Monday, 14th October 2024

MLA Munirathna_Vokkaliga: ಮುನಿರತ್ನ ವಿರುದ್ಧ ಒಕ್ಕಲಿಗರ ಮುನಿಸು

munirathna nirmalanandanatha swamiji

ನಿರ್ಮಲಾನಂದ ಶ್ರೀಗಳ ಬೇಸರ

ಶಾಸಕರಿಗೆ 14 ದಿನಗಳ ನ್ಯಾಯಾಂಗ ಕಸ್ಟಡಿ

ಬೆಂಗಳೂರು: ಒಕ್ಕಲಿಗರನ್ನು ‘ಟೀಕಿಸುವ’ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದ ಮುನಿರತ್ನ ವಿರುದ್ಧ ಇದೀಗ ಒಕ್ಕಲಿಗ ಸಮುದಾಯ ಸ್ವಾಮೀಜಿಗಳು ಮುನಿಸಿಕೊಂಡು ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವುದು ಇದೀಗ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಡುವೆ ಇದೇ ಪ್ರಕರಣದಲ್ಲಿ ಸೆ.30ರವರೆಗೆ ನ್ಯಾಯಾಂಗ ಬಂಧನಕ್ಕೆ
ಒಳಗಾಗಿರುವ ಮುನಿರತ್ನ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.

ಒಕ್ಕಲಿಗರು ಹಾಗೂ ದಲಿತರನ್ನು ಶಾಸಕ ಮುನಿರತ್ನ ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ಮೈತ್ರಿ ನಾಯಕರಿಗೆ
ಮಗ್ಗುಲ ಮುಳ್ಳಾಗಿ ಪರಿಣಮಿ ಸಿದೆ. ಈ ವಿಚಾರ ಜೆಡಿಎಸ್ -ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ರಾಜಕೀಯದ
ಹೊರತಾಗಿ ಕಾನೂನಾತ್ಮಕವಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಮುನಿರತ್ನ ಅರ್ಜಿ ವಿಚಾರಣೆ ನ್ಯಾಯಾಲಯ
ಬುಧವಾರಕ್ಕೆ ಮುಂದೂಡಲಾಗಿದೆ. ಈ ಎಲ್ಲದರ ನಡುವೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾ ನಂದ ಸ್ವಾಮೀಜಿ ಅವರು, ಮುನಿರತ್ನ ನಡೆಯನ್ನು ವಿರೋಧಿಸಿರುವುದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ
ಒಕ್ಕಲಿಗ ನಾಯಕರ ಬಾಯಿ ಮುಚ್ಚಿದಂತಾಗಿದೆ.

ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಸಂಘಟನೆ ಭದ್ರಪಡಿಸಿಕೊಳ್ಳಲು ಭಾರಿ ಪ್ರಯತ್ನ ನಡೆಸುತ್ತಿದ್ದ ಮೈತ್ರಿಗಳ ನಿದ್ದೆಗೆಡಿಸಿದೆ. ಇದೇ ವಿಚಾರ ಮುಂದಿಟ್ಟುಕೊಂಡು ಒಕ್ಕಲಿಗ ಹಾಗೂ ದಲಿತರನ್ನು ಮತ್ತಷ್ಟು ಸೆಳೆದು ಕಾಂಗ್ರೆಸ್ ತನ್ನ ಪ್ರಭಾವ ವಿಸ್ತರಿಸಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಈ ವಿಷಯ ಮುನಿರತ್ನ ಮಹಾಪರಾಧ ಮಾಡಿಲ್ಲ ಎನ್ನುವ ವಾದ ಮಂಡನೆಯಾಗಿದ್ದರೂ, ಸಮುದಾಯವನ್ನು ನಿಂದಿಸಿದ್ದಾರೆಂದು ಹೇಳಲಾದ ಧ್ವನಿಮುದ್ರಿಕೆ ವಿಚಾರವೀಗ ರಾಜ್ಯಾದ್ಯಂತ ಹೋರಾಟದ ಕಾವು ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುನಿರತ್ನ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ.

ಹಳೇ ಮೈಸೂರೇ ಬಹುದೊಡ್ಡ ಸಮಸ್ಯೆ
ಹಳೆ ಮೈಸೂರು ಪ್ರಾಂತ್ಯದಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಜೆಡಿಎಸ್ ಪಕ್ಷ ವೈಯಕ್ತಿಕ ನೆಲೆಗಟ್ಟಿನಲ್ಲಿ ಸಂಘಟನೆ ಭದ್ರವಾಗಿತ್ತು. ನಂತರದ ದಿನಗಳಲ್ಲಿ ಜೆಡಿಎಸ್‌ನ ಕೆಲ ನಾಯಕರು ಕಾಂಗ್ರೆಸ್ ಸೇರಿದ್ದ ರಿಂದ ಕಳೆದ ದಶಕದಲ್ಲಿ ಜೆಡಿಎಸ್ ಅಲೆ ಕುಗ್ಗಿತ್ತಾದರೂ ಪ್ರಭಾವ ಉಳಿಸಿಕೊಂಡಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ನಾಯಕರ ಕೊರತೆಯಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಿಕೊಳ್ಳಲು ಕಷ್ಟವಾಗಿ ಕಾಂಗ್ರೆಸ್‌ಗೆ ವರದಾನವಾಗಿತ್ತು. ಆದರೆ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದಾಗಿ ಮೈಸೂರು ಪ್ರಾಂತ್ಯದಲ್ಲಿ ಗೆಲ್ಲಲು ಅವಕಾಶವಾಗಿತ್ತು.

