Sunday, 24th November 2024

ಪ್ರಧಾನಮಂತ್ರಿ ಕಾರಿಗೆ ಬ್ರೇಕ್‌ ಹಾಕಿದ ಆ ಕ್ಷಣ…

ಶಂಕರ್‌ ಬಿದರಿ

ಸತ್ಯಮೇವ ಜಯತೇ – ಭಾಗ ೩೦

ನಂದಿ ಬೆಟ್ಟದ ಕಬ್ಬನ್ ಹೌಸ್ ಅತಿಥಿಗೃಹದಲ್ಲಿ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಲು ರಾಜೀವ ಗಾಂಽಯವರು ಹೊಸದಾಗಿ ಬಂದಿದ್ದ ‘ಪಜೆರೊ’ ಕಾರಿನಲ್ಲಿ ಸೋನಿಯಾ ಗಾಂಧಿಯವರೊಂದಿಗೆ ಹೊರಟರು. ಕಾರನ್ನು ಅವರೇ ಓಡಿಸುತ್ತಿದ್ದರು. ನಂದಿ ಬೆಟ್ಟದ ತಿರುವುಗಳು ಬಹಳ ಕಡಿದಾಗಿರುವ ಕಾರಣ, 60 ಕಿ. ಮೀ.ಗಿಂತ ಹೆಚ್ಚು ವೇಗದಲ್ಲಿ ಓಡಿಸದಂತೆ ನೋಡಿಕೊಳ್ಳಬೇಕಿತ್ತು. ಬೇರೆ ದಾರಿಯಿಲ್ಲದೇ ಪ್ರಧಾನಿಯವರೂ ತಮ್ಮ ಕಾರಿನ ವೇಗವನ್ನು 60 ಕಿ.ಮೀ. ಗೇ ಇಳಿಸಿದರು.

1986ರಲ್ಲಿ ಭಾರತ ಸರಕಾರವು ನಿವೃತ್ತ ಸೇನಾ ದಂಡನಾಯಕರಾಗಿದ್ದ ಕೆ.ಎನ್. ಕಾರ್ಯಪ್ಪ ಅವರಿಗೆ ‘ಫೀಲ್ಡ್ ಮಾರ್ಷಲ್’ (ಮಹಾದಂಡನಾಯಕ) ಎಂಬ ಪದವಿ ನೀಡಿ ಸನ್ಮಾನಿಸಿತು. ಸ್ವತಂತ್ರ ದೇಶದ ಇತಿಹಾಸದಲ್ಲಿ ಈ ಮೊದಲು ಭಾರತ-ಬಾಂಗ್ಲಾ ದೇಶ ಯುದ್ಧದ ವಿಜಯದ ರೂವಾರಿಯಾಗಿದ್ದ ಸೇನಾ ದಂಡನಾಯಕರಾಗಿದ್ದ ಮಾಣಿಕ್ ಷಾ ಅವರಿಗೆ ಈ ಪದವಿ ನೀಡಿ ಗೌರವಿಸಲಾಗಿತ್ತು. ಕಾರ್ಯಪ್ಪನವರು ಈ ಪದವಿಗೆ ಪಾತ್ರರಾದ ಎರಡನೆಯ ಸೇನಾ ದಂಡನಾಯಕರಾಗಿದ್ದರು.

ಕಾರ್ಯಪ್ಪನವರ ಬಗ್ಗೆ ಓದಿ ತಿಳಿದಿದ್ದ ನನಗೆ ವಿಶೇಷವಾದ ಅಭಿಮಾನ, ಪ್ರೀತಿ ಮತ್ತು ಗೌರವವಿತ್ತು. ಅವರ ಶಿಸ್ತು, ಪ್ರಾಮಾಣಿಕ ವ್ಯಕ್ತಿತ್ವ, ಧೈರ್ಯ, ಸಾಹಸ ಮತ್ತು ದೇಶಭಕ್ತಿ ಯನ್ನು ನಾನು ಅಪಾರವಾಗಿ ಮೆಚ್ಚಿದ್ದೆನು. ನಾನು ಅವರ ಕಟ್ಟಾ ಅಭಿಮಾನಿ ಯಾಗಿದ್ದೆ. ಅವರಿಗೆ ‘ಫೀಲ್ಡ್ ಮಾರ್ಷಲ್’ ಪದವಿಯನ್ನು ನೀಡಿದಾಗ ನನಗೆ ಅಪಾರವಾದ ಸಂತೋಷವಾಗಿತ್ತು. ಅಂತಹ ಸೂರ್ತಿದಾಯಕ ವ್ಯಕ್ತಿ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯವಾಗಿತ್ತು.

ಅವರನ್ನು ಚಿತ್ರದುರ್ಗಕ್ಕೆ ಕರೆಸಿ ಸಾರ್ವಜನಿಕವಾಗಿ ಬೃಹತ್ ಸಮಾರಂಭ ಏರ್ಪಡಿಸಿ ಅವರಿಗೆ ಗೌರವಿಸಬೇಕು ಎಂದು ನನ್ನ ಉತ್ಕಟ ಇಚ್ಛೆಯಾಗಿತ್ತು. ಈ ವಿಚಾರವನ್ನು ನಾನು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಚಿತ್ರದುರ್ಗದ ಸರ್ವಪಕ್ಷಗಳ ಮುಖಂಡ ರನ್ನು ಒಳಗೊಂಡ ‘ಫೀಲ್ಡ್ ಮಾರ್ಷಲ್ ಕೆ.ಎನ್. ಕಾರ್ಯಪ್ಪ ಅಭಿನಂದನಾ ಸಮಿತಿ’ಯನ್ನು ರಚಿಸಿದೆವು.

