ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಸಂದರ್ಶನ: ವೆಂಕಟೇಶ್ ಆರ್.ದಾಸ್, ಮುಖ್ಯ ವರದಿಗಾರರ
ಶತಮಾನದ ಪಿಡುಗು ಕರೋನಾ ಸೋಂಕು ಕಡಿಮೆಯಾಗಿದ್ದರೂ ಮೂರನೇ ಅಲೆ ಭೀತಿ ಜನರನ್ನು ಕಾಡುತ್ತಿದೆ. ಮೂರನೇ ಅಲೆಗೆ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗುತ್ತಾರೆ ಎಂಬ ಅಭಿಪ್ರಾಯವನ್ನು ಕೆಲ ತಜ್ಞರು ವ್ಯಕ್ತಪಡಿಸಿರುವುದು ಇನ್ನೂ ಆತಂಕಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಆರೋಗ್ಯ ಡಾ.ಕೆ.ಸುಧಾಕರ್ ಅವರು ವಿಶ್ವವಾಣಿ ಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.
ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಡುವೆ ಸಮನ್ವಯತೆ ಹೇಗಿದೆ?
ಶಿಕ್ಷಣ ಇಲಾಖೆ ಶಾಲೆ ಆರಂಭಿಸುವ ಮುನ್ನ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿಯಿಂದ ಸಲಹೆಗಳನ್ನು ಪಡೆದಿದೆ. ಶಾಲೆಗಳಲ್ಲಿ ಸ್ವಚ್ಛತೆ, ಮಕ್ಕಳ ಆರೋಗ್ಯ ಮೇಲೆ ನಿಗಾ ಮೊದಲಾದ ನಿಯಮಗಳ ನ್ನೊಳಗೊಂಡ ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿದೆ. ಇದನ್ನು ಪ್ರತಿ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ನಿರ್ವಹಣೆ ಮಾಡುತ್ತಿದೆ. ಇಲಾಖೆಗಳ ನಡುವಿನ ಸಮನ್ವಯತೆಯಲ್ಲಿ ಯಾವುದೇ ಕೊರತೆ ಇಲ್ಲ.
ಮೂರನೇ ಅಲೆ ಭೀತಿಯ ಬಗ್ಗೆ ತಜ್ಞರ ವರದಿ ಏನಿದೆ?
ರಾಜ್ಯದಲ್ಲಿ ಕೋವಿಡ್ 3ನೇ ಅಲೆಗೆ ಸಂಬಂಧಿಸಿದಂತೆ ದೇಶದ ಮೊದಲ ಬಾರಿಗೆ ರಾಜ್ಯ ಸರಕಾರದಿಂದ ಪ್ರತ್ಯೇಕ ಸಮಿತಿ ರಚಿಸಲಾಯಿತು. ಡಾ.ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದ ಈ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಈ ಸಮಿತಿಯ ವರದಿಯಲ್ಲಿ ಮಕ್ಕಳ ಕುರಿತು ಎಚ್ಚರ ವಹಿಸಬೇಕು ಹಾಗೂ ಮಕ್ಕಳಿಗೆ ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. ಜತೆಗೆ ಮೂರನೇ ಅಲೆ ಬಂದರೂ ಸೂಕ್ತ ಚಿಕಿತ್ಸೆ ನೀಡಲು ಹಾಸಿಗೆ, ಆಂಬ್ಯುಲೆ ಮೊದಲಾದ ಮೂಲಸೌಕರ್ಯ ಬಲಪಡಿಸಲು ಶಿಫಾರಸು ಮಾಡಲಾಗಿದೆ.
ಶಿಫಾರಸಿನಲ್ಲಿರುವ ಅಂಶಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದ್ದು, ಅಗತ್ಯ ಕ್ರಮ ವಹಿಸಲಾಗಿದೆ. ಶಾಲೆಗಳ ಆರಂಭದಿಂದ ಏನಾದರೂ ಮೂರನೇ ಅಲೆಯ ಬರಬಹುದೇ?
