Thursday, 19th September 2024

ಸ್ವಂತ ಜಮೀನಿದ್ದರೂ, ನನ್ನವ್ವ ಕೂಲಿಗೆ ಹೋಗುತ್ತಿದ್ದಳು

ಸತ್ಯಮೇವ ಜಯತೆ (ಭಾಗ-೩)

ಇಪ್ಪತ್ತು ಸೇರು ಶೇಂಗಾ ಬುಡ್ಡಿಗಳನ್ನು ಬಿಡಿಸಿ ಗುಡ್ಡೆ ಹಾಕಿದರೆ, ಒಂದು ಸೇರು ಶೇಂಗಾ ಕೂಲಿಯಾಗಿ ಕೊಡುತ್ತಿದ್ದರು. ನಮ್ಮವ್ವ ನನ್ನನ್ನು ಕರೆದು ಕೊಂಡು ಹೋಗುತ್ತಿದ್ದಳು. ನಾನು ಹರಗಿದ ಶೇಂಗಾ ಬಳ್ಳಿಗಳನ್ನು ನಮ್ಮವ್ವ ಕುಳಿತಲ್ಲಿಗೆ ತಂದು ಕೊಡುತ್ತಿದ್ದೆ. ನಮ್ಮವ್ವ ಶೇಂಗಾ ಬುಡ್ಡಿಗಳನ್ನು ಬಳ್ಳಿಗಳಿಂದ ಬೇರೆ ಮಾಡಿ ಗುಡ್ಡೆ ಹಾಕುತ್ತಿದ್ದಳು. ಸುಮಾರು 15 ದಿನ ಈ ಕೆಲಸವನ್ನು ನಮ್ಮವ್ವ ಮಾಡಿ ಸುಮಾರು ೫೦ ಸೇರು ಶೇಂಗಾ ಬುಡ್ಡಿಗಳನ್ನು ಮನೆಯಲ್ಲಿ ಸಂಗ್ರಹಿಸು ತ್ತಿದ್ದಳು.

ನಾನು ಪ್ರಾಥಮಿಕ ಶಾಲೆಗೆ ಸೇರುವವರೆಗಿನ ಕೆಲವು ನೆನಪುಗಳು ಇನ್ನೂ ಹಸಿರಾಗಿವೆ. ನಮ್ಮವ್ವ ನನ್ನನ್ನು ಕಂಕುಳಲಿ ಎತ್ತಿಕೊಂಡು ತೋಟಕ್ಕೆ ಮತ್ತು ಪುರಾಣ ಪ್ರವಚನಗಳಿಗೆ ಕರೆದುಕೊಂಡು ಹೋಗುತ್ತಿದ್ದಳು. ನಮ್ಮ ಜಮೀನುಗಳು ಎರಡೂ ಎರೆ ಜಮೀನು ಳಾಗಿದ್ದವು. ಅವುಗಳಲ್ಲಿ ಶೇಂಗಾ (ನೆಲಗಡಲೆ) ಬೆಳೆಯುತ್ತಿರಲಿಲ್ಲ. ಶೇಂಗಾ ನಮ್ಮ ಊರಿನಿಂದ ಯಲ್ಲಟ್ಟಿವರೆಗೆ ರಸ್ತೆಯ ಇಕ್ಕೆಲ ಗಳಲ್ಲಿ ಇದ್ದ ಮಸಾರಿ ಜಮೀನಿನಲ್ಲಿ ಚೆನ್ನಾಗಿ ಮುಂಗಾರು ಬೆಳೆಯಾಗಿ ಬೆಳೆಯುತ್ತಿತ್ತು. ನಮ್ಮ ಮನೆಗೆ ಹಿಂಡಿ ಮತ್ತು ಉಂಡಿ ಮಾಡಲು ಶೇಂಗಾ ಬೇಕಾಗುತ್ತಿತ್ತು.

