Wednesday, 11th December 2024

ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಬಿಡೆವು

ಬೇಕಾದಂತೆ ಬರಲು ಅದು ಕಾಲೇಜು, ಮನೆಯಲ್ಲ: ಯಶ್‌ಪಾಲ್
ಸಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಇವರು ಹೀಗಾಡುತ್ತಿದ್ದಾರೆ

ಸಂದರ್ಶನ: ರಂಜಿತ್ ಎಚ್.ಅಶ್ವತ್ಥ

ಇಂದು ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಬಿಟ್ಟರೆ, ನಾಳೆ ಇನ್ನೊಬ್ಬರು ಕಾಲೇಜಿನಲ್ಲಿ ಸಿಗರೇಟ್ ಸೇದುವುದು ನನ್ನ ಹಕ್ಕು ಎನ್ನುತ್ತಾರೆ.

ಅವರ ಧರ್ಮದ ಆಚರಣೆಗಳೆಲ್ಲ ಅವರ ಮನೆಯಲ್ಲಿ ಇರಲಿ. ಕಾಲೇಜು ಎನ್ನುವುದು ಜಾತಿ, ಧರ್ಮವನ್ನು ಮೀರಿರುವ ವಿದ್ಯಾಮಂದಿರ. ಅವರು
ಬೇಕಾ ದಂತೆ ಬರುವುದಕ್ಕೆ ಇದೇನು ಅವರ ಮನೆಯ ಆಸ್ತಿಯಲ್ಲ. ಕಳೆದೊಂದು ತಿಂಗಳಿನಿಂದ ಭಾರಿ ಸದ್ದಾಗಿ ರುವ ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಸದಸ್ಯ ಯಶ್‌ಪಾಲ್ ಸುವರ್ಣ ಅವರ ಖಡಕ್ ಮಾತು.

‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಆರಂಭ, ಇದರಿಂದ ಆಗುತ್ತಿರುವ ಸಮಸ್ಯೆ, ಆರು ವಿದ್ಯಾರ್ಥಿ ನಿಯರ ಹಿಂದಿರುವ ಶಕ್ತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

? ಹಿಜಾಬ್ ವಿವಾದವೇನು?
ಇದು ವಿವಾದವೆಂದು ನಾನು ಹೇಳುವುದಿಲ್ಲ. ಕೆಲ ದೇಶದೋಹ್ರ ಸಂಘಟನೆಗಳ ಕುಮ್ಮಕ್ಕಿನಿಂದ ಕೆಲ ವಿದ್ಯಾರ್ಥಿ ನಿಯರು ಕಾಲೇಜಿನಲ್ಲಿ ಹಿಜಾಬ್ ಹಾಕುವುದಕ್ಕೆ ಅವಕಾಶ ನೀಡಲು ಕೇಳುತ್ತಿದ್ದಾರೆ. ಆದರೆ, ಕಾಲೇಜಿನ ತೀರ್ಮಾನದಂತೆ ವಸ ಸಂಹಿತೆ ಜಾರಿಯಲ್ಲಿದ್ದು, ಅದನ್ನು ಧಿಕ್ಕರಿಸಲು ಯಾರಿಗೂ ಅವಕಾಶವಿಲ್ಲ. ಶಾಲಾ ಆವರಣದಲ್ಲಿ ಅಶಾಂತಿ ಹುಟ್ಟಿಸಬೇಕು, ಮಹಿಳಾ ಕಾಲೇಜಿನಲ್ಲಿ ಹೆಚ್ಚು ಪ್ರತಿರೋಧ ವ್ಯಕ್ತವಾಗುವುದಿಲ್ಲ ಎಂದು ಈ ರೀತಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ.