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲಾಗಿದೆ. ತಜ್ಞರು ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕವಷ್ಟೇ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಗಳಲ್ಲಿ ಆಗನಿಂದ ಶಾಲಾರಂಭಕ್ಕೆ ಅನುಮತಿ ನೀಡಲಾಗಿತ್ತು. ಇದನ್ನು ಹಂತ ಹಂತವಾಗಿ ಆರಂಭಿಸಲಾಗಿದೆ. ಯಾವುದೇ ಪೂರ್ವಾ ಲೋಚನೆ ಇಲ್ಲದೆ ಒಂದೇ ಬಾರಿಗೆ ಶಾಲೆ ಆರಂಭಿಸಿಲ್ಲ. ಪ್ರತಿ ಶಾಲೆಗಳಲ್ಲಿ ಕೋವಿಡ್ ವೈರಾಣು ಹರಡದಂತೆ ಶುಚಿತ್ವ ಕಾರ್ಯ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಶಾಲೆ ಆರಂಭವಾದ ಬಳಿಕ ಎಲ್ಲಿಯೂ ತೀವ್ರವಾದ ಸಮಸ್ಯೆ ಕಂಡುಬಂದಿಲ್ಲ. ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿದ್ದು, ಆ ಕುರಿತು ಕ್ರಮ ವಹಿಸಲಾಗಿತ್ತು. ಸದ್ಯಕ್ಕೆ ಮೂರನೇ ಅಲೆ ಬಂದಿಲ್ಲ. ಆದರೆ ಈ ಬಗ್ಗೆ ಸದಾ ಎಚ್ಚರದ ಕ್ರಮಗಳನ್ನು ಜನರು ವಹಿಸಬೇಕಿದೆ.
ಮಕ್ಕಳಿಗೆ ಲಸಿಕೆ ಒದಗಿಸುವ ಕ್ರಮ ಯಾವ ಹಂತದಲ್ಲಿದೆ?
ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಹಂತದಲ್ಲಿ ಮಕ್ಕಳಿಗೆ ನೀಡಲು ಅನುಮತಿ ದೊರೆತಿದೆ. ಕೇಂದ್ರ ಸರಕಾರ ಹಾಗೂ ಲಸಿಕೆ ತಯಾರಿಕಾ ಕಂಪನಿ ನಡುವೆ ದರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದಾಗ ಕೇಂದ್ರ ಆರೋಗ್ಯ ಸಚಿವ ರೊಂದಿಗೆ ಈ ಕುರಿತು ಚರ್ಚೆ ಮಾಡಲಾಗಿತ್ತು. ಮಕ್ಕಳ ಲಸಿಕೆ ದೊರೆತರೆ ಅಗತ್ಯ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಸಬೇಕು ಎಂದು ಕೇಂದ್ರ ಸರಕಾರಕ್ಕೆ ಕೋರಲಾಗಿದೆ. ಈಗಾಗಲೇ ರಾಜ್ಯದಲ್ಲಿ ವಯಸ್ಕರಿಗೆ ಲಸಿಕೆ ನೀಡುತ್ತಿದ್ದು, ಆರೋಗ್ಯ ಸಿಬ್ಬಂದಿ, ಅಧಿಕಾರಿಗಳಿಗೆ ಲಸಿಕಾ ಅಭಿಯಾನದ ಉತ್ತಮ ಅನುಭವ
ದೊರೆತಿದೆ. ಇದೇ ಅನುಭವದೊಂದಿಗೆ ಮಕ್ಕಳ ಲಸಿಕೆಯನ್ನೂ ವೇಗವಾಗಿ ನೀಡಲಾಗುವುದು.
ಒಂದು ವೇಳೆ ಮೂರನೇ ಅಲೆ ಕಾಣಿಸಿಕೊಂಡರೆ ಇಲಾಖೆ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ?
