ಕಸಾಪ ಕದನ
ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಕಸಾಪ ಅಧ್ಯಕ್ಷ ಸ್ಥಾನಾಕಾಂಕ್ಷಿ ಮಹೇಶ್ ಜೋಶಿ ಹೇಳಿಕೆ
ಆಜೀವ ಸದಸ್ಯತ್ವ ಶುಲ್ಕ 250 ರು. ಇಳಿಸಲು ಚಿಂತನೆ
ಸಾಹಿತ್ಯ ಪರಿಷತ್ ಅಧ್ಯಕ್ಷನಾದರೆ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯದ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಆದರೆ, ಕನ್ನಡ ಭಾಷೆ, ಸಾಹಿತ್ಯ, ಗಡಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾದರೆ ಬೀದಿಗೆ ಇಳಿದು ಹೋರಾಡಲು ಸಿದ್ಧ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚುನಾವಣೆ ಯಲ್ಲಿ ಸ್ಪರ್ಧಿಸಿರುವ ಡಾ.ಮಹೇಶ್ ಜೋಶಿ ಹೇಳಿದ್ದಾರೆ.
ವಿಶ್ವವಾಣಿಯೊಂದಿಗೆ ಮಾತನಾಡಿದ ಅವರು, ಕಸಾಪ ಅಧ್ಯಕ್ಷರಾದರೆ ಏನೆಲ್ಲ ಬದಲಾ ವಣೆ ತರುತ್ತೇನೆ ಎನ್ನುವ ಬಗ್ಗೆ ಮಾತನಾ ಡಿದರು. ಕನ್ನಡ ಭಾಷೆ ಉಳಿವಿಗಾಗಿ ಹೋರಾಟ, ಸಾಹಿತ್ಯಕ್ಕೆ ಡಿಜಿಟಲ್ ಸ್ಪರ್ಶ, ಆಜೀವ ಸದಸ್ಯತ್ವ ಶುಲ್ಕದಲ್ಲಿ ಇಳಿಕೆ, ಕನ್ನಡ ವನ್ನು ಅನ್ನದ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಹೋರಾಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಚುನಾವಣಾ ಕಾವು ಹೇಗಿದೆ?
ನಾನು ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಅಥವಾ ಸ್ಪರ್ಧಾಳುವಾಗಿ ಬಂದಿಲ್ಲ. ಬದಲಿಗೆ ಸೇವಾಕಾಂಕ್ಷಿಯಾಗಿ ಅಂದರೆ, ಕನ್ನಡ ನಾಡು, ನುಡಿಗೆ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದಿಂದ ಸೇವೆ ಮಾಡಲು ಬಂದಿದ್ದೇನೆ. ಆದರೆ, ಇದು ಚುನಾವಣೆ ಯಾಗಿರುವುದರಿಂದ ಮತದಾರನ್ನು ಮಾತನಾಡಿಸುವುದು, ಪ್ರವಾಸ ಮಾಡುವುದು ಸೇರಿದಂತೆ ಎಲ್ಲವನ್ನು ಮುಗಿಸಿದ್ದೇನೆ. ಇಲ್ಲಿಯವರೆಗೆ 256 ತಾಲೂಕಿನಲ್ಲಿ 60 ರಿಂದ 70 ಸಾವಿರ ಮತದಾರರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಪ್ರವಾಸದಲ್ಲಿ ನಾನು ಕಂಡಕೊಂಡ ಒಂದು ಸತ್ಯ ಏನೆಂದರೆ, ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ನನ್ನನ್ನು ಜನ ಗುರುತಿಸುತ್ತಾರೆ. ಇದು ಗರ್ವದಿಂದ ಹೇಳುತ್ತಿಲ್ಲ. ಅಭಿಮಾನಪೂರ್ವಕವಾಗಿ ಹೇಳುತ್ತಿದ್ದೇನೆ. ಭೇಟಿ ನೀಡಿದ ಬಹುತೇಕರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆದ್ದರಿಂದ ಗೆಲ್ಲುವ ವಿಶ್ವಾಸವಿದೆ.
