ವಿಶ್ವವಾಣಿ ಸಂದರ್ಶನ: ಪ್ರದೀಪ್ ಕುಮಾರ್ ಎಂ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೊಸತನಕ್ಕೆ ಆದ್ಯತೆ ನೀಡಲು ರೂಪುರೇಷೆ
ಕಲಾವಿದರಲ್ಲಿ ಹೊಸತನದ ಜತೆಗೆ ಹೊಸ ಕಲಾವಿದರಿಗೂ ಅವಕಾಶ ಕಲ್ಪಿಸುತ್ತೇನೆ
ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮ ರೂಪಿಸಿ ದರೂ ಅದು ವಿಭಿನ್ನವಾಗಿದ್ದು, ಹೆಚ್ಚು ಜನರನ್ನು ಆಕರ್ಷಿಸುವಂತಿರಬೇಕು. ಕಲಾವಿದರಲ್ಲಿ ಹೊಸತನದ ಜತೆಗೆ ಹೊಸ ಕಲಾವಿದರಿಗೂ ಅವಕಾಶ ಕಲ್ಪಿಸ ಬೇಕು. ಆ ಮೂಲಕ ನಮ್ಮ ಕಾರ್ಯಕ್ರಮಗಳು ಹೆಚ್ಚು ಜನರಿಗೆ ತಲುಪಿದರೆ ಕನ್ನಡವೂ ಹೆಚ್ಚು ಜನರನ್ನು ತಲುಪು ವಂತಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಮೈಸೂರು ರಾಜ್ಯ ಕರ್ನಾಟಕ ವಾಗಿ ಮರುನಾಮಕರಣಗೊಂಡು ೫೦ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ ೫೦- ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸ ಲಾಗುತ್ತಿದೆ. ಈ ಕುರಿತು ಮತ್ತು ಇಲಾಖೆಯ ವಿವಿಧ ಕಾರ್ಯ ಯೋಜನೆಗಳ ಬಗ್ಗೆ ಅವರು ವಿಶ್ವವಾಣಿಗೆ ವಿಶೇಷ ಸಂದರ್ಶನ ನೀಡಿ ದ್ದಾರೆ. ಸಂದರ್ಶನದ ವಿವರ ಇಲ್ಲಿದೆ.
ಕಾಂತರಾಜು ವರದಿಯನ್ನು ಇನ್ನೂ ಅಂಗೀಕರಿಸಿಲ್ಲ. ಜತೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಮತ್ತೇಕೆ ಹೊಸ ವಿವಾದ?
– ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಅರ್ಹರಿಗೆ ಸರಕಾರದ ಕಾರ್ಯಕ್ರಮಗಳು ಸಿಗಬೇಕು ಎಂಬ ಉದ್ದೇಶದಿಂದ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತೀವಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ವರದಿ ನೀಡಲು ಆದೇಶಿಸಿದ್ದರು. ಅದರಂತೆ ಅವರು ವಿಸ್ತೃತ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಆ ವರದಿ ಇನ್ನೂ ಸ್ವೀಕಾರವಾಗಿಲ್ಲ. ಮೇಲಾಗಿವರದಿಯಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ. ಆದರೂ ಅದನ್ನ ಏಕೆ ವಿರೋಧಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ.
ಏಳು ವರ್ಷ ಹಳೆಯ ವರದಿ ಆಧರಿಸಿ ಜಾತಿಗಳ ಮಧ್ಯೆ ಜಗಳ ತಂದಿಡುವ ಅಗತ್ಯವಾದರೂ ಏನು? ಆ ವರದಿ ಈಗ ಪ್ರಸ್ತುತವೇ?