ಸಭೆಯ ನಿರ್ಣಯದಂತೆ ನಾನು ಸೆಪ್ಟೆಂಬರ್ ೩೦ಕ್ಕೆ ಬೆಂಗಳೂರಿಗೆ ಹೋಗಿ ಸೇನಾ ಪಡೆಯ ಅತಿಥಿಗೃಹ ‘ದ್ರೋಣ’ದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರನ್ನು ಭೇಟಿ ಮಾಡಿ ಅವರಿಗೆ ಚಿತ್ರದುರ್ಗದಲ್ಲಿ ನಡೆದ ಸಮಿತಿ ಸಭೆಯ ನಿರ್ಣಯ ಜಿಲ್ಲೆಗೆ ಬರಬೇಕು ಎಂದು ವಿನಂತಿಸಿಕೊಂಡೆ. ಅವರು ಸಂತೋಷದಿಂದ ಒಪ್ಪಿ ೧೯೮೬ರ ಅಕ್ಟೋಬರ್ ೪ರಂದು ಚಿತ್ರದುರ್ಗಕ್ಕೆ ಬರುವುದಾಗಿ ತಿಳಿಸಿದರು. ಅದರಂತೆಯೇ ನಾವು ಅಂದು ಸಾಯಂಕಾಲ ೬ ಗಂಟೆಗೆ ಸನ್ಮಾನ ಸಮಾರಂಭವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿ ದೆವು.

ಸಮಾರಂಭದ ದಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಚಿತ್ರದುರ್ಗಕ್ಕೆ ರಸ್ತೆ ಮಾರ್ಗವಾಗಿ ಆಗಮಿಸಿದರು. ಅವರ ಪದವಿಗೆ ಸೂಕ್ತವಾದ ಗೌರವಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ ಗಡಿಯಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ಬಂದೆವು. ಅತಿಥಿಗೃಹದ ಮುಂಭಾಗದಲ್ಲಿ ಅವರಿಗೆ ಜಿಲ್ಲಾ ಪೊಲೀಸ್ ಪಡೆಯ ವತಿಯಿಂದ ಗೌರವರಕ್ಷೆ ನೀಡಲಾಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನವರು ಗೌರವರಕ್ಷೆ ಸ್ವೀಕರಿಸಿದ ನಂತರ ನೆರೆದಿದ್ದ ಅಪಾರ ಜನಸ್ತೋಮದಲ್ಲಿದ್ದ ಮಕ್ಕಳೆಲ್ಲರಿಗೂ ತಾವು ತಂದಿದ್ದ ಚಾಕೊಲೇಟ್‌ ಗಳನ್ನು ಪ್ರೀತಿಯಿಂದ ವಿತರಿಸಿದರು.

ಅವರು ಮಧ್ಯಾಹ್ನದ ಭೋಜನ ಮತ್ತು ವಿಶ್ರಾಂತಿ ತೆಗೆದುಕೊಂಡ ಮೇಲೆ ಸಾಯಂಕಾಲ ೫ ಗಂಟೆಗೆ ಅತಿಥಿಗೃಹಕ್ಕೆ ನಿಜಲಿಂಗಪ್ಪ ನವರು ಬಂದರು. ಅವರೊಂದಿಗೆ ಸುಮಾರು ೪೫ ನಿಮಿಷ ಚರ್ಚೆ ನಡೆಸಿದರು. ೫.೪೫ಕ್ಕೆ ಕಾರ್ಯಪ್ಪನವರು ಗೌರವರಕ್ಷೆಯನ್ನು
ಸ್ವೀಕರಿಸಿದರು. ನಂತರ ನಾನು ಅವರನ್ನು ತೆರೆದ ಜೀಪಿನಲ್ಲಿ ಸರಕಾರಿ ಅತಿಥಿಗೃಹದಿಂದ ಮುನ್ಸಿಪಲ್ ಹೈಸ್ಕೂಲ್ ಮೈದಾನ ದವರೆಗೆ ಮೆರವಣಿಗೆಯಲ್ಲಿ ಕರೆದೊಯ್ದೆನು. ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದ ಮೈದಾನದಲ್ಲಿ ಪ್ರಾರ್ಥನೆ ಯೊಂದಿಗೆ ಸನ್ಮಾನ ಸಮಾರಂಭ ಪ್ರಾರಂಭವಾಯಿತು.

ನಿಜಲಿಂಗಪ್ಪನವರು ದೇಶಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಸಲ್ಲಿಸಿದ ಅನುಪಮ ಸೇವೆ, ಅದರ ಆದರ್ಶ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಾರ್ಯಪ್ಪನವರು ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ‘ಜನಸಾಮಾನ್ಯರು, ಯುವಕರು ದೇಶಭಕ್ತಿ, ಪ್ರಾಮಾಣಿಕತೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಸಮಿತಿಯ ವತಿಯಿಂದ
ಭುವನೇಶ್ವರಿಯ ಮೂರ್ತಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಅರ್ಪಿಸಿ ಗೌರವಿಸಲಾಯಿತು.

ಸುಮಾರು ರಾತ್ರಿ ೯ ಗಂಟೆ. ನಡೆದ ಸಭೆ ಮುಗಿದ ಮೇಲೆ, ಕಾರ್ಯಪ್ಪನವರನ್ನು ರಾತ್ರಿ ವಾಸ್ತವ್ಯಕ್ಕಾಗಿ ಜೋಗಿಮಟ್ಟಿ ಅರಣ್ಯ ಅತಿಥಿಗೃಹಕ್ಕೆ ಕರೆದು ಕೊಂಡು ಹೋದೆವು. ಅವರ ಆಮಂತ್ರಣದ ಮೇರೆಗೆ ನಾನೂ ಅವರೊಂದಿಗೆ ರಾತ್ರಿ ಭೋಜನ ಮಾಡಿದೆನು. ಇದನ್ನು ನಾನು ನನ್ನ ಸುದೈವ ಎಂದು ಭಾವಿಸುತ್ತೇನೆ.

