ಡಾ.ಉಮಾಶಂಕರ್ ಆರ್.
ನರರೋಗ ತಜ್ಞರು, ಬೆಂಗಳೂರು ನ್ಯೂರೋ ಸೆಂಟರ್,
ಮೊ ೯೮೮೦೧೫೮೭೫೮
ದೇಹದ ಎಲ್ಲಾ ಭಾಗಗಳನ್ನ ಹಾಗೂ ಚಟುವಟಿಕೆಗಳನ್ನ ನಿಯಂತ್ರಿಸುವುದು ನರಮಂಡಲ, ನರಮಂಡಲವನ್ನು ಕೇಂದ್ರೀಯ ನರ ಮಂಡಲ ಹಾಗೂ ಬಾಹ್ಯ ನರಮಂಡಲ ಎಂದು ವಿಭಾಗಿಸಬಹುದು. ಮೆದುಳು ಮತ್ತು ಬೆನ್ನುಹುರಿ ಕೇಂದ್ರೀಯ ನರಮಂಡಲದ ಭಾಗ ಗಳಾದರೆ, ಅದರಿಂದ ಹೊರಬರುವ ನರತಂತುಗಳನ್ನ ಬಾಹ್ಯ ನರಮಂಡಲ ಅಥವಾ ಫೆರಿಫೆರಲ್ ನರ್ವ್ ಎಂದು ಕರೆಯಬಹುದು. ಮೆದುಳು ದೇಹದ ಎಲ್ಲಾ ಭಾಗಗಳನ್ನು ನಿಯಂತ್ರಿಸುವುದು ಈ ಬಾಹ್ಯ ನರಮಂಡಲಗಳ ಮೂಲಕ ಸಂಕೇತಗಳನ್ನು ಕಳುಹಿಸಿ, ಇದರ ಜೊತೆಯಲ್ಲಿ ದೇಹದ ಬೇರೆ ಭಾಗದಲ್ಲಿ ಉಂಟಾಗುವ ಪರಿಣಾಮಗಳನ್ನ ಮೆದುಳಿಗೆ ತಲುಪಿಸು ವುದು ಕೂಡ ಬಾಹ್ಯ ನರಮಂಡಲದ ಕೆಲಸವೇ.
ಬಾಹ್ಯ ನರಮಂಡಲಕ್ಕೆ ಉಂಟಾಗುವ ತೊಂದರೆಗಳಿಂದ ಆಗುವ ಪರಿಣಾಮಗಳೆಲ್ಲವನ್ನೂ ಕೂಡಿ ನ್ಯೂರೋ ಪತಿ ಎಂದು ಕರೆಯುತ್ತೇವೆ. ಬಾಹ್ಯ ನರಮಂಡಲಗಳಲ್ಲಿ ಬೇರೆ ಬೇರೆ ರೀತಿಯ ನರತಂತುಗಳಿರುತ್ತವೆ. ನರತಂತುಗಳನ್ನು ವಿಭಿನ್ನ ರೀತಿಯಲ್ಲಿ ವಿಭಾಗಿಸುತ್ತಾರೆ. ೧. ದೊಡ್ಡ ಸುತ್ತಳತೆಯ ನರತಂತುಗಳು, ೨. ಸಣ್ಣ ಸುತ್ತಳತೆಯ ನರತಂತುಗಳು ಅಥವಾ ಮಾಂಸಖಂಡಗಳನ್ನು ನಿಯಂತ್ರಿಸುವ ನರತಂತುಗಳು, ಸ್ಪರ್ಶ ಜ್ಞಾನವನ್ನ ನಿಯಂತ್ರಿಸುವ ನರತಂತುಗಳು. ನಮ್ಮ ದೇಹದ ಚಲನವಲನ ಮತ್ತು ಸ್ಪರ್ಶ ಜ್ಞಾನವನ್ನು ನಿಯಂತ್ರಿಸುವುದರ ಜೊತೆಯಲ್ಲಿ ನಮ್ಮ ರಕ್ತದ ಒತ್ತಡ, ಉಸಿರಾಟ, ಹೃದಯ ಬಡಿತ, ಆಹಾರ ಪಚನಕ್ರಿಯೆ, ನಾವು ಒತ್ತಡದಲ್ಲಿ ಪ್ರತಿಕ್ರಿಯಿಸುವುದನ್ನೂ ಕೂಡ ಈ ನರತಂತುಗಳು ನಿಯಂತ್ರಣ ಮಾಡುತ್ತವೆ.
