Tuesday, 17th December 2024

Raju Adakalli Column: ಗಿಡ ಮರಗಳ ದೊಡ್ಡಮ್ಮ ಈ ತುಳಸಿ ಗೌಡಮ್ಮ

ರಾಜು ಅಡಕಳ್ಳಿ

ಇವರು ತುಳಸಿ ಗಿಡವಲ್ಲ. ಇವರು ತುಳಸಿ ಗೌಡ. ಆದರೆ ತುಳಸಿ ಗಿಡಕ್ಕೂ ಈ ತುಳಸಿ ಗೌಡತಿಗೂ ತುಂಬಾ ಸಾಮ್ಯತೆ. ಕಾರಣ ತುಳಸಿ ಗಿಡವು ಹಸಿರು ಸೂಸುತ್ತದೆಯಾದರೆ ತುಳಸಿ ಗೌಡಮ್ಮ ತಾವಿದ್ದಲ್ಲ ಹಸುರು ಪಸರಿಸುತ್ತಾರೆ. ತುಳಸಿ ಗಿಡ ಹೇಗೆ ತಾನು ಬೆಳೆಯುತ್ತಾ ಸುತ್ತಮುತ್ತಲ ಪರಿಸರದ ಕಲ್ಮಶ ಹೀರುತ್ತಾ ಶುದ್ಧಗಾಳಿ ನೀಡುವ ಸಂಜೀವಿನಿ ಯಾಗಿದೆಯೋ ಹಾಗೆಯೇ ತುಳಸಿ ಗೌಡಕ್ಕಳೂ ಲಕ್ಷಾಂತರ ಗಿಡ ಬೆಳೆಸಿ ವಾತಾವರಣವನ್ನು ತಂಪಿಟ್ಟುಕೊಂಡ ವೃಕ್ಷಮಾತೆಯಾಗಿದ್ದಾರೆ. ಹೀಗಾಗಿ ಇವರಿಗೆ ಮುಂದಾಲೋಚನೆಯಿಂದ ತುಳಸಿ ಎಂದು ಯಾವ ಪುಣ್ಯಾತ್ಮ ಹೆಸರಿಟ್ಟ ನೋ ಆತನಿಗೊಂದು ದೊಡ್ಡ ಸಲಾಂ.

ಒಂದು ಕಾಲಕ್ಕೆ ನರ್ಸರಿಯಲ್ಲಿ ಒಂದು ರುಪಾಯಿ ನಾಲ್ಕಾಣೆ ದಿನಗೂಲಿ ದುಡಿಯುತ್ತಿದ್ದ ಈ ತುಳಸಿಯಮ್ಮನಿಗೆ,
ಪದ್ಮಶ್ರೀ ಪಟ್ಟ, ರಾಷ್ಟ್ರಪತಿ ಅವರಿಂದ ಗೌರವ ಡಾಕ್ಟರೇಟ್ ಪದವಿ, ರಾಜ್ಯೋತ್ಸವ ಪ್ರಶಸ್ತಿ.. ಹೀಗೆ ತುಳಸಿಯಮ್ಮ ನೆಟ್ಟ ಗಿಡ ಫಲಕೊಟ್ಟಂತೆ ಆಕೆಯ ಶ್ರಮವೂ ಫಲಶೃತಿ ನೀಡುತ್ತಾ ಅವರನ್ನು ನಿಸರ್ಗಮಾತೆಯನ್ನಾಗಿಸಿದೆ.
ಇವರ ಭೌತಿಕ ಶರೀರ ಈಗ ಇರಲಿ ಬಿಡಲಿ, ಆದರೆ ಇವರು ಕೈಗೊಂಡ ಕೆಲಸ ಅಜರಾಮರ.

ಕಾಡು ಬೆಳೆಸಿ ನಾಡು ಉಳಿಸಿ ಎಂಬುದು ರಾಜಕಾರಣಿಗಳಿಗೆ ಭಾಷಣದ ವಾಕ್ಯವಾದರೆ ಈ ತುಳಸಿ ಅಕ್ಕನಿಗೆ ಈ ಧ್ಯೇಯ ವಾಕ್ಯವೇ ತಮ್ಮ ಬದುಕಿನ ಪ್ರೀತಿಯ ಅನವರತ ಧ್ಯೇಯವಾಗಿದೆ. ತಮ್ಮ ದಿನನಿತ್ಯದ ವಿಧೇಯಕವಾಗಿದೆ.
ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಹುಲ್ಲಿನಮನೆಯಲ್ಲಿಯೇ ತುಳಸಿಗೌಡರು ಬಾಲ್ಯ ಕಳೆದಿದ್ದು. ಇವರದ್ದು
ಹಾಲಕ್ಕಿ ಒಕ್ಕಲಿಗರ ಸಮುದಾಯ. ಹೀಗಾಗಿ ಬಡತನ ಇವರ ಹುಟ್ಟು ಹೊಕ್ಕುಳ ಬಳ್ಳಿಯ ಜೊತೆಗೆ ಬಳುವಳಿಯಾಗಿ
ಬಂದಿದೆ. ಕುಂಟೆಬಿ ಆಟವಾಡುವ ಸಂದರ್ಭದಲ್ಲಿಯೇ ಇವರಿಗೆ ಬಾಲ್ಯವಿವಾಹ. ಆದರೆ 20 ವರ್ಷಕ್ಕೆ ಗಂಡನನ್ನು
ಕಳೆದುಕೊಂಡು ಸಂಸಾರವೆಲ್ಲ ತೊಳಸಂಬಟ್ಟೆಯಾದರೂ ಅಷ್ಟರಗಲೇ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಗಿಡ
ಬೆಳೆಸುವ, ಬೆಳೆಸಿದ ಗಿಡವನ್ನು ಗುಡ್ಡ ಬೆಟ್ಟಗಳಲ್ಲಿ ನೆಡುವ ದಿನಗೂಲಿ ಕೆಲಸವಿದ್ದಿದ್ದರಿಂದ ಗುಡಿಸಲಲ್ಲಿ ಇವರಿಗೆ ಗಂಜಿ ನೀರಿಗೆ ತತ್ವಾರವಾಗಲಿಲ್ಲ.

ಇನ್ನು ಸ್ವಂತಕ್ಕಾಗಿ ರೇಷ್ಮೆ ಸೀರೆ ಖರೀದಿಸುವ ಅಥವಾ ಬ್ಯೂಟಿಪಾರ್ಲರಿಗೆ ಹೋಗಿ ಮೇಕಪ್ ಮಾಡಿಸಿಕೊಳ್ಳುವ
ಜಾಯಮಾನವೂ ಇವರದ್ದಲ್ಲ. ಆದರೆ ಪರಿಸರದ ಬ್ಯೂಟಿ ಹೆಚ್ಚಿಸುವ ಗಿಡಮರ ಹೂಹಣ್ಣುಗಳ ತೋಟ ಬೆಳೆಸುವುದ
ರಲ್ಲಿಯೇ ಇವರ ಜೀವನದ ಸಾರ್ಥಕತೆ. ಹೀಗಾಗಿ ಖರ್ಚಿಗೆ ತುಂಬಾ ಹಣವೇನೂ ಆಗ ಇವರಿಗೆ ಬೇಕಾಗಿರಲಿಲ್ಲ. ಹಸಿ
ವಾದಾಗ ಗುಡ್ಡ ಬೆಟ್ಟಗಳ ಕಾಡು ಹಣ್ಣುಗಳನ್ನು, ಗಡ್ಡೆ ಗೆಣಸುಗಳನ್ನು ಹೆಕ್ಕಿ ತಿಂದುಂಡು ಗಿಡ ನೆಡುವುದರಲ್ಲಿಯೇ
ತೃಪ್ತಿಯಿಂದ ಬದುಕುವ ಕಲೆಯೂ ಇವರಿಗೆ ಕರಗತವಾಗಿತ್ತು.

ಎಷ್ಟೋ ಬಾರಿ ಬೆಳಗಿನಜಾವವೇ ಇವರು ಗಿಡ ನೆಡಲು ಅರಣ್ಯಕ್ಕೆ ತೆರಳುತ್ತಿದ್ದರಿಂದ ಅಲ್ಲಿ ಇವರಿಗೆ ಹಲ್ಲುಜ್ಜಲು
ಬೇವಿನಕಡ್ಡಿ, ಇದ್ದಿಲು ಪುಡಿಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ಆ ಕಾಡಿನಲ್ಲಿ ಕೋಲ್ಗೆಟ್ ಬ್ರಷ್, ಕ್ಲೋಸ್‌ಅಪ್ ಪೇಸ್ಟ ಎಲ್ಲಿ ಸಿಗುವುದು ಸಾಧ್ಯ ? ಆದರೆ ಈ ಅಜ್ಜಿ ಹಲ್ಲಿನ ಡಾಕ್ಟರ ಬಳಿ ಹೋಗಿದ್ದು ತುಂಬಾ ಕಡಿಮೆಯಂತೆ. ಈ ಅಜ್ಜಿಗೆ ಸ್ನಾನಕ್ಕೆ ಇಂದಿಗೂ ಲಕ್ಸ್, ಲಿರಿಲ್ ಸೋಪಿಗಿಂತ ಕಾಡಿನಲ್ಲಿ ಸಿಗುವ ಅಂಟುವಾಳ, ಶೀಗೆಕಾಯಿಗಳೇ ಹೆಚ್ಚು ಇಷ್ಟವಂತೆ. ತಾನು ಪರಿಸರವಾದಿ ಎಂದು ಬೋರ್ಡು ಹಾಕಿಕೊಳ್ಳುವ ಅಥವಾ ಬುರುಡೆ ಬಿಡುವ ಚಟವೂ ಇವರದ್ದಲ್ಲ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು ವಿದೇಶದಿಂದ ಒಂದಷ್ಟು ಡಾಲರ್ ತರಿಸಿಕೊಂಡು ಪರಿಸರವಾದಿ ಎಂದು ಪೋಸು ಕೊಟ್ಟು ಸರ್ಕಾರಿ ಸೌಲಭ್ಯ ಗಿಟ್ಟಿಸಿಕೊಳ್ಳುವ ಪರಿಸರ ವ್ಯಾಧಿಯಂತೂ ಇವರಲ್ಲ.

ತಾನಾಯಿತು ತನ್ನ ಗಿಡಮರ ಬೆಳೆಸುವ ಕಸುಬಾಯಿತು ಎಂದುಕೊಂಡು ಬರಿಗಾಲಿನಲ್ಲಿಯೇ ಗುಡ್ಡಬೆಟ್ಟ, ಕಾಡು ಮೇಡು ಸುತ್ತುತ್ತ ಪ್ರಕೃತಿ ಪೋಷಣೆಯ ತಮ್ಮ ಬದುಕಿನ 83 ವರ್ಷಗಳಲ್ಲಿ ಲಕ್ಷಾಂತರ ಗಿಡಮರಗಳನ್ನು ಬೆಳೆಸಿದ ಈ ಹಾಲಕ್ಕಿ ಮಹಿಳೆ, ಏಲಕ್ಕಿಯಂತೆ ಪರಿಸರದ ಮಧ್ಯೆಯೇ ತಮ್ಮ ಬದುಕನ್ನು ಸುಪರಿಮಳಭರಿತವನ್ನಾಗಿಸಿ ಕೊಂಡವರು.

ಹೀಗಾಗಿ ಅಂಕೋಲಾ ಸಮೀಪದ ಹೊನ್ನಳ್ಳಿ, ಹೆಗ್ಗಾರು, ಮಕ್ಕಿಗದ್ದೆ, ಅಗಸೂರು, ಮಾಸ್ತಿಕಟ್ಟ ಈ ಮುಂತಾದ ಹಳ್ಳಿಗಳ ಕಾನು, ಕೋಡಿ, ಕಣಿವೆಗಳ ತುಂಬೆಲ್ಲ ಈ ತುಳಸಿ ಅಜ್ಜಿಯ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೇ ತುಂಬಿ ಕೊಂಡಿದ್ದಾರೆ ಅರ್ಥಾತ್ ಈ ಅಜ್ಜಿ ಅಲ್ಲಿ ನೆಟ್ಟ ಲಕ್ಷಾಂತರ ಗಿಡ ಮರಗಳು ಈಗ -ಸಲು ಬಿಡುತ್ತ, ನೆರಳು ನೀಡುತ್ತಾ, ಸುಗಂಧ ಸೂಸುತ್ತ, ಈ ಅಜ್ಜಿಯನ್ನು ಸ್ಮರಿಸುತ್ತಿವೆ.

ಒಟ್ಟಾರೆ ತಾವು ಹವಾಯಿ ಚಪ್ಪಲಿಯನ್ನೂ ಹಾಕದೇ ಬರಿಗಾಲಲ್ಲಿ, ಕಲ್ಲು ಮುಳ್ಳುಗಳಿಗೂ ಹೆದರದೇ ಗಿಡಮರಗಳ
ಸಂತಾನದ ಆರೈಕೆ ಮಾಡುವ ಸೂಲಗಿತ್ತಿಯಾದ ಪ್ರತಿಫಲದಿಂದಾಗಿ ಈ ಅಜ್ಜಿ ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿಗೂ
ಭಾಜನರಾಗುವಂತಾಯಿತು. ರಾಷ್ಟ್ರಪತಿ, ಪ್ರಧಾನಮಂತ್ರಿಗಳಂತಹ ಮಹಾಮಹಿಮರಿಂದಲೂ ಪ್ರಶಂಸೆ, ಪುರಸ್ಕಾರ
ಗಳಿಸಿದ ಗಟ್ಟಿಗಿತ್ತಿಯಾಗಿ, ವನ್ಯಸಿರಿಯನ್ನು ಪಾಲನೆ ಪೋಷಣೆ ಮಾಡುವ ವನದೇವಿಯಾಗಿ ಈ ಮುಗ್ಧ ಮಹಿಳೆ ಲೋಕ ವಿಖ್ಯಾತರಾಗಿರುವುದು ಉತ್ತರ ಕನ್ನಡಕ್ಕಷ್ಟೇ ಅಲ್ಲ, ಇಡೀ ಪರಿಸರ ಸಂಕುಲಕ್ಕೇ ಅಭಿಮಾನದ ಸಂಗತಿ. ಈ ಹಿಂದೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಸ್ತಬ್ಧ ಚಿತ್ರದಲ್ಲಿಯೂ ನಾರಿಶಕ್ತಿಯ ಪ್ರತೀಕವಾಗಿ ಈ ತುಳಸಿ ಗೌಡರು ವಿಜೃಂಭಿಸಿದ್ದು ವಿಶೇಷವಾಗಿತ್ತು.

ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದು ಮತ್ತು ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸತ್ಯಸಾಯಿ ಸೇವಾ ವಿಶ್ವ ವಿದ್ಯಾಲಯದ ಡಾಕ್ಟರೇಟ್ ಸ್ವೀಕರಿಸಿದ್ದು ಈ ತುಳಸಿಯಮ್ಮನ
ಸಾಧನೆಗೆ ಸಿಕ್ಕಿದ ಮತ್ತಷ್ಟು ಗೌರವಗಳಾಗಿವೆ. ಈ ತುಳಸಿಗೌಡತಿ ಅರಣ್ಯ ಇಲಾಖೆಯ ನರ್ಸರಿ ಕೆಲಸದಲ್ಲಿ ತಮ್ಮ ಬದುಕಿನ ಬಹುದೊಡ್ಡ ಭಾಗವಾದ 66 ವರ್ಷಗಳನ್ನೇ ಧಾರೆಯೆರೆದಿದ್ದಾರೆ. ಆದರೆ ಇವರು ಕೈಗೆ ವಾಚು ಕಟ್ಟಿಕೊಂಡು ಸಮಯ ನೋಡುತ್ತಾ ಒಂದುದಿನವೂ ಕೆಲಸ ಮಾಡಿಲ್ಲ.

ಬೆಳಗ್ಗಿನಿಂದ ರಾತ್ರಿಯವರೆಗೆ ಗಾಣದ ಎತ್ತಿನಂತೆ ದುಡಿಯುತ್ತಾ, ಕಾಡಿಗೆ ಹೋಗಿ ಹೊನ್ನೆ , ಮತ್ತಿ, ಕೆಂದಾಳು,
ಬನಾಟೆ, ಸಾಗವಾನಿ, ರಂಜಲು, ನೇರಳೆ, ನುಗ್ಗೆ, ಹೆಬ್ಬಲಸು, ಹೊಂಗೆ, ಹೊಳೆಮತ್ತಿ, ನೆಲ್ಲಿ, ಮಾವು, ಗೇರು ಮುಂತಾದ
ತಳಿಗಳನ್ನು, ಬೀಜಗಳನ್ನು ಸಂಗ್ರಹಿಸಿ ನರ್ಸರಿಗೆ ತಂದು ಮಣ್ಣು, ರೇತಿ, ಗೊಬ್ಬರದೊಂದಿಗೆ ಕೊಟ್ಟೆಯಲ್ಲಿ ಹಾಕಿ ಅವು
ಗಳ ಪ್ರಸವ ಮಾಡಿಸಿ, ಹುಟ್ಟಿದ ಮರಿ ಗಿಡಗಳನ್ನು ಸುತ್ತಮುತ್ತಲ ಗುಡ್ಡಗಾಡುಗಳಲ್ಲಿ ನೆಟ್ಟು, ನೀರುಣಿಸಿ, ಬೇಲಿ ಹಾಕಿ
ನಿಗಾ ವಹಿಸುವುದೆಂದರೆ ಅದು ಮನಸ್ಸಿಟ್ಟು ಮಾಡಬೇಕಾದ ಕೆಲಸವೇ ಹೊರತು ವಾಚು ಕಟ್ಟಿಕೊಂಡು ಮಾಡು ವಂತಹ ಕೆಲಸವಲ್ಲವೆಂಬುದು ಈ ತುಳಸಿ ಗೌಡರು ಲಾಲಿಸಿಕೊಂಡು ಪಾಲಿಸಿಕೊಂಡು ಬಂದ ರೂಢಿ.

ಹೀಗಾಗಿ ಈ ಹಿರಿಯಜ್ಜಿ ಒಂದೇ ಒಂದು ತರಗತಿಯನ್ನು ಶಾಲೆಯಲ್ಲಿ ಕಲಿಯದಿದ್ದರೂ ಇಂದು ನೂರಾರು ಗಿಡ
ಮರಗಳ ಪ್ರಭೇದ, ಕುಲ, ಜಾತಕ, ಗುಣ, ಇವುಗಳನ್ನು ಬೆಳೆಸುವ ಕಲೆಯ ಕುರಿತು ನಾಟಿ ಭಾಷೆಯ ಮಾತನಾಡ
ಬಲ್ಲರು. ಏಕೆಂದರೆ ಇವರಿಗೆ ಬಯಲು, ಬೆಟ್ಟ ಗುಡ್ಡಗಳೇ ಪ್ರತ್ಯಕ್ಷ ಪರಿಸರದ ಪಾಠ ಮಾಡುವ ಶಾಲೆಗಳಾಗಿದ್ದವು. ತಮಗೆ ಇಂಗ್ಲಿಷ್ ಬಾರದಿದ್ದರೂ ತಮ್ಮ ಪರಿಸರದ ಪ್ರತ್ಯಕ್ಷ ಅನುಭವದ ಆಧಾರದ ಮೇಲೆ -ರೆಸ್ಟ ಅಽಕಾರಿಗಳಿಗೇ ಇವರು ಪಾಠ ಮಾಡಬಲ್ಲರು. ಸಂದರ್ಭ ಬಂದರೆ ಮರಹತ್ತಿ ಹಣ್ಣು, ಕಾಯಿ, ಬೀಜ ಸಂಗ್ರಹಿಸುತ್ತಿದ್ದರು. ಇವರ ಆಹಾರ ಮೂಲತಃ ಮಾಂಸಾ ಹಾರಿಯಾದರೂ ಇವರು ಕಾಡು ಪ್ರಾಣಿಗಳನ್ನು ಎಂದಿಗೂ ಹೊಡೆದು ತಿಂದವರಲ್ಲ.

ಅಷ್ಟೇ ಏಕೆ ಬೇಟೆಗಾರರು ಮತ್ತು ಕಾಡು ಕಳ್ಳ ಖರೀಮರು ಇವರ ಸೇವಾ ಕ್ಷೇತ್ರವಾದ ಗುಡ್ಡ ಬೆಟ್ಟಗಳಿಗೆ ನುಗ್ಗದಂತೆ ತಡೆಯುವ ಕಾವಲುಗಾರ ರಾಗಿರುತ್ತಿದ್ದರು. ಇವರ ಕಾಡುಸೇವೆಗೆ ಭಾನುವಾರದ ರಜಾ ಇರಲಿಲ್ಲ. ವಾರದ ಏಳು ದಿನವೂ ನಾವು ಊಟ ಮಾಡುತ್ತೇವ, ನಮ್ಮ ಊಟಕ್ಕೆ ರಜೆ ಉಂಟೇ ? ಹಾಗೆಯೇ ಗಿಡಮರಗಳ ಸೇವೆಯನ್ನೂ ವಾರದ ಎ ದಿನ ಮಾಡಬೇಕೆಂಬುದು ಇವರ ಬದ್ಧತೆಯಾಗಿತ್ತು.

ಡಾ.ಯಲ್ಲಪ್ಪ ರೆಡ್ಡಿಯವರು ಅರಣ್ಯಾಧಿಕಾರಿಯಾಗಿದ್ದಾಗ ಈ ಅಜ್ಜಿಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರನ್ನು ಅರಣ್ಯ ಇಲಾಖೆಯ ಖಾಯಂ ನೌಕರರೆಂದು ನಿಯುಕ್ತಿಗೊಳಿಸಿದ್ದುದು ಅಜ್ಜಿಗೆ ತನ್ನ ಕುಟುಂಬ ನಿಭಾಯಿಸಲು ಅನುಕೂಲವಾಯಿತು. ಇವರು ಈವರೆಗಿನ ತಮ್ಮ ಜೀವಿತಾವಧಿಯಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ನೋಡಿದ ಮೊದಲ ಮತ್ತು ಕೊನೆಯ ಒಂದೇ ಒಂದು ಸಿನಿಮಾ ಎಂದರೆ ಅದು ಗಂಧದ ಗುಡಿ. ಆದರೆ ಈಗ ಈ ತುಳಸಿಯಮ್ಮನ ಹಳ್ಳಿಗಾಡಿನ, ಹಳ್ಳಿ ಕಾಡಿನ ಸಾಹಸಗಾಥೆಯನ್ನೇ ಸಿನೆಮಾ ಮಾಡಿದರೆ ಅದು ನೋಡುಗರಿಗೆ ರೋಚಕವಾದೀತು.

ಉಪ್ಪಾಗೆ ಮರದ ವೈಜ್ಞಾನಿಕ ಹೆಸರಾದ ಗಾರ್ಸಿನಾ ಗುಮ್ಮಿ ಗುಟ್ಟ ಎಂಬ ಶಬ್ದ ಈ ತುಳಸಿಯಜ್ಜಿಗೆ ಗೊತ್ತಿಲ್ಲದೇ ಇರ
ಬಹುದು. ಆದರೆ ಉಪ್ಪಾಗೆ ಗಿಡವನ್ನು ಹೇಗೆ ಬೆಳೆಸಬೇಕು? ಅವುಗಳ ಹೀಚು, ಕಾಯಿ, ಬೀಜ, ಸಿಪ್ಪೆಗಳ, ಸೊಪ್ಪುಗಳ
ಉಪಯೋಗಗಳೇನು? ಇದರಿಂದ ತುಪ್ಪವನ್ನು, ಗಾವುಟಿ ಔಷಧಿಯನ್ನು ತಯಾರಿಸುವುದು ಹೇಗೆ ಇತ್ಯಾದಿ ಎಲ್ಲಾ
ಮಾಹಿತಿಗಳನ್ನು ಶೇಂಗಾ ಹುರಿದಂತೆ ಹೇಳಬಲ್ಲಂತಹ ಹಳ್ಳಿ ಪಾಂಡಿತ್ಯ ಈ ಅಮ್ಮನಲ್ಲಿರುವುದು ವಿಶೇಷ. ಕಾಡು ಪ್ರಾಣಿಗಳ, ಹಕ್ಕಿಪಕ್ಷಿಗಳ ಜೀವನಶೈಲಿಯ ಬಗ್ಗೆಯೂ ಇವರಿಗೆ ಚೆನ್ನಾಗಿ ಗೊತ್ತು.

ಹೀಗಾಗಿ ಇವರನ್ನು ಅರಣ್ಯದ ವಿಶ್ವಕೋಶ ಎಂದು ಕರೆಯುತ್ತಾರೆ. ಕಾಡಿನ ಸೇವೆಯನ್ನು ಯಾವುದೇ ಅಲವರಿಕೆ ಯಿಲ್ಲದೇ ಅನವರತ ಕೈಗೊಂಡ ವನಮಾಲಿ ಇವರು. ಮೊಬೈಲ್ ನೋಡುತ್ತಾ ಕುಂತ ಕುಂಡೆ ಮರೆಯುವ ಇಂದಿನ ಯುವ ಪೀಳಿಗೆ ತುಳಸಿ ಗೌಡರಿಂದ ಕಲಿಯಬೇಕಾದ ಪರಿಸರ ಪಾಠಗಳು ಬೇಕಾದಷ್ಟಿವೆ. ಕಾಡಿನ ಸೊಗಡನ್ನು
ಹೇಳಲು ಜೀನ್ಸ ಪ್ಯಾಂಟು, ಬಾಟಾ ಶೂ ಎಲ್ಲಾ ಬೇಕೆಂದೇ ನಿಲ್ಲ. ಕಾಡು ಹೊಕ್ಕಿ ಕೆಲಸ ಮಾಡಿದ ಕಾಮನ್ಸೆನ್ಸ ಇದ್ದರೆ ಸಾಕು ಎಂಬುದು ಈ ಅಜ್ಜಿಯನ್ನು ನೋಡಿದರೆ ಗೊತ್ತಾಗುವ ವಿಷಯ.

ಈ ಅನುಭವದ ಹಿನ್ನೆಲೆಯಲ್ಲಿ ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರಿಸರ ಪಾಠ ಕಲಿಸಲು ಇವರನ್ನು
ಕರೆಯುತ್ತಿರುತ್ತಾರೆ. ಆದರೆ ಪ್ರತಿ ವರ್ಷವೂ ವನಮಹೋತ್ಸವದ ಹೆಸರಿನಲ್ಲಿ ಕಳೆದ ವರ್ಷ ತೋಡಿದ್ದ ಕುಳಿಯ ಈ
ವರ್ಷವೂ ಮತ್ತೆ ಗಿಡ ನೆಟ್ಟು ಒಣ ಮಹೋತ್ಸವ ಮಾಡುವಂಥದ್ದಕ್ಕೆ ಈ ಅಜ್ಜಿ ನಂಗೆ ಬರೋಕೆ ಆಗೋದಿಲ್ರೋ
ಒಡೆಯಾ ಎಂದು ಹೇಳುತ್ತಾ ತಮ್ಮ ಹಿತ್ತಿಲು ಸೇರಿಕೊಂಡು ಬಿಡುತ್ತಾರೆ. ಪಬ್ಲಿಸಿಟಿ, ಗಿಬ್ಲಿಸಿಟಿ, ಫೋಟೋ ಪೋಸು
ಇತ್ಯಾದಿಗಳಿಗೆಲ್ಲ ಹಪಹಪಿಸುವ ಜೀವ ಇವರದ್ದಲ್ಲ. ಸರಳ ಸುಂದರ ಬದುಕಿನ ಹೆಚ್ಚು ಅರ್ಥ ಎಂಬುದು ಈ ಹಿರಿಯ
ಜೀವಿಯ ಜೀವನ ವಿಧಾನ.

ಪ್ರಧಾನಿ ನರೇಂದ್ರ ಮೋದಿಯವರನ್ನು ಈ ತುಳಸಿಜಿಯವರು ದೆಹಲಿಯಲ್ಲಿ ಭೇಟಿ ಮಾಡಿದ್ದರು. ತದನಂತರ
ಮೋದಿಯವರು ಇತ್ತೀಚೆಗೆ ಅಂಕೋಲಾಕ್ಕೆ ಬಂದಾಗ ಈ ತುಳಸಿ ಮೇಡಂ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದರು.
ಆಗ ತುಳಸಿಯವರು ಮೋದಿಯವರಿಗೆ ಹೇಳಿದ ಮಾತು: ನಿಮಗೆ ಕನ್ನಡ ಬರುವುದಿಲ್ಲ. ನನಗೆ ಹಿಂದಿ ತಿಳಿಯುವು ದಿಲ್ಲ. ಆದರೆ ಗಿಡ ನೆಟ್ಟು ಬೆಳೆಸುವುದಕ್ಕೆ ಯಾವ ಭಾಷೆಯೂ ಬೇಡ. ತುಳಸಿಯಮ್ಮನ ಈ ಮಾತಿಗೆ ಮೋದಿ ಅವರ ಮುಸುಮುಸಿ ನಗು ಉತ್ತರವಾಗಿತ್ತು.

ಹಿಂದೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋದಾಗ ಸರ್ಕಾರ ಇವರಿಗೆ ಸ್ಟಾರ್ ಹೋಟೆಲಿನಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಿದ್ದರೂ ಇವರು ಅಲ್ಲಿರದೇ, ಸೀದಾಸಾದಾ ಕರ್ನಾಟಕ ಭವನಕ್ಕೆ ಹೋಗಿ ಅಲ್ಲಿಯೇ ಉಳಿದು ತಮ್ಮ ಸರಳತೆ ಮೆರೆದಿದ್ದರು. ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸುವಾಗಲೂ ಇವರು ಕಾಟನ್ ಕೈಮಗ್ಗದ ಸೀರೆ, ಕರಿಮಣಿಯಿಂದ ಪೋಣಿಸಿದ ಕಪ್ಪು ಸರಗಳ ಹಾಲಕ್ಕಿ ಒಕ್ಕಲಿಗರ ಸಾಂಪ್ರದಾಯಕ ಪೋಷಾಕಿನಲ್ಲಿ ಹೋಗಿದ್ದರೇ ವಿನಾ ದೀಪಿಕಾ ಪಡುಕೋಣೆಯಂತೆ ಬಣ್ಣ ಬ್ಯಾಗಡೆ, ಲಿಪ್‌ಸ್ಟಿಕ್ ಮೆತ್ತಿಕೊಂಡು, ಕೆಸರು ಗದ್ದೆಯಲ್ಲಿನ ಕೊಕ್ಕರೆಯಂತೆ ಬಳುಕುತ್ತಾ ಹೋಗದೇ ತಮ್ಮ ಸರಳತೆ ಮೆರೆದಿದ್ದರು.

ನಿರ್ಮಲ, ನಿಷ್ಕಲ್ಮಶ ಮನಸ್ಸಿನ ಗುಬ್ಬಚ್ಚಿಗೆ ಸನ್ಮಾನ ಮಾಡುತ್ತೇನೆಂದಾಕ್ಷಣ ಆ ಗುಬ್ಬಚ್ಚಿ ಮೈಸೂರು ಸಿಲ್ಕ್ ಸೀರೆ ಉಟ್ಟುಕೊಂಡು, ಪಾಂಡ್ಸ್ ಪೌಡರ್ ಬಳಿದುಕೊಂಡು ರೆಡಿ ಆಗುತ್ತದೆಯೇ ? ಇಲ್ಲವಲ್ಲ. ಹಾಗೆಯೇ ಈ ತುಳಸಿ ಅಮ್ಮ ಕೃತಕತೆ, ಆಡಂಬರ, ತೋರುಗಾಣಿಕೆಯ ಜೀವನಶೈಲಿ ಇವಾವುದೂ ಇಲ್ಲದೇ ಕಾಡುಹಕ್ಕಿಯಂತೆ ನಿಸರ್ಗದ ಮಡಿಲಲ್ಲಿ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದರು.

ತುಳಸಿ ಗೌಡಮ್ಮಗೆ ಪದ್ಮಶ್ರೀ ಬಂದ ನಂತರ ಅವರ ಮನೆಗೆ ಆಗಾಗ ಮಂತ್ರಿ -ಮಹೋದಯರು, ಪರಿಸರ ಪ್ರೇಮಿಗಳು,
ಸರ್ಕಾರಿ ಅಧಿಕಾರಿಗಳು ಹಾರ ತುರಾಯಿ ಹಿಡಿದುಕೊಂಡು ದೂರದೂರದೂರಿಂದ ಬರುತ್ತಿರುತ್ತಾರೆ. ಹೀಗೆ ಬಂದವ ರಿಗೆ ವಾಪಸ್ ಹೋಗುವಾಗ ಈ ಅಜ್ಜಿ ತಮ್ಮ ಅಂಗಳದ ಸಾಕಿದ ಲಿಂಬು, ಮಾವು, ಹಲಸು, ಪೇರಲು ಗಿಡಗಳನ್ನು ಪ್ರೀತಿಯಿಂದ ಉಡುಗೊರೆಯಾಗಿ ನೀಡುವುದು ಅವರ ಪರಿಪಾಠ. ಗಿಡವಲ್ಲದೇ ಮತ್ತೆನನ್ನೂ ಕೊಡುವಷ್ಟು ದೊಡ್ಡ ಶ್ರೀಮಂತ ತಾನಲ್ಲ ಎಂದು ಈ ತುಳಸಿ ದೊಡ್ಡಮ್ಮ ಹೇಳುವಾಗ ಅವರ ಹೃದಯ ವೈಶಾಲ್ಯ ನಮಗೆ ಅರ್ಥವಾಗುತ್ತದೆ. ಈ ತುಳಸಿ ಅಮ್ಮ ಪುಣ್ಯಕೋಟಿ ಬಗ್ಗೆ ಇವರು ಹಾಡು ಬರೆದಿದ್ದರೆ ಹೀಗಿರುತ್ತಿತ್ತೇನೋ.. ಸಸ್ಯವೇ ನನ್ನ ತಾಯಿ -ತಂದೆ, ಸಸ್ಯವೇ ನನ್ನ ಬಂಧು ಬಳಗ, ಸಸ್ಯಪಾಲನೆಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು !

ಇದನ್ನೂ ಓದಿ: #RajuAdakalli #Sirsi #Lokadhwani #VishweshwarBhat #radhakrishnaSbhadti #VishwavaniBooks