Sunday, 8th September 2024

ನಾಡಗೀತೆ ವಿವಾದ : ವರದಿ ಕೈಸೇರಿದ್ದರೂ ನಿರ್ಧಾರಕ್ಕೆ ಮೀನಮೇಷ

ವಿಶ್ವವಾಣಿ ಕಾಳಜಿ

ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲೂ ಅಂತ್ಯ ಕಾಣದ 

ಧಾಟಿಯ ವಿವಾದ ದಾಟಿ ಭಾವನೆಗಳ ತಂತು ಮೀಟಿ

ಗಾಯಕರ ಬಣಗಳ ಬಡಿದಾಟಕ್ಕೆ ಬಡವಾಗುತ್ತಿರು ಕವಿ, ಕವಿತೆ

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ನಾಡಗೀತೆ ಧಾಟಿಯ ವಿಚಾರದಲ್ಲಿ ರಚಿಸಿದ್ದ ಸಮಿತಿ ಅಂತಿಮ ವರದಿ ಸಲ್ಲಿಸಿದ್ದರೂ ಅದನ್ನು ಸದ್ಯಕ್ಕೆ ಬಹಿರಂಗಗೊಳಿಸಲು ಇಚ್ಛಿಸಿದ ಸರಕಾರ, ಉಪಚುನಾವಣೆಯ ನೆಪದಲ್ಲಿ ನಿರ್ಧಾರವನ್ನು ಇನ್ನಷ್ಟು ಮುಂದೂಡಿ, ಸಮಸ್ಯೆಗೆ ವಿಳಂಬವೇ ಪರಿಹಾರ ಎಂಬ ನಿಲುವಿಗೆ ಬಂದಂತಿದೆ.

ಈ ತನ್ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮತ್ತೊಮ್ಮೆ ಆಳುವವರು ಹೊರಟಿದ್ದಾರೆ. ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ಇಲ್ಲದ ನಾಡಗೀತೆಯ ಗೌರವ ಕರುನಾಡಿಗೆ ಇದೆ. ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ದೊರಕಿಸಿಕೊಟ್ಟ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ಯ ಸಾಲು ಕಿವಿಗೆ ಬೀಳು ತ್ತಿದ್ದಂತೆಯೇ ಕನ್ನಡದ ಅಸ್ಮಿತೆ ಕುಣಿದಾಡುತ್ತದೆ.

ಇಂತಹ ಶ್ರೇಷ್ಠ  ನಾಡಗೀತೆಗಿಂತ ಹೆಚ್ಚಾಗಿ, ಮೊದಲಿಂದಲೂ ಸಲ್ಲದ ಕಾರಣಕ್ಕೇ ಅದು ಚರ್ಚೆಯಾಗುತ್ತಿರುವುದು ದುರಂತ, ಗೀತೆಯ ಗಾಯನದ ಅವಧಿ, ಯಾವುದೋ ಪದ ಬಿಟ್ಟುಹೋಗಿದ್ದು ಎಂಬಿತ್ಯಾದಿ ವಿವಾದಗಳೆಲ್ಲ ಮುಗಿದು ಇದೀಗ ಯಾವ ‘ಧಾಟಿಯಲ್ಲಿ ಹಾಡಬೇಕು’ ಎನ್ನುವ ವಿಷಯವೇ ಹೆಚ್ಚು ಸದ್ದು ಮಾಡುತ್ತಿರುವುದು ದುರದೃಷ್ಟಕರ.