– ಇದೇನು ಜಾತಿ ಗಣತಿ ಅಲ್ಲ. ಅವರ ಪರಿಸ್ಥಿತಿ ಹೇಗಿದೆ ಅರಿತು, ಹಿಂದುಳಿದವರನ್ನು ಮೇಲೆತ್ತಲು ಕೈಗೊಂಡ ಕ್ರಮ. ಇದರಿಂದ ಒಂದು ಸಮಾಜಕ್ಕೆ ಕೆಡುಕಾಗುತ್ತದೆ, ಯಾವುದೋ ಒಂದು ಸಮಾಜಕ್ಕೆ ಅನ್ಯಾಯವಾಗುತ್ತದೆ ಎಂಬುದು ಶುದ್ಧ ಸುಳ್ಳು. ಕಾಂತ ರಾಜು ಅವರು ಸಿದ್ಧಪಡಿಸಿದ ವರದಿಗೆ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಮಾಡಿರಲಿಲ್ಲ ಎಂಬ ಕಾರಣಕ್ಕೆ ಅದನ್ನು ಸರಕಾರ ಸ್ವೀಕರಿಸಿರಲಿಲ್ಲ. ಇದೀಗ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಈ ಹಿಂದಿನ ಮಾರ್ಗಸೂಚಿಗಳನ್ನು ಆಧರಿಸಿ, ಅಂಕಿ ಅಂಶಗಳನ್ನು ಪರಿಗಣಿಸಿ ಮರುವರದಿ ಸಿದ್ಧಪಡಿಸುವಂತೆ ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮುಖ್ಯಮಂತ್ರಿ ಸೂಚಿಸಿ ದ್ದಾರೆ. ನವೆಂಬರ್‌ನಲ್ಲಿ ಅವರ ಅಧಿಕಾರಾವಧಿ ಮುಗಿಯಲಿದ್ದು, ಅಷ್ಟರೊಳಗೆ ಸರಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ವರದಿ ಬಂದ ಮೇಲೆ ಅದನ್ನು ನೋಡಿ ಮುಂದಿನ ತೀರ್ಮಾನಗಳ ಕುರಿತು ಚರ್ಚೆ ಮಾಡಬಹುದು.
ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣವಾಗಿ ೫೦ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ಹಮ್ಮಿಕೊಳ್ಳುವ ಕಾರ್ಯಕ್ರಮದ ಸಿದ್ಧತೆ ಹೇಗಿದೆ?
-ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಇರಬೇಕು ಎಂದು ನಿರ್ಧರಿಸಲಾಗಿದೆ. ಈ ಕುರಿತಂತೆ ನಾಲ್ಕು ವಿಭಾಗಗಳಲ್ಲಿ ವಿಭಾಗವಾರು ಸಭೆ ನಡೆಸಿದ್ದೇನೆ.೧,೨೦೦ಕ್ಕೂ ಹೆಚ್ಚು ಸಾಹಿತಿ, ಹೋರಾಟಗಾರರು, ಕನ್ನಡಾಭಿಮಾನಿ ಸಂಘ ಸಂಸ್ಥೆಗಳ ಮುಖಂಡರ ಸಲಹೆ ಪಡೆದಿದ್ದೇನೆ. ಸಾಕಷ್ಟು ಮಂದಿ ಪತ್ರದ ಮೂಲಕವೂ ಸಲಹೆ ಕೊಟ್ಟಿದ್ದಾರೆ. ಇದರ ಜತೆಗೆ ಪತ್ರಿಕೆ ಮತ್ತು ವಿದ್ಯುನ್ಮಾಮ ಮಾಧ್ಯಮ ಸಂಪಾದಕರು, ಸಿನಿಮಾ ನಟರು, ನಿರ್ದೇಶಕರಿಂದಲೂ ಸಲಹೆಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಸಲಹೆಗಳನ್ನು ಕ್ರೋಢೀಕರಿಸಿ ಒಂದು ವರ್ಷದ ಕಾರ್ಯಕ್ರಮದ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಆದರೆ, ಅದು ಈ ಹಿಂದಿನ ಎಲ್ಲಾ ಕಾರ್ಯಕ್ರಮ ಗಳಿಗಿಂತ ವಿಭಿನ್ನವಾಗಿರುತ್ತದೆ ಎಂದು ಹೇಳಬಲ್ಲೆ.
ಕನ್ನಡ ಓದುವುದು, ಮಾತಾನಾಡುವುದಕ್ಕೆ ಯಾವ ರೀತಿ ಪ್ರೋತ್ಸಾಹ ನೀಡುತ್ತೀರಿ?
-ಕನ್ನಡ ಓದಲು ಮತ್ತು ಮಾತನಾಡುವುದನ್ನು ಪ್ರೋತ್ಸಾಹಿಸಲು ಗಡಿನಾಡು ಭಾಗದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಎಲ್ಲಾದರೂ ಕನ್ನಡ ಶಾಲೆಗಳಿಗೆ ತೊಂದರೆಯಾಗಿದ್ದರೆ, ನಮ್ಮ ಜನರಿಗೆ ಸಮಸ್ಯೆಯಾಗಿದ್ದರೆ ತಕ್ಷಣ ಗಮನಕ್ಕೆ ತರುವಂತೆ
ಸೂಚಿಸಿ, ಬಂದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಈಗಾಗಲೇ ಆರಂಭಿಸಲಾಗಿದೆ. ಕನ್ನಡ ಕಲಿಯುತ್ತೇವೆ ಎಂದು ಮುಂದೆ ಬರುವವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ನವೆಂಬರ್‌ನಲ್ಲಿ ಇದು ಆರಂಭವಾಗಲಿದೆ.
