Thursday, 21st November 2024

MUDA: ಪ್ರಾಸಿಕ್ಯೂಷನ್‌- ರಾಜ್ಯಪಾಲರ ನಡೆ ಎಷ್ಟು ಸರಿ ?

ಕ್ರಿಮಿನಲ್‌ ಆರೋಪ ಹೊತ್ತ ದೂರುದಾರರ ವಾದಕ್ಕೆ ಮಣೆ

ಸ್ನೇಹಮಯಿ ಕೃಷ್ಣ, ಅಬ್ರಾಹಂ ವಿರುದ್ದ ಹಲವು ಆರೋಪ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ವಾದ-ಪ್ರತಿವಾದ ಒಂದು ಹಂತಕ್ಕೆ
ತಲುಪಿದೆ. ಈ ಹಂತದಲ್ಲೂ ಹತ್ತು ಹಲವು ಜಿಜ್ಞಾಸೆಗಳು ಸಾರ್ವಜನಿಕರನ್ನು ಈಗಲೂ ಕಾಡುತ್ತಿವೆ.

ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಯಾವ ಆಧಾರದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂ
ಷನ್‌ಗೆ ಅನುಮತಿ ನೀಡಿದ್ದಾರೆ ಎನ್ನುವುದೇ ಸಾರ್ವಜನಿಕ ವಲಯದಲ್ಲಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ದೂರದಾರರ ಪರ ವಾದ ಮಂಡಿಸಿದ ವಕೀಲರು ತಾಸು ಗಟ್ಟಲೇ ‘ವಾದ’ ಮಂಡಿಸಿದ್ದಾರೆ. ಆದರೆ ಈವರೆಗೆ ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇನು ಎನ್ನುವು ದನ್ನು ಹೇಳದಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ.

ಇದಕ್ಕೂ ಮುಖ್ಯವಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ
ತನಿಖಾ ಸಂಸ್ಥೆಯ ವರದಿ ಕಡ್ಡಾಯವಾಗಿರಬೇಕು. ಆದರೆ ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ಯಾವ ತನಿಖಾ
ಸಂಸ್ಥೆಯಿಂದಲೂ ಯಾವುದೇ ವರದಿಗಳು ಬಂದಿಲ್ಲ. ಹೋಗಲಿ ಯಾವ ಸಂಸ್ಥೆಯೂ ತನಿಖೆಯನ್ನೂ ನಡೆಸಿಲ್ಲ. ಹೀಗಿದ್ದರೂ, ಯಾರೋ ಖಾಸಗಿ ದೂರುದಾರರು ದೂರು ನೀಡಿದ್ದಾರೆ ಎನ್ನುವ ಮಾತ್ರಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಎಷ್ಟು ಸಮಂಜಸ ಎನ್ನುವುದು ಸಾರ್ವಜನಿಕ ವಲಯದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಶಿಫಾರಸ್ಸೇ ಮಾಡಿಲ್ಲ ಎಂದರೆ ಸಿಎಂ ತಪ್ಪೇನು?: ಹಾಗೇ ನೋಡಿದರೆ, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಅಥವಾ ಪ್ರತಿಪಕ್ಷದಲ್ಲಿದ್ದಾಗ ಯಾವುದೇ ಶಿಫಾರಸು ಪತ್ರವನ್ನು ನೀಡಿಲ್ಲ. ಅಧಿಕಾರಿಗಳಿಗೆ ಮೌಖಿಕ ಸೂಚನೆಯನ್ನೂ ನೀಡಿಲ್ಲ. ಹೀಗಿರುವಾಗ, ಅಧಿಕಾರಿಗಳು ನಿವೇಶನವನ್ನು ಹಂಚಿಕೆ ಮಾಡಿದ್ದರೆ ಅದಕ್ಕೆ ಸಿದ್ದರಾಮಯ್ಯ ಅವರು ಹೇಗೆ ಹೊಣೆಯಾಗುತ್ತಾರೆ? ಒಂದು ವೇಳೆ ನಿವೇಶನ ಹಂಚಿಕೆ ಯಲ್ಲಿ ತಪ್ಪು ನಡೆದಿದ್ದರೆ ಅದರ ಹೊಣೆ ಅಧಿಕಾರಿಗಳು ಹಾಗೂ ಅಧಿಕಾರದಲ್ಲಿದ್ದ ಸಚಿವರು ಹೊರಬೇಕೆ ಹೊರತು, ಸಿದ್ದರಾಮಯ್ಯ ಅವರು ಹೇಗಾಗುತ್ತಾರೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.

