ಜಯವೀರ ವಿಕ್ರಮ್ ಸಂಪತ್ ಗೌಡ
ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಶ್ರೀಗಳು, ಪೊಲೀಸ್ ಠಾಣೆಯ ಮೆಟ್ಟಿಲು ತುಳಿದಿದ್ದಾರೆ!
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ನವೀಕರಣಗೊಂಡ ಶಂಕರಪುರ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿರುವ ಶ್ರೀಗಳ ಫೋಟೋಗಳನ್ನು ನೋಡಿ ನನಗೆ ಅದ್ಯಾಕೋ ಕಸಿವಿಸಿಯಾಗಿ, ಪಿಚ್ಚೆನಿಸಿತು. ಈ ಪೊಲೀಸ್ ಠಾಣೆಯನ್ನು ಇತ್ತೀಚೆಗಷ್ಟೇ ಗೃಹ ಸಚಿವ ಆರಗ ಜ್ಞಾನೇಂದ್ರ ಲೋಕಾರ್ಪಣೆ ಮಾಡಿದ್ದರು. ಹೀಗಿರುವಾಗ ಶಂಕರಾಚಾರ್ಯ ಗುರು ಸನ್ನಿಧಾನ ಪೊಲೀಸ್ ಠಾಣೆಗೆ ಪಾದ ಬೆಳೆಸಿದ ಔಚಿತ್ಯ ವಾದರೂ ಏನಿದ್ದಿರಬಹುದು, ಅರ್ಥವಾಗಲಿಲ್ಲ.
ಕೆಲವೊಮ್ಮೆ ಮುಂಗಾಲಪುಟಕಿ ಶಿಷ್ಯರ ಉಪದ್ವ್ಯಾ ಪಿತನದಿಂದ ಗುರುಗಳು ಇಂಥ ಮುಜುಗರದ ಸನ್ನಿವೇಶ ಗಳನ್ನು ಎದುರಿಸಬೇಕಾಗುತ್ತದೆ. ತೇಜಸ್ವಿ ಸೂರ್ಯ ಅಂಥ ಉಸಾಬರಿ ಮಾಡಿ, ಗುರುಗಳನ್ನು ಮುಜುಗರಕ್ಕೆ ಸಿಲುಕಿಸಿದರಾ? ಸಹಸ್ರಾರು ವರ್ಷಗಳಿಂದ ರಾಜಕೀಯ, ರಗಳೆ, ರೆಂಟೆರಚ್ಚೆಗಳಿಂದ ಗಾವುದ ದೂರವೇ ಇದ್ದು, ಶುದ್ಧ ಮಡಿವಂತಿಕೆ ಕಾಪಾಡಿಕೊಂಡು, ಕರ್ಮಠ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದ ಶೃಂಗೇರಿ ಪೀಠಾಧಿಪತಿಗಳಿಗೆ ಈ ರಾಜಕೀಯ, ಪ್ರಚಾರದ ರುಚಿ ತೋರಿಸುವ ಹುನ್ನಾರವಾ ಇದು ಅಥವಾ ಮತ್ತೇನಲ್ಲದಿದ್ದರೂ ಪೊಲೀಸ್ ಠಾಣೆಯನ್ನಾದರೂ ಆಧುನಿಕರಣಗೊಳಿಸಿದ್ದೇನೆಂದು ಶ್ರೀಗಳಿಗೆ ತೋರಿಸಿ ಅವರಿಂದ ಪ್ರಶಂಶಾ ಶೀರ್ವಾದ ಹೇಳಿಸಿಕೊಳ್ಳುವ ಚಿಲ್ಲರೆ ಗಿಮಿಕ್ಗೆ ತೇಜಸ್ವಿ ಮುಂದಾದರಾ ಎಂದು ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ.
