೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೊ.ರು.ಚನ್ನಬಸಪ್ಪ
ಶರಣ-ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಕೆಲಸ ಮಾಡಿದ, ನಾಡಿನಾದ್ಯಂತ ಸುತ್ತಿ ಸಂಘಟನೆ ನಡೆಸಿದ ಗೊ.ರು.ಚನ್ನಬಸಪ್ಪ ಅವರು ಡಿಸೆಂಬರ್ 20, 21, 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದಾರೆ. ಸಮ್ಮೇಳನ, ನಾಡು-ನುಡಿ, ಸಸ್ಯಾಹಾರ-ಮಾಂಸಾಹಾರ ಎಲ್ಲದರ ಬಗ್ಗೆ ಅವರ ಚಿಂತನೆಗಳು ಇಲ್ಲಿವೆ.
? ನೀವು ಒಂದು ಕಾಲದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ಈಗ ಸಮ್ಮೇಳನಾಧ್ಯಕ್ಷರು. ಏನು ಈ ಕ್ಷಣದ ಅನಿಸಿಕೆ?
? 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಸಹಜವಾಗಿ ಕನ್ನಡದ ಒಂದು ಸಾಂಸ್ಕೃ ತಿಕ ಸಂಸ್ಥೆ ನೀಡಿರುವ ಸರ್ವೋನ್ನತ ಸ್ಥಾನ. ಸಹಜವಾಗಿ ನನಗೆ ಸಂತೋಷ ಉಂಟು ಮಾಡಿದೆ. ಹಿಂದೆ ಪರಿಷತ್ತಿನ ಅಧ್ಯಕ್ಷನಾಗಿ ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗಿನದು ಗೌರವದ ಸ್ಥಾನ. ಕನ್ನಡಿಗರು ನನ್ನನ್ನು ಮೆಚ್ಚಿzರೆ, ಒಪ್ಪಿದ್ದಾರೆ, ಸಂತೋಷ.
? ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಒದಗಿಸಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ. ಇದೊಂದು ವಿವಾದವಾಗಿ ಬೆಳೆದುಬಿಟ್ಟಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?
? ಇಂಥ ವಿವಾದಗಳು ಹುಟ್ಟಬಾರದಾಗಿತ್ತು. ನಾವು ಯಾರದೋ ಮನೆಗೆ ಅತಿಥಿಗಳಾಗಿ ಹೋಗುತ್ತೇವೆ. ಆತಿಥೇಯರು ನಮಗೆ ಏನು ಮಾಡಿಕೊಡಬೇಕೋ ಅದನ್ನು ಮಾಡುತ್ತಾರೆ. ನಾವು ಅವರು ಮಾಡಿದ್ದನ್ನು ಪ್ರೀತಿಯಿಂದ ಊಟ ಮಾಡುತ್ತೇವೆ. ಒಂದು ವೇಳೆ ಅವರು ಮಾಡಿದ್ದು ನಮಗೆ ಬೇಡ ಅಂದರೆ, ಬೇಡ ಅಂದರಾಯಿತು. ಬೇರೆ ಮಾಡಿ ಕೊಡಬಹುದು. ಇದನ್ನೊಂದು ದೊಡ್ಡ ವಿವಾದ ಮಾಡಬೇಕಾಗಿಲ್ಲ. ಸಮ್ಮೇಳನದಲ್ಲಿ ನಮಗೆ ಬಹಳ ಮುಖ್ಯವಾದ್ದು ಸಾಹಿತ್ಯ ಚಿಂತನೆ. ಆಹಾರದ ವಿಚಾರ ಅಷ್ಟು ದೊಡ್ಡದು ಮಾಡಬೇಕಾಗಿಲ್ಲ.
? ೯೬ರ ಹರೆಯದಲ್ಲಿ ಯುವಕರನ್ನು ನಾಚಿಸುವಂಥ ನಿಮ್ಮ ಆರೋಗ್ಯ, ಲವಲವಿಕೆ, ಓಡಾಟದ ಗುಟ್ಟನ್ನು ತಿಳಿಸಿ.
