Thursday, 19th September 2024

Lokesh Kayarga Column: ಸುದ್ದಿಮನೆಯ ನಿತ್ಯವಸಂತ

ಲೋಕೇಶ್‌ ಕಾಯರ್ಗ

ಸುದ್ದಿ ಪತ್ರಿಕೆಯೊಂದರ ಹಿಂದೆ ನೂರೆಂಟು ಕೈಗಳ ಶ್ರಮವಿರುತ್ತದೆ. ಎಲ್ಲರ ಶ್ರಮವೂ ವಿಭಿನ್ನ. ವರದಿಗಾರರು ಸುದ್ದಿ ಸಂಗ್ರಹಿಸಿಕೊಡುವವರಾದರೆ, ಅದನ್ನು ಒಪ್ಪ,ಓರಣಗೊಳಿಸಿ,, ಕಾಗುಣಿತ ದೋಷಗಳನ್ನು ಸರಿಪಡಿಸಿ, ಆಕರ್ಷಕ ವಾದ ಶೀರ್ಷಿಕೆ ಕೊಡುವುದು ಡೆಸ್ಕ್ ಪತ್ರಕರ್ತರ ಕೆಲಸ. ಅಂದವಾದ ಪುಟ ವಿನ್ಯಾಸ ದೊಂದಿಗೆ ಜೀವ ತುಂಬುವುದು ಪುಟ ವಿನ್ಯಾಸಕಾರರ ಕೆಲಸ.

ಕನ್ನಡಪ್ರಭ ಪತ್ರಿಕೆಯಲ್ಲಿ ವೃತ್ತಿಯ ಆರಂಭಿಕ ಮಜಲು ಆರಂಭಿಸಿದ್ದ ವಸಂತ ನಾಡಿಗೇರ್, ಸಂಪಾದಕ ವೈಎನ್ಕೆ ಅವರ ‘ಪನ್’ಗಳಿಂದ ಪ್ರಭಾವಿತ ರಾಗಿದ್ದವರು. ೨೦೦೦ನೇ ಇಸವಿಯಲ್ಲಿ ವಿಜಯ ಕರ್ನಾಟಕ ಪತ್ರಿಕೆಗೆ ಸೇರಿದ ಬಳಿಕ ಅವರ ಸೃಜನ ಶೀಲತೆಗೆ ಪೂರ್ಣ ಸ್ವಾತಂತ್ರ್ಯ ದೊರೆಯಿತು. ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಪತ್ರಿಕೆಯ
ಹೆಡ್ಡಿಂಗ್ ಮತ್ತು ಪುಟವಿನ್ಯಾಸಕ್ಕೆ ವಿಶೇಷ ಒತ್ತು ನೀಡುತ್ತಿದ್ದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿ ವಿಡಂಬನೆ, ಹಾಸ್ಯ, ಮೊನಚು,ಗೂಢಾರ್ಥ ಸೇರಿಸಿ ಶೀರ್ಷಿಕೆ ಕೊಡುವುದರಲ್ಲಿ ವಸಂತ ನಾಡಿಗೇರ್ ಎತ್ತಿದ ಕೈ ಆಗಿದ್ದರು. ಹೊರ ನೋಟಕ್ಕೆ ಗಂಭೀರವದನರಾಗಿ ಇರುತ್ತಿದ್ದ ನಾಡಿಗೇರ್, ತನ್ನೊಳಗಿನ ವಿಡಂಬನೆ, ಹಾಸ್ಯ ಪ್ರವೃತ್ತಿಗೆ ಶೀರ್ಷಿಕೆಗಳ ಮೂಲಕ ಜೀವ ತುಂಬುತ್ತಿದ್ದರು.

ಪ್ರಜಾವಾಣಿ ಮತ್ತು ಉಳಿದ ಪತ್ರಿಕೆಗಳ ಪ್ರಾಬಲ್ಯದ ನಡುವೆ ವಿಜಯ ಕರ್ನಾಟಕ ತನ್ನ ಹೆಡ್ಡಿಂಗ್‌ಗಳಿಂದಲೇ ಮನೆ ಮಾತಾಯಿತು. ನಿಂತ ನೀರಾಗಿದ್ದ ಪತ್ರಿಕೋದ್ಯಮ ಹೊಸ ಹರಿವನ್ನು ಕಂಡಿತು. ಇದರ ಶ್ರೇಯಸ್ಸು ನಾಡಿಗೇರ್ ಅವರಿಗೆ ಸಲ್ಲಬೇಕು. ಕಾಗುಣಿತ ದೋಷಗಳನ್ನು ಹುಡುಕಿ, ಅದನ್ನು ಬರೆದ ಪತ್ರಕರ್ತನಿಗೆ ಮನದಟ್ಟಾಗುವಂತೆ
ವಿವರಿಸುತ್ತಿದ್ದ ನಾಡಿಗೇರ್, ಆ ತಪ್ಪು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತಿದ್ದರು. ವಿ.ಕ. ಯುವ ಜನರನ್ನು ಮನಸ್ಸಲ್ಲಿಟ್ಟುಕೊಂಡು ಆರಂಭಿಸಿದ ತನ್ನ ನಿಯತಕಾಲಿಕೆಗೆ, ‘ಕ್ಯಾಚಿ’ ಶೀರ್ಷಿಕೆ ಬೇಕೆಂದಾಗ
‘ಲವಲvk’ ಎಂದು ಕ್ಷಣಾರ್ಧದಲ್ಲಿ ಎಂದು ಶೀರ್ಷಿಕೆ ಹೆಸರು ಸೂಚಿಸಿದ್ದರು.