Sunday, 24th November 2024

ಹಳಸಿದ ಸಂಬಂಧಗಳ ಜೊತೆಗೆ ಬಾಳಿದಷ್ಟು ಹೊಲಸು

ವಾಣಿ ಮೈಸೂರು 

ಗಂಡ ಹೆಂಡತಿಯ ನಂಟು ಜನ್ಮದ ನಂಟು.  ಹೊಂದಾಣಿಕೆಯ  ಕೊಂಡಿ ಕಳಚಿ ಆ ನಂಟು ಮುರಿದು ಬಿದ್ದಾಗ ಬೆಲೆ ಇರದು. ಅದೆಷ್ಟು ಕಾಲ ಕೂಡಿ ಜೊತೆ ಇದ್ದರು ಪರಸ್ಪರ ಗೌರವಿಸದ ಮೇಲೆ ಆ ಸಂಬಂಧ ಅಳಿಸಿದಂತೆ. ಗಂಡ ಹೆಂಡತಿ ಸಂಬಂಧಗಳು ನಂಬಿಕೆ,ಪ್ರೀತಿ, ಗೌರವ  ಭಾವನೆಗಳಿಗೆ ಸ್ಪಂದಿಸುವ ಮನಸು ಮತ್ತು ಪರಸ್ಪರ ಹೊಂದಾಣಿಕೆಯಲ್ಲಿ ನಿಂತಿರುತ್ತದೆ. ಇದ್ಯಾವುದು ಇಲ್ಲದೆ ಹೋದರೆ ಆ ಸಂಬಂಧಕ್ಕೆ ಅರ್ಥವೇ  ಇರದು ಸುಗಂಧ ಕಳೆದುಕೊಂಡ ಪುಷ್ಪದಂತೆ.

ಬಿಟ್ಟು ಬಿಡಿ

ಸಂಸಾರದಲ್ಲಿ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದ್ದಾರೆ ಮತ್ತು ಇಬ್ಬರಿಗೂ ಇಷ್ಟ ಇಲ್ಲ ಅಂದ್ರೆ ಬಿಟ್ಟು ಸುಮ್ಮನೆ ದೂರ ಹೋಗಿಬಿಡಬೇಕು  ಹಳಸಿದ ಸಂಬಂಧಗಳಿಂದ, ಅದು ಬಿಟ್ಟು ಗಂಡ ಹೆಂಡತಿ ಎನ್ನುವ ಸರ್ವಾಧಿಕಾರದ ದರ್ಪದಲ್ಲಿ  ಪತಿ / ಪತ್ನಿ ನನಗೆ ಸಿಗಲಿಲ್ಲ ಜೀವನದಲ್ಲಿ ನೆಮ್ಮದಿ ಆಗಿರಬಾರದು ಎಂದು ತೊಂದ್ರೆ ಕೊಟ್ಟು ಕಷ್ಟದಲ್ಲಿ ಸಿಲುಕಿಸಿ ಅವಮಾನ ಮಾಡಿ ಖುಷಿ ಪಡೋ ಮನೋವ್ಯಾಧಿ ಖಾಯಿಲೆ ಪತಿ / ಪತ್ನಿ ಬದುಕಿಗೆ ಹಿಂಸೆ ಕೊಡುತ್ತದೆ.  ಬೆಲೆ ಕಟ್ಟಲಾಗದ ನಷ್ಟಗಳು ಸಂಭವಿಸುತ್ತದೆ. ಪತಿ / ಪತ್ನಿ ಅವಮಾನ ಸಹಿಸದೆ  ಬದುಕೇ ಬೇಡ ಎನ್ನುವ ನಿರ್ಧಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಸಾವು ನೋವುಗಳು ಸಂಭವಿಸುವ ಅವಕಾಶವಿರುತ್ತದೆ. ಅದಕ್ಕೆ ಹಳಸಿದ ಸಂಬಂಧಗಳ ಜೊತೆಗೆ ಬಾಳಿದಷ್ಟು ಹೊಲಸು ಬಿಟ್ಟು ದೂರ ಹೋಗಿಬಿಡ ಬೇಕು. ಒಂಟಿಯಾಗಿ ಬದುಕುವುದು ಕಷ್ಟ, ಹಾಗಂತ ಹಿಂಸೆ ಮಾನಸಿಕ ವೇತನೆಯಲ್ಲಿ ಬಳಲುವುದು, ಭಾವನೆಗಳಿಗೆ ಸ್ಪಂದಿಸದ ಬಂಧನದಲ್ಲಿ ಬಾಳುವುದು ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಂತೆ? ನಮ್ಮತನವನ್ನೇ ಬಲಿದಾನ ಮಾಡಿ ಬದುಕಿದಂತೆ ಎಷ್ಟು ದಿವಸ ಎಲ್ಲವ ಸಹಿಸಿ ಬದುಕಲು ಸಾಧ್ಯ? ಸಹಿಸಿದಷ್ಟು ಮೂಕ ವೇದನೆ. ಒಳ್ಳೆಯತನದಲಿ ಬದುಕಿದಷ್ಟು  ಕೆಟ್ಟದು ಆಗುವ ಕಾಲ ಇದು. ಅವರು ನಮಗೆ ಇವರು ನಮಗೆ ಆಗುತ್ತಾರೆ ಎನ್ನುವುದು ಬೊಗಸೆಯಲ್ಲಿ ಹಿಡಿದ ತಿಳಿ ನೀರಿನಂತೆ ಯಾರು ಯಾರಿಗು ಆಗುವುದಿಲ್ಲ ಸಮಯ ಬಂದಾಗಲೇ ಅರಿವಾಗುವುದು. ಯಾರು ಯಾರಿಗೆ ಆಗುತ್ತಾರೆ ಎಂದು ಕ್ಷಣಿಕ ಬದುಕಿಗೆ ಮೋಹದ ಸಂಕೋಲೆ.

ಅಯ್ಯೋ! ಗಂಡನನ್ನು ಬಿಟ್ಟರೆ / ಹೆಂಡತಿಯನ್ನು ಬಿಟ್ಟರೆ ಅವರು ಆಡಿಕೊಳ್ಳುತ್ತಾರೆ ಇವರು ಆಡಿಕೊಳ್ಳುತ್ತಾರೆ ಯಾರು ಬರುವುದಿಲ್ಲ  ನೋವಲ್ಲಿ ಭಾಗಿಯಾಗಲು ನಮಗೆ ನಾವೇ ಸಂತೈಸಿಕೊಳ್ಳುವುದು ಮತ್ತು ಸಮಾಧಾನ ಪಡಿಸಿಕೊಳ್ಳುವುದು? ಬದುಕು ಕಟ್ಟಿಕೊಳ್ಳುವುದು  ನಾವೇ ಆಗಿರುವಾಗ ಭಯ ಏಕೆ? ಯಾರು ಏನಾದರೂ ಅಂದುಕೊಳ್ಳಲಿ ನಮ್ಮ ಜೀವನವೇ ಹೀಗೆ…ನಾವು ಪಡೆದ ಭಾಗ್ಯ ಎಂದು ಮುಂದೆ ಸಾಗುತ್ತಿರಬೇಕು. ಪ್ರತಿಯೊಬ್ಬರ ಹಣೆ ಬರಹದಲ್ಲಿ ಭಗವಂತ ಅನ್ನದ ಋಣ ಬರೆಯದೆ ಇರಲಾರ ಎನ್ನುವುದು ಪ್ರತಿಯೊಂದು ಜೀವಿಯ ನಂಬಿಕೆ. ವಂಚಿಸಿ  ಹಣವನ್ನು ಕದಿಯಬಹುದು ನಮ್ಮ ಭಾಗ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಸ್ವಾಭಿಮಾನದಿಂದ ಹೆಜ್ಜೆ ಇಟ್ಟವರಿಗೆ ನೂರಾರು ದಾರಿಗಳು ಬದುಕಲು ಮತ್ತೇಕೆ ಚಿಂತೆ ? ಹೋದವರು ಕೆಟ್ಟವರು ದೌರ್ಜನ್ಯದಿಂದ ಆಳುವವರು ಹೋದರೆ ಹೋಗಲಿ ಬಿಟ್ಟು ಬಿಡಿ ಒಳ್ಳೆಯ ದಿನಗಳು ನಮ್ಮಪಾಲಿಗೆ ಬಂದಿದೆ ಎಂದು ಬದುಕು ಬಂದಂತೆ ಸ್ವೀಕರಿಸಿ ಮುನ್ನಡೆಯುವುದು ಒಳಿತು.

ಒಂಟಿ ಬದುಕಿನ ಜಂಜಾಟ
ಒಂಟಿಯಾಗಿ ಬದುಕು ರಾಗ ಆಡುವುದು ಬಿಟ್ಟು ಬರುವಾಗಲೂ ಒಂಟಿ  ಹೋಗುವುದು ಒಂಟಿಯೇ ಯಾರು ಶಾಶ್ವತವಾಗಿ ನಮ್ಮ ಜೊತೆಯಲ್ಲಿ ಇರುತ್ತಾರೆ ಅನ್ನುವುದೇ ಭ್ರಮೆ ಅವರ ಪಾತ್ರ ಮುಗಿದ ಮೇಲೆ ಎಲ್ಲರು ವಿದಾಯ ಹೇಳಲೇಬೇಕು ಸಂಬಂಧಗಳಿಗೆ. ಶಾಶ್ವತವಲ್ಲದ  ಈ ಬಂಧನಗಳ ವ್ಯಾಮೋಹ ಏಕೆ ? ನಮ್ಮ ಬದುಕು ನಮಗೆ ದೊಡ್ಡದೇ

ನಾನು ಹೀಗೆ ಹಾಗೆ ಎಂದು ನಿರೂಪಣೆ ಕೊಟ್ಟು ಈ ಜಗತ್ತನ್ನು ಮೆಚ್ಚಿಸಿ ಬದುಕುವುದು ಕಷ್ಟ ಬಂದದ್ದು ಬಂದಂತೆ ಸ್ವೀಕರಿಸಿ ಏನಾದರೂ ಆಗಲಿ ಎಲ್ಲವನ್ನು  ಗೆಲ್ಲುವೇ ಎನ್ನುವ ಭರವಸೆ ಕುಗ್ಗದಿರಲಿ ಒಂಟಿ ಭಾವಗಳೇ ಜೀವಿಸಬೇಕು ಮನದೊಳಗೆ ಆತ್ಮವಿಶ್ವಾಸದ ಭರವಸೆಯ ಬೆಳಕೆ ಬದುಕಿಗೆ ಸ್ಫೂರ್ತಿ.