ಡಿಜಿಪಿ ಗರುಡಾಚಾರ್ ಸೇವಾ ನಿವೃತ್ತಿ: ೧೯೮೦ರಿಂದಲೂ ನನ್ನ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ವ್ಯಕ್ತಪಡಿಸಿ ಪ್ರತಿ ಹಂತ ದಲ್ಲಿಯೂ ನನಗೆ ಮಾರ್ಗದರ್ಶನ ಮಾಡಿದ್ದ ರಾಜ್ಯದ ಡಿಜಿಪಿಯವರಾಗಿದ್ದ ಬಿ.ಎನ್.ಗರುಡಾಚಾರ್ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡರು. ಅವರ ಸೇವಾ ನಿವೃತ್ತಿಗೆ ಇನ್ನೂ ಆರು ತಿಂಗಳು ಬಾಕಿ ಇದ್ದರೂ ಮುಂಚಿತವಾಗಿಯೇ ಅವರು ಡಿಜಿಪಿ ಹುದ್ದೆಯಿಂದ ನಿವೃತ್ತರಾಗಿ ಹೊಸ ಹುದ್ದೆಯ ಪ್ರಭಾರ ವಹಿಸಿಕೊಳ್ಳುವವರಿದ್ದರು.

೧೯೮೬ರ ಅಕ್ಟೋಬರ್ ೪ರ ಸಾಯಂಕಾಲ ಡಿಜಿಪಿ ಹುದ್ದೆಯ ಪ್ರಭಾರವನ್ನು ಅವರ ಉತ್ತರಾಧಿಕಾರಿ ಎ.ಆರ್. ನಿಜಾಮುದ್ದೀನ್ ಅವರಿಗೆ ವಹಿಸಿಕೊಡುವ ಕಾರ್ಯಕ್ರಮ ನಿಗದಿಯಾಗಿತ್ತು. ನನ್ನ ಮೇಲೆ ಮತ್ತು ನಮ್ಮ ಜಿಲ್ಲೆಯ ಮೇಲೆ ಗರುಡಾಚಾರ್ ಅವರು ತೋರಿಸಿದ ವಿಶೇಷ ಪ್ರೀತಿ ಮತ್ತು ಅಭಿಮಾನದ ದ್ಯೋತಕವಾಗಿ, ನಮ್ಮ ಜಿಲ್ಲೆಗೆ ಬಂದು ಬೀಳ್ಕೊಡುಗೆ ಸ್ವೀಕರಿಸಬೇಕು ಎಂದು ವಿನಂತಿಸಿಕೊಂಡೆನು. ಬೇರೆ ಯಾವುದೇ ಜಿಲ್ಲೆಗೆ ಹೋಗಲು ಅವರು ಒಪ್ಪಿರಲಿಲ್ಲ. ಆದರೆ ನನ್ನ ಮೇಲೆ ಪ್ರೀತಿಯಿಟ್ಟು ಒಪ್ಪಿ ಕೊಂಡರು.

ಅಕ್ಟೋಬರ್ ನಾಲ್ಕರಂದು ಬೆಳಗ್ಗೆ ಬೇಗನೆ ಹೊರಟು ಚಿತ್ರದುರ್ಗಕ್ಕೆ ಬೆಳಗ್ಗೆ ಒಂಬತ್ತು ಗಂಟೆಗೆ ತಲುಪಿದರು. ಮೊದಲೇ ನಿಗದಿ ಯಾಗಿದ್ದಂತೆ ಒಂಬತ್ತೂವರೆಗೆ ಬೀಳ್ಕೊಡುವ ಸಮಾರಂಭ ರೋಟರಿ ಬಾಲಭವನದಲ್ಲಿ ಪ್ರಾರಂಭವಾಯಿತು. ಜಿಲ್ಲೆಯ ಎಲ್ಲಾ ಅಽಕಾರಿಗಳು ವಿಶೇಷ ಸಮವಸ ಧರಿಸಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದ ನಂತರ ಹನ್ನೊಂದು ಗಂಟೆಗೆ
ಅವರು ಬೆಂಗಳೂರಿಗೆ ನಿರ್ಗಮಿಸಿದರು.

ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ, ಪ್ರಧಾನಿಗೆ ಭದ್ರತಾಧಿಕಾರಿ: ೧೯೮೬ರ ನವೆಂಬರ್ ೧೬ ಮತ್ತು ೧೭ರಂದು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ-ಸಾರ್ಕ್-ದೇಶಗಳ ಎರಡನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಈ ಸಮ್ಮೇಳನ ದಲ್ಲಿ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನ ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು.

೧೯೮೪ರಲ್ಲಿ ನಡೆದ ಇಂದಿರಾ ಗಾಂಧಿಯವರ ಹತ್ಯೆ, ಪಂಜಾಬ್ ನಲ್ಲಿ ನಡೆಯುತ್ತಿದ್ದ ಆತಂಕವಾದಿ ಕೃತ್ಯಗಳು ಮತ್ತು ಶ್ರೀಲಂಕಾ ದಲ್ಲಿ ಅಲ್ಲಿನ ಸರಕಾರ ಮತ್ತು ತಮಿಳರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ರಾಜೀವ ಗಾಂಧಿಯವರಿಗೆ ತೀವ್ರವಾದ ಜೀವ ಬೆದರಿಕೆ ಇತ್ತು.

ಆದ್ದರಿಂದ ಅವರಿಗೆ ವಿಶೇಷವಾದ ಮತ್ತು ಕಟ್ಟುನಿಟ್ಟಾದ ರಕ್ಷಣಾ ವ್ಯವಸ್ಥೆ ಮಾಡುವ ಅವಶ್ಯಕತೆ ಇತ್ತು. ಬೆಂಗಳೂರಿನಲ್ಲಿ ಎಸ್.ಪಿ. ದರ್ಜೆಯ ಹಲವಾರು ಅಧಿಕಾರಿಗಳು ಲಭ್ಯವಿದ್ದರೂ, ನನ್ನ ಕಾರ್ಯದಕ್ಷತೆಯ ಬಗ್ಗೆ ವಿಶ್ವಾಸವಿಟ್ಟು ಆಗಿನ ಡಿಜಿಪಿ ಯವರಾಗಿದ್ದ ಗರುಡಾಚಾರ್ ಅವರು ಚಿತ್ರದುರ್ಗದಲ್ಲಿದ್ದ ನನ್ನನ್ನು ರಾಜೀವ್ ಗಾಂಧಿ ಅವರ ಭದ್ರತಾಧಿಕಾರಿ ಕರ್ತವ್ಯಕ್ಕೆ ಆಯ್ಕೆ ಮಾಡಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಮಂತ್ರಿಗಳ ಸುರಕ್ಷೆಯ ಹೊಣೆಗಾರಿಕೆ ನನ್ನ ಪಾಲಿಗೆ ಬಂದದ್ದು ಸುದೈವ ಎಂದು ಭಾವಿಸಿ ಈ ಕರ್ತವ್ಯ ನಿರ್ವಹಣೆಗೆ ಬೆಂಗಳೂರಿಗೆ ತೆರಳಿದೆನು.