ನರತಂತುಗಳ ವಿನ್ಯಾಸ ಒಂದು ನರಕೋಶ, ನರಕೋಶದಿಂದ ಹೊರಡುವ ಅಂದರೆ ಸಂಕೇತಗಳನ್ನು ಕೊಂಡೊಯ್ಯುವ ಉದ್ದನೆಯ ನರತಂತು ಅದನ್ನು ಆಗ್ಸಾನ್, ಸಂಕೇತಗಳನ್ನು ನರಕೋಶದ ಎಡೆಗೆ ಕೊಂಡೊಯ್ಯುವ ಬಿಳಿಲುಗಳನ್ನು ಡೆಂಡ್ರೈಟ್ ಎಂದು ಕರೆಯುತ್ತೇವೆ.
ನರತಂತುಗಳಿಗೆ ಪೌಷ್ಠಿಕಾಂಶ ದೊರಕಿಸುವುದು ರಕ್ತನಾಳಗಳ ಮೂಲಕ, ಈ ನರತಂತುಗಳೆಲ್ಲಾ ಮಯಲಿನ್ ಎಂಬ ಪ್ರೋಟೀನ್ ಸುತ್ತುವರೆದಿರುತ್ತದೆ. ಈ ರೀತಿ ಹಲವಾರು ನರತಂತುಗಳು ಸೇರಿ ಉದಾಹರಣೆಗೆ ವಿದ್ಯುತ್ತಂತಿಗಳ ಹಾಗೆ ಹಲವಾರು ಸಣ್ಣ ತಂತುಗಳನ್ನು ಒಟ್ಟಿಗೆ ಕೂಡಿಸಿ ಅದರ ಮೇಲೆ ಸುರಕ್ಷಾ ಕವಚವಿರುವ ಹಾಗೆ ಅರ್ಥೈಸಿಕೊಳ್ಳಬಹುದು. ನರಕೋಶಗಳ ತೊಂದರೆ ಯಾಗಬಹುದು ಪೌಷ್ಠಿಕಾಂಶದ ತೊಂದರೆಯಾಗಬಹುದು ಅಥವಾ ಮಯಲಿನ್ ತೊಂದರೆಯಾದರೂ ಕೂಡ ನರರೋಗ ಉಂಟಾಗುತ್ತದೆ.
ನರರೋಗದ ಲಕ್ಷಣಗಳೇನು?
ಕೈ ಕಾಲುಗಳಲ್ಲಿ ಉರಿ, ಜೋಮು ಕಾಣಿಸಿಕೊಳ್ಳುವುದು, ಚುಚ್ಚುವುದು, ನಿಧಾನವಾಗಿ ಕಾಲಿನಿಂದ ಶುರುವಾಗಿ ನಂತರ ಕೈಗಳ ಕಡೆಗೆ ಹರಡುವುದು. ಮುಟ್ಟಿದರೆ ತುಂಬಾ ನೋವಾಗುವುದು, ಮುಳ್ಳಿನಂತೆ ಚಚ್ಚುವುದು, ಚಟುವಟಿಕೆಗಳಲ್ಲಿ ನೋವಾಗುವುದು (ಉದಾ. ವಸ ಧರಿಸುವುದೇ ಕಷ್ಟವಾಗುವಂತಹದ್ದು, ನೆಡೆಯುವುದರಲ್ಲಿ ತೊಂದರೆ, ಸಮತೋಲನ ತಪ್ಪುವುದು, ತಲೆಸುತ್ತು ಬರುವುದು, ಮೂತ್ರ ಮತ್ತು ಮಲ ವಿಸರ್ಜನೆಯಲ್ಲಿ ತೊಂದರೆ, ಲೈಂಗಿಕ ತೊಂದರೆ, ರಕ್ತದ ಒತ್ತಡದಲ್ಲಿ ಏರುಪೇರಾಗಿ ತಲೆಸುತ್ತು