ಏನೇ ಮಾಡಿದರೂ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕುಸಿಯುತ್ತಿದೆಯಲ್ಲಾ?
-ರಾಜ್ಯದ ಗ್ರಾಮೀಣ ಪ್ರದೇಶಗಳು, ಜಿಲ್ಲೆಗಳಲ್ಲಿ ಕನ್ನಡ ಉಳಿದಿದೆ. ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಬಳಕೆ ಕಡಿಮೆ ಯಾಗುತ್ತಿದೆ ಎಂಬುದು ನೋವಿನ ಸಂಗತಿ. ಬೆಂಗಳೂರಿನಲ್ಲಿ ಕನ್ನಡದ ಪ್ರೋತ್ಸಾಹಕ್ಕೆ ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಅನೇಕ ಸಲಹೆಗಳನ್ನು ನೀಡಿದ್ದು, ಇವುಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅನುಷ್ಠಾನಕ್ಕೆ ಕ್ರಮ
ವಹಿಸಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲಾವಿದರ ಒಂದು ಗುಂಪಿಗೆ ಮಾತ್ರ ಆದ್ಯತೆ ಸಿಗುತ್ತದೆ. ಹೊಸಬರಿಗೆ ಅವಕಾಶ ಸಿಗುತ್ತಿಲ್ಲ. ಕಾರ್ಯಕ್ರಮಗಳಲ್ಲಿ ಏಕತಾನತೆ ಇರುತ್ತದೆ ಎಂಬ ಆರೋಪಗಳಿವೆಯಲ್ಲಾ?
-ಹಳೆಯ ಕಲಾವಿದರ ಜತೆಗೆ ಹೊಸ ಕಲಾವಿದರಿಗೂ ಅವಕಾಶ ನೀಡುವ ಕೆಲಸ ಈಗಾಗಲೇ ಆರಂಭವಾಗಿದೆ. ಅದಕ್ಕಿಂತ ಮುಖ್ಯ ವಾಗಿ ಒದು ಭಾಗದ ಕಲೆ, ಸಂಸ್ಕೃತಿ, ಆಚರಣೆಗಳನ್ನು ಇನ್ನೊಂದು ಭಾಗದಲ್ಲಿ ಪಸರಿಸಿ ರಾಜ್ಯದ ವೈವಿದ್ಯತೆಯನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಒಂದು ಭಾಗದ ಕಲಾವಿದರಿಂದ ಇನ್ನೊಂದು ಭಾಗದಲ್ಲಿ ಕಾರ್ಯಕ್ರಮ ನೀಡುವ ಉದ್ದೇಶವಿದೆ. ಉದಾ ಹರಣೆಗೆ ಉತ್ತರ ಕರ್ನಾಟಕ ಭಾಗದ ಕಲೆಗಳ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಪ್ರಚಾರ ನೀಡುವುದು. ಇದಕ್ಕೆ ಕ್ರಮ ಕೈಗೊಳ್ಳ ಲಾಗುತ್ತಿದೆ. ಅದರ ಜತೆಗೆ ಇಲಾಖೆಯಲ್ಲಿ ಕೆಲವೊಂದಿಷ್ಟು ಕಲಾವಿದರು ತಾವೇ ಪವರ್ ಆಫ್ ಅಟರ್ನಿ ತೆಗೆದು ಕೊಂಡಂತೆ ಇದ್ದು, ಅದನ್ನು ಸರಿಪಡಿಸಲು ರೂಪುರೇಷೆ ಸಿದ್ಧವಾಗುತ್ತಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ಸಡಿಲ ಮಾಡಬೇಕೆಂಬ ಒತ್ತಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಸಾಧಕರ ಹಿರಿತನ ಪರಿಗಣನೆಯಾಗಬೇಕು ಎಂಬ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಗೆ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ಯುವ ಸಾಧಕರಿಗೂ ಪ್ರಶಸ್ತಿ ನೀಡಿ, ಅವರು ಮತ್ತಷ್ಟು ಸಾಧನೆ ಮಾಡುವುದರ ಜತೆಗೆ ಇನ್ನಷ್ಟು ಮಂದಿಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಈ ಯೋಮಿತಿ ಸಡಿಲಿಸಬೇಕು ಎಂಬ ಉದ್ದೇಶವಿದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಾಗುವುದು.
ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿರುವುದಕ್ಕಿಂತ ಬಿಜೆಪಿ ವಿರುದ್ಧ ಟೀಕೆ, ಆರೋಪ, ತನಿಖೆಗಳಿಗೆ ಹೆಚ್ಚು ಸಮಯ ವ್ಯಯಿಸುತ್ತಿರುವಂತಿದೆಯಲ್ಲಾ?
-ನಾವೆಲ್ಲಿ ಟೀಕೆ ಮಾಡಿದ್ದೇವೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ೨,೫೦೦ ಕೋಟಿ ರು, ಮಂತ್ರಿಯಾಗಬೇಕಾದರೆ ೮೦-೧೦೦ ಕೋಟಿ ರು. ಕೊಡಬೇಕು ಎಂದು ಹೇಳಿದವರು ಅವರದ್ದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್. ಇದೀಗ ಬಿಜೆಪಿ ಟಿಕೆಟ್‌ಗಾಗಿಯೂ ಹಣ ಪಡೆದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದನ್ನೇ ನಾವು ಹೇಳುತ್ತಿದ್ದೇವೆ. ಜತೆಗೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಟೆಂಡರ್ ಮೊತ್ತ ಎಷ್ಟು ಎಂದು ಒಂದು ಪ್ರಶ್ನೆ ಹೆಚ್ಚುವರಿ ಕೇಳಿದ್ದೇವೆ ಅಷ್ಟೆ. ನಾವು ಪ್ರತಿಪಕ್ಷದಲ್ಲಿದ್ದಾಗ ಬಿಜೆಪಿ ಆಡಳಿತ ಸರಿ ಇಲ್ಲ, ಭ್ರಷ್ಟಾಚಾರ ನಡೆಯುತ್ತಿದೆ. ನಮಗೆ ಅವಕಾಶ ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ
ಬಂದೆವು. ಅದರಂತೆ ಜನ ಅಧಿಕಾರ ಕೊಟ್ಟರು. ನೀಡಿದ ಭರವಸೆಯನ್ನು ಈಡೇರಿಸಲೇ ಬೇಕಲ್ಲವೇ? ಅದಕ್ಕಾಗಿ ತನಿಖೆಗೆ ಆದೇಶಿಸಿ ದ್ದೇವೆ. ಅಧಿಕಾರಕ್ಕೆ ಬಂದು ಮೂರು ತಿಂಗಳಷ್ಟೇ ಆಗಿದೆ. ಎರಡು ವರ್ಷ ಕಳೆಯಲಿ. ನಮ್ಮ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ರಾಚುವಂತಿರುತ್ತದೆ.
ಮುಂದುವರಿದ ಸಮುದಾಯಗಳಿಗೆ ತೊಂದರೆ ನೀಡುವಂತಹ ಕಾಂತರಾಜು ವರದಿ ಜಾರಿಗೆ ಪಟ್ಟು ಹಿಡಿಯಲು ಕಾರಣವೇನು?
ಮುಂದುವರಿದ ಸಮುದಾಯಗಳಿಗೆ ತೊಂದರೆ ಕೊಡುವಂತಹ ಅಂಶಗಳು ವರದಿಯಲ್ಲಿವೆ ಎಂದು ಹೇಳಿದವರು ಯಾರು? ಇದರಿಂದ ಜಾತಿಗಳ ಜನಸಂಖ್ಯೆ ಗೊತ್ತಾಗಬಹುದಾದರೂ ಮುಂದುವರಿದವರಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿದವರಾರು? ಅಂತಹ ಅಂಶಗಳು ವರದಿಯಲ್ಲಿ ಇರುವುದಿಲ್ಲ. ಇದುವರೆಗೆ ವಾಸ್ತವವಾಗಿ ನಾವು ಹಿಂದುಳಿದ ಸಮುದಾಯಗಳಿಗೆ ಮೀಸಲು ಕಲ್ಪಿಸಿಲ್ಲ. ಚುನಾವಣೆಗಳಲ್ಲೂ ಮೀಸಲು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದುಳಿದ ಜಾತಿಗಳ ಪರಿಸ್ಥಿತಿಯನ್ನು ನ್ಯಾಯಾ ಲಯಗಳಿಗೆ ಮನವರಿಕೆ ಮಾಡಿಕೊಟ್ಟು ಆ ಸಮುದಾಯಗಳಿಗೆ ನ್ಯಾಯ ಒದಗಿಸುವುದಷ್ಟೇ ನಮ್ಮ ಉದ್ದೇಶ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಬಹುದು. ಆದರೆ, ಹೆಚ್ಚಿನವರು ಬೆಂಬಲಿಸುತ್ತಾರೆ. ಏಕೆಂದರೆ, ಯಾವುದೇ ಜಾತಿ, ಸಮುದಾಯಗಳಿಗೆ ತೊಂದರೆ ಕೊಡುವುದು ಸರಕಾರದ ಉದ್ದೇಶ ಅಲ್ಲ.