ನಾನು ಈ ವಿಶೇಷ ಕರ್ತವ್ಯಕ್ಕೆ ಆಗ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪಿ.ಜಿ. ಹಲರಂಕರ್ ಅವರಲ್ಲಿ ವರದಿ ಮಾಡಿಕೊಂಡೆನು. ಒಂದು ವಾರ ನಮಗೆ ಪ್ರಧಾನಿಯವರ ರಕ್ಷಣಾ ಕರ್ತವ್ಯ ನಿರ್ವಹಣೆಯ ಕುರಿತು ವಿಶೇಷ ತರಬೇತಿಯನ್ನು ನೀಡಲಾಯಿತು. ನಮಗೆ ವಿಶೇಷವಾಗಿ ರಿವಾಲ್ವರ್ ಶೂಟಿಂಗ್ ಬಗ್ಗೆ ತರಬೇತಿ ನೀಡಲಾಯಿತು. ರಕ್ಷಣಾ ಕರ್ತವ್ಯದ ಬಗ್ಗೆ ನಾವು ಹಲವಾರು ಗಂಟೆಗಳ ಕಾಲ ಪೂರ್ವಾಭ್ಯಾಸವನ್ನು ಮಾಡಿದ್ದೆವು. ಈ ಕರ್ತವ್ಯವನ್ನು ನಾವು ನಾಗರಿಕ ವೇಷದಲ್ಲಿ ನಿರ್ವಹಿಸಬೇಕಾ
ಗಿದ್ದುದರಿಂದ ಸರಕಾರದ ವತಿಯಿಂದ ನಮಗೆ ಉತ್ತಮ ಗುಣಮಟ್ಟದ ಬಟ್ಟೆಯಿಂದ ಒಂದು ಜತೆ ಸೂಟ್  ಹೊಲಿಸಿಕೊಡ ಲಾಯಿತು.

ಸಾರ್ಕ್ ಸಮ್ಮೇಳನಕ್ಕೆ ಬರುವ ವಿವಿಧ ದೇಶಗಳ ಮುಖ್ಯಸ್ಥರಿಗೆ ಬೆಂಗಳೂರಿನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ‘ವಿಂಡ್ಸರ್
ಮ್ಯಾನರ್’ ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾಧಿಕಾರಿಯಾಗಿದ್ದ ನನಗೂ ಅದೇ ಹೋಟೆಲ್‌ನಲ್ಲಿ ಅವರ
ಕೋಣೆಯ ಸಮೀಪದ ಒಂದು ಕೋಣೆಯನ್ನು ನೀಡಲಾಗಿತ್ತು. ಸಾರ್ಕ್ ಶೃಂಗವು ೧೬ರಂದು ವಿಧಾನಸೌಧದ ಸಮ್ಮೇಳನ
ಸಭಾಂಗಣದಲ್ಲಿ ಪ್ರಾರಂಭವಾಯಿತು. ಸಾರ್ಕ್ ಸದಸ್ಯ ರಾಷ್ಟ್ರಗಳ ಎಲ್ಲಾ ಮುಖ್ಯಸ್ಥರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು. ಆಗ
ವಿದೇಶಾಂಗ ಸಚಿವರಾಗಿದ್ದ ಪಿ.ವಿ.ನರಸಿಂಹ ರಾವ್, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ಭಾರತದ ಮತ್ತು ಸದಸ್ಯ ರಾಷ್ಟ್ರಗಳ ವಿದೇಶಾಂಗ ಖಾತೆಗಳ ಉನ್ನತ ಅಧಿಕಾರಿಗಳು ಶೃಂಗದಲ್ಲಿ ಭಾಗವಹಿಸಿದ್ದರು.

ನಂದಿಬೆಟ್ಟಕ್ಕೆ ಸೆಲ್ ಡ್ರೈವ್ ಮಾಡಿದ್ದ ರಾಜೀವ್: ೧೭ರಂದು ಸಾರ್ಕ್ ದೇಶಗಳ ಮುಖ್ಯಸ್ಥರು ತಮ್ಮ ಕುಟುಂಬದವರೊಂದಿಗೆ ಬೆಂಗಳೂರಿನಿಂದ ಸುಮಾರು ೫೦ಕಿ.ಮೀ. ದೂರದಲ್ಲಿರುವ ನಂದಿ ಬೆಟ್ಟದ ಕಬ್ಬನ್ ಹೌಸ್ ಅತಿಥಿಗೃಹದಲ್ಲಿ ಅನೌಪಚಾರಿಕ
ಸಭೆ ಮತ್ತು ಮಧ್ಯಾಹ್ನದ ಭೋಜನ ಕೂಟದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ರಾಜೀವ ಗಾಂಧಿ ಯವರು ಆಗ ಹೊಸದಾಗಿ ಬಂದಿದ್ದ ‘ಪಜೆರೊ’ ಕಾರಿನಲ್ಲಿ ಸೋನಿಯಾ ಗಾಂಧಿಯವರೊಂದಿಗೆ ಹೊರಟರು.