ಬುರುವುದು, ಮಾಂಸಖಂಡಗಳಲ್ಲಿ ಶಕ್ತಿಕುಂದುವುದು) ನಾವು ಸಾಮಾನ್ಯವಾಗಿ ನೋಡುವ ಸರ್ಪಸುತ್ತು ಎಂದು ಹೇಳುವುದು ಕೂಡ ಹರ್ಪಿಸ್ ವೈರಸ್ನಿಂದ ಉಂಟಾಗುವ ತೊಂದರೆ. ಹಲವಾರು ನರರೋಗ ತೊಂದರೆಗಳು ಅನುವಂಶೀಯವಾಗಿಯೂ ಬರಬಹುದು ಮತ್ತೆ ದೇಹದ ಹಲವು ಖಾಯಿಲೆಗಳೂ ಕೂಡ ನರರೋಗಕ್ಕೆ ಕಾರಣವಾಗಬಹುದು ಉದಾಹರಣೆಗೆ ಮೂತ್ರಪಿಂಡ ತೊಂದರೆ, ಲಿವರ್, ಥೈರಾಯ್ಡ್ ಇತ್ಯಾದಿ.
ಮಿತಿಮೀರಿದ ಮದ್ಯಪಾನ, ಭಾರೀ ಲೋಹಗಳಾದ ಲೆಡ್, ಮರ್ಕ್ಯುರಿಗಳೂ ಕೂಡ ನರರೋಗ ತೊಂದರೆ ಉಂಟುಮಾಡುತ್ತದೆ. ವಿಟಮಿನ್ ಕೊರತೆಗಳ ಮುಖ್ಯವಾಗಿ ವಿಟಮಿನ್ ಬಿ ೧೨, ಬಿ೧ಬಿ೬ ನರರೋಗ ಉಂಟಾಗುತ್ತದೆ.
ನರರೋಗದಿಂದ ಉಂಟಾಗುವ ತೊಂದರೆಗಳು?: ಕೈಕಾಲುಗಳಲ್ಲಿ ಗಾಯ, ನಡೆಯುವ ತೊಂದರೆ, ಬೀಳುವುದು, ಬರೆಯಲು ತೊಂದರೆ ಇತ್ಯಾದಿ. ತಲೆಸುತ್ತು ಬರುವುದು, ಕೈಕಾಲು ಸುಟ್ಟುಕೊಳ್ಳುವುದು, ವಾಸಿಮಾಡಲಾಗದ ಗಾಯಗಳು ಇತ್ಯಾದಿಗಳು.
ನರರೋಗ ಪತ್ತೆ ಮಾಡುವುದು ಹೇಗೆ? ರೋಗಿಯಿಂದ ರೋಗದ ಲಕ್ಷಣಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮುಖ್ಯವಾಗಿ ಎಷ್ಟು ದಿನಗಳಿಂದ ದೊರೆಯಿದೆ ಎಂಬುದನ್ನು ನಿರ್ಧರಿಸಬೇಕು. ಏಕೆಂದರೆ ಕೆಲವು ನರರೋಗಗಳಾದ ಜಿಬಿ ಸಿಂಡ್ರೋಮ್ ಎನ್ನುವ ಖಾಯಿಲೆ ಇದಕ್ಕಿದ್ದಂತೆ ನರತಂತುಗಳಿಗೆ ಹಾನಿ ಮಾಡುತ್ತದೆ. ಬಹುಪಾಲು ಖಾಯಿಲೆಗಳು ತಿಂಗಳು ಅಥವಾ ವರ್ಷಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ.