? ಹಿಜಾಬ್ ಧರಿಸುವುದು ಹಕ್ಕು ಎನ್ನುತ್ತಿದ್ದಾರಲ್ಲ?
ಹಿಜಾಬ್ ಧರಿಸುವುದು ಅವರ ಹಕ್ಕು ಎನ್ನುವುದಾದರೆ, ಕಾಲೇಜಿನ ಕಾನೂನು ಪಾಲಿಸುವುದು ಅವರ ಕರ್ತವ್ಯ. ಖಾಸಗಿ ಕಾಲೇಜನ್ನೂ ನಾಚಿಸುವಂತೆ ಅತ್ಯುತ್ತಮ ಸೌಲಭ್ಯವಿರುವ ಈ ಸರಕಾರಿ ಕಾಲೇಜಿನಲ್ಲಿರುವ ಬಹುತೇಕರು ಬಡ ಅಥವಾ ಮಧ್ಯಮ ವರ್ಗದವರು. ಈ ಆರು ವಿದ್ಯಾರ್ಥಿನಿಯರು ಯಾವು ದೋ ಒಂದು ಅಜೆಂಡಾ ಇಟ್ಟುಕೊಂಡು ‘ಹಕ್ಕು’ ಎನ್ನುವ ಮಾತುಗಳನ್ನು ಆಡಿದರೆ ಅದನ್ನು ನಾವು ಒಪ್ಪುವುದಿಲ್ಲ. ಕಾಲೇಜು ಸರಕಾರದ ಆಸ್ತಿ, ಸಾರ್ವ ಜನಿಕ ಆಸ್ತಿ. ಅದರಲ್ಲಿ ನಮ್ಮ ಮನೆಯ ಆಚರಣೆಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಅವರ ಮನೆಗಳಲ್ಲಿ ಆಚರಣೆಗಳನ್ನು ಮಾಡಿ ಕೊಳ್ಳಲಿ. ಕಾಲೇಜು ಅವರ ಮನೆಯ ಆಸ್ತಿಯಲ್ಲ.

? ಹಿಂದೆ ವಿದ್ಯಾರ್ಥಿನಿಯರು ಹಿಜಾಬ್ ಹಾಕುತ್ತಿರಲಿಲ್ಲವೇ?
ವಸ ಸಂಹಿತೆಯನ್ನು ನಾವೇನು ಈಗ ತಂದಿರುವುದಲ್ಲ. 1985ರಲ್ಲಿ ಕಾಲೇಜು ಆರಂಭವಾದ ದಿನದಿಂದಲೂ ಇದೆ. ಇದೇ ಎಂಟು ವಿದ್ಯಾರ್ಥಿನಿಯರು 2020ರ ಡಿ. 31ರವರೆಗೆ ಹಿಜಾಬ್ ಅನ್ನು ಕಾಲೇಜು ಪ್ರವೇಶಿಸುವ ಮೊದಲು ತಗೆದಿಟ್ಟು ಬರುತ್ತಿದ್ದರು. ಕಾಲೇಜು ಗೇಟು ದಾಟಿದ ಬಳಿಕ ತಗೆಯುತ್ತಿದ್ದರು. ಆದರೀಗ ಏಕಾಏಕಿ ‘ಧರ್ಮದ ಹಕ್ಕು’ ಎಂದು ಹೇಳಿ ಗಲಾಟೆ ಮಾಡುತ್ತಿದ್ದಾರೆ ಎಂದರೆ ಅದರ ಅರ್ಥವೇನು? ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿಯುವುದಕ್ಕೆ ಪ್ರಮುಖ ಕಾರಣ ಸಿಎಫ್ಐ ಸಂಘಟನೆ ಪೋಷಣೆ. ಆ ಸಂಘಟನೆಯ ಪಿತೂರಿಯಿಂದ ಗಲಾಟೆ ಯಾಗುತ್ತಿದೆ. ಕಾಲೇಜಿನಲ್ಲಿ ೯೦೦ ವಿದ್ಯಾರ್ಥಿನಿಯರಿದ್ದು, ಅವರಲ್ಲಿ 80ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಅವರಿಗೆ ಯಾರಿಗೂ ಇಲ್ಲದ ಸಮಸ್ಯೆ ಇವರಿಗೆ ಏಕೆ ಬಂದಿದೆ?

? ಧರ್ಮದ ಆಚರಣೆ ಸಾಂವಿಧಾನಿಕ ಹಕ್ಕು ಅಲ್ಲವೇ?
ಧರ್ಮದ ಆಚರಣೆಗೆ ನಮ್ಮ ವಿರೋಧವಿಲ್ಲ. ಅದಕ್ಕಾಗಿಯೇ ಸ್ಥಳೀಯ ಶಾಸಕರು, ಹಿಜಾಬ್ ಇಲ್ಲದೇ ಬರಲು ಸಾಧ್ಯವಿಲ್ಲ ಎಂದಾದರೆ ಆನ್‌ಲೈನ್ ತರಗತಿ
ಯಲ್ಲಿ ಪಾಠ ಕೇಳುವಂತೆ ಹೇಳಿದರು. ಆದರೆ, ಅದಕ್ಕೂ ಅವರು ಒಪ್ಪುತ್ತಿಲ್ಲ. ಕಾಲೇಜುಗಳು ಎಲ್ಲ ಧರ್ಮವನ್ನು ಮೀರಿರುವ ವಿದ್ಯಾಮಂದಿರಗಳು.
ಒಬ್ಬರಿಗೆ ಒಂದು ಕಾನೂನು ಮಾಡಲು ಸಾಧ್ಯವೇ ಇಲ್ಲ. ಇದು ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆಯೂ ಅಲ್ಲ. ಇಂತಹ ಶಕ್ತಿಗಳನ್ನು ಈಗಲೇ ಮೊಟಕುಗೊಳಿಸದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಆಪತ್ತು ತರುತ್ತವೆ.