ಶೃಂಗೇರಿ ಸ್ವಾಮೀಜಿಗಳು ಸಣ್ಣಪುಟ್ಟ ಆಮಿಷ- ಲೋಭನೆಗಳಿಗೆ ಕರಗುವವರಲ್ಲ. ಆ ಪೀಠಕ್ಕೆ ರಾಜಕಾರಣಿಗಳ ಜತೆ ಅಂತರ ಕಾಪಾಡಿಕೊಳ್ಳುವುದು ಕರತಲಾಮಲಕ. ಅದನ್ನು ಒಂದು ಶ್ರೇಷ್ಠ ಕಲೆ ಎಂಬಂತೆ ಪಾಲಿಸಿಕೊಂಡು ಮತ್ತು ಪ್ರದರ್ಶಿಸಿಕೊಂಡು ಬಂದಿದ್ದಾರೆ. ಸ್ವತಃ ದೇಶದ ರಾಷ್ಟ್ರಪತಿಗಳೇ ಕ್ಷೇತ್ರಕ್ಕೆ ಚಿತ್ತೈತೈಸಿದರೂ, ಅವರಿಗಿಂತ ತುಸು ಎತ್ತರದ ಪೀಠದಲ್ಲಿ ವಿರಾಜಮಾನರಾಗಿ ತಮ್ಮ ಸ್ಥಾನಮಾನ ಮೆರೆಯುವುದನ್ನು ಮೆಚ್ಚಲೇಬೇಕು. ಜನಾಜನ ನೋಡಿ ದರ್ಶನ ನೀಡುವುದನ್ನು ವ್ರತದಂತೆ ಜತನದಿಂದ ಕಾಪಾಡಿ ಕೊಂಡು ಬಂದಿರುವುದಕ್ಕೆ ಎಷ್ಟೇ ಟೀಕೆಗಳು ಬಂದಿದ್ದರೂ, ಗುರುಪೀಠ ಅದಕ್ಕೆಲ್ಲ ಜಗ್ಗಿಲ್ಲ.
ಹೀಗಿರುವಾಗ, ಜಗದ್ಗುರುಗಳು ಪೊಲೀಸ್ ಠಾಣೆ ಮೆಟ್ಟಿಲು ತುಳಿದಿದ್ದು ನೋಡಿ ಸಖೇದಾಶ್ಚರ್ಯವಾಯಿತು. ಅದು ಸಾರ್ವಜನಿಕ ಸಮಾರಂಭವೇ ಇರಲಿ, ಧಾರ್ಮಿಕ ಕಾರ್ಯಕ್ರಮವೇ ಇರಲಿ ಅಥವಾ ಖಾಸಗಿ ಪಾದಪೂಜೆಯೇ ಇರಲಿ, ಶೃಂಗೇರಿ ಪೀಠಾಽಪತಿಗಳನ್ನು ಕರೆಯುವ ಸಾಹಸ ಸಾಮಾನ್ಯರಿಂದ ಸಾಧ್ಯವಿಲ್ಲ. ಆ ಮಠದ ಸಂಪ್ರದಾಯ, ರೀತಿ-ರಿವಾಜುಗಳು ನಮ್ಮ ರಾಷ್ಟ್ರಪತಿಗಳ ಶಿಷ್ಟಾಚಾರವನ್ನೂ ಮೀರಿದ್ದು. ಅಪರೂಪದ ಅವರ ಸಂಚಾರದ
ವೈಭವ ಯಾವ ಗಣ್ಯಾತಿಗಣ್ಯರ ಸವಾರಿಗೆ ಕಮ್ಮಿ ಇಲ್ಲ.
