅವಕಾಶಗಳನ್ನು ನೀಡುವ ಸಾಧ್ಯತೆ ನಿಚ್ಚಳವಾಗಿದೆ.

Leave a Reply

Your email address will not be published. Required fields are marked *

error: Content is protected !!