ಹೌದು, ಕಳೆದೊಂದು ದಶಕದಿಂದ ಶುರುವಾಗಿರುವ ನಾಡಗೀತೆಯ ಬಗೆಗಿನ ವಿವಾದ ಬಗೆಹರಿಯುವ ಸೂಚನೆ ಕಾಣುತ್ತಿಲ್ಲ. ಕಾಲಮಿತಿ ಹಾಗೂ ಧಾಟಿಯ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲ ಆಳುವ ಮಂದಿ ಅದಕ್ಕೆ ಇದ ಮಿತ್ಥಂ ಎಂಬ ನಿರ್ಧಾರ ಘೋಷಿಸುವ ಬದಲಿಗೆ ಕಾಲಕಾಲಕ್ಕೆ ಮುಂದಕ್ಕೆ ಹಾಕುವ ಜಾಣ್ಮೆ ತೋರುತ್ತಿದ್ದಾರೆ. ಈ ಬಾರಿ ತಾರಕಕ್ಕೆ ಏರಿರುವ ಚರ್ಚೆಗೆ ಕೊನೆಗೂ ಅಂತಿಮ ನಿರ್ಧಾರ ಕಾಣುವ ಲಕ್ಷಣಗಳಿಲ್ಲ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಈ ಧಾಟಿಯ ವಿಷಯದ ವಿವಾದಕ್ಕೆ ತಾರ್ತಿಕ ಅಂತ್ಯ ಕಾಣಲು ಪ್ರಯತ್ನಿಸ ಲಾಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಅದಾದ ಬಳಿಕ ನಾನಾ ಸಮಿತಿಗಳನ್ನು ರಚಿಸಿದರೂ ಫಲಿತಾಂಶ ಮಾತ್ರ ಸಿಕ್ಕಿಲ್ಲ. ಪ್ರಮುಖವಾಗಿ ನಾಡ ಗೀತೆ ಎಂದು ಘೋಷಿಸುವ ಮೊದಲೇ, ಸ್ವರ ಸಂಯೋಜನೆ ಮಾಡಿ ರಾಜ್ಯದೆಲ್ಲೆಡೆ ಗೀತೆಯನ್ನು ಪಸರಿಸಿದ್ದ ಮೈಸೂರು ಅನಂತಸ್ವಾಮಿ ಅವರ ಧಾಟಿ ಯಲ್ಲಿಯೇ ಹಾಡಬೇಕೇ ಅಥವಾ ಪೂರ್ಣ ನಾಡಗೀತೆಗೆ ಸ್ವರ ಸಂಯೋಜನೆ ಮಾಡಿರುವ ಅಶ್ವತ್ಥ್ ಅವರ ಧಾಟಿಯಲ್ಲಿ ಹಾಡಬೇಕೆ ಎನ್ನುವ ಗೊಂದಲ ನಿಜಕ್ಕೂ ನಾಡಗೀತೆಗೆ ಅವಮಾನ ತಂದೊಡ್ಡುತ್ತಿದೆ.

ಸಿದ್ದರಾಮಯ್ಯ ಅವರ ಬಳಿಕ ಕುಮಾರಸ್ವಾಮಿ, ಯಡಿಯೂರಪ್ಪ ಅವರ ಅವಽಯಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಸುನೀಲ್‌ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕವೂ, ಸಮಿತಿಯೊಂದನ್ನು ರಚಿಸಿದ್ದರು. ಈಗ ಸಮಿತಿ ವರದಿ ನೀಡಿದ್ದರೂ, ಅದನ್ನು
ಬಹಿರಂಗಪಡಿಸಿದರೆ ಸಾಂಸ್ಕೃತಿಕ ವಲಯದಲ್ಲಿ ಪುನಃ ಭಿನ್ನಾಭಿಪ್ರಾಯ ಏಳುತ್ತವೆ ಎನ್ನುವ ಕಾರಣಕ್ಕೆ, ನಿರ್ಧಾರಕ್ಕೆ ಸರಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವತ್ಥ್ ರಲ್ಲಿ ಯಾರದ್ದನ್ನು ಅಂತಿಮಗೊಳಿಸಬೇಕು ಎನ್ನುವ ಗೊಂದಲದಲ್ಲಿ ಸರಕಾರವಿದೆ. ಇನ್ನು ಎರಡೂ ಕಡೆಯವರು ತಮ್ಮ ಗುರುಗಳ ಸ್ವರಸಂಯೋಜನೆಯನ್ನೇ ಅಂತಿಮಗೊಳಿಸಿ, ಅಧಿಕೃತಗೊಳಿಸಬೇಕು ಎನ್ನುವ ಒತ್ತಡವನ್ನು ಸರಕಾರದ ಮಟ್ಟದಲ್ಲಿ ತರುತ್ತಿದ್ದಾರೆ. ಆದರೆ ಈ ಗೊಂದಲಗಳ ಬದಲಿಗೆ, ಯಾರ ಧಾಟಿಯನ್ನಾದರೂ ಅಂತಿಮಗೊಳಿಸಿ. ಆದರೆ ಈ ವಿವಾದ ಪುನಃ ಏಳದಂತೆ ಎಚ್ಚರವಹಿಸಿ ಎನ್ನುವುದು ಸಾಹಿತ್ಯ, ಸಾಂಸ್ಕೃತಿಕ ಆರಾಧಕರ ಆಗ್ರಹವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆ: ವಿಧಾನಸಭಾ ಅಧಿವೇಶನದಲ್ಲಿ ಸಚಿವ ಸುನೀಲ್‌ಕುಮಾರ್ ಅವರು ನಾಡಗೀತೆಯ ವರದಿ ಕೈಸೇರಿದ್ದು ಶೀಘ್ರದಲ್ಲಿಯೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ
ಭಾರಿ ಚರ್ಚೆ ಆರಂಭವಾಯಿತು. ಮೈಸೂರು ಅನಂತಸ್ವಾಮಿ ಅವರ ಶಿಷ್ಯಂದಿರು ತಮ್ಮ ಗುರುಗಳ ಧಾಟಿಯನ್ನೇ ಅಂತಿಮಗೊಳಿಸಿ ಎಂದರೆ, ಸಿ.ಅಶ್ವತ್ಥ್ ಧಾಟಿಯೇ ಅಂತಿಮವಾಗಬೇಕು ಎನ್ನುವ ಪಟ್ಟನ್ನು ಅಶ್ವತ್ಥ್ ಕಡೆಯವರು ಇಡುತ್ತಿದ್ದಾರೆ.