ಈ ಪೊಲೀಸ್ ಠಾಣೆ ನವೀಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಆಸ್ಥೆ ವಹಿಸಿರಬಹುದು. ಹಾಗಂತ ಈಗಾಗಲೇ ಉದ್ಘಾಟನೆಯಾದ ಠಾಣೆಗೆ ಶೃಂಗೇರಿ
ಜಗದ್ಗುರುಗಳಂಥ ಶ್ರೇಷ್ಠ ಯತಿಗಳನ್ನು ಕರೆದುಕೊಂಡು ಹೋಗಬೇಕಾ, ಬೇಡವಾ, ಕರೆದುಕೊಂಡು ಹೋದರೆ ಉಚಿತವಾ ಎಂಬುದನ್ನು ತೇಜಸ್ವಿ ಸೂರ್ಯ ಯೋಚಿಸಬೇಕಿತ್ತು. ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೋ, ಪ್ರಾಥಮಿಕ ಶಾಲೆಗೋ, ಶುಶ್ರೂಷಾ ಕೇಂದ್ರಕ್ಕೋ ಹೋಗಿದ್ದಿದ್ದರೆ ಬೇರೆ ಮಾತು.
ಶೃಂಗೇರಿ ಜಗದ್ಗುರುಗಳು ಪೊಲೀಸ್ ಠಾಣೆಗೆ ಹೋಗುವುದೆಂದರೇನು? ಶ್ರೀಗಳನ್ನು ಶಂಕರಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂಥ
ಅನಿವಾರ್ಯವಾದರೂ ಏನಿತ್ತು? ಅದರಿಂದ ಸಂಸದ ತೇಜಸ್ವಿ, ಪೊಲೀಸರ ಮುಂದೆ ಸೂರ್ಯನಂತೆ ಮಿಂಚಿರಬಹುದು. ಆದರೆ ಜಗದ್ಗುರುಗಳ ಭಕ್ತರು ಶ್ರೀಗಳನ್ನು ಅಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂಬುದನ್ನೂ ತೇಜಸ್ವಿ ಯೋಚಿಸಬೇಕಿತ್ತು.
ರಾಷ್ಟ್ರಪತಿಗಳು ಬಂದರೂ ಬೂಟು ಬಿಚ್ಚದ ಪೊಲೀಸ್ ಪೇದೆಗಳು ಮತ್ತು ಅಧಿಕಾರಿಗಳು, ಜಗದ್ಗುರುಗಳು ಆಗಮಿಸುತ್ತಿದ್ದಂತೆ ಯುನಿಫಾರ್ಮಿನ ಒಂದು
ಭಾಗವೇ ಆದ ಬೂಟುಗಳನ್ನು ಬಿಚ್ಚಿಟ್ಟು ಕೈಕಟ್ಟಿ ನಿಂತಿದ್ದರು. ಸದ್ಯ ತಮ್ಮ ಖಾಕಿ ಬಿಚ್ಚಿ, ಕೌಪೀನ, ಕಾಷಾಯ ಧರಿಸಿರಲಿಲ್ಲ ವಲ್ಲ? ಹೆಚ್ಚೆಂದರೆ, ಜಗದ್ಗುರುಗಳು ಸನಿಹದ ಮಠದ ಕುಳಿತು ಠಾಣೆಯ ಮುಖ್ಯಸ್ಥರಿಗೆ ಹಣ್ಣು-ಕಾಯಿ, ಮಂತ್ರಾಕ್ಷತೆ ಕೊಟ್ಟು, ಆಶೀರ್ವದಿಸಿ ಕಳಿಸಬಹುದಿತ್ತು. ಪೊಲೀಸ್ ಠಾಣೆಗೆ ಹೋಗಬೇಕಾಗಿರಲಿಲ್ಲ. ಇಂಥ ವಿಷಯಗಳಲ್ಲಿ ಶಿಷ್ಯರ ಆಗ್ರಹಕ್ಕೆ ನಕಾರಾತ್ಮಕ ಧೋರಣೆ ತೋರಿದರೆ ತಪ್ಪಿಲ್ಲ. ಇಲ್ಲದಿದ್ದರೆ ಶಿಷ್ಯರ ಇಂಥ ನಡೆಗಳಿಂದಾಗಿ, ಮುಜುಗರ ಅನುಭವಿಸಬೇಕಾಗುತ್ತದೆ.