? ದೈಹಿಕವಾಗಿ ನನ್ನ ಆರೋಗ್ಯ ಚೆನ್ನಾಗಿರುವುದರಿಂದ ಓಡಾಡಲಿಕ್ಕೆ ಅವಕಾಶ ಆಗಿದೆ. ನಾನು ಗ್ರಾಮೀಣ ಪ್ರದೇಶ ದಿಂದ ಬಂದವನು. ಗಾಂಧಿಗ್ರಾಮದಲ್ಲಿ ನಮಗೆ ತರಬೇತಿ. ನಮ್ಮ ಆಹಾರ ವಿಹಾರದಲ್ಲಿ ಒಂದು ಅಚ್ಚುಕಟ್ಟು, ಶಿಸ್ತನ್ನು ರೂಢಿಸಿಕೊಂಡು ಬಂದಿದ್ದೇನೆ. ಪ್ರತಿನಿತ್ಯ ಅಲ್ಪಪ್ರಮಾಣದ ವ್ಯಾಯಾಮ ಮತ್ತು ಅತ್ಯಂತ ಸೀಮಿತ
ಪ್ರಮಾಣದಲ್ಲಿ ಆಹಾರ ಸೇವನೆ ಇದು ಆರೋಗ್ಯದ ಗುಟ್ಟು. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ದಿನ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತೇನೆ. ಬದುಕಿನುದ್ದಕ್ಕೂ ಅನೇಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೆ.
ಹೀಗಾಗಿ ಕಾರ್ಯಕ್ರಮಗಳೂ ಸಾಕಷ್ಟು ಇರುತ್ತವೆ. ಬೇರೆ ಯಾವ ಚಿಂತೆಯೂ ಇಲ್ಲ. ಒಟ್ಟಾರೆಯಾಗಿ ಹೇಳುವು ದಾದರೆ, ಸಾಯುವ ಬಗ್ಗೆ ಚಿಂತೆಯಿಲ್ಲ, ಆದ್ದರಿಂದ ಆರೋಗ್ಯ ಚೆನ್ನಾಗಿದೆ.
? 1994ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಮಂಡ್ಯದಲ್ಲಿ ನಡೆದ 63ನೇ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನದ ಸಾರಥ್ಯ ವಹಿಸಿದ್ದಿರಿ. ಆಗಿನ ಸಮ್ಮೇಳನ ಮತ್ತು ಈಗಿನ ಸಮ್ಮೇಳನದ ಸಾಮ್ಯ-ವ್ಯತ್ಯಾಸ ಏನು?
? ಸಮ್ಮೇಳನದ ಸ್ವರೂಪದಲ್ಲಿ ಅಂಥ ಬಹಳ ವ್ಯತ್ಯಾಸವೇನೂ ಕಂಡುಬರುತ್ತಿಲ್ಲ. ಆದರೆ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಮತ್ತು ವ್ಯಾಪ್ತಿ, ವಿಸ್ತಾರ ಮೊದಲಿಗಿಂತ ಹೆಚ್ಚಾಗಿದೆ. ನಾವು ಇದ್ದಾಗ ಐದೋ ಹತ್ತೋ ಸಾವಿರ ಸದಸ್ಯ ಸಂಖ್ಯೆ ಇತ್ತು. ಈಗ ಐದಾರು ಲಕ್ಷ ಆಗಿದೆ. ಬಹುಶಃ ಸಾಹಿತ್ಯ ಸಂಸ್ಥೆಯೊಂದಕ್ಕೆ ಇಷ್ಟು ಸದಸ್ಯರು ಜಗತ್ತಿನ ಬೇರೆಲ್ಲೂ ಇಲ್ಲ ಅನ್ನಬಹುದು. ನಾನು ಕಾರ್ಯದರ್ಶಿ ಆಗಿದ್ದಾಗ ಪರಿಷತ್ತು ಜಿಲ್ಲಾಮಟ್ಟದವರೆಗೂ ಇತ್ತು. ನಾನು ಅಧ್ಯಕ್ಷನಾದ ಮೇಲೆ ಅದನ್ನು ತಾಲೂಕು ಮಟ್ಟಕ್ಕೆ ವಿಸ್ತರಿಸಲಿಕ್ಕೆ ಪ್ರಯತ್ನಿಸಿದೆ. 174ಕ್ಕೂ ಹೆಚ್ಚಿನ ತಾಲೂಕು
ಘಟಕಗಳನ್ನು ನಾನು ಆರಂಭಿಸಿದೆ. ಇಂದು ಗ್ರಾಮೀಣ ಮಟ್ಟದಲ್ಲೂ ಸಾಹಿತ್ಯ ಚಟುವಟಿಕೆಗಳು ನಡೆಯುತ್ತಿವೆ. ಕಾಲ ಬದಲಾದಂತೆ ತಾಂತ್ರಿಕ ಜ್ಞಾನ ಹೆಚ್ಚಿದೆ, ಓದಿನ ಅಭಿರುಚಿ ಮತ್ತು ವ್ಯಾಪಕತೆ ಹೆಚ್ಚಾಗಿದೆ. ತಾಲೂಕು ಮಟ್ಟದಿಂದ ರಾಜ್ಯದವರೆಗೂ ಸಮ್ಮೇಳನಗಳು ಹೆಚ್ಚಿವೆ. ಸಾಹಿತಿಗಳು, ಸಂಘಟಕರು, ವಿಮರ್ಶಕರು, ಆಡಳಿತಗಾರರು ಎಲ್ಲ ಒಂದು ಕಡೆ ಸೇರುತ್ತಿದ್ದಾರೆ.