ಕುಲಗೆಟ್ಟಿರುವ, ಹಲವು ಕಳಂಕವನ್ನು ಹೊತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ಅನ್ನು ನನ್ನ ಕಾಲದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವೆಂದು ಜನರೇ ಹೇಳುತ್ತಿರುವುದರಿಂದ ಗೆಲುತ್ತೇನೆ ಎನ್ನುವ ವಿಶ್ವಾಸವಿದೆ.
ಅಧ್ಯಕ್ಷರಾದ ನಿಮ್ಮ ಯೋಜನೆಗಳೇನು?
ನಾನು ಅಧ್ಯಕ್ಷನಾದರೆ ಮುಂದೆ ಮಾಡುವ ಕೆಲಸಗಳು ಪ್ರಮುಖ ಹೆಜ್ಜೆ ಗುರುತುಗಳಾಗುತ್ತವೆ. ಕ್ರಾಂತಿಕಾರಿ ನಿರ್ಧಾರಗಳನ್ನು ಕೈ ಗೊಂಡು ಸಾಹಿತ್ಯ ಪರಿಷತ್ತಿನಲ್ಲಿ ಆಮೂಲಾಗ್ರ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ, 1915ರಲ್ಲಿ ಕಸಾಪ ಸ್ಥಾಪನೆಯಾದಾಗ ಸಿದ್ಧಪಡಿಸಿರುವ ನಿಬಂಧನೆಗಳೇ ಈಗಲೂ ಇದೆ.
ಶತಮಾನದ ಬಳಿಕ ಅಂದಿನ ಹಲವು ನಿಬಂಧನೆಗಳು ಅಗತ್ಯವಿಲ್ಲ. ಅವು ಬದಲಾಗಬೇಕಿದೆ. ಸಾಹಿತ್ಯ ಪರಿಷತ್ ಆರಂಭಿಸುವಾಗ ಇದ್ದ ಹಲವು ಉದ್ದೇಶ ಈಡೇರಿಸಿದೆ. ಈಗ ಸಮಯ ಬದಲಾಗಿದೆ. ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಎಲ್ಲ ವನ್ನು ನೋಡಿಕೊಂಡು ಬದಲಾಯಿಸಬೇಕು ಎನ್ನುವ ಯೋಜನೆಯಿದೆ. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ, ತಜ್ಞರ ಸಮಿತಿ ರಚಿಸಲಾಗುವುದು.
ಸಮಿತಿಯು ಕಸಾಪದ ಬಗ್ಗೆ ಆಳವಾದ ಅಧ್ಯಯನ ಮಾಡಿ, ವರದಿ ಸಲ್ಲಿಸಲಿದ್ದು, ಅದರ ಹೂರಣವನ್ನು ತಗೆದುಕೊಂಡು ಬದಲಾವಣೆ ಮಾಡಲಾಗುವುದು. ಈ ಬದಲಾವಣೆ ಪಾರದರ್ಶಕತೆಯಿಂದ ಇರಬೇಕು ಎನ್ನುವ ಕಾರಣಕ್ಕೆ. ನನ್ನ ಅವಧಿಯಲ್ಲಿ ಕನಿಷ್ಠ ಒಂದು ಕೋಟಿ ಸದಸ್ಯತ್ವ ಮಾಡಿಸಬೇಕು ಎನ್ನುವ ಲೆಕ್ಕಾಚಾರವಿದೆ. ಅದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಿ, ಕಸಾಪದ ಪ್ರತಿಯೊಂದು ವಿಷಯಗಳನ್ನು ಅದೇ ಆಪ್‌ನಲ್ಲಿ ಸಿಗುವಂತೆ ಮಾಡಲಾಗುವುದು. ಸಾಹಿತ್ಯ ಪರಿಷತ್ ಎನ್ನುವುದು ಲಾಭದಾಯಕ ಸಂಸ್ಥೆಯಲ್ಲ. ಆದ್ದರಿಂದ ಲಾಭಕ್ಕಾಗಿ ಆಜೀವ ಸದಸ್ಯತ್ವದ ಹಣವನ್ನು ನೋಡಬಾರದು.
ಯುವಕರಿಗೆ ಯಾವ ರೀತಿ ಪ್ರೋತ್ಸಾಹ ನೀಡಲು ಬಯಸುವಿರಿ?
ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಬಯಸುವೆ. ಕೇವಲ ಯುವಕರು ಮಾತ್ರವಲ್ಲದೆ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು
ಬಯಸುತ್ತೇನೆ. ಈ ಹಿಂದೆ ದೂರದರ್ಶನದಲ್ಲಿಯೂ ಇದೇ ಕೆಲಸ ಮಾಡಿದ್ದೆ. ಅಜ್ಞಾತದಲ್ಲಿರುವವರಿಗೆ ಅಗತ್ಯ ಅವಕಾಶ ನೀಡುತ್ತೇನೆ.
ನಾಡು-ನುಡಿಗೆ ಸಾಹಿತ್ಯ ಪರಿಷತ್ ಧ್ವನಿಯಾಗುತ್ತಿಲ್ಲ ಎನ್ನುವ ಆರೋಪವಿದೆಯಲ್ಲ?
ನಾನು ಅಧ್ಯಕ್ಷನಾದರೆ ಖಂಡಿತವಾಗಿಯೂ ಕನ್ನಡ ನಾಡು-ನುಡಿ-ಜಲ ವಿಷಯದಲ್ಲಿ ಯಾವುದೇ ಸಮಸ್ಯೆ ಬಂದರೂ ಪರಿಷತ್
ಮೊದಲ ಸಾಲಿನಲ್ಲಿ ನಿಂತು ಕೆಲಸ ಮಾಡುತ್ತೇನೆ. ಅನಾವಶ್ಯಕವಾಗಿ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಹಲವು ಕೆಲಸಗಳು ಸರಕಾರದಿಂದಲೇ ಆಗಬೇಕು. ಆದರೆ, ಸರಕಾರದ ನಿಲುವು ಹಾಗೂ ಸಾಹಿತ್ಯ ಪರಿಷತ್ ನಿಲುವಿನಲ್ಲಿ ಭಿನ್ನವಾಗಿದ್ದರೆ, ‘ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹೋರಾಟಗಾರನಾಗಿ ನಿಲ್ಲುತ್ತೇನೆ’. ಅವಶ್ಯಕತೆ ಇದ್ದರೆ ಎಲ್ಲ ಮಾರ್ಗ ಬಳಸಿಕೊಂಡು ಹೋರಾಡು ತ್ತೇವೆ. ಕಾನೂನು ಹೋರಾಟಕ್ಕೂ ಹಿಂಜರಿಯುವುದಿಲ್ಲ.
ರಾಜಕೀಯ ನಂಟಿದೆ ಎನ್ನುವ ಆರೋಪ ಕೇಳಿಬರುತ್ತಿದೆ ಅಲ್ಲ?
ನಾನು ಒಂದು ರಾಜಕೀಯ ಪಕ್ಷದ ಸಹಾಯದೊಂದಿಗೆ ಚುನಾವಣೆಯಲ್ಲಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
ಆದರೆ, ಈ ಹಿಂದೆ ಮಾಧ್ಯಮದಲ್ಲಿ 35 ವರ್ಷವಿದ್ದ ಕಾರಣ, ಮೂರು ಪಕ್ಷದ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿ ದ್ದೇನೆ. ಅಂದ ಮಾತ್ರಕ್ಕೆ ಇಲ್ಲಿಯವರೆಗೆ ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ಆದರೆ, ಮತ ಕೇಳಲು ಎಲ್ಲ ಪಕ್ಷದ
ನಾಯಕರ ಮನೆಗೂ ಹೋಗುತ್ತೇನೆ. ಅಂದ ಮಾತ್ರಕ್ಕೆ ಒಂದು ಪಕ್ಷಕ್ಕೆ ಸೀಮಿತಗೊಳಿಸುವುದು ಸರಿಯಲ್ಲ.