ಶೃಂಗೇರಿ ಶ್ರೀಗಳು ಅಷ್ಟು ಸುಲಭಕ್ಕೆ ಎಲ್ಲರ ಮನೆಗೆ ಹೋಗುವುದಿಲ್ಲ. ಭಕ್ತರ ಮನೆಗೆ ಹೋಗುವಾಗಲೂ ಹತ್ತು ಸಲ ಯೋಚಿಸುತ್ತಾರೆ. ಅದಕ್ಕೆ ನೂರೆಂಟು
ಪರಿಗಣನೆ, ಶಿಷ್ಟಾಚಾರ, ಬಡಿವಾರ. ಸನಿಹದಲ್ಲಿದ್ದವರ ಹತ್ತಾರು ಕೊಕ್ಕೆ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿದ ನಂತರವೇ, ಸನ್ನಿಧಾನ ದಿವ್ಯಚಿತ್ತ ಅನು ಗ್ರಹಿಸುತ್ತದೆ. ಅಷ್ಟಕ್ಕೂ ಕರೆದ ತಕ್ಷಣ ಹೋಗಲು ಶೃಂಗೇರಿ ಶ್ರೀಗಳೇನು ಬಿಡಿ ಸನ್ಯಾಸಿಯಾ ಅಥವಾ ಕುಷ್ಠರೋಗಿಗಳು ಎದುರಿಗೆ ಕಂಡಾಕ್ಷಣ ಬಾಚಿ ತಬ್ಬಿಕೊಳ್ಳುವ ಕ್ರಿಶ್ಚಿಯನ್ ಪಾದ್ರಿಯಾ? ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಒಂದು ಗಂಭೀರ ಸಂಪ್ರದಾಯ, ಶಿಷ್ಟಾಚಾರವಿದೆ.
ಅದರ ಪಾಲನೆಗೆ ಬೇಕಾದ ಶಿಸ್ತು, ಪ್ರತಿ ಭೇಟಿ, ಉದ್ದೇಶದ ಹಿಂದಿರುತ್ತದೆ. ಶ್ರೀ ವಿಧುಶೇಖರ ಭಾರತೀ ಶ್ರೀಗಳ ಗುರುಗಳಾದ ಶ್ರೀ ಭಾರತಿ ತೀರ್ಥ ಶ್ರೀಗಳು ಇಂಥ ವಿಷಯಗಳಲ್ಲಿ ಅತ್ಯಂತ ಕಟ್ಟುನಿಟ್ಟು. ಅವರ ಮುಂದೆ ನಿಂತು ಪೊಲೀಸ್ ಠಾಣೆಗೆ ಭೇಟಿ ನೀಡಿ ಎಂದು ಕರೆಯುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ. ಇನ್ನು ಧೈರ್ಯ ಮಾಡಿ ಕೇಳಿದರೂ, ಕರೆದರೂ, ಅವರು ಹೋಗುತ್ತಿರಲಿಲ್ಲ. ಸರ್ವಜ್ಞಪೀಠ ಶೋಭಿತರಾದವರು ಪೊಲೀಸ್ ಠಾಣೆ ಮೆಟ್ಟಿಲೇರುವುದೆಂದ ರೇನು? ಇಂಥ ವಿಷಯಗಳಲ್ಲಿ ಮಠ-ಮಠಾಧೀಶರ ರೀತಿ-ರಿವಾಜು ಗೊತ್ತಿರುವ ಶ್ರೀಮಠದ ಆಡಳಿತಾಧಿಕಾರಿ, ಗುರುಸೇವಾ ಧುರೀಣ, ಪದ್ಮಶ್ರೀ ವಿ.ಆರ್. ಗೌರಿಶಂಕರ್ ಅವರು ಒಪ್ಪಿಗೆ ನೀಡದೇ, ಈ ಭೇಟಿಯನ್ನು ತಪ್ಪಿಸಬಹುದಿತ್ತು.