ಕಾರನ್ನು ಅವರೇ ಓಡಿಸುತ್ತಿದ್ದರು. ನಂದಿ ಬೆಟ್ಟದ ತಿರುವುಗಳು ಬಹಳ ಕಡಿದಾಗಿರುವ ಕಾರಣ, ಯಾವುದೇ ಕಾರಣಕ್ಕೂ ರಾಜೀವ ಗಾಂಧಿಯವರು ತಮ್ಮ ಕಾರನ್ನು ೬೦ ಕಿ. ಮೀ.ಗಿಂತ ಹೆಚ್ಚು ವೇಗದಲ್ಲಿ ಓಡಿಸದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್
ಆಯುಕ್ತರಾಗಿದ್ದ ಹಲರಂಕರ್ ಅವರು ನಮಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಬೆಟ್ಟವನ್ನು ಹತ್ತುವ ವೇಳೆಯೂ ರಾಜೀವ ಗಾಂಧಿಯವರು ಕಾರನ್ನು ೯೦ ಕಿ.ಮೀ. ವೇಗದಲ್ಲಿ ಓಡಿಸುತ್ತಿದ್ದರು. ಇದರಿಂದ ವಿಚಲಿತನಾದ ನಾನು ಪ್ರಧಾನಿಯವರ ಕಾರಿನ ಮುಂದೆ ಇದ್ದ ಪೈಲಟ್ ಕಾರಿಗೆ ‘ಕಬ್ಬನ್ ಹೌಸ್ ಮುಟ್ಟುವವರೆಗೂ ಕಾರು ಯಾವುದೇ ಕಾರಣಕ್ಕೂ ೬೦ ಕಿ.ಮೀ. ವೇಗಮಿತಿಯನ್ನು ದಾಟಬಾರದು’ ಎಂದು ಕಟ್ಟುನಿಟ್ಟಾಗಿ ಸೂಚಿಸಿದೆನು.

ಪ್ರಧಾನಿಯವರ ಕಾರಿನಲ್ಲಿದ್ದ ಅವರ ಆಪ್ತ ಭದ್ರತಾಧಿಕಾರಿ ಎಸ್‌ಪಿಜಿಯ ರಾಜೀವ ಸಾಹಿಯವರು, ಪೈಲಟ್ ಕಾರಿನವರಿಗೆ
ವೇಗವಾಗಿ ಸಾಗಲು ತಿಳಿಸಿ ಎಂದು ನನಗೆ ಹೇಳಿದರು. ಆಗ ನಾನು, ‘ನಮ್ಮ ಪೊಲೀಸ್ ಆಯುಕ್ತರು ಯಾವುದೇ ಕಾರಣಕ್ಕೂ ಪ್ರಧಾನಿಯವರ ಕಾರು ೬೦ ಕಿ.ಮೀ.ಗಿಂತ ಹೆಚ್ಚಿನ ವೇಗ ಮಿತಿಯಲ್ಲಿ ಸಾಗಬಾರದು ಎಂದು ಸೂಚಿಸಿದ್ದಾರೆ. ಆದ್ದರಿಂದ ಪೈಲಟ್
ಕಾರಿನವರು ೬೦ ಕಿ.ಮೀ. ವೇಗಮಿತಿಯಲ್ಲಿ ಸಾಗುತ್ತಾರೆ’ ಎಂದು ತಿಳಿಸಿದೆ. ಈ ವಿಷಯವನ್ನು ಪ್ರಧಾನಿಯವರಿಗೆ ತಿಳಿಸಿದರು. ಬೇರೆ ಉಪಾಯವಿಲ್ಲದೆ ಪ್ರಧಾನಿಯವರೂ ತಮ್ಮ ಕಾರಿನ ವೇಗವನ್ನು ೬೦ ಕಿ.ಮೀ.ಗೇ ಇಳಿಸಿದರು.

ನಂದಿ ಬೆಟ್ಟದ ಕಬ್ಬನ್ ಹೌಸ್‌ನಲ್ಲಿ ಅನೌಪಚಾರಿಕ ಸಭೆಯು ಸುಗಮವಾಗಿ ನಡೆಯಿತು. ನಂತರ ರಾಜೀವ ಗಾಂಧಿಯವರು ಬೆಂಗಳೂರಿಗೆ ಬಂದು ದೆಹಲಿಗೆ ಹೊರಡಲು ವಿಮಾನ ನಿಲ್ದಾಣಕ್ಕೆ ಬಂದರು. ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಅಧ್ಯಕ್ಷರಾಗಿದ್ದ ಜಯವರ್ಧನೆ ಮತ್ತು ಭಾರತದ ಪ್ರಧಾನಿ ರಾಜೀವ ಗಾಂಧಿಯವರ ಮಾತುಕತೆ ಪ್ರಾರಂಭವಾಯಿತು.

ಗಾಂಧಿಯವರ ಮಾತುಕತೆಗೆ ಸಹಾಯ ನೀಡಲು ಆಗಿನ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಮತ್ತು ಎಲ್‌ಟಿಟಿಇ ಮುಖ್ಯಸ್ಥರಾಗಿದ್ದ ಪ್ರಭಾಕರನ್ ಅವರು ವಿಮಾನ ನಿಲ್ದಾಣದಲ್ಲಿ ಒಂದು ಪ್ರತ್ಯೇಕ ಕೋಣೆಯಲ್ಲಿದ್ದರು. ರಾಜೀವ ಗಾಂಧಿಯವರು ಆಗಾಗ ಹೊರಗೆ ಬಂದು ಅವರೊಂದಿಗೆ ಮಾತುಕತೆ ನಡೆಸಿ ಮತ್ತೆ ಜಯವರ್ಧನೆ ಅವರೊಂದಿಗೆ ಚರ್ಚೆಗೆ
ಮರಳುತ್ತಿದ್ದರು. ನಾನು ಎಂ.ಜಿ.ಆರ್ ಹಾಗೂ ಪ್ರಭಾಕರನ್ ಅವರನ್ನು ಭೇಟಿ ಮಾಡಿದ್ದು ಅದೇ ಮೊದಲ ಮತ್ತು ಕೊನೆಯ ಸಲ.