ಮೂರನೇ ಅಲೆ ಬಂದರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಬಹುದು ಎಂಬ ಅಭಿಪ್ರಾಯವನ್ನು ಕೆಲ ತಜ್ಞರು ವ್ಯಕ್ತಪಡಿಸಿದ್ದರು. ಈ ಕುರಿತು ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ 70-80 ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗಾಗಿ ಮೀಸಲಿಟ್ಟು, ಮಕ್ಕಳ ಚಿಕಿತ್ಸಾ ವಿಭಾಗ ಆರಂಭಿಸಲಾಗಿದೆ.
ಐತಿಹಾಸಕವೆಂಬಂತೆ 4 ಸಾವಿರ ವೈದ್ಯರ ನೇಮಕವಾಗಿದೆ. ಇದರಲ್ಲಿ 153 ಮಕ್ಕಳ ತಜ್ಞರನ್ನೂ ನೇಮಿಸಲಾಗಿದೆ. ಮೊದಲ ಅಲೆಗೂ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 413, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 312 ಸೇರಿ ಒಟ್ಟು 725 ಐಸಿಯು ಹಾಸಿಗೆ ಇತ್ತು. ಮೊದಲ ಅಲೆಯ ವೇಳೆಗೆ ಇದನ್ನು 858ಕ್ಕೆ ಹಾಗೂ ಎರಡನೇ ಅಲೆಯ ವೇಳೆಗೆ 1961 ಕ್ಕೆ ಏರಿಸಲಾಯಿತು. ಈಗ 3877 ಹಾಸಿಗೆ ಲಭ್ಯವಿದೆ.
ಮೊದಲ ಅಲೆಗೂ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 4260, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 587 ಸೇರಿ ಒಟ್ಟು 4847 ಆಕ್ಸಿಜನ್ ಹಾಸಿಗೆ ಇದ್ದವು. ಮೊದಲ ಅಲೆಯ ವೇಳೆಗೆ ಇದನ್ನು 5387ಕ್ಕೆ ಹಾಗೂ ಎರಡನೇ ಅಲೆಯ ವೇಳೆಗೆ 25184ಕ್ಕೆ ಏರಿಸಲಾಯಿತು. ಈಗ 28447 ಹಾಸಿಗೆ ಲಭ್ಯ ವಿದೆ. ಮೊದಲ ಅಲೆಗೂ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 9778, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 31600 ಸೇರಿ ಒಟ್ಟು 41,378 ಹಾಸಿಗೆ ಇದ್ದವು. ಎರಡನೇ ಅಲೆಯ ವೇಳೆಗೆ 45,966ಕ್ಕೆ ಏರಿಸಲಾಯಿತು. ಸದ್ಯ 50,629 ಹಾಸಿಗೆ ಲಭ್ಯವಿದೆ.
ಮೊದಲ ಅಲೆಗೂ ಮುನ್ನ ಆರೋಗ್ಯ ಇಲಾಖೆಯಡಿ 2180 ಆಕ್ಸಿಜನ್ ಸಿಲಿಂಡರ್ ಇದ್ದವು. ಮೊದಲ ಅಲೆಯಲ್ಲಿ 6530, ಎರಡನೇ ಅಲೆಯ ವೇಳೆಗೆ 9928 ಹಾಗೂ ಪ್ರಸ್ತುತ 13588 ಸಿಲಿಂಡರ್ ದೊರಕಿಸಿಕೊಡಲಾಗಿದೆ. ಮೊದಲ ಅಲೆಯ ವೇಳೆಗೆ 585 ಸಾಂದ್ರಕ ಇದ್ದು, ಎರಡನೇ ಅಲೆಯ ವೇಳೆಗೆ 5435, ಪ್ರಸ್ತುತ 6511 ಲಭ್ಯವಾಗಿಸಲಾಗಿದೆ.
