ವಿಶ್ವವಾಣಿ ವಿಶೇಷ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಸುಹಾಸ್ ಯತಿರಾಜ್ ತಾಯಿ ಮನದಾಳ
ವಿಶ್ವಾಸ ಕಳೆದುಕೊಳ್ಳದೆ ಜೀವನ ರೂಪಿಸಿಕೊಳ್ಳಬೇಕು ಎಂಬುದಕ್ಕೆ ನನ್ನ ಮಗನೇ ಮಾದರಿ
ಶಿವಮೊಗ್ಗ: ಭಾರತದ ಮುಂದಿನ ಪೀಳಿಗೆಗೆ ನನ್ನ ಮಗ ಸ್ಫೂರ್ತಿಯಾಗುತ್ತಾನೆ ಎಂಬುದೇ ನನ್ನ ಹೆಮ್ಮೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್
ವಿಭಾಗದಲ್ಲಿ ಬೆಳ್ಳಿ ಗೆದ್ದ ಉತ್ತರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿ ಶಿವಮೊಗ್ಗ ನಗರದ ಹೆಮ್ಮೆಯ ಕುವರ ಸುಹಾಸ್ ಯತಿರಾಜ್ ಅವರ ತಾಯಿ ಜಯಶ್ರೀ
ಅವರ ಮನದಾಳದ ಮಾತು. ಪ್ರಸ್ತುತ ಶಿವಮೊಗ್ಗ ನಗರದ ವಿನೋಬನಗರದಲ್ಲಿ ವಾಸವಾಗಿರುವ ಜಯಶ್ರೀ ಅವರು ಸದ್ಯ ತಮ್ಮ ಪುತ್ರನ ನೋಯ್ಡ ನಿವಾಸದಲ್ಲಿ ಕಾರ್ಯನಿಮಿತ್ತ ತೆರಳಿದ್ದು ಅಲ್ಲಿಂದಲೇ ತಮ್ಮ ಪುತ್ರನ ಸಾಧನೆಯ ಬಗ್ಗೆ ವಿಶ್ವವಾಣಿಯೊಂದಿಗೆ ಮಾತನಾಡಿದರು.
ಕುಗ್ಗಲು ಬಿಡಲಿಲ್ಲ: ಚಿಕ್ಕಂದಿನಿಂದ ಚುರುಕಾಗಿದ್ದ ಸುಹಾಸ್ ಎಂದಿಗೂ ತನ್ನಲ್ಲಿನ ಸಾಮರ್ಥ್ಯವನ್ನು ಅನಾರೋಗ್ಯದ ಕಾರಣಗಳಿಗಾಗಿ ಕುಗ್ಗಲು ಬಿಡಲಿಲ್ಲ. ಇವತ್ತಿನ ಸಾಧನೆಗೆ ಅವನು ಸಣ್ಣ ವಯಸ್ಸಿನಿಂದಲೂ ಬೆಳೆಸಿಕೊಂಡು ಬಂದ ಮನೋಬಲವೇ ಕಾರಣ ಎಂದು ಹೇಳುತ್ತಾರೆ. ಮಗನಿಗೆ ವಿಶೇಷವಾದ ಆದ್ಯತೆ ನೀಡದೆ ಅವನನ್ನು ಸಾಮಾನ್ಯ ವಾಗಿ ಬೆಳೆಸಿದೆವು. ಅವನಿಗೆ ಎಲ್ಲರಂತೆ ಸಾಮರ್ಥ್ಯವಿದೆ ಎಂಬುದನ್ನು ಪ್ರತಿ ಬಾರಿಯೂ ಮನದಟ್ಟು ಮಾಡುತ್ತಿದ್ದೆ.
ಅಧ್ಯಯನ ಹಾಗೂ ಏಕಾಗ್ರತೆಯಿಂದ ಏನನ್ನಾದರೂ ಸಾಧಿಸಬಹುದು ಎಂಬ ನನ್ನ ಸಲಹೆಯನ್ನು ಸುಹಾಸ್ ಇಂದಿಗೆ ನಿಜ ಮಾಡಿದ್ದಾನೆ ಎಂದು ಹೇಳಿದರು. ನನ್ನಂತಹ ತಾಯಿಗೆ ಇವತ್ತಿನ ದಿನ ಮರೆಯಲಾರದ ಸಂತೋಷ ತಂದಿದೆ. ಯಾವುದೇ ಮನೆಯಲ್ಲಿ ಮಗನೊಬ್ಬ ಇತರಿರಿಗೆ ಸ್ಫೂರ್ತಿಯಾಗುವ ರೀತಿಯಲ್ಲಿ ಬೆಳೆಯುತ್ತಾನೆ ಎಂದರೆ ಹೆಮ್ಮೆಯಾಗುತ್ತದೆ ಎಂದರು.