? ಕನ್ನಡಕ್ಕೆ ಉನ್ನತ ಕೊಡುಗೆ ನೀಡಿದ ಸಾಹಿತಿಗಳು ಮಂಡ್ಯದಲ್ಲಿ ಹುಟ್ಟಿಬಂದಿದ್ದಾರೆ. ಮಂಡ್ಯದ ಮಣ್ಣು, ಭಾಷೆ, ಭಾವನೆಗಳು ಕನ್ನಡ ಸಾಹಿತ್ಯದಲ್ಲಿ ಹೇಗೆ ಹೆಣೆದುಕೊಂಡಿವೆ?
? ಮಂಡ್ಯ ಒಂದು ರೀತಿಯಲ್ಲಿ ಅಪ್ಪಟ ಕನ್ನಡದ ಕೆಚ್ಚಿನ ನೆಲ. ಅನ್ಯ ಭಾಷೆಗಳು ಇನ್ನೂ ಅಷ್ಟಾಗಿ ಅಲ್ಲಿ ಪ್ರಭಾವ ಬೀರಿಲ್ಲ. ಅಚ್ಚಕನ್ನಡ ಬೇಕಿದ್ದರೆ ಮಂಡ್ಯದ ಕಾಣಬೇಕು. ಅಂಥ ನೆಲದಲ್ಲಿ ಉದ್ದಾಮ ಸಾಹಿತಿಗಳು ಆಗಿಹೋಗಿzರೆ. ಅಲ್ಲಿ ಶಂಕರೇಗೌಡರು, ಎಚ್.ಎಲ್.ನಾಗೇಗೌಡರು, ಸಂಸತ್ ಸದಸ್ಯರಾಗಿದ್ದ ಮಾದೇಗೌಡರು, ಹೀಗೆ ಕನ್ನಡಕ್ಕಾಗಿ ದುಡಿದ ಅನೇಕರು ನನಗೆ ಬಹಳ ಕಾಲದಿಂದ ಪರಿಚಯ. ಹಿಂದೆ ಅಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಮೊನ್ನೆ ನಮ್ಮನ್ನು ಅಗಲಿದ ಎಸ್.ಎಂ.ಕೃಷ್ಣ ಅವರೇ ಸ್ವಾಗತ ಸಮಿತಿಯಲ್ಲಿದ್ದು ಪ್ರಧಾನ ಪೋಷಕರಾಗಿದ್ದರು. ಮಂಡ್ಯದ ಜನ ಶ್ರಮಜೀವಿಗಳು. ಅದು ಕೃಷಿಕರ ಬೀಡಾಗಿದ್ದರೂ ಸಾಂಸೃತಿಕ ಚಟುವಟಿಕೆಗಳಲ್ಲಿ ಶ್ರದ್ಧೆ ತೋರಿಸುತ್ತಾರೆ.
? ನಿಮ್ಮ ಅಧ್ಯಕ್ಷ ಭಾಷಣದಲ್ಲಿ ಏನು ಪ್ರಸ್ತಾವಿಸಲು ಬಯಸುತ್ತಿರಿ?
