Monday, 16th September 2024

ಕಚ್ಚಾವಸ್ತುಗಳಿಗೆ ಏಕರೂಪದ ದರ ನಿಗದಿಯಾಗಲಿ

ವಿಶ್ವವಾಣಿ ಸಂದರ್ಶನ: ಶಿವಕುಮಾರ್‌, ಕಾರ್ಯದರ್ಶಿ, ಪೀಣ್ಯ ಕೈಗಾರಿಕಾ ಸಂಘ

ಶೇ.೩೦ರಷ್ಟು ಕಾರ್ಖಾನೆಗಳು ಬಾಗಿಲು ಮುಚ್ಚುವ ಭೀತಿಯಿದೆ

ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಆತಂಕ

ದೇಶಾದ್ಯಂತ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಒಂದು ದಿನದ ಮುಷ್ಕರವನ್ನು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ ಸೋಮವಾರ ಬೆಳಗ್ಗೆ ೧೦ ಗಂಟೆಗೆ ಮೌನ ಪ್ರತಿಭಟನೆನಡೆಸಿವೆ. ಈ ಸಂದರ್ಭದಲ್ಲಿ ಕೈಗಾರಿಕೆಗಳ ಮುಂದಿರುವ ಸವಾಲು, ಕಾರ್ಮಿಕರ ಸ್ಥಿತಿಗತಿ ಮತ್ತು ಸಂಘದ ಬೇಡಿಕೆಗಳ ಕುರಿತು ಪೀಣ್ಯ ಕೈಗಾರಿಕಾ ಸಂಘದ ಕಾರ್ಯದರ್ಶಿ ಶಿವಕುಮಾರ್ ಅವರು ವಿಶ್ವವಾಣಿ ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರತಿಭಟನೆ ಹಮ್ಮಿಕೊಂಡಿರುವ ಉದ್ದೇಶವೇನು?

ಕರೋನಾ ಸಾಂಕ್ರಾಮಿಕದಿಂದ ದೇಶದಲ್ಲಿ ಜಾರಿಗೊಳಿಸಿದ ಲಾಕ್ ಡೌನ್‌ನಿಂದ ಸಾವಿರಾರು ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಈ ನಡುವೆ ೨೦೨೦ರ ಮಾರ್ಚ್‌ನಿಂದ ಈವರೆಗೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಬಳಸುವ ಕಚ್ಚಾವಸ್ತುಗಳ ಮೇಲಿನ ಬೆಲೆ ಶೇ. ೫೫ರಿಂದ ಶೇ. ೧೧೫ಕ್ಕೆ ಹೆಚ್ಚಾಗಿದೆ. ಈ ವಲಯದ ಉತ್ಪಾದನಾ ವೆಚ್ಚ ಶೇ.೭೦ ರಷ್ಟಾಗಿದೆ. ಇದರಿಂದ ಕೈಗಾರಿಕೆಗಳ ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಇಂತಹ ಹೊರೆಯಿಂದ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಈಗಾಗಲೇ ಶೇ.೧೫ರಷ್ಟು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು, ಶೇ.೩೦ ರಷ್ಟು ಬಾಗಿಲು ಮುಚ್ಚುವ ಹಂತದಲ್ಲಿವೆ.

ಸಣ್ಣ ಕೈಗಾರಿಕೆಗಳು ಅಪಾಯಕ್ಕೆ ಸಿಲುಕಿರಲು ಕಾರಣಗಳೇನು?
ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪೂರೈಕೆಯಾಗುವ ಕಚ್ಚಾ ವಸ್ತುಗಳಿಗೆ ನಿಗದಿತ ಬೆಲೆಯಿಲ್ಲ. ಡೀಲರ್‌ಗಳು ತಮಗೆ ಬೇಕಾದ ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ. ಸರಕಾರ ಅನೇಕ ವಸ್ತುಗಳ ಬೆಲೆ ಏರಿಕೆ ಮಾಡಿರುವ ಪರಿಣಾಮ ಅವರು, ಒಂದು ವರ್ಷದಲ್ಲಿ ಶೇ. ೧೧೫ ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಕಚ್ಚಾ ವಸ್ತುಗಳನ್ನು ವಿದೇಶಕ್ಕೆ ರಪ್ತು ಮಾಡಲಾಗುತ್ತಿದ್ದು, ಆಂತರಿಕವಾಗಿ ಲಭ್ಯತೆ ಕಡಿಮೆಯಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾದರೂ ಸರಕಾರಿ ಸ್ವಾಮ್ಯದ ಕಂಪನಿಗಳು ಖರೀದಿ ದರ ಹೆಚ್ಚು ಮಾಡುವು ದಿಲ್ಲ. ಅಂತಹ ಅನಿವಾರ್ಯತೆಯಿಂದ ಪೂರೈಕೆ ನಿಂತರೆ ಬ್ಯ್ಲಾಕ್ ಲಿಸ್ಟ್‌ಗೆ ಸೇರಿಸುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮಧ್ಯಮ ಕೈಗಾರಿಕೆಗಳು ಸಂಕಷ್ಟ ದಲ್ಲಿವೆ.