ಅವನ ಆಯ್ಕೆಯನ್ನು ನಾವು ಎಂದೂ ಪ್ರಶ್ನೆ ಮಾಡಲಿಲ್ಲ. ಏಕೆಂದರೆ ನನ್ನ ಮಗ ಸರಿಯಾದ ತೀರ್ಮಾನ ಮಾಡು ತ್ತಾನೆ ಎಂಬುದು ನಮ್ಮ ನಂಬುಗೆಯಾಗಿತ್ತು. ಅದಕ್ಕೆ ತಕ್ಕಂತೆ ಆತ ಐಎಎಸ್ ಪರೀಕ್ಷೆ ಎದುರಿಸಲು ಸಿದ್ಧವಾಗಲು ಜನಸೇವೆಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊ ಎಂದು ಅವರ ತಂದೆ ಕಿವಿ ಮಾತು ಹೇಳಿದ್ದು ಬಿಟ್ಟರೆ ಉಳಿದೆಲ್ಲವೂ ಅವನ ಸಾಮರ್ಥ್ಯದಿಂದಲೇ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾನೆ.
ಅತಿ ದೊಡ್ಡ ಪ್ರಶಸ್ತಿ: ದೇಶದ ಪ್ರಧಾನಿಯೇ ನನ್ನ ಮಗನಿಗೆ ಶಬ್ಬಾಸ್ ಗಿರಿ ನೀಡಿದ್ದಾರೆ ಎಂಬುದನ್ನು ನನಗೆ ನಂಬಲಾಗುತ್ತಿಲ್ಲ. ದೇಶದ ಪ್ರಧಾನಿಯೊಬ್ಬರು ಅಭಿನಂದಿಸುತ್ತಾರೆ ಎನ್ನುವುದೇ ನನಗೆ ಅತಿ ದೊಡ್ಡ ಪ್ರಶಸ್ತಿ ಎನಿಸಿದೆ. ಮುಂದೇಯೂ ಆತ ಜನರ ಸೇವೆ ಮಾಡಲಿ ತನ್ನಲ್ಲಿರುವ ಪ್ರತಿಭೆಯನ್ನು ಬೇರೆಯವರಿಗೆ
ಧಾರೆಯೆರೆಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು. ಲಕ್ನೋದ ಗೌರವ್‌ಖನ್ನಾ ಎಂಬುವವರು ಆತನಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿದರು. ಶಾಲೆಯಲ್ಲಿ ಹಾಗೂ ಕಾಲೇಜಿನಲ್ಲಿ ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ನನ್ನ ಮಗ, ಖನ್ನಾ ಅವರ ಸಲಹೆಯಂತೆ ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿ ಬೆಳೆಸಿಕೊಂಡ.
ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದ.
ಕ್ರೀಡೆಯಲ್ಲೂ ಏಕಾಗ್ರತೆಯಿಂದ ಆಟವಾಡಿದ ಪರಿಣಾಮ ಇಂದು ಬೆಳ್ಳಿಯ ಪದಕ ಪಡೆದಿದ್ದಾನೆ. ಅವನಿಗೆ ಇಂತದೊಂದು ಕ್ರೀಡೆಯಲ್ಲಿ ಬೆಳೆಯಲು ಸಾಧ್ಯವಿದೆ ಎಂದು ಗುರುತಿಸಿದ ಖನ್ನಾ ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಇಂದಿನ ಸಾಧನೆ ನನ್ನ ದೇಶದ ಎಲ್ಲರ ಹಾರೈಕೆ, ಬೆಂಬಲದಿಂದಲೇ
ಸಾಧ್ಯವಾಗಿದ್ದು ಎಂದು ಪದಕ ಸಿಕ್ಕ ನಂತರ ನನಗೆ ಕರೆ ಮಾಡಿ ಹೇಳಿದ. ಅವನ ಮಾತು ನಾನೂ ಬೆಂಬಲಿಸುತ್ತೇನೆ ಮುಂದೆಯೂ ಇಂತಹದೇ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಾ ಎಂದು ಹಾರೈಸಿದ್ದೇನೆ ಎಂದರು.