? ಸಾಮಾನ್ಯವಾಗಿ ಎಲ್ಲ ಅಧ್ಯಕ್ಷರು ಇದುವರೆಗೆ ಪ್ರಸ್ತಾವಿಸಿದ ವಿಷಯಗಳು ಇವೆ. ಜತೆಗೆ ಏನಾಗಿದೆ ಎಂದರೆ, ಕರ್ನಾಟಕ ಏಕೀಕರಣ ಆದಾಗಿನಿಂದ ಎಷ್ಟೋ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಸಮಸ್ಯೆಗಳ ಇತ್ಯರ್ಥಕ್ಕೆ
ಹೋರಾಟಗಾರರು, ಸಾಹಿತಿಗಳು, ಸಂಘಟನೆಗಳು ಒತ್ತಾಯಿಸುತ್ತಲೇ ಇವೆ. ಜನಸಂಖ್ಯೆ ಮೊದಲಿಗಿಂತ ಅಧಿಕವಾಗಿದೆ. ವಲಸೆ ಒಂದು ಸಮಸ್ಯೆಯಾಗಿದೆ. ಸಂವಿಧಾನಾತ್ಮಕವಾಗಿ ಅಂತಾರಾಜ್ಯ ವಲಸೆ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಅನ್ಯಭಾಷಿಕರು ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿಗೆ ಬರುತ್ತಿರುವುದರಿಂದಾಗಿ ಕನ್ನಡಿಗರ ಭಾಷೆ ಸಂಸ್ಕೃತಿಗೆ ದುಷ್ಪರಿಣಾಮ ಆಗುತ್ತಿದೆ. ಶಿಕ್ಷಣ ಮಾಧ್ಯಮವಾಗಿ ಕನ್ನಡದ ವಿಚಾರ ಇನ್ನೂ ಗೊಂದಲದಲ್ಲಿದೆ.
ಇನ್ನು ಗಡಿ ವಿವಾದ, ಜಲ ವಿವಾದ, ರಾಜ್ಯ ಮತ್ತು ಕೇಂದ್ರದ ಸಂಬಂಧ, ರಾಜ್ಯದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಪ್ರಾದೇಶಿಕ ತಾರತಮ್ಯ, ಇಂಥಾ ವಿಷಯಗಳನ್ನು ಮತ್ತೆ ಮತ್ತೆ ಗಟ್ಟಿಯಾಗಿ ಹೇಳುತ್ತಿರ ಬೇಕಾಗುತ್ತದೆ. ರಾಜ್ಯದಲ್ಲಿ ಓಡಾಡುವಾಗ ಅನೇಕರು ಅನೇಕ ಅಭಿಪ್ರಾಯಗಳನ್ನು ನೀಡಿದ್ದಾರೆ. ಉದಾಹರಣೆಗೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡಿಗರ ಉದ್ಯೋಗಕ್ಕೆ ಆದ್ಯತೆ. ಇವುಗಳನ್ನೂ
ಅಳವಡಿಸಿಕೊಂಡಿದ್ದೇನೆ. ಇಂಥ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರವನ್ನು ಜನಗಳ ಪ್ರತಿನಿಧಿಯಾಗಿ ಒತ್ತಾಯಿಸುತ್ತೇನೆ.
? ಕಾವೇರಿ ಇಲ್ಲದೆ ಮಂಡ್ಯ ಇಲ್ಲ. ಕಾವೇರಿ ನದಿ ನೀರಿನ ಸಮಸ್ಯೆಯನ್ನೂ ಪ್ರಸ್ತಾಪಿಸುತ್ತೀರಾ?
? ಅನೇಕ ವಿಷಯಗಳಿವೆ. ಎಲ್ಲ ವಿಷಯಗಳನ್ನೂ ಪ್ರಸ್ತಾಪಿಸುವಷ್ಟು ಅನುಕೂಲವಿಲ್ಲ. ಆದರೆ ಸ್ಥೂಲವಾಗಿ
ನೆಲ-ಜಲ-ನಾಡು-ನುಡಿಗೆ ಸಂಬಂಧಿಸಿದ ಎಲ್ಲ ಸಂಗತಿಗಳು, ಕನ್ನಡಿಗರಿಗೆ ಅನ್ಯಾಯ ಆಗುತ್ತಿರುವ ಎಲ್ಲ
ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾಗುತ್ತೇನೆ.
? ಎಲ್ಲರೂ ಇಂಗ್ಲಿಷ್ ಮಾಧ್ಯಮಕ್ಕೆ ಮೊರೆ ಹೋಗುತ್ತಿರುವಾಗ ಕನ್ನಡ ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಹೇಗೆ?
? ಇದೊಂಥರಾ ಸಂಕೀರ್ಣವಾದ ಸಮಸ್ಯೆ. ಖಾಸಗಿ ವಿದ್ಯಾಸಂಸ್ಥೆಗಳು ವಾಣಿಜ್ಯದ ದೃಷ್ಟಿಯಿಂದ ನಡೆಯುತ್ತವೆ.