ನಮ್ಮದೇ ಆದ ಸಾಕಷ್ಟು ಜಮೀನು ಇದ್ದರೂ, ನಮ್ಮವ್ವ ಬೇರೆಯವರ ಹೊಲಗಳಿಗೆ ಶೇಂಗಾ ಬಿಡಿಸುವ ಕೆಲಸಕ್ಕೆ ಹೋಗುತ್ತಿದ್ದಳು. ಹೀಗೆ ಕೂಲಿ ಕೆಲಸಕ್ಕೆ ಹೋಗಲು ಅವಳಿಗೆ ಸಂಕೋಚ ಇರಲಿಲ್ಲ. ಅಲ್ಲಿ ಹರಗಿದ ಬಳ್ಳಿಗಳನ್ನು ಸಂಗ್ರಹಿಸಿ, ಅವುಗಳಿಂದ ಇಪ್ಪತ್ತು ಸೇರು ಶೇಂಗಾ ಬುಡ್ಡಿಗಳನ್ನು ಬಿಡಿಸಿ ಗುಡ್ಡೆ ಹಾಕಿದರೆ, ಒಂದು ಸೇರು ಶೇಂಗಾ ಕೂಲಿಯಾಗಿ ಕೊಡುತ್ತಿದ್ದರು. ನಮ್ಮವ್ವ ನನ್ನನ್ನು ಕರೆದು ಕೊಂಡು ಹೋಗುತ್ತಿದ್ದಳು. ನಾನು ಹರಗಿದ ಶೇಂಗಾ ಬಳ್ಳಿಗಳನ್ನು ನಮ್ಮವ್ವ ಕುಳಿತಲ್ಲಿಗೆ ತಂದು ಕೊಡುತ್ತಿದ್ದೆ. ನಮ್ಮವ್ವ ಶೇಂಗಾ ಬುಡ್ಡಿಗಳನ್ನು ಬಳ್ಳಿಗಳಿಂದ ಬೇರೆ ಮಾಡಿ ಗುಡ್ಡೆ ಹಾಕುತ್ತಿದ್ದಳು.

ನಮ್ಮ ಊಟವನ್ನು ನಾವೇ ತೆಗೆದುಕೊಂಡು ಹೋಗುತ್ತಿದ್ದೆವು. ಸಾಯಂಕಾಲದವರೆಗೆ ಸುಮಾರು 80 ರಿಂದ 100 ಸೇರು ಶೇಂಗಾ
ಬುಡ್ಡಿಗಳನ್ನು ನಮ್ಮವ್ವ ಹರಿದು ಗುಡ್ಡೆ ಹಾಕುತ್ತಿದ್ದಳು. ಸಾಯಂಕಾಲ ನಮ್ಮ ಶ್ರಮದ ಫಲವಾಗಿ ನಾಲ್ಕು ಅಥವಾ ಐದು ಸೇರು ಶೇಂಗಾ ಬುಡ್ಡಿಗಳನ್ನು ತೆಗೆದುಕೊಂಡು ಮನೆಗೆ ಬರುತ್ತಿದ್ದೆವು. ವರ್ಷದಲ್ಲಿ ಸುಮಾರು 15 ದಿನ ಈ ಕೆಲಸವನ್ನು ನಮ್ಮವ್ವ ಮಾಡಿ ಸುಮಾರು 50 ಸೇರು ಶೇಂಗಾ ಬುಡ್ಡಿಗಳನ್ನು ಮನೆಯಲ್ಲಿ ಸಂಗ್ರಹಿಸುತ್ತಿದ್ದಳು.

ಶೇಂಗಾ ಕಾಳುಗಳು ಬೇಕಾದಾಗ ಈ ಬುಡ್ಡಿಗಳನ್ನು ಒಡೆದು ಕಾಳು ಮಾಡಿ, ಹಿಂಡಿ ಅಥವಾ ಉಂಡಿ ಮಾಡಲಿಕ್ಕೆ ಉಪಯೋಗಿಸು ತ್ತಿದ್ದರು. ಈ ರೀತಿ ಬೇರೆಯವರ ಹೊಲಗಳಿಗೆ ಕೆಲಸಕ್ಕೆ ಹೋಗಿ ಬರುವಾಗ, ಮಳೆ ಶುರುವಾದರೆ ನಮ್ಮವ್ವ ನನ್ನ ಮೇಲೆ ಸೆರಗು ಹೊದಿಸಿ, ಕೆಲ ಕಾಲ ಗಿಡಗಳ ಆಶ್ರಯ ದಲ್ಲಿ ನಿಲ್ಲುತ್ತಿದ್ದ ನೆನಪು ಇನ್ನೂ ಹಸಿರಾಗಿದೆ.