ದೂರುದಾರ ಅಬ್ರಾಹಂ ಪರ ವಕೀಲರ ನಡೆಯೇ ಹಲವು ಗೊಂದಲಗಳಿಗೆ ಕಾರಣವಾಗಿದೆ. ಹೈಕೋರ್ಟ್‌ನಲ್ಲಿ ವಾದಿಸುವಾಗ 17ಎ’ನಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಬರುವುದಿಲ್ಲವೆಂದು ಅವರೇ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಭಾರತೀಯ ನ್ಯಾಯ ಸಂಹಿತೆಯ 19ರಲ್ಲಿ ದೂರು ದಾಖಲಿಸಬೇಕು ಎಂದು ವಾದ ಮಂಡಿಸಿದ್ದಾರೆ. ಆದರೆ ಈ ಘಟನೆ ನಡೆದಾಗ ಹಾಗೂ ದೂರು ದಾಖಲಾದ ಸಮಯದಲ್ಲಿ ಭಾರತೀಯ ನ್ಯಾಯ ಸಂಹಿತೆಯೇ ಜಾರಿ ಯಲ್ಲಿರಲಿಲ್ಲ. ಹೀಗಿರುವಾಗ, ಅದರನ್ವಯ ದೂರು ದಾಖಲಿಸಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ಕಾನೂನಿನ ಅಲ್ಪಜ್ಞಾನ ಹೊಂದಿರುವವರೂ ಪ್ರಶ್ನಿಸುತ್ತಿದ್ದಾರೆ.

ಇಬ್ಬರ ಇತಿಹಾಸ ಪ್ರಸ್ತಾಪಿಸಲಿ
ಮುಖ್ಯಮಂತ್ರಿಗಳ ಪರವಾಗಿ ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ರವಿವರ್ಮಾ ಕುಮಾರ್ ಆಗಲಿ, ಶಶಿಕಿರಣ್
ಶೆಟ್ಟಿ ಅವರಾಗಲಿ ಅಬ್ರಾಹಂ ಹಾಗೂ ಸ್ನೇಹಮಯಿ ಕೃಷ್ಣ ಅವರು ಈ ಹಿಂದೆ ಮಾಡಿಕೊಂಡು ಬಂದಿರುವ ‘ಕಾರ್ಯ’ ದ ಬಗ್ಗೆ ಹಾಗೂ ಅವರ ವಿರುದ್ಧ ಇರುವ ‘ಅಕ್ರಮ’ದ ದೂರುಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿಲ್ಲ. ದೂರು ದಾರರ ಹಿನ್ನೆಲೆ ಹಾಗೂ ಕಾರಣಗಳೂ ದೂರಿನ ನೈಜತೆಯನ್ನು ತೋರಿಸುತ್ತದೆ. ಆದ್ದರಿಂದ ಈ ಇಬ್ಬರ ಇತಿಹಾಸ ವನ್ನು ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸುವುದು ಅಗತ್ಯ ಎನ್ನುವ ಮಾತುಗಳನ್ನು ಕಾನೂನು ತಜ್ಞರು ಹೇಳುತ್ತಿದ್ದಾರೆ.

ಇಂದು ಸಿಎಂ ಪರ ಸಿಂ ವಾದ
ರಾಜ್ಯಪಾಲರ ನಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಗುರುವಾರ ಅಂತಿಮವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ. ಬುಧವಾರ ಸಂಜೆಯೇ ಬೆಂಗಳೂರಿಗೆ ಆಗಮಿಸಿರುವ ಸಿಂಘ್ವಿ ಅವರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಹಿರಿಯ ವಕೀಲರ ತಂಡ ತುಷಾರ್ ಮೆಹ್ತಾ ಹಾಗೂ ಇನ್ನುಳಿದ ವಕೀಲರು ನಡೆಸಿರುವ ವಾದದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಪಾಲರ ಪರ ಹಾಗೂ ಇನ್ನುಳಿದ ದೂರುದಾರರ ಪರವಾಗಿ ವಾದ ಮಂಡಿಸಿರುವ ಎಲ್ಲ ಅಂಶಗಳಿಗೂ ‘ಉತ್ತರ’ ನೀಡುವ ಮಾತುಗಳನ್ನು ಆಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೂರುದಾರರ ಬಗ್ಗೆಯೂ ಹಲವು ಅನುಮಾನ
ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲದಿರುವುದು ಸಾಮಾನ್ಯರಿಗೂ ಕಾಣಿಸುತ್ತಿರುವಾಗಲೂ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಎ.ಜೆ.ಅಬ್ರಾಹಂ ಹಾಗೂ ಸ್ನೇಹಮಯಿ ಕೃಷ್ಣ ಅವರ ಬಗ್ಗೆಯೇ ಹಲವು ಅನುಮಾನಗಳು ಶುರುವಾಗಿದೆ. ಮುಡಾ ವ್ಯಾಪ್ತಿಯಲ್ಲಿ ಹಾಗೂ ಮೈಸೂರು ಭಾಗದಲ್ಲಿ ಹಲವು ಭೂ ವ್ಯಾಜ್ಯಗಳಿಗೆ
ಸಂಬಂಧಿಸಿದಂತೆ ಮೊದಲಿನಿಂದಲೂ ‘ಸುಖಾಸುಮ್ಮನೆ’ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಸುಮಾರು 25ಕ್ಕೂ ಹೆಚ್ಚು ಪ್ರತಿದೂರುಗಳು ರಾಜ್ಯಾದ್ಯಂತ ದಾಖಲಾಗಿವೆ.

ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲಿಯಲಾಗದೇ ಅನೇಕ ದೂರುದಾರರು ಹಿಂದೆ ಸರಿದಿರುವುದರಿಂದ ಹಲವು ಪ್ರಕರಣಗಳು ‘ಬಿದ್ದು’ ಹೋಗಿವೆ. ಕೆಲ ಪ್ರಭಾವ ಬಳಸಿಕೊಂಡು ಒಂಬತ್ತು ಪ್ರಕರಣದಲ್ಲಿ ಬಿ ರಿಪೋರ್ಟ್ ಪಡೆದಿ ದ್ದಾರೆ. ಆದರೆ ಈಗಲೂ ಮೂರು ಪ್ರಕರಣಗಳ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದರೆ, ಎರಡು ಪ್ರಕರಣಗಳು ತನಿಖಾ ಹಂತದಲ್ಲಿವೆ ಎನ್ನುವುದು ದಾಖಲೆಗಳಲ್ಲಿ ಬಹಿರಂಗವಾಗಿದೆ.

ಎ.ಜೆ.ಅಬ್ರಾಹಂ ಅವರ ವಿರುದ್ಧವೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. ಅವರ ಈ ಹಿಂದಿನ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಽಕಾರದಲ್ಲಿರುವವರ ವಿರುದ್ಧ ದೂರು ನೀಡುವುದನ್ನೇ ಪೂರ್ಣಕಾಲಿಕ ಕೆಲಸವನ್ನಾಗಿ ಮಾಡಿಕೊಂಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ವಿರುದ್ಧವೂ ಅಬ್ರಾಹಂ ದೂರು ನೀಡಿದ್ದರು. ಬಳಿಕ ಪ್ರಭಾವಿ ಸಚಿವರು, ಅಧಿಕಾರಿಗಳ ವಿರುದ್ಧ ದೂರು ನೀಡುತ್ತಾರೆ. ಹಲವು ಪ್ರಕರಣಗಳು ಕೆಲ ದಿನದ ಬಳಿಕ ಸದ್ದುಗದ್ದಲವಿಲ್ಲದೇ ಹಿಂಪಡೆದಿರುವ ಉದಾಹರಣೆಗಳಿವೆ. ಆದರೆ ಪ್ರಕರಣವನ್ನು ಹಿಂಪಡೆದಿರುವುದು ಏಕೆ ಎನ್ನುವುದು ಮಾತ್ರ ‘ನಿಗೂಢ’.

ಸಿದ್ದರಾಮಯ್ಯ ವಿರುದ್ಧ ರಾಜಭವನದ ಕದ ತಟ್ಟಿರುವ ಈ ಇಬ್ಬರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ ದಾಖಲಾ ಗಿರುವುದರಿಂದ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಬೇಕಿದೆ. ಪ್ರಭಾವಿಗಳ ವಿರುದ್ಧ ದೂರು ನೀಡುವು ದನ್ನೇ ನಿತ್ಯ ಕಾಯಕ ಮಾಡಿರುವ ಈ ಇಬ್ಬರ ವಿರುದ್ಧವೂ ಕಾನೂನು ಕ್ರಮ ಸಾಧ್ಯವೇ ಎನ್ನುವ ಬಗ್ಗೆಯೂ ಚರ್ಚಿಸ ಬೇಕಿದೆ 4 ಎನ್ನುವ ಮಾತುಗಳು ಕೇಳಿ ಬರುತ್ತಿವೆ.