Saturday, 27th July 2024

ದೇಶದಲ್ಲೆಲ್ಲ ಸಂಚಲನ ಮೂಡಿಸಿದ ದಿ ಕಾಶ್ಮೀರ್‌ ಫೈಲ್ಸ್ ಚಿತ್ರ

ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ಸೇರಿ ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ

ಮಧ್ಯಪ್ರದೇಶದಲ್ಲಿ ಸಿನಿಮಾ ವೀಕ್ಷಿಸಲು ಪೊಲೀಸರಿಗೆ ರಜೆ ನೀಡಿದ ಸರಕಾರ 

ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಭಾರೀ ಚರ್ಚೆ

ಬಾಕ್ಸಾಫೀಸ್‌ನಲ್ಲಿ ಸಂಚಲನ ಮೂಡಿಸಿ, ಮೂರು ದಿನಗಳಲ್ಲೇ 31 ಕೋಟಿ ರು. ಗಳಿಸಿದ ಸಿನಿಮಾ

ಬೆಂಗಳೂರು: ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲ್ಪಟ್ಟಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು, ಕಳೆದ 2-3 ದಿನಗಳಿಂದ ದೇಶಾದ್ಯಂತ ಸಾಕಷ್ಟು ಪರ-ವಿರೋಧ ಚರ್ಚೆ ಗಳಿಗೆ ಕಾರಣವಾಗಿದೆ. ಅಲ್ಲದೇ ಪ್ರೇಕ್ಷಕರ ಕಣ್ಣಲ್ಲಿಯೂ ನೀರು ತರಿಸಿ, ದೇಶ ಭಕ್ತಿಯನ್ನು ಕೆರಳಿಸುತ್ತಿದ್ದು, ದೇಶದಲ್ಲಿ ಸಂಚಲನ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಅನೇಕರು ಚಿತ್ರವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಏಕೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಲ್ಲ ಸಚಿವರು, ಶಾಸಕರು ನೋಡ ಬೇಕೆಂದೇ ವಿಶೇಷ ಪ್ರದರ್ಶನ ಏರ್ಪಡಿಸಿರುವ, ಚಿತ್ರ ನೋಡಲೆಂದು ಮಧ್ಯಪ್ರದೇಶ ಪೊಲೀಸರಿಗೆ ಅಲ್ಲಿನ ಸರಕಾರ ರಜೆ ಘೋಷಿಸು ವಂತೆ ಮಾಡಿದ ಸಿನಿಮಾ ಇದಾಗಿದೆ.

ಇಷ್ಟು ಹೇಳಿದರೆ ಮುಗಿಯುವುದಿಲ್ಲ. ಏಕೆಂದರೆ, ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗಿದೆ. ಇದು ದೇಶದಲ್ಲಿ ಜರುಗಿದ ಘಟನೆಯ ನೈಜ್ಯ ಚಿತ್ರಣ ಎಂದು ಕೆಲವರು ಹೇಳಿದರೆ, ಜನರಲ್ಲಿ ಒಂದು ಸಮುದಾಯದ ಬಗ್ಗೆ ಕೆಟ್ಟ ಭಾವನೆ ಮೂಡಿಸಲು ತೆಗೆದ ಸಿನಿಮಾ ಎಂದು ಇನ್ನು ಕೆಲವರು ಆರೋಪಿಸುತ್ತಿದ್ದಾರೆ.