ಹೀಗಾಗಿ ಅಲ್ಲಿ ಅಚ್ಚುಕಟ್ಟುತನ, ಶಿಸ್ತು, ಗುಣಮಟ್ಟಕ್ಕೆ ಆದ್ಯತೆ ಎಲ್ಲವೂ ಇರುತ್ತದೆ. ಇದನ್ನು ನೋಡಿ ಪೋಷಕರು ಅತ್ತ ಆಕರ್ಷಿತರಾಗುತ್ತಾರೆ. ಜತೆಗೆ, ಇಂಗ್ಲಿಷ್ ಕಲಿಯದಿದ್ದರೆ ನಮ್ಮ ಮಕ್ಕಳಿಗೆ ಭವಿಷ್ಯವಿಲ್ಲ, ಅಂತಾರಾಷ್ಟ್ರೀಯವಾಗಿ
ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂಬ ಭಯ. ಹೀಗಾಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ. ಇದಕ್ಕೆ
ಸರಕಾರ ಅವಕಾಶ ಕೊಡಬಾರದು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಜತೆಗೆ ಸರಕಾರಿ ಶಾಲೆಗಳನ್ನು ಕೂಡ ಸುಂದರ, ಸುಸಜ್ಜಿತವಾಗಿರಬೇಕು. ಶಿಕ್ಷಕರು ಸ್ಪರ್ಧಾತ್ಮಕವಾದ ಕಲಿಕೆ ನೀಡಬೇಕು.
? ಶರಣ ಸಾಹಿತ್ಯದಲ್ಲಿ ನೀವು ತುಂಬಾ ಕೆಲಸ ಮಾಡಿದಿರಿ. ಅದರ ಬೆಳವಣಿಗೆಗೆ ಇನ್ನೂ ಏನೇನು ಆಗಬೇಕಾಗಿದೆ?
? ಶರಣ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಆಗಿದೆ. 800 ವರ್ಷಗಳಿಂದ ವಚನಸಾಹಿತ್ಯ ಜನಮನದಲ್ಲಿ ಅನುರಣಿಸು ತ್ತಿದೆ. ಬಹುಶಃ ಇಷ್ಟು ಚರ್ಚೆ ಇನ್ನು ಯಾವ ಪ್ರಕಾರದ ಬಗ್ಗೆಯೂ ಕನ್ನಡದಲ್ಲಿ ಆಗಿಲ್ಲ ಅನ್ನಬಹುದು.
ಆದರೆ ಇನ್ನೂ ಆಗಬೇಕಾಗಿದೆ. ನಾನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿzಗ, ಶರಣರು ಇದ್ದ ಕ್ಷೇತ್ರಗಳ ಸಮಗ್ರ ದಾಖಲೀಕರಣಕ್ಕೆ ಮುಂದಾದೆ. ಅವು ಕಾಲದ ಧೂಳಿನಲ್ಲಿ ಕಣ್ಮರೆಯಾಗದಿರಲಿ ಎಂಬ ದೃಷ್ಟಿಯಿಂದ. ಅವುಗಳ ಬಗ್ಗೆ ಸಾಕ್ಷ್ಯಚಿತ್ರ, ಗ್ರಂಥ ಕೂಡ ಬಂದಿದೆ. ಈಗ ಬಸವಣ್ಣನನ್ನು ಸಾಂಸೃತಿಕ ನಾಯಕ ಅಂತ ಸರಕಾರ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ. ಇದರ ಬಗ್ಗೆ ಇನ್ನೇನು ಮಾಡಬಹುದು ಅಂತ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಕೂಡ. ಬಸವಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟುವ ನಿಟ್ಟಿನಲ್ಲಿ ಸೂಕ್ತ ವರದಿ ನೀಡಲು ಸಮಿತಿ ಮಾಡಿ ನನ್ನ ಅಧ್ಯಕ್ಷತೆಯ ಸರಕಾರ ಸಮಿತಿ ಮಾಡಿತ್ತು. ನಾವು ಸೂಕ್ತ ವರದಿ ಕೊಟ್ಟಿದ್ದೇವೆ. ಅದನ್ನು ಸರಕಾರ ಅಂಗೀಕರಿಸಿದೆ. ಅದರ ಕೆಲಸ ಕೊನೆಯ ಹಂತದಲ್ಲಿದೆ. ಇಂದಿನ ಅನುಭವ ಮಂಟಪ, ಅಂದಿನ ಅನುಭವ ಮಂಟಪದಂತೆಯೇ ಸಮಕಾಲೀನ ಸಮಸ್ಯೆಗಳ ಬಗೆಗೆ ಸದಾ ಚಿಂತನೆ ನಡೆಸುವ ಅಂತಾರಾಷ್ಟ್ರೀಯ ಕೇಂದ್ರ ಆಗಬೇಕು ಎಂಬುದು ನಮ್ಮ ಕನಸು.