ಶಿವಮೊಗ್ಗದಲ್ಲಿಯೇ ಓದಿ ಬೆಳೆದದ್ದು: 1983 ರಲ್ಲಿ ಜನಿಸಿದ ಸುಹಾಸ್ ವಿಕಲಚೇತನರಾದರೂ, ಎಲ್ಲರಂತೆ ಬೆಳೆದು ಬಂದರು. ಪ್ರೌಢಶಾಲೆಯನ್ನು ನಗರದ ಸೆಕ್ರೆಡ್ ಹಾರ್ಟ್ ಶಾಲೆಯಲ್ಲಿ ಹಾಗೂ 2001 ರಲ್ಲಿ ಪಿಯುಸಿಯನ್ನು ಡಿವಿಎಸ್ ಕಾಲೇಜಿನಲ್ಲಿ ಪೂರೈಸಿದರು. ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಅತ್ಯಂತ ಉನ್ನತ ಅಂಕಗಳಿಸಿದ ಸುಹಾಸ್‌ಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವಿವಿಧ ಕಾಲೇಜಿನಲ್ಲಿ ಪ್ರವೇಶ ದೊರೆತಿದ್ದರೂ, ಸುರತ್ಕಲ್‌ನಲ್ಲಿ ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿಯರಿಂಗ್ ಪದವಿಯನ್ನು ಆಯ್ಕೆ ಮಾಡಿಕೊಂಡು 2004 ರಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿದರು. ಅನಂತರ ಎರಡು ವರ್ಷ ಸಾಫ್ಟ್’ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ಬಾಲ್ಯದಲ್ಲಿಯೇ ಕನಸು ಕಂಡಿದ್ದ ಐಎಎಸ್ ಪರೀಕ್ಷೆಯನ್ನು ಉತ್ತೀರ್ಣ ಮಾಡಲು ಒಂದು ವರ್ಷಗಳ ಕಾಲ ನಿರಂತರವಾಗಿ ಅಧ್ಯಯನ ಮಾಡಿದರು.
೨೦೦೭ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿ ಉತ್ತರ ಪ್ರದೇಶ ಕೇಡರ್‌ಗೆ ಆಯ್ಕೆಯಾದರು. ಕುಂಭಮೇಳ ಸೇರಿದಂತೆ ತಾವು ಸೇವೆ ಸಲ್ಲಿಸಿದ ಮಹಾರ್‌ಜಂಗ್, ಹತ್ರಾಸ್, ಸೋನುಬಾದರಾ, ಜನ್ನಾಪುರ್, ಅಘರ ಅಲಹಾಬಾದ್‌ಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿ ಮುಖ್ಯಮಂತ್ರಿಗಳ ವಿಶೇಷ ಪದಕಕ್ಕೆ ಭಾಜನರಾದ ಸುಹಾಸ್ ಪ್ರಸ್ತುತ ಗೌತಮಬುದ್ದನಗರ ಜಿಲ್ಲಾಧಿಕಾರಿಯಾಗಿದ್ದಾರೆ.
ಸುಹಾಸ್ ಅವರ ತಂದೆ ಯತಿರಾಜ್ ಅವರು ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ ಜಯಶ್ರೀ ಹಾಸನದ ದುದ್ದ ಗ್ರಾಮದವರು. ಅವರು ತಮ್ಮ ಪದವಿಯನ್ನು ಹಾಸನದ ಎವಿಕೆ ಕಾಲೇಜಿನಲ್ಲಿ ಪೂರೈಸಿದ್ದಾರೆ. ಸುಹಾಸ್ ಸಹೋದರ ಶರತ್ ಸಹ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಸುಹಾಸ್ ಉತ್ತರ ಪ್ರದೇಶ ಆಡಳಿತ ಸೇವೆಯ ಅಧಿಕಾರಿಯಾಗಿದ್ದರೆ. ಹತ್ತು ವರ್ಷದ ಮಗಳು ಸಾನ್ವಿ ಹಾಗೂ ಆರು ವರ್ಷದ ಮಗ ವಿಹಾನ ಇದ್ದಾರೆ.