ಈ ಮಾತುಕತೆಗಳು ಸಾಯಂಕಾಲ ಸುಮಾರು ಏಳು ಗಂಟೆಯವರೆಗೆ ವಿಮಾನ ನಿಲ್ದಾಣದಲ್ಲಿಯೇ ನಡೆದವು. ನಿರ್ಗಮಿಸುವ ಮುನ್ನ ನಾನು ಅವರಿಂದ ವಿದಾಯ ಪಡೆಯಲು ಹೋದೆ. ಅವರು ಬಹಳ ಸಂತೋಷದಿಂದ, ‘ನನಗೂ ಸಹಿತ ಕಾರು ಚಲಾ ಯಿಸುವಾಗ ವೇಗ ಮಿತಿಯನ್ನು ನಿಗದಿಗೊಳಿಸಿ ಜಾರಿ ಮಾಡಿದ್ದೀರಿ, ಸಂತೋಷ. ಆಲ್ ದಿ ಬೆಸ್ಟ್’ ಎಂದು ಹೇಳಿ ವಿಮಾನದತ್ತ ನಡೆದರು.

ಸಾರ್ಕ್ ಸಮ್ಮೇಳನದ ನಿಮಿತ್ತ ಪ್ರಧಾನಿಯವರ ಭದ್ರತಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದು ನನ್ನ ಜೀವಮಾನದ ಮರೆಯಲಾಗದ ಅವಕಾಶ. ನಾನು ಅಖಿಲ ಭಾರತ ಸೇವೆಗಳ ಅಧಿಕಾರಿಗಳ ಸಹಕಾರಿ ಗೃಹ ನಿರ್ಮಾಣ ಸಂಘದ ಸದಸ್ಯನಾಗಿದ್ದುದರಿಂದ ನನಗೆ ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ಒಂದು ನಿವೇಶನ ಮಂಜೂರಾಗಿತ್ತು. ನಾನು ಸಾರ್ಕ್ ಕರ್ತವ್ಯ ಮುಗಿದ ಮೇಲೆ ೧೮ರಂದು ಆ ನಿವೇಶನದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ಗೃಹ ನಿರ್ಮಾಣದ ಕಾರ್ಯವನ್ನು ಆರಂಭಿಸಿದೆನು. ನಂತರ ಚಿತ್ರದುರ್ಗಕ್ಕೆ ತೆರಳಿದೆನು.

ಯಜಮಾನರ ಸ್ಮಾರಕದ ಕನಸು ನನಸಾಗಲಿಲ್ಲ: ಜಲಿಂಗಪ್ಪನವರಿಗೆ ನಾನು ಚಿತ್ರದುರ್ಗ ಜಿಲ್ಲೆಯ ಪ್ರಭಾರ ವಹಿಸಿಕೊಂಡಾಗ ೮೧ ವರ್ಷ. ಮೃತ್ಯು ಅವರನ್ನೂ ಬಿಡುವುದಿಲ್ಲ ಎಂಬುದು ಎಲ್ಲರಂತೆ ನನಗೂ ಗೊತ್ತಿತ್ತು. ಅಂತಹ ಮಹಾನ್ ವ್ಯಕ್ತಿಗೆ, ಅವರ ನಿಧನಾನಂತರ ಸೂಕ್ತ ಸ್ಮಾರಕವೊಂದು ನಿರ್ಮಾಣವಾಗಬೇಕು ಮತ್ತು ಅದು ಆಯಕಟ್ಟಿನ ಸ್ಥಳದಲ್ಲಿರಬೇಕು ಎಂಬುದು ನನ್ನ ಯೋಚನೆಯಾಗಿತ್ತು. ಆದರೆ ಈ ವಿಷಯದ ಬಗ್ಗೆ ಅವರು ಬದುಕಿರುವಾಗ ಮಾತನಾಡುವುದು ಶೋಭೆಯಲ್ಲ.

ಹಾಗಾಗಿ ಈ ವಿಚಾರವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದೆ. ರಾಷ್ಟ್ರೀಯ ಹೆದ್ದಾರಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮತ್ತು ಚಿತ್ರದುರ್ಗ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಕೂಡುವ ಸ್ಥಳಕ್ಕೆ ಲಗತ್ತಾಗಿ ಪೊಲೀಸ್ ಇಲಾಖೆಯ ವಸತಿ ಗೃಹಗಳಿಗಾಗಿ ಮತ್ತು ಕಟ್ಟಡಗಳಿಗಾಗಿ ೨೮ ಎಕರೆ ಜಮೀನನ್ನು ಬಹಳ ವರ್ಷಗಳ ಹಿಂದೆಯೇ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಈ ಜಮೀನಿನಲ್ಲಿ ಸ್ವಲ್ಪ ಭಾಗವನ್ನು ಚಿತ್ರದುರ್ಗ-ರಾಯದುರ್ಗ ರೈಲ್ವೆ ಮಾರ್ಗಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿತ್ತು.

ಉಳಿದ ೨೦ ಎಕರೆ ಜಮೀನಿಲ್ಲಿ ಯಜಮಾನರ ಸಮಾಧಿ ಮತ್ತು ಸ್ಮಾರಕ ಮಾಡಲು ಪ್ರಶಸ್ತವಾಗಿತ್ತು. ಕರ್ನಾಟಕದ ಕೇಂದ್ರ ಬಿಂದುವಾಗಿದ್ದ ಈ ಸ್ಥಳಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ ಎಂಬುದು ನನ್ನ ಯೋಚನೆಯಾಗಿತ್ತು. ೧೯೮೬ರವರೆಗೆ ಈ ಸ್ಥಳದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಿರಲಿಲ್ಲ. ಪೂರ್ತಿ ಜಮೀನು ಖಾಲಿಯಾಗಿ ಇತ್ತು. ಅಂತಹ ಸಮಯ ಬಂದಾಗ ನಾನು ಸರಕಾರಕ್ಕೆ ನಿಜಲಿಂಗಪ್ಪನವರ ಸಮಾಧಿ ಮತ್ತು ಸ್ಮಾರಕವನ್ನು ಈ ಸ್ಥಳದಲ್ಲಿ ನಿರ್ಮಿಸಲು ಮನವಿ ಮಾಡಿಕೊಳ್ಳುವುದು ಎಂದು ನಿರ್ಧರಿಸಿದ್ದೆನು. ಹಾಗಾಗಿ ಆ ಸ್ಥಳದಲ್ಲಿ ಯಾವುದೇ ಕಟ್ಟಡ ಬರಬಾರದೆಂದು ಆಗಿನ ಜಿಲ್ಲಾ ಮಂತ್ರಿಗಳ ನೆರವಿನೊಂದಿಗೆ ಪೂರ್ತಿ ಜಮೀನಿನಲ್ಲಿ ವನಮಹೋತ್ಸವ ಆಚರಿಸಿ ಗಿಡಗಳನ್ನು ನೆಡಿಸುವ ವ್ಯವಸ್ಥೆ ಮಾಡಿದ್ದೆನು.

ನಾನು ತುಮಕೂರಿನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾಗಿದ್ದಾಗ ಯಜಮಾನರ ಪತ್ನಿ ಮುರಿಗೆಮ್ಮನವರು ನಿಧನರಾದರು. ವಿಷಯ ತಿಳಿಯುತ್ತಲೇ ನಾನು ಅಂತ್ಯಕ್ರಿಯೆಗೆ ಚಿತ್ರದುರ್ಗಕ್ಕೆ ಧಾವಿಸಿದೆ. ಚಿತ್ರದುರ್ಗಕ್ಕೆ ಹೋದ ಮೇಲೆ ಮುರಿಗೆಮ್ಮನವರ ಸಮಾಧಿಯನ್ನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಮ್ಮ ಪೊಲೀಸ್ ಇಲಾಖೆಗೆ ಸೇರಿದ ಜಮೀನಿನಲ್ಲಿಯೇ ಮಾಡಬೇಕು ಎಂದು ನಿರ್ಧರಿಸಿದ್ದೆನು. ಆದರೆ ಚಿತ್ರದುರ್ಗ ತಲುಪುವಷ್ಟರಲ್ಲಿ ಯಜಮಾನರ ಆಪ್ತರೂ, ವಿಧಾನಪರಿಷತ್ತಿನ ಸದಸ್ಯರೂ ಆಗಿದ್ದ ದೊಡ್ಡಸಿದ್ದವನಹಳ್ಳಿಯ ಮುರಿಗೆಮ್ಮನವರ ಸಮಾಧಿಗಾಗಿ ದೊಡ್ಡಸಿದ್ದವನಹಳ್ಳಿಯ ತಮ್ಮ ಜಮೀನಿನಲ್ಲಿ ಗುಂಡಿ ತೋಡಿಸಿಬಿಟ್ಟಿ
ದ್ದರು.

ಹಾಗಾಗಿ ನಾನು ಏನೂ ಮಾತಾಡಲೂ ಆಗಲಿಲ್ಲ. ಯಜಮಾನರು, ಆಗಸ್ಟ್ ೨೦೦೦ರಲ್ಲಿ ನಿಧನರಾದರು. ಆಗ ನಾನು ಪ್ರವಾಸ ದಲ್ಲಿದ್ದು ಹಾವೇರಿ ಜಿಲ್ಲೆಯ ಕುಮಾರಪಟ್ಟಣದಲ್ಲಿ ಇದ್ದೆನು. ಯಜಮಾನರ ನಿಧನ ವಾರ್ತೆ ರಾತ್ರಿ ನನಗೆ ಗೊತ್ತಾಯಿತು. ಯಜಮಾನರು ಸ್ವತಃ ಲಿಖಿತವಾಗಿ ತಮ್ಮ ಸಮಾಧಿಯನ್ನು ಅವರ ಜಮೀನಿನಲ್ಲಿ ಮಾಡಲು ಒಪ್ಪಿರುವುದು ತಿಳಿದ ಮೇಲೆ ನನಗೆ ಏನೂ ತೋಚಲಿಲ್ಲ. ಅವರ ಸಮಾಧಿ ಸ್ತ್ರೀ ಬಾರದ ಹತ್ತಿರವಿರುವ ಮುರುಘಾ ಮಠದ ಜಮೀನಿಲ್ಲಿ ನಡೆಯಿತು. ಎರಡು ರಾಷ್ಟ್ರೀಯ ಹೆದ್ದಾರಿಗಳ ಸಮಗಮದ ಸ್ಥಳದಲ್ಲಿ ಅವರ ಸಮಾಧಿ ಮತ್ತು ಸ್ಮಾರಕ ನಿರ್ಮಿಸುವ ನನ್ನ ಕನಸು, ಕನಸಾಗಿಯೇ ಉಳಿಯಿತು.

ಜಿಲ್ಲೆಯಲ್ಲಿ ಸ್ಮರಣಾರ್ಹ ದಿನಗಳು: ಜಿಲ್ಲೆಯ ಪೊಲೀಸ್ ಮುಖ್ಯಾಧಿಕಾರಿಯಾಗಿ ನಾನು ಸೇವೆ ಸಲ್ಲಿಸಿದ ೩ ವರ್ಷ ೧೦ ತಿಂಗಳ ಅವಧಿ ನನ್ನ ಜೀವನದಲ್ಲಿ ಬಹಳ ಸ್ಮರಣಾರ್ಹವಾದುದು. ಈ ಅವಧಿಯಲ್ಲಿ ನನಗೆ ರಾಷ್ಟ್ರನಾಯಕ ನಿಜಲಿಂಗಪ್ಪನವರ
ಸಾಮೀಪ್ಯ ಮತ್ತು ಅವರೊಂದಿಗೆ ಬಹಳ ಸಲ ಸಮಾಲೋಚನೆಯ ಸದವಕಾಶ ದೊರೆಯಿತು. ಜಿಲ್ಲೆಯಲ್ಲಿ ಇರುವಷ್ಟು ದಿನ ವಾರಕ್ಕೊಮ್ಮೆಯಾದರೂ ಅವರನ್ನು ಭೇಟಿಯಾಗಿ ಎರಡು ಮೂರು ಗಂಟೆಗಳನ್ನು ಕಳೆಯುತ್ತಿದ್ದೆನು.