ಮೊದಲ ಅಲೆಗೂ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 292 ಟನ್, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 28 ಟನ್ ಸೇರಿ ಒಟ್ಟು 320
ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯವಿತ್ತು. ಮೊದಲ ಅಲೆಯ ವೇಳೆಗೆ ಇದನ್ನು 500 ಟನ್ ಹಾಗೂ ಎರಡನೇ ಅಲೆಯ ವೇಳೆಗೆ 799 ಟನ್ಗೆ ಏರಿಸಲಾಯಿತು. ಆಗ ವೇಳೆಗೆ 1207 ಟನ್ ಸಂಗ್ರಹಣಾ ಸಾಮರ್ಥ್ಯವಿದೆ.
ವಾರಿಯರ್ಸ್ಗಳಿಗೆ ಸರಕಾರದಿಂದ ವಿಮಾ ಪರಿಹಾರ ಬಂದಿಲ್ಲ ಎಂಬ ದೂರುಗಳಿವೆಯಲ್ಲ?
ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸುರಕ್ಷತೆ ನಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಕೇಂದ್ರ ಸರಕಾರವು ಈ ವಿಮಾ ಪಾಲಿಸಿ ಯನ್ನು ಒಂದು ವರ್ಷದ ಅವಧಿಗೆ ನವೀಕರಿಸಿತ್ತು. ಇದರಿಂದಾಗಿ ಕೋವಿಡ್-೧೯ ಸೋಂಕಿತರ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರನ್ನು ಆಶ್ರಯಿಸಿದವರಿಗೆ ಸುರಕ್ಷತೆಯನ್ನು ಒದಗಿಸುವುದನ್ನು ಮುಂದುವರಿಸಲಾಗುತ್ತದೆ.
ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ವಿಮಾ ಯೋಜನೆಯನ್ನು 30.3.2020 ರಿಂದ ಆರಂಭದಲ್ಲಿ 90 ದಿನಗಳ ಅವಧಿಗೆ ಕೋವಿಡ್-19 ರೋಗಿಗಳ ಆರೈಕೆಗಾಗಿ ಇರುವ ಮತ್ತು ಕೋವಿಡ್-19 ರೋಗಿಗಳ ನೇರ ಸಂಪರ್ಕಕ್ಕೆ ಬರಬಹುದಾದ ಮತ್ತು ಅದರಿಂದ ಅಪಾಯಕ್ಕೊಳಗಾಗುವ ಸಂಭವವಿರುವ ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಖಾಸಗಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲ ಆರೋಗ್ಯ ಸೇವೆ ಒದಗಿಸುವವರಿಗೆ ೫೦ ಲಕ್ಷ ರು. ಗಳ ಸಮಗ್ರ ವೈಯಕ್ತಿಕ ಅಪಘಾತ ವಿಮೆವನ್ನು ಒದಗಿಸಿತು.
ಸರಕಾರದಿಂದ ನ್ಯೂ ಇಂಡಿಯಾ ಅಶ್ಯೂರೆ ಕಂಪನಿ (ಎನ್ಐಎಸಿಎಲ) ಯಿಂದ ವಿಮಾ ಪಾಲಿಸಿಯ ಮೂಲಕ ಈ ಯೋಜನೆಯನ್ನು ಜಾರಿ ಗೊಳಿಸ ಲಾಗುತ್ತಿದೆ. ವಿಮಾ ಪಾಲಿಸಿಯನ್ನು ಇಲ್ಲಿಯವರೆಗೆ ಮೂರು ಬಾರಿ ವಿಸ್ತರಿಸಲಾಗಿದೆ. ವಿಮಾ ಹಕ್ಕು ಕೋರಿಕೆಗಳ ಪ್ರಕ್ರಿಯೆ ವಿಳಂಬಗಳನ್ನು ಕಡಿಮೆ ಮಾಡಲು ಮತ್ತು ವಿಮಾ ಹಕ್ಕು ಕೋರಿಕೆಗಳ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮ ಗೊಳಿಸಲು ಮತ್ತು ಸರಳೀಕರಿಸಲು, ಹಕ್ಕು ಕೋರಿಕೆಗಳ ಅನುಮೋದನೆಗಾಗಿ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಅದರ ಪ್ರಕಾರ ರಾಜ್ಯ ಸರಕಾರಗಳು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ಪ್ರತಿ ಪ್ರಕರಣದಲ್ಲೂ ಜಿಲ್ಲಾಧಿಕಾರಿಯು ಹಕ್ಕು ಕೋರಿಕೆ ಯೋಜನೆಯ ಕಾರ್ಯವಿಧಾನಕ್ಕೆ ಅನುಗುಣವಾಗಿದೆ ಎಂದು ಪ್ರಮಾಣೀಕರಿಸುತ್ತಾರೆ. ಜಿಲ್ಲಾಧಿಕಾರಿಯವರ ಈ ಪ್ರಮಾಣಪತ್ರದ ಆಧಾರದ ಮೇಲೆ, ವಿಮಾ ಕಂಪನಿಯು 48 ಗಂಟೆಗಳ ಅವಧಿಯಲ್ಲಿ ಹಕ್ಕುಕೋರಿಕೆಗಳನ್ನು ಅನುಮೋದಿಸುತ್ತದೆ ಮತ್ತು ಇತ್ಯರ್ಥಪಡಿಸುತ್ತದೆ. ಇದಲ್ಲದೆ, ಏಕರೂಪತೆ ಮತ್ತುತ್ವರಿತ ವಿಲೇವಾರಿಗಾಗಿ ಜಿಲ್ಲಾಧಿಕಾರಿಗಳು ತಕ್ಕುದಾದ ಕಾರ್ಯವನ್ನು ಮಾಡುತ್ತಾರೆ ಮತ್ತು ಕೇಂದ್ರ ಸರಕಾರದ ಆಸ್ಪತ್ರೆಗಳು, ಏಮ್ಸ, ರೈಲ್ವೆ ಇತ್ಯಾದಿ ಗಳಲ್ಲೂ ಹಕ್ಕು ಕೋರಿಕೆಗಳನ್ನು ಪ್ರಮಾಣೀಕರಿಸುತ್ತಾರೆ.
ಲಸಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಮುಂದೆ ಲಸಿಕಾಕರಣದ ಗುರಿಗಳೇನು?
ರಾಜ್ಯದಲ್ಲಿ ಲಸಿಕಾ ಅಭಿಯಾನದ ಶ್ರೇಯಸ್ಸು ನಮ್ಮ ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸಲ್ಲುತ್ತದೆ. ಅವರ ನಿರಂತರ
ಪರಿಶ್ರಮದಿಂದಲೇ ಇಷ್ಟು ವೇಗವಾಗಿ, ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಾಗಿದೆ. ದೇಶದಲ್ಲಿ ಕೇವಲ 9 ತಿಂಗಳಲ್ಲಿ 100 ಕೋಟಿ ಲಸಿಕೆ
ನೀಡಲಾಗಿದೆ. ಹಾಗೆಯೇ, ರಾಜ್ಯದಲ್ಲಿ ಜನವರಿ 16 ರಂದು ಲಸಿಕಾ ಅಭಿಯಾನ ಆರಂಭವಾಗಿದ್ದು, 632 ಕೋಟಿ ಲಸಿಕೆ ನೀಡಲಾಗಿದೆ. ಪ್ರತಿ ದಶಲಕ್ಷ
ಜನಸಂಖ್ಯೆಯಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಟಾಪ್ ೫ ರಾಜ್ಯಗಳಲ್ಲಿ ಕರ್ನಾಟಕ ಸ್ಥಾನ ಪಡೆದಿದೆ.
ರಾಜ್ಯದಲ್ಲಿ ದಶಲಕ್ಷ ಅರ್ಹ ಜನಸಂಖ್ಯೆಗೆ 873 ಲಕ್ಷ ಜನರಿಗೆ ಮೊದಲ ಡೋಸ್ ಹಾಗೂ 434 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಪ್ರತಿ
ಬುಧವಾರ ವಿಶೇಷ ಲಸಿಕಾ ಮೇಳ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಂದು ಒಂದೇ ದಿನ 31.75 ಲಕ್ಷ ಲಸಿಕೆ ನೀಡಲಾಗಿತ್ತು. ರಾಜ್ಯದಲ್ಲಿ ಶೇ.85.6 ಜನರಿಗೆ ಮೊದಲ ಡೋಸ್ ಹಾಗೂ ಶೇ.43.8 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಎರಡನೇ ಡೋಸ್ ಪಡೆಯಲು ಜನ ಸ್ವಲ್ಪ ನಿರ್ಲಕ್ಷ್ಯ ತೋರುತ್ತಿದ್ದು, ಜನ ತಪ್ಪದೇ ಸರಿಯಾದ ಸಮಯಕ್ಕೆ ಎರಡನೇ ಡೋಸ್ ಪಡೆಯುವ ಮೂಲಕ ಗರಿಷ್ಠ ರೋಗ ನಿರೋದಕ ಶಕ್ತಿ ಪಡೆಯಬೇಕು. ಇದೇ ವರ್ಷದ ಅಂತ್ಯದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ.
ಲಸಿಕೆ ವಿತರಣೆಯ ಗೊಂದಲಗಳು ನಿವಾರಣೆ ಆಗಿವೆಯೇ?
ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ಅರಿವಿನ ಕೊರತೆಯಿಂದ ಲಸಿಕೆ ಪಡೆಯುತ್ತಿಲ್ಲ. ನಮ್ಮ ಆರೋಗ್ಯ ಸಿಬ್ಬಂದಿ ಅವರಲ್ಲಿ ಜಾಗೃತಿ ಮೂಡಿಸಿ
ಲಸಿಕೆ ನೀಡುತ್ತಿದ್ದಾರೆ. ಲಸಿಕೆ ಅಭಿಯಾನ ಸಂಪೂರ್ಣ ಯಶಸ್ಸು ಜನರ ಸಹಕಾರವನ್ನೂ ಅವಲಂಬಿಸಿದೆ. ಕೇಂದ್ರ ಸರಕಾರದಿಂದ ಕಾಲಕಾಲಕ್ಕೆ ಲಸಿಕೆ
ಪಡೆಯಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಸುಮಾರು 60 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ. ಆರಂಭಿಕ ಹಂತದಲ್ಲಿ ಜನರು ಲಸಿಕೆ ಪಡೆಯಲು ಮುಂದೆ
ಬರುತ್ತಿರಲಿಲ್ಲ. ಪ್ರತಿಪಕ್ಷಗಳು ಲಸಿಕೆ ಬಗ್ಗೆ ಮೂಡಿಸಿದ್ದ ತಪ್ಪು ಭಾವನೆ ಕೂಡ ಇದಕ್ಕೆ ಕಾರಣ. ಆ ಸಮಯದಲ್ಲಿ ಲಸಿಕೆಯ ಬೇಡಿಕೆ, ಪೂರೈಕೆಯಲ್ಲಿ ಸಮಸ್ಯೆ ಕಂಡುಬರುತ್ತಿತ್ತು. ಬಳಿಕ ಲಸಿಕೆ ಉತ್ಪಾದನೆಯೂ ಹೆಚ್ಚಿದೆ. ಹೀಗಾಗಿ ಲಸಿಕೆಗೆ ಯಾವುದೇ ಕೊರತೆ ಇಲ್ಲ. ನ್ಯೂನತೆಗಳು ಕಂಡುಬಂದರೂ ಅದನ್ನು ಸರಿಪಡಿಸಿಕೊಂಡು ಮುಂದುವರಿಯಲಾಗುತ್ತದೆ.