ಉಪಚುನಾವಣೆಗೂ ಸಮಸ್ಯೆ?
ಲೋಕಸಭೆಯಲ್ಲಿ ಮೈತ್ರಿ ಅತಿಹೆಚ್ಚು ಸ್ಥಾನ ಪಡೆದಿರುವ ಮಧ್ಯೆಯೇ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆಗೆ ಇಷ್ಟರಲ್ಲೇ ದಿನಾಂಕ ಪ್ರಕಟವಾಗಲಿದೆ. ಈ ಕ್ಷೇತ್ರದಲ್ಲಿ ನಿಲ್ಲುವ ಇಂಗಿತ ವ್ಯಕ್ತಪಡಿಸಿರುವ ಡಿಸಿಎಂ ಡಿ.ಕೆ.ಶಿವ ಕುಮಾರ್‌ ಗೆ ಇದು ಅಸ್ತಿತ್ವದ ಪ್ರಶ್ನೆಯಾದರೆ, ಮೈತ್ರಿಯಲ್ಲಿ ಅಪಸ್ವರದ ನಡುವೆಯೂ ಪ್ರತಿಷ್ಠೆಯ ಕಣ ವಾಗಿದೆ. ಉಪಚುನಾವಣೆಯಲ್ಲಿ ಎನ್‌ಡಿಎ ಟಿಕೆಟ್ ತಮಗೆ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಹಳ್ಳಿಹಳ್ಳಿಗೆ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಸುತ್ತಾಡುತ್ತಿದ್ದರೂ, ಟಿಕೆಟ್ ಅಂತಿಮವಾಗಲು ಮತ್ತದೇ ಮೈತ್ರಿ ತೊಡಕಾಗಲಿದೆ.

ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಎಚ್ .ಡಿ.ಕುಮಾರಸ್ವಾಮಿ ಆಯಾ ಕಾಲಕ್ಕೆ ಪ್ರತಿಸ್ಪರ್ಧಿಗಳಾಗಿದ್ದಾರೆ. ಈಗ ಡಿಸಿಎಂ ಅವರೇ ಸ್ಪರ್ಧಿಸುವುದಾಗಿ ತಿಳಿಸಿರುವುದು ಚುನಾವಣಾ ಕಾವು
ಜೋರಾಗಿದೆ. ಇತ್ತ ಮೈತ್ರಿಯಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದ ಕುಮಾರಸ್ವಾಮಿಗೂ ಈ ಕ್ಷೇತ್ರ ಬಿಡುವ ಮನಸ್ಸಿಲ್ಲ. ಈಗ ಕೇಂದ್ರ ಮಂತ್ರಿಯಾಗಿದ್ದರೂ ತಮ್ಮ ಮಗನನ್ನು ಅಲ್ಲಿ ಪ್ರತಿಷ್ಠಾಪಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಹೀಗಿದ್ದರೂ ಸ್ಥಳೀಯರಾಗಿರುವ ಸಿ.ಪಿ.ಯೋಗೇಶ್ವರ್ ಪ್ರಯತ್ನ ಮುಂದು ವರಿಸಿದ್ದರೂ, ಈಗಿನ ಜಾತಿ ನಿಂದನಾ ಪ್ರಕರಣ ಈ ಕ್ಷೇತ್ರದ ಚುನಾವಣೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಕ್ಷಮಿಸಲು ಸಾಧ್ಯವಿಲ್ಲ: ಡಾ.ನಿರ್ಮಲಾನಂದ ಸ್ವಾಮೀಜಿ