ಈ ಸಮಯದಲ್ಲಿ ಅವರು ದೇಶದ ಇತಿಹಾಸ, ಕರ್ನಾಟಕದ ಏಕೀಕರಣದ ಪ್ರಸಂಗಗಳು, ೧೯೩೫ರಿಂದ ಕಾಂಗ್ರೆಸ್ ಪಕ್ಷದಲ್ಲಾದ ಹಲವಾರು ಬೆಳವಣಿಗೆಗಳ ಬಗ್ಗೆ ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ರಾಷ್ಟ್ರಪತಿಗಳಾದ ಶಂಕರ ದಯಾಳ್
ಶರ್ಮಾ ಅವರು ನಿಜಲಿಂಗಪ್ಪನವರ ಭೇಟಿಗೆ ಬಂದಾಗ ಅವರ ಯೋಗಕ್ಷೇಮ ನೋಡಿಕೊಳ್ಳುವ ಹೊಣೆಯನ್ನೂ ನನಗೆ ವಹಿಸಿದ್ದರು.

ಅವರ ಧರ್ಮಪತ್ನಿ ಮುರಿಗೆಮ್ಮನವರು ನನ್ನನ್ನು ಮಗನಂತೆಯೇ ನೋಡಿಕೊಂಡರು. ಯಜಮಾನರು ಕಾಲವಾಗುವ ಮುನ್ನ, ೧೯೯೮ರಲ್ಲಿ ನಾನು ಅವರ ಮನೆಗೆ ಹೋದಾಗ, ಬಂಗಾರದ ವಾಟರ್ಮನ್ ಪೆನ್ ಸೆಟ್ ಅನ್ನು ನನಗೆ ಒತ್ತಾಯಪೂರ್ವಕವಾಗಿ ನೀಡಿ ಆಶೀರ್ವದಿಸಿದರು. ಇದು ನನ್ನ ಅಮೂಲ್ಯ ಆಸ್ತಿ. ಜಿಲ್ಲೆಯಲ್ಲಿ ನಾನು ಅಽಕಾರಿಯಾಗಿದ್ದರೂ ನನಗೆ ಹಾಗೆ ಎಂದೂ ಅನಿಸಲಿಲ್ಲ.

ಸದಾ ಕಾಲ ನಾನು ಜಿಲ್ಲೆಯ ಮಗನೆಂಬ ಭಾವನೆಯೇ ನನ್ನಲ್ಲಿತ್ತು. ಜಿಲ್ಲೆಯ ಎಲ್ಲಾ ಜನರೂ ತುಂಬಾ ಸಭ್ಯರು ಹಾಗೂ ಸಹೃದಯರು. ನನ್ನನ್ನು ತಮ್ಮವನೆಂಬುದಾಗಿ ಸ್ವೀಕರಿಸಿ ಸದಾ ನನ್ನ ಸಲಹೆ ಸೂಚನೆಗಳಿಗೆ ಬೆಲೆಕೊಟ್ಟು ಈ ೪ ವರ್ಷದ ಅವಧಿಯನ್ನು ಅತ್ಯಂತ ಸಂತೋಷದ ದಿನಗಳನ್ನಾಗಿ ಮಾಡಿದರು.

( ಮುಂದುವರಿಯುವುದು…)

ತಂಗಿ ಚೆನ್ನಮ್ಮಳ ಮದುವೆ
ನನ್ನ ತಂಗಿ ಚೆನ್ನಮ್ಮ ಚಿತ್ರದುರ್ಗದಲ್ಲಿ ಬಿ.ಎ. ಪದವಿ ಓದುತ್ತಿದ್ದಳು. ನನ್ನ ಜತೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾಮಿನಾಥ್ ಅವರು ಧಾರವಾಡ ಜಿಲ್ಲಾ ಅರಣ್ಯಾಧಿಕಾರಿಯವರಾಗಿದ್ದ ಶಿವಣ್ಣ ಗೌಡ ಎಂಬವರೊಂದಿಗೆ ತಂಗಿಯ ಮದುವೆ ಪ್ರಸ್ತಾಪ ಮಾಡಿ ದರು. ಶಿವಣ್ಣಗೌಡರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂನ ಯಲಿವಾಳ ಗ್ರಾಮದ ಒಂದು ಕೃಷಿ ಕುಟುಂಬಕ್ಕೆ ಸೇರಿದವರು.

೧೯೮೦ರಲ್ಲಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾಗಿ ಸೇರಿದ್ದರು. ಅವರು ನನ್ನ ತಂಗಿಯನ್ನು ನೋಡಲು ಬಂದ ದಿನವೇ ಮದುವೆಗೆ ಒಪ್ಪಿಗೆ ಸೂಚಿಸಿದರು. ಹಾಗಾಗಿ ಅದೇ ದಿನ ಮಧ್ಯಾಹ್ನ ಸಿರಿಗೆರೆಯಲ್ಲಿದ್ದ ಸಾಣೆಹಳ್ಳಿ ಮಠದ ಮಠಾಧ್ಯಕ್ಷರಾದ ಪಂಡಿತಾರಾಧ್ಯ ಸ್ವಾಮೀಜಿಯವರೆನ್ನು ಕರೆಸಿ ನಿಶ್ಚಿತಾರ್ಥ ನೆರವೇರಿಸಿದೆವು. ಮದುವೆಯನ್ನು ಚಿತ್ರದುರ್ಗದ ವಾಸವಿ ಕಲ್ಯಾಣ ಮಂಟಪದಲ್ಲಿ ನೆರವೇರಿಸಿದೆವು. ಈ ಮದುವೆ ಕಾರ್ಯಕ್ರಮಕ್ಕೆ ನಮ್ಮೂರಿನಿಂದ ನಮ್ಮ ತಂದೆ ತಾಯಿ ಮತ್ತು ಬಂಧುಗಳು ಆಗಮಿಸಿ ಆಶೀರ್ವದಿಸಿದರು.