ಕಾರ್ಮಿಕ ವಲಯದ ಮೇಲೆ ಸಣ್ಣ ಕೈಗಾರಿಕೆಗಳ ಕೊಡುಗೆ ಏನು?
ದೇಶದಲ್ಲಿ ಒಟ್ಟು ೬೦.೯೦ ಸಾವಿರ ಕಂಪನಿಗಳು ರಿಜಿಸ್ಟಾರ್ ಆಗಿವೆ. ಅದರಲ್ಲಿ ೧೬ ಸಾವಿರ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿವೆ. ದೇಶದ ಜಿಡಿಪಿ ದರದ
ಶೇ. ೩೦ ರಷ್ಟನ್ನು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಕೊಡುಗೆ ನೀಡುತ್ತಿವೆ. ದೇಶಾದ್ಯಂತ ಸುಮಾರು ೧೨ ಕೋಟಿ ಕಾರ್ಮಿಕರಿಗೆ ಉದ್ಯೋಗ ನೀಡಿವೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ನೀಡುವ ಮೂಲಕ ಸಾವಿರಾರು ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಈ ಭಾಗದಲ್ಲಿ ಸುಮಾರು ೨೦ ಸಾವಿರ ದಷ್ಟು ಅನಕ್ಷರಸ್ಥ ಕಾರ್ಮಿಕರು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಜೀವನ ಕಂಡುಕೊಂಡಿದ್ದಾರೆ. ಕಾರ್ಖಾನೆಗಳು ಬಾಗಿಲು ಮುಚ್ಚಿದರೆ, ಇವರೆಲ್ಲ ನಿರುದ್ಯೋಗಿಗಳಾಗುತ್ತಾರೆ.

ಸರಕಾರಗಳ ಮುಂದೆ ನಿಮ್ಮ ಬೇಡಿಕೆಗಳೇನು?

ರಾಜ್ಯಪಾಲರ ಮೂಲಕ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವಂತೆ ಮನವಿ ಸಲ್ಲಿಕೆ ಮಾಡಲಾಗಿದೆ. ಕಚ್ಚಾ ವಸ್ತುಗಳ ಬೆಲೆಯನ್ನು ಎಂಆರ್‌ಪಿ ನಿಗದಿ ಮೂಲಕ ನಿರ್ಧರಿಸುವಂತಾಗ ಬೇಕು. ಡೀಲರ್‌ಗಳು ಮನಸಿಗೆ ಬಂದಂತೆ ಬೆಲೆ ನಿಗದಿ ಮಾಡುವುದನ್ನು ತಪ್ಪಿಸಬೇಕು. ವಿದೇಶಗಳಿಗೆ ಕಚ್ಚಾ ವಸ್ತುಗಳನ್ನು ರಪ್ತು ಮಾಡುವುದನ್ನು ನಿಲ್ಲಿಸಬೇಕು. ಅದಕ್ಕೆ ಬದಲಾಗಿ ಆಂತರಿಕ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಪೂರೈಕೆ ಮಾಡಿ, ನಮ್ಮಲ್ಲಿ  ಉತ್ಪಾದನೆಯಾಗುವ ವಸ್ತುಗಳನ್ನು ಹೆಚ್ಚಾಗಿ ರಪ್ತು ಮಾಡುವ ಸ್ಥಿತಿ ನಿರ್ಮಾಣವಾಗಬೇಕು. ದೇಶಾದ್ಯಂತ ಒಂದೇ ಬೆಲೆ ನಿಗದಿಯಾಗಬೇಕು. ೬ ತಿಂಗಳಿ ಗೊಮ್ಮೆ ಬೆಲೆ ನಿಗದಿಯಾಗಬೇಕು. ಆಮದು ಸುಂಕವನ್ನು ಕಡಿಮೆ ಮಾಡಬೇಕು.

ಪ್ರತಿಭಟನೆಯ ಸ್ವರೂಪ ಹೇಗಿತ್ತು?

ದೇಶದ ೧೭೦ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಂಘಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ರಾಜ್ಯದಲ್ಲಿ ಪೀಣ್ಯ ಕೈಗಾರಿಕಾ ಸಂಘ, ರಾಜಾಜಿನಗರ ಇಂಡಸ್ಟ್ರೀಸ್ ಅಸೋಸಿಯೇಷನ್, ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್, ಬಿಎಎನ್‌ಎಸ್‌ಎಸ್‌ಐಎ, ಬಿಎಸಿಎಸ್‌ಎಸ್‌ಐಎ, ಮಾಚೋಹಳ್ಳಿ
ಇಂಡಸ್ಟ್ರಿಯಲ್ ಅಸೋಸಿಯೇಷನ್, ಕರ್ನಾಟಕ ಸ್ಟೇಟ್ ಪಾಲಿಮರ‍್ಸ್ ಇಂಡಸ್ಟ್ರೀಸ್ ಅಸೋಸಿಯೇಷನ್, ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್‌ ಗಳ ಬೆಂಬಲ ವ್ಯಕ್ತಪಡಿಸಿದ್ದವು. ಬೆಳಗ್ಗೆ ೧೦ ಗಂಟೆಗೆ ಸಂಘದ ಮುಂದೆ ಎಲ್ಲರೂ ಸೇರಲಿದ್ದು, ನಂತರ ಪೀಣ್ಯದ ಎನ್‌ಟಿಟಿಎಫ್ ವೃತ್ತದವರೆಗೆ ಮೌನ ಮೆರವಣಿಗೆ ಮಾಡಲಿದ್ದೇವೆ.  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ನಿಯಮಗಳನ್ನು ಅನುಸರಿಸಿ, ಸರಕಾರಕ್ಕೆ ನಮ್ಮ ಮನವಿ ಯನ್ನು ಮುಟ್ಟಿಸುವ ಕೆಲಸ ಮಾಡುತ್ತೇವೆ.