ಸಾಮಾನ್ಯವಾಗಿ, ಅವರು ಈ ರೀತಿಯ ತಪ್ಪಿಸುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ, ಚಾಕಚಕ್ಯತೆಯಿಂದ ಮಾಡಿಕೊಂಡು ಬಂದಿದ್ದಾರೆ. ಆದರೆ ಸಂಸದರು ಮತ್ತು ಸನ್ನಿಧಾನದ ಜತೆಗೆ ತಾವೂ ಠಾಣೆಗೆ ಹೋಗಿದ್ದಲ್ಲದೇ, ಹಸನ್ಮುಖರಾಗಿ ಫೋಟೋಕ್ಕೆ ಪೋಸು ಕೊಟ್ಟಿದ್ದನ್ನು ನೋಡಿದರೆ, ‘ಮಠ ಮುದ್ರೆ’ಯ ಒಪ್ಪಿಗೆ ದೊರೆತಿರುವುದು ನೂರಕ್ಕೆ ನೂರು ದಿಟ. ಶ್ರೀಗಳು ಪೊಲೀಸ್ ಠಾಣೆಗೆ ಭೇಟಿ ನೀಡುವ ವಿಷಯದಲ್ಲಿ ಆಡಳಿತಾಧಿಕಾರಿಗಳು ಯಾಕೆ ಮೈಮರೆತರೋ? ಲೌಕಿಕದಿಂದ ಅಲೌಕಿಕದೆಡೆಗಿನ ಹಾದಿಯಲ್ಲಿ, ಅಧ್ಯಾತ್ಮದ ಅನುಷ್ಠಾನದಲ್ಲಿ ಭರವಸೆಯ ಸಾಧನೆಯೊಂದಿಗೆ ಮುನ್ನಡೆಯುತ್ತಿರುವ, ಸನ್ಯಾಸ ದೀಕ್ಷೆಗೆ ಭೂಷಣಪ್ರಾಯರಾದ, ವರ್ಚಸ್ವಿ ಶ್ರೀವಿಧುಶೇಖರ ಭಾರತೀ ಶ್ರೀಗಳು ಇಂಥ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸಲಿ.
ಇಂದು ಪೊಲೀಸ್ ಠಾಣೆಗೆ ಕರೆದವರು, ನಾಳೆ ಬೇರೆ ತಾಣಗಳಿಗೂ ಕರೆಯದಿರುತ್ತಾರಾ? ಹಾಗಂತ ಅಲ್ಲಿಗೆಲ್ಲ ಹೋಗಲು ಆಗುತ್ತಾ? ಭಕ್ತರು ಅಥವಾ ಶಿಷ್ಯರನ್ನು ಸಂಪ್ರೀತಗೊಳಿಸ ಹೊರಟರೆ ಅದಕ್ಕೆ ಕೊನೆಯಿರುವುದಿಲ್ಲ. ಸನ್ಯಾಸಿಗಳಿಗೆ ಅದು ಭೂಷಣವೂ ಅಲ್ಲ. ಇಂಥ ವಿಷಯಗಳಲ್ಲಿ ಶ್ರೀವಿಧುಶೇಖರ ಭಾರತೀ ಶ್ರೀಗಳು ಬೇರಾರನ್ನೂ ಅಲ್ಲ, ತಮ್ಮ ಗುರುಗಳಾದ ಶ್ರೀಭಾರತೀ ತೀರ್ಥ ಮಹಾಸನ್ನಿಧಾನವನ್ನು ಅನುಸರಿಸಿದರೆ ಸಾಕು. ಹಾಗಾದಲ್ಲಿ ಅವರ ಮುಂದಿನ ಹಾದಿ ಸುಗಮ. ಉಭಯ ಶ್ರೀಗಳಿಗೆ ನನ್ನ ಶಿರಸಾಷ್ಟಾಂಗ ನಮನಗಳು.