ನಾಡಗೀತೆ ವಿವಾದ ಬಗೆಹರಿಯಬೇಕು
ಪ್ರತಿ ಸಮಸ್ಯೆಗೂ ಪರಿಹಾರವಿದೆ. ಈ ಸಮಸ್ಯೆ ಪರಿಹರಿಸಲು ಸರಕಾರ ಈಗಾಗಲೇ ಮುಂದಾಗಿದೆ. ವೈಯಕ್ತಿಕವಾಗಿ ನನಗೆ ಮೈಸೂರು ಅನಂತಸ್ವಾಮಿ ಹಾಗೂ ಅಶ್ವತ್ಥ್ ಅವರ ಬಗ್ಗೆ ಅಪಾರವಾದ ಗೌರವವಿದೆ. ಒಂದು ವೇಳೆ ಇಬ್ಬರೂ ಇದಿದ್ದರೆ ಈ ವಿವಾದವಾಗಲು ಬಿಡುತ್ತಿರಲಿಲ್ಲ. ಆದರೆ, ಈಗ ವಿವಾದ ಮಾಡುತ್ತಿರುವುದು ಬೆಂಬಲಿಗರು. ಎಲ್ಲರನ್ನು ಒಟ್ಟಿಗೆ ಕರೆದು ಸಾಹಿತ್ಯ ಪರಿಷತ್ ವ್ಯಾಪ್ತಿಯಲ್ಲಿ ಸರಕಾರದೊಂದಿಗೆ ಕೈಜೋಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.
ನನ್ನ ಅವಧಿಯಲ್ಲಿ ಒಂದು ಕೋಟಿ ಸದಸ್ಯತ್ವದ ಗುರಿ
ಸಾಹಿತ್ಯ ಪರಿಷತ್ ಇರುವುದು ಲಾಭ ಮಾಡುವುದಕ್ಕೆ ಅಲ್ಲ.
ಯುವಕರಿಗೆ ಮಾತ್ರವಲ್ಲದೇ, ಅಜ್ಞಾತ ಲೇಖಕರಿಗೂ ವೇದಿಕೆ ಕಲ್ಪಿಸಲಾಗುವುದು
ನಾನು ರಾಜಕೀಯವಾಗಿ ತಟಸ್ಥವಾಗಿದ್ದೇನೆ.
ಆಜೀವ ಶುಲ್ಕ ಸದ್ಯ 500 ರು. ಇದ್ದು, ಕನ್ನಡ ನುಡಿ ಬೇಕಾದರೆ ಹೆಚ್ಚುವರಿ 500 ರು. ಅಂದರೆ ಸಾವಿರ ರು. ಇದೆ. ಇದನ್ನು
250 ರುಪಾಯಿಗೆ ಇಳಿಸಬೇಕು ಹಾಗೂ ಯುವಕರನ್ನು ಸಾಹಿತ್ಯದತ್ತ ಸೆಳೆಯಲು ಯುವಕರಿಗೆ ನೂರು ರು.ಗೆ ಸದಸ್ಯತ್ವ ನೀಡಲು ಚಿಂತನೆ ನಡೆಸಲಾಗುವುದು.
ದೇಶಕ್ಕಾಗಿ ಮನೆ ಮಂದಿಯನ್ನು ಬಿಟ್ಟು ಸೇನೆಗೆ ಹೋಗುವ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಅವರಿಗೆ ಗೌರವ ಸದಸ್ಯತ್ವ ನೀಡಲು ಚಿಂತಿಸಿದ್ದೇನೆ. ಇದೇ ರೀತಿ ದಿವ್ಯಾಂಗರಿಗೂ ಉಚಿತವಾಗಿಯೇ ಸದಸ್ಯತ್ವ ನೀಡಲಾಗುವುದು.
3.10 ಲಕ್ಷ ಮತದಾರರ ಪಟ್ಟಿಯಲ್ಲಿ ಅನೇಕ ಲೋಪದೋಷಗಳಿವೆ. 3.10 ಲಕ್ಷ ಜನರಲ್ಲಿ 2 ರಿಂದ 2.10 ಮತದಾರರು ಸಿಕ್ಕಿದರೆ ನಮ್ಮ ಪುಣ್ಯ. ಇದರೊಂದಿಗೆ ಸುಳ್ಳು ಮತದಾರರು ಸಾಕಷ್ಟಿದ್ದಾರೆ. ಈ ಎಲ್ಲವನ್ನು ಸರಿಪಡಿಸುವ ಕೆಲಸವಾಗಬೇಕಿದೆ.