ಎಲ್ಲರಿಗೂ ವಿಶ್ವಾಸ
ಅವನ ಈ ಸಾಧನೆ ಎಲ್ಲರಿಗೂ ವಿಶ್ವಾಸ ತುಂಬುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದು ಜಯಶ್ರೀ ಭಾವುಕರಾದರು. ಇಲ್ಲಿಯೂ ಒಳ್ಳೆಯ ಹೆಸರು ತೆಗೆದು ಕೊಂಡಿದ್ದೇನೆ. ಎಲ್ಲರೂ ಅಮ್ಮ ನಿಮ್ಮ ಮಗ ತುಂಬಾ ಒಳ್ಳೆಯವರು ಎಂದಾಗ ನನಗೆ ಹೆಮ್ಮೆ ಎನಿಸುತ್ತದೆ. ಸಮಾಜದಲ್ಲಿ ಎಷ್ಟೋ ಮಂದಿಗೆ ಇಂತಹ ಅವಕಾಶ ಗಳು ಸಿಗುವುದಿಲ್ಲ. ಆದರೆ, ಯಾವುದೇ ಸಂದರ್ಭದಲ್ಲೂ ವಿಶ್ವಾಸ ಕಳೆದುಕೊಳ್ಳದೆ ಜೀವನ ರೂಪಿಸಿಕೊಳ್ಳಬೇಕು ಎಂಬುದಕ್ಕೆ ನನ್ನ ಮಗನೇ ಮಾದರಿ ಎಂದರು.
ಶಿವಮೊಗ್ಗದಲ್ಲಿ ಸಂತಸದ ಹೊನಲು
ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದ ಅವರ ನಿವಾಸ ಇರುವ ವಿನೋಬನಗರದಲ್ಲಿ ಹಬ್ಬದ ವಾತವರಣ. ಅಲ್ಲಿನ ನಿವಾಸಿಗಳು ಪಟಾಕಿ
ಸಿಡಿಸಿ ಎಲ್ಲರಿಗೂ ಸಿಹಿ ವಿತರಣೆ ಮಾಡಿ ಸಂತಸ ಪಟ್ಟರು. ತಮ್ಮ ಮನೆ ಮಗನೊಬ್ಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ ಎಂಬ ಸಂತಸ
ಅವರಲ್ಲಿ ಎದ್ದು ಕಾಣುತ್ತಿತ್ತು.
ಗುರುಕಾಣಿಕೆಯ ಸುವರ್ಣ ಸಂಭ್ರಮ
ಸುಹಾಸ್ ಯತಿರಾಜ್ ನಗರದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರಿಂದ ಇಡೀ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಇಂದು ಬೆಳಗ್ಗೆ ಯಿಂದಲೇ ಕಾತುರವಾಗಿ ಅವರಾಡುವ ಪಂದ್ಯವನ್ನು ವೀಕ್ಷಣೆ ಮಾಡಿದರು. ಅಷ್ಟೇ ಅಲ್ಲದೆ, ಅವರು ಬೆಳ್ಳಿ ಪದಕ ಗೆದ್ದ ಮೇಲೆ ಎಲ್ಲರಿಗೂ ಸಿಹಿ ಹಂಚಿ ಸಂತೋಷ
ಪಟ್ಟರು. ವರ್ಷದ ಹಿಂದೆ ತಾನು ಓದಿದ ಕಾಲೇಜಿಗೆ ಭೇಟಿ ನೀಡಿದ್ದ ಸುಹಾಸ್ ತನ್ನ ಅಧ್ಯಾಪಕರನ್ನು ಅಭಿನಂದಿಸಿದ್ದರು. ತಾನು ಏನೇ ಸಾಧಿಸಿದರೂ, ಅದು ಈ ಕಾಲೇಜಿನ ಸ್ಪೂರ್ತಿ ಎಂದು ಹೇಳಿದ್ದ. ಆತನ ಸಾಧನೆ ನಮ್ಮ ಕಾಲೇಜಿಗೆ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸಂಭ್ರಮವನ್ನು ಹೆಚ್ಚು ಮಾಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೇಳುತ್ತಾರೆ.