? ಹೈಕೋರ್ಟ್‌ನಲ್ಲಿ ಪ್ರಕರಣವಿದೆ, ಈಗ ನಿಮ್ಮ ನಿಲುವು?
ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟ. ಏನೇ ಆದರೂ ಅವರು ಕಾಲೇಜಿನ ವಸ ಸಂಹಿತೆಯನ್ನು ಪಾಲಿಸಲೇಬೇಕು. ಇಲ್ಲದಿದ್ದರೆ ಕಾಲೇಜಿಗೆ ಪ್ರವೇಶ
ನೀಡುವುದಿಲ್ಲ. ಹೈಕೋರ್ಟ್ ಅಲ್ಲ, ಸುಪ್ರೀಂ ಕೋರ್ಟ್‌ಗೆ ಅವರು ಹೋದರು ನಮ್ಮ ನಿಲುವು ಸ್ಪಷ್ಟ. ಇನ್ನು ಕಮ್ಯುನಿಸ್ಟ್ ಆಡಳಿತವಿರುವ ಕೇರಳ ದಲ್ಲಿಯೇ ಹಿಜಾಬ್ ಧರಿಸಿ ತರಗತಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಇದೇ ರೀತಿಯ ತೀರ್ಪನ್ನು ಅಲ್ಲಿನ ಹೈಕೋರ್ಟ್ ಸಹ ನೀಡಿದೆ. ಹೀಗಿರುವಾಗ, ಕರ್ನಾಟಕದಲ್ಲಿ ಏಕೆ ಈ ವಿವಾದ ಮಾಡಬೇಕು?

? ಹಠ ಹಿಡಿದರೆ ಏನು ಮಾಡುವಿರಿ?
ಆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಬೇಡಿ ಎಂದು ಹೇಳಲು ನಾವ್ಯಾರು. ಅವರ ಧರ್ಮದಲ್ಲಿ ಅವಕಾಶವಿದ್ದರೆ ಅವರು ಧರಿಸಲಿ. ಆದರೆ ಕಾಲೇಜಿನಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶವಿಲ್ಲ. ಇದು ನಮ್ಮ ಸ್ಪಷ್ಟ ಮಾತು. ಆರೇಳು ವಿದ್ಯಾರ್ಥಿನಿಯರಿಂದ ಬಾಕಿಯಿರುವ 900 ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ.

***

ನೆರೆರಾಜ್ಯ ಕೇರಳದಲ್ಲಿ ಅವರಿಗೆ ಸಂಘಟನೆ ಯಿಲ್ಲ. ಆದ್ದರಿಂದ ಅಲ್ಲಿ ಹೋರಾಡಲು ಧಮ್ ಇಲ್ಲ. ಆದ್ದರಿಂದ ಉಡುಪಿಯಲ್ಲಿರುವ ಮಹಿಳಾ ಕಾಲೇಜಿ ನಲ್ಲಿ ಈ ರೀತಿಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಪುರುಷರು ಇಲ್ಲದಿದ್ದರೆ ಹೋರಾಡುವುದು ಸುಲಭ ಎಂದು ಕೊಂಡಿದ್ದರು. ಆದರೆ, ಅದಕ್ಕೆ ಶಾಲಾ ಆಡಳಿತ ಮಂಡಳಿ ಅವಕಾಶ ನೀಡುವುದಿಲ್ಲ.
– ಯಶ್‌ಪಾಲ್ ಸುವರ್ಣ, ಉಡುಪಿ ಸರಕಾರಿ ಪದವಿ ಕಾಲೇಜು ಆಡಳಿತ ಮಂಡಳಿ ಸದಸ್ಯ.