Monday, 25th November 2024

ವಿವಾದದ ಕಿಚ್ಚು ಹೊತ್ತಿಸಿದ ಬಿಜೆಪಿಯ ಫೈರ್‌ ಬ್ರ‍್ಯಾಂಡ್

ದೆಹಲಿ ಬಿಜೆಪಿಯಲ್ಲಿ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದ ನೂಪುರ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅವರನ್ನು ಅಮಾನತು ಮಾಡಿದ್ದು ಪಕ್ಷದ ಎಲ್ಲ ಜವಾಬ್ದಾರಿ ಗಳಿಂದ ಅವರನ್ನು ಮುಕ್ತಗೊಳಿಸಿದೆ.

ಏನಿದು ನೂಪುರ್ ಶರ್ಮಾ ವಿವಾದ?: ಟೆ.ವಿ ಸಂವಾದದಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ವಿರುದ್ಧ ಗುಜರಾತ್ ಹಾಗೂ ಮಹಾರಾಷ್ಟ್ರದ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ ೨೯೮, ೨೯೪, ೧೫೩ಎ ಮತ್ತು ೫೦೫ಬಿ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಇತರ ಅಪರಾಧಗಳ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

ಕಳೆದ ಮೇ ೨೭ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಜ್ಞಾನವಾಪಿ ಮಸೀದಿ ಕುರಿತಾದ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪ್ರವಾದಿ ಮಹಮ್ಮದರ ಕುರಿತು ಅವಹೇಳನಾಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿ
ಸಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು.

ಏನಾಯಿತು ಪರಿಣಾಮ?: ನೂಪುರ್ ಶರ್ಮಾ ಹೇಳಿಕೆ ಕುರಿತಾಗಿ ಅರಬ್ ರಾಷ್ಟ್ರಗಳು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸುತ್ತಿವೆ. ಕತಾರ್ ಮತ್ತು ಕುವೈತ್‌ನ ವಿದೇಶಾಂಗ ಸಚಿವಾಲಯಗಳು ಭಾರತದ ರಾಯಭಾರಿಗಳನ್ನು ಕರೆಸಿ ಖಂಡನಾ ನಿರ್ಣಯದ ಅಧಿಕೃತ ಟಿಪ್ಪಣಿಯನ್ನು ಅವರಿಗೆ ಹಸ್ತಾಂತರಿಸಿವೆ.

ಈ ನಡುವೆ ಭಾರತದ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂಬ ಅಭಿಯಾನವೂ ಅರಬ್ ದೇಶಗಳಲ್ಲಿ ನಡೆದಿದೆ. ಪಾಕಿಸ್ತಾನವೂ ತೀವ್ರ ಟೀಕೆ ವ್ಯಕ್ತಪಡಿಸಿತ್ತಲ್ಲದೇ, ಸೌದಿ ಅರೇಬಿಯಾ, ಬಹರೈನ, ಅರಬ್ ಸಂಯುಕ್ತ ಸಂಸ್ಥಾನ (ಯುಎಇ),
ಇಂಡೊನೇಷ್ಯಾ, ಜೋರ್ಡನ್ ಮತ್ತು ಅಫ್ಘಾನಿಸ್ತಾನ ಕೂಡ ಖಂಡಿಸಿದ್ದವು.ಯಾವುದೇ ಧರ್ಮದ ವ್ಯಕ್ತಿ ಮತ್ತು ಸಂಕೇತಗಳ ವಿರುದ್ಧ ಪೂರ್ವಗ್ರಹ ಮೂಡಿಸುವ ಯಾವುದೇ ಕೃತ್ಯವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು ಎಂದು ಅರಬ್ ಹಾಗೂ ಗಲ್ ದೇಶಗಳು ಪ್ರತಿಕ್ರಿಯಿಸಿದ್ದವು.

ಪಕ್ಷದ ನಿರ್ಧಾರ ಏನು?: ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಪಕ್ಷವು, ನೂಪುರ್ ಅವರು ನಾನಾ ವಿಷಯಗಳ ಬಗ್ಗೆ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪಕ್ಷದ ಶಿಸ್ತು ಸಮಿತಿ ಹೇಳಿದ್ದು ಅವರನ್ನು ಪಕ್ಷದಿಂದ ಅಮಾನತು ಮಾಡಿ, ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿದೆ. ಈ ಬೆಳವಣಿಗೆಯ ನಡುವೆ ಶರ್ಮಾ ಅವರು ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪ್ರವಾದಿ ಕುರಿತು ನೀಡಿದ್ದ ಹೇಳಿಕೆಯನ್ನು ಬೇಷರತ್ತಾಗಿ ವಾಪಸ್ ಪಡೆದಿದ್ದು, ಮಹಾದೇವನ (ಶಿವ) ಬಗ್ಗೆ ಅಗೌರವ ತರುವಂತಹ ಹೇಳಿಕೆ ನೀಡುತ್ತಿರುವವರ ಬಗ್ಗೆ ಖಂಡಿ ಸುವ ಸಂದರ್ಭದಲ್ಲಿ ಈ ಮಾತು ಆಡಿದ್ದಾಗಿ ಹೇಳಿದ್ದಾರೆ.