ಈ ವಾದ-ವಿವಾದ ಕೇವಲ ಚರ್ಚೆಗೆ ಸೀಮಿತವಾಗದೇ, ಪರಸ್ಪರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಇದಿಷ್ಟೇ ಅಲ್ಲದೇ, ಈ ವಾಕ್ಸಮರದಲ್ಲಿ ರಾಜ್ಯ ಕಂಡ
ಇಬ್ಬರು ಶ್ರೇಷ್ಠ ಸಂಗೀತಗಾರರನ್ನು ಹೀಯಾಳಿಸುವ ಅಥವಾ, ಒಬ್ಬರು ಶ್ರೇಷ್ಠ ಇನ್ನೊಬ್ಬರು ಕನಿಷ್ಠ ಎನ್ನುವ ರೀತಿಯಲ್ಲಿ ಮಾತನಾಡುವ ಹಂತಕ್ಕೂ ತಲುಪಿದೆ. ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ವಿವಾದ ಹೋಗಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಪರಸ್ಪರ ನಿಂದನೆಗೆ ತಿರುಗಿರು ವುದು ಸಾಂಸ್ಕೃತಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.

ಅನಂತಸ್ವಾಮಿ ಬಣದ ವಾದವೇನು?
‘ಜಯಭಾರತ ಜನನಿಯ’ ಸಾಹಿತ್ಯಕ್ಕೆ ಮೊದಲು ಸ್ವರ ಸಂಯೋಜಿಸಿದ್ದು

ಅನಂತಸ್ವಾಮಿ’ ನಾಡಗೀತೆ ಎನ್ನುವ ಸ್ಥಾನಮಾನ ಸಿಗುವ ಮೊದಲೇ ಜನರ ಹೃದಯಕ್ಕೆ ಮುಟ್ಟಿಸಿದ್ದು

ಮೈಸೂರು ಅನಂತಸ್ವಾಮಿ ಸ್ವರಸಂಯೋಜನೆಯಲ್ಲಿ ಏರಿಳಿತವಿದ್ದರೂ ಹಾಡುವುದಕ್ಕೆ ಸಮಸ್ಯೆಯಿಲ್ಲ.

ಪೂರ್ಣ ನಾಡಗೀತೆ ಸಂಯೋಜನೆಯಾಗದಿದ್ದರೂ, ಮೊದಲು ಸ್ವರಸಂಯೋಜನೆ ಮಾಡಿದವರಿಗೆ ಆದ್ಯತೆ ನೀಡಬೇಕು

ಸಿ. ಅಶ್ವತ್ಥ್ ಬಣದ ವಾದವೇನು?
ಪೂರ್ಣ ನಾಡಗೀತೆಗೆ ಸಂಯೋಜನೆ ಮಾಡಿರುವುದು ಅಶ್ವತ್ಥ್
ಅನಂತಸ್ವಾಮಿ ಅವರ ಸಂಯೋಜನೆ ಸಂಗೀತದ ಪಾಮರರಿಗೆ ಹಾಡುವುದು ಕಷ್ಟ
ಹಲವು ವೇದಿಕೆಯಲ್ಲಿ ಅಶ್ವತ್ಥ್ ಅವರ ಹಾಡನ್ನೇ ಹಾಡಲಾಗುತ್ತಿದೆ
ಇಡೀ ನಾಡಗೀತೆಯನ್ನು ೩ ನಿಮಿಷ ೧೫ ಸೆಕೆಂಡ್‌ಗೆ ಇಳಿಸಿದ ಟ್ರ್ಯಾಕ್ ಇದೆ. ಅದನ್ನೇ ಬಳಸಿ

ತಟಸ್ಥ ಬಣದ ಮಾತೇನು?

ನಾಡಗೀತೆ ವಿಷಯದಲ್ಲಿ ಅನವಶ್ಯಕ ಗೊಂದಲ ಸಲ್ಲ

ಈ ವಿಷಯದಲ್ಲಿ ಅನವಶ್ಯಕವಾಗಿ ಅಶ್ವತ್ಥ ಅಥವಾ ಅನಂತಸ್ವಾಮಿ ಎಂಬ ಭಿನ್ನತೆ ತರಬೇಡಿ

ರಾಜ್ಯದ ಅಸ್ಮಿತೆಯಾಗಿರುವ ನಾಡಗೀತೆಯನ್ನು, ಈ ವಿಷಯಕ್ಕೆ ವಿವಾದಗೊಳಿಸಬೇಡಿ

***

ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು.
– ವಿ. ಸುನೀಲ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Leave a Reply

Your email address will not be published. Required fields are marked *

error: Content is protected !!