ಭೂ ಕೈಲಾಸ ನಾನು ನೋಡಿದ ಮೊದಲ ಸಿನಿಮಾ: ನಮ್ಮವ್ವನಿಗೆ, ನಮ್ಮ ಮನೆಯ ಹತ್ತಿರ ಬಾಡಿಗೆಗೆ ಇದ್ದ ಶ್ರೀ ಕುಬಕಡ್ಡಿ ಎಂಬ ಕನ್ನಡ ಶಾಲಾ ಮಾಸ್ತರರ ಹೆಂಡತಿ ಸ್ನೇಹಿತೆಯಾಗಿದ್ದರು. ನಾನು ಅವರನ್ನು ಅಕ್ಕಾವರು ಎಂದು ಕರೆಯುತ್ತಿದ್ದೆ. ನಮ್ಮವ್ವ ಮತ್ತು ಶ್ರೀಮತಿ ಕುಬಕಡ್ಡಿಯವರು ನಮ್ಮ ಊರಿನ ಮಲ್ಲಿಕಾರ್ಜುನ ಸಿನಿಮಾ ಮಂದಿರದಲ್ಲಿ ‘ಭೂ ಕೈಲಾಸ’ ಎಂಬ ಕನ್ನಡ ಚಲನ ಚಿತ್ರ ನೋಡಲು ನನ್ನನ್ನೂ ಕರೆದುಕೊಂಡು ಹೋಗಿದ್ದರು. ಅದು ನಾನು ನೋಡಿದ ಮೊದಲನೆಯ ಚಲನಚಿತ್ರ. ನಾನು ಮತ್ತು ದೊಡ್ಡಪ್ಪನ ಮಕ್ಕಳು ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದೆವು.

ಕೆಲವು ಸಲ ನಮ್ಮ ಮುತ್ಯಾ, ಸಾಯಂಕಾಲ ದೇವಸ್ಥಾನಗಳಿಗೆ ಹೋಗುವಾಗ ನನಗೂ ಕೈಕಾಲು ಮುಖ ತೊಳೆಸಿ, ವಿಭೂತಿ ಹಚ್ಚಿ, ನನ್ನ ಕೈಹಿಡಿದುಕೊಂಡು ಕರೆದುಕೊಂಡು ಹೋಗುತ್ತಿದ್ದನು. ನಾನು ಬರೀ ನಾಲ್ಕು ವರ್ಷದವನಿದ್ದರೂ ಬಹಳ ಚಟುವಟಿಕೆ ಯಿಂದ ಇದ್ದು, ಒಂದು ಕಡೆ ಕೂರುತ್ತಿರಲಿಲ್ಲ. ಎಲ್ಲಾ ಕಡೆ ಬಹಳ ಓಡಾಡುತ್ತಿದ್ದೆ. ಆದ್ದರಿಂದ ನನ್ನನ್ನು ಬೇಗನೇ ಶಾಲೆಗೆ ಸೇರಿ ಸಲು ತೀರ್ಮಾನಿಸಿದರು.

ನನ್ನ ಮುತ್ಯಾ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸಲು ಗಂಡು ಮಕ್ಕಳ ಸರಕಾರಿ ಕನ್ನಡ ಶಾಲೆಗೆ ಕರೆದುಕೊಂಡು ಹೋದರು. ಆಗ ನನಗೆ ಹೊಸ ಅಂಗಿ-ಚಡ್ಡಿ ಕೊಡಿಸಿ, ಒಂದು ಹೊಸ ಪಾಟಿ ಮತ್ತು ಬಳಾಯಿ, ಪಾಟೀಚೀಲ ಕೊಡಿಸಿದರು. ಅವುಗಳೊಂದಿಗೆ ನನ್ನ ಮುತ್ಯಾನ ಜತೆ ೧೯೫೮ರ ಜೂನ್ ತಿಂಗಳಲ್ಲಿ ಶಾಲೆಗೆ ಹೊರಟೆ.