ನಂತರ ಪರೀಕ್ಷೆಯಲ್ಲಿ ಪಾದಗಳ ಮತ್ತು ಅಂಗೈಗಳ ಪರೀಕ್ಷೆ ಮಾಡಿ ಎನಾದರೂ ಗಾಯಗಳಿವೆಯೇ ಎಂದು ತಿಳಿಯುವುದು, ನರ್ವ್ ಕಂಡೆಕ್ಷನ್ ಮತ್ತು ಇಎಂಜಿ(ಇಎನ್ಎಂಜಿ, ಇಎಂಜಿ) ಪರೀಕ್ಷೆಗಳನ್ನು ಮಾಡು ನರತಂತುಗಳಿಗೆ ಯಾವ ರೀತಿಯಲ್ಲಿ ಹಾಗೂ ಎಷ್ಟು ಹಾನಿ ಉಂಟಾಗಿದೆ ಎಂಬುದನ್ನು ತಿಳಿಯಬಹುದು. ಹಲವಾರು ಬಾರಿ ಬೆನ್ನಿನಿಂದ ನೀರು ತೆಗೆದು (ಸಿಎಸ್ಎಫ್) ಪರೀಕ್ಷೆ, ಅಥವಾ ನರಗಳ ಬಾಯಾಪ್ಸಿ ಮಾಡಿ ಯಾವ ರೀತಿಯ ತೊಂದರೆ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳ ಬೇಕಾಗುತ್ತದೆ.
ಇದರ ಜೊತೆಯಲ್ಲಿ ಮಧುಮೇಹ ಹಾಗೂ ವಿಟಮಿನ್ ಪರೀಕ್ಷೆ, ಭಾರೀ ಲೋಹಗಳ ಪರೀಕ್ಷೆ ಮತ್ತು ರೋಗನಿರೋಧಕ ಶಕ್ತಿಯ ಪರೀಕ್ಷೆ, ಚ್ಐವಿ, ಕುಷ್ಠರೋಗ ಇನ್ನಿತರ ಸೋಂಕುಗಳ ಪರೀಕ್ಷೆಗಳು ಕೂಡ ಬೇಕಾಗಬಹುದು.
ನರರೋಗದ ಕಾರಣಗಳೇನು?
ಮಧುಮೇಹ ಒಂದು ಮುಖ್ಯವಾದ ಕಾರಣ. ಇದರಲ್ಲಿಯೂ ಕೂಡ ಹಲವಾರು ರೀತಿಯ ನರರೋಗ ತೊಂದರೆ ಉಂಟಾಗ ಬಹುದು. ಉದಾಹರಣೆಗೆ ತುಂಬಾ ನೋವು, ಉರಿ, ಚುಚ್ಚಿದ ರೀತಿಯಲ್ಲಿ ಆಗುವುದು, ಕಾಲು ಜೋಮು ಹಿಡಿಯುವುದು, ಸ್ಪರ್ಶಜ್ಞಾನ ಇಲ್ಲದಂತಾಗುವುದು, ಹತ್ತಿಯ ಮೇಲೆ ನಡೆದಂತೆ, ಚಪ್ಪಲಿ ಹಾಕಿದರೂ ಹಾಕದಿರುವ ರೀತಿಯಲ್ಲಿ ಭಾವನೆ ಉಂಟಾಗುವುದು ಇತ್ಯಾದಿ. ನಂತರದ ಕಾರಣಗಳಲ್ಲಿ ಆಟೋ ಇಮ್ಯೂನ್ ಡಿಸೀಸ್ ಅಂದರೆ ದೇಹದ ರೋಗ ನಿರೋಧಕ ಶಕ್ತಿಯೇ ನಮ್ಮ ನರಮಂಡಲಗಳಿಗೆ ತೊಂದರೆ ಉಂಟುಮಾಡುವುದು ಅದರಲ್ಲಿ ಮುಖ್ಯವಾಗಿ (ಎಸ್ಎಲ್ಇ), ಸಂಧಿವಾತ ಇತ್ಯಾದಿ. ಹಲವು ಬಾರಿ ಕುಷ್ಠರೋಗ, ಹೆಪಟೈಟಿಸ್, ಹೆಚ್ ಐವಿ, ಇನ್ನಿತರ ಸೋಂಕಿನಿಂದಲೂ ಕೂಡ ನರರೋಗ ಉಂಟಾಗಬಹುದು.