ವಿವೇಕ್ ರಂಜನ್ ಅಗ್ನಿಹೋತ್ರಿ ಎಂಬ ನಿರ್ದೇಶಕ ಕಾಶ್ಮೀರದಲ್ಲಿ ೮೦ರ ದಶಕದ ಕೊನೆ ಮತ್ತು 90ರ ದಶಕದ ಆರಂಭದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ, ನರಮೇಧ, ಅವರನ್ನು ಕಣಿವೆ ಬಿಟ್ಟು ಓಡಿಸಿದ ಘಟನೆಗಳನ್ನು ಮುಂದಿಟ್ಟು ಕೊಂಡು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತೆಗೆದಿದ್ದಾರೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ತೆರೆ ಕಂಡಾಗ ಇತರೆ ಚಿತ್ರದಂತೆ ಇದೂ ಒಂದು ಎಂದು ಹೇಳಲಾಗುತ್ತಿತ್ತು. ಆದರೆ, ಮೊದಲ ದಿನ ಬಂದ ಪ್ರತಿಕ್ರಿಯೆ, ನಂತರ ದಲ್ಲಿ ಸಿನಿಮಾ ನೋಡಲು ಜನ ಮುಗಿಬಿದ್ದಿದ್ದನ್ನು ನೋಡಿದರೆ, ಜನರು ಸತ್ಯ ತಿಳಿದುಕೊಳ್ಳಲು ಅದೆಷ್ಟು ಕಾತುರರಾಗಿ ದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಸಾಮಾಜಿಕ ಜಾಲ ತಾಣಗಳಲ್ಲಂತೂ ಈಗ ಅದರದ್ದೇ ಚರ್ಚೆ. ಸಿನಿಮಾದ ಟ್ರೈಲರ್ ನೋಡಿ, ಬಿಡುಗಡೆಯಾದನಂತರ ಸಿನಿಮಾ ವೀಕ್ಷಿಸಿದವರು ಹೊರಗೆ ಬಂದ ಮೇಲೂ ಅದನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಯಾದ ಮೊದಲ ದಿನ ಥಿಯೇಟರ್‌ಗಳು ಖಾಲಿಯಿದ್ದರೆ, ನಂತರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಷ್ಟರ ಮಟ್ಟಿಗೆ ಸಿನಿಮಾ ಜನರ ಮನಸ್ಸು ತಟ್ಟಿದೆ.

ವಿವಾದಕ್ಕೂ ಕಾರಣ: ಕಾಶ್ಮೀರ ಕಣಿವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಪಂಡಿತರನ್ನು ಅಲ್ಲಿಂದ ಓಡಿಸಲು ಭಯೋ ತ್ಪಾದಕರು ಮತ್ತು ಅವರನ್ನು ಬೆಂಬಲಿಸುತ್ತಿದ್ದ ಮುಸ್ಲಿಮರು ಏನೆಲ್ಲ ಹುನ್ನಾರಗಳನ್ನು ನಡೆಸಿದರು? ಯಾವ ರೀತಿಯಲ್ಲಿ ಅವರ ಮೇಲೆ ದೌರ್ಜನ್ಯ ನಡೆಸಿದರು? ಹೇಗೆ ಅವರನ್ನು ಅಲ್ಲಿಂದ ಓಡಿಸಿದರು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಅದೆಷ್ಟು ಮಂದಿಯಲ್ಲಿ ದೌರ್ಜನ್ಯದ ಬಗ್ಗೆ ಆಕ್ರೋಶ, ಕಣ್ಣೀರಿಗೆ ಕಾರಣವಾಗಿದೆಯೋ ಅದೇ ರೀತಿ ವಿವಾದವನ್ನೂ ಸೃಷ್ಟಿಸಿದೆ. ಕಾಶ್ಮೀರಿ ಮುಸ್ಲಿಮರ ವಿರುದ್ಧ ದೇಶಾದ್ಯಂತ ಜನಾಭಿಪ್ರಾಯ ಮೂಡಿಸಿ ಅವರನ್ನು ದೇಶವಿರೋಧಿ ಗಳು ಎಂದು ಬಿಂಬಿಸಲು ಈ ಚಿತ್ರ ನಿರ್ಮಿಸಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕುಮ್ಮಕ್ಕು ನೀಡಿದೆ. ಸುಳ್ಳುಗಳ ಸರಮಾಲೆ ಮೂಲಕವೇ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದೆಲ್ಲ ಆರೋಪ, ಟೀಕೆಗಳು ಬರುತ್ತಿವೆ.