ಅತ್ಯಂತ ವಿಧೇಯ ವಿದ್ಯಾರ್ಥಿಯಾಗಿ ಐಎಎಸ್ ಉತ್ತೀರ್ಣರಾದ ಮೇಲೂ ತನ್ನ ಕಾಲೇಜಿನ ಉಪನ್ಯಾಸಕರ ಬಗ್ಗೆ ಅದೇ ಪ್ರೀತಿಯನ್ನು ಇಟ್ಟು ಪ್ರತಿ ಬಾರಿಯೂ ಕಾಲೇಜಿನ ಬೆಳವಣಿಗೆಯ ಬಗ್ಗೆ ವಿಚಾರಿಸಿಕೊಳ್ಳುವ ಆತನ ವಿಶ್ವಾಸಕ್ಕೆ ನಾವು ಅಭಾರಿಯಾಗಿದ್ದೇವೆ. ಶಿಕ್ಷಕರ ದಿನಾಚರಣೆಯಂದೇ ಆತ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಗೌರವ ತಂದಿದ್ದಾನೆ. ಅದನ್ನೇ ನಾವು ಗುರುಕಾಣಿಕೆ ಎಂದು ಭಾವಿಸುತ್ತೇವೆ ಎಂದು ಅವರು ಹೇಳಿದರು.
***
ವಿದ್ಯಾರ್ಥಿ ದೆಸೆಯಿಂದಲೇ ಆತನ ಪ್ರತಿಭೆಗೆ ಕಾಲೇಜಿನ ಎಲ್ಲ ಉಪನ್ಯಾಸಕರು ಧಾರೆ ಎರೆದಿದ್ದಾರೆ. ಕಾಲೇಜಿನ ಬಗ್ಗೆ ಆತನಿಗೆ ಇಂದಿಗೂ ಅಪಾರ ಗೌರವಿದೆ. ಇಂದು ನಮ್ಮೆಲ್ಲರಿಗೆ ಆತ ಗುರು ಕಾಣಿಕೆ ನೀಡಿದ್ದಾನೆ. ಶಿಕ್ಷಕರ ದಿನಾಚರಣೆಯಂದೇ ಆತ ಬೆಳ್ಳಿ ಪದಕ ಗೆದ್ದಿರುವುದು ನಮ್ಮ ದೇಶದ ಹೆಮ್ಮೆ.
-ರಾಜಶೇಖರ್ ಪ್ರಾಂಶುಪಾಲರು,
ಡಿವಿಎಸ್ ಕಾಲೇಜ್, ಶಿವಮೊಗ್ಗ
ಬೆಳ್ಳಿ ಪಡೆದ ಸುಹಾಸ್‌ಗೆ ಪಧಾನಿ ಅಭಿನಂದನೆ
ಟೊಕಿಯೋ: ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ ಕನ್ನಡಿಗ ಶಿವಮೊಗ್ಗದ ಸುಹಾಸ್ ಯತಿರಾಜರಿಗೆ ಪ್ರಧಾನಿ ಮೋದಿ
ಅಭಿನಂದಿಸಿದ್ದಾರೆ. ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಸುಹಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್’ನಲ್ಲಿ ಸುಹಾಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್‌ಎಲ್ 4 ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ನೀವು ಕರ್ನಾಟಕ ಮತ್ತು ದೇಶಕ್ಕೆ ಗೌರವ ತಂದು ಕೊಟ್ಟಿದ್ದೀರಿ. ಸೇವೆ ಮತ್ತು ಕ್ರೀಡೆಯ ಅದ್ಭುತ ಸಂಗಮ ನೀವು. ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ನಿಮಗೆ ಅಭಿನಂದನೆಗಳು. ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಮೋದಿ ಹಾರೈಸಿದ್ದಾರೆ. ಇದಕ್ಕೆ ಸುಹಾಸ್ ಅವರು ಪ್ರಧಾನಿಯವರಿಗೆ ಧನ್ಯವಾದ ಹೇಳಿ ಅವರೊಂದಿಗೆ ಮಾತನಾಡಿದ್ದಾರೆ.