ಈಜಿಪ್ಟ್ ಡೈರಿ – ಪ್ರವಾಸದ ಒಳ-ಹೊರಗಿನ ಕಥನ – ೩
ಅಕ್ಷರಗಳಲ್ಲಿ ಮೊಗೆದು ಕೊಡಲಾಗದಂಥದ್ದು, ಕೆಮರಾ ಕಣ್ಣಿನಲ್ಲಿ ಕಟ್ಟಿಕೊಡಲಾಗದಂಥದ್ದು
ಅದು ಕಲ್ಪನಾತೀತ
ಮೊದಲ ಬಾರಿಗೆ ಈಜಿಪ್ಟ್‌ನ ರಾಜಧಾನಿಗೆ ಬಂದವರಿಗೆಲ್ಲ ಯಾವಾಗ ಪಿರಮಿಡ್ಡುಗಳನ್ನು ನೋಡುತ್ತೇನೋ ಎನ್ನುವ ತವಕ. ಇದು ಎಲ್ಲ ಪ್ರವಾಸಿ ತಾಣಗಳಿಗೆ ಹೋದಾಗಲೂ ಆಗುವ ಅನುಭವವೇ. ರಿಯೋ ಡಿ ಜನೈರೋಕ್ಕೆ ಹೋದವರಿಗೆ ಯಾವಾಗ ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆ ನೋಡುತ್ತೇನೋ ಎನ್ನುವ ಹಂಬಲ ಪುಟಿಯುತ್ತಿರುತ್ತದೆ.
ಆಗ್ರಾಕ್ಕೆ ಹೋದವರಿಗೆ ತಾಜಮಹಲ್ ನೋಡುವ ತನಕ ಸಮಾಧಾನವಾಗುವುದಿಲ್ಲ. ಜೋಗಕ್ಕೆ ಹೋದವರಿಗೆ ಧುಮ್ಮಿಕ್ಕುವ ಜಲಪಾತವನ್ನು ಯಾವಾಗ ನೋಡುತ್ತೇನೋ ಎನ್ನುವ ಕಾತರ. ನಾನೂ ಇಂಥ ತವಕಗಳ ಮೊಟ್ಟೆಗೆ ಕಾವು ಕೊಡುತ್ತಾ ಕುಳಿತಿದ್ದೆ. ಕೈರೋ ನಗರದಿಂದ ಪಿರಮಿಡ್ಡುಗಳು ಅಷ್ಟು ಹತ್ತಿರದಲ್ಲಿದ್ದಿರಬಹುದು ಎಂದು ನಾನು ಊಹಿಸಿರಲಿಲ್ಲ.
ಇದು ನನ್ನೊಬ್ಬನ ಅನುಭವ ಅಲ್ಲ. ಕೈರೋಕ್ಕೆ ಮೊದಲ ಬಾರಿಗೆ ಬರುವ ಎಲ್ಲ ಪ್ರವಾಸಿ ಗರ ಅನುಭವವೂ ಇದೇ. ಸಾಮಾನ್ಯವಾಗಿ ಮೊದಲ ಬಾರಿಗೆ ಕೈರೋಕ್ಕೆ ಬಂದವರೇ ಪಿರಮಿಡ್ಡುಗಳನ್ನು ನೋಡಲು ಹೊರಡುವುದಿಲ್ಲ. ಅದರಲ್ಲೂ ದಿನದ ದ್ವಿತೀ ಯಾರ್ಧದಲ್ಲಿ ಬಂದವರು, ಆ ದಿನ ವಿಶ್ರಾಂತಿ ಮಾಡಿ ಮರುದಿನ ಪಿರಮಿಡ್ಡುಗಳನ್ನು ನೋಡಲು ಹೋಗುತ್ತಾರೆ. ಆದರೆ ಆ ದಿನವೆಲ್ಲಾ ಯಾವಾಗ ಪಿರಮಿಡ್ಡುಗಳನ್ನು ನೋಡುತ್ತೇನೋ ಎನ್ನುವ ಕಾತರದಲ್ಲಿ ನಿದ್ದೆ ಮಾಡುವುದಿಲ್ಲವಂತೆ. ಈ ಅನುಭವ ವನ್ನು ಅನೇಕರು ಹೇಳಿದ್ದನ್ನು ನಾನು ಕೇಳಿದ್ದೇನೆ. ಜಗತ್ತಿನ ಅಚ್ಚರಿಗಳಲ್ಲೊಂದಾಗಿರುವ ಪಿರಮಿಡ್ಡುಗಳ ಬಗ್ಗೆ ಕೇಳಿದವರಿಗೆಲ್ಲ ಅದನ್ನು ನೋಡುವ ತನಕ ಒಂದಷ್ಟು ನಿರೀಕ್ಷೆಗಳಿರುವುದು ಸಹಜ
ಕೈರೋ ನಗರದ ಹೃದಯ ಭಾಗದಿಂದ ಹೊರಟು ಇಪ್ಪತ್ತು- ಇಪ್ಪತ್ತೈದು ನಿಮಿಷಗಳಾಗುತ್ತಿದ್ದಂತೆ, ಬೆಂಗಳೂರಿನಿಂದ ಹಾಸನ ಮಾರ್ಗದಲ್ಲಿ ಹಿರೀಸಾವೆ ಎಡಕ್ಕೆ ಹೊರಳಿ ಸ್ವಲ್ಪ ದೂರ ಹೋಗುತ್ತಲೇ ದೂರದಲ್ಲಿ ಗೊಮ್ಮಟನ ದರ್ಶನವಾಗುವಂತೆ, ಪಿರಮಿಡ್ಡುಗಳು ತಟ್ಟನೆ ಗೋಚರವಾದಾಗ, ಅದು ಒಮ್ಮಿಂದೊಮ್ಮೆಗೆ ವಿದ್ಯುತ್ ಪ್ರವಹಿಸುವ ಕ್ಷಣ. ಕಾರಣ, ಅಷ್ಟಕ್ಕೂ ಕೈರೋ ನಗರವೇ ಮುಗಿದಿರುವುದಿಲ್ಲ. ನಾವಿನ್ನೂ ನಗರದ ಒಳಗೇ ಇರುವಾಗಲೇ ದೂರದಲ್ಲಿ ಜೋಳದ ರಾಶಿಯಂತೆ ಕಾಣುವ ಪಿರಮಿಡ್ಡುಗಳ ಮೊದಲ ದರ್ಶನವಾಗುತ್ತದೆ. ಕೈರೋದ ದಟ್ಟವಾದ ಕಾಂಕ್ರೀಟ್ ಕಾಡುಗಳ ಮಧ್ಯೆ, ಅದಕ್ಕಿಂತ ದಟ್ಟವಾದ ಟ್ರಾಫಿಕ್ ಜಾಮ್ ಮಧ್ಯೆ ತೂರಿಕೊಂಡು, ಸಾಗುವಾಗ ಹೀಗೆ ಧುತ್ತೆಂದು ಪಿರಮಿಡ್ಡುಗಳು ಎದುರಾಗಬಹುದು ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ.
ಇದಕ್ಕೆ ಕಾರಣ ಪಿರಮಿಡ್ಡುಗಳು ಮರುಭೂಮಿಯಲ್ಲಿವೆ ಎಲ್ಲರೂ ಅಂದುಕೊಂಡಿರುವುದು. ಆದರೆ ಹೀಗೆ ಏಕಾಏಕಿ ಪಿರಮಿಡ್ಡು ಗಳು ಕಾಣಿಸಿಕೊಳ್ಳಬಹುದು ಎಂದು ಯಾರೂ ನಿರೀಕ್ಷೆ ಮಾಡಿರುವುದಿಲ್ಲ. ಖ್ಯಾತ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಮೊದಲ ಬಾರಿಗೆ ಗಿಜಾ ಪಿರಮಿಡ್ಡುಗಳನ್ನು ನೋಡಿ I had no idea the pyramids were this close to the City ಎಂದು ಉದ್ಗರಿಸಿದ್ದನಂತೆ.
ಕೈರೋ ನಗರಕ್ಕೆ ತಾಕಿಕೊಂಡಿರುವ ಗಿಜಾ ಪ್ರದೇಶದಲ್ಲಿರುವುದರಿಂದ ಈ ಪಿರಮಿಡ್ಡುಗಳನ್ನು ಗಿಜಾ ಪಿರಮಿಡ್ಡು ((Pyramids of Giza) ಗಳು ಎಂದು ಕರೆಯುತ್ತಾರೆ. ಈಜಿಪ್ಟ್ ನಲ್ಲಿ ಏನಿಲ್ಲವೆಂದರೂ ೧೨೦ಕ್ಕಿಂತ ಹೆಚ್ಚು ಪಿರಮಿಡ್ಡುಗಳಿವೆ. ಆದರೆ ಆ ಪೈಕಿ ಗಿಜಾದಲ್ಲಿರುವ ಪಿರಮಿಡ್ಡುಗಳೇ ಹೆಚ್ಚು ಸುಂದರ, ಆಕರ್ಷಕ ಮತ್ತು ಭವ್ಯ. ಗಿಜಾ ಪಿರಮಿಡ್ಡುಗಳನ್ನು ನೋಡಿದ ಬಳಿಕ ಉಳಿದವು ಸಪ್ಪೆ ಎನಿಸುತ್ತವೆ. ಕೆಲವು ಪಿರಮಿಡ್ಡುಗಳು ನೆಲಸಮವಾಗಿರಬಹುದು ಎಂದು ಊಹಿಸಲಾಗಿದೆ. ಇನ್ನು ಕೆಲವು ಅಲ್ಲಲ್ಲಿ ಕುಸಿದು ಹೋಗಿವೆ.
ಸಾವಿರಾರು ವರ್ಷಗಳ ಮಳೆ, ಗಾಳಿ, ಬಿಸಿಲು, ಚಳಿ, ಭೂಕಂಪದ ಹೊಡೆತಕ್ಕೆ ನಲುಗಿವೆ. ಸಾವಿರಾರು ವರ್ಷಗಳಿಂದ ಈಜಿಪ್ಟ್ ಬೇರೆ ಬೇರೆ ರಾಜಮನೆತನದ ಆಳ್ವಿಕೆಗೆ ಒಳಪಟ್ಟಿದ್ದರಿಂದ, ಆ ಸಂದರ್ಭದಲ್ಲಿಯೂ ಪಿರಮಿಡ್ಡುಗಳು ಧ್ವಂಸವಾಗಿರುವ ಸಾಧ್ಯತೆಯೆಂದು ಹೇಳುತ್ತಾರೆ. ಪ್ಯಾರಿಸಿನ ಐಫೆಲ್ ಟವರ್ ಸ್ಥಾಪಿಸುವುದಕ್ಕಿಂತ ಮುನ್ನ ಮನುಷ್ಯ ನಿರ್ಮಿತ ರಚನೆ (structure)ಗಳಲ್ಲೇ ಅತಿ ಎತ್ತರ ವಾದ ಮತ್ತು ಬೃಹತ್ತಾದ ನಿರ್ಮಿತಿಯೆಂದರೆ ಪಿರಮಿಡ್ಡುಗಳೇ ಆಗಿದ್ದವು. ಅನಂತರ ಗಾತ್ರ, ಪ್ರಮಾಣ ಮತ್ತು ಎತ್ತರದಲ್ಲಿ ಅದನ್ನು ಮೀರಿಸುವ ಕಟ್ಟಡ ಅಥವಾ ರಚನೆಗಳು ಆಸ್ತಿತ್ವಕ್ಕೆ ಬಂದರೂ ಪಿರಮಿಡ್ಡುಗಳ ಆಕರ್ಷಣೆ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ.
ಪಿರಮಿಡ್ಡುಗಳ ಬಗ್ಗೆ ಜಗತ್ತಿನ ವಾಸ್ತುತಜ್ಞರು, ಶಿಲ್ಪ ಪರಿಣತರು, ಇತಿಹಾಸಕಾರರು ದಂಡಿಯಾಗಿ ಅಧ್ಯಯನ ಮಾಡಿದ್ದಾರೆ, ಸಂಶೋಧನೆಯ ಬೆಳಕನ್ನು ಚೆಲ್ಲಿದ್ದಾರೆ. ಆದರೆ ಪಿರಮಿಡ್ಡುಗಳ ಒಳಗೆ ಏನಿವೆ ಎಂಬುದರ ರಹಸ್ಯ ಇಂದಿಗೂ ಸಂಪೂರ್ಣ ಬಯಲಾಗಿಲ್ಲ. ಕಾಲಕಾಲಕ್ಕೆ ಈ ಕುರಿತು ಇತಿಹಾಸಕಾರರು, ಸಂಶೋಧಕರು ಹೊಸ ಹೊಸ ತರ್ಕ, ವಾದಗಳನ್ನು ಮಂಡಿಸುತ್ತಲೇ ಇರುತ್ತಾರೆ. ಜಗತ್ತಿನಾದ್ಯಂತ ಯಾವುದಾದರೂ ಒಂದು ರಚನೆ ಬಗ್ಗೆ ಅತಿ ಹೆಚ್ಚು ಸಂಶೋಧನೆಗಳಾಗಿದ್ದರೆ, ಪುಸ್ತಕಗಳು ಪ್ರಕಟ ವಾಗಿದ್ದರೆ ಅದು ಪಿರಮಿಡ್ಡುಗಳ ಬಗ್ಗೆಯಂತೆ. ಈಜಿಪ್ಟ್ ನಲ್ಲಂತೂ ಪಿರಮಿಡ್ಡುಗಳ ಬಗ್ಗೆ ಲೆಕ್ಕವಿಲ್ಲದಷ್ಟು ಪುಸ್ತಕ, ಸಿನಿಮಾಗಳು ಬಂದಿವೆ. ಪಿರಮಿಡ್ಡುಗಳ ಒಂದು ಕಲ್ಲು ಜಾರಿದರೂ ಸುದ್ದಿಯೇ, ಹೊಸ ಕಲ್ಲು ಉದ್ಭವಿಸಿದರೂ!
ಪಿರಮಿಡ್ಡುಗಳನ್ನು ನೋಡಲು ಇಂಥದೇ ಸಮಯ ಎಂಬುದಿಲ್ಲ. ಯಾವಾಗ ಬೇಕಾದರೂ ನೋಡಬಹುದು. ಯಾವಾಗ ನೋಡಿ ದರೂ ಅದು ಭಿನ್ನವಾಗಿಯೇ ಕಾಣುತ್ತದೆ. ಕಾಲಕಾಲಕ್ಕೆ ಸೂರ್ಯನ ಕಿರಣಗಳ ದಿಕ್ಕು ಬದಲಾಗುವುದರಿಂದ ಅವು ಪಿರಮಿಡ್ಡುಗಳ ಮೇಲೆ ಬಿದ್ದು ವಿಶಿಷ್ಟ, ವಿಲಕ್ಷಣವಾದ ನೋಟವನ್ನು ಸೃಷ್ಟಿಸುವುದರಿಂದ, ಪ್ರತಿ ಕ್ಷಣವೂ ಭಿನ್ನ ಅನುಭೂತಿ ಯನ್ನು ನೀಡುತ್ತದೆ. ಅದರಲ್ಲೂ ರಾತ್ರಿ ವೇಳೆ, ಬೆಳದಿಂಗಳ ಹಾಲು ಬೆಳಕಿನಲ್ಲಿ ನೋಡುವ ಖುಷಿಯೇ ಬೇರೆ.
ಅದರಲ್ಲೂ ಈಗಂತೂ ಪಿರಮಿಡ್ಡುಗಳನ್ನು ಲೇಸರ್, ಸೌಂಡ್ ಅಂಡ್ ಲೈಟ್ ಹಿನ್ನೆಲೆಯಲ್ಲಿ ನೋಡುವ ಅವಕಾಶವಿದೆ. ಹತ್ತಾರು ವರ್ಷಗಳಿಂದ ಖುದ್ದಾಗಿಯೇ ಅನುಭವಿಸಬೇಕು ಪಿರಮಿಡ್ ವೈಭವ ಪಿರಮಿಡ್ಡುಗಳನ್ನು ವಸ್ತುವಾಗಿಟ್ಟುಕೊಂಡು ಗಂಭೀರ ಛಾಯಾಗ್ರಹಣ ಮಾಡಿದವರಿದ್ದಾರೆ. ಗ್ರಹಣ ಸಂದರ್ಭದಲ್ಲಿ, ಆಕಾಶದಲ್ಲಿ ವಿಶೇಷ ಬದಲಾವಣೆಯಾಗುವಾಗ, ಪಿರಮಿಡ್ಡುಗಳ ಚಿತ್ರವನ್ನು ಸೆರೆ ಹಿಡಿಯಲೆಂದೇ ದೇಶ-ವಿದೇಶಗಳಿಂದ -ಟೋಗ್ರಾ-ರುಗಳ ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಸಾಮಾಜಿಕ ಜಾಲತಾಣ ಜನಪ್ರಿಯವಾಗಿರುವ ಈ ದಿನಗಳಲ್ಲಿ, ಬಹು ದೊಡ್ಡ ಸಂಖ್ಯೆಯಲ್ಲಿ ಪಿರಮಿಡ್ಡುಗಳ ಬಗ್ಗೆ ಅನುಭವ, ಫೋಟೋ ಹಂಚಿಕೊಳ್ಳುವ ಅಸಂಖ್ಯ ತಂಡಗಳು ಕ್ರಿಯಾಶೀಲವಾಗಿವೆ. ಎರಡು ವರ್ಷಗಳ ಹಿಂದೆ, ಚಂದ್ರ ಸಾಮಾನ್ಯವಾಗಿ ಕಾಣಿಸುವುದಕ್ಕಿಂತ ಮೂರ್ನಾಲ್ಕು ಪಟ್ಟು ದೊಡ್ಡದಾಗಿ ಕಾಣಿಸಿದಾಗ, ಗಿಜಾ ಪಿರಮಿಡ್ ಮೇಲಿನ ಚಂದ್ರನ ಚಿತ್ರವನ್ನು ಹಲವು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಿದ್ದನ್ನು ನೋಡಿರಬಹುದು.
ಸಾಕ್ಷಾತ್ ಪಿರಮಿಡ್ಡುಗಳನ್ನು ಕಣ್ಣಾರೆ ನೋಡುವುದಕ್ಕಿಂತ ಮುನ್ನ ಫೋಟೋದಲ್ಲಿ, ಸಿನಿಮಾದಲ್ಲಿ ನೋಡಿರಬಹುದು. ಅವುಗಳ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಓದಿರಬಹುದು. ಕತೆ ಕೇಳಿರಬಹುದು. ಆದರೆ ಎದುರಿಗೆ ನೋಡಿದಾಗ, ಅದಕ್ಕೂ ಮೊದಲು ಕೇಳಿದ ಎಲ್ಲ ಕತೆ, ಕಲ್ಪನೆ, ಒಟ್ಟಾರೆ ಅನುಭವಗಳೆಲ್ಲಾ ಸಂಪೂರ್ಣ ಸಪ್ಪೆ ಎನಿಸಿಬಿಡುತ್ತದೆ. ಅದಕ್ಕೆ ಕಾರಣ ಪಿರಮಿಡ್ಡುಗಳ ಬೃಹದ್ಭವ್ಯ
ಆಕಾರ, ಗಾತ್ರ ಮತ್ತು ಪ್ರಮಾಣ. ಪಿರಮಿಡ್ಡುಗಳು ಇಷ್ಟು ದೊಡ್ಡದಿರಬಹುದಾ ಎಂಬುದನ್ನು ಖುದ್ದು ನೋಡಿಯೇ ಅನುಭವಿಸ ಬೇಕು.
ಅದು ಅಕ್ಷರಗಳಲ್ಲಿ ಮೊಗೆದು ಕೊಡಲಾಗದಂಥದ್ದು , ಕೆಮರಾ ಕಣ್ಣಿನಲ್ಲಿ ಕಟ್ಟಿಕೊಡಲಾಗದಂಥದ್ದು. ಅದು ಕಲ್ಪನಾತೀತ ವಾದುದು. ಪಿರಮಿಡ್ಡುಗಳನ್ನು ನೋಡುವ ತನಕ, ಅದರ ಹಿಂದಿನ ಕಲ್ಪನೆಯೇ ಬೇರೆ, ನೋಡಿದ ನಂತರದ ಅನುಭವವೇ ಬೇರೆ. ಒಂದಕ್ಕೊಂದು ಅಜಗಜಾಂತರ.
ಪಿರಮಿಡ್ಡುಗಳು ಇರೋದು ಈಜಿಪ್ಟ್ ನಲ್ಲಿ ಮಾತ್ರವಲ್ಲ. ಪಕ್ಕದ ಸುಡಾನ್‌ನಲ್ಲೂ ಪಿರಮಿಡ್ಡುಗಳಿವೆ. ಈಜಿಪ್ಟ್ ನಲ್ಲಿರುವುದಕ್ಕಿಂತ ಹೆಚ್ಚು ಪಿರಮಿಡ್ಡುಗಳು ಸುಡಾನ್ ನಲ್ಲಿವೆ. ಆದರೂ ಪಿರಮಿಡ್ಡುಗಳೆಂದರೆ ತಕ್ಷಣ ನೆನಪಿಗೆ ಬರುವುದು ಗಿಜಾ ಪಿರಮಿಡ್ಡುಗಳೇ. ಅನೇಕರಿಗೆ ಸೂಡಾನ್ ನಲ್ಲಿ ಪಿರಮಿಡ್ಡುಗಳು ಇದ್ದಿರಬಹುದು ಎಂಬ ಸಂಗತಿಯೂ ಗೊತ್ತಿರಲಿಕ್ಕಿಲ್ಲ. ಹೇಳಿದರೂ ನಂಬಲಿಕ್ಕಿಲ್ಲ. ಆದರೆ ಇದು ವಾಸ್ತವ. ಈಜಿಪ್ಟ್ ನಲ್ಲಿರುವ ನೂರಿಪ್ಪತ್ತಕ್ಕೂ ಹೆಚ್ಚು ಪಿರಮಿಡ್ಡುಗಳ ಪೈಕಿ ಕಣ್ಣೊಳಗೆ ಶಾಶ್ವತವಾಗಿ ನೆಲೆಸುವುದು ಗಿಜಾ ಪ್ರದೇಶದಲ್ಲಿರುವ ಆ ಮೂರು ಪಿರಮಿಡ್ಡುಗಳೇ!