ಚಿತ್ರದಲ್ಲಿ ಒಂದು ಕೋಮಿನವರ ಕೌರ್ಯವನ್ನು ಮಾತ್ರ ಢಾಳಾಗಿ ತೋರಿಸುತ್ತಾರೆ ಎಂಬ ಆರೋಪವಿದೆ. ಆದರೆ, ಕಾಶ್ಮೀರ
ಕಣಿವೆಯಲ್ಲಿ ನಡೆದಿದ್ದ ಹಿಂದೂ ಪಂಡಿತರ ಮೇಲಿನ ದೌರ್ಜನ್ಯದ ಬಗ್ಗೆ, ಅವರು ಕಾಶ್ಮೀರ ಬಿಟ್ಟು ಓಡಿಬಂದಿದ್ದನ್ನು ತಿಳಿದವ ರೆಲ್ಲರೂ ಈ ಚಿತ್ರ ಸತ್ಯ ಘಟನೆಗಳನ್ನಾಧರಿಸಿದ್ದು ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಅದೇನೇ ಇರಲಿ, ದಿ ಕಾಶ್ಮೀರ್ ಫೈಲ್ಸ್ ದೇಶಾದ್ಯಂತ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ. ಕಾಶ್ಮೀರಿ ಪಂಡಿತರ ಮೇಲೆ ಹೇಗೆ
ದೌರ್ಜನ್ಯ ನಡೆದಿತ್ತು? ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳು ಯಾವ ರೀತಿ ನಿರ್ಲಕ್ಷ್ಯ ತೋರಿದವು ಎಂಬುದಕ್ಕೆ ಈ
ಚಿತ್ರ ಉದಾಹರಣೆಯಾಗಿ ನಮ್ಮೆಲ್ಲರ ಮುಂದೆಯಿದೆ.

ಶಾಸಕರಿಗಾಗಿ ವಿಶೇಷ ಪ್ರದರ್ಶನ ಇಂದು
ಎಲ್ಲ ಸಚಿವರು, ಶಾಸಕರಿಗಾಗಿ ಮಂಗಳವಾರ ಸಂಜೆ 6.30ಕ್ಕೆ ಮಂತ್ರಿಮಾಲ್‌ನ ಸ್ಕ್ರೀನ್ ನಂ.6ರಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ
ಹೆಗಡೆ ಕಾಗೇರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವಿಕ್ಷಣೆಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ. ವಿಧಾನಸಭೆಯಲ್ಲಿ ಈ ವಿಷಯ
ಪ್ರಕಟಿಸಿದ ಸ್ಪೀಕರ್ ಕಾಗೇರಿ, ಎಲ್ಲ ಶಾಸಕರು(ಪ್ರತಿಪಕ್ಷದ ಶಾಸಕರು ಸೇರಿದಂತೆ) ಸಿನಿಮಾ ವೀಕ್ಷಣೆಗೆ ಬರುವಂತೆ ಮನವಿ ಮಾಡಿ ದರು. ಅಲ್ಲದೆ, ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ತುಂಬಾ ಭಾವುಕನಾಗಿದ್ದೇನೆ. 80-90ರ ದಶಕದಲ್ಲಿ ಕಾಶ್ಮೀರದಲ್ಲಿ ಏನಾಯಿತು ಎಂಬುದರ ಕುರಿತು ಈ ಸಿನಿಮಾ ಸತ್ಯವನ್ನು ತೆರೆದಿಡುತ್ತದೆ. ಮತ್ತೆ ಕಾಶ್ಮೀರಿ ಪಂಡಿತರು ತಮ್ಮ ಭೂಮಿಯನ್ನು ಮರಳಿ ಪಡೆದು ಅಲ್ಲಿ ನೆಲೆಸುತ್ತಾರೆ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು.
– ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

2000ಕ್ಕೂ ಹೆಚ್ಚು ಪರದೆಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಮಾ.11ರಂದು ದೇಶಾದ್ಯಂತ 360 ಪರದೆಗಳಲ್ಲಿ ತೆರೆಕಂಡ ‘ದಿ
ಕಾಶ್ಮೀರ್ ಫೈಲ್ಸ್’ ಸಿನಿಮಾ ಮೊದಲ ದಿನ ಚಿತ್ರಮಂದಿರ ಖಾಲಿಯಾಗಿದ್ದುದನ್ನು ಗಮನಿಸಿದಾಗ ಚಿತ್ರ ಸೋತುಹೋಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮಾರನೇ ದಿನದಿಂದ ಇದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಜನ ಚಿತ್ರಮಂದಿರಗಳಿಗೆ ಮುಗಿ ಬೀಳುತ್ತಿದ್ದಾರೆ. ಪ್ರಸ್ತುತ ದೇಶಾದ್ಯಂತ 2000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ಪ್ರದರ್ಶನ ಕಾಣುತ್ತಿದೆ. ಬಹುತೇಕ ಎಲ್ಲ ಶೋಗಳು ಹೌಸ್ ಫುಲ್ ಆಗುತ್ತಿವೆ.

error: Content is protected !!