ಬೆಳೆದು ಬಂದದ್ದು ಹೇಗೆ?: ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆಯುವಾಗಲೇ ಅವರು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ) ಸೇರಿಕೊಂಡಿದ್ದರು. ೨೦೦೮ರಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು.
ರಾಷ್ಟ್ರೀಯವಾದಿ, ಹಿಂದೂ ಸಮಾಜದ ಉಪನ್ಯಾಸಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಕಾನೂನು ಪದವಿ
ಪಡೆದ ಬಳಿಕ ೨೦೧೧ರಲ್ಲಿ ಲಂಡನ್‌ಗೆ ತೆರಳಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಸ್ಟರ್ ಆಫ್ ಲಾ ಪದವಿ ಪಡೆದರು. ನಂತರ ಭಾರತಕ್ಕೆ ಮರಳಿ ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದರು. ಇದೇ ವೇಳೆ ಅವರು ಬಿಜೆಪಿಗೆ ಸೇರಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು.

ರಾಜಕೀಯದ ಹಾದಿ ಏನು?: ಬಿಜೆಪಿಯ ಅರವಿಂದ್ ಪ್ರಧಾನ್, ಅರುಣ್ ಜೇಟ್ಲಿ, ಅಮಿತ್ ಶಾ, ಹರ್ಷವರ್ಧನ, ಮನೋಜ್
ತಿವಾರಿ ಸೇರಿದಂತೆ ಪ್ರಮುಖ ನಾಯಕರ ಜತೆಯಲ್ಲಿ ನೂಪುರ್ ಕೆಲಸ ಮಾಡಿದವರು. ೨೦೧೫ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಎಎಪಿ ಪಕ್ಷದ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಅವಕಾಶ ದೊರೆಯಿತು. ಆದರೆ ಈ ಚುನಾವಣೆಯಲ್ಲಿ ಅವರು ೩೧,೦೦೦ ಮತಗಳಿಂದ ಸೋತರು.

ಬಳಿಕ ಅವರು ದೆಹಲಿ ಘಟಕದ ಬಿಜೆಪಿಯಲ್ಲಿ ವಿವಿಧ ಸ್ಥಾನಗಳನ್ನು ಪಡೆದು ಕೆಲಸ ಮಾಡಿದರು. ೨೦೨೦ರಲ್ಲಿ ಅವರನ್ನು ರಾಷ್ಟ್ರೀಯ ವಕ್ತಾರೆಯನ್ನಾಗಿ ಮಾಡಲಾಯಿತು. ವಿವಿಧ ಕಾರ್ಯಕ್ರಮಗಳು, ಪಕ್ಷದ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಟಿ.ವಿ. ಚರ್ಚೆಗಳಲ್ಲಿ ಭಾಗವಹಿಸಿ ಅವರು ಪಕ್ಷದ ಪರವಾಗಿ ಮಾತನಾಡುತ್ತಿದ್ದರು. ಕಾನೂನಿನ ಜ್ಞಾನ, ರಾಷ್ಟ್ರೀಯ ವಿಷಯಗಳ ಅರಿವು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳ ಮೇಲಿನ ಹಿಡಿತದ ಕಾರಣ ಅವರಿಗೆ ಬಿಜೆಪಿಯಲ್ಲಿ ಹೆಚ್ಚಿನ ಅವಕಾಶಗಳು ದೊರೆತವು. ಅವರು ಹಲವಾರು ಸಲ ವಿವಾದಗಳಿಗೆ ಗುರಿಯಾಗಿದ್ದರು.

ಯಾರು ನೂಪುರ್ ಶರ್ಮಾ?
ನೂರ್ಪು ಶರ್ಮಾ ಅವರು ಮೂಲತಃ ದೆಹಲಿಯವರು. ೧೯೮೫ರಲ್ಲಿ ಜನಿಸಿದ ನೂರ್ಪು ಕಾನೂನು ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದು ಬಿಜೆಪಿಯಲ್ಲಿ ಕೆಲಸ ಮಾಡುತ್ತಿzರೆ. ಹಾಗೇ ಸಾಮಾಜಿಕ ಕೆಲಸಗಳ ಮೂಲಕವು ಅವರು ದೇಶದ ಗಮನ ಸೆಳೆದಿದ್ದಾರೆ. ನೂಪುರ್ ಶರ್ಮಾ ಕುಟುಂಬದವರು ಅವರನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅವರು ವಕೀಲೆಯಾಗಿ ರಾಜಕೀಯ ಪಕ್ಷ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ನೂಪುರ್
ಸಹೋದರರು ಹಾಗೂ ಸಹೋದರಿಯರು ನಾಗರೀಕ  ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.