ರಾಜ್ಯ ಸರಕಾರಕ್ಕೆ ಜಾತಿ ಗಣತಿ ನಡೆಸುವ ಅಽಕಾರವಿಲ್ಲದಿದ್ದರೂ ಏಕೆ ಈ ಪ್ರಯತ್ನ?
ರಾಜ್ಯ ಸರಕಾರಕ್ಕೆ ಜಾತಿ ಗಣತಿ ನಡೆಸಲು ಅಽಕಾರವಿಲ್ಲ ಎಂಬುದು ಒಪ್ಪಿತ ಸತ್ಯ. ಆದರೆ, ಕಾಂತರಾಜು ವರದಿಯನ್ನು ಜಾತಿ ಗಣತಿ ಎಂದು ವ್ಯಾಖ್ಯಾನಿಸುವುದೇ ತಪ್ಪು. ವಿವಿಧ ಜಾತಿಯ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ತಿಳಿದು ಕೊಳ್ಳುವ ವರದಿ. ಹೀಗಾಗಿ ಈ ವರದಿಯನ್ನು ಅಷ್ಟಕ್ಕೇ ಸೀಮಿತಗೊಳಿಸಬೇಕೇ ಹೊರತು ಜಾತಿ ಹೆಸರಿನಲ್ಲಿ ಯಾರಿಗೋ ಅನ್ಯಾಯ ವಾಗುತ್ತದೆ ಎಂಬುದೆಲ್ಲಾ ಸುಳ್ಳು.
ಕಾಂತರಾಜು ವರದಿಯ ಹಿಂದೆ ಬೀಳುವ ಬದಲು ಹಿಂದುಳಿದ ವರ್ಗದವರ ಇಲಾಖೆಯ ಕಾರ್ಯಕ್ರಮಗಳಿಗೆ ಒತ್ತುಕೊಡಬಹುದಲ್ಲವೇ?
ವರದಿ ನನ್ನ ಇಲಾಖೆಯ ಒಂದು ಭಾಗವಷ್ಟೆ. ಉಳಿದಂತೆ ಇಲಾಖೆ ಬಗ್ಗೆ ಗಮನಹರಿಸಿದ್ದೇನೆ. ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಿಂದುಳಿದ ವರ್ಗದವರದ್ದು. ಹೀಗಾಗಿ ಆ ಸಮುದಾಯಕ್ಕೆ ನ್ಯಾಯ ಒದಗಿಸುವುದು ನನ್ನ ಉದ್ದೇಶ. ವಿದ್ಯಾರ್ಥಿ ಮಟ್ಟದಿಂದಲೇ ಸುಧಾರಣೆ ತರಲಾಗುವುದು. ಹಾಸ್ಟೆಲ್‌ಗಳು, ಅಲ್ಲಿನ ಊಟ-ತಿಂಡಿ, ವ್ಯವಸ್ಥೆ ಬದಲಾವಣೆ ಮಾಡುವ ಉದ್ದೇಶವಿದೆ. ಈಗಾಗಲೇ ಸಾಲ ವ್ಯವಸ್ಥೆ ಸೇರಿದಂತೆ ಎಲ್ಲಾ ವಹಿವಾಟುಗಳನ್ನು ಆನ್ ಲೈನ್ ಮಾಡಿ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಮುಂದಿನ ವರ್ಷದಿಂದ ಬದಲಾವಣೆ ಕಾಣುತ್ತದೆ.