ಧ್ವನಿಮುದ್ರಿಕೆ ನಿಜವೇ ಆಗಿದ್ದಲ್ಲಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಪೀಠದ ಡಾ.ನಿರ್ಮಲಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಮುನಿರತ್ನ ಧ್ವನಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀಗಳು, ಧ್ವನಿ ಮುದ್ರಿಕೆಯನ್ನು ನಾನೂ ಕೂಡ ಕೇಳಿಸಿಕೊಂಡಿದ್ದೇನೆ. ಅದನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ ಎಂದು ಗೊತ್ತಾಗಿದೆ. ಇದರಲ್ಲಿ ಅವರು ಮಾತನಾಡಿದ್ದಾರೋ ಮತ್ತೊಬ್ಬರು ಮಾತನಾಡಿ ದ್ದಾರೋ ಗೊತ್ತಾಗಲಿದೆ. ಆದರೆ ಈ ರೀತಿ ಯಾರೇ ಮಾತನಾಡಿ ದ್ದರೂ ಕೂಡ ನಾಗರಿಕ ಸಮಾಜದಲ್ಲಿ ಒಪ್ಪುವುದು ಖಂಡನೀಯ ಎಂದರು. ಕೇವಲ ಒಕ್ಕಲಿಗ ಸಮು ದಾಯಕ್ಕೆ ಮಾತನಾಡಿದ್ದಾರೆ ಅಥವಾ ದಲಿತ ಸಮುದಾಯಕ್ಕೆ ಮಾತನಾಡಿದ್ದಾರೆ ಎನ್ನುವುದು ಎಷ್ಟು ಮುಖ್ಯನೋ, ಅದೇ ರೀತಿ ಸಮಾಜದಲ್ಲಿರುವ ಜನಾಂಗ ಗಳೂ ಅಷ್ಟೇ ಮುಖ್ಯ.

ಪ್ರತಿ ಜನಾಂಗವನ್ನು ನಮ್ಮ ಸಂವಿಧಾನ ಒಪ್ಪಿಕೊಂಡಿದೆ. ಸಮಸ್ತ ತಾಯಂದಿರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ತಾಯಂದಿರ ಬಗ್ಗೆ ಹೇಳಲು ಆಗದ ಪದಗಳು ಆ ಧ್ವನಿಯಲ್ಲಿದೆ. ಇದು ಕ್ಷಮಿಸಲು ಸಾಧ್ಯವಿಲ್ಲ. ಆಧುನಿ ಕತೆ ಬೆಳೆದಿದೆ ಎಂದು ನಮ್ಮ ಸಂಸ್ಕೃತಿ ಮರೆಯ ಬಾರದು. ಈ ರೀತಿ ಕೃತ್ಯ ಯಾರೇ ಮಾಡಿದ್ದರೂ ಕೂಡ ಅವರ ವಿರುದ್ಧದ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಉರಿಗೌಡ ಹಾಗೂ ನಂಜೇಗೌಡ ವಿಚಾರಕ್ಕೆ ಸಂಬಂಧಿಸಿದಂತೆ ಮುನಿ ರತ್ನ ಅವರನ್ನು ಕರೆದು ಬುದ್ಧಿವಾದ ಹೇಳಲಾಗಿತ್ತು. ಇದಾದ ನಂತರ ಅವರು ಮಾತನಾಡಲಿಲ್ಲ. ಮುನಿರತ್ನ ವಿರುದ್ದ ಕೆಂಗೇರಿಯಲ್ಲಿ ಒಕ್ಕಲಿಗರ ಸಂಘದಿಂದ ಪ್ರತಿಭಟನೆ ನಡೆಸಲಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದರು.

ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸ ಲಾಗಿದೆ. ನ್ಯಾಯಾಂಗ ಬಂಧನ ಅವಧಿ ಹಿನ್ನಲೆಯಲ್ಲಿ ಮುನಿರತ್ನ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ , ರಿಮ್ಯಾಂಡ್ ಅರ್ಜಿಯನ್ನು ಆರೋಪಿ ಪರ ವಕೀಲರಿಗೆ ನೀಡ ಬೇಕೆಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ತನಿಖಾಧಿಕಾರಿಗಳು ರಿಮ್ಯಾಂಡ್ ಅರ್ಜಿ ಸಲ್ಲಿಸಿಲ್ಲ.

ಪ್ರಕರಣ ಸಂಬಂಧ ಸೆ.13ರ ರಾತ್ರಿ ಪ್ರತ್ಯೇಕ ಎಫ್‌ ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ವಿಚಾರಣೆ ನಡೆಸದೆ ತಿರುಪತಿಗೆ
ಹೋಗುತ್ತಿದ್ದಾಗ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ ಎಂದು ವಾದಿಸಿದರು. ಇದಕ್ಕೂ ಮುನ್ನ ಜಾಮೀನು ಅರ್ಜಿಗೆ ಸರಕಾರಿ ವಕೀಲ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ದೂರುದಾರರ ಪರ ವಕೀಲರು ಕೂಡ ಆಕ್ಷೇಪಣೆ
ಸಲ್ಲಿಸಲು ಕಾಲಾವಕಾಶ ಕೋರಿದರು. ವಾದ ಆಲಿಸಿದ ಪೀಠ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಇದನ್ನೂ ಓದಿ: Munirathna: ಮುನಿರತ್ನ ಮೇಲಿನ ಆರೋಪ ನಿಜವಾಗಿದ್ದರೆ ಕ್ಷಮಿಸಲ್ಲ: ನಿರ್ಮಲಾನಂದನಾಥ ಶ್ರೀ