? ಜನಪದ ಸಾಹಿತ್ಯದಲ್ಲೂ ನಿಮ್ಮ ಕೊಡುಗೆ ಅಪಾರ. ಜನಪದ ಸಾಹಿತ್ಯದ ದಾಖಲೀಕರಣ ಆಗಿರುವ ಪ್ರಮಾಣದಲ್ಲಿ, ಅದರ ಮೂಲ ಕಲಾವಿದರ ಬದುಕು ಹಸನಾಗಿಲ್ಲ ಎಂಬ ವಾದವಿದೆ?
? ಹೌದು, ಜನಪದ ಸಾಹಿತ್ಯದ ದಾಖಲೀಕರಣ ಆಗಿರುವಂತೆಯೇ, ಜಾನಪದದ ಮೂಲವಾದ ಕಲಾವಿದರ ಜೀವನ, ಉಡುಗೆ-ತೊಡುಗೆ, ಆಹಾರವಿಹಾರ, ಸಂಸ್ಕಾರಗಳು ಇವೆಲ್ಲವೂ ದಾಖಲೀಕರಣ ಆಗಬೇಕಾಗಿದೆ. ಆಧುನಿಕ ತಾಂತ್ರಿಕ ಮಾಧ್ಯಮ ಬಳಸಿಕೊಂಡು ಅವುಗಳನ್ನು ದಾಖಲೆ ಮಾಡಬೇಕು. ನಾನು ಜಾನಪದ ಅಕಾಡೆಮಿ ಅಧ್ಯಕ್ಷನಾಗಿzಗ ನೀಡಿದ ಪ್ರಸ್ತಾವನೆಗೆ ಸರಕಾರ ಮಾನ್ಯತೆ ನೀಡಿ, ಜಾನಪದ ವಿವಿಯನ್ನು ಹುಟ್ಟುಹಾಕಿತು. ಜಗತ್ತಿನಲ್ಲಿ ಜಾನಪದ ಕ್ಕೊಂದು ವಿವಿ ಇದ್ದರೆ ಅದು ಕರ್ನಾಟಕದಲ್ಲಿ. ಸರಕಾರ ಅದರ ಬೆಳವಣಿಗೆಗೆ ಇನ್ನೂ ಹೆಚ್ಚಿನ ಆದ್ಯತೆ, ಅನುದಾನ ಕೊಡಬೇಕಿದೆ. ಯಾಕೆಂದರೆ ಅದು ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ್ದು.
? ನಿಮ್ಮ ಓದುವಿಕೆ ಹೇಗಿರುತ್ತದೆ?
? ವಯಸ್ಸಾಗಿದೆ, ಆದ್ದರಿಂದ ಇತ್ತೀಚೆಗೆ ಹೆಚ್ಚಿನ ಓದು ಸಾಧ್ಯವಾಗುತ್ತಿಲ್ಲ. ಆದರೆ ಇತರರಲ್ಲಿ ಓದಿನ ಅಭಿರುಚಿ
ಹೆಚ್ಚಿಸಲು ಅನೇಕ ಕೆಲಸಗಳನ್ನು ಮಾಡಿದ್ದೇನೆ ಎಂಬುದು ನನ್ನ ವಿಶ್ವಾಸ. ಇತ್ತೀಚೆಗೆ ವೈಚಾರಿಕ ಸಾಹಿತ್ಯದ ಬಗ್ಗೆ
ಯುವಜನತೆಯಲ್ಲಿ ಹೆಚ್ಚಿನ ಒಲವು ಬೆಳೆಯುತ್ತಿರುವುದು ಸಂತೋಷದ ಸಂಗತಿ. ಸಮಕಾಲೀನ ಬದುಕಿಗೆ ಸ್ಪಂದಿಸುವ ಸಾಹಿತ್ಯ ಇಂದು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ ಎಂದು ಹೇಳಬಹುದು.
ಇದನ್